Saturday, August 31, 2013

|| ತಪ್ಪು ನನದಲ್ಲ ||

ಬಂಡೆಯ ಮೇಲಿನ ಹಸಿಗಳಲಿ
ಹಾಸಿಗೆಯ ಹಾಸುವ ಕನಸಿನಲಿ
ವಾಸವ ಮಾಡುವ ಮನೆಯಲಿ
ದುರ್ಗಂಧದ ವಾತಾವರಣದಲಿ
ಒಳಿತನ್ನು ಕೆದುಕಿದ ಕ್ಷಣಗಳಲಿ
ನಾನಿಲ್ಲ ತಪ್ಪು ನನದಲ್ಲ ||

ಗಾನಸುಧೆಯ ಆಲಿಸುತಲಿ
ಅಪಶ್ರುತಿಯ ನುಡಿಸುತಲಿ
ಸುಸ್ವರವು ಕರ್ಕಶದಲಿ
ಆಲಾಪನೆಯ ಉಸಿರಿನಲಿ
ಕದಡುವ ಸಮಯದಲಿ
ನಾನಿಲ್ಲ ತಪ್ಪು ನನದಲ್ಲ ||

ಧ್ಯಾನ ಮಾಡುವ ಹಂತದಲಿ
ಪೂಜೆಯ ಘಂಟಾ ಶಬ್ಧದಲಿ
ಸಿಡುಕು ಗೊಂದಲ ಎಬ್ಬಿಸುತಲಿ
ಭಗವಂತನ ನಾಮ ಸ್ಮರಣೆಯಲಿ
ಹುಳುಕು ಮಾಡುವ ಹೊತ್ತಿನಲಿ
ನಾನಿಲ್ಲ ತಪ್ಪು ನನದಲ್ಲ ||

|| ಮೂಕ ಮನಸು ||

ನಾ ಹಾಡೊ ಭಾವಗೀತೆ
ನೀ ಬರೆದ ಪ್ರೇಮಗೀತೆ
ಅನುಭವಿಸಿ ಹಾಡಿದರೆ
ಅನಂದ ಭಾಷ್ಪವು
ನೋವುಗಳ ಹೇಳಿದರೆ
ಕಣ್ಣೀರ ಕಾದಂಬರಿಯು 
ಯಾವರ್ಥ ನೀಡಲಿ ಹೇಳು
ಮನಸಿಚ್ಚೆ ಮುರಿಯದೆ ಮೀಟು ||

ಒಲವ ರಾಗದ ಪಲ್ಲವಿಯು
ನೋವು ನಲಿವಿನ ಚರಣಗಳು
ನಿನ್ನ ದನಿಯಲೆ ಗುನುಗುವುದು
ಸಾಧಿಸದೆ ಹೋಗುವ ಪದಗಳು
ಶಬ್ಧಗಳಲ್ಲಿ ಸ್ತಬ್ದವಾಗಿವೆ ಶಬ್ದಗಳು
ಕಿವುಡು ಕಿವಿಯಲಿ ಕೇಳದು
ಮೂಕ ಮನಸಿನ ಮಾತುಗಳು ||

Saturday, August 24, 2013

|| ಬೇರೆಯದೆ ಕಾರಣಕೆ ||

ಬಡಪಾಯಿ ಹೃದಯಕೆ
ಬಡತನವೆ ಕಾಣಿಕೆ
ಬಣ್ಣಿಸುವ ಮನಸಿಗೆ
ಬಣ್ಣವೆ ಮಾಸಿದೆ
ಬಯಸುತ ಹಾಡದೆ
ಬಯಕೆಯ ಕೊರತೆಗೆ ||

ಬೇಡುತ ಹೇಳಿದೆ
ಬೇಯುತಿರುವ ನೋವಿಗೆ
ಬೇಕಾದ ಸಂಗತಿಗೆ
ಬೇಟೆಯ ಆಡುತ್ತಿದೆ
ಬೆರೆಸಿದೆ ಮಾತಿಗೆ
ಬೇರೆಯದೆ ಕಾರಣಕೆ ||

Saturday, August 10, 2013

ಸಮ್ಮೋಹನ ಈ ಭಾವಾಂತರಂಗ…..


ಬೇಸರದ ಸಂಜೆಯಲಿ ಚಲನಚಿತ್ರ ನೋಡುತ್ತ ಸ್ನೇಹಿತರೊಂದಿಗೆ ಕುಳಿತಿದ್ದ ನಾನು 
ರಾತ್ರಿಯಾದಾಗ ಊಟಕ್ಕು ಮನಸ್ಸಿಲ್ಲದೆ ಹಾಗೆ ಅಂತರ್ಜಾಲ ಸುತ್ತುಲು ಹೋದಾಗ ಕಿರಿಕಿರಿಯಾಗುವಂತಹ ವಾಖ್ಯೆಗಳು ಕಂಡುಬಂದವು... ಅದಕ್ಕೆ ಪ್ರತಿಕ್ರಿಯೆ ನೀರಸವಾಗಿರುವುದು, ಅದನ್ನು ದೂರಾಗಿಸುವ ಹಂಬಲ ತೋರಿಬಂದವು... ಕ್ಷಣದಲ್ಲಿ ಏತಕೆ ನಾ ಮಧ್ಯ ಬಂದು ನಿನ್ನ ಪರವಹಿಸಿ ಮಾತಾನಾಡಿದನೊ ತಿಳಿಯದಾಯಿತು... ಅದೆ ಕ್ಷಣದಲ್ಲಿ ಆದ ನಿನ್ನ ಗಳೆತನ ಪರಿಚಯದ ಪರದಿಯತ್ತ ಸಾಗಿತು... ಗುರುತು ಪರಿಚಯವಿರದ ನಾವಿಬ್ಬರು ಹಾಗೆ ಹರಟೆಹೊಡೆಯುತ್ತ ಒಳ್ಳೆಯ ಪರಿಚಯದರಾಗಿದ್ದು ನಿಜವೇ ಎಂಬುದು ನಂಬಲು ಕಷ್ಟಸಾಧ್ಯವಾಯಿತು...

ವಿಚಾರ ವಿನಿಮಯ ಮಾಡಿಕೊಂಡ ನಾವು ಪರಿಚಯಸ್ಥರಾಗಿ ನಿದ್ರೆಯ ಅರಿವಿಲ್ಲದೆ ಹರಟಿದೆವು... ಗೆಳೆತನ ಜೀವನದ ಸತ್ಯಾಸತ್ಯತೆಗಳನ್ನು ತೆರೆದ ಪುಟದಂತೆ ಬಿಚ್ಚಿಟ್ಟಾಗ ನಂಬಿಕೆ ಮೂಡಿತು... ಬದುಕಿನ ಗುರಿಗಳು, ಉದ್ದೇಶಗಳು, ಇಚ್ಛೆಗಳು, ಮನಸಿನ ಸ್ವಭಾವಗಳು ಇಬ್ಬರಲ್ಲು ಒಂದೇ ಎಂಬ ಭಾವನೆಯನ್ನು ಮೂಡಿಸಿತು ಮತ್ತು ಜೀವನದಲ್ಲಿ ಜೊತೆಯಾಗಿ ಸಾಗಬಹುದೆಂಬ ಆಸೆಯ ಅಂಕುರವಾಯಿತು... ನೇರಮಾತುಗಳು ಹಿಡಿಸಿದವು... ಒಬ್ಬರನ್ನೊಬ್ಬರು ನೋಡದೆ, ಮಾತಾಡದೆ, ವಿನಿಮಯವಾದ ಭಾವನೆಗಳು ಪ್ರೀತಿಯ ನಿವೇದನೆಯಿಲ್ಲದೆ ಹತ್ತಿರದ ಜೀವಿಗಳಾಗಲು ನಾಂದಿಯಾಯಿತು...

ಪ್ರೀತಿಯ ನಿವೇದನೆ ಮಾಡದೆ ಜೊತೆಯಾದ ಪರಿಯೊಂದು ನಾಟಕೀಯವೆನಿಸಿದರೂ ಅದೇ ಕಡುಸತ್ಯವಾದ ವಾಸ್ಥವ... ನನಗಾಗಿ ನೀ ತೋರುವ ಕಾಳಜಿ, ನಿನ್ನ ಪ್ರೀತಿ, ನಿನ್ನಿಂದ ದೂರವಿರುವುದ ಸಹಿಸಲಾಗದೆ ನನ್ನಲ್ಲೆ ಕೊರಗುವ ರೀತಿ, ಆದಂತಹ ಖುಷಿ ಬದುಕಿನಲ್ಲಿ ಸ್ಥಿರವಾದೆನೆಂಬ ಸಂತೋಷ...  ಎತ್ತರದಲ್ಲಿ ಕುಳ್ಳಿ, ವಯಸ್ಸಿನಲಿ ಚಿಕ್ಕವಳು ಆದರೂ ಭಾವನೆಗಳು ಬೆರೆತಾಗ ಬಾಹ್ಯ ಅಂದಕೆ, ಚಂದಕೆ ಬೆಲೆಕೊಡದೆ, ವರ್ಷಗಳ ನಡುವಿನ ಅಂತರಗಳು ಗೌಣವಾಗಿ ಜೊತೆಯಿದ್ದರೆ  ನಿನ್ನೊಲುಮೆಯಲೆ ಎಂಬ ಭಾವನೆ ಮನದಲ್ಲಿ ಮೂಡಿತು...

ಮನಸಿನಲಿ ಮೂಡಿದ ಕಲ್ಪನೆ ಕನಸಾದ ಹಾಗೆ ನಿನ್ನೊಂದಿಗೆ ಡಿ ಮಾತುಗಳನ್ನು 
ನನಸು ಮಾಡುವುದು ನನ್ನ ಕೆಲಸ... ನಿನ್ನ ಮಡಿಲಲ್ಲಿ ಮಗುವಾಗಿ, ಕೈಗಳಿಂದ ಸವರಿಸಿಕೊಂಡು, ಅದರದಲಿ ಸೋಕಿಸಿಕೊಳ್ಳುವ ಬಯಕೆ... ನನ್ನ ತೋಳಿನಲ್ಲಿ ನಿನ್ನ ಬಂಧಿಯಾಗಿಸಿ ಜಗಮರೆವ ಕನಸಿನ ಹುಚ್ಚನಾಗಿರುವೆ... ಆನಂದಬಾಷ್ಪದಲೂ ಬರುವ ಕಣ್ಣಿರಿನ ಹನಿಯನ್ನು ಹೊರಹಾಕದೆ ಕಣ್ಣಲ್ಲೆ ಇಂಗಿಸುವೆನು... ನೀ ನನ್ನ ಮಡಿಲಲ್ಲಿ ಮಲಗಿರುವಾಗ ಭಾವನೆ ತುಂಬಿದ ಪ್ರೀತಿಯ ಸಂಭಾಷಣೆಗಳು ಮುದ ನೀಡಲು ಸ್ವರ್ಗಕ್ಕೆ ಕಿಚ್ಚು ಹಚ್ಚಲು ಅಗ್ನಿ ದೇವನಿಗೆ ಆಜ್ನಾಪಿಸುತ  ಬೇರೆಲ್ಲು ಹೋಗದೆ ನಿನ್ನಲ್ಲೆ ಇರುವೆನೆಂಬ ಭರವಸೆಯ ನುಡಿಗಳು...

ನಿನ್ನನ್ನು ನೋಡುವ, ಸೇರುವ ತವಕದಲಿ ನಾನಿರುವೆ... ಬಾಹ್ಯ ಆಕರ್ಷಣೆ ನಮ್ಮ ಜೀವಗಳು ಜೊತೆಯಾಗಲು ಕಾರಣವಲ್ಲ... ನೋಡದೆ ಇರುವ ನಾವಿಬ್ಬರು ಮನಸಿನ ಭಾವನೆಯಲಿ ಜೊತೆಯಾದ ಪ್ರೇಮಿಗಳು... ಮನಸು ಮನಸು ಬೆರೆತಾಗ ಉಳಿದವೆಲ್ಲವು ಅಲಕ್ಷ್ಯವಾಗಿರಲು ನೀನು ಹೇಗಿದ್ದರೂ ನಾನೊಪ್ಪುವೆ ಎಂಬ ಮಾತು... ಭೇಟಿಯಾಗಲು ಮನಗಳು ಹಾತೊರೆಯುತ್ತಿವೆ... ನಿನ್ನ ಮುದ್ದು ಮುಖವನ್ನು ಬೊಗಸೆಯಲಿ ಹಿಡಿಯಲು ಕಾತುರ... ನಿನಗಾಗಿ ನಾನಿರುವೆ ಎನ್ನುತ್ತ ಭರವಸೆಯೆ ಬದುಕಾಗಿರುವೆ...

ನಿಯತ್ತು ನಮ್ಮ ಸೊತ್ತು ಆಗಿರಲು ಸಮ್ಮೋಹನ ಭಾವಾಂತರಂಗ... :)

Thursday, August 8, 2013

|| ಮಾಡಲಾಗದು ||

ಹಸಿರಿಲ್ಲದೆ ಉಸಿರಾಡುವಾಗ
ಮರುಭೂಮಿಯಾದರೇನು
ಪ್ರೀತಿಯಿಲ್ಲದೆ ಬದುಕುವಾಗ
ಮಸಣವೆ ಮನೆಯಾದರೇನು
ಸಿಡಿಲುರುಳಿ ರಂದ್ರವಾದಾಗ
ಮಳೆಹನಿಯಿಂದ ಮುಚ್ಚುವುದೇನು ||

ಪಸಲು ಬಿಡುವ ಕ್ಷಣದಲ್ಲಿ
ಕ್ರಿಮಿ ತಿಂದರೆ ಶ್ರಮವ್ಯರ್ಥ
ತೆನೆ ತೂಗಲು ಗಾಳಿಯಲಿ
ಬೀಜವುದುರಿದರೆ ದುರಾದೃಷ್ಟ
ಒರತೆಯಿರದ ಕೆರೆಯಲ್ಲಿ
ನೀರು ತುಂಬಿಸಲಾಗುವುದೆಷ್ಟು ||

ನಂಬಿಕೆಯಿಂದ ಬದುಕಿನಲಿ
ವೈಮನಸ್ಸಿನ ಶಯನವು
ಮೂಗ ಕೊಯ್ದರೆ ಸಿಟ್ಟಿನಲಿ
ಶಾಂತವಾದಾಗ ಮರಳದು
ಬೇಡದಿರುವುದು ನಡೆದಲ್ಲಿ
ಬೇಕಾಗುವುದ ಮಾಡಲಾಗದು ||

Tuesday, August 6, 2013

...ಮೃದು ಜಾಗ ಅಗೆಯಲು...


ಸ್ವಂತ ಜಾಗವಿದ್ದರು ಸಹ ಜನ ಹುಡುಕುವುದು ಮೃದು ಜಾಗವನ್ನು ಅದು ಬೇರೆಯವರ ಜಮೀನು ಆದರೂ ಜಾಗ ಮೃದುವಾಗಿದ್ದರೆ ಅಲ್ಲಿಯೆ ಅಗೆಯಲು ಮುಂದಾಗುವರು. ಆಗುವ ಜಗಳ, ಹೊಡೆದಾಟಕ್ಕೆ ಹೆದರದೆ ಮೃದು ಜಾಗ ಅರಸುವುದು ಸಹಜಗಟ್ಟಿಯ ಜಾಗವನ್ನು ಯಾಕೆ ತಿರಸ್ಕರಿಸುತ್ತಾರೆ ಎನ್ನುವುದನ್ನು ಯೋಚಿಸಿದರೆ, ಅದನ್ನು ಕೆದಕಿ ವಿಚಾರಿಸಿದರೆ ಎಳೆ ಎಳೆಯಾಗಿ ಒಂದೊಂದೆ ಸತ್ಯ ಹೊರಬರುವುದು. ಮಾತು, ರೇಗಾಟದಲ್ಲು ಸಹ ಮೃದು ಸ್ವಭಾವದ ವ್ಯಕ್ತಿಗಳ ಹತ್ತಿರ ವ್ಯವಹರಿಸುವುದು ಸರ್ವೇ ಸಾಮಾನ್ಯ.

ಮೃದುವಾದ ಜಾಗ ಕಂಡರೆ ತಕ್ಷಣವೆ ಗುದ್ದಲಿಯಿಂದ ಅಗೆದು ಹೊಂಡ ತೆಗೆಯುವುದು ನೀರು ಬಾರದಿದ್ದರು ಶಕ್ತಿ ಮತ್ತು ಸಮಯ ವ್ಯರ್ಥಮಾಡುವುದು ವಿವೇಚನೆಯ ಕೊರತೆಯಿಂದ ಬಳಲುತ್ತಿರುವ ವ್ಯಕ್ತಿಗಳ ಸಾಹಸಗಾಥೆ. ಏನು ಕೆಲಸದವಿಲ್ಲದೆ ಕಾಲಾಹರಣಕ್ಕೆ ಮೃದುಜಾಗದಲ್ಲೆ ಗುಂಡಿಮಾಡುತ್ತಾರೆ. ಕಾಲಾಹರ ಮಾಡುವ ಪುಡಾರಿಗಳು ಸಹ ಏನಕ್ಕೆ ಮೃದುಜಾಗವನ್ನೆ ಅರಸುತ್ತಾರೆ ಎನ್ನುವುದು ವಿಪರ್ಯಾಸ. ಗಟ್ಟಿ ಜಾಗವನ್ನು ಅಗೆದರೆ ಹೊಂಡಮಾಡಲಾಗದೆ ಸಮಯಜಾಸ್ತಿ ವ್ಯಯಿಸಬಹುದಲ್ಲ ಎಂದು ಯೋಚಿಸದೆ ಮೆತ್ತನೆಯ ಜಾಗಕ್ಕೆ ದಂಗೆಯಿಡುವುದರಿಂದ ಆಯಾಸ ಪಡದೆ ಸಮಯವನ್ನು ಪೋಲು ಮಾಡಬಹುದು ಎಂದು ಯೋಚಿಸುವುದರಿಂದ.

ಅದೇರೀತಿ ಮೃದು ಸ್ವಭಾವದ ವ್ಯಕ್ತಿಗಳ ಕಾಲೆಳೆಯುತ್ತಾರೆ, ಅವರ ಜೊತೆ ಜಗಳವಾಡುತ್ತಾರೆ, ಅವರ ಹಣ, ಜಮೀನು, ಆಸ್ತಿ-ಪಾಸ್ತಿ ಲಪಟಾಯಿಸುತ್ತಾರೆ, ಭಾವಾರ್ಥಿಗಳ ಮನಸಿನ ಜೊತೆ ಆಟವಾಡುತ್ತಾರೆ, ಶಾಂತ ಸ್ವಬ್ಭಾವದ ವ್ಯಕ್ತಿಗಳನ್ನೆ ಗುಲಾಮರಾಗಿ ಇರಿಸಿಕೊಂಡು ದಬ್ಬಾಳಿಕೆ ನೆಡೆಸುತ್ತಾರೆ. ಭಾವಾರ್ಥಿಗಳ ನಡುವೆ ಬಿರುಕುತಂದು ಒಡೆದು ಆಳುವ ಹೇಡಿಗಳು ನಮ್ಮ ನಡುವೆ ಇದ್ದಾರೆ. ಅಂತಹ ವಾತಾವರಣ ಸೃಷ್ಟಿಸಿ ಸಾಮರಸ್ಯ ಕೆಡಿಸುವ ಗಟ್ಟಿಮನಸಿನ ಕ್ರೂರಿಗಳು ತಲೆ ಎತ್ತಿ ನಗುತ್ತಾರೆ.

ಮನೆಗಳಲ್ಲಿ, ಹೊರಗಡೆಯಲ್ಲಿ, ಕಾರ್ಯಾಲಯದಲ್ಲಿ ಎಲ್ಲೆ ಅಗಲಿ ಮಿದು ಹೃದಯದ ಜನ ಕಂಡಲ್ಲಿ ಅವರ ಹತ್ತಿರನೆ ಎಲ್ಲ ಕೆಲಸ ಮಾಡಲಿಕ್ಕೆ ಹೇಳಿ ಅವರಿಗೆ ಜವಾಬ್ಧಾರಿವಹಿಸಿ  ನಂತರ ಅವರ ಮೇಲೆ ಗೂಬೆ ಕೂರಿಸಿ ಜರಿಯುವುದು ಎಲ್ಲಡೆ ಸಾಮಾನ್ಯವಾಗಿ ಕಂಡುಬರುತ್ತದೆಸುಮ್ಮನಿರುವ ವ್ಯಕ್ತಿಗಳ ಹತ್ತಿರವೆ ಎಲ್ಲ ಕೆಲಸ ಹೇಳಿ ಗುಲಾಮರತರ ನೋಡುತ್ತಾರೆ.

ಇಂತಹ ವ್ಯಕ್ತಿಗಳ ಮೇಲೆ ಮಾಡುವ ದಬ್ಬಾಳಿಕೆಯನ್ನು ನೋಡೆ ಹಿರಿಯವರು ಹೇಳಿರಬಹುದು ಮೆತ್ತಗಿನ ಜಾಗದಲ್ಲೆ ಜನ ಅಗೆಯುದು ಅಂತ. ಸೌಮ್ಯ ಸ್ವಭಾವದ ಮನಸ್ಸು ಮಿದುವಾದ ಜಾಗ ಎರಡನ್ನು ಹೋಲಿಸಿ ಮಾತಾಡುವುದು ಎಷ್ಟು ಸಮಂಜಸ ಅಂಥ ಅದರ ಸುತ್ತ ಒಡಾಡಿದಾಗ ನಮಗನಿಸುತ್ತದೆ ಇವೆರಡು ಒಂದೆ ಎಂದು ಯಾಕೆಂದರೆ ಸಕ್ಕರೆ ಇರುವಲ್ಲೆ ತಾನೆ ಇರುವೆಗಳು ಮುತ್ತಿಗೆ ಹಾಕುವುದು. ಸೌಮ್ಯ ಸ್ವಭಾವದ ಜನರಲ್ಲಿ ಜಗಳವಾಡುವುದು, ಅವರ ಮೇಲೆ ದಬ್ಬಾಳಿಕೆ ನಡೆಸುವುದು ಯಾಕೆಂದರೆ ಅವರು ತಿರುಗಿಬೀಳುವುದಿಲ್ಲವೆಂಬ ವಿಶ್ವಾಸದಿಂದಹೇಗೆ ಜನರು ಆಯಾಸ ಕಡಿಮೆಯಾಗುವ ಮೆತ್ತಗಿರುವ ಜಾಗದಲ್ಲೇ ಅಗೆಯುವುದೊ ಹಾಗೆ ಮೆದು ಮನಸ್ಕರ ಮೇಲೆ ಸವಾರಿ ಮಾಡುವುದು.