Monday, October 28, 2013

ಅರ್ಧ ಸತ್ಯ

ಮಾನದಲಿ ಸತ್ತಿರಲು
ಮೌನದಲಿ ಬೆಂದಿರಲು
ಏನೋ ಆಗಿರುವ ಬದುಕಿನಲ್ಲಿ
ನಡೆದ ಘಟನೆಗೆ ನಿಂದನೆಯೇಕೆ
ಪರರ ಮಾತಿಗೆ ಮಾನಕೆ ಅಂಜಿ
ಅಳಿಯುವ ಜೀವದ ಕಥೆಯಿದು ಕೇಳಿ...

ಯಾರೊ ಮಾಡಿದ ತಪ್ಪಿಗಿಂದು
ಜರಿಯುವ ಹೆಸರು ನನ್ನದೆಂದು
ಬದುಕು ಹೇಗೆ ಜಗದಲಿನ್ನು
ತೋಚದಂತ ಸಮಯದಲ್ಲಿ
ಜರಿಯುವ ಜನತೆಯ ಹೆದರಿಕೆಯಲ್ಲಿ
ಬದುಕುವ ಆಸೆಯ ಚಿವುಟಿರಲು
ಚರ್ಮಗೀತೆಯು ಕೇಳಿರಲು
ತುಳಸಿನೀರನು ಬಿಟ್ಟುತು ಬದುಕಿಗಿಂದು...

ಕೇಳಿದ ಮಾತುಗಳೆಲ್ಲ
ನಿಜದ ಕೂಸುಗಳಲ್ಲ
ನಂಬಿಕೆ ಮೂಡದೆ ನಿರ್ಣಯ ಬೇಡ
ಮಾಡದ ಕೆಲಸದಲ್ಲಿ
ಅಪರಾಧಿಯು ಯಾರಿಲ್ಲಿ
ಬಾಳಲು ಸ್ಪೂರ್ತಿ ತುಂಬಲು ಕಾರಣವು
ಬಿಂಬಿತ ಜೀವದ ಹಿಂದೆ ಇರುವುದು
ಗುರುತಿಗೆ ಕಾಣದ ಅರ್ಧ ಸತ್ಯವು...

Friday, October 25, 2013

...ತೋರಿಕೆಯ ಗೌರವಕೆ ಮಾತ್ರವಾದ ದಿನಾಚರಣೆಗಳು...

ವರ್ಷದಲಿ ಕೆಲವು ದಿನವನ್ನು ಮಾತ್ರ  ದಿನ  ದಿನವೆಂದು ಪ್ರತ್ಯೇಕವಾಗಿ ನಿಶ್ಚಿತ ದಿನವನ್ನಾಗಿ ಆಚರಿಸುವ ಸೌಜನ್ಯವನ್ನು ನಾವು ಹೊಂದಿದ್ದೇವೆ ಎಂದು ಬೀಗುವ ಜಾಯಮಾನದವರು. ಅಪ್ಪನಿಗೊಂದು ದಿನ, ಅಮ್ಮನಿಗೊಂದು ದಿನ, ಗೆಳೆಯರಿಗೋಂದು ದಿನ, ಪ್ರೇಮಿಗಳಿಗೊಂದು ದಿನ, ನೇತಾರರಿಗೊಂದೊಂದು ದಿನ, ಕಾರ್ಮಿಕರಿಗೊಂದು ದಿನವೆಂದು ಹೀಗೆ ಅರರಿವರಿಗೊಂದು ದಿನವೆಂದು ವಿಭಜಿಸಿ ವಿಂಗಡಿಸಲಾಗಿದೆ.

ಈಗಿನ ಯಾಂತ್ರಿಕ ಯುಗದಲ್ಲಿ ಹೀಗೆ ದಿನಗಳು ಬಂದಾಗಲೂ ಅದನ್ನು ವ್ಯಕ್ತಪಡಿಸಲು ಸಮಯ ಸಿಗದಿರುವುದು, ಮನುಷ್ಯನು ಯಾಂತ್ರಿಕ ಬದುಕಿನ ಕಾರ್ಯನಿರತೆಯಲಿ ತೊಡಗುವುದು ಎಷ್ಟರಮಟ್ಟಿಗೆ ಅಟ್ಟಹಾಸ ಮೆರೆಯುತ್ತಿದೆ ಎನ್ನುವುದನ್ನು ತಿಳಿಸುತ್ತದೆ. ಮೊದಲೆಲ್ಲ ತನ್ನವರಿಗೆ, ಒಳಿತನ್ನು ಬಯಸುವವರಿಗೆ, ಕಾರ್ಯ ತತ್ಪರರಿಗೆ ತನ್ನ ಸಮಯವನ್ನು ನೀಡುತ್ತಿದ್ದ ಮನುಷ್ಯ ಇಂದು ತೋರಿಕೆಯಲಿ ಗೌರವ ಸೂಚಿನುವ ಹಾಗಾಗಿರುವುದು ಖಂಡನೀಯ.

ಉಳಿದವರಿಗೆ ಗೌರವ ಸೂಚಿಸಲು ಸಮಯವಿಲ್ಲವೆಂದರೆ ಅದನ್ನು ಒಪ್ಪಿಕೊಳ್ಳಬಹುದು ಅಥವಾ ಅರ್ಥೈಸಿಕೊಳ್ಲಬಹುದು. ಆದರೆ ಹೆತ್ತವರನ್ನು ಸಹ ಪೂಜಿಸಲು, ಪ್ರೀತಿಸಲು ಮತ್ತು ಗೌರವಿಸಲು ಸಮಯವಿಲ್ಲವೆಂದಾಗ ನಗು ಬರುತ್ತದೆ. ಅವರಿಗು ಸಹ ಒಂದೊಂದು ದಿನವನ್ನು ಪತ್ಯೇಕಿಸಿಟ್ಟಿದ್ದು ವಿಪರ್ಯಾಸವೇ ಸರಿ. ಯಾರನ್ನು ಸರ್ವಕಾಲವು, ಸರ್ವ ಸಮಯವು ಎದೆಯಲ್ಲಿಟ್ಟುಕೊಂಡು ಆರಾಧಿಸುತ್ತಿರಬೇಕೊ ಅಂಥವರಿಗೆ ನಿರ್ಧರಿತ ದಿನವನ್ನು ಮಾಡಿರುವುದು ಹೀನ ಕಾರ್ಯವಾಗಿದೆ.

ಇನ್ನು ಕೆಲವರಂತು ಸಮಯವಿದ್ದರು ಸಹ ಬೇರೆಯವರು ಮಾಡುತ್ತಾರೆಂದು ತಾವು ಮಾಡಬೇಕೆನ್ನುವ ಮನಸ್ಥಿತಿಗೆ ಬಂದಿರುವುದು ಅನುಕರಣೆಯ ಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನನ್ನ ಶಾಲಾ ದಿನಗಳಲ್ಲಿ ಗುರುಗಳೊಬ್ಬರು ಹೇಳಿದ ನಿದರ್ಶನವೊಂದು ನೆನಪಾಗುತ್ತಿದೆ ಅದೇನೆಂದರೆ ಒಬ್ಬ ಸನ್ಯಾಸಿಯು ಕಡಲ ತೀರದಲಿ ಸ್ನಾನ ಮಾಡುವ ಮೊದಲು ತನ್ನ ಹಣವನ್ನು ಮುಚ್ಚಿಟ್ಟು ಗುರುತಿಗೋಸ್ಕರ ಮರಳಿನ ಶಿವಲಿಂಗವನ್ನು ಮಾಡಿಡುವ ಪದ್ಧತಿಯಿಟ್ಟುಕೊಂಡಿದ್ದ ಹೀಗೆ ನಡೆಯುತ್ತಿರುವಾಗ ಶಿವಲಿಂಗವನ್ನು ನೋಡಿದ ಉಳಿದವರು ಇಲ್ಲೇನೊ ಮರ್ಮವಿರಬೇಕು ಎಂದು ಗ್ರಹಿಸಿ ಭ್ರಮೆಯಿಂದ ತಾವು ಅದೆ ರೀತಿ ನೀರಿಗಿಳಿಯುವ ಮೊದಲು ಮರಳಿನ ಶಿವಲಿಂಗ ಮಾಡಿಟ್ಟು ಹೋಗುವ ಪದ್ಧತಿನ್ನು ಪ್ರಾರಂಭಿಸಿದರು. ಹೀಗೆ ಪ್ರಾರಂಭವಾದ ಪದ್ಧತಿಯು ಸಂಪ್ರದಾಯವೆಂದು ಬದಲಾದ ಹಾಗೆ ಇಂದಿನ  ದಿನಾಚರಣೆಗಳು ಸಹ ಹಾಗಾಗಿವೆ.

ಯಾರೋ ಮಾಡುತ್ತಾರೆಂದು ನಾವು ಸಹ ಅದನ್ನೆ ಮಾಡುವುದೆಷ್ಟು ಸರಿ ಎಂದು ಯೋಚಿಸುವ ಯೋಚನಾ ಶಕ್ತಿಯನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಮನುಷ್ಯ ತನ್ನ ವೃತ್ತಿ ಜೀವನದಲ್ಲಿ ಕಾರ್ಯತತ್ಪರತೆಯಲ್ಲಿ ಅವಿಶ್ರಾಂತನಾಗಿ ಯಾಂತ್ರಿಕ ಬದುಕಿನಲಿ ಮುಳುಗಿ ಹೋಗಿರುವನೆಂದು ಹೀಗೆ ವಿಭಜಿಸಿರುವ ದಿನಾಚರಣೆಗಳಿಂದ ತಿಳಿದು ಬರುತ್ತದೆ. 

 ದಿನಾಚರಣೆಗಳು ಕೇವಲ ತೋರಿಕೆಗಷ್ಟೆ ಸೀಮಿತವಾಗಿರುವುದು ದುರಾದೃಷ್ಟಕರವಾಗಿದೆ. ಅದರ ಹಿಂದಿನ ಸತ್ವವಿರುವ ತತ್ವಗಳನ್ನು ಅರ್ಥ ಮಾಡಿಕೊಳ್ಳದೆ ಬೇರೆಯವರು ಮಾಡುತ್ತಾರೆಂದು ತಾವು ಮಾಡುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ.  ದಿನದಂದು ಮಾತ್ರ ನಮ್ಮ ಗೌರವ ತೋರುತ್ತ ಬೆಳಕು ಹರಿಸಿದ ಸೂರ್ಯ ಮರೆಯಾಗಿ ಕತ್ತಲಾದಂತೆ ಮತ್ತದೆ ಅಹಂಕಾರದ ಅಂಧಕಾರಕ್ಕೆ ಮರಳುತ್ತಿರುವುದು ಸಮಂಜಸವೇ? ಎಂದು ಒಮ್ಮೆ ಯೋಚಿಸಿದಾಗ ಇವುಗಳನ್ನು ಮರೆತುಹೋಗುವ ಸಮದಲ್ಲಿ ಹೀಗೆ ನಿರ್ದಿಷ್ಟಪಡಿಸಿದ ದಿನಗಳು ಬಂದಾಗ, ಅಂದಾದರು ಗೌರವ ಸಮರ್ಪಿಸುತ್ತಾರಲ್ಲ ಎಂದು ವಿವೇಚಿಸ ಬೇಕಾಗಿರುವುದು ಇದರ ಹಿಂದಿನ ಸಂಗತಿ. ಉಳಿದ ದಿನಗಳಲ್ಲಿ ಹೇಗೆ ಇದ್ದರೂ ಪರವಾಗಿಲ್ಲ ಕನಿಷ್ಟ ಪಕ್ಷ   ದಿನವೊಂದಾದರು ಅವರಿಗೆ ಮನ್ನಣೆ ನೀಡಬೇಕೆಂದು ನಿರ್ಧಿಷ್ಟಪಡಿಸಿದ ದಿನವನ್ನು ನಿಗದಿಯಾಗಿರಿವುದು ಮನುಷ್ಯನಿಗೆ ಸಮಯದ ಅಭಾವವಿರುವುದನ್ನು ವ್ಯಕ್ತಪಡಿಸುತ್ತದೆ.

ದಿನಾಚರಣೆಗಳ ಹಿಂದಿನ ತತ್ವವನ್ನು ತಿಳಿದು ಅವಶ್ಯಕತೆ ಇದೆಯೆ ಎಂದು ಅವಲೋಕಿಸಿ ಸಂಭ್ರಮಿಸಿ ತೇಲೋಣ.

Thursday, October 24, 2013

|| ಹೇಳಲಾಗದ ಭಾವ ||

ಬೋಳಾದ ಮನೆಯಲ್ಲಿ
ಹಾಳಾದ ಎದೆಯಿಂದ
ಮೂಕ ವೇದನೆಯ
ಕೊರಗೊಂದು ಕೇಳುತಿದೆ ||

ತಲ್ಲಣದ ತವರಲ್ಲಿ
ಮುಂಜಾನೆಯ ಬೆಳಕಲ್ಲಿ
ಉರಿಯುತಿದೆ ಬದುಕಲ್ಲಿ
ಸ್ಪೋಟಕದ ಬೆಂಕಿ ||

ಯೊಚಿಸಲು ಅನುಮಾನ
ಆಗಿರುವುದು ಅವಮಾನ
ನಾನೇನನ್ನು ಮಾಡುವುದು
ಆಗದಿರುವ ದೂಷಣೆಗೆ ||

ತಡೆಯಲಾಗದ ನೋವು
ಹೇಳಲಾಗದ ಭಾವ
ಮನಸಿನಲೆ ಕುದಿಯುತಿದೆ
ಮಾಡದಿರುವ ಪ್ರಮಾದಕೆ ||

ಎಲ್ಲರನು ತೊರೆಯಲು
ಊರಾಚೆ ಓಡೋಗಲು
ಪಾಳುಬಿದ್ದ ನಿವಾಸಲಿ
ಒಬ್ಬಂಟಿಯ ರೋದನೆ ||

|| ಬಡತನದ ಬೆರಳು ||

ಬಡತನದ ಅರಮನೆಯ
ನಡುವಿನಲಿ ಕುಳಿತಿದೆ
ಅಕ್ಕಿಯನು ಆರಿಸುತಿರುವ
ಉಂಗುರವಿಲ್ಲದ ಬೆರಳು ||

ನುಚ್ಚಿನಲಿ ನುಸುಳುತ್ತ
ಕಲ್ಲನ್ನು ಅರಸುತ್ತ
ಗೆರಸಿಯಲಿ ಹುಡುಕುತಿದೆ
ಸಿಂಗಾರವಿಲ್ಲದ ಕೊರಳು ||

ಕಾರ್ಪಣ್ಯದಲಿ ಕಾಣದಿರಲಿ ಕಷ್ಟದ ಕನಸು
ಅಗದು ಮೆರೆಯುವ ಐಶ್ವರ್ಯದ ನನಸು
ಬಾಳಿನಲಿ ಬಾರದ ಭಾಗ್ಯವನು ಬಯಸುವುದು
ಇಚ್ಛಿಸಬಾರದು ಕೈಗೆಟುಕದ ಮಾಯಾಮೃಗಕೆ ||

ಮಂಕಾಗಿ ಮುಕ್ತವಾದ ಬದುಕಿನಲಿ
ಯಾರ್ಯಾರ ಪರಿಚಾರಣೆ ಮಾಡಲಿ
ಇನ್ನು ಅರಿವಿಗೆ ಬಾರದ ಗುಪ್ತಗಾಮಿನಿ
ಅಸುನೀಗಿ ಆಗಬಾರದೇ ಮುಕ್ತ ಮುಕ್ತ ||

ಅಕಿಂಚನತೆಯಲಿ ಏನನ್ನು ಯೋಚಿಸಲಿ
ಪಡೆಯಲಾಗದು ಬೇಕಾದ ರಿಕ್ತತೆಯನು
ಹಾರುವ ಮನಸನ್ನು ಮಲಗಿಸುತ
ಕಜ್ಜದಲಿ ಮಗ್ನವಾಯ್ತು ಬಡತನದ ಬೆರಳು ||

Monday, October 21, 2013

|| ವಿಶ್ವಾಸ ||

ಸೊರಗಿದ ಭಾವವಿಂದು
ನೋವಿನ ಮೋಡವಾಗಿದೆ
ಕಣ್ಣಂಚಿನ ಹನಿಯಾಗಿ
ಧರೆಗೆ ಸುರಿಯುತಿದೆ
ಮಿಂಚಿನ ಬೆಳಕಲ್ಲಿ
ಓದುವ ಉತ್ಸಾಹ
ಕಂಬನಿಯ ಬಿಸಿನೀರಲಿ
ಬೆಳೆಯುವ ಅಭಿಲಾಷೆ
ಆಗದಿರುವ ಹರ್ಷೋದ್ಗಾರವೆ
ಎದೆಯಲ್ಲಿನ ಗುಡುಗಾಗಿದೆ ||

ಕಾರ್ಮೋಡದ ಮರೆಯಲ್ಲಿ
ಅಡಗಿರುವ ಸೂರ್ಯನು
ಮಳೆ ಸುರಿದ ಮೇಲೆ
ಉರಿ ಬಿಸಿಲನು ತರುವಂತೆ
ಭರವಸೆಯ ಬಯಕೆಗಳು
ಚಿಗುರುವ ಮೊಗ್ಗಾಗದೆ
ಸೋತಿರುವ ಜೀವವು
ಗೆಲುವಿನ ನಗೆ ಬೀರದೆ
ಸಮಯದ ಸುಳಿಯಲ್ಲಿ
ಸಿಲುಕಿರುವ ಸೌಭಾಗ್ಯ
ವಿಶ್ವಾಸದಲಿ ಯಶಸ್ಸಿಗೆ ಕಾದಿದೆ ||

Thursday, October 10, 2013

|| ಪ್ರಲೋಭನ ||

ಅರಸಿ ಬಂದೆ ನಿನ್ನ ಹೊರತು
ಬದುಕಲಿ ಸಂಗಾತಿಯಿಲ್ಲವೆಂದು
ತೊರೆದು ಹೋದೆ ನಿನ್ನ ಮರೆತು
ಮನೆಗೆ ಸಾಗಲು ತಿಳಿಯದೆಂದು ||

ನಿನ್ನ ಮೋಹ ನನ್ನ ಕರೆದು
ಎಳೆದು ತರುವುದು ಇಲ್ಲಿಗೆ
ಜಗಕೆ ಕಾಣದಂತೆ ಬರಲು
ಕುಣಿತ ಕಾಣುವುದು ಬಾಹ್ಯಕೆ ||

ನೋವ ನೀಗುವ ಕಾಸು ಕಳೆಯುವ
ನಿನ್ನಿಂದ ವಿಸ್ಮೃತಿಯಲಿ ದೂರಾದರೆ
ಕುಡಿತಕೆ ಒಳಗಿನಿಂದಲೆ ಪ್ರಚೋಧನೆ
ಬಿಡಲಾಗದ ನೀನೆ ನನ್ನ ಪ್ರಲೋಭನೆ ||