Wednesday, April 26, 2017

ಆರೋಹಣ

ಅನಿಸಿಕೆಯ ಗಾನಕೆ
ಆತ್ಮದ ಆಲಾಪನೆ
ಅಂತರಂಗದ ಮಿಡಿತಕೆ
ಆತ್ಮೀಯತೆಯ ಆರಾಧನೆ
ಅನುರಾಗದ ಸಂಗೀತಕೆ
ಆರಾಮಿಸೋ ಆಲೋಚನೆ
ಅನುಬಂಧದ ಒಡನಾಟಕೆ
ಆರಂಭಿಸು ಆರೋಹಣೆ

Monday, April 24, 2017

ಬೆಳಗು & ದೀಪ


                     1
ಮನವು ಅಹಂಕಾರದ ಪರದೆಯಲಿ
ಮರೆಯಾಗಿ ಬೀಹಗುತಿದೆ ಗರ್ವದಲಿ
ತನದೊಂದೆ ಸರಿಯೆಂಬ ದರ್ಪವು
ತನ್ನಿಂದಲೆ ಚಲಿಸುವುದು ಎಲ್ಲವು
ಹೊಂದಿಕೆಯು ಹರಿದೋಗಿದೆ ಅಂದು
ಕೃಪೆಯಿಂದ ಹೊಲಿಯಬೇಕಿದೆ ಇಂದು
ಜಗದ ಕೋಪಕೆ ಶಿಕ್ಷಾರ್ಹನು
ಜನರ ಶಾಪಕೆ ಪರಿತಪಿಸುತಿಹೆನು
ಜ್ಞಾನದ ಬೆಳಕನ್ನಿತ್ತು ಪರಿಪಾಲಿಸು
ಜೊತೆಯಲ್ಲಿ ಕೈ ಹಿಡೀದು ಮುನ್ನೆಡೆಸು


                     2
ಹಣತೆಯಲಿ ಅರಳಿದ ಹೂ
ಕತ್ತಲೆಯನು ಕರಗಿಸುವ ಪ್ರಜ್ವಲೆಯು
ಅಪ್ರಿಯ ಅಂಧಕಾರಕೆ ಅಂತ್ಯವು
ಜ್ಞಾನಧಾರೆಯು ಮೂರ್ಖತನಕೆ
ನಿನ್ನಳಿವಿಗೆ ಬೆಳಗುವೆ ಜೋರಾಗಿ
ಜೀವನದ ದಾರಿದ್ರ್ಯ ದೂರಾಗಿಸುವ
ಸಮೃದ್ಧಿಯ ದಿವ್ಯ ದೀಪ

Tuesday, April 18, 2017

ಪಯಣದಲ್ಲಿ ನಾನು ಮತ್ತು ಆವಳು


ಸಂಜೆ ಗಂಟೆಗೆ ಕದಂಬ ಬಸ್ ಹೊರಟಿತು ಮೈಸೂರಿನಿಂದ ಗೋವಾದ ಕಡೆಗೆ. ಬಸ್ಸಿನ ಮಧ್ಯದಲ್ಲಿ ಕೂರಲು ಜಾಗ ಗಿಟ್ಟಿಸಿಕೊಂಡು ಪುಶ್ ಬೇಕ್ ಸೀಟಿನಲ್ಲಿ ಮಲಗಿದ. ಸರಿ ಸುಮಾರು .೩೦ರ ಸಮಯಕ್ಕೆ ಮೈಸೂರಿನಿಂದ ಹೊರಟ ಬಸ್ ಹಾಸನವನ್ನು ತಲುಪಿತು. ಆಗ ಒಂದು ಹುಡುಗಿಯ ಪ್ರವೇಶವಾಯಿತು ಬಸ್ಸಿನೊಳಗೆ. ಅವಳನ್ನು ನೋಡಿ ಮತ್ತೆ ಪುನಃ ಸುಮ್ಮನೆ ಮಲಗಿದ. ಪಯಣಿಸುತ್ತಿದ್ದ ಬಸ್ಸಿನಲ್ಲಿ ಹೆಣ್ಣು ಧ್ವನಿಯ ಕೂಗು, ಬೈಗುಳ ಕೇಳಿತು. ಆಗ ಎದ್ದು ಹಿಂದುಗಡೆ ನೋಡಿದ ನಾನು ಅವಳ ಸಿಟ್ಟು, ಕಿರಿಕಿರಿ ಅನುಭವಿಸಿದ ಬೇಸರದ ಭಾವ ಗೋಚರಿಸಿತು.

ಪರಿಸ್ಥಿತಿಯ ಗಂಭಿರತೆಯನ್ನು ಅರಿತ ನಾನು, ಅವಳ ಪಕ್ಕದಲ್ಲಿ ಕುಳಿತಿದ್ದ ಮಧ್ಯಮ ವಯಸ್ಸಿನ ಕುಡಕನಿಗೆ ತರಾಟೆ ತೆಗೆದುಕೊಂಡೆ. ಪ್ರಶ್ನಿಸಲು ಪ್ರಾರಂಭಿಸಿದ ನಂತರ ಇಡಿ ಬಸ್ಸಿನಲ್ಲಿ ಕುಳಿತಿದ್ದ ಜನರೆಲ್ಲರೂ ಅವನಿಗೆ ಬಯ್ಯುತ್ತ ಹೊಡೆಯಲು ಮುಂದಾದರು. ಸಮಯದ ಗಂಭಿರತೆಯನ್ನು ಅರಿತು ತಕ್ಷಣದಲ್ಲೆ ಕುಡುಕನನ್ನು ಬಸ್ಸಿನಿಂದ ಕೆಳಗಿಳಿಸಿದ ನಾನು ಹುಡುಗಿಯ ಹತ್ತಿರ ನಿನ್ನ ಅಭ್ಯಂತರವಿಲ್ಲದಿದ್ದರೆ ನನ್ನ ಪಕ್ಕದಲ್ಲಿರುವ ಆಸನದಲ್ಲಿ ಕುಳಿತುಕೊಳ್ಳಿಯೆಂದು ಹೇಳಿದ. ನಾನು ಹೇಲಿದಂತೆ ಅವಳು ಬಂದು ನಾನುವಿನ ಪಕ್ಕದಲ್ಲಿ ಕುಳಿತಳು. ಅವರಿಬ್ಬರೂ ಸಹ ಮೌನದ ಪ್ರಯಾಣ ಪ್ರಾರಂಭಿಸಿದರು.

ಮಂದೆ ಸಾಗಿದ ಬಸ್ ಊಟಕ್ಕೆಂದು ಪರಿಚಯವಿರದ ಸ್ಥಳದಲ್ಲಿ ನಿಂತಿತು. ಅಲ್ಲಿಯ ಊಟ, ಊಟದ ವ್ಯವಸ್ಥೆ, ಊಟದ ಜಾಗ ಇವೆಲ್ಲವನ್ನು ನೋಡಿದ ನಾನು ಬಾಳೆಹಣ್ಣುಗಳನ್ನು ಖರೀದಿಸಿ ಬಸ್ಸಿನೆಡೆಗೆ ಹಿಂದುರುಗಿದ. ನಾನು ಹೋಗಿ ಕೂತಾಗ ಅವಳು ಕೇಳಿದಳು ಊಟ ಮಾಡುವುದಿಲ್ಲವೇ? ಉತ್ತರಿಸುತ್ತ ನಾನು ಹೇಳಿದ ಸ್ವಚ್ಚವಿರದ ಸ್ಥಳದಲ್ಲಿ ಊಟವಲ್ಲ ಚೂರು ನೀರು ಕುಡಿಯಲು ಮನಸೊಪ್ಪುವುದಿಲ್ಲವೆಂದ. ಹೌದು ಎನ್ನುತ್ತ ಅವಳು, ತಾನು ತಂದಿದ್ದ ಊಟದ ದಬ್ಬವನ್ನೆ ನಾನುವಿನೊಂದಿಗೆ ಹಂಚಿಕೊಂಡಳು. ಅಲ್ಲಿಂದ ಶುರುವಾಯಿತು ಅವರಿಬ್ಬರ ಮಾತುಕತೆಯ ಹರಟೆ.

ತಮ್ಮ ತಮ್ಮ ಪರಿಚಯವನ್ನು ವಿನಿಮಯ ಮಾಡಿಕೊಂಡ ಅವರಿಬ್ಬರು ತಮ್ಮ ಆಸಕ್ತಿ, ವಿಚಾರಗಳನ್ನು ಹೇಳಲಾರಂಭಿಸಿದರು. ನಾನು ಹೇಳುತ್ತ, ಉತ್ತಮ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸಮಾಡುತ್ತಿರುವುದಾಗಿ ಹೇಳಿದ. ಹಾಗೆ ಮುಂದುವರಿಸುತ್ತ ತನ್ನ ಹಿಂದಿನ ದಿನಗಳ ಚಿಕ್ಕ ಪುಟ್ಟ ಹೋರಾಟದ ನಡೆಯನ್ನು ಹೇಳಿಕೊಂಡ. ವಿದ್ಯಾರ್ಥಿಯಾಗಿದ್ದಾಗಿನಿಂದ ವಿದ್ಯಾರ್ಥಿ ಗುಂಪಿನ ಮುಂದಾಳುವಾಗಿ ಗುಂಪನ್ನು ಮುನ್ನಡೆಸಿಕೊಂಡು ಬಂದ ಸಂಗತಿಗಳನ್ನು ವಿವರಿಸಿದ. ಅಲ್ಲದೆ ಮಹಿಳೆಯರ ಕುರಿತಾಗಿ ಇರುವ ತನ್ನ ವಿಚರಧಾರೆಯನ್ನು ಸಮರ್ಥವಾಗಿ ತಿಳಿಸಿದ. ಇದರಿಂದಾಗಿ ಅವಳಿಗೆ ಒಬ್ಬ ಒಳ್ಳೆಯ ವ್ಯಕ್ತಿಯೊಂದಿಗೆ ಪರಿಚಯವಾಯಿತು ಮತ್ತು ಗುಣವಂತನ ಗೆಳೆತನವಾಯಿತೆಂದು ಸಮಾಧಾನಿಸಿದಳು.

ಅವಳು ತನ್ನ ಬಗ್ಗೆ ಹೇಳಿಕೊಳ್ಳುತ್ತಾ ಪದವಿಯನ್ನು ಮುಗಿಸಿ ಉದ್ಯೋಗ ಮಾಡುತ್ತ ಸ್ನಾತಕೋತ್ತರ ಪದವಿಯನ್ನು ಓದುತ್ತಿದ್ದೇನೆನ್ನುತ್ತಾಳೆ. ಅಲ್ಲದೆ ಇವಳು ಸಹ ನಾನು ಹೇಳಿದ ವಿಚಾರಗಳಿಗೆ ಸಂಬಂಧಿಸಿದ ಮಾತುಗಳನ್ನಡುತ್ತಾ ತನ್ನ ಸಹ ಮತವನ್ನು ಸೂಚಿಸುತ್ತಾಳೆ. ಹಾಗೆ ಹೇಳುತ್ತಾ ತಾನು ಎಲ್ಲಿಗೆ ಹೊರಟಿರುವುದಾಗಿ ಹೇಳುತ್ತ ತನ್ನ ಸದುದ್ದೇಶದ ವಿಷಯವನ್ನು ಅರಹುತ್ತಾಳೆ. ತನಗೆ ಇರುವ ಸವಾಲುಗಳನ್ನು ಹೇಳುತ್ತ ಏನಾದರೂ ಸಲಹೆಗಳು ನಿನ್ನಲ್ಲಿವೆಯಾ ಎಂದು ಕೇಳುತ್ತಾಳೆ. ಅದಕ್ಕೆ ಪ್ರತ್ಯುತ್ತರಿಸುತ್ತಾ ನಿನ್ನ ಸವಾಲುಗಳಿಗೆ ಯೋಚಿಸಿ ತನ್ನ ಸಲಹೆಗಳನ್ನು ಕೊಡುತ್ತೇನೆ ಎನ್ನುತ್ತಿರುವಾಗ ಚಹ ಕುಡಿಯಲೆಂದು ಬಸ್ ನಿಲ್ಲುತ್ತದೆ.

ಬಸ್ಸಿನಿಂದ ಕೆಳಗಿಳಿದ ಇಬ್ಬರೂ ಎಳನೀರನ್ನು ಕುಡಿಯುತ್ತಾರೆ. ಕುಡಿಯುವ ಸಮಯದಲ್ಲಿ ಅವಳಿಗೆ ಇವನಂತಹ ಹುಡುಗನು ತನಗೆ ಜೀವನದ ಜೊತೆಗಾರನಾಗಿ ಸಿಗಬೇಕೆಂದು ಅನಿಸಿದರೂ ಅವನ ಸಹಜತೆಯ ಮಾತುಗಳನ್ನು ಗಮನಿಸಿ ಒಳ್ಳೆಯ ಸ್ನೇಹಿತೆಯಾಗಿ ಉಳಿಯುವುದು ಉತ್ತಮವೆಂದುಕೊಳ್ಳುತ್ತಾಳೆ. ಅಲ್ಲಿಂದ ಮುಂದೆ ಸಾಗಿದ ಬಸ್ ಇವರಿಬ್ಬರ ಹರಟೆಗೆ ಪೂರ್ಣ ವಿರಾಮವನ್ನಿಡಲು ಮುಂದಾಗುತ್ತದೆ. ಯಾಕೆಂದರೆ ನಾನು ಇಳಿಯುವ ಸ್ಥಳ ಹತ್ತಿರವಾಗುತ್ತಿದ್ದಂತೆ ಇಬ್ಬರ ಮೊಬೈಲ್ ನಂಬರ್ ಹಂಚಿಕೆಯಾಗುತ್ತದೆ.

ಅಚಾನಕ್ಕಾಗಿ ಜೊತೆಯಾದ ಅವರಿಬ್ಬರೂ ತಮ್ಮ ಪರಿಚಯವನ್ನು ಗೆಳೆತನವನ್ನಾಗಿಸಲು ಇಚ್ಛಿಸುತ್ತಾರೆ. ಅಲ್ಲಿಂದ ಮರಳಿದ ನಂತರ ಮೊಬೈಲ್ ಕರೆಯ ಮೂಲಕ ತಮ್ಮ ಗೆಳೆತನವನ್ನು ಮುಂದುವರೆಸುತ್ತಾ ಪರಸ್ಪರರೂ ಅವರವರ ನೋವು ನಲಿವುಗಳನ್ನು ಹಂಚಿಕೊಳ್ಳುತ್ತಾ ಒಬ್ಬರಿಗೊಬ್ಬರು ಸಲಹೆ ಸೂಚನೆಗಳನ್ನು ಕೊಟ್ಟಿಕೊಳ್ಳುತ್ತಾ ಉತ್ತಮ ಗೆಳೆಯರಾಗಿ ಮುನ್ನಡೆಯುತ್ತಾರೆ.

Friday, April 14, 2017

ನಂಬಿಕೆಯ ವಜ್ರ

ಅನಿಸಿಕೆಯ ವಿವರಣೆ
ಹೇಳುವ ಹಂಗಿಲ್ಲ
ದೋಚಿ ಹಗುರಾಗು
ಒಲವಿನ ಉಡುಗೊರೆ

ಕಂಜೂಸು ಮಾಡದಿರು
ಕಲ್ಪನೆಯ ಸಿರಿತನಕೆ
ಮನದಾಳ ಬಿಚ್ಚೇಳು
ಔದಾರ್ಯದ ನಂಬಿಕೆಗೆ

ಜೀವನದ ಕಡಲಿನಲಿ
ಕೊಳಕೆಲ್ಲಾ ಕೊಚ್ಚೋಗಲಿ
ಕಡಿದಾದ ತೆರೆಯ ಸೆಳೆತಕೆ
ಆಕರ್ಷಣೆಯ ಕೇಂದ್ರವಾಗಿ
ಎಲ್ಲಾರು ಬಯಸುವಂತ
ಕಿರಿದಾದ ವಜ್ರವಾಗುವಾಸೆ

Thursday, April 13, 2017

ಕಿವಿ ತುಂಬೋ ಕೋಗಿಲೆ

ನನ್ನ ಬ್ಲಾಗಿನ ಮೂರು ನೂರನೇ ಬರಹ ಈ ಕವನ

ಹಾಡು ಬಾ ಕೋಗಿಲೆ
ಇಂಪಾದ ಸ್ವರದಲಿ
ತಂಪಾಗಲಿ ಮನವೆಲ್ಲವು
ತಂಗಾಳಿ ಸುಧೆಯಲಿ
ನೀ ಕಲಿಯೆ ನೀ ಕಲಿಯೆ
ಎಲ್ಲಾ ಕಾಲದ ವಾಸ
ನಾ ಅರಿಯೆ ನಾ ಅರಿಯೆ
ಸಂಗೀತ ಸಂಭ್ರಮದ ಭಾಸ
ಹೇಳೆ ಕೋಗಿಲೆ ಕೊಂಡಾಡಲ
ಅನುದಿನವು ಅನುಕ್ಷಣವು
ನಿನ್ನ ಅನುಕರಿಸಿ

ಹಸಿರು ತುಂಬಿದ
ವನಸಿರಿಯಲಿ
ಗುಟುಕು ಕೊಡುವ
ಹಕ್ಕಿಯಾಗುವೆನು
ಹರಿವ ಹೊಳೆಯ
ಸುಳಿಗುಂಡಿಯಲಿ
ಈಜಿ ಹೊರಬರುವ
ಹುಚ್ಚು ಹಂಬಲಿಗನು

ಬಿಸಿಲು ಮಳೆಯ
ದ್ವಂದ್ವ ಕಾಲಕೆ
ಮೂಡುವ ಮಳೆಬಿಲ್ಲಿಗೆ
ಮುತ್ತಿಟ್ಟು ಮುದ್ದಾಡುವೆನು
ಜೋತಾಡುವ ಜಲಪಾತಕೆ
ಮೇಲಿಂದ ಕೆಳಗೆ
ಜೋತು ಬೀಳುಲು
ತೆಳ್ಳಗಿನ ದಾರ ಕಟ್ಟುವೆನು

ಹಾಡು ಬಾ ಕೋಗಿಲೆ
ಕೂಗುವುದ ಕೊನೆಯಾಗಿಸದಿರು
ನನ್ನ ಹುಡುಗಾಟದ
ಹನಿಗನಸಿಗೆ ನೀರೆರೆಯದಂತೆ
ಕಿವಿ ತುಂಬುತ ಕೂಗುತಿರು
ಪ್ರೇರಣೆಯು ಹಾಡಾಗಲಿ

Wednesday, April 12, 2017

ಸ್ತಬ್ಧ ಚಿತ್ರದಂತೆ

ಪ್ರೀತಿ ಬಂತು ಒಲವಾಗಲು
ಮೋಹ ತಂತು ಮಸಾಗಲು
ಆದರೇನು ಆಗದು
ಕವಲು ಕಾಡಿನ ಹಾದಿಯಲ್ಲಿ
ಸ್ವಂತದ್ದೆಂದು ಹೇಗೆ ನುಡಿಯಲಿ
ಇರುಸು ಮುರುಸಿನ ಸ್ಥಿತಿಯಲಿ

ಆಚೆಗೊಂದು ಬಾಳ ಸ್ಪೂರ್ತಿಯು
ಈಚೆಗೊಂದು ಬದುಕಿನಾಧಾರವು
ಯಾರ ನೋಡಲಿ?
ಜೊತೆಗೆ ಹೆಜ್ಜೆ ಹಾಕಲು
ಎಲ್ಲಿಡಲಿ? ಹೇಗಿಡಲಿ? ಯಾರಲಿ?

ಯಾರ ಕಡೆಗೆ ವಾಲಿದರೂ
ಒಂದು ಕಣ್ಣು ಮಂಜಾದಂತೆ
ಬಾಳಾಟ ಮುಗಿಯುವವರೆಗೂ
ಎರಡು ಜೀವ ಒಂದೇ ಜೀವನ
ಯಾವ ಕೈಯಲಿ? ಯಾರ ಹಿಡಿಯಲಿ?

ಬರಿಯ ಗೊಂದಲ ತಲೆಯ ತುಂಬ
ವಿಲವಿಲ ಒದ್ದಾಟ ಮುರಿದು ಸ್ತಂಭ
ಆಗುವೆನು ಚಿತ್ರದಂತೆ ಸ್ತಬ್ಧ
ದೋಣಿ ಸಾಗಲಿ ಅವನಾಸೆಯಂತೆ
ಮುಳುಗಿಸುವನೋ? ತೇಲಿಸುವನೋ?

Monday, April 10, 2017

ಏನಾಗಲಿ?

ಕಾಣದ ಇರುಳಲಿ
ಕನಸಿನ ಮೆರವಣಿಗೆ
ಕಾಣುವ ಕನಸನು
ಮಾಡಲು ನನಸನು
ಛಲದಲಿ ಬಾಳಲು

ಗುರಿಯೇ ಇಲ್ಲದಂತೆ
ಹೊರಟ ಬದುಕ ನಡಿಗೆ
ಸಾಗುತ ಸೋಲುವೆ
ಬಾಗುತ ಸ್ವಪ್ನಕೆ
ಎಂದು ಈಡೇರುವುದೆಂದು

ಕುಟಿಲ ಪಥಗಳು
ಜಟಿಲ ಜನಗಳ ನಡುವೆ
ತೊರೆಯಂತೆ ಚಲಿಸಲೇ?
ಒಡೆಯದ ಬಂಡೆಯಂತೆ
ಗಟ್ಟೀಯಾಗಿ ನಿಲ್ಲಲೇ?

ಜೀವಿಸಲು ಹೇಗಿರಲಿ?
ಜನುಮದ ಪಯಣದಲಿ
ಪರರೊಂದಿಗಿನ ಮಾತಿನಲಿ
ಊಸರವಳ್ಳಿಯು ನಾನಾಗಲೇ?
ಅಲುಗಾಡದ ಎದೆಯಾಳಾಗಲೇ?

Wednesday, April 5, 2017

ಜೋಗದ ಗುಂಡಿಯ ಆಳವನರಿಯಲು ಹೊರಟ ಹುಡುಗ

ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬರಹ

ಬದುಕಿನಲ್ಲಿ ಒಮ್ಮೆ ನೋಡು ಜೋಗದ ಗುಂಡಿ ಅಂತ ಕನ್ನಡದ ಹಾಡೊಂದರಲ್ಲಿ ಹೇಳುತ್ತಾರೆ. ಅದೇ ರೀತಿ ಗೆಳೆಯರೆಲ್ಲ ಸೇರಿ ಓಮಿನಿ ಕಾರಿನಲ್ಲಿ ಜೋಗದತ್ತ ಪಯಣ ಬೆಳೆಸುತ್ತಾರೆ. ಹುಡುಗ ಬುದ್ಧಿಯವರಿಗೆ ಅದೊಂದು ರೀತಿಯ ಮಜ. ಅರಿವೇ ಇಲ್ಲದಂತೆ ತಾವೆಲ್ಲಿಗೆ ಹೊರಟಿದ್ದೇವೆ, ಅದೆಂತಹ ಅಪಾಯದ ಜಾಗ, ಸ್ಥಳದಲ್ಲಿ ಹೇಗೆ ಇರಬೇಕು, ಎಷ್ಟು ಜಾಗರೂಕತೆಯಿಂದ ವ್ಯವಹರಿಸಬೇಕು ಎಂಬುದು ಇವರಿಗೆ ಮುಖ್ಯವಲ್ಲ. ಅಲ್ಲಿ ಹೋಗಿ ಜೋಗದ ಜಲಪಾತವನ್ನು ನೋಡಿ ಸಂಭ್ರಮಿಸುವುದಷ್ಟೇ ಇವರ ತಲೆಯಲ್ಲಿದ್ದ ಪಯಣದ ರೂಪರೇಷೆ.

ಅಂತಾಕ್ಷರಿ, ಹರಟೆಗಳ ಮೂಲಕ ಜೋಗದ ಸ್ಥಳವನ್ನು ತಲುಪಿದರು. ಕಾರಿಂದ ಇಳಿದು ಯಾವ ಕಡೆ ಹೋಗ ಬೇಕೆಂದು ಯೋಚಿಸಿ ಜೋಗ ಜಲಪಾತದ ನೀರು ಬೀಳುವ ಜಾಗಕ್ಕೆ ತಲುಪಿದರು. ಮೇಲಿಂದ ಕೆಳಗೆ ನೋಡಿ ಭಯ ಬೀತರಾದರು. ನೀರು ಬೀಳುವ ಜಾಗದಲ್ಲಿರುವ ಬಂಡೆಗಲ್ಲಿನ ಮೇಲೆ ಮಲಗಿ ಜೋಗದ ಗುಂಡಿ ನೋಡಿ ಫೋಟೊ ಸೆರೆ ಹಿಡಿದರು. ಬ್ರಿಟೀಷ್ ಬಂಗಲೆಯನ್ನು ಸುತ್ತಿದರು. ಅಲ್ಲಿನ ಕಾಡು ಮರಗಳನ್ನು ಸುತ್ತಿ ಪರಿಸರದ ತಂಪು ಸ್ವಾದವನ್ನು ಹೀರಿದರು.

ಜೋಗದ ಗುಂಡಿ ನೋಡಲು ನಿಧಾನವಾಗಿ ಮೆಟ್ಟಿಲಿನತ್ತ ಹೆಜ್ಜೆ ಹಾಕಿದರು. ಸಾವಿರ ಮೆಟ್ಟಿಲುಗಳಿವೆ ಎಂದು ಕೇಳಿದ್ದ ಇವರು ಪ್ರತಿ ಮೆಟ್ಟಿಲುಗಳನ್ನು ಲೆಕ್ಕ ಮಾಡುತ್ತ ಹೆಜ್ಜೆಯಿಟ್ಟರು. ಕೆಳಗಡೆಗೆ ಹೋದ ಮೇಲೆ ಅಲ್ಲಿನ ಬಂಡೆಗಳ್ಳುಗಳನ್ನು ಏರಿ ಕುಳಿತರು. ಅಲ್ಲಿದ್ದ ಐಸ್ ಕ್ರೀಂ ಅನ್ನು ಒಂದಕ್ಕೆ ಎರಡು ದರ ಕೊಟ್ಟು ಖರೀದಿಸಿ ರುಚಿ ನೋಡಿದರು. ಆಗ ಅವರಿಗೆ ಹುಟ್ಟಿದ್ದು ಗುಂಡಿಯಲ್ಲಿ ಹಾರಿ ಈಜಿಕೊಂಡು ಜಲಪಾತದ ಕೆಳಗೆ ಹೋಗೋಣ ಎಂದು ಮಾತಾಡಿ ಗುಂಡಿಗೆ ಹಾರಲು ತಯಾರಾದರು. ಈಜು ಬರುವ ಎರಡು ಜನ ಹಾರಿ ರೋರರ್ ಜಲಪಾತದ ಕೆಳಬದಿಯನ್ನು ತಲುಪಿದರು.

ಮೂರನೆಯವನು ಹಾರಲೆಂದು ತನ್ನ ಕಾಲನ್ನು ಬಂಡೆ ಕಲ್ಲಿನ ಕೆಳಬದಿಯಲ್ಲಿರುವ ಚಿಕ್ಕ ಕಲ್ಲಿನ ಮೇಲಿಡಲೆಂದು ಧಾವಿಸಿದ. ಚಿಕ್ಕ ಕಲ್ಲಿನ ಮೇಲೆ ಕಾಲಿಡಬೇಕೆಂದು ಅಂದುಕೊಂಡು ಕಾಲಿಟ್ಟ ಹುಡುಗ ಕ್ಷಣ ಮಾತ್ರದಲ್ಲಿ ಕಣ್ಮರೆಯಾದ. ಯಾಕೆಂದರೆ ಬಂಡೆಯ ಕೆಳಗೆ ಚಿಕ್ಕ ಕಲ್ಲೇ ಇರಲಿಲ್ಲ. ಗುರುತು ಪರಿಚಯವಿರದ ಜಾಗದಲ್ಲಿ ಈಜಲು ಹೋದ ಹುಡುಗ ಜೋಗಾದ ಗುಂಡಿಯ ಆಳವನ್ನು ನೋಡಲು ಹೊರಟ ಹಾಗಾಯಿತು. ಎಷ್ಟೋ ಕೆಳಗೆ ಹೋದ ಹುಡುಗ ತಾನು ಸತ್ತೆ ಎಂದು ಮನಸ್ಸಿನಲ್ಲೆ ಅಂದುಕೊಳ್ಳುತ್ತಾ ಬದುಕಿ ಮೇಲೆ ಬರುವ ಪ್ರಯತ್ನ ಮಾಡಿದ. ಹೆದರಿದ ಹುಡುಗ ಮೇಲೆ ಬರುವಷ್ಟರಲ್ಲಿ ಉಸಿರಿನ ಕೊರತೆಯನ್ನು ಅನುಭವಿಸಿದ. ಬದುಕಬೇಕೆನ್ನುವ ಆಸೆಯಿಂದ ಹೇಗೋ ಮೇಲೆ ಬಂದ ಹುಡುಗನ ತಲೆ ಸರಿಯಾಗಿ ನೀರಿನ ಮೇಲಿದ್ದ ಬಂಡೆಗೆ ಸರಿಯಾಗಿ ಜಪ್ಪಿತು (ಹೊಡೆಯಿತು). ಉಸಿರಿಲ್ಲದ ಹುಡುಗ ನೀರೊಳಗೆ ಕೂಗಲು ಆಗದೆ ನೋವನ್ನು ಅನುಭವಿಸಲೂ ಆಗದೆ ಬಂಡೆಗಲ್ಲನ್ನೆ ಹಿಡಿದು ತಳ್ಳಿಕೊಳ್ಳುತ್ತೀಚೆ ಬಂದು ಮುಖವನ್ನು ಮೇಲೆ ಮಾಡಿ ಉಸಿರಾಡಿ ತನ್ನ ಕೈಯನ್ನು ಚಾಚಿದ.

ಆಗ ಈತನಿಗಾಗಿ ಅರಸುತ್ತಿದ್ದ ಈತನ ಒಬ್ಬ ಗೆಳೆಯ ಇವನ ಕೈ ಹಿಡಿದು ಮೇಲೆತ್ತಿದ. ಉಸಿರಿಲ್ಲದೆ ಹೆದರಿ ನೀರನ್ನು ಕುಡಿದಿದ್ದ ಹುಡುಗ ಬಂಡೆಯ ಮೇಲೆ ಮಕಾಡೆ ಮಲಗಿದ. ಅಂತು ಇಂತು ತನ್ನ ಜೀವ ಬದುಕಿತು ಎಂದುಕೊಳ್ಳುತ್ತ ಅರ್ಧಗಂಟೆ ವಿಶ್ರಮಿಸಿದ. ಈಜಿ ಜಲಪಾತದ ಕೆಳಗೆ ಹೋಗ ಬೇಕೆಂದುಕೊಂಡಿದ್ದ ಹುಡುಗ, ಅಂದುಕೊಂಡಿದ್ದನ್ನು ಸಾಧಿಸಿದ. ಮತ್ತೊಮ್ಮೆ ನೋಡಿಕೊಂಡು ಗುಂಡಿಗೆ ಹಾರಿ ಈಜಿಕೊಂಡು ಹೋಗಿ ಜಲಪಾತದ ಕೆಳಗೆ ನಿಂತು ಸಂಭ್ರಮಿಸಿದ.


ಮರಳಿ ಬರುವಾಗ ಸಾವಿರ ಮೆಟ್ಟಿಲುಗಳನ್ನು ಹತ್ತಲು ಕಷ್ಟ ಪಟ್ಟರೂ ಏನೋ ಸಾಧಿಸಿದ ಹುಡುಗರ ಸಂಭ್ರಮದ ಮುಂದೆ ಅವರಿಗಾದ ಸುಸ್ತು ನೀರಿನಂತೆ ಕರಗಿತು. ಮತ್ತೆ ಪುನಃ ಮಜದ ಮಾತಾಡುತ್ತ ಕಾರಿನೊಳಗೆ ಕೂತು ತಿರುಗಿ ಮನೆ ಸೇರುವಾಗ ಬಾನಿನ ಸೂರ್ಯ ಮಲಗಿದ್ದ ಹೊತ್ತಾಗಿತ್ತು.

ಅಪರಿಚಿತ ದಾರಿಹೋಕ ದಾರಿ ತೋರಿದಾಗ

ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬರಹ

ಪರಿಚಯವಿರದ ಪಯಣಕ್ಕೆ ಮುಂದಾದ ತರುಣನ ತರಾತುರಿಯಲ್ಲಿ ಮುನ್ನುಗ್ಗುತ್ತಿದ್ದ. ನೆಂಟರೊಬ್ಬರ ಮನೆಯ ವಿಶೇಷ ಪೂಜೆಯ ಕರೆಗೆ ಮನೆಯವರ ಪ್ರೇರಣೆಯೊಂದಿಗೆ ಬಸ್ ಹತ್ತಿ ಹೊರಟ. ಎಲ್ಲಿಳಿಯ ಬೇಕು, ಹೇಗೆ ಹೋಗ ಬೇಕೆಂದು ಕೇಳಿ ತಿಳಿದಿದ್ದ ತರುಣ ಒಂದು ಬಸ್ಸನ್ನು ಇಳಿದು ತಲುಪಬೇಕಾದ ಸ್ಥಳಕ್ಕೆ ಹೋಗುವ ಬಸ್ ಹತ್ತಿ ಹೊರಟ. ಬಸ್ಸಿನ ನಿರ್ವಾಹಕನ ಹತ್ತಿರ ಕೇಳಿಕೊಂಡು ಇಳಿಯ ಬೇಕಾದ ನಿಲ್ದಾಣದಲ್ಲಿ ಇಳಿದ. ಆದರೆ ಅಲ್ಲಿಂದ ನೆಂಟರ ಮನೆಗೆ ಹೋಗಲು ಇದ್ದಿದ್ದು ಕಾಲು ಹಾದಿ. ಅದೂ ಕಡಿದಾದ ಕಾಡಿನ ಮಧ್ಯೆ ಕಿರಿಕಿರಿಯೆಂದು ಕೂಗುತ್ತಿದ್ದ ಕಾಡು ಜಿರಲೆಯ ನಾದದ ಕೂಗಿಗೆ ಹೆಜ್ಜೆ ಹಾಕುತ್ತ ಮನೆಯವರು ಹೇಳಿದಂತೆ ಸಾಗುತ್ತ ಗುರಿಯತ್ತ ಮುನ್ನೆಡೆದ. ಹಾಗೆ ಒಬ್ಬನೆ ನಡೆಯುತ್ತ ಮುಂದೆ ಹೋಗುತ್ತಿದ್ದಾಗ ಅವನಿಗೆ ಎದುರಾಗಿದ್ದು ಕವಲು ದಾರಿ. ಆಗ ಕಂಗಾಲಾದ ತರುಣ ಬಲಗಡೆಯ ದಾರಿಯಲ್ಲಿ ಹೋಗಲೇ? ಅಥವಾ ಎಡಬದಿಯ ದಾರಿಯಲ್ಲಿ ಮುನ್ನಡೆಯಲೇ? ಎಂದು ವಿಚಾರ ಮಾಡುತ್ತ ಮಧ್ಯದಲ್ಲಿ ನಿಂತು ಯೋಚಿಸಿದ.

ಬಿಸಿಲು ತಲೆಯ ಮೇಲಿಂದ ಸುಡುವ ಹೊತ್ತಾದರೂ ಕಾಡಿನ ಮಧ್ಯೆ ಮರಗಳ ನೆರಳಿನಲ್ಲಿ ನಿಂತಿದ್ದ ತರುಣ ಯಾವ ದಾರಿಯಲ್ಲಿ ಹೋಗಬೇಕೆಂದು ಗೊತ್ತಾಗದೇ ಗಲಿಬಿಲಿಯಾಗಿದ್ದ ತರುಣನಿಗೆ ಕಂಡಿದ್ದು ದೂರದಲ್ಲಿ ಬರುತ್ತಿದ್ದ ಬಿಳಿ ಕೂದಲಿನ ಮುದುಕ. ಆ ಮುದುಕ ಹತ್ತಿರ ಬರುತ್ತಿದ್ದಂತೆ "ಅಜ್ಜ ಕವಲು ಮನೆಗೆ ಹೋಗುವ ದಾರಿ ಯಾವುದೆಂದು" ಕೇಳಿದ. ಅದಕ್ಕೆ ಉತ್ತರಿಸುತ್ತ, ನೀನು ಈ ಪ್ರದೇಶಕ್ಕೆ ಹೊಸಬನೇ ಎಂದು ಪ್ರಶ್ನಿಸಿದ. ಹೌದು ಎಂದ ತರುಣ ಅಲ್ಲಿಗೆ ಹೋಗುವ ದಾರಿಯಾವುದೆಂದು ಹೇಳಜ್ಜ ಹೊತ್ತಾಯಿತು ಎನ್ನುತ್ತಾನೆ. ಎರಡು ದಾರಿಯು ಅವರ ಮನೆಗೆ ಹೋಗುತ್ತದೆ ಆದರೆ ಅವರ ಮನೆ ಇರುವುದು ಹಲವಾಗು ಮನೆಗಳ ನಡುವೆ ಎಂದಾಗ ಮತ್ತೆ ಗೊಂದಲಕ್ಕೊಳಗಾಗುತ್ತಾನೆ. ಆಗ ಮುದುಕ ಹೇಳುತ್ತಾನೆ ನಡೆ ನಿನ್ನ ಜೊತೆಗೆ ನಾನು ಬರುತ್ತೇನೆ, ನಿನಗೆ ಮನೆಯನ್ನು ತೋರಿಸುತ್ತೇನೆ ಎಂದು ಹೇಳಿ ತರುಣನ ಜೊತೆ ಹೆಜ್ಜೆ ಹಾಕುತ್ತಾನೆ.

ಮುನ್ನಡೆಯುತ್ತಾ ತರುಣನ ಜೊತೆ ಮಾತಿಗಿಳಿದ ಅಜ್ಜ ಕೇಳುತ್ತಾನೆ ನಿನಗೆ ಭಯ ಜಾಸ್ತಿಯಾ? ಎಂದಾಗ ತರುಣ ಹಾಗೇನಿಲ್ಲ ಎಲ್ಲೋ ಅಲ್ಪ ಸ್ವಲ್ಪ ಹೆದರುತ್ತೇನೆ ಅಂತೇಳುತ್ತಾನೆ. ಹಾಗಾದರೆ ದೆವ್ವಗಳೆಂದರೂ ಭಯವಿಲ್ಲವೇ? ದೆವ್ವಗಳ ಜೊತೆಗೆ ಮಾತನಾಡುವೆಯಾ? ಎಂದು ಕೇಳಿದಾಗ ತರುಣ ಸ್ವಲ್ಪ ಅಂಜಿಕೆಯಿಂದಲೆ ಹೆದರಿಕೆಯಿಲ್ಲ, ಅವುಗಳನ್ನೆಲ್ಲ ನಾನು ನಂಬುವುದಿಲ್ಲ ಎನ್ನುತ್ತಾನೆ. ಅಷ್ಟರಲ್ಲಿ ತಲುಪಬೇಕಾಗಿದ್ದ ಮನೆಯು ಹತ್ತಿರದಲ್ಲಿ ಕಾಣಿಸಿತು. ಅಲ್ಲಿದೆ ನೀನು ಹೋಗಬೇಕಾದ ಮನೆಯೆಂದು ತೋರಿಸಿದ. ಆಗ ಅಜ್ಜನಿಗೆ ಧನ್ಯವಾದ ಹೇಳಬೇಕೆಂದು ಅಜ್ಜಾ ಎನ್ನುತ್ತಾನೆ. ಏನು ಮಗಾ, ನೀನು ದೆವ್ವಗಳನ್ನು ನಂಬುವುದಿಲ್ಲ ಅಲ್ಲವೇ? ಎಂದು ಕೇಳುತ್ತಾನೆ. ಇಲ್ಲಾ ಎಂದು ಹೇಳುತ್ತಾ ತಿರುಗಿದಾಗ ಬಳಿಯಿದ್ದ ಅಜ್ಜನನ್ನು ಕಾಣದೇ ಕಂಗಾಲಾಗಿ ಕರೆಯಲಾರಂಭಿಸುತ್ತಾನೆ ಅಜ್ಜಾ....!  ಅಜ್ಜಾ.......!!