Saturday, October 1, 2016

ಅಮಾವಾಸ್ಯೆಯಲು ಚಂದಿರ

ಅಮಾವಾಸ್ಯೆ ದಿನದಂದು
ಕಂಡೆ ಬೆಳದಿಂಗಳನು
ಜೊತೆಯಲ್ಲಿ ಇರುವಾಗ
ನಿನ್ನ ಕಂಗಳಲಿ

ಕ್ಷಣವೊಂದಗಲಿರಲಾರೆ
ಬಳಿ ಶಶಿಯ ತೊರೆದು
ಬಾಳ ಪಯಣದಲಿ
ಸಂಗಾತಿ ಸಂಪ್ರೀತಿಯಲಿ

ತಂಪು ಅಂಗಳದಲಿ
ಬಾನೆತ್ತರಕೆ ಮುಖಮಾಡಿ
ತಾರೆಗಳ ಎಣಿಸುವೆನು
ನಿನ್ನ ಕೈ ಬೆರಳಿನಲಿ

ಪಿಸುಮಾತ ಗುನುಗುತಲಿ
ಮೆಲ್ಲುಸಿರ ಸೋಕಿಸುತಲಿ
ಜಗವನ್ನೇ ಮರೆಯುವೆನು
ಮಗುವಾಗಿ ಮಡಿಲಿನಲಿ

ನಾ ಸೋತ ಹೊತ್ತಿನಲಿ
ಪ್ರೇರಣೆಯ ಮಾತೊಂದು
ಮುತ್ತಂತೆ ಉದುರಲಿ
ನಿನ್ನ ತುಟಿಗಳಲಿ

ಗಲುವಿನ ಗಳಿಗೆಯಲಿ
ಹರ್ಷದ ಮುಖ ನೋಡಲು
ಆಯಾಸ ನೀರಾಗುವುದು
ಕೊಬ್ಬು ಕರಗುವ ಬೆವರಿನಲಿ

ಅಲ್ಪ ಹೊಂದಾಣಿಕೆಲಿ
ಸ್ವಲ್ಪ ಮುಂಗೋಪವನು
ತಡೆದು ಒಂದಾಗಿರುವ
ನೋವು ನಲಿವಿನ ಬದುಕಿನಲಿ

Sunday, August 21, 2016

ಬಾಳಾಂಕಿತ

ಆ ಒಂದು ಸಂಪರ್ಕ
ಜೊತೆಯಾದ ಸಂದೇಶ
ತುಸು ನಾಚಿತು ಸವಿಗನಸು
ನಿನ ಸಂಗಡ ಬೆರೆಯಲು

ನಿರ್ವಿಕಾರ ಕಲ್ಪನೆಯಲಿ
ಮನಸಲ್ಲಿಳಿದೆ ಸ್ನೇಹದಲಿ
ಹರಟೆ ಸಂಕ್ಷಿಪ್ತ ಮಾತು
ಸ್ಪೂರ್ತಿಯಾಯ್ತು ಸಂಬಂಧಕೆ

ಕಾಲೆಳೆವ ಕೀಟಲೆಯ ದನಿ
ಹರ್ಷಕೆ ಕಾರಣವಾದ ಕಂಪನ
ಒಣಜಂಭ ಮುಂಗೋಪಿಗೆ
ಬಾವದಿಂದಾಗದ ತಿರಸ್ಕಾರ

ಸಮಯದ ಸಂಭಾಷಣೆ ತಿಳಿಸಿತು
ನಾವು ಸರಿಯಾದ ಜೋಡಿಯೆಂದು
ಕೈಪಿಡಿದು ಜೀವನವ ಮಾಡಲೋಗ್ಯವು
ಹೊಂದಿಕೊಂಡು ಒಂದಾಗಿ ನಾವಿಬ್ಬರು

ಸರಳ ನಡೆ ನುಡಿಗೆ
ಸೋತಿತು ಈ ಮನ
ಸೊಕ್ಕು ಸಮ್ಮತಿಸಿತು
ಮದುವೆಗೆ ಸಂಚಲನ

ಹಿರಿಯರ ಮಾತುಕತೆಲಿ
ಕಿರಿದಾದ ಭಾವಗೀತೆ
ಸಂಪ್ರೀತಿ ವಿನಿಮಯವು
ಹಾಕಿದೆ ಬಾಳಿಗೆ ಅಂಕಿತವ

Monday, August 1, 2016

ನಂಬಿಕೆಗೊಂದು ಕಲ್ಪನೆ

ಮಾತಿನಲಿ ಹೇಳಲಾಗದ ನಂಬಿಕೆ
ತನ್ನದೇ ಉಳಿವುಂಟು ಗತಕೆ
ಸೌಮ್ಯ ಸಮ್ಮತಿಯಿಹುದು ಬಲಕೆ
ಸ್ಪೂರ್ತಿ ನೀಡುತಿಹುದು ಜಗಕೆ

ಲಿಖಿತ ಲೇಖನ ಹಣೆ ಬರಹ
ಕಾಣದು ಗೀಚಿದ ಪದಗಳು
ಸಿಗವುದೆಂದೊ ಆ ಲೇಖನಿ
ಬೊಮ್ಮ ವಿಶ್ರಮಿಸಲೆಂದು ಕ್ಷಣಕೆ

ಸತತ ಸೃಷ್ಠಿಯ ಕರ್ಮಕೆ
ಗುಡಿಯಿರದು ಹುಟ್ಟಿಸಿದ ಫಲಕೆ
ಗೆಲುವಿಗುಂಟು ಸ್ವಾಮ್ಯದ ಜಂಭ
ಬವಣೆಗೆ ನೆಪ ಬ್ರಹ್ಮ ಬರಹ

ಯಕ್ಕಡದಲಿ ತುಳಿದರೂ ಬುಡದಲಿ
ಉಳಿ ಪೆಟ್ಟಿನ ಹೊಡೆತ ಅರಳಲು
ಅನಾವರಣ ಕಲ್ಪಿತ ಮೂರ್ತಿಗೆ
ಪೂಜೆ ನೈವೇದ್ಯ ತುಚ್ಛ ಶಿಲೆಗೆ

ಗರ್ಭ ಗುಡಿಯಲಿ ಕಾಣುವುದು
ನಂಬಿಕೆಗೊಂದು ಕಲ್ಪಿತ ರೂಪ
ಮಂದ ಬೆಳಕಿನಲಿ ಪ್ರಜ್ವಲಿಸುವುದು
ಬಾಳ ಬೆಳಗಿಸುವ ಆಧಾರ ದೀಪ

Friday, July 29, 2016

ಆಧಾರ ಸ್ತಂಭ

ನಂಬು ನನ್ನ ಜೀವವೆ
ಬದುಕು ಜಾರುಬಂಡಿಯಲಿ
ಸವೆಯುತ ಸಾಗುವೆ
ನಿನ್ನ ಗುಳಿಕೆನ್ನೆಯ ನಗುವಿಗಾಗಿ

ಭರವಸೆಯಿರಲಿ ಬಾಳಿನಲಿ
ನೀನಿಡುವ ಪ್ರತಿ ಹೆಜ್ಜೆಗೂ
ದೃಢ ಅಡಿಪಾಯ ನಾನಾಗುವೆ
ಆಧಾರ ತಪ್ಪದಂತೆ ನಡೆಯಲು

ಕಲಿವೆಯೋ ಹೊಲಿವೆಯೋ
ಇಷ್ಟಕ್ಕೆ ಸ್ಪಷ್ಟವಾದ ಗುರಿಯಿರಲಿ
ದಡ ತಲುಪಿಸುವ ನಾವಿಕನು ನಾ
ಜೀಕುತ ಸಾಗುವ ಹಾಯಿ ದೋಣಿಯಲಿ

ಹಾಡುವ ಸಂಗೀತಕೆ ಪದಗಳನು
ಮಾಡುವ ಪ್ರಯತ್ನಕೆ ಸ್ಪೂರ್ತಿಯನು
ಜೊತೆಯಲಿ ಬರುವ ಇಚ್ಛೆಯನು
ಕೊಡುವೆನೆಲ್ಲವನರಿತು ಮುನ್ನಡೆ ಹೆದರದೆಯೆ

ನನಸಾಗಿಸುವೆ ಮಾಸದ ಕನಸನು
ಮುತ್ತಾಗಿಸುವೆ ನುಡಿದ ಮಾತನು
ಉಚ್ಚತೆಯಿರುವುದು ಸಾಧಾರಣ ಜೀವನದಲಿ
ನಂಬಿಕೆಯನಿಡು ಆಧಾರ ಸ್ತಂಭದಲಿ

Wednesday, July 20, 2016

ಸಂಯುಕ್ತ

ಏಕಾಂತ ಮುರಿದು
ಏಕೈಕ ದನಿಯೊಂದು
ತಾನಾಗೆ ಹೊರಬರುವ
ಜಂಟಿಯಾದ ಘಳಿಗೆ

ಸಂಘವನು ತೊರೆದು
ಸಾಂಗತ್ಯ ಬೆಳೆದು
ಬದುಕಿನ ಮೈಲಿಗಲ್ಲು
ಜೊತೆಯಾದ ಕ್ಷಣವು

ಉಕ್ಕುತ್ತ ಬರುವ
ಅಡಗಿದ್ದ ಒಲವು
ಸಂಗಾತಿ ಸಂಪ್ರೀತಿ
ಜೀವನಕೆ ಜೊತೆಯಾಗಿ

ಕವಲಾದ ಬದುಕು
ಒಂದಾದ ಸಂಗಮ
ಸಂಗೀತ ಸಾಹಿತ್ಯ
ಸಂಯುಕ್ತ ಹಾಡು

Monday, July 18, 2016

ಜಾನಕಮ್ಮ ಹೇಳ್ತೋ

ಮುಸ್ಸಂಜೆ ಮಾತು ಚಲನಚಿತ್ರದ "ನಿನ್ನ ನೊಡಲೆಂತೋ.... ಮಾತನಾಡಲೆಂತೋ..." ಹಾಡಿನ ರಾಗಕ್ಕೆ ಹವ್ಯಕ ಭಾಷೆಯಲ್ಲಿ ನಾ ಬರೆದ ಸಾಲುಗಳು

ಹುಡುಗ:
ಜಾನಕಮ್ಮ ಹೇಳ್ತೋ
ಗಾಡಿಯೊಂದು ಬಂತೋ
ಕೂಸ್ನ ನೋಡಲಂತೋ
ಮಾಣಿ ಬಂದಂಗಾತೋ
ಓಹೋ ಕದ್ದು ಕಾಣಲೇ
ಹಿತ್ಲಬದಿ ತೋಟವ..
ಮುದ್ದು ಮುಖದ ನೋಟವ....

ಹುಡುಗಿ:
ಜಾನಕಮ್ಮ ಹೇಳ್ತೋ
ಗಾಡಿಯೊಂದು ಬಂತೋ
ನನ್ನ ನೋಡಲಂತೋ
ಮಾಣಿ ಬಂದಂಗಾತೋ
ಓಹೋ ಕದ್ದು ಕಾಣುವೇ
ಹಿತ್ಲಬದಿ ತೋಟವ..
ಮುದ್ದು ಮುಖದ ನೋಟವ....

ಹುಡುಗಿ:
ಅಡ್ಕೆ ಮರದ ತಂಪ್ಲಲಿ
ಹಸಿಜಡ್ಡಿನ ದಾರಿಲಿ
ಬೇರೆಬದಿಗೆ ಹೋಗಡ್ದೋ
ನನ್ನ ನೋಡುಲ್ ಮರೆಯಡ್ದೊ

ಹುಡುಗ:
ಕಂಬ್ಳಿ ಕೊಪ್ಪೆ ಹಾಕಿದ್ನೆ
ಚಂಡಕ್ಲ ಮರವ ಹತ್ತಿದ್ನೆ
ನಿನ್ನ ಹಂಬ್ಲ ಮಾಡ್ತಿದ್ನೆ
ಸೊಪ್ಪು ಕಡುಲೆ ಮರೆತಿದ್ನೆ

ಹುಡುಗ:
ಕತ್ತಿ ಎಲ್ಲೋ ಬಿತ್ತೋ.....
ಹುಡುಗಿ:
ಓ..ಓ...ಓ...ಓ....
ಹುಡ್ಕುಲೆಂತ ಆತೋ....
ಹುಡುಗ:
ನಿನ್ನ ನೆನಪೇ ಕಾಡ್ತು....
ಹುಡುಗಿ:
ತೊಂದ್ರೆ ಎಂಥ ಆತು....
ಹುಡುಗ:
ಎಲ್ಲ ಮರ್ತೆ ಹೋತು....
ಹುಡುಗಿ:
ಅದ್ಕೆ ಕತ್ತಿ ಕಳ್ದೋತು....
ಹುಡುಗ:
ಹೌದು ಮರಾಯ್ತಿ ಕಳ್ದೋತು...
ಹುಡುಗಿ:
ನನ್ನ ನೆನಪೆ ಆಕ್ತಿತ್ತು ಬಪ್ಲಕ್ ಹೊತ್ತು ಆಗೀತ್ತು.....
ಹುಡುಗ:
ನಿನ್ನ ನೆನಪೇ ಆಗ್ತಿತ್ತು....
ದಾರಿ ತಪ್ಪಿ ಹೋಗ್ತಿತ್ತು...

ಹುಡುಗ:
ಗೆಜ್ಜೆ ಶಬ್ಧ ಮಾಡಗಿದ್ದೆ
ಹೆಜ್ಜೆ ನೀನು ಹಾಕ್ತಿದ್ದೆ
ಕಲ್ಪನೆಯ ಮಾಡ್ಕತ್ತೆ
ನಿನ್ನ ಬಳಿಗೆ ಬಂದ್ಬುಟ್ನೆ

ಹುಡುಗಿ:
ದಾರಿ ನೀನು ತಪ್ಪಗಿದ್ದೆ
ನನ್ನ ಬಳಿಗೆ ಬಪ್ಲಕ್ಕೆ
ಹೆಜ್ಜೆಗೊಂದು ಗಜ್ಜೆಯಾ
ಕಟ್ಟಿ ನಾನು ಕಾದಿದ್ದೆ

ಹುಡುಗಿ:
ದಾರಿಯಲ್ಲಿ ಇಂದೂ...
ಹುಡುಗ:
ಓ..ಓ..ಓ...ಓ...
ಶಬ್ಧವೋಂದು ಬಂತೂ....
ಹುಡುಗಿ:
ಮನಸು ಹೇಳಿತಿಂದೂ...
ಹುಡುಗ:
ನಿನ್ನ ಬಳಿಗೆ ಬಂದೂ....
ಹುಡುಗಿ:
ಕದ್ದು ನೋಡು ಎಂದೂ...
ಹುಡುಗ:
ಹುಚ್ಚು ಆಸೆ ನಂದೂ....
ಹುಡುಗಿ:
ಕತ್ತಿ ಹುಡ್ಕು ಮಾರಾಯ....
ಹುಡುಗ:
ಬೇಣ್ದಲೆಲ್ಲು ಬಿದ್ದಿಲ್ಲೆ.... ಹಿಂಡಲ್ಲೆಲ್ಲೂ ಕಾಣ್ತಿಲ್ಲೆ...
ಹುಡುಗಿ:
ಅದ್ನ ಬಿಡು ಮಾರಾಯ ಶಾಸ್ತ್ರ ಮುಗ್ಸೊ ಸುಬ್ರಾಯ....
ಹುಡುಗ:
ಅದ್ನೆ ಮಾಡ್ತ್ನೆ ಮಾರಾಯ್ತಿ ಕೈಯ ಹಿಡಿತ್ನೆ ಗಾಯಿತ್ರಿ....

ಜೋಡಿಲಿ:
ಮುದ್ದು ಮುಖದ ನೋಟವ
ಕದ್ದು ನೋಡೋ ಕಾಟವ

Monday, July 11, 2016

ಬದುಕಿದ್ದಾಗಲೇ ಬಾ

ಜೊತೆಯಾಗಿ ಬಂದೆ
ನೀನೇತಕೆ?
ಖುಷಿಯಾಗಿ ಹೋದೆ
ಓ ದೇವತೆ
ಎನನ್ನ ಕಂಡೆ
ಮಾಯಾ ಜಿಂಕೆಯಲಿ
ಈ ಜೀವ ತೊರೆದೆ
ನಿಷ್ಕಾಳಜಿಯಲಿ

ನೀರು ತಾಗದ ಹಾಗೆ
ಆ ಕಡಲ ದಾಟಬಹುದು
ಕಂಬನಿ ಸುರಿಯದ ಹಾಗೆ
ಈ ಪ್ರೀತಿ ಮರೆಯಲಾಗದು
ತುಸು ಜಂಬ ಜರಿದು
ನೀ ಬಾ ನನ್ನ ಬಾಳಿಗೆ

ಚಾತಕ ಪಕ್ಷಿ ನಾನಾಗಿ
ನನ್ನ ಕತ್ತು ಉದ್ದವಾಗಿ
ಬಳಿ ಬಾರದೆ ಮುದ್ದಾಗಿ
ಬಹು ದೂರ ಓಡೋಗಿ
ಕಾಯುವ ಕೆಲಸ ನನದಾಗಿ
ಸ್ವಾಧವಿಲ್ಲದ ಬದುಕು ನನಗಾಗಿ

ತೊರೆದ ಬಯಕೆ ಅರಿತಾಗ
ದೊರೆತ ಬದುಕು ಅಳಿದಾಗ
ಕನಸಾಗದ ಕಲ್ಪನೆ ಕಂಡಾಗ
ರೋಧಿಸದ ಭಾವನೆ ಮಡಿದಾಗ
ಬಾಳ ಸಾರಥಿಯ ನೆನಪಾದಾಗ
ಓಡಿ ಬಾ ಸಂಗಾತಿ ಬದುಕಿದ್ದಾಗ

Thursday, June 16, 2016

ಮೌನಾಂಕಿತ

ನಿನ್ನ ಮೌನ
ನನ್ನ ಎದೆಯಲಿ
ಕಚಗುಳಿಯಿಟ್ಟ ಗೀತೆ
ಬರೆಯಲಾಗದ ಕವಿತೆ

ಕಳ್ಳ ನೋಟ
ಮುದ್ದು ಮನಸಲಿ
ಆಕರ್ಷಿತವಾತ ಬಯಕೆ
ಜೀವನದ ಪಯಣಕೆ

ತುಸು ಮಾತು
ಸಮ್ಮತಿ ಸೂಚಿಸಿತು
ನೀನೆ ಸೂಕ್ತ ಸಂಸಾರಕೆಂದು
ಉಳಿದೆಲ್ಲವು ಗೌಣವೆಂದು

ಸುಪ್ತ ಸಾಗರದಲಿ
ನಿನ್ನೊಲವು ಅಪ್ಪಳಿಸುವಂತೆ
ಭಾವನೆಗಳ ಅಲೆಗಳು
ಅಂಕಿತವ ಹಾಕಿತು ನಿನಗಾಗಿ

Monday, May 9, 2016

ಕಣ್ಣಾ ಮುಚ್ಚೆ ಕಾಡೆ ಗೂಡೆ ಉದ್ದಿನ ಮೂಟೆ ಉರುಳಿ ಹೋಯ್ತು

ಸಾಂದರ್ಭಿಕ ಸನ್ನಿವೇಶ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತಿರುವುದು ಸಹಜ. ನಾವು ಬೆಳೆದ ದಿನಗಳನ್ನು ಹಿಂತಿರುಗಿ ಇಣುಕಿ ನೋಡಿದರೆ ಬಹಳ ವಿಸ್ಮಿತ ಆಟೋಟಗಳು ನೆನಪಿಗೆ ಬರುತ್ತವೆ. ಆದರೆ ಇದೀಗ ಕಾಣುವುದು ಕ್ರಿಕೇಟ್ ಎಂಬ ಆಕರ್ಷಣೀಯ ಆಟದ ದಿನಗಳು ಒಂದಿನವಾಗಿ ಈಗೀಗ ಕ್ಷಣವಾಗಿದೆ. ಹೊರಂಗಣ ಕ್ರೀಡೆಗಳು ಮಕ್ಕಳನ್ನು ಸಮಾಜಮುಖಿಯಾಗುವಂತೆ ಮಾಡುತ್ತದೆ. ವ್ಯವಹಾರಿಕ ವಿವೇಚನೆಯನ್ನು ಮಾಡುತ್ತದೆ. ಅದಲ್ಲದೆ ಕಣ್ಣಮುಚ್ಚಾಲೆ ಹೊಸತು ಹುಡುಕುವಂತೆ ಪ್ರೇರೇಪಿಸುತ್ತದೆ. ಬಹುಷ್ಯಹ ಸಮ್ಮ ನಗರಗಳಲ್ಲಿ ಆಗುತ್ತಿರುವ ಹುಡುಗ/ಹುಡುಗಿಯರ ಉಪಟಳಗಳನ್ನು ಆಧರಿಸಿ ಒಂದು ಹಾಡು ಬರೆದರೆ ಅದು ಹೀಗೆ ಪ್ರಾರಂಭವಾಗಬಹುದು.
"ಎಲ್ಲೆಲ್ಲಿ ನೋಡಲಿ
ಕ್ರಿಕೇಟನ್ನೇ ಕಾಣುವೆ
ರೋಡಲ್ಲಿ ತುಂಬಿರುವೆ
ಕಿಡಕಿ ಗಾಜು ಒಡೆದು ಆಡುವೆ"
ಅಂದು ಕಣ್ಣ ಮುಚ್ಚೆ ಆಟ ಆಡುತ್ತಿದ್ದ ಜಮಾನವಿಂದು ಗಲ್ಲಿ ಗಲ್ಲಿಯಲು ಆಡುವ ಕ್ರಿಕೆಟ್ ಯುಗವಾಗಿದೆ. ಮೊನ್ನೆ ಮೊನ್ನೆಯಷ್ಟೆ ಮುಗಿದ ವಿಶ್ವಕಪ್ ಸರಣಿಯ ಮುಂಬದಿಗೆ ಆಯ್.ಪಿ.ಎಲ್ ಎಂಬ ಮತ್ತೊಂದು ಸರಣಿಯ ಸೆಳೆತ ಕ್ರಿಕೇಟಿಗರನ್ನು ಆವರಿಸಿದೆ. ಬಿಡುವಿಲ್ಲದ ಸಮಯದಲ್ಲಿ ಕೆಲಸ ಬಿಟ್ಟು ನೋಡುವ ಹಾಗೆ ಮಾಡುತ್ತಿದೆ. ಇಂತಹ ದಿನಗಳಲ್ಲಿ ನಮ್ಮ ಪೂರ್ವಜರು ಕಲಿಸಿಕೊಟ್ಟ ನೀತಿಯುಕ್ತ ಆಟದ ನೆನಪಾಗುತ್ತದೆ.

ಎರಡು ದಶಕಗಳ ಕಾಲ ಹಿಂದೆ ಹೋದರೆ ನಾವು ಆಡುತ್ತಿದ್ದ ಕಣ್ಣ ಮುಚ್ಚೆ ಕಾದೆ ಗೂಡೆ ನೆನಪಿಗೆ ಬರುತ್ತದೆ. ಅಂತಹ ಆಟಗಳು ಇಂದು ನಮ್ಮ ಕಣ್ಣಿಗೆ ಸಿಗುವುದು ಬಹಳ ವಿರಳವಾಗಿದೆ. ಯಾಕೆಂದರೆ ನಮ್ಮ ಹಳ್ಳಿಯ ಹುಡುಗರೂ ಸಹ ಕ್ರಿಕೇಟ್ ಎಂಬ ಸಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ. ಕಣ್ಣಮುಚ್ಚಾಲೆ, ಲಗೋರಿ, ಕವಡೆ ಆಟ, ಮುಟ್ಟು ಆಟ, ಚಿಣ್ಣಿ ದಾಂಡು ಹೋಗಿ ಚೆಂಡು ದಾಂಡು ಆಗಿರಲು ಹೀಗೆ ಮುಂಚಿನ ಆಟಗಳು ಎಲ್ಲಿ ಮರೆಯಾದವೂ...? ಅಳಿಯಿತೇ...? ಅಳಿವಿಗೆ ಕಾರಣಗಳೇನು...? ಎಂದು ಹತ್ತು ಹಲವಾರು ಪ್ರಶ್ನೆಗಳು ನಮ್ಮ ಕಾಡುತ್ತವೆ. ಇವುಗಳಿಗೆ ಉತ್ತರ ಹುಡುವುದಕ್ಕಿಂತ ಮೊದಲು ಏನಕ್ಕಾಗಿ ಉತ್ತರ ಹುಡುಕ ಬೇಕು ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದು ಉತ್ತಮ.

ಮೊದಲಿನ ಆಟಗಳಲ್ಲಿ ನೀತಿಯಿರುತ್ತಿತ್ತು. ಅದು ಹೇಗೆಂದು ಯೋಚಿಸಿದಾಗ ನಮ್ಮ ಹುದುಗ/ಹುಡುಗಿಯರು ಆಡುತ್ತಿದ್ದ ಕಣ್ಣಮುಚ್ಚಾಲೆ ಎಂಬ ಸರಳ ಸಜ್ಜನಿಕೆಯ ಆಟ ನೆನಪಿಗೆ ಬರುತ್ತದೆ. ಆಟದ ತಿರುಳಾರ್ಥ ಎಷ್ಟು ಜನರಿಗೆ ತಿಳಿದಿದೆ ಎಂದು ಕೇಳಿದರೆ ಒಂದೇ ಒಂದು ಕೈ ಸಹ ಮೇಲಕ್ಕೆ ಬರುವುದಿಲ್ಲ. ನಮ್ಮ ಶಿಕ್ಷಣ ಈಗ ಹೇಳುತ್ತಿದೆ ಕಲಿ ನಲಿಯ ಮೂಲಕ ನಡೆದ ಶಿಕ್ಷಣ ಮಕ್ಕಳ ಬುದ್ಧಿಮತ್ತೆ ಸೇರುತ್ತದೆ ಎಂದು. ಆದರೆ ನಮ್ಮ ಪೂರ್ವಜರು ಮೊದಲೆ ಅದನ್ನು ಅರಿತು ಚಿಕ್ಕ ಚಿಕ್ಕ ಮಕ್ಕಳಿರುವಾಗಲೆ ಅವರಿಗೆ ನಮ್ಮ ಸಂಸ್ಕಾರ ಕಥನದ ತಿಳುವಳಿಕೆಯಾಗುವಂತೆ ಆಟಗಳಲ್ಲಿ ಬಳಸಲಿಕ್ಕೆಂದು ಪುಟಗಟ್ಟಲೆ ಇದ್ದ ಮಹಾ ಕಾವ್ಯದ ತಿರುಳನ್ನು ನಾಲ್ಕೈದು ಸಾಲುಗಳಲ್ಲಿ ಹೇಳಿ ಚಿಣ್ಣರೂ ಸಹ ಅದನ್ನು ಅರಿತು ತಿದ್ದಿ ನಡೆಯುವಂತೆ ಮಾಡಿದ್ದಾರೆ.

ಕಣ್ಣಾ ಮುಚ್ಚೇ....
ಕಾಡೇ ಗೂಡೇ....
ಉದ್ದಿನ ಮೂಟೆ....
ಉರುಳೇ ಹೋಯ್ತು....
ನಮ್ಮಯ ಹಕ್ಕಿ ...
ನಿಮ್ಮಯ ಹಕ್ಕಿ ....
ಬಿಟ್ಟೇ ಬಿಟ್ಟೆ ...

ನಮ್ಮ ಹಿಂದಿನವರು ಮಕ್ಕಳಾಟಗಳಲ್ಲೂ ಸಹ ಎಷ್ಟು ಚೆನ್ನಾಗಿ ರಾಮಾಯಣದ, ಮಹಾಭಾರತದ ಕತೆಗಳನ್ನು ಜೋಡಿಸಿ ಹೆಣೆಯುತ್ತಿದ್ದರು ಇದೇ ಸಾಕ್ಷಿ. ಅಂಥಹ ಒಂದು ರಾಮಾಯಣದ ಕಥೆಯ ನಿರೂಪಣೆ ಮೇಲಿನ ಆಟದಲ್ಲಿದೆ. ಅದು ಹೇಗಂದು ನೋಡಿದರೆ...
"ಕಣ್ಣಾ ಮುಚ್ಚೆ " -
ಅಂದರೆ ಅಯೋಧ್ಯೆಯ ಮಹಾರಾಜ "ದಶರಥ" ಕಣ್ಣು ಮುಚ್ಚಲು
"ಕಾಡೇ ಗೂಡೆ "-
ಶ್ರೀರಾಮಚಂದ್ರನಿಗೆ ಕಾಡೇ ಮನೆಯಾಯಿತು
"ಉದ್ದಿನಮೂಟೆ" -
ಅಹಂಕಾರದಿಂದ ಉದ್ದಿನ ಬೇಳೆಯಂತೆ (ಮೂಟೆಯಂತೆ) ಉಬ್ಬಿಹೋಗಿದ್ದ ರಾವಣನನ್ನು
"ಉರುಳೇ ಹೋಯ್ತು" -
ಯುದ್ಧದಲ್ಲಿ ರಾಮ ಹೊಡೆದು ನೆಲಕ್ಕುರುಳಿಸಿದ. ಅದೆ ಸೊಕ್ಕಿನ ಮೂಟೆ, ಅದೇ ಉದ್ದಿನ ಮೂಟೆ ಉರುಳೇ ಹೋಯ್ತು
"ನಮ್ಮಯ ಹಕ್ಕಿ, ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ"
ಸಾತ್ವಿಕನಾದ ವಿಭೀಷಣ (ರಾವಣನ ತಮ್ಮ) ಸೀತೆಯನ್ನು ಗೌರವಾಧರಗಳಿಂದ ತಂದು ಶ್ರೀರಾಮನಿಗೊಪ್ಪಿಸಿದ
ರಾವಣ ತಿಳಿದಂತೆ ಇದು ನಮ್ಮ ಹಕ್ಕಿ ಅಲ್ಲ , ನಿಮ್ಮಯ ಹಕ್ಕಿ 
ಬಿಟ್ಟು ಕಳಿಸಿಕೊಡುತ್ತಿದ್ದೇವೆ ಸ್ವೀಕರಿಸಿ, ಎಂದು ರಾಮ ಲಕ್ಷ್ಮಣರನ್ನು ಪ್ರಾರ್ಥಿಸಿದ.

ಅರ್ಥದಲ್ಲಿ ಇಡೀ ರಾಮಾಯಣದ ಕಥೆಯನ್ನು ಮಕ್ಕಳಾಟದಲ್ಲಿ ಪೋಣಿಸಿದವರು ನಮ್ಮ ಹಿಂದಿನ ತಲೆಮಾರಿನವರು. ಹೀಗಿದೆ ನೋಡಿ ಅರ್ಥ "ಕಣ್ಣಾಮುಚ್ಚಾಲೆ" ಆಟಕ್ಕೆ. ಈಗಿನ ಕಾಲದಲ್ಲೂ ಹಳ್ಳಿಗರ ಬಾಯಲ್ಲಿ ಹೀಗೆಲ್ಲ ರಾಮಾಯಣದ ಕಥೆ ಹರಿದಾಡುತ್ತಿರುವಾಗ, ತ್ರೇತಾಯುಗದಲ್ಲಿ ಜನಿಸಿದ್ದ (ಭಗವಂತ) "ಶ್ರೀರಾಮಚಂದ್ರ" ಎಂಥಾ ಪ್ರಸಿದ್ಧ ರಾಜನಾಗಿದ್ದ? ಎಂಥಾ ವ್ಯಕ್ತಿತ್ವ ಹೊಂದಿದ್ದ? ಎನ್ನುವುದು ನಮ್ಮ ಊಹೆಗೂ ಮೀರಿದ ಸಂಗತಿಯಾಗಿದೆ.

ಆದರೆ ಇಂದಿನ ಕ್ರಿಕೇಟ್ ನಮ್ಮ ಮಕ್ಕಳಿಗೆ ಸಂಸ್ಕಾರ ಕೊಟ್ಟು ಒಳಿತನ್ನ ಮಾಡುವುದಿರಲಿ ಒಳ್ಳೆಯ ಮಕ್ಕಳನ್ನು ಒಳ್ಳೆಯವರಾಗಿರಲು ಬಿಡುವುದಿಲ್ಲ ಯಾಕೆಂದರೆ ಪಿಕ್ಸಿಂಗ್, ಬೆಟ್ಟಿಂಗ್ ಎನ್ನುವ ಕೆಂಬೂತದ ಛಾಯೆ. ಹಿಂದಿನ ಆಟಗಳು ನಮಗೆ ಪುಸ್ತಕದ ಬದನೆಕಾಯಿಯನ್ನು ತಿಳಿಸದೆ ನಿಜ ಜೀವನದ ಮೌಲ್ಯಗಳನ್ನು ಸಾರುತ್ತಿದ್ದವು. ಇಂದಿನ ಎಷ್ಟು ಮಕ್ಕಳಿಗೆ ಗೊತ್ತು ನಮ್ಮ ಮಹಾ ಕಾವ್ಯಗಳಾದ ರಾಮಾಯಣ, ಮಹಾಭಾರತದ ಮೌಲ್ಯ...? ಮೊಬೈಲ್, ಟಿ.ವಿ, ಕಂಪ್ಯೂಟರ್ ಗೇಮ್ಸ್ ಇಂತಹವುಗಳನ್ನ ಬಿಟ್ಟರೆ ಇನ್ನೊಂದು ಗೊತ್ತಿರುವುದೆಂದರೆ ಕ್ರಿಕೇಟ್. ಹಿರಿಯರಾದ ನಾವು ನಮ್ಮ ಮುಂದಿನ ಪೀಳಿಗೆಗಳಿಗೆ ಹಳೆಯ ಆಟಗಳನ್ನು ಕಲಿಸಿ ಮಹಾ ಕಾವ್ಯಗಳ ತಿರುಳನ್ನು ಚಿಕ್ಕ ಸಾಲಿನ ಮೂಲಕ ಹೇಳಿ ಮೌಲ್ಯ ತಿಳಿಯುವಂತೆ ಮಾಡಬೇಕಾಗಿದೆ.

ವಿನಾಯಕ ಭಾಗ್ವತ ಬೆಟ್ಟೆಮನೆ
ನೀಲಕೋಡು

Sunday, April 24, 2016

ಕೊನೆ ಕ್ಷಣಕೂ ಭರವಸೆ

ಬದುಕಿನ ಚೈತನ್ಯವು
ಈ ಜೀವದ ತ್ರಾಣ
ನೀನುಳಿಸು ನನ್ನ ಪ್ರಾಣ
ನಿನ್ನ ಖುಷಿಯ ಒಳಿತು
ನನ್ನ ಜನ್ಮದ ಗುರಿಯು
ಎಂದಿದ್ದ ನಾನೇ ಕೊಡಿತಿರುವೆ
ಮರೆಯಲಾಗದ ಉಡುಗೊರೆಯ

ಬೆವರ ಹರಿಸಿ
ಬೆಳಸಿದ ಗುಲಾಬಿ ಗಿಡವು
ಹೂ ಬಿಡುವ ಮನ್ನವೇ
ಎದೆಯಾಳ ಚುಚ್ಚಿತು
ಮದುವೆಗೆ ನೀ ಬಂದು
ನಮ್ಮನ್ನು ಹಾರೈಸು
ನೋವಾದ ಜಾಗಕೆ
ಹೂ ಎಸಲಿನಿಂದ ಸಂತೈಸು
ನೀನಿರದ ಹೊಸ ಬಾಳಲಿ
ನಲಿವಿರಲಿ ಎಂದು

ಜೊತೆಯಾಗಿ ಕಲ್ಪಿಸಿದ
ಉಡುಪನ್ನು ತೊಡುವೆ
ಬಿಳಿ ಪಂಚೆ ಶಲ್ಯಕೆ
ನೋವಿನ ಕಲೆಯಾದರೆ
ಮರೆಮಾಚುವೆ
ನಗು ಮೊಗದ ನಾಟಕಕೆ
ನೀ ಸೂತ್ರ ಹರಿದುಬಿಡು

ಆ ದೇವ ಅಂದಾನು
ಕೊನೆಯಲ್ಲಿ ತಥಾಸ್ತು
ನಾ ಮೆಚ್ಚಿ ಕೊಡಿಸಿದ
ಜರತಾರಿ ಸೀರೆಯಲಿ
ಬಂದುಬಿಡು
ನೋವಾದರೂ ನಾ ಕರೆದ
ನನ್ನ ಮದುವೆಗೆ

Tuesday, March 29, 2016

ನಿಸ್ವಾರ್ಥವೆಲ್ಲಿದೆ!!

ಸ್ವಾರ್ಥವೆಲ್ಲಿದೆ ಸ್ವಾರ್ಥವೆಲ್ಲಿದೆ
ಎಂದು ಕೇಳುವ ಪ್ರಮೇಯವಿಲ್ಲಾ
ಆದಿ ಅಂತ್ಯದ ನಡುವಿನಲ್ಲಿ
ಬಂದು ಹೋಗುವ ತೃಣವಿನಲ್ಲೂ
ಹೇಳಲಾಗದು ನಿಸ್ವಾರ್ಥವೆಲ್ಲಿದೆ.

ಸ್ವಾರ್ಥಿಯು ತಾನೆಂದು
ಪೇಳುವವರಾರಿಲ್ಲ
ವಿಶಾಲ ಮನಸಿಗನಿಗೂ
ತಾನೊಬ್ಬನೆ ನಿಸ್ವಾರ್ಥಿಯಾಗಿರಬೇಕೆಂಬ
ಮನದಿಚ್ಛೆಯಿರುವುದು.

ಸ್ವಾರ್ಥವಿರದ ಮನುಜನಿಲ್ಲ
"ಸರ್ವೇ ಜನಾಃ ಸುಖಿನೋ ಭವಂತು"
ಪ್ರಾರ್ಥನೆಯ ತುದಿಯಲ್ಲಿ
ಎಲ್ಲರಿಗಿಂತ ನನಗೋಂದು ಚೂರು
ಜಾಸ್ತಿ ಒಳ್ಳೆಯದಾಗಲಿಯೆಂಬ ವಿನಂತಿ.

ಸ್ವಾರ್ಥವಿಲ್ಲದವನಾರೆಂದು ಕೇಳಿದರೆ
ಜನರ ಬಾಯಲ್ಲಿ ಬರುವುದು "ದೇವ"ನೆಂದು
ಅವನಿಗೂ ಸ್ವಾರ್ಥವಿದೆಯೆಂದರೆ ತಪ್ಪಾಗದು!!
ಬೇರೆ ದೇವನಿಗಿಂತ ಹೆಚ್ಚು ಭಕ್ತರು
ತನಗಿಹರೆಂದು ಬೀಗಬೇಕೆಂದು!!

ದೇವನೊಬ್ಬನಾದರೆ ನಾಮ ಹಲವು
"ನಾಮ"ಗಳಿಗೂ ಸ್ವಾರ್ಥವಿದೆಯೆನ್ನಬಹುದು
ಸರ್ವಸಂಗ ಪರಿತ್ಯಾಗಿ ಯಾದರೂ
ಅವನಂತರಾಳದಲಿ ಸ್ವಾರ್ಥವಿರಬಹುದು
ತನ್ನನುಯಾಯಿಗಳಿಗೆ "ಮೋಕ್ಷ"ಸಿಗಲೆಂದು!!

ಸ್ವಾರ್ಥವು ಬಿಡದು ಅಗೋಚರವನ್ನು
ಆಕಾರವಿರದ ಅಲ್ಲಾಃನಿಗೂ
ಸ್ಪುರದ್ರೂಪಿಯಾಗಬೇಕೆಂಬ ಬಯಕೆ!!
ಶಿಲುಬೆಯೇರಿರುವ ಏಸುವಿಗೆ
ನಿಲ್ಲುಲು ನೆಲ ಸಿಗಲೆಂಬ ಹಂಬಲ!!

ಸ್ವಾರ್ಥವಿದೆ ಹುಸಿದು ತಿನ್ನುವ ಪ್ರಾಣಿಗಳಲಿ
ಹರೆಯುವ ಕ್ರಿಮಿ ಕೀಟಗಳಲಿ
ತನಗೊಂದೆ ಆಹಾರ ಸಿಗಲೆಂಬ ಯೋಚನೆ
ಹಾರುತ ಹಾಡುವ ಪಕ್ಷಿಗಳಿಗೂ
ತನ್ನ ಹಾಡನ್ನೇ ಎಲ್ಲ ಕೇಳಲೆಂಬ ಮಿಡಿತ!!

ಹಸಿರಿಗೆ ಹೆಚ್ಚೆಚ್ಚು ಉಸಿರಿತ್ತು ಸಾರ್ಥಕವಾಗುವಾಸೆ!!
ಶಿಲೆಗೆ ಬಹು ಚಂದದ ಶಿಲ್ಪವಾಗುವಾಸೆ
ಮಣ್ಣಿಗೆ ತುಂಬುವ ಫಸಲು ನೀಡುವಾಸೆ
ಬೆಟ್ಟಗಳಿಗೆ ಬಾನೆತ್ತರ ಬೆಳೆಯುವಾಸೆ
ಜೀವವಿರದ ನಿರ್ಜೀವಿಗಳಿಗೂ ಸ್ವಾರ್ಥವಿದೆ..!!

Monday, March 21, 2016

ದೃಢ ಆತ್ಮವಿಶ್ವಾಸ

ನಿನ್ನ ತುಂಬು ಕಿಸೆಯ ಭಾರಕೆ
ಹಲವು ಸ್ನೇಹಿತರು ಸಂಗಕೆ
ನಿನ್ನ ನಗುವಿನ ಮೆರವಣಿಗೆ
ಬಹಳ ಬಂಧುಗಳು ಜೊತೆಗೆ
ಗೆಲುವಿನಲಿ ಸುತ್ತ ನಿಲ್ಲುವವರು
ಸೋಲಿನಲಿ ಕೈ ಹಿಡಿಯರು

ಸತ್ತ ಮನಸಲಿ ಸೂಕ್ಷ್ಮತೆಯಿರದು
ಬಂದಿದ್ದ ಎದುರಿಸಲು ಹಿಂಜರಿಯದು
ಬಳಿಗೆ ಬರುವ ಜನರಿಗೆಲ್ಲ
ಸಿಹಿ ನಗುವನು ಚಪ್ಪರಿಸು
ನೋವ ನುಂಗಿದ ಜೀವದೊಳಗೆ
ನಲಿನಿನ ಮುಖವಾಡದ ಛಾಯೆ


ಹೊಂಡಕ್ಕೆ ಬಿದ್ದ ವ್ಯಕ್ತಿಗಿಂದು
ಆಳಿಗೊಂದು ಕಲ್ಲೆಸೆಯುವರು
ಬಾಯಿಗೆ ಬಂದ ಮಾತಿನಿಂದ
ಮನಸ ಚುಚ್ಚುವರು ಸೂಜಿಯಿಂದ
ಗಾಳಿಸುದ್ಧಿಯ ಹಬ್ಬಿಸಿ ಊರಲಿ
ಮುಖವನೆತ್ತಿ ನಡೆಯದಂತೆ ಮಾಡುವರು

ಉಗಿಸಿಕೊಂಡು ಬದುಕಲಾಗದು
ತಲೆಯೆತ್ತಿ ನಡೆಯುವ ಮಾನದಲಿ
ಕುನ್ನಿ ಕೂಗಿದರೆ ಹಾಳಾಗದು
ದೇವಲೋಕವೆಂಬಂತೆ ಜೀವಿಸು
ನಿನ್ನ ಹೆತ್ತವರ ಸಂತೈಸು ಘಳಿಗೆಯಲಿ
ದೃಢವಾಗಿರಲಿ ಆತ್ಮವಿಶ್ವಾಸ

Tuesday, March 8, 2016

ಪ್ರೀತಿಯೇ ಲೇಸು

ಏಕೋ ಕಾಣೆ
ನನ್ನ ಮನಸಲಿ
ನಿನ್ನ ಭಾವದ
ಚಿಂತನೆ

ಹೇಗೋ ನಾನೇ
ನಿನ್ನ ಕನಸಲಿ
ನುಗ್ಗಿ ಬರುವ
ಕಲ್ಪನೆ

ಸೊಗಸ ಸೂತ್ರಕೆ
ವಿರಸ ಯಾತಕೆ
ಉಕ್ಕಿ ಹರಿಯುಲಿ
ಎದೆಯ ಭಾವನೆ

ಹಲವು ಚಿಂತನೆ
ಚಿತ್ತ ಚಿತೆಯಲಿ
ಸುಡುತ ಕಮರಿದೆ
ಅಂತರಂಗದಲಿ

ಕುಪಿತ ಕಲ್ಪಿತ
ಸೂಕ್ಷ್ಮ ಚಿತ್ರಕೆ
ಸುಡುವ ಚಿಂತೆ
ಪಾತ್ರವಾಗಿದೆ

ಬಳಿಗೆ ಬೇಕು
ಬಯಕೆ ಸಾಕು
ಜೊತೆಗೆ ಸಾಗುವ
ಅಂಕಿತವ ಹಾಕಲಿ

ಕಾಳಜಿ ಮಾಡುವ
ಕನಸಲಿ ಕಾಡುವ
ಒಲವನೆ ಉಣಿಸುವ
ಜೀವಕೆ ಹಂಬಲ

ನೆನಪಿರಲಿ ಎಂದು
ಬಯಸುವ ಪ್ರೀತಿಗಿಂತ
ನಮ್ಮನು ಬಯಸಿದ
ಪ್ರೀತಿಯೇ ಲೇಸು

Sunday, March 6, 2016

ಕತ್ತಲೆಯ ಹಣತೆ

ಅಳುವ ಮೊಗದಲ್ಲಿ
ನಗುವ ಕನಸೆಲ್ಲಿ
ಕತ್ತಲೆಯ ಹಣತೆಯಲಿ
ದೀಪವೆಲ್ಲಿ.....

ಮುದ್ದು ಮನಸಲ್ಲಿ
ಸದ್ದು ಮಾಡಿಲ್ಲಿ
ಬದುಕಿನ ಬೇಗೆಯಲಿ
ಭಾವವೆಲ್ಲಿ.....

ನಿನಗೊಂದು ಜೀವನವು
ಮೀಸಲಿರಲು
ಬಳಸದನು ಅಳಿಯದಂತೆ
ನಿನ್ನ ಹೆಸರು

ತೆಗಳಿಕೆಯ ಬದುಕು
ನಿನಗೆ ಇರಲು
ತಪ್ಪುಗಳು ಮರುಕಳಿಸವು
ಎಂದು ಬೀಗು

ಹೊಗಳಿಕೆಯ ಬಾಳು
ಒದಗಿಬರಲು
ಶತ್ರುಗಳು ಎರಗುವ
ಭೀತಿ ಉಂಟು

ಅಂತರಂಗದ ಯೋಚನೆ
ಸುಕೃತವ ಬಯಸಲು
ಹಾವಭಾವಗಳೇ ನಿನ್ನ
ವ್ಯಕ್ತಿತ್ವದ ಗುರುತು

ಮನಸಿನಲಿ ಬಯಕೆಯ
ಗೊಂಚಲುಳಿದು
ಹೊರಹೊಮ್ಮುವ ಭಾವವು
ಟೀಕೆಗಳಿಯುವುದು

ಈ ಜನ್ಮ ನಿಮಗಾಗಿ
ಉಗಿದುಕೊಳ್ಳಿ
ಈ ದೇಹ ಸತ್ಕಾರ್ಯಕೆ
ಅಗೆದುಕೊಳ್ಳಿ