Monday, September 30, 2013

|| ಸಾಗದಿರಲಿ ನಿತ್ಯ ||

ನಿನಗೊಂದು ಉಡುಗೊರೆ
ನನ್ನ ಹೃದಯದ ಕೋಣೆ
ಈ ಜೀವವ ಮರೆತರೆ
ಇರುವುದು ನಿನ್ನ ಆಣೆ ||

ನೀ ಎದ್ದು ಹೋಗದಿರು
ನನ್ನೊಳಗಿನ ಭಾವ ದೋಚಿ
ನೀ ಕದ್ದು ಅಡಗದಿರು
ಅರಸಲು ನಾನಲ್ಲ ಸವ್ಯಸಾಚಿ ||

ನಂಬಿಕೆಯು ಮಾಡಿಹುದು
ಮಾತಾಡದಂತೆ ಸ್ತಬ್ಧ
ಮೌನದಲಿ ಒಪ್ಪಿಹುದು
ತತ್ವಗಳಿಗೆಲ್ಲ ಬದ್ಧ ||

ಹೊಂದಾಣಿಕೆಯಲಿ ಹುದುಗಿಹುದು
ಬದುಕಿನ ಪಯಣವೆಂಬ ಸತ್ಯ
ಹುಡುಕಾಟದಲಿ ಸಾಮರಸ್ಯವು
ಬಾಳಿನಲೆಂದು ಸಾಗದಿರಲಿ ನಿತ್ಯ ||

Monday, September 23, 2013

...ಈ ಪಾಪಿ ಜನ್ಮ...

ಮಾನವನಾಗಿ ಹುಟ್ಟುವುದೇ ಒಂದು ಭಾಗ್ಯ ಎಂದು ನಂಬಿರುವ ಜನರು ಬದುಕಿನಲ್ಲಿ ಅಂಥಹ ಶ್ರೇಷ್ಥತೆಯನ್ನೇನು ಪಡೆದಿದ್ದಾರೆ ಎಂಬ ವಿಚಾರ ಕಾಡಲು ಹಲವಾರು ಸಂಗತಿಗಳು ಕಣ್ಣೆದುರಿಗೆ ಬಂದಾಗ ಇದು ಒಂದು ಜನ್ಮವೇ? ಎಂದು ಬೇಸರಿಸ ಬೇಕು. ಇಂದಿನ ದೇಹ ನಾಳೆ ಅಳಿವಾಗ ಅಳಲು ಉಳಿಸಲು ಸಾಧ್ಯವೇ ಎನ್ನುವುದನ್ನು ಯೋಚಿಸಿದಾಗ ಬಾಳೊಂದು ಬಾಳೆ ಎಂದು ಉದ್ಗರಿಸಲಿಕ್ಕಷ್ಟೆ ಸಾಧ್ಯ.

ಹುಟ್ಟಿದ ಜೀವ ಸಾಯಲೇ ಬೇಕು ಎಂದಾಗ ನಮ್ಮ ವಿಜ್ಞಾನ ಎಷ್ಟೇ ಮುಂದುವರೆದರು ಸಾವನ್ನು ಗೆಲ್ಲಲು ಆಗಲಿಲ್ಲವೆಂಬುದು ಸತ್ಯ. ಸಾಯಲೇ ಬೇಕು ಎಂದಾಗ ಹುಟ್ಟಿದ್ದು ಸಾಯಲೆನ್ನುವುದು ಸಾಬೀತಾಗುತ್ತದೆ. ವಿಜ್ಞಾನದಿಂದ ಸಾವಿನ ಹಿಂದಿನ ರಹಸ್ಯ ಬೇಧಿಸಿದಾಗ ಮಾನವ ಜನ್ಮ ಉಳಿದೆಲ್ಲ ಜೀವರಾಶಿಗಳಿಗಿಂತ ಶ್ರೇಷ್ಠವೆನ್ನುವುದನ್ನು ಒಪ್ಪಿಕೊಳ್ಳಬಹುದು ಆದರೆ ಅಲ್ಲಿತನಕ ನಮ್ಮನ್ನ ನಾವು ಹೊಗಳಿಕೊಳ್ಳುವುದನ್ನು ಕಡಿಮೆ ಮಾಡಿದರೆ ಚೆನ್ನ.

ಜೀವರಾಶಿಗಳ ಹಿಂದೆ ಒಂದು ಶಕ್ತಿ ಇದೆ ಎನ್ನುವುದಂತು ಸತ್ಯ. ಇಲ್ಲವಾದರೆ ಸಾವು ಎನ್ನುವುದಕ್ಕೆ ಹೆದರುವ ಅವಶ್ಯಕೆಯೇ ಇರುತ್ತಿರಲಿಲ್ಲ. ಜೀವಗಳ ಹಿಂದಿರುವುದು ದೇವನೋ?, ಶಕ್ತಿಯೋ? ಅಥವಾ ಒಂದು ಮೂಲಧಾತುವೋ? ಎನ್ನುವುದು ತಿಳಿಯದಿರುಂಥಹ ಸತ್ಯ. ನಮ್ಮ ಹಿಂದಿನ ಶಕ್ತಿಯನ್ನ ಬೇರೆ ಬೇರೆ ಧರ್ಮದಲ್ಲಿ, ಬೇರೆ ಬೇರೆ ಜಾತಿಯಲ್ಲಿ, ಬೇರೆ ಬೇರೆ ಪ್ರಭೇದದಲ್ಲಿ ಜೀವಿಗಳು ಅದನ್ನು ಗುರುತಿಸಿಕೊಂಡರೂ ಅದು ಎಲ್ಲ ಜೀವರಾಶಿಗಳಿಗು ಸರ್ವೆ ಸಾಮಾನ್ಯವಾದದ್ದು. ಶಕ್ತಿಗೆ ಯಾವುದೇ ಧರ್ಮವಿಲ್ಲ, ಜಾತಿಯಿಲ್ಲ, ಪ್ರಭೇದವಿಲ್ಲ. ಹೀಗಿರುವಾಗ ಶಕ್ತಿಗೋಂದು ರೂಪಕೊಟ್ಟು ಅದರ ಹೆಸರಿನಲ್ಲಿ ಹೋರಾಟ, ಹೊಡೆದಾಟ ಮಾಡುವುದೆಷ್ಟು ಸರಿ? ಎಂದು ಯೋಚಿಸಲು ಜನ್ಮ ಶ್ರೇಷ್ಠವೇ ಎನ್ನುವುದಕ್ಕೊಂದು ಉತ್ತರ ಸಿಗಬಹುದು.

ಅದೆ ಶಕ್ತಿಯನ್ನು ದೇವರೆಂದು ಬಿಂಬಿಸಿ ಆಸ್ತಿಕ ಮತ್ತು ನಾಸ್ತಿಕ ಎಂದು ಎರಡು ಗುಂಪುಗಳನ್ನ ಮಾಡಿ ಕಿತ್ತಾಡುತ್ತ ವಾದ ಮಂಡಿಸಿದರು ಕೊನೆಯಲ್ಲಿ ಉತ್ತರ ಸಿಗದೆ ಮೊಂಡುವಾದವಾಗುವುದಂತು ನಿಜ. ಅರ್ಥವಿಲ್ಲದ ವಾದಗಳಿಗೆ ವೇದಿಕೆ ಮಾಡಿಕೊಂಡು ದರ್ಪವನ್ನು ತೋರಿಸುವಲ್ಲಿ ಸಮಯ ವ್ಯಯಿಸುವುದೊಂದು ಶೇಷ್ಠಜನ್ಮವೆ?

ಕಾಣಿಸದ ಕೈ ಅದು ತಾಳವ ಹಾಕುತ ಕುಣಿಸುವುದು
ಕಾಣುವ ಕಾಲಿದು ಹೆಜ್ಜೆಯ ಹಾಕುತ ಕುಣಿಯುವುದು

ಸಾಲುಗಳೊಂದೇ ಸಾಲದೇ ಜೀವರಾಶಿಗಳ ಹಿಂದೊಂದು ಶಕ್ತಿಯಿದೆ ಎನ್ನುವುದಕ್ಕೆ ಪುಷ್ಟಿ ನೀಡಲು? ಶ್ರೇಷ್ಠಜನ್ಮದ ಜೀವಿಗಳು ಅಂದುಕೊಳ್ಳುವುದೊಂದಾದರೆ ಆಗುವುದು ಇನ್ನೊಂದು. ಇಂದಿನ ಧನಿಕ ನಾಳೆ ಬಿಕ್ಷುಕ, ಇಂದಿನ ಬಿಕ್ಷುಕ ನಾಳೆ ಧನಿಕ, ಇಂದಿನ ಪಾಪಿ ನಾಳಿನ ಪುಡಾರಿ, ಇಂದಿನ ಪುಡಾರಿ ನಾಳೆ ಪಾದಾಚಾರಿ ಹೀಗೆ ರಿಳಿತಗಳಿಂದ ಕೂಡಿದ ಮಾನವ ಜನ್ಮ ಕಡೆಗೆ ಕೈಮುಗಿದು ನುಡಿವುದು ಕಾಲಾಯ ತಸ್ಮೈ ನಮಃ ಎಂದು. ಮಾತನಾಡುವ, ನಗೆಯಾಡುವ, ಭಾವನೆಗೆ ಸ್ಪಂದಿಸುವ, ನೋವುಗಳ ಹಂಚಿಕೊಳ್ಳುವ ಮಾನವ ಜನ್ಮ ಪವಿತ್ರವಾದ ಶ್ರೇಷ್ಠಜನ್ಮ ಎಂದು ನಾವಂದುಕೊಂಡರೆ ಬೇರೆ ಜೀವಿಗಳಿಗೆ ಬೇರಾವುದೇ ಮಾಧ್ಯವವಿಲ್ಲವೆ ಎಂದು ಯೋಚಿಸದೆ ನಾವೇ ಶ್ರೇಷ್ಠರು ಅಂತಂದುಕೊಂಡರೆ ಅದರಷ್ಟು ದೊಡ್ಡ ಮೂರ್ಖತನ ಬೇರೊಂದಿಲ್ಲ ಏಕೆಂದರೆ ಬೇರೆ ಜೀವಿಗಳು ಅವರವರದೇ ಆದ ಭಾವ ಅಭಿವ್ಯಕ್ತ ಮಾದ್ಯಮವನ್ನು ಹೊಂದಿದೆ. ಅವುಗಳು ತನ್ನ ಒಡನಾಡಿಗೆ ನೋವಾದಗ, ತೊಂದರೆಯಾದಾಗ ಸ್ಪಂಧಿಸುವ ರೀತಿಯನು ನೋಡಿದರೆ ಶ್ರೇಷ್ಠ ಜೀವಿಗಳೆಂದು ಬಡಾಯಿ ಕೊಚ್ಚಿಕೊಳ್ಳುವ ಮಾನವರು ನಾಚುವಂಥಿರುತ್ತದೆ. ಅವರಿಗೆ ಅವರದೆ ಆದ ಬೇರೆ ಮಾಧ್ಯಮವಿದ್ದು ಅದರಿಂದ ಮಾಹಿತಿಯನ್ನು ಹಂಚಿಕೊಂಡು ಒಗ್ಗಟ್ಟನ್ನು ಪ್ರದರ್ಶಿಸುವುದನ್ನು ನೋಡಿದಾಗ ನಮ್ಮದು ನಿಜವಾಗಿಯು ಶ್ರೇಷ್ಠಜನ್ಮವೇ ಎಂದು ಪ್ರಶ್ನೆ ಮಾಡಿಕೊಳ್ಳುವಂಥಿರುತ್ತದೆ. ಅವರು ಉಪಯೊಗಿಸಿವ ಮಾಹಿತಿ ವಿನಿಮಯ ಮಾಧ್ಯಮದ ಅರಿವು ಮಾನವನಿಗಿಲ್ಲ ಹೀಗಾಗಿ ಮಾತನಾಡುವ ನಾವೆ ಶ್ರೇಷ್ಠ ಎನ್ನುವ ಅಹಂಕಾರದಿಂದ ತಿಳಿದು ಬರುತ್ತದೆ ಮಾನವ ಜನ್ಮವೆಷ್ಟು ಉತ್ತಮವೆನ್ನುವುದು.

ಇದೊಂದು ಸ್ಪಷ್ಟಚಿತ್ರಣ ನೋಡಿದಾಗ ಜನ್ಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಹಾಯಕವಾಗಬಲ್ಲದು. ಮಾನವನು ಡೆಯುವ ಹಾದಿಯಲ್ಲಿ ಹಸಿರಿನ ಹುಲ್ಲು ಸಹ ಬೆಳೆಯದು. ಅದೇ ಇತರ ಪ್ರಾಣಿಗಳು ಅಡ್ಡಾಡುವ ಜಾಗದಲ್ಲಿ ಬರಡಾದ ನೆಲ ಕಾಣದು. ಅದು ಮಾಂಸಹಾರಿಯಾಗಲಿ, ಶಾಖಹಾರಿಯಾಗಲಿ ನೆಲ ಬರಡಾಗದು ಆದರೆ ಅದೆ ಜಾಗದಲ್ಲಿ ಶ್ರೇಷ್ಠ ಜೀವಿಯೆಂದು ಬಣ್ಣಿಸಿಕೊಂಡ ಮಾನವ ಕಾಲಿಟ್ಟರೆ ಬೆಳೆದಿದ್ದ ಹಸಿರು ಹುಲ್ಲು ಸಹ ನಶಿಸುವುದು. ಮಾನವ ಗಗನಕ್ಕೆ ಹಾರಬಹುದು, ಭೂಮಿಯನ್ನು ಹೊಸದಾಗಿ ಸೃಷ್ಟಿಸುವತ್ತ ದಾಪುಗಾಲಿಡಬಹುದು, ಬೇರೆ ಗ್ರಹಗಳಲ್ಲಿ ಸಂಶೋಧನೆ ನೆಡೆಸಿ ನಾನೆ ಬುದ್ದಿವಂಥ ಅಂತ ಹೇಳಿಕೊಂಡರು ಇವ ನಡೆಯುವ ದಾರಿಯಲ್ಲಿ ಹಸಿರನ್ನು ಬೆಳೆಸಲಾಗಲಿಲ್ಲ. ಬರಡು ಭೂಮಿಯಲಿ ಹಸಿರನ್ನು ಬೆಳೆಸಿದರೂ ಇವ ಕಾಲಿಟ್ಟರೆ ಬೆಳೆದ ಹಸಿರು ಸಹ ನಶಿಸುವುದು. ಶ್ರೇಷ್ಠ ಜೀವಿ ಎಂದಾಗಿದ್ದರೆ ಇವ ಕಾಲಿಟ್ಟಲ್ಲಿ ಮೊಳಕೆಯೊಡೆದು ಫಲ ಬರಬೇಕಿತ್ತು ಆದರೆ ಅದರ ಬದಲಾಗಿ ಇರುವ ಹಸಿರು ಹಾಸಿಗೆಯು ಹಾಳಾಗುವುದು.

ಪ್ರಾಣಿಗಳು ನಡೆದಾಗ ಬೆಳೆದಿರುವ ಹಸಿರು ಮಾನವ ನದೆದಾಗ ಮಾಯವಾಗುವುದು. ಶ್ರೇಷ್ಠತೆಯ ಹಿಂದೆ ಬದುಕುವ ಮಾನವ ಈ ನಿಸರ್ಗದ ದೃಷ್ಠಿಯಲಿ ಎಷ್ಟು ಕೀಳೆನ್ನುವುದಕ್ಕೆ ಈ ನಿದರ್ಶನವೊಂದು ಸಾಕಲ್ಲವೆ?

ಚಟಕ್ಕೆ ಮಕ್ಕಳನ್ನ ಹುಟ್ಟಿಸಿ ಹಠಕ್ಕೆ ಮದುವೆಯನ್ನು ಮಾಡಿಸಿ ಗಳಿಸಿದ್ದನ್ನೆಲವ ಬಿಟ್ಟು ಬೂದಿಯಾಗುತ್ತಾನೆ ಆದರು ತಾನೆ ಶ್ರೇಷ್ಠ ಎಂದು ಕೊಚ್ಚಿಕೊಳ್ಳುತ್ತ ಅಹಂಕಾರದಿ ಮೆರೆಯುವ ಸ್ವಾರ್ಥ ಜೀವ ನಿಜವಾಗಿಯು ಪವಿತ್ರವಾದುದೆ? ಹುಟ್ಟಿರುವುದೇಕೆ ಎನ್ನುವುದು ತಿಳಿಯದಿದ್ದರು ಹಠದಲ್ಲಿ ಪ್ರತಿಷ್ಠೆಯನ್ನು ತೋರುವುದು ನಂತರ ಸಾಯುವುದು ಖಚಿತವೆಂಬುದು ಗೊತ್ತಿದ್ದರು ಅಟ್ಟಹಾಸದಿ ಮೆರೆವುದು ಉಚಿತವಾಗದು. ನೆನೆದದ್ದು ನೆರವೇರದು, ಇಷ್ಟಟ್ಟಿರುವುದು ದೊರಕದು, ಬಯಸಿದ್ದು ಬಾರದು, ಅಂದುಕೊಂಡಂತೆ ಬದುಕಲಾಗದಾಗದು. ಶ್ರೇಷ್ಠ ಜನ್ಮವಾಗಲಿ, ಪಾಪಿ ಜನ್ಮವಾಗಲಿ ಕಾಲದ ಕೈಗೊಂಬೆಯಾಗಿದ್ದು ಕಾಲಾಯ ತಸ್ಮೈ ನಮಃ ಎನ್ನುತ್ತ ಕಾಣದ ಶಕ್ತಿಗೆ ಕೈ ಮುಗಿದು ಬದುಕುವುದಂತು ಖಚಿತ.


ಅಳಿವು ಉಳಿವಿನ ಬೀಗವನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿರುವ ನಿಸರ್ಗದ ಮುಂದೆ ಯಾರೆ ಆದರು ತಲೆ ಬಾಗಲೆ ಬೇಕು. ರಹಸ್ಯವನ್ನು ಬೇಧಿಸಲು ಎಷ್ಟೆ ಹೆಣಗಾಡಿದರೂ ತಿಳಿಯಲಾಗಲಿಲ್ಲವೆಂದಾಗ ನಮ್ಮ ನಿಸರ್ಗಕ್ಕೆ ಪಾಪಿಜನ್ಮವಾಗಲಿ, ಶ್ರೇಷ್ಠಜನ್ಮವಾಗಲಿ ಎಲ್ಲವು ಒಂದೆ ಎನ್ನುವುದು ತಿಳಿದುಬರುತ್ತದೆ. ಹೀಗಿರುವಾಗ ಶ್ರೇಷ್ಠಜನ್ಮವೊಂದು ಬಡಾಯಿ ಕೊಚ್ಚಿಕೊಳ್ಳುವ ಮಾನವರಿದು ಸಹ  ಪಾಪಿಜನ್ಮವೆ ತಾನೆ.

Friday, September 20, 2013

|| ಫಸಲು ಬಿಡಲು ||

ಮುಂಗಾರು ಹನಿಯಂತೆ
ಧುಮುಕಿದೆ ನನ ಹೃದಯಕೆ
ಚಿಗುರಿದ ಬೀಜದಂತೆ
ಎದೆಯಲಿ ನೀ ಬೆಳೆದೆ ||

ನಿನ ಮೇಲಿನ ಮೋಹ
ಹಿಡಿದ ಬೇರಿನ ದಾಹ
ನೀ ಬಂದು ಇಂಗಿಸುತ
ಅಳಿಸು ಏಕಾಂಗಿ ಸಲ್ಲಾಪವ ||

ಮಣ್ಣಿನಲಿ ಬೆಳೆದಂತೆ
ಹುಸಿಮುನಿಸಿನ ವಿರಸ
ಗೊಬ್ಬರವ ಹಾಕಿದಂತೆ
ನಿನ್ನೊಂದಿಗಿನ ಸರಸ ||

ಸೊಂಪಾದ ಮಾತುಗಳು
ಸಂಗ್ದಿದ್ಧ ಪರಿಸ್ಥಿತಿಯಲು
ಚಪ್ಪರದಂತೆ ಆಸರೆಯು
ಖಿನ್ನತೆಯಲಿ ಕುಗ್ಗಿರಲು ||

ನೀರು ಗೊಬ್ಬರ ಬಿದ್ದಿರಲು
ಪುಟಿದೆದ್ದು ಬೆಳೆದಿರುವ ಸಸಿಯು
ಫಸಲು ಬಿಡುವ ಸಮಯವೆ
ಜೀವಗಳು ವರಿಸುವ ಕ್ಷಣವು ||