Saturday, November 21, 2020

ಶಶಿಯೆಂಬ ಖುಷಿ

ಬೆಳದಿಂಗಳ ರಾತ್ರಿಯಲಿ
ತಂಪಾದ ವೇಳೆಯಲಿ
ನಿನ ಸನಿಹ
ಜೊತೆಯಾಗಿ ಇರುವಾಗ
ಈ ಪರಪಂಚವೇ ಶೂನ್ಯ
ನಿನ ಒಡನಾಟವೇ ಮಾನ್ಯ
ಸಂಗಾತಿ ಸಂಪ್ರೀತಿ ಸಿಗುವಾಗ


ಹಿತವಾದ ಮಾತಿನಲಿ
ಇಂಪಾದ ಗಾನದಲಿ
ಗುನುಗುಡುವ ಸದ್ದೆಂದೂ
ನಿನ ನಾಮವಾಗಲಿ


ಜೀರ್ಜಿಂಬೆ ರಾಗದಲಿ
ತಾರೆಗಳ ನಡುವಿನಲಿ
ಕರ್ಗತ್ತಲ ಬೆಣ್ಣೆಯೆಂದೂ
ಶಶಿಯೆಂಬ ಖುಷಿಯಲಿ

Tuesday, June 30, 2020

ಇಡುವ ಹೆಜ್ಜೆ

ನಾವು ಕಲಿತ ಶಾಲೆಯಲ್ಲಿ
ಕನಸ ಬಣ್ಣ ದೊರೆವುದು
ನನಸ ಚಿತ್ರಣ ಎದುರಿನಲ್ಲಿ
ನಿನ್ನ ಕೈ ಗುಣ ತಿಳಿವುದು ||ಪ||

ಬದುಕ ರೂಪಿಸೊ ವೇಳೆಯಲ್ಲಿ
ಮೈಯ ಮರೆತರೆ ಇರುಳದು
ಅರಿತು ಇಡುವ ಹೆಜ್ಜೆಯಲ್ಲಿ
ಕಷ್ಟ ಸುಖವೋ ಸೊಗಸದು ||೧||

ಪಾಠ ಕಲಿಸುವ ಗುರುವಿನಲ್ಲಿ
ತಿದ್ದಿತೀಡುವ ಗುಣವು ಬೇಕು
ವಿದ್ಯೆ ಕಲಿತ ಶಿಷ್ಯರಲ್ಲಿ
ಗೌರವಿಸುವ ಭಕ್ತಿ ಬೇಕು ||೨||

ಜನ್ಮ ತಳೆವರಲವು ಅಪ್ಪ ಅಮ್ಮ
ಗೆಲುವು ಕಂಡ ಹೊತ್ತಿನಲ್ಲಿ
ಆಳಿಗೊಂದು ಕಲ್ಲ ಎಸೆವರು
ಹೊಂಡದಲ್ಲಿ ಬಿದ್ದ ಕ್ಷಣದಲಿ ||೩||

Sunday, May 10, 2020

ಅಮ್ಮಂದಿರ ದಿನ ಮತ್ತು ತಂದೆಯಂದಿರ ದಿನಾಚರಣೆಯ ಕುರಿತಾಗಿ ನನ್ನದೊಂದು ವಿಚಾರ:

ಈ ಅಮ್ಮಂದಿರ ದಿನ ಮತ್ತು ಅಪ್ಪಂದಿರ ದಿನ ಎಂಬ ಶಬ್ದಗಳು ಬಂದಿದ್ದು ಪಾಶ್ಚಾತ್ಯ ದೇಶಗಳಿಂದವೇ ಹೊರತು ಅದು ನಮ್ಮ ಭಾರತೀಯ ಅಥವಾ ಸನಾತನ ಸಂಸ್ಕೃತಿಯಿಂದಲ್ಲ.

ಅವರು ಎತಕ್ಕೆ ಈ ಅಮ್ಮಂದಿರ ದಿನ ಮತ್ತು ಅಪ್ಪಂದಿರ ದಿನ ಎಂಬ ಪದಗಳ ರೂಢಿಯನ್ನು ಬಳಕೆಗೆ ತಂದಿರಬಹುದೆಂದರೆ ಪಾಶ್ಚಿಮಾತ್ಯರು ಅವರ ಹೆತ್ತವರನ್ನು ವೃದ್ಧಾಶ್ರಮದ ಅತಿಥಿಗಳನ್ನಾಗಿ ಕಳಿಸಿಕೊಟ್ಟಾಗ ಅವರನ್ನು ಮತ್ತು ಅವರ ಯೋಗಕ್ಷೇಮ ವಿಚಾರಿಸಲಿಕ್ಕೆಂದು ನಿಗದಿ ಮಾಡಿಕೊಂಡ ದಿನಗಳೇ ಈ ಅಪ್ಪ ಮತ್ತು ಅಮ್ಮಂದಿರ ದಿನಾಚರಣೆಗಳೆಂಬ ಶಬ್ದಗಳ ವ್ಯಾಖ್ಯಾನವಾಗಿರಬಹುದೇ?

ನಾವು ನಮ್ಮ ಸಂಸ್ಕೃತಿಯಲ್ಲಿ, ಮನಸ್ಸಿನಲ್ಲಿ ಮತ್ತು ಬಳಕೆಯಲ್ಲಿ ಮಾತೃದೇವೋ ಭವ ಮತ್ತು ಪಿತೃದೇವೋ ಭವ ಎಂದು ಪ್ರತಿನಿತ್ಯ ಪೂಜನೀಯ ಭಾವದಿಂದ ನಡೆದುಕೊಳ್ಳುತ್ತಿರುವಾಗ ಈ ದಿನಾಚರಣೆಗಳ ಅಗತ್ಯ ಏನಿದೆ ಅನ್ನೋದು ನನಗೆ ಅರ್ಥವಾಗದ ಗೊಂದಲ.

ಹೆತ್ತವರನ್ನು ಒಂದೇ ಒಂದು ದಿನಕ್ಕೆ ಸೀಮಿತಗೊಳಿಸಿ ಬಹಿರಂಗವಾಗಿ ತೋರಿಕೆಯನ್ನು ವ್ಯಕ್ತಪಡಿಸಿ ಮರು ಕ್ಷಣದಿಂದ ಅವರನ್ನು ನಿರ್ಲಕ್ಷಿಸುವುದು, ಅವರು ನಮಗೆ ಜನ್ಮ ಕೊಟ್ಟಿದ್ದಕ್ಕೆ ಮಾಡುವ ಅವಮಾನವಾಗುತ್ತದೆ ಅಲ್ವಾ...?

ಬೇರೆಯವರು ಮಾಡಿರುವ ಅವೈಜ್ಞಾನಿಕ ಆಚರಣೆಗಳ ಅನುಕರಣೆ ಮಾಡುವುದಕ್ಕೆ ಹೋದರೆ ಅದು ನಮ್ಮನ್ನು ನಿರಾಸೆಗೆ ಒಳಪಡುವಂತೆ ಮಾಡುತ್ತದೆ....

ಅಮ್ಮಾ ಅಥವಾ ಅಪ್ಪ ಇಲ್ಲದವರು ಅವರು ನಮ್ಮೊಂದಿಗೆ ಇಲ್ಲಾ ಅಂತ ಅಂದುಕೊಳ್ಳುಹುದು ಮಾನಸಿಕ ಖಿನ್ನತೆ ಅನ್ನೋದು ನನ್ನ ಅಭಿಪ್ರಾಯ. ಅದರ ಬದಲು ಅವರು ಇಲ್ಲೇ ಎಲ್ಲೋ ಹೋಗಿದ್ದಾರೆ ಇನ್ನೇನು ಸ್ವಲ್ಪ ಹೊತ್ತಿನಲ್ಲಿ ವಾಪಸ್ಸು ಬರುತ್ತಾರೆ ಎನ್ನುವ ನಂಬಿಕೆಯಲ್ಲಿ ಮಾನಸಿಕವಾಗಿ ಸದಾ ಅಪ್ಪ ಮತ್ತು ಅಮ್ಮನ ಜೊತೆಗೆ ಇರುವುದೇ ನಿಜವಾದ ಪ್ರೀತಿ ಮತ್ತು ಭಕ್ತಿ.

ಸದಾ ಮಾನಸಿಕವಾಗಿ ಅವರೊಟ್ಟಿಗಿದ್ದರೆ, ಆಗ ನಮ್ಮಷ್ಟು ಸುಖವಾಗಿ ಮತ್ತೊಬ್ಬರು ಇರುವುದಿಲ್ಲ.

ಅವರನ್ನು ಕಳೆದುಕೊಂಡೆವು ಎಂಬ ಭಾವದಿಂದ ಬೇಜಾರಾಗಾದೆ ಸದಾ ಖುಷಿಯಿಂದಿರಬೇಕಾಗಿದ್ದು ನಮ್ಮ ಆದ್ಯ ಕರ್ತವ್ಯವೂ ಸಹ ಹೌದು. ಯಾಕೆಂದರೆ ನಮ್ಮ ಹೆತ್ತವರು ಯಾವತ್ತೂ ನಮ್ಮ ದುಃಖವನ್ನು ಬಯಸಿದವರಲ್ಲ. ಅವರಿಗೆ ಎಷ್ಟೇ ಕಷ್ಟವಾದರೂ ತಮ್ಮ ಮಕ್ಕಳು ಖುಷಿಯಾಗಿರಲಿ ಅಂತ ಬಸಿದವರ ಎದುರು, ತಂದೆ ಮತ್ತು ತಾಯಂದಿರ ದಿನದಂದು ಯಾರೋ ಕೆಲವರು ಹೆತ್ತವರೊಂದಿಗಿನ ಆಟದ ವಿಚಾರ ಹೇಳಿದಾಗ ಆಗಲಿ ಅಥವಾ ಅವರೊಂದಿಗಿನ ಫೋಟೋ ನೋಡಿದಾಗಾಗಲಿ ಬೇಸರಿಸಿ ದುಃಖಿಸಿದರೆ ಅದು ನಾವು ನಮ್ಮ ಹೆತ್ತವರಿಗೆ ಮಾಡುವ ದ್ರೋಹ ಎನ್ನುವುದು ನನ್ನ ಭಾವನೆ.

ಹೀಗಾಗಿ ಹೆತ್ತವರೊಂದಿಗೆ ನಿಮ್ಮ ಮನಸಿನ ಬಾಂಧವ್ಯವನ್ನು ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ ಅವರ ವಾತ್ಸಲ್ಯವನ್ನು ಪ್ರತಿ ಕ್ಷಣಗಳ ಹಬ್ಬವನ್ನಾಗಿ ಆಚರಿಸುವಂತಾಗಲಿ ಎಂದು ಆಶಿಸುತ್ತೇನೆ.

Thursday, April 30, 2020

ಮಾರ್ಮಿಕ ಸೂಚನೆ

ಅರಿವಾಗದು ಜೀವಿಗೆ
ಕಣ್ಣೆದುರಿಗೆಲ್ಲಾ ತೆರೆದಿದ್ದರೂ
ಮಾರ್ಮಿಕವೆಲ್ಲಾ ನಿನ್ನ ಸೂಚನೆ
ತಿಳಿಯೆ ಜ್ಞಾನದಿಂದ

ಮಾತನಾಡದ ಹಣತೆ
ತಿಳಿಸುವುದು ಪರಿಚಯವ
ಮೂಲ ಮುಗಿಯುವ ತನಕ
ಚೆಲ್ಲುವ ಬೆಳಕಿನಿಂದ //೧//

ತಡೆಯಿರದ ರಶ್ಮಿಗೆ
ಹೊಲಸಾಗದ ಗುಣವುಂಟು
ಕೊಳಕು ಜಾಗಕೆ ಹೋದರೂ
ಸ್ವಚ್ಛ ಕಿರಣಗಳಿಂದ //೨//

ಹಣತೆ ಪ್ರಕಾಶಿಸಿದಂತೆ
ಸೂಕ್ಷ್ಮತೆಯ ಉಣಬಡಿಸು
ದೀಪದ ಪ್ರತಿರೂಪ ದೇವನು
ಕ್ಷಣ ಕ್ಷಣವು ನೀಡುವ ಸ್ಪೂರ್ತಿಯನು //೩//

Tuesday, April 28, 2020

ಸುರಿದೆ ಸಾಲ

ಬರೆದೆ ನಾನು ಹಲವು ಸಾಲ
ನಿನ್ನ ಜೊತೆಗೆ ಸಾಗುತ
ಸುರಿದೆ ನೀನು ಒಲವ ಸಾಲ
ಪ್ರೀತಿ ಬದುಕ ತೇಯುತ //ಪ//

ನಮ್ಮ ಬಾಳಿನ ನೀರಿನಲ್ಲಿ
ಕಣ್ಣ ಸೆಳೆಯುವ ಬಣ್ಣವು
ಹರಿವ ಕ್ಷಣದ ಹೊತ್ತಿನಲ್ಲಿ
ತಡೆದು ಹಿಡಿಯುವ ಮಣ್ಣದು //೧//

ಪ್ರೀತಿ ಕಾಣಿಕೆ ಸೆರಗಿನಲ್ಲಿ
ಕೊಂಚ ಕಾಡುವ ಪ್ರೇಮಯು
ನೀತಿ ವಾಡಿಕೆ ಬಗಲಿನಲ್ಲಿ
ಮಿಂಚ ಸೆಳೆತಕೆ ಸೋಲದು //೨//

ಬರೆದೆ ಸಾಲನು ಹೊಸ್ತಿಲಲ್ಲಿ
ಪಯಣಕೊಂದೆ ಗೀತವು
ಸುರಿವ ಮಳೆಯ ನಾದವಲ್ಲಿ
ನಡೆವ ಬಾಳಿಗೆ ಗಾನವು //೩//

Friday, February 14, 2020

ಮುಂದೊಂದು ದಿನ ಹೀಗಾಗಬಹುದೇ?

ಮಾನವನ ವಿನಾಶಕ್ಕೆ ಯಾಂತ್ರೀಕರಣವೇ ನಾಂದಿ

ಬೆಳೆಯುತ್ತಿರುವ ಆಧುನಿಕ ಯುಗದಲ್ಲಿ ಹಲವಾರು ಆಧುನಿಕ ಸಾಧನಗಳು ಮನುಷ್ಯನನ್ನು ಸೆಳೆಯುತ್ತಿವೆ ಮತ್ತು ಅವನನ್ನು ಆಲಸ್ಯದ ಆಗರವನ್ನಾಗಿಸುತ್ತಿವೆ. ಇದಕ್ಕೆಲ್ಲಾ ಕಾರಣಗಳನ್ನು ಹುಡುಕಿದರೆ, ಹೊರಬರುತ್ತಿರುವ ಒಂದೊಂದೆ ಯಂತ್ರಗಳು ಮಾನವನನ್ನು ಸ್ವಾವಲಂಬಿ ಜೀವನದಿಂದ ಪರಾವಲಂಬಿಯನ್ನಾಗಿಸುತ್ತದೆ. ಇಂತಹ ವಿಚಾರಗಳು ಮುಂದೊಂದು ದಿನ ಹೀಗೂ ಆಗಬಹುದೆಂಬ ಕಲ್ಪನೆ ಮತ್ತು ಆಲೋಚನೆಗೆ ಎಡೆಮಾಡಿಕೊಡುತ್ತಿವೆ.

ಹೀಗೊಂದು ವಾದವುಂಟು, ಆಧುನಿಕ ಯಂತ್ರಗಳ ಆವಿಷ್ಕಾರದಿಂದ ಮನುಷ್ಯನಿಗೆ ಸಮಯಾವಕಾಶಗಳು ವಿಫುಲವಾಗಿ ದೊರೆಯುತ್ತಿದ್ದು ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಾಯಕವಾಗಿದೆಯೆಂದು. ಆದರೆ ಇಂತಹ ಜನರ ಪ್ರಮಾಣ ಇರುವುದು ಬೆರಳಣಿಕೆಯಷ್ಟು ಮಾತ್ರ. ಹಾಗಾಗಿ ಅಧಿಕವಾಗಿರುವ ಆಳಸಿ ಜನರ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಯೋಚಿಸಿದರೆ ಹೇಗೆ ಬುಟ್ಟಿಯಲ್ಲಿರುವ ಹಣ್ಣುಗಳಲ್ಲಿ ಒಂದೆರಡು ಹಣ್ಣುಗಳು ಹಾಳಾಗಿದ್ದರೆ ಇಡಿ ಬುಟ್ಟಿಯ ಹಣ್ಣುಗಳೆಲ್ಲವು ಹಾಳೆಂದು ಪರಿಗಣಿಸುತ್ತೇವೆಯೋ ಹಾಗೆ ಇಲ್ಲಿ ಅಧಿಕ ಪ್ರಮಾಣದಲ್ಲಿರುವ ಆಳಸಿಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಂಡು ಆಧುನಿಕ ಉಪಕರಣಗಳಿಂದ ಮಾನವ ಕುಲ ಆಳಸಿಗಳಾಗುತ್ತಿವೆಯೆಂದು ಹೇಳಿದರೆ ಪ್ರಮಾದವಾಗಲಾರದು.

ಇಂತಹ ವಿಚಾರಗಳು ವಿಚಾರಿಯ ಮನದಾಳದಲ್ಲಿ ಭುಗಿಲೆದ್ದು ಸ್ಪೋಟಗೊಂಡು ಬರಹವಾಗಿ ಅಕ್ಷರಗಳ ರೂಪದಲ್ಲಿ ಹೊರಬಂದಿವೆ. ಈ ಯಾಂತ್ರಿಕರಣ, ಜೀವ ಜಂತುಗಳನ್ನು ಹೇಗೆ ತನ್ನ ತೆಕ್ಕೆಗೆ ತೆಗೆದುಕೊಂಡು ಮಾನವ ಲೋಕವನ್ನು ಆಳುತ್ತವೆ ಮತ್ತು ಇವೆಲ್ಲ ಮಾನವನ ವಿನಾಶಕ್ಕೆ ಹೇಗೆ ಕಾರಣವಗಬಹುದು ಎಂಬ ವಿಚಾರಗಳ ಮಂಥನ ಹೀಗಿವೆ.

ಮನುಷ್ಯನಾಗುವನು ಆಲಸ್ಯದ ಆಗರ:

ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ಮಾನವ ಆಲಸ್ಯದ ಬದುಕಿಗೆ ಬೇಕಾದಂತಹ ಎಲ್ಲಾ ಯಂತ್ರಗಳನ್ನು ಆವಿಷ್ಕರಿಸಿ ಮೆರೆಯುತ್ತಿದ್ದಾನೆ. ಆದರೆ ಇದು ಮುಂದೊಂದು ದಿನ ತನ್ನ ಅಳಿವಿಗೆ ನಾಂದಿಯಾಗಬಹುದು ಎಂಬ ಪರಿಕಲ್ಪನೆಯೂ ಸಹ ಪಾಪ ಹುಲು ಮಾನವನಿಗಿಲ್ಲ. ಯಾಕೆಂದರೆ ತನ್ನ ಅಪರಿಮಿತವಾದ ಆವಿಷ್ಕಾರ ಮತ್ತು ಬುದ್ಧಿವಂತಿಕೆಯಿಂದ ಕೃತಕ ಮಾನವನನ್ನು ಸೃಷ್ಟಿಸಿ ಅವುಗಳಿಗೆ ಬದುಕ ನಡೆಸಲು ಬೇಕಾದ ಮತ್ತು ಕ್ರಿಯೆ, ಪ್ರತಿಕ್ರಿಯೆಗಳನ್ನು ಹೇಗೆ ಮಾಡಬೇಕೆಂಬ ಅರಿವನ್ನು ಮೂಡಿಸಿರುವುದು ಕೃತಕ ಮಾನವನ ಯುಗ ಪ್ರಾರಂಭದ ಸಂಕೇತವಾಗಿದೆ.

ಅಷ್ಟೇ ಅಲ್ಲದೆ ನಮ್ಮ ಇಂದಿನ ಬದುಕಿಗೂ ಮತ್ತು ಕೇವಲ ೨೦-೨೫ ವರ್ಷಗಳ ಹಿಂದಿನ ಬದುಕಿಗೂ ಇರುವ ವ್ಯತ್ಯಾಸವನ್ನು ತುಲನೆ ಮಾಡಿ ನೋಡಿ. ಆಗ ನಿಮಗೆ ಅರ್ಥವಾಗುತ್ತದೆ ಈಗ ನಾವೆಷ್ಟು ಆಲಸಿಗಳಾಗಿದ್ದೇವೆ ಮತ್ತು ಅವಲಂಬಿತರಾಗಿದ್ದೇವೆ ಎಂಬುದು (ಕೆಲೆವೇ ಕೆಲವರನ್ನು ಹೊರತುಪಡಿಸಿ). ಮೊದಲ್ಲೆಲ್ಲ ೫-೧೦ ಕಿ.ಮಿ ನಡೆದು ಶಾಲೆಗೆ ಹೋಗುತ್ತಿದ್ದೆವು ಆದರೆ ಈಗ ಬರಿ ೧ ಕಿ.ಮಿ ಕ್ರಮಿಸಲು ಆಟೋ, ಬೈಕ್ ಅಥವಾ ಬೇರಿನ್ನಾವುದೇ ರೀತಿಯ ವಾಹನದ ಅಗತ್ಯತೆ ಉಂಟಾಗಿದೆ. ಕೈಯಲ್ಲೇ ಮೊಬೈಲ್ ಹಿಡಿದು ಜಗತ್ತಿನ ವರದಿಗಳನ್ನು ಪಡೆಯಬಹುದು, ಆನಂದಿಸಬಹುದು ಮತ್ತು ಹಣದ ವ್ಯವಹಾರ, ಬೇಕಾಗಿರುವುದನ್ನು ಕಾಯ್ದಿರಿದುವುದು ಮತ್ತು ಮನೆಗೆ ತರಿಸಿಕೊಳ್ಳುವುದು ಮತ್ತು ಹತ್ತು ಹಲವು ಕೆಲಸಗಳನ್ನು ಕುಳಿತಲ್ಲಿಯೇ ಮಾಡಬಹುದು. ಮರ ಹತ್ತಲು, ನಾಟಿ ಮಾಡಲು, ಕಟಾವಿಗೆ, ಭೂಮಿ ಅಗೆಯಲು ಹೀಗೆ ಪ್ರತಿಯೊಂದು ಕೆಲಸ ಮಾಡಲೂ ಸಹ ಯಂತ್ರಗಳ ಮೊರೆ ಹೋಗಿದ್ದೇವೆ. ಅಂದರೆ ಸಶಕ್ತನಾಗಿ ದುಡಿದು ತಿನ್ನುವ ಬದಲು ಯಂತ್ರಗಳ ಸಹಾಯದಿಂದ ಫಲ ಪಡೆದು ಅದರ ದಾಸರಾಗುತ್ತಿದ್ದೇವೆ. ಅತ್ಯಾಧುನಿಕ ಕೃಷಿ ಹಾಗು ಇನ್ನಿತರ ಉಪಕರಣಗಳು ಬಂಜರು ಭೂಮಿಯನ್ನು ಫಲವತ್ತಾಗಿಸುವುದು "ಪರಿವರ್ತನೆ ಜಗದ ನಿಯಮ" ಎಂಬ ಮಾತಿಗೆ ಪೂರಕವಾಗಿದೆ ಎಂದೆನಿಸುತ್ತಿದೆ.

ಅಷ್ಟೇ ಅಲ್ಲದೆ ಇದಕ್ಕೆ ಪೂರಕವೆನ್ನುವಂತೆ ಸರ್ಕಾರದಿಂದ ಹೊರಬರುತ್ತಿರುವ ಹಲವು ಯೋಜನೆಗಳು  ಮನುಷ್ಯನನ್ನು ಇನ್ನಷ್ಟು ಮತ್ತಷ್ಟು ಆಳಸಿಯನ್ನಾಗಿಸುತ್ತಿವೆ. ತಾನು ದುಡಿದು ತಿನ್ನಬೇಕು ಎನ್ನುವ ಇಚ್ಛಾಶಕ್ತಿ ಮತ್ತು ಅಂತಃಕರಣವನ್ನೇ ದುರ್ಬಲಗೊಳಿಸುತ್ತಿವೆ. ಮೊದಲು ಮಾನವರ ಬದುಕು 'ಆಳಾಗಿ ದುಡಿ ಅರಸನಾಗಿ ಉಣ್ಣು' ಎಂಬ ಗಾದೆ ಮಾತಿನಂತಿತ್ತು ಆದರೆ ಅದೀಗ 'ಸೋಮ್ವೇರಿಯಾಗಿ ಇರು ರೋಗಿಯಾಗಿ ಸಾಯಿ' ಎಂದು ಬದಲಾದಂತಿದೆ. ನಮ್ಮ ರೈತಾಬಿ ವರ್ಗದವರಿಗೆ ಸ್ವಾವಲಂಬಿಯಾಗಿ ಬದುಕಲು ಬೇಕಾದ ಸವಲತ್ತುಗಳನ್ನು ಒದಗಿಸದೇ ಅವರನ್ನು ಆಶಕ್ತರು, ಪರಾವಲಂಬಿಗಳು, ಆಲಸಿ, ದುಡಿದು ತಿನ್ನಬೇಕೆಂಬ ಧ್ಯೇಯವನ್ನೇ ಮರೆತವರಂತಾಗಿಸುವ ಮತ್ತು ಆತ್ಮಸಾಕ್ಷಿಯನ್ನೇ ಕೊಂದು ಬದುಕುವಂತಹ ಹಲವಾರು ಯೋಜನೆಗಳನ್ನು ತಂದು ಅವರನ್ನು ಮೂಗಿಗೆ ತುಪ್ಪ ಸವರಿ, ಹೂವಿನಿಂದ ಹಿಂಸಿಸದಿರಿ ಎಂದು ಘನ ಸರ್ಕಾರವನ್ನು ಆಗ್ರಹಿಸೋಣ, ಆಗಬಹುದೇ? ಹೀಗೆಲ್ಲವು ಬೆಳೆಯುತ್ತಾ ಮನುಷ್ಯನನ್ನು ಆಲಸಿಯನ್ನಾಗಿಸುತ್ತಿವೆ ಎಂಬುದು ವಿಷಾದನೀಯ.

ಮಾನವ ವಿನಾಶಕ್ಕೆ ನಾಂದಿ:

ಹೀಗೆ ಮುಂದುವರಿಯುತ್ತಾ ಒಮ್ಮೆ ಯೋಚಿಸಿ, ಈ ಕೃತಕ ಮಾನವರ ಸಂಖ್ಯೆ ಏರಿದಂತೆ ಹುಲು ಮಾನವನಿಗೆ ಉಳಿವುಂಟೇ? ಇದು ಹೇಗಾಗುತ್ತದೆಂದು ಆಲೋಚಿಸಿದಾಗ ನಾವು ನಂಬುವ ಮತ್ತು ಕೆಲವೊಂದು ಐತಿಹಾಸಿಕ ನಿದರ್ಶನಗಳಿಂದ ಸಾಬೀತಾಗಿಹುದು. ತೆಲೆತಲಾಂತರಗಳಿಂದ ನೆಲೆ ಕಂಡುಕೊಂಡಿದ್ದ ಕಾಶ್ಮೀರಿ ಪಂಡಿತರುಗಳು ಹೇಗೆ ರಾತ್ರಿ ಬೆಳಗಾಗುವುದರಲ್ಲಿ ಮನೆ ಮಠಗಳನ್ನು ಕಳೆದುಕೊಂಡು ನಿರಶ್ರಿತರಾದರೋ ಹಾಗೆ ನಾವೇ ಸೃಷ್ಟಿಸಿದ ಕೃತಕ ಮಾನವ ಮಾನವ ಕುಲವನ್ನೇ ನಾಶ ಮಾಡಲು ಅದೆಷ್ಟು ದಿನ ಬೇಕಾಗಬಹುದು?

ಅಲ್ಲದೆ ನಮ್ಮ ಪುರಾಣದ ಸತ್ಯ ಘಟನೆಗಳನ್ನು ನಿದರ್ಶನವನ್ನಾಗಿ ಪಡೆಯೋಣ. ಶ್ರೀ ವಿಷ್ಣುವಿನ ದಶಾವತಾರದ ನಿದರ್ಶನಗಳನ್ನು ಅವಲೋಕಿಸೋಣ. ಯಾಕೆಂದರೆ ಬೀಜ ಮೊಳಕೆಯಾಗಿ ಗಿಡವಾಗಿ ಮರವಾಗಿ ಫಲ ನೀಡುತ್ತವೆಯೋ ಇದು ಹಾಗೆ ಎಂದರೆ ತಪ್ಪಾಗಲಾರದು.

ನೋಡಿ, ದಶವತಾರದಲ್ಲಿ ಚಿಕ್ಕ ಅವತಾರದಿಂದ ದೊಡ್ಡದಾಗುತ್ತ ಹೇಗೆ ನರ ಮತ್ತು ಪ್ರಾಣಿಯ ಅವತಾರದ ಮೂಲಕ ಮಾನವನ ಅವತಾರವಾಗುತ್ತವೆಯೋ ಹಾಗೆ. ದಶವತಾರದ ಮೊದಲೆನೆಯ ಅವತಾರ ಮೀನಿನ ಅವತಾರ ಅಂದರೆ ಚಿಕ್ಕ ಪ್ರಾಣಿ. ನಂತರ ಆಮೆಯ ಅವತಾರ ಸ್ವಲ್ಪ ದೊಡ್ಡದು (ನೀರು ಮತ್ತು ಭೂಮಿಯ ಮೇಲೆ ವಾಸಿಸುವ ಪ್ರಾಣಿಯ ಅವತಾರ), ಆನಂತರ ಹಂದಿಯ ಅವತಾರ ಇನ್ನು ದೊಡ್ಡದು, ತದನಂತರ ನರಸಿಂಹನ ಅವತಾರ ನರ ಮತ್ತು ಪ್ರಾಣಿಯ ಬೆರಕೆ, ಆಮೇಲೆ ಚಿಕ್ಕ ಮೂರ್ತಿಯಾದ ವಾಮನ ಅವತಾರ ಅದೂ ಮತ್ತೆ ಪುನಃ ಚಿಕ್ಕದರಿಂದ ಪ್ರಾರಂಭ. ತದನಂತರ ಪೂರ್ಣ ಪ್ರಮಾಣದ ಮಾನವನ ಅವತಾರಗಳು ಆಗಿದ್ದು. ಇವು ಸಹ ಚಿಕ್ಕದರಿಂದ ದೊಡ್ಡದಾಗಬೇಕು ಎಂಬುದನ್ನು ಪ್ರತಿನಿಧಿಸುತ್ತಿವೆ.

ಮೇಲಿನ ನಿದರ್ಶನಗಳನ್ನು ಓದಿದಾಗ ನಿಮಗನಿಸಬಹುದು ಯಾಕೆ ಇವುಗಳ ಬಗ್ಗೆ ಮಾತಾಡುತ್ತಿದ್ದಾನೆ ಮತ್ತು ಪುರಾಣಕ್ಕು ಆಧುನಿಕತೆಗೇನು ಸಂಬಂಧ ಎಂಬುದು. ಯಾಕೆಂದರೆ ಇಲ್ಲಿ ಸಂಬಂಧಗಳಿವೆ. ಈಗ ಈ ಕೃತಕ ಮಾನವ ಹುಟ್ಟಾಗಿದೆ ಮತ್ತು ಅದರ ಅವಶ್ಯಕತೆ ನಿಯಮಿತವಾಗಿದೆ. ಆದರೆ ಈ ಕೃತಕ ಮಾನವನಿಗೆ ಹಲವು ತರಭೇತಿಗಳನ್ನು ನೀಡಿ ಮಾನವನ ಪರ್ಯಾಯ ಆಗಿರುವುದು ಕಣ್ಣೆದುರಿಗೆದೆ. ಇವುಗಳು ಹೀಗೆ ಮುಂದುವರಿದಾಗ ಕೃತಕ ಮಾನವ ಇನ್ನೊಂದು ಕೃತಕ ಮಾನವನನ್ನು ಸೃಷ್ಟಿಸಲು ಪ್ರಾರಂಭಿಸಿದಾಗ ಮಾನವ ಪ್ರಾಣಿಯ ಯುಗಾಂತ್ಯವಾಗಲು ಶುರುವಾಗಬಹುದು. ಅದಲ್ಲದೆ ಇವಕ್ಕೆ ಪೂರಕವೆಂಬಂತೆ ಮಾನವನು ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಯಲ್ಲಿ ತನ್ನಿಚ್ಛೆಯಂತೆ ಹಸ್ತಕ್ಷೇಪ ಮಾಡಿ ಮಗುವನ್ನು ಪಡೆಯುವ ಆವಿಷ್ಕಾರ ಮಾಡಿರುವುದು ಅಪಾಯಕಾರಿಯ ಲಕ್ಷಣ ಎನ್ನಬಹುದೇ?

ಧರ್ಮ ಜಾತಿ ಪಂಥಗಳ ಕಲಹ ಅಳಿಯುವುದು:

ಮಾನವ ಕುಲಗಳೆ ಇಲ್ಲದ ಮೇಲೆ ಧರ್ಮ ಜಾತಿ ಪಂಥಗಳ ಕಲಹ ಎಲ್ಲಿರುತ್ತವೆ ಅಲ್ವೇ? ಹೇಗೆಂದರೆ ಮತ್ತು ಯಾಕೆಂದರೆ ಎಂಬ ವಿಚಾರಗಳನ್ನು ಮಥಿಸಿದಾಗ ಮೂಡುವ ಕಲ್ಪನೆ ಹೀಗಾಗಿರುತ್ತವೆ. ಕೃತಕ ಮಾನವನ ಪಾರುಪತ್ಯ ಶುರುವಾದ ಮೇಲೆ ಧರ್ಮ ಜಾತಿ ಪಂಥಗಳ ಕಲಹದಿಂದ ಸದಾ ದ್ವೇಷ, ಅಸೂಯೆ, ಜಲಸೆಯಿಂದ ಕಾದಾಡುವ ವಿದ್ಯಮಾನಗಳು ಮರೆಯಾಗಬಹುದು.

ಅಲ್ಲದೆ ಕಲಿ ಯುಗಾಂತ್ಯದ ನಂತರ ಬರುವುದು ಸತ್ಯ ಯುಗವೆಂಬ ಮಾತಿದೆ. ಹಾಗಾಗಿ ಈ ಬೆಳವಣಿಗೆ ಆ ಯುಗಕ್ಕೆ ಪೂರಕವಾಗಿರಬಹುದೇ? ಯಾಕೆಂದರೆ ದುರ್ಬುದ್ಧಿಯನ್ನೂ ಹೊಂದಿರುವ ಮಾನವರ ಅವಸಾನದ ನಂತರ ಬಾವನೆಗಳಿಲ್ಲದೆ ಕೇವಲ ಗಣಕಯಂತ್ರದ ಪ್ರೋಗ್ರಾಮಿಂಗ್ ಮೇಲೆ ಮಾತ್ರ ಕ್ರಿಯೆ ಮಾಡುವ ಮತ್ತು ಪ್ರತಿಕ್ರಿಯಿಸುವ ಕೃತಕ ಮಾನವರು ಕೇವಲ ಮಾಡುವ ಮತ್ತು ಮಾಡಿದ ಸತ್ಯವನ್ನೆ ನುಡಿದು ಸತ್ಯ ಯುಗಕ್ಕೆ ತಕ್ಕಂತೆ ವರ್ತಿಸಬಹುದೆಂದು ಅರ್ಥೈಸಿಕೊಳ್ಳಬಹುದು. ಆಲ್ವೆ?

ಹೀಗಾಗಿ ಅಪರಿಮಿತವಾಗಿ ಬೆಳೆಯುತ್ತಿರುವ ಆಧುನಿಕರಣದ ಯಾಂತ್ರಿಕ ಬದುಕು ಈಗ ಹಿತವೆನಿಸಬಹುದು. ಆದರೆ ಮುಂದೊಂದು ದಿನ ಇದು ಮಾನವನ ಅವಸಾನಕ್ಕೆ ನಾಂದಿಯಾಗಿ ಹೊಸ ಯುಗದ ಪ್ರಾರಂಭಕ್ಕೆ ಮುನ್ನುಡಿಯಾದರೆ ಅಚ್ಚರಿಯಿಲ್ಲ ಎನ್ನುವುದು ವಿಚಾರವಾದವಾಗಿದೆ.

Thursday, January 9, 2020

ಸಾಂಗತ್ಯ ಸಾಹಿತ್ಯ

ಬಯಸಿರುವ ಭಾವದಲಿ
ಮೈತ್ರಿ ಜೀವದ ಬೆಸುಗೆಯಲಿ
ಮಿಂದವಳೆ ಶಾಯರಿ
ಮುದ ನೀಡುದ ಪದಗಳು

ಭರವಸೆಯ ಸಂಜೆಯಲಿ
ಮೂರ್ತ ನಾದದ ವೇಳೆಯಲಿ
ಕಂಡವಳೆ ಕಿನ್ನರಿ
ಜೊತೆಯಾಗಲು ಬಂದವಳು

ಒಂಟಿ ಬಾಳಿನ ಪಯಣ
ತಳವಿರದ ಹರಿವಂತೆ
ಜಂಟಿ ಗೋಳಿನ ಚಾರಣ
ಮಿತಿಯಿರದ ವ್ಯಯದಂತೆ
ಆದರೇನಂತೆ ಬದುಕಲಿರಬೇಕು
ಹಿತವೆನಿಸೊ ಸಾಂಗತ್ಯ

ತುಂಟಿ ಸೋಲಿನ ಚರಣ
ಮಾರ್ಜಾಲ ನಡೆದಂತೆ
ಗಂಟಿ ಕೂಗಿನ ಹೂರಣ
ಸೂಕ್ಷ್ಮತೆಯ ಹಿಡಿದಂತೆ
ಕೇಳಿರುವಂತೆ ಬರಬಹುದು
ಬದುಕಾಗೊ ಸಾಹಿತ್ಯ