Thursday, June 22, 2017

ಆಳ್ವಿಕೆ ಮಾಡು

ಹರಿವ ಹೊಳೆಯ ನೀರ ಮೇಲೆ
ಮಳೆಯು ಸುರಿದ ಹಾಗಿದೆ
ಯಾಕೆ ಹೀಗೆ ಮನದ ಓಲೆ
ಭಾವ ಲಹರಿಯ ಹಾಡಿದೆ
ಕದ್ದು ನೋಡಲು ನಿನ್ನ ಮೊಗವ
ತನುವಿನ ಆಸೆ ಏರುತ ಹೋಗಿದೆ
ನೋಡು ಒಳಗಿನ ಬಯಕೆ ರಾಜ್ಯವ
ಇಲ್ಲೇ ಆಳ್ವಿಕೆ ಮಾಡು ಎಂದಿದೆ

ಕೊಡೆಯನು ಹಿಡಿಯುವೆ
ಬಿಸಿಲ ಝಳಕೆ
ನೆರಳಿನ ನೆನೆಪೇ ಆಗದು
ಮಡಿಲಲಿ ಮಲಗಿಸಿ
ತುತ್ತ ನೀಡುವೆ
ತಾಯಿ ಹಂಬಲವೇ ಬಾರದು

ಕನಸಲು ಕಾಯುವೆ
ಪ್ರೀತಿ ಸುಧೆಯ
ಬೇರೆಡೆ ದೃಷ್ಟಿಯ ಹಾಯಿಸದೆ
ರೇಗದೆ ತಿಳಿಸುವೆ
ಪ್ರೇಮದ ಪರಿಯ
ಬೇಡುತ ತಾಳ್ಮೆಯ ಪರೀಕ್ಷಿಸದೆ

Wednesday, June 21, 2017

ಮುದಕೆ ಭಂಗ

ಹೂವು ಅರಳುವ ಘಳಿಗೆ ಸುಳಿಯಿತು
ಮನದ ನೋವ ಮರೆಯಲು
ಮೊಗ್ಗು ಚಿಗರುವ ಕಾಲ ಬಂದಿತು
ಮುದಕೆ ಭಂಗ ಮಾಸಲು

ಮುಕ್ತ ಮನಸಿನ ವೇದನೆಯೆಲ್ಲೋ
ಗುಪ್ತವಾಗಿಡಲು ಬಯಸಿದೆ
ಸುಪ್ತ ಯಾತನೆ ಆವರ್ತನೆಯಲ್ಲೋ
ಸಪ್ತ ಸಾಗರ ಎದುರಾಗಿದೆ

ನಿಶ್ಚೇಷ್ಟ ಕಾರ್ಯದ ಹೊತ್ತ ಹಣಿಯಲು
ನಲಿವಿನ ನಾಟಕ ಅಳಿಯಲಿ
ಅರೆ ಅರಿವಿನ ಅಂಧಕಾರ ಅಳಿಸಲು
ವಿವೇಕದ ಬೆಳಕು ಹರಿಯಲಿ

Tuesday, June 20, 2017

ಸ್ವಾನುರಾಗವ ತೊರೆದು

ಸುತ್ತದಿರು ತೀರ್ಥಯಾತ್ರೆಗೆಂದು
ಹಲವಾರು ದೇವಾಲಯವ ದೇಶವ್ಯಾಪಿ
ಸಾಯದಿರು ಸ್ವಾರ್ಥಿ ಹತಾಶಿಯೆಂದು
ನಿನ್ನೊಳಗಿರುವ ದೇವ ಭಾವವ ಮರೆತು
ಪ್ರೀತಿ ವಿಶ್ವಾಸದ ಕರುಣೆಯ ತೊರೆದು
ನಿನ್ನ ಅಹಮ್ಮಿನ ಕೋಟೆಯಲಿ ಮೆರೆಯುದಿರು

ಹಸಿವು ಎಂದವರಿಗೆ ಕೈ ತುತ್ತನಿಡು
ಯಾಚಿಸಿದವರಿಗೆ ಸಹಾಯ ಹಸ್ತ ಕೊಡು
ತಾನು ತನ್ನದೆಂಬುವ ಮೋಹ ಬಿಡು
ಇರಲಿ ನನ್ನವರೆಂಬುವ ನಿಸ್ವಾರ್ಥದ ಬೀಡು

ಕಾಣದ ದೇವನಿಗೆ ಹಂಬಲಿಸದಿರು
ಪರೋಪಕಾರಿಯಾಗುತ ಜೀವಿಸಿರು
ದೀನರ ಪಾಲಿನ ದೇವ ನೀನಾಗುವೆ
ನೆಮ್ಮದಿ ಕಾಣುತ ಅಜರಾಮರನಾಗುವೆ

ಬೆಳಕಾಗು ಬೇಡುವ ಬಡವರ ಪಾಲಿಗೆ
ರಕ್ಷಕನಾಗು ಅನಾಥರ ಬದುಕಿಗೆ
ಊರುಗೋಲಾಗು ವೃದ್ಧರ ಬಾಳಿಗೆ
ಸ್ವಾನುರಾಗವ ಆಲಾಪಿಸದೆ ಗಂಧರ್ವನಾಗು

Monday, June 12, 2017

ನನ್ನವಳ ವರಿಸಲು

ಹೆತ್ತವರು ಹೇಳಿದರು ನೀ ಸುಂದರಿ
ನಿನ್ನನ್ನು ನೋಡಲು ಮನ ಕಾತರಿ
ಕರೆಯಲ್ಲಿ ನುಡಿದಿಹರು ಮುಗುದೆಯೆಂದು
ನೋಡು ಶಾಸ್ತ್ರವ ಕೂಡಲೆ ಮುಗಿಸಲೆಂದು
ನೂರಾರು ಕನಸುಗಳ ಕಲರವವು ಎದೆಯಲಿ
ಭೇಟಿಯಾಗಲು ಅಣಿಯಾದೆ ಸಂತೋಷದಲಿ

ಕಣ್ಣನ್ನು ಕುಕ್ಕಿತು ಆ ಕೆಂದುಟಿ
ಮಾತನಾಡದೆ ನೀಡಿದೆ ಸಮ್ಮತಿ
ತಿರುಗಿ ಬಯಸಿಹೆನು ವರಿಸಲು ಅನುಮತಿ
ಕದ್ದು ತಿಳಿಸಲು ಮುದ್ದು ಮನದ ಆಣತಿ

ಸಿಹಿಯನ್ನು ತಿನಿಸಿಹೆನು ಶುಭಾರಂಭಕೆ
ಸಂಭಾಷಣೆಯ ಮೂಲಕ ಹೊಂದಾಣಿಕೆ
ಸವಿಯುತ್ತರ ಪಡೆಯಲು ನಿಶ್ಚಿತಾರ್ಥಕೆ
ನಿಗದಿಯಾಯಿತು ದಿನವು ಕಲ್ಯಾಣಕೆ

ಪ್ರತಿದಿನವು ನಡೆಯಿತು ಮಿತಿಯಿರದ ಹರಟೆ
ಮತ್ತದರ ಸಾರಾಂಶ ವಿನಿಮಯದ ಗೊರಟೆ
ಶುಭದಿನದ ಸೊಗಸಿನ ತಯಾರಿಗೆ ಹೊರಟೆ
ಜೊತೆಯಿರುವೆ ರಕ್ಷಿಸಲು ಕಲಿತು ಕರಾಟೆ

ವೈದಿಕರು ಮಾಡಿಹರು ಮಂತ್ರಘೋಷ
ಮಾಂಗಲ್ಯ ಧಾರಣೆಗೆ ನಗೆಯ ಹರುಷ
ಹಾರೈಸಿಹರು ಬಾಳಿ ನೂರಾರು ವರುಷ
ಸಾಮರಸ್ಯದ ಬದುಕಿರಲಿ ಪ್ರತಿ ನಿಮಿಷ

Friday, June 9, 2017

ಮತ್ತೆ ಬೆರೆಯಲಿ

ನೂಲ ನೇಯುತ
ಏಣಿ ಮಾಡುತ
ಗಗನ ಹತ್ತಲು ಸಾಧ್ಯವೇ?
ಹೇಗೆ ನಂಬಲಿ
ಅದರ ದೃಢತೆಯ
ಮೆಲ್ನೋಟಕೂ ಕಾಣುವುದು
ಹುಸಿಯುವ ಅಸ್ಥಿರತೆಯು

ರೆಪ್ಪೆ ಮುಚ್ಚಲು ಶಬ್ದಬಾರದು
ಕಣ್ಣಂಚಿನ ಬೆಳಕು ಮಿಂಚಾಗದು
ಕನಸಿನ ಕಲ್ಪನೆಯ ಆಗಸಕೆ
ಜೋತು ಬೀಳಲಿ ಘಂಟೆಯು
ಎದೆಯ ದುಗುಡದ ಬಡಿತ
ಕೇಳಲಿ ಕೆಪ್ಪಾದ ಜಗಕೆ
ಹೆಪ್ಪುಗಟ್ಟಿದ ನೋವ ಹಾಲನು
ಚೆಲ್ಲು ಹೊಡೆಯಲು ಘಂಟೆನಾದವು

ಚಪ್ಪಾಳೆಯಾಗದು ಒಂದೇ ಕೈಯಲಿ
ಜ್ಞಾತೃ ಸಲ್ಲದು ಬೆರೆವ ಮನಸಲಿ
ಚಿಪ್ಪು ಒಡೆದಾಗ ಮುತ್ತು ಸಿಕ್ಕಂತೆ
ಬೇರಾದ ಬದುಕು ಬೆರೆಯುತ
ಅಹಂಕಾರ ತೊರೆದು ಚೊಕ್ಕಾಗಲು
ಚಾಣದ ಪೆಟ್ಟು ತಿಂದ ಕಲ್ಲಿನಂತೆ
ಮೂರ್ತಿಯಾಗಿ ಪೂಜೆ ಪಡೆದಂತೆ
ವಿರಸದ ಪ್ರೇಮಿಗಳು ಸರಸಿಗಳಾಗಲಿ

Tuesday, June 6, 2017

ಮೆರೆದಿದ್ದ ಕಡ್ಗೋಲಿನ ವ್ಯಾಯಾಮ ಮರೆಯಾದಾಗ

ಮೊದಲೆಲ್ಲ ನಮ್ಮ ಹಳ್ಳಿಗಳಲ್ಲಿ ಇದ್ದ ಕೆಲವೊಂದು ನೈಸರ್ಗಿಕ ವ್ಯಾಯಾಮದ ಪದ್ದತಿಗಳು ಇಂದೆಲ್ಲ ಮರೆಯಾಗಿ ಎಷ್ಟೋ ಜನರಿಗೆ ಅದರ ಹೆಸರೇ ಮರೆತುಹೋಗಿದೆ ಅಲ್ವೇ...? ಇಲ್ಲಿ ನಮ್ಮ ಮಹಿಳೆಯರಿಗೆ ಬಸರಿನ ಸಮಯದಲ್ಲಿ ಮಾಡಿಸುವಂತಹ ವ್ಯಾಯಾಮ ಹೀಗಿತ್ತು. ಮಡಿಕೆಯಲ್ಲಿ ಮೊಸರನ್ನು ಮಾಡಿ ಬೆಳಗಾದ ಮೇಲೆ ಮೊಸರನ್ನು ಕಡೆಯುವ ಕೆಲಸದಲ್ಲಿ ಮಹಿಳೆಯರ ಗಡಿಬಿಡಿಯ ತಲೆಬಿಸಿಗಳು ಇಂದು ಕಾಣ ಸಿಗುವುದು ಬಹಳ ಅಪರೂಪದ ದಿನಚರಿ. ನಾವೇಕೆ ಅದನ್ನೆಲ್ಲಾ ಮಾಡಬೇಕು? ನಾವೀಗ ಮುಂದುವರಿದ ಜನಾಂಗದವರು ಎಂದೇಳುವ ನಮ್ಮ ಮಹಿಳೆಯರಲ್ಲಿ ಅದನ್ನು ಮಾಡುವುದರಿಂದ ಏನು ಓಳಿತಿತ್ತು ಎಂದು ಪರಾಮರ್ಷಿಸುವ ಸೌಜನ್ಯತೆಯೂ ಸಹ ಇಲ್ಲದಿರುವುದು ವಿಪರ್ಯಾಸವೇ ಸರಿ ಎಂದೆನಿಸುತ್ತದೆ.

ಮೊದಲೆಲ್ಲ ಪ್ರತಿ ಮನೆಯಲ್ಲೂ ಕಡಲ್ಕಂಬ (ಮೊಸರು ಕಡೆಯುವ ಕಂಬ) ಮತ್ತು ಅದರ ಜೊತೆಗೆ ಕಡಲ್ಗೋಲು (ಮೊಸರು ಕಡೆಯುವ ಕೋಲು) ಇದ್ದೇ ಇರುತ್ತಿತ್ತು. ಇವೆಲ್ಲ ಏನು? ಅಂತ ಕೇಳಿದರೆ, ಕೆಲವರಿಗೆ ಹಿಂದೆಂದೂ ಕೇಳರಿಯದ ಶಬ್ಧ, ಇನ್ನೂ ಕೆಲವರಿಗೆ ಎಲ್ಲೋ ಕೇಳಿದ ನೆನಪು, ಮತ್ತೂ ಕೆಲವರಿಗೆ ಈಗ ಅವುಗಳೆಲ್ಲಾ ಎಲ್ಲಿ ನೋಡಲು ಸಿಗುತ್ತದೆ? ಎಂಬ ಆಶ್ಚರ್ಯ ಯಾಕೆಂದರೆ ಮೊಸರು ಕಡೆಯುವ "ಮೊಟಾರು ಮಷಿನ್" ಬಂದಿರುವುದರಿಂದ ಅವುಗಳೆಲ್ಲ ಮನೆಯಲ್ಲಿ ಮೂಲೆಗುಂಪಾಗಿದೆ ಅಥವಾ ಬಚ್ಚಲಮನೆಯ ಒಲೆಯನ್ನು ಬಿದ್ದು ಬೂದಿಯಾಗಿವೆ ಎಂಬ ವಿಷಾದದ ಭಾವ. ಸ್ವಲ್ಪವೇ ಸ್ವಲ್ಪ ಜನರಿಗೆ ಅದರ ಒಡನಾಟದ ಅನುಭವ ಈಗಲೂ ಸಿಗುತ್ತಿದೆ ಹಾಗಾಗಿ ಅದರಲ್ಲೇನಿದೆ ವಿಶೇಷವೆಂಬ ನಿರ್ಲಕ್ಷದ ಮಾತನಾಡುವವರಿರಬಹುದು.

ಮೊದಲು ಮೊಸರನ್ನು ಕಡೆಯಲು ಮಣ್ಣಿನ ಮಡಿಕೆಯ ಅಡಿಯಲ್ಲಿ ಹಿರ್ಕೆಯನ್ನು (ಬೆತ್ತದ ಎಳೆಗಳಿಂದ ಮಾದಿದ ಅಡಿ ಮಣೆ)  ಇರಿಸಿ ಕಡಲ್ಗೋಲನು ಮೊಸರಿನ ಮಡಕೆಯೊಳಗಿಟ್ಟು ಕಡಲ್ಕಂಬಕ್ಕೆ ಸಿಲುಕಿಸಿ ನೇಣನ್ನು ಕಟ್ಟಿ ಸೊರ...ಸೊರ ಎಂದು ಮೊಸರನ್ನು ಕಡೆಯಲು ಪ್ರಾರಂಭಿಸಿದರೆ ಸಾಬುವನ್ನು ತಿಕ್ಕಿದಾಗ ನೊರೆ ಬಂದಹಾಗೆ ಬೆಣ್ಣೆಯು ಮಜ್ಜಿಗೆಯ ಮೇಲೆ ತೇಲಿ ಬರುತ್ತಿದ್ದುದನ್ನು ನೋಡಲು ಖುಷಿಯ ಭಾವ ಕಡೆಯುವವರ ಮೊಗದಲ್ಲಿ ಮೂಡುತ್ತಿತ್ತು. ಮಕ್ಕಳು ಕದ್ದು ತಿನ್ನಬಾರದೆಂದು ಹುರಿಯ ಹಗ್ಗದಿಂದ ಮಾಡಿದ ಶಿಕ್ಕದ (ಹಗ್ಗದ ಜೋಳಿಗೆ) ಮೇಲೆ ಮಜ್ಜಿಗೆಯ ಬೊಡ್ಡೆಯನ್ನು ಇಡುತ್ತಿದ್ದರು. ಆದರೂ ಬೆಣ್ಣೆಯ ಬೊಡ್ಡೆಯೊಳಗೆ ಕೈ ಹಾಕಿ ಕದ್ದು ತಿನ್ನುತ್ತಿದ್ದ ಮಜವೇ ಬೇರೆ. ಆದರೆ ಇಂದಿಗೆ ಅವುಗಳೆಲ್ಲ ಮಾಸಿದ ಬರಿ ನೆನಪುಗಳು ಮಾತ್ರ.

ಮೊದಲೆಲ್ಲ ಏಳು ತಿಂಗಳು ತುಂಬಿದ ಮಹಿಳೆಯರಿಗೆ ಈ ಕೆಲಸವನ್ನು ಕೊಡುತ್ತಿದ್ದುದು ಬಹಳ ವಿಷೇಶವಾಗಿತ್ತು. ಯಾಕೆಂದರೆ ಗರ್ಭಿಣಿಯರಿಗೆ ಮೈ ಕೈಗಳೆಲ್ಲ ಆಡಲೆಂದು ಮತ್ತು ಮುಂದಾಗುವ ಹೆರಿಗೆ ಸರಾಗವಾಗಿ ಆಗಲಿ ಎಂಬ ಸದುದ್ದೇಶ ಇದರ ಹಿಂದಿರುತ್ತಿತ್ತು. ಮೊಸರನ್ನು ಕಡೆಯುವಾಗ ಕಡಲ್ಗೋಲಿಗೆ ಸುತ್ತಿದ ನೇಣನ್ನು ಹಿಡಿದು ಎಳೆಯುವಾಗ ಒಂದು ಕೈ ಮುಂದೆ ಮತ್ತೊಂದು ಕೈ ಹಿಂದೆ ಆಗುವುದರಿಂದ ಗರ್ಭಿಣಿಯರಿಗೆ ಸರಿಯಾದ ವ್ಯಾಯಾಮವಾಗಿ ಹೊಟ್ಟೆಯೊಳಗಿದ್ದ ಮಗು ಸರಾಗವಾಗಿ ಓಡಾಡಿಕೊಂಡು ಇರುತ್ತಿತ್ತು ಎಂಬ ನಂಬಿಕೆಯಿದೆ. ಇದು ಬರಿ ನಂಬಿಕೆ ಅಥವಾ ಮೂಢನಂಬಿಕೆಯಲ್ಲ, ಯಾಕೆಂದರೆ ಹಲವು ಜನರಿಗೆ ಸರಾಗವಾಗಿ ಹೆರಿಗೆಯು ಆಗಿದ್ದು ಸತ್ಯ ಎಂಬುದು ಬಹಳ ಜನರ ಮಾತು. ಇದರಿಂದಾಗಿ ಎರಡು ಕೆಲಸಗಳು ಜೊತೆಯಾಗಿ ಆಗುತ್ತಿತ್ತು. ಒಂದು ದೇಹದ ವ್ಯಾಯಾಮ ಇನ್ನೊಂದು ಅಗತ್ಯವಾಗಿ ಮಾಡಬೇಕಾದ ದಿನಚರಿಯ ಕೆಲಸ. ಹೀಗಾಗಿ ಆಗಿನ ಕಾಲದ ಬಸ್ರಿ ಹೆಂಗಸರಿಗೆ ಸಂಜೆ ಹೊತ್ತಲ್ಲಿ ಹೋಗುವ ವಾಯು ವಿಹಾರವಾಗಲಿ, ಹಾಸಿಗೆಯ ವಿಶ್ರಾಂತಿಯಾಗಲಿ ಬೇಕೆ ಆಗುತ್ತಿರಲಿಲ್ಲ. ಇವುಗಳನ್ನೆಲ್ಲ ಮಾಡದಿದ್ದರೂ ಹೆರಿಗೆ ಸರಾಗವಾಗಿ ಆಗಿ ಆರೋಗ್ಯದಿಂದಿರುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ.

ಇನ್ನೊಂದು ಮಾಸಿದ ನೆನಪು "ಯಸಮುಚ್ಲು" ಎಂದರೆ ಬಾಗಿಸಿದ ಅನ್ನವನ್ನು ಮಾಡುವಾಗ ಬಳಸುತ್ತಿದ್ದ ಚಪ್ಪಟೆಯಾಗಿರುತ್ತಿದ್ದ ಮರದಿಂದ ಮಾಡಿದ ಮುಚ್ಚಳ. ಇದನ್ನು ಬರಿ ಅನ್ನ ಬಾಗಿಸಲಿಕ್ಕಷ್ಟೇ ಅಲ್ಲ ಮಗುವಾದ ಮೇಲೆ ಚಿಕ್ಕ ಮಗುವಿನ ಸ್ನಾನ ಮಾಡಿಸಿ ತೊಟ್ಟಲಿನಲ್ಲಿ ಮಲಗಿಸುವಾಗ ಮಗುವಿನ ತಲೆಯ ಆಡಿಯಲ್ಲಿ ಇದಕ್ಕೆ ಬಟ್ಟೆಯನ್ನು ಸುತ್ತಿ ಇಡುತ್ತಿದ್ದರು. ಕಾರಣವೆಂದರೆ ಮಗುವಿನ ತಲೆಗೆ ಸುಂದರವಾದ ರೂಪ ಕೊಡುವುದಾಗಿತ್ತು. ಇದನ್ನು ತಲೆಯ ಅಡಿಯಲ್ಲಿಟ್ಟು ಮಗುವನ್ನು ಕೆಲ ತಿಂಗಳುಗಳ ಕಾಲ ಮಲಗಿಸಿದರೆ ಎಳೆಗೂಸಿನ ತಲೆಯ ಹಿಂಬದಿ ಉಬ್ಬು ತಬ್ಬುಗಳಿಲ್ಲದೆ ಸಮವಾದ ರೂಪ ಪಡೆಯಯುತ್ತಿತ್ತು. ಆಧುನಿಕವಾಗಿ ಬೆಳೆಯುತ್ತಿರುವ ನಾವು ಇಂತಹ ಹಲವು ಸೂತ್ರಗಳು ನಮ್ಮ ಅನುಕೂಲಕ್ಕೆ ಇರುತ್ತಿದ್ದವು ಎಂಬುದನ್ನು ಮರೆತು ಮರೆಯಾಗಿಸುತ್ತಿದ್ದೇವೆ ಎಂಬುದು ಅತ್ಯಂತ ಬೇಸರದ ಸಂಗತಿಯಾಗಿದೆ. ಈಗಲಾದರೂ ಅವುಗಳತ್ತ ಮುಖ ಮಾಡಿ ನಮ್ಮ ಹಳೆಯ ಒಳಿತಿನ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಮಹತ್ತರ ಕಾರ್ಯ ನಮ್ಮ ಹೆಗಲ ಮೇಲಿದೆ ಎಂಬುದನ್ನು ಜ್ಞಾಪಿಸಿಕೊಳ್ಳಬೇಕಾಗಿದೆ.

Friday, June 2, 2017

ಸಾಧ್ಯಸಾಧ್ಯ ಮರೆವು

ನೂಲ ನೂಕಿ
ಬೆಟ್ಟ ಬೀಳಿಸಿಬಹುದು
ನೀರು ತಾಕದ ಹಾಗೆ
ಸಪ್ತ ಸಾಗರ ದಾಟಲುಬಹುದು
ಹನಿ ಕಂಬನಿಯನೂ ಹರಿಸದೆ
ಮನದ ಪ್ರೀತಿ ಮರೆಯಲಾಗದು
ಅಸಾಧ್ಯವನು ಸಾಧಿಸಬಹುದು
ಆದರೆ
ಸಾಧ್ಯವನು ಮರೆಮಾಚುವುದೇ ಪ್ರೇಮ

ಸಂಜೆ ಸಮಯಕೆ
ಕಡಲ ತೀರಕೆ
ಒಂಟಿಯಾಗಿ ಬರಲು
ಹಕ್ಕಿ ಹಾಡಲು
ಆರ್ತನಾದವು ಕೇಳಿಸುತಿದೆ
ಏಕೆ ಮರೆಯ ಬೇಕು?
ಹೇಗೆ ತೊರೆಯಲಿ? ಸಾಕು

ಜೊತೆಯಾಗಿ ಅನುಕ್ಷಣ
ಕಳೆದಿರುವ ಯವ್ವನ
ಏಕಾಂತಕೆ ದಾರಿಯಾಯ್ತು
ತಿಳಿ ಸಂಜೆ ಸೊಗಸಲಿ
ಏಕಾಂಗಿ ಬೇಸರದಲಿ
ಸನಿಹ ನೆನಪಾಗದೇನು?
ಸಂಗಡ ಬರಬಾರದೇನು? ಹೇಳು