Monday, February 25, 2019

ಒಲವಿನ ಧ್ಯಾನ

ಇನ್ನಾರಿಗೆ ಮಾತಾಡಲಿ
ನನ್ನವಳ ಹೊರತು
ಹೃದಯದಲಿ ಬರೆದಿರುವ
ಚಿತ್ರಗಳ ಕುರಿತು

ಹರುಷದಲಿ ಕಳೆದಿರುವ
ಘಳಿಗೆಗಳ ಅರಿತು
ವಿರಸದಲಿ ಕೂಡಿರುವ
ನೆನಪುಗಳ ಮರೆತು

ಹೋಗಿರುವೆ ಹರಣದಲಿ
ಕಾಲನೀತಿಯ ಹಂಗಿನಲಿ
ಸೊರಗಿರುವೆ ಗೋಳಿನಲಿ
ಏಕಾಂತದ ಹಸಿವಿನಲಿ

ಬರುವಿಕೆಯ ಕಾಯುತಲಿ
ಕುತ್ತಿಗೆಯು ಬಲಿಯಾಗಲಿ
ಸ್ಪಂದನೆಯು ನೊವಿನಲಿ
ನಿನ್ನೊಲವಿನ ಧ್ಯಾನದಲಿ

Friday, February 15, 2019

ಅಣ್ತಮ್ಮರ ಬಲಿದಾನ

ಹೆತ್ಹೊತ್ತ ತಾಯಿಯ ಕಣ್ಣೀರ ಒರೆಸಲು
ಮುತ್ತಿಟ್ಟ ಮುದ್ದಿನ ಮಡದಿಯ ಸಲಹಲು
ನೀವಿಟ್ಟಿರಿ ಹೆಜ್ಜೆಯ ದೇಶವ ಕಾಯಲು
ವಿಪತ್ತಿನ ನಿರೀಕ್ಷೆಯನು ಹುಸಿ ಮಾಡಲು

ರಣ ಹೇಡಿ ನರಿಗಳ ಕುತಂತ್ರದಿಂದ
ಎಗರಿ ಬರುತಿರುವ ವಿಷಕಾರಿ ಗುಂಡುಗಳಿಂದ
ದೇಶವನು ರಕ್ಷಿಸಲು ಪಾಪಿ ತಾಣದವರಿಂದ
ಬಲಿದಾನ ಮಾಡಿದಿರಿ ಪ್ರಾಣವನು ಧರೆಯಿಂದ

ಚಿರಕಾಲ ಉಳಿಯಲಿ ನಿಮ್ಮ ನೆನಪು
ಚಿರವಾಗಿ ಸ್ಪುರಿಸಲಿ ತಮ್ಮ ಹುರುಪು
ಪ್ರೇರಣೆಯ ಮರವಾಗಿ ಹೂ ಬಿಡುತಿರಿ
ಚಿರಶಾಂತಿ ಪಡೆದು ಹರಸುತ ಬದುಕಿರಿ

ನಿಮಗಾಗಿ ಏನೂ ಮಾಡಲಾಗಲಿಲ್ಲವೆಂಬ ಕೊರಗು
ನಿಮ್ಮಿಂದ ಬದುಕುಳಿದಿದ್ದೇವೆ ಎಂದರಿಯದೆ
ಪಾತಕಿಗಳಿಗೆ ಹಾರೈಸುವವರ ಮೆರಗು
ನೋಡಿ ಕುದಿಯುತಿದೆ ರಕ್ತ ಅಸಹಾಯಕತೆಯಿಂದ

ದುಷ್ಟ ರಾಜಕೀಯದ ನೆರಳಲಿ ಬೊಗಳುವವರು
ಮಿತಿಗೇಡಿಗಳಾದ ಬುದ್ಧಿವಂತ ಮನುಜರು
ಬಲಿದಾನಕೆ ನ್ಯಾಯವನು ನೀಡರ್ಯಾರು
ವೈರಿಗಳ ಸಂಹರಿಸಲು ಮತ್ತೆ ಹುಟ್ಟಿ ಬರಬೇಕು ನಿಮ್ಮಂತವರು

Monday, February 4, 2019

ಚಿರವಾದ ಗೆಲುವು

ಈ ಹೆಸರಿನಲ್ಲೇನಿದೆ
ಉಸಿರು ನಿಂತ ಮೇಲೆ
ಜನರು ನೀಡುತಾರೆ
ಹೆಣವು ಎಂಬ ಪಟ್ಟಿ
ಲೋಕ ಮರೆಯುತಾವೆ
ನೀನಿದ್ದೆನೆಂದು ಗಟ್ಟಿ

ಎಷ್ಟೇ ದುಡ್ಡು ಕೂಡಿ
ಬದುಕ ನಡೆಸಿದರುನೂ
ಎಷ್ಟೇ ಆಸ್ತಿ ಗಳಿಸಿ
ಜಗದಿ ಮೆರೆದರುನೂ
ಸತ್ತ ಮೇಲೆ ನಿನಗೆ
ಸಿಗುವುದೊಂದೆ ಪಟ್ಟ
ಕೊನೆಗೆ ದೊರೆವುದೊಂದೆ
ಹೆಣವು ಏರುವ ಚಟ್ಟ

ಒಲವು ಪ್ರೀತಿ ಹಂಚಿ
ಜನರ ಗಳಿಸಬೇಕು
ಒಳಿತು ಮಾಡಿ ಜಗಕೆ
ಜನ್ಮ ಸವೆಸು ನೀ ಸಾಕು
ನಿನ್ನ ಹರಣಕೊಂದು
ಅರ್ಥ ಬರುವುದಾಗ
ನಾಲ್ಕು ಮಂದಿ ಬಂದು
ಒಂದ್ಹನಿ ಸುರಿಸಿದಾಗ

ಬೋಳು ಮರಕೆಯೆಂದು
ಬೊಗಸೆ ನೀರ ಉಣಿಸು
ಹಸಿದ ಜೀವಕೆಂದು
ತುತ್ತು ಅನ್ನ ನೀಡು
ದೇಹಿಯೆಂಬ ದೇಹಕೆಂದು
ಆಶ್ರಯ ದಾನ ಮಾಡು
ನೆನಪಾಗಿ ಉಳಿವೆಯಾಗ
ನೇಪತ್ಯ ಸೇರಿದಾಗ

ಕೊಳೆಯಾದರೆ ಅತ್ತ ಇತ್ತ
ಸ್ವಚ್ಛಗೊಳಿಸು ನಿನ್ನ ಸುತ್ತ
ಸೆಳೆದು ಜನರ ಕಣ್ಣ
ಬಳಿದು ಸ್ನೇಹ ಬಣ್ಣ
ಹಾಕಲು ಹೆಜ್ಜೆಯನ್ನ
ತೊರೆಯುವೆ ಲಜ್ಜೆಯನ್ನ
ಪಡೆಯಲು ವಿಶ್ವಾಸವನ್ನ
ಚಿರವಾಗಿ ಗಲ್ಲುವೆ ಸಾವನ್ನ