Friday, July 25, 2014

|| ಸಾವಿನ ಬದುಕು ||

ನಾ ಹೆಣವಾಗಿ ಮಲಗಿರೂ
ಉಸಿರಾಡುತ ಬದುಕಿದರೆ
ನಿನ್ನಗಲಿ ಉಳಿಯಲಾಗದೆ
ವಿರಹದಲಿ ಸಾಯುವೆ

ನಾ ಸತ್ತರೂ
ನಿನ್ನ ಕಾಡುವ
ದೆವ್ವ ನಾನಾಗೆನು
ನಾ ಬಯಸುವ ಜಗತ್ತು
ಹಸಿರಾಗ ಬೇಕು
ನೀ ಖುಷಿಯಲಿ ಉಸಿರಾಡುವಾಗ

ಜಾರುತಿದೆ ಎದೆಯಲಿ
ಹೃದಯದ ಕೊಟೆ
ನಿನ್ನಾಳ್ವಿಕೆ ಅಳಿದ
ಮರುಕ್ಷಣದಲಿ

ಬಿಕ್ಕಳಿಕೆ ಮರೆಯಾಗಿದೆ
ನೀ ನನ್ನ ಮರೆತಿರಲು
ಘಾಸಿಯಾಗಿಹ ಮನಸಿಗೆ
ವಾಸಿಯಾಗದ ಕಾಯಿಲೆ
ಶವ ಸಂಸ್ಕಾರಕ್ಕೆ ನಾಂದಿಯು

Thursday, July 24, 2014

|| ಗರ್ಭ ಗೂಡು ||

ಈ ಭುವಿಯ ಮಾಯೆ
ಸೆಳೆಯುತಿದೆ ನನ್ನ
ಅಮ್ಮಾ ಕ್ಷಮಿಸು
ತೊರೆಯುವೆ ನಿನ್ನ ಗೂಡು
ಹೊತ್ತಿರುವೆ ನನ್ನ
ನವಮಾಸ ನೀನು
ಹೆತ್ತು ಹೊರದೂಡು
ನವಜಾತ ಶಿಶುವೆಂದು ||

ನಿನ್ನ ರಕ್ಷೆ ಗೂಡಲ್ಲಿ
ಬಚ್ಚಿಟ್ಟು ನನ್ನ
ಕಾವಲನು ಕಾದಿರುವೆ
ಕರುನಾಳು ನೀನು
ನಿನ್ನ ಗರ್ಭವನು ತೊರೆಯುವೆ
ನಿನ್ನ ಮಡಿಲಲ್ಲಿ ಮಲಗುವೆ
ನನ್ನ ಆಟ ಪಾಠದಲಿ ಖುಷಿ ನೀಡುವೆ ||

ನಾ ಬೀಳೆನು ಬದುಕಿನಲೆಂದು
ನೀ ಅಳಬಾರದು ಬಾಳಿನಲೆಂದು
ನೀ ಗಾಯವಾದರೆ ಅಲಕ್ಷಿಸುವೆ
ಮನಸಿಗೆ ನೋವಾದರೆ ಕೊರಗುವೆ
ನಾನದನು ನೋಡಿ ಸಹಿಸೆನು 
ನಿನಗೆಂದು ನೋವ ನೀಡೆನು
ಚಿರಕಾಲ ಕಾಯುಲು ನಿನ್ನ
ಕಣ್ಣರೆಪ್ಪೆಯಂತೆ ನಾನಿರುವೆನು ||

ನಿನ್ನ ಕರುಳ ಕುಡಿಯಾಗಿ
ಉಳಿಸುವೆನು ನಿನ್ನ ಹೆಸರ
ಸಹನೆಯಲಿ ತಪ್ಪನ್ನು ತಿದ್ದುವ 
ಕ್ಷಮೆಯಾ ಧರಿತ್ರಿ ನೀನು
ತೀರಿಸಲಾಗದು ನಿನ್ನ ಋಣವ
ದಯಮಾಡಿ ಹೊರದೂಡು ನನ್ನ
ತೃಣ ಋಣವ ತೀರಿಸಲು ಅಣಿಯಾಗುವೆ
ಸಚ್ಚಾರಿತ್ರ್ಯ ಶೀಲನನ್ನಾಗಿ ಮಾಡು ||

Friday, July 18, 2014

|| ಅಳಿಸಲಾಗದು ||

ಆ ಚಂದ್ರ ಸತ್ತ ದಿನದಿ
ಪುಷ್ಪಗುಚ್ಚ ನಾನಿಡುವೆ
ನಿನಗೆಂದು ತಂದ ಹೂವ
ಚಿಪ್ಪರ್ಸಿ ಒಗೆದಿರುವೆ
ನಿನ್ನ ಮೊಗದ ಕಾಂತಿಗೆ
ನಾಚಿ ತಿಂಗಳಿಗೊಮ್ಮೆ 
ಆತ್ಮಹತ್ಯೆ ಮಾಡಿಕೊಳ್ಳುವನು
ಅಮವಾಸ್ಯೆ ಎಂದು ಹೇಳಿ
ಸುಮ್ಮಗಾಗಿ ಹೋಗುವರು ||

ನಿನ್ನ ಪ್ರೀತಿ ಪರಿಚಯಕ್ಕೆಂದು 
ಧಾರವಾಹಿ ಮಾಡುವೆನು
ಹಿನ್ನಲೆಯ ಸಂಗೀತಕ್ಕೆ
ಭಾವವೀಣೆ ನುಡಿಸುವೆನು
ತಲೆಗೊಂದು ಮಾತು ಕೇಳಿ
ನಿನ್ನ ಮನಸು ಹಾಳಾಯ್ತು
ಮುದ್ದಿಸುವ ಮನಸ್ಸಿನಲ್ಲಿ
ಮಂಜು ತುಂಬಿ ಕುರುಡಾಯ್ತು ||

ನಗುತ ಬಾಳುವ ವಾಸಸ್ಥಾನ
ಸೊರುತಿರುವ ಸೂರಿನಲಿ
ನೋಡಬಹುದು ಉರಿವ ಚಂದ್ರನ
ಹೆಣದಂತೆ ನಾ ಮಲಗಿ
ಹಣೆಯ ಬರಹ ಓದಲಾಗದು
ಪ್ರೀತಿ ಬರಹ ಅಳಿಸಲಾಗದು
ಎಂದು ಬರೆದೆ ಪುಟಗಳಲ್ಲಿ
ವಿರಹ ಗೀತೆ ಶೀರ್ಷಿಕೆಯ ||

Wednesday, July 16, 2014

|| ಮಳೆ ಮುತ್ತು ||

ಗಗನವು ಕಾಣದೀಗ ಮೇಲೆ ನೋಡಲು
ಕಪ್ಪನೆಯ ಮೋಡಗಳು ಸುತ್ತುಗಟ್ಟಲು
ರವಿಚಂದ್ರರು ಮರೆಯಲ್ಲಿ ಅಡಗಿ ಕೂರಲು
ಬಹುದಿನದ ಕೆಲಸದಲ್ಲಿ ದಿನವು ಅರಳಲು ||

ತಂಪು ಮಳೆಯು ಬಂತೆಂದು ಹರ್ಷವಾಯಿತು
ಮಳೆ ನೀರಲ್ಲಿ ನೆನೆಯುವ ಆಸೆಯಾಯಿತು
ಅಂಗಳದ ಆಟದಲ್ಲಿ ಒದ್ದೆಯಾಗಲು
ಕಾಲ್ಗಾಡಿ ಹೊರಟಿತು ಉರ್ತುಂಬ ಸುತ್ತಲು ||

ದಾರಿಯಲ್ಲಿ ಸಿಗುವ ಮಳೆ ಹನಿಗಳೆ
ನಿಮಗೆಲ್ಲ ನೆಚ್ಛಿನ ಹೆಸರ ನಾನಿಡಲೆ
ಯಾವ ಹನಿಯು ಚಿಪ್ಪಲಿ ಮುತ್ತಾಗಿ ಮರೆಯಾಗಿರುವುದೊ
ವರ್ಷಧಾರೆ ಹರಿದು ಭೂಮಿ ತಂಪಗಾಗುವುದೊ ||

ಕರಿದಾದ ಮೊಡದಲಿ ಬಣ್ಣವಿಲ್ಲದ ನೀರು ಅಡಗಿಹುದು
ಹೆಸರಿಲ್ಲ ಹನಿಗಳಿಂದ ಬೆಳೆಯು ಬೆಳೆವುದು
ಸುಸ್ತಾಗಿ ಬೀಳುವ ಹನಿಗಳೆಲ್ಲ ಕಡಲ ಸೇರುವುದು
ಮುಂದಿನ ತಯಾರಿಯಲ್ಲಿ ಮೊಡವಾಗುವ ಕಾತುರದಲಿ ||

Thursday, July 10, 2014

|| ಐಕ್ಯತೆಯ ವರ ||

ನನ್ನೆದಯ ಅರಮನೆಯ
ಕಾಯುತಿರುವ ಸೈನಿಕ ನಾನು
ಅದರೊಳಗೆ ಕೂತಿರುವ ಸಿಂಹಾಸನವ
ಎರಿರುವ ಮನದನ್ನೆ ಮನ್ನಿಸು
ನನ ತಪ್ಪನು
ಜೀವಕೆ ಉಸಿರಾಗು
ಬದುಕನ್ನು ನೀ ನೀಡು
ನನ ಬಾಳಿನ ಸರ್ವಸ್ವವು ನೀನಲ್ಲವೆ...? ||

ಎದಿರು ಸಿಟ್ಟಿನಲಿ ಭೈದಿರುವೆ
ಎದುರಿನಲಿ ನಿಂತಿರುವೆ
ಜಗಳಾಟಕೆ ಕೊನೆಯಾಟ ಕ್ಷಮೆಯಲ್ಲವೆ
ಮುನಿಸನು ಮರೆತಿರುವೆ
ಮಳೆಯಲ್ಲಿ ನೆನೆದಿರುವೆ
ಪ್ರಮಾದಕೆ ಪರಿಹಾರುಳಿದಿಲ್ಲವೆ...? ||

ಕಡಲ ತೆರೆಯಲ್ಲು
ದಡ ಸೇರುವ ಕಸದಲ್ಲು
ನನ ಪ್ರೀತಿಯ ಕುಟುಕು ನಿನಗಲ್ಲವೆ
ಕೆಟ್ಟ ಭೂತವನು ಮರೆಯುವುದು
ನಡೆದ ಸಿಹಿಯನ್ನು ನೆನೆಯುವುದು
ಐಕ್ಯತೆಯು ನಮ ಬಾಳಿಗೆ ನೆರವಾಗೊ ವರವಲ್ಲವೆ...? ||

Friday, July 4, 2014

|| ಖಾಲಿ ಒಲವು ||

ಒಲೈಸುವ ಪರಿ ಬದಲಾಗಿರಲು
ಒಲವಿನ ಮೂಟೆ ಖಾಲಿಯಾಗಲು   
ಸರಿ ಸಮಯ ಬಿಡುವಿಲ್ಲದಂತೆ
ಮರಿ ಮನಸು ಮುದುಡಿರುವಾಗ ||

ನಕ್ಷೆಯಲು ಉಳಿಸಿಲ್ಲ ನಿನ ಗುರುತು
ಮನಸಲ್ಲು ಉಳಿದಿಲ್ಲ ನನ ಮರೆತು
ಕೊನೆಯಿರದ ಕೋಶದಲು ಸಿಗದಂತೆ
ಆಡುಭಾಷೆಯ ಪದವಾಗಿ ಹೋದೆ ||

ನಿಘಂಟಿನಲಿ ನೀನಿರದಿರೆ ಇನ್ನೇನಿದೆ
ಖಾಲಿ ಕಾಗದದ ಪುಸ್ತಕ
ನನ್ನೆದೆಯ ಅರಮನೆಯು ಸೋರುತಿಹುದು
ನಿನ ಪ್ರೀತಿಯ ಹೊದಿಕೆಯಿಲ್ಲದೆ ||

ನಾ ಬಡವನಾದೆ ನಿನ ಒಲವಿಲ್ಲದೆ
ಬಲ್ಲಿದನಾಗುತಿರುವೆ ವಿಷಮದೆಡೆಗೆ
ನೀ ಒಲಿದು ಅಲೆದು ಹೋದೆ
ನನ ಅಲೆಮಾರಿ ಮಾಡಿ ಅಳೆದೆ ||

ಕುಳಿತಿರುವೆ ಚಹ ಕುಡಿಯಲು
ಗೂಡಂಗಡಿಯ ಎದುರಲಿ ತೋಚದೆ
ನೀ ಸ್ಥಳಾಂತರ ಮಾಡಿರಲು
ತಬ್ಬಿಬ್ಬಾಗಿಹೆನು ಕಲ್ಪಿಸಲು ಆಗದೆ ||