Saturday, March 29, 2014

|| ಹಣ್ಣಿನಂತ ಹೆಣ್ಣು ||

ಹಣ್ಣಿನಂಥ ಗಿಣಿಯು ನಾನು
ತಿನ್ನಬರುವ ಗಿಡುಗರೇನು?
ಗದ್ದೆಯಂತೆ ನನ್ನ ಮೈಯಿ
ನಾಟಿ ಮಾಡೋ ಹೈದ ಯಾರು?
ಜನ್ಮ ಕಾದರು ನಾಯಿ ಹಂಗೆ
ಹೆಣ್ಣು ಸಿಗದು ನನ್ನ ಹಂಗೆ...||

ಫಸಲು ಕೊಡುವ ಭೂಮಿ ನಾನು
ಬನ್ರಿ ಇಲ್ಲಿ ಬಿಜ ಬಿತ್ತೊ ಆಳು ನೀವು
ಮೊಳಕೆ ಬರಲು ಹೆದರಿ ತಾವು
ಹೆದರಿ ಓಡದಿರಿ ಹಂಗಾಮಿ ಹೆಣ್ಣು ಎಂದು
ಸುಖವು ಮಾತ್ರ ಸ್ವಂತದಪ್ಪ
ಹತ್ರ ಬಂದ್ರೆ ಎನು ತಪ್ಪ?...||

ಮನೆಯ ಆಳುವ ಒಡೆಯರೇನು?
ಇಲ್ಲಾ ಹೆಂಡ್ತಿಗೆ ಹೆದರೊ ಗಂಡರೇನು?
ಏನೆ ಅಗ್ಲಿ ಬಾಗ್ಲು ಮುಚ್ಚಿ ಕತ್ಲೆಯಲಿ ಕೆನ್ನೆ ಕಚ್ಚಿ
ಮನೆಯ ವಿರಸವ ಮರೆತು ಬಿಡ್ರಿ
ನನ್ನ ಸರಸಕೆ ಸೋತು ಹೋಗ್ರಿ
ಸಮಯವೀಗ ಮುಗಿದು ಹೋಯ್ತು
ಕಳಚಿ ಕೊಳ್ರಿ ಆಟ ಮುಗಿತು...||

Monday, March 24, 2014

|| ನಿಸರ್ಗಕೆ ನಮಿಸು ||

ಕಂಗಳ ಹಾಡಿಗೆ
ಎದೆಯಲಿ ಕಲರವ
ಹೃದಯದ ಕಡಲಿದು
ಕಲಕಿದೆ ಕಲ್ಪನೆಯಲಿ
ಅಲೆಗಳು ಏಳುತ
ಕಾಡಿದೆ ಚಿತ್ತವನು ||

ತಂಪಿನ ಭಾವವು
ತಣ್ಣಗೆ ಸೋಕಲು
ಹುರುಪಿನ ಹೀಗ್ಗುಗಳು
ಮುದ್ದಿನ ಮನಸಲಿ
ಮೂಡಿದ ಚಿತ್ರವ
ಕರೆದೊಯ್ದಿದೆ ಅಂಗಳಕೆ ||

ಪ್ರಕೃತಿಯ ಸೊಬಗನು
ಮೆಲ್ಲಗೆ ಮೆಲಕುತ
ಮೆರೆಯಲು ತುಂಬಿದೆ
ದೇಹಕೆ ಸ್ಥೈರ್ಯವ
ನಿಸರ್ಗವು ನವಿರಾಗಿದೆ

ನೋಡುತ ನಮಿಸುವ ||

Friday, March 21, 2014

|| ಪುಕ್ಸಟೆ ನಿಯತ್ತು ||

ಪುಕ್ಸಟೆ ತರೋದಿಲ್ಲ ನನ್ನಾಣೆ
ತಲೆ ಕೆಟ್ಟಿ ಅಗೋಯ್ತು ಹನ್ನೆರ್ಡಾಣೆ
ಚೌಕಾಸಿ ಮಾಡಿರುವೆ ಎಂಟಾಣೆ
ಬಿಡಿಗಾಸು ಕೊಟ್ಟಿರುವೆ ನಾಲ್ಕಾಣೆ
ನಂಬು ನನ್ನನ್ನ ನಿಜ ನಿನ್ನಾಣೆ ||

ಕಂಜುಸು ನಾನೇನೆ ಹಣಕಾಗಿ
ನೀತಿ ಬಿಡಲೊಲ್ಲೆ ಜಿಪುಣತನಕಾಗಿ
ಬಿಟ್ಟಿ ಮಾಡೊಲ್ಲ ಊಟಕಾಗಿ
ಉಚಿತವಾಗಿ ಪಡೆಯೊಲ್ಲ ಆತ್ಮಾಭಿಮಾನಕಾಗಿ
ಸಣ್ಣತನ ಮಾಡೋದಿಲ್ಲ ಸ್ವಾಭಿಮಾನಕಾಗಿ ||

ಬೇರೆಯವರೆದುರು ಬಾಗೋದಿಲ್ಲ
ನಂಬಿದವರ ಮಾನ ಕಳೆಯೋದಿಲ್ಲ
ಉಸಿರಾಟಕೆ ಸುಂಕ ನೀಡೋದಿಲ್ಲ
ನಂಬಿಕೆ ಬಿಟ್ಟು ಬಾಳೋದಿಲ್ಲ
ನಿನಗಾಗಿ ನಿಯತ್ತು ಬಿಡೋದಿಲ್ಲ ||

Thursday, March 20, 2014

ಹೊಣೆಗಾರ್ತಿ ನಾನಲ್ಲ

ಗುಂಗುರು ಗುಂಗುರು
ಗುಂ ಗುಂ ಗುಂಗುರು
ಗುಂಗುರು ಕೂದಲು
ನೋಡೋಕೆ ಚಂದಾನೆ
ಹುಡುಗಿ ಎನ್ ಚಂದಾನೆ
ಗುಂಗುರು ಕೂದಲು ಸುತ್ತಿ ಆಡೊ
ಭಾಗ್ಯವು ಸಿಗಲಿ ನಂಗೇನೆ

ಎತ್ತೋ ಎಳನೀರು ಕುಡಿಯೊದಿಲ್ಲ
ಬಿತ್ತೊ ಬೀಜಕ್ಕೆ ಮೊಳಕೆಯಿಲ್ಲ
ಹರಿವ ಹೊಳೆಯಲ್ಲಿ ನೀರೇ ಇಲ್ಲ
ಆಡಬಹುದು ಬೇಲೆಯಲ್ಲಿ
ದಾಂಡ್ಚಂಡು ಆಟಾನ

ಜಂಬೆ ಹಣ್ಣಿನಂತ ಹೆಣ್ಣು ನಾನು
ನೆಲ್ಲಿಯಂತೆ ರುಚಿಯು ದೋಸ್ತಿ
ಹುಳಿಯ ಹಿಂಡೋದಿಲ್ಲ
ಹಾಲಿನಂತ ಸಂಸಾರದಲ್ಲಿ
ನಿಮ್ಮ ಸುಖಿಸೊ ಮೋಹದ ತಪ್ಪಿಗೆ
ಹೊಣೆಗಾರ್ತಿ ನಾನೆನಲ್ಲ

Sunday, March 16, 2014

|| ನೀರು ಸವೆದಂತೆ ||

ನೀ ಕೊಡುವ ಪ್ರೀತಿಯನು ಮರೆಯಲಾರೆ, ನಿನ್ನ ಬಾಂಧವ್ಯವನು ತೊರೆಯಲಾರೆ, ನಿನ್ನಿಷ್ಟಕ್ಕೆ ತಡೆಯಾಗಲಾರೆ, ನಿನ್ನ ಖುಷಿಯೊಂದೆ ನನ್ನ ಗುರಿ ಎಂಬ ನಿನ್ನ ಮಾತಿಗೆ ಸೋಲದ ಗಂಡ ದಂಡ್ಪಿಂಡ ನಾನಾಗಲಾರೆ. ನೀ ಹಠ ಮಾಡಿದರೂ, ನಾ ಕೊಯ್ದರೂ, ನೀ ಹೇಗಿದ್ದರೂ ನೀ ನನಗೆ ಚಂದ.

ನನ ಪ್ರೀತಿ ಗಳಿಕೆ
ನಿನ ಏಕಾಂತ ಸೋರಿಕೆ
ಗೆಲುವಿನ ಹುಮ್ಮಸ್ಸು
ನಿನ ಒಲವಿನ ವರ್ಚಸ್ಸು
ನೀ ನೆಚ್ಚಿದ ಜೀವಕೆ ||

ನನ ಪ್ರೀತಿ ಸವೆಯುವ ನೀರಂತೆ
ಹನಿಯಾದರು ಹರಿಯುವುದು
ಬಿಸಿ ಶಾಖಕೆ ಒಣಗುವುದು
ಮಂಗಳನ ಬಿಂದುವಾಗದಿರಲಿ
ನಿನ ಪ್ರೀತಿ ಸಾವಿಲ್ಲದ ಸೃಷ್ಠಿಯಂತೆ ||

ಕಲ್ಬಜ್ಜು ತೋಕುವ ಹಠ
ಕೊಯ್ದರು ಕೇಳುವ ಪಾಠ
ನಾನೆಲ್ಲಿ ಕಳೆದೋಗುವೆ
ನಿನ್ನಂದ ನೋಡುತಲಿ
ತಿಪ್ಪರ್ಲಾಗ ಹಾಕಿದರೂ ಬಿಡೆನು ನಿನ್ನನು ||

Friday, March 14, 2014

ಕನ್ನಡದ ಸಾಕು ಬೇಕು

ಕನ್ನಡಿಗರ ಉಳಿವಿಗೆ ಹೋರಾಟಗಳು ಬೇಡ ವಿಶಾಲ ಹೃದಯವೆ ಸಾಕು,
ಆದರೆ ಕನ್ನಡದ ಉಳಿವಿಗೆ ಸ್ವಾಭಿಮಾನದ ಜಾಗೃತಿಯು ಬೇಕು.

Thursday, March 13, 2014

|| ನನದೇನಿದೆ? ||

ದಿಕ್ಕು ಅರಿಯದ ಜಾಗದಲಿ
ಪಯಣಕ್ಕೊಂದು ಹೆಸರು ಜೀವನ
ತಂದಿರುವುದಾದರು ಏನು?
ಒಯ್ಯುವುದಾದರು ಏನು?
ಅರಿಷಡ್ವರ್ಗಗಳ ಅಟ್ಟಹಾಸದಲಿ
ಕುಣಿಯುವ ಕರ್ಮಿ ದೇಹ ||

ಗಳಿಕೆಯನು ಕೂಡಿ ಮೆರೆವೆ
ನಗ ನಾಣ್ಯ ಗಳಿಸಿಕೊಳ್ಳುವೆ
ಆಡಂಬರಕೆ ಬಂಗಾರ ಘನತೆ
ಸತ್ತಾಗ ಬಟ್ಟೆಯು ಇರದು
ಕಾಂಗಿ ಶವದ ಜೊತೆ
ಚಿನ್ನವೆಲ್ಲಿಯ ಚೈತನ್ಯ ಬದುಕಲು? ||

ಕೆಳಗಿದ್ದಾಗ ಮೇಲತ್ತಿಸುವುದು ಏಣಿ
ಏರಿದಾಗ ಒದೆಸಿಕೊಳ್ಳುವುದು ಏಣಿ
ಬರೆದ ಬ್ರಹ್ಮನಿಗೆ ಹಣೆಬರಹ ತಿದ್ದಲಾಗದು
ಕಷ್ಟಕೆ ಕೈಮುಗಿದರೆ ದೇವನೇನು ಮಾಡುವನು?
ಸ್ವಯಂಚಾಲಿತವಲ್ಲ ಮಾನವ ಸೃಷ್ಠಿ ಇಂಧನವಿರದೆ
ಕೊನೆಯಾಗುವುದೊಂದೆ ವಿಧಿಯೆಂಬ ಕಾಲದ ನಿರ್ಣಯ ||

ಬರುವಾಗಲೂ ಹೋಗುವಾಗಲೂ ಬೆತ್ತಲೆ
ಪಯಣದಲಿ ಕಂಡಾಗ ಆರಿಸು ಕತ್ತಲೆ
ನನದೆಂದು ಹೇಳಿಕೊಳ್ಳುವ ದೇಹ
ನರಮಾಂಸರಕ್ತದಲಿ  ತುಂಬಿದ ಗಡಿಗೆ
ಪ್ರಾಣಹೋದಾಗ ಜೊತೆ ಬಾರದ ದೇಹವು
ಆತ್ಮ ಮಾತ್ರವೆ ನನದು ಶರೀರ ಪಂಚಭೂತದ್ದು ||

ಗುರುತಿನ ಮೈಕೂಡ ಸ್ವಂತವಲ್ಲ
ಗಳಿಸುವ ಬಿಡಿಕಾಸು ತನ್ನದಲ್ಲ
ಇತಿಹಾಸದಾಸ್ತಿ ಪಡೆಯುವ ಬಿರುದು
ಸ್ಮರಿಸುವ ಪರೋಪಕಾರ ಕಣ್ಣೀರಿನದು
ಹೋಗುವ ಪ್ರಾಣದ ಜೊತೆಬಾರದು ದೇಹ
ಯೋಚಿಸು ಜಗದಲಿ ನನದೇನಿದೆಯೆಂದು ||

Tuesday, March 11, 2014

|| ಸಮಯವೆ ಶತ್ರು ||

ಜೀವನಕಿರಲು ಎಲ್ಲವು
ಪರಾವಲಂಬಿಯಗದಿರಲು
ಪರರ ಹಿತವನು ಬಯಸುವುದು
ಸಮಾಜಮುಖಿಯಾಗಿ ಬದುಕಿರಲು
ನೆಮ್ಮದಿಯ ನೆತ್ತರು ಹರಿದಿರಲು
ಸಮಯದ ವಕ್ರದೃಷ್ಟಿ ಬಿದ್ದಿರಲು
ದುರಾದೃಷ್ಟವೆ ಜೊತೆಯಾಗಿ ನಡೆಯುವುದು ||

ಅಪಘಾತವೆ ಅಪಹರಿಸಲು
ಬಾಳಿಗೆ ನೀಡುವುದು ತಿರುವನು 
ಆಘಾತವೆ ಅಪಘಾತವು
ಹೋದ ಜೀವ ಮರಳಲು
ಏನಾಗಲಿ ಕಾಲ ನಿರ್ಣಯ ಅಂತಿಮ
ಮರಣವಾದರೂ ಜೀವ ಉಳಿಯುವುದು
ಸಾವಿನಲು ಸಜೆಯುಂಟು ಬದುಕಲು ||

Saturday, March 8, 2014

|| ನಿಯತ್ತಾಗಿರಲಿ ನಂಬಿಕೆ ||

ಜಗದಲಿ ಜೀವ ಜನಿಸಲು ಜನನಿಯಿಂದ
ಜೀವನವೆಂಬ ಪಯಣದ ಪ್ರಾರಂಭ
ಮಾತೆಯ ಮಮತೆಯಿಂದ ಮಾತುಗಳು
ಬೆಳೆಸುವ ರೀತಿಯಿಂದ ಸಂಸ್ಕಾರವು
ಬರುತಿರಲು ಮಗುವಿನ ನಂಬಿಕೆಯು ತಾಯಿ ||

ಕುಣಿಯುತ ನಲಿಯುತ ಆಟವು
ವರಗುತ ಕೇಳುವ ಪಾಠವು
ಮೀಟಲು ಹುರುಪಿನ ಸ್ನೇಹವ
ಖುಷಿಯಲಿ ಸೇರಲು ಸಡಗರದಿ
ಎಲ್ಲಾ ಒಪ್ಪುವ ನಂಬಿಕೆಯೊಂದೆ ಗೆಳೆತನ ||

ಕಾಲಿಡಲು ಯವ್ವನದ ತೇರಿನಲಿ
ಬೇರೊಂದು ಸಾಂಗತ್ಯದ ಹುಡುಕಾಟದಲಿ
ಜೀವನಾಡಿ ಬೇಕೆಂಬ ಬಯಕೆ
ಒಲವಿನ ಸಂಗದ ಕನವರಿಕೆ
ಏಳಿಗೆಯ ನಂಬಿಕೆಯು ಸಂಗಾತಿ ||

ಅಗತ್ಯಕೆ ಸಹಕಾರದ ಅಹವಾಲು
ಸಿಗದು ಬೇಕಾದ ಬೆಂಬಲವು
ಒಳಿತನ್ನು ಸಹಿಸದ ಜಲಸಿಗಳು
ನಂಬಿಕೆಯಿಂದ ಬೇರ್ಪಡಿಸುವ ಬಂಧುಗಳು
ಗೆದ್ದೆತ್ತಿನ ಬಾಲ ಜೋತುವ ಬಳಗದವರು ||

ಬೆಳ್ಳಾಗಿ ಕಂಡ ಆಶಾಕಿರಣವು
ಮುಪ್ಪಿಗೆ ಊರುಗೋಲಾಗುವ ಮಕ್ಕಳು
ಲಗಾಮಿಲ್ಲದೆ ಓಡುವ ಕುದುರೆಯಂತೆ ಜೀವನ
ಮೂಗುದಾರದ ಹಿಡಿತವಿದ್ದರೆ ನೆಮ್ಮದಿಯಲಿ ಪಾವನ
ಅಂಧಕಾರ ತೊರೆದು ನಿಯತ್ತಾಗಿರಲಿ ನಂಬಿಕೆಯು ||