Monday, June 24, 2013

|| ನೀರಡಿಕೆ ||

ನಾನಿರುವ ಊರಿನಲಿ ಚಂದ್ರನಿಲ್ಲ
ನೀನಿರುವ ಉರಿನಲಿ ರವಿ ಕಾಣುತಿಲ್ಲ
ಬೆರೆತಾಗಿದೆ ನಾವು ಕವಿ ಕಲ್ಪನೆಯಲಿ
ಒಲವು ಚಿಮ್ಮಿತು ಮುಸ್ಸಂಜೆ ತಂಪಿನಲಿ ||

ತಾರೆ ಮಿನುಗುವುದ ಮರೆತಿಹುದು
ನಿನ ಮೊಗದ ಕಾಂತಿಯಲಿ ಮಂಕಾಗಿಹುದು
ನಾನೋಡದಾಚಂದ್ರ ನಿನ ಹಿಂದೆ ಅಲೆದಿಹನು
ಉರಿ ಕುಂದುವುದೆಂಬ ಭಯದಲಿ ಅಡಗಿ ಬೆಳಗುತಿಹನಾಸೂರ್ಯನು ||

ವಾರಿ ಸುಳಿಯಲಿ ಸಿಲುಕಿದರೂನು
ತೇಲಿ ಬರುವೆನು ನಿನ್ನಯ ಸೆಳೆತಕೆ
ಹೊಳೆಯ ಹನಿಯ ತಂಪಿನಲಿ ಭಾವನೆಗಳು
ಮೂಡಿಸಿವೆ ನಿನ ಅಂದದ ಬಿಂಬಗಳನು ||

ಕರಿಮೋಡ ಮಳೆಯಾಗಿ ಧರೆಗುರುಳಿ
ಬರಡು ಭೂಮಿಯ ಬಾಯಾರಿಕೆ ತಣಿಸಿದಂತೆ
ನನ ಎದೆಯು ಸುಡುತಿದೆ ವಿರಹದ ಬೇಗೆಯಲಿ
ನೀ ಬಂದು ಆರಿಸು ನೀರಡಿಕೆಯ ||

Wednesday, June 19, 2013

|| ಕತ್ತಲು ಕಳೆದಂತೆ ||

ನಂಬಿಕೆ ಬೇಕು ಸಂಬಂಧದಲಿ
ಬರವಸೆ ಇರಬೇಕು ಬದುಕಲಿ
ಬಂತೆಂದು ಕಷ್ಟ ಕೈಕಟ್ಟಿ ಕುಳಿತರೆ
ನೆರವೇರದು ಇಷ್ಟ ಬಾಳಿನಲಿ ||

ಏನಾದರು ಛಲಬಿಡದೆ ಮುನ್ನುಗ್ಗಲು
ಕಾಲ್ಮುರಿದು ಬೀಳುವುದು ಯಶಸ್ಸುಗಳು
ಮುಟ್ಟಿದಾಗ ಮುದುಡುವುದು ನಾಚಿಕೆಮುಳ್ಳು
ಕಲುಕದಿದ್ದಾಗ ನಗುತ ಅರಳುವುದು ಎಲೆಗಳು ||

ಚಾಣದೇಟು ಬಿದ್ದಾಗ ಕಲ್ಲಿನ ಕೆತ್ತನೆ
ಕಂಪಿಸದೆ ನೋಡುವ ಮೂರ್ತಿಗಳ ಬಿತ್ತನೆ
ಅಮವಾಸ್ಯೆಯಂದು ಮಾಯವಾದ ಚಂದಿರನು
ಹುಣ್ಣಿಮೆಯಂದು ಪೂರ್ಣವಾಗಿ  ಕಂಗೊಳಿಸುವನು ||

ಚಳಿಗಾಲದಿ ಎಲೆ ಉದುರಿ ಬೋಳಾದ ಮರಗಳು
ವಸಂತನಾಗಮನಕೆ ಮೈದುಂಬಿ ಸ್ವಾವಗತಿಸುವುದು
ಅರಸು ಆಳಾಗುವುದು, ಆಳು ಅರಸನಾಗುವುದು
ಕಾಲಚಕ್ರ ತಿರುಗಿದಾಗಾಗುವ ಸಹಜ ಕ್ರಿಯೆಗಳು ||

ಬದುಕಲಿ ಬೇಸರ ಕಷ್ಟದ ದಿನಗಳು
ಕಲಿಸುವುದು ಪಾಠವ ಎದುರಿಸಿ ಗಟ್ಟಿಯಾಗಲು
ಮರಳಿಯತ್ನಿಸಿ ಸಾಧಿಸು ನೀ ಹಠಬಿಡದೆ ಕಾರ್ಯವ
ಅಂಜಿ ಹೆದರದಿರು ಬೆಳಕು ಹರಿವುದು ಕತ್ತಲು ಕಳೆದಂತೆ ||

Tuesday, June 18, 2013

|| ಮೈ ಮರೆತಿದೆ ||

ನಿನ ಕನಸಿನ ರಾಗದಲ್ಲಿ
ನನ ಮನಸಿನ ಭಾವ ಬೆರೆಸಿ
ತಲೆಯ ತೂಗೊ ಶೃತಿಯ ನುಡಿಸಿ
ಸಪ್ತಸ್ವರದಿ ಹೃದಯಗೀತೆ ಗಾನವು ||

ನೀ ಹಾಡಿದೆ ಸಂಗೀತದ ಆಲಾಪನೆ ಇಂಪಾಗಿದೆ
ಅದ ಕೇಳಲು ತಂಪಾಗಲು ನನ ಕಲ್ಪನೆ ಸೊಗಸಾಗಿದೆ
ಒಲವಿನ ಗೀತೆಯು ಬರೆಯಲು ಕವಿತೆಯು
ಓದುವ ಮನಸು ಮೈ ಮರೆತಿದೆ ||

Sunday, June 16, 2013

|| ಗುರಿ ಅರಸಿದೆ ||


ನಡೆದ ಹಾದಿಯು ಎಂಥ ಸುಂದರ
ಅರಿವ ಮುಂಚೆಯೆ ಕಳೆದವು
ನಲಿವ ಸಮಯದಿ ನಡೆದ ಹಾದಿಯು
ಮರೆತರೇನು ಚಂದವು ||

ಮನದ ಭಾವವ ಬರೆದು ಅಳಿಸಲಾಗದು
ಎದೆಯ ನೋವ ಪುಟದಲಿ
ಹಳೆಯ ಕ್ಷಣಗಳು ಮಾಸದೆಂದಿಗು
ಮನದ ಅಂಗಳದ ಶಿಲೆಯಲಿ ||

ಈಡೇರದ ಮನದ ಇಂಗಿತವನು
ನೆನೆದಂತೆ ಸಾಕಾರಗೊಳಿಸಲು
ಕವಲು ದಾರಿಯ ಪಯಣಕೆ
ಕವೆಯೇ ಆಧಾರವಾಯ್ತು ||

ಹೊಸ ಹೊಸ ಅನುಭವಗಳು
ಬದುಕಿನ ಪಾಠ ಕಲಿಸಿದೆ
ತ್ರಾಣ ವಿಶ್ರಾಂತಿ ಪಡೆಯಲು
ನಲಿವಿನ ಗುರಿ ಅರಸಿದೆ ||