Saturday, March 31, 2018

ಜೋ...ಜೋ ಲಾಲಿ

ಜೊಜೋ... ವಸುದೇವ ದೇವಕಿ ಕಂದ
ಜೊಜೋ ಲಾಲಿ
ಎಂದ್ ಹೇಳುತ್ತ ಹಾಡುವುದು
ಜಗದ ಲಾಲಿ
ಜೋ.....ಜೋ...ಜೋ.......
ಜೋ.....ಜೋ...ಜೋ.......

ಮಡಿಕೆಯೋಳ್ ಇರುವ
ಬೆಣ್ಣೆ ಕದ್ದು
ಗೆಳೆಯರ ಬಾಯಿಗೆ ಒರೆಸುವ
ಪರಿಯೇ ಮುದ್ದು

ಗೋಕುಲದೋಳ್ ಆಟದಲಿ
ಸೋಲದೆ ಗೆದ್ದು
ಸೋಜಿಗವ ತೋರಿದನು
ಕೇಳಲು ಸದ್ದು

ಸ್ಪೂರ್ತಿಯ ಸ್ಪರ್ಶವಿದು
ಧರಣಿಗೆ ಬಿದ್ದು
ಕೋಲಾಟ ಆಡಿದನು
ತಾನೇ ಕುದ್ದು

ರಾಧೆ ಪ್ರೇಮದಲಿ
ಅವನೇ ಮಿಂದೆದ್ದು
ಜಗಕೆ ಅರುಹಿದನು ಬದುಕಿನಲಿ
ನೆಮ್ಮದಿಗೆ ಪ್ರೀತಿಯೇ ಮದ್ದು

Friday, March 30, 2018

ಮರೆಯಲಾಗದು ಹುಟ್ದಬ್ಬದ ಉಡುಗೊರೆ

ಅದೊಂದು ದಿನ ಅವನ ಹುಟ್ದಬ್ಬ. ಶುಭಾಶಯಗಳ ಹೊಳೆಯೇ ಹರಿದುಬರುತ್ತಿತ್ತು. ಗೆಳೆಯನ ಮನೆಗೆಂದು ಹೋಗಿದ್ದ  ಅವನು ಹುಟ್ದಬ್ಬದ ದಿನ ಬಸ್ಸಿನಲ್ಲಿ ಬರುತ್ತಿದ್ದಾಗ ಅನಿರೀಕ್ಷಿತವಾದ ಕರೆಯೊಂದು ಬಂದಿತು. ಏನಪ್ಪ ಇದು ಆದಿತ್ಯವಾರವಾದರೂ ನೆಮ್ಮದಿಯಿಂದಿರಲು ಬಿಡುವುದಿಲ್ಲವಲ್ಲ ಎಂದು ಗೊಣಗುಡುತ್ತ ಕರೆಯನ್ನು ಸ್ವೀಕರಿಸಿದ. ಆಗ ಕರೆ ಮಾಡಿದ್ದ ಮ್ಯಾನೇಜರ್ ಹೇಳಿದ, ಅಭಿನಂದನೆಗಳು ಎಂದು. ಆದರೆ ಅವನು ಅಂದ್ಕೊಂಡ ಹುಟ್ದಬ್ಬದ ಶುಭಾಶಯದ ಬದಲು ಅಭಿನಂದನೆಯೆನ್ನುತ್ತಿದ್ದಾರೆ ಎಂದುಕೊಂಡು ಧನ್ಯವಾದಗಳೆಂದನು.

ಮಾತನ್ನು ಮುಂದುವರೆಸಿದ ಮ್ಯಾನೇಜರ್ ಕೇಳುತ್ತಾರೆ ನಿನಗ್ಯಾಕೆ ಅಭಿನಂದನೆ ಹೇಳಿದೆಯೆಂದು ಗೊತ್ತಾಯಿತಾ ಎಂದು ಕೇಳಿದರೆ ನಾನು ಇಲ್ಲವೆಂದೆ. ಆದರೆ ನಿಮಗೆ ಹೇಗೆ ಇಂದು ನನ್ನ ಹುಟ್ದಬ್ಬವೆಂದು ತಿಳಿಯಿತು ಎಂದು ತಿರುಗಿ ಕೇಳುತ್ತಾನೆ. ಆಗ ಮ್ಯಾನೇಜರ್, ಒಹ್ ಏನು ಇಂದು ನಿನ್ನ ಹುಟ್ದಬ್ಬ ಕೂಡನಾ? ಹಾಗಾದ್ರೆ ಇದು ನಿನಗೆ ಇಮ್ಮಡಿಯ ಖುಷಿಯ ಸಮಯವೆನ್ನುತ್ತಾನೆ. ಯಾಕೆ ಹೀಗೆ ಹೇಳುತ್ತಿದ್ದಾರೆ ಎಂದು ತಿಳಿಯದೆ, ಯಾಕೆ ಸರ್ ಹೀಗೆ ಹೇಳುತ್ತಿದ್ದೀರಿ? ನೀವು ನನ್ನ ಹುಟ್ದಬ್ಬಕ್ಕೆ ಶುಭಾಶಯ ಕೋರಲು ಕರೆ ಮಾಡಿದ್ದೀರಿ ಅಂತಂದುಕೊಂಡೆ ಆದರೆ ಈಗ ನಿಮ್ಮ ಮಾತನ್ನು ಕೇಳಿ ನನಗೇನೆಂದು ಅರ್ಥವಾಗುತ್ತಿಲ್ಲ. ದಯವಿಟ್ಟು ಸರಿಯಾಗಿ ತಿಳಿಸಿ ಹೇಳಿ ಎಂದಾಗ ಅವರು ಹೇಳುತ್ತಾರೆ, ಮೊದಲು ಹುಟ್ದಬ್ಬದ ಪಾರ್ಟಿ ಕೊಡು ನಂತರ ಹೇಳುತ್ತೇನೆ ಎನ್ನುತ್ತಾರೆ. ಸರಿ ಸಾರ್ ಇಂದು ಸಂಜೆ ಸಿಗಿ ಕೊಡಿಸುತ್ತೇನೆ ಎಂದಾಗ, ನನಗೆ ನಿನ್ನ ಪಾರ್ಟಿ ಬೇಡ ಮೊದಲು ನೀನು ಪುಣಾಕ್ಕೆ ಹೊರಡಲಿಕ್ಕೆ ತಯಾರಾಗು, ಯಾಕೆಂದರೆ ಅಧಿಕೃತ ತಂಡದ ಮುಂದಾಳುವಾಗಿ ನಿನ್ನೋಬ್ಬನೇ ನೇಮಕವಾಗಿದ್ದೀಯ ಹಾಗಾಗಿ ನಾಳೆ ಬೆಳಿಗ್ಗೆಯೇ ನೀನು ಪುಣಾದಲ್ಲಿರಬೇಕು ಎನ್ನುತ್ತಾರೆ. ಇದು ಅವಸರದ ಅವಶ್ಯಕತೆ ಹಾಗಾಗಿ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡ, ಇಂದು ರಾತ್ರಿಯೊಳಗಾಗಿ ಪುಣಾದಲ್ಲಿರು ಎಂದು ಹೇಳಿತ್ತಾರೆ. ಆಗ ಧನ್ಯೋಸ್ಮಿ ಎಂದು ಹೇಳಿದ ಅವನಿಗೆ ಆದ ಖುಷಿಗೆ ಪಾರವೇ ಇರ್ಲಿಲ್ಲ.

ಆದರೆ ಪುಣಾದ ಹೆಸರನ್ನು ಮಾತ್ರ ಕೇಳಿದ್ದ ಅವನು ಆಲ್ಲಿಯವರೆಗೆ ಒಮ್ಮೆಯೂ ಪುಣಾವನ್ನು ನೋಡಿದವನಲ್ಲ. ಅಲ್ಲದೇ ಪರಿಚಯದರ್ಯಾರೂ ಅಲ್ಲಿರಲಿಲ್ಲ. ಆದರೂ ಧೈರ್ಯದಿಂದ ಪುಣಾಕ್ಕೆ ಹೊರಡಲು ಸಿದ್ಧನಾಗಿ ವಿಮಾನದ ಮೇಲೆ ಹೋಗಿ ಹೊಸ ಊರಿಗೆ ಕಾಲಿರಿಸಿದೆ. ಆಗ ಹಿಂದಿ ಭಾಷೆಯನ್ನು ಸುಟ್ಟುಕೊಂಡು ತಿನ್ನಲೂ ಸಹ ಬರುತ್ತಿರಲಿಲ್ಲ. ಹೊಸ ಊರು, ಹೊಸ ಜನರ ನೆಲದಲ್ಲಿ ವಿಳಾಸಕ್ಕೆ ಅರಸಿ ತಲುಪ ಬೇಕಾದ ಸ್ಥಳ ತಲುಪಿದ ಅವನು ಯಾವುದೋ ಒಂದು ಹೊಟೆಲ್ ನಲ್ಲಿ ಉಳಿದುಕೊಂಡ. ಆ ಹೊಟೆಲ್ಲಿನ  ಅವ್ಯವಸ್ಥೆಯೇ ವ್ಯವಸ್ಥೆಯಾಗಿತ್ತು. ಸೊಳ್ಳೆಯ ಕಾಟದಲ್ಲಿ ಮಲಗಲು ಸಿಗದ ಮಂಚ, ಹೊದೆಯಲೂ ಸಹ ಸಿಗಲಿಲ್ಲವಾಗಿತ್ತು ಒಂದು ಚಾದರ. ಹೀಗಿದ್ದರೂ ಹಾಗೋ ಹೀಗೋ ಬೆಳಗು ಮಾಡಿದ. ಅವರ ಮಾತಿನಂತೆ ಮಾಡಿದ ಅವನು ತನ್ನ ಕಂಪನಿಯನ್ನು ತಲುಪಿ ಅಧಿಕಾರ ಹಸ್ತಾಂತರ ಪಡೆದುದ್ದು ಮರೆಯಲಾಗದ ಹುಟ್ದಬ್ಬದ ಉಡುಗೊರೆ.

ಧರಿತ್ರಿ ದರ್ಶಿಸಿದವರು

ಗರ್ಭಗೂಡಲಿ ಗೌಪ್ಯವಾಗಿ
ಜೋಪಾನ ಮಾಡಲು
ರೂಪ ಪಡೆದೆ
ತುಂಡು ಮಾಂಸದ ಪಕಳೆಯಾಗಿ
ತುಂಬಿದೆ ಮಡಿಲ ಮಗುವಾಗಿ
ಮರು ಜನ್ಮವೆತ್ತಿ ಹಡೆದಿರುವೆಯಮ್ಮ
ಹಾಲ್ಗೆನ್ನೆ ಅರಳಲು ಮರೆತೆ ಎಲ್ಲವ
ಜಗವ ತೋರಿಸಿ ಜಪವ ಮಾಡಿಸಿ
ಏಳ್ಗೆ ಬಯಸುತ ಸಂಸ್ಕರಿಸಿದೆ

ದುಡುಮೆ ಮಾಡುತ ಪಣವತೊಟ್ಟೆ
ಕುಡಿಯ ಬೆಳೆಸುವ ದೀಕ್ಷೆ ತೊಟ್ಟೆ
ಒಣಗಿದ ಬೆವರಿನ ವಾಸನೆಯಲ್ಲಿ
ಮೋಡಿ ಮಾಡುವ ಜಾದುಗಾರನಾದೆ
ಸಂಸಾರದ ನಗವ ಹೊತ್ತು
ಸಾಧಿಸಬೇಕೆಂಬ ಛಲವ ಬಿತ್ತಿ
ವಿದ್ಯೆಯೆಂಬ ಏಣಿ ಹತ್ತಿಸಿ
ಸ್ವಕಾಲಲಿ ನಿಂತು ಬದುಕ ಕಟ್ಟಲು
ಮಾದರಿಯ ಪ್ರೇರಣೆಯು ನೀನಾದೆಯಪ್ಪ

Thursday, March 8, 2018

ಈ ಸಂಜೆ ದಂಡ

ಈ ಸಂಜೆ ನಗಲು
ಉಕ್ಕಿ ಭೋರ್ಗರೆಯುವ ಕಡಲು
ನಿಂದಿಸುತಿದೆ ಕರೆದು
ಬಂದಿರಲು ನಿನ್ನ ತೊರೆದು
ಹಸಿಯಿಲ್ಲದ ಬಯಲು
ಕಸಿಯಿಲ್ಲದ ಮಡಿಲು
ನೆರವಾಗದೆ ಜರಿಯುತಿದೆ
ನೀನಿರದೆ ಜೊತೆಯಾಗಿ
ತಿರುಗುತಿರುವ ನನ್ನ

ನೀ ಬಳಿಯಿರದ ಹೊತ್ತು
ಬೆಳ್ಳಿ ಬಾನಲಿ ಕೂಡ
ಬೆಳಗುವ ಭಾನು
ಬರಿದಾಗಿ ಕಂಡ
ಮುಸ್ಸಂಜೆ ಮತ್ತು
ನಾ ಏಕಾಂಗಿ ಸ್ವತ್ತು
ಕಾಯುವ ಕಾಯಕವು
ಬರಿದಾದ ದಂಡ

ಮಧು ಹೀರಿದ ದುಂಬಿ
ನೆಗೆದು ಹಾರಿದ ಭಂಗಿ
ನೋಡಲು ಬಂತು
ಕೋಪ ತಾಪದ ಗೀಳು
ಶೃತಿ ಭರಿತ ತುಂಬಿ
ಕೃತಿ ಬರೆದ ಕಂಬಿ
ರಾಗಕೆ ಸೋತು
ಪ್ರೀತಿ ಒಲಿದು ಬೀಳು