Wednesday, October 23, 2019

ಬಾಲತನದ ಪುಳಕ

ತುಂಬಿ ಹರಿವ ತೊರೆಯ
ತಟದಲ್ಲಿ ನಿಂತು
ಕಪ್ಪೆ ಹಾರುವ ಹಾಗೆ
ಕಲ್ಲನ್ನು ಎಸೆದು
ಬಾಲ ತನದ ದಿನವನ್ನು
ಸಂಭ್ರಮಿಸುವ ಪುಳಕ

ಪುಸ್ತಕದ ನಡುವಲ್ಲಿ
ನವಿಲುಗರಿಯಾನಿರಿಸಿ
ಮರಿ ಹಾಕಿದೆಯಾ ಎಂದು
ತೆರೆದು ನೋಡುವ ತವಕ

ಗುಡ್ಡ ಬೆಟ್ಟಗಳ ಅಲೆದು
ಕಲ್ಲು ಮುಳ್ಳುಗಳ ಮೆಟ್ಟಿ
ಪ್ರಾಕೃತಿಕ ಹಣ್ಣುಗಳನು
ಮನಸಾರೆ ಸವಿಯುವ ಬಯಕೆ

ಹಳ್ಳ ಕೊಳ್ಳದಲಿ ಜಿಗಿದು
ತಡೆಗೋಡೆ ನಡುವಲ್ಲಿ ಮಿಂದು
ಮೀಸಿ ಮುಟ್ಟಾಡುತಲಿ
ಉಗಿಸಿಕೊಳ್ಳುವ ಕಲಿಕೆ

ಅಧ್ಯಯನದ ನೆಪದಲ್ಲಿ
ಕುಂಬ್ರಿ ಹತ್ತುತ ಓಡಿ
ಗೇರ್ಬೀಜಕೆ ಚಿಕಿತ್ಸೆ ಮಾಡಿ
ಕಾಲ ಹರಣದ ಸುಲಿಗೆ

ಶಾಲೆ ಮುಗಿದ ಮೇಲೆ
ರವಿಯಾದಗ ಕಿವಿಯೋಲೆ
ಮನೆಗೆ ಮರಳುವ ಹೊತ್ತು
ವಿಶ್ರಮಿಸುವ ಮುಸ್ಸಂಜೆ ಗಳಿಗೆ

ಮರಳಿ ಬಯಸಲು ಆ ದಿನಗಳ
ಆಗುವುದೆ ಬಾಲಿಶದ ಯೋಚನೆಯು
ಬಾಣಗಳಿಗೆ ಬಾಲತನ ಬಂದಂತೆ
ಗುರಿ ತಪ್ಪಿದ ಅರ್ಜುನನ ಶರಗಳಿಗೆ

Thursday, October 17, 2019

ನವ ನಯ

ಮುಡಿಪಾಗಿದೆ ಮೂಡಿ
ಒಲವು
ನವ ನಯ ರೀತಿ
ಒಡೆಯಾ.... ನೀನೆ
ಬರುವೆಯಾ ಬೆಳಗಲು ಕಾಂತಿ

ಮುಂದುವರಿಸು
ಬಂದು ವರಿಸು
ಜೋಡಿಯಾಗಲು ಬಯಕೆ ನನಸು
ಕಾಯುವೆನು ನಿನ್ನ
ಅಂಗಾಲ ಕಾಂತಿಗೆ
ಮನಸು ಮಾಗಿದೆ
ಮಾವಾಗಿ ಬಾ

ಕಂಡ ಕನಸು
ನಿನ್ನ ಮನಸು
ಕೂಡಿಬಾಳಲು ಬದುಕೆ ಸೊಗಸು
ಜೊತೆಯಾಗೊ ಮುನ್ನ
ಸಮ್ಮತಿಯೆ ಚೆನ್ನ
ವಯಸು ವಾಲಿದೆ
ಬೆಳಕಾಗಿ ಬಾ

ವರಿಸು

ಇಂದುವನ್ನು ನೋಡುತ
ಬಂದು ಹೃದಯದಿ ಹಾಡುತ
ಏಕೆ ಹೀಗೆ ಕಾಡುವೆ
ಕನಸಲಿ ಮನಸಲಿ
ವರಿಸಲು ಬಾರದೆ

ಯಾರ ಕಣ್ಣನು ಕಾಣಲಿ
ಖುದ್ದು ನೋಡುವೆ ಬಾನಲಿ
ಕದ್ದು ಕಲಕಿದೆ ಚಿತ್ತ ಕೆಣಕಿದೆ
ಪ್ರೀತಿ ಕಲಸುತ
ಒಲವ ಬಡಿಸುತ
ನನ್ನ ಮನಸನು ಕೆಡಿಸಿದೆ
ಓ ಹುಡುಗ.... ಬಾ ಹುಡುಗ....
ಎಲ್ಲಿರುವೆ ಬಾ ಬೆಡಗ.....

ಯಾವ ಚಿತ್ರವ ನೋಡಲು
ನಿಂದೆ ರೂಪವು ಕಾಣಲು
ಬಿದ್ದು ನಗಿಸಿದೆ ಎದ್ದು ಕುಣಿಸಿದೆ
ನೀತಿ ಕಲಿಸಿದೆ
ನಿಯಮ ತಿಳಿಸಿದೆ
ನಮ್ಮ ಜೀವನ ತೆರೆದಿದೆ
ಓ ಹುಡುಗ.... ಬಾ ಹುಡುಗ....
ಓಡದಲೆ ಸೇರು ಬದುಕ.....

Thursday, October 3, 2019

ಕಾವ್ಯ ಗಾನ

ಕಾವ್ಯ ರಾಗದ ಲಯಕೆ
ಬಾವ ಜೀವದ ಬೆಸುಗೆ
ಕವಿಯ ಆಶಯಕೊಂದು
ರೂಪ ನೀಡುವುದು

ಗಾನ ತಾಳದ ಸ್ವರಕೆ
ಶ್ರೋತೃ ಮನ ತಲುಪುವುದು
ಗೀತೆ ಬರೆದ ಜನಕೆ
ತೃಪ್ತ ಹೆಮ್ಮೆ ಹೆಚ್ಚುವುದು

ದನಿಯ ಇಂಪು ಗಾಳಿಯಲ್ಲಿ
ನುಡಿಯ ಕುಣಿತ ಸ್ವರಗಳಲ್ಲಿ
ಕೇಳಿ ತಂಪು ಕಿವಿಗಳಲ್ಲಿ
ಹರಡಿತು ಕಂಪು ಬರಹದಲ್ಲಿ

ಈಜಿ ಮುಳುಗಲು ಪಾತಾಳಕೆ
ಅದುವೆ ರಾಗದ ಅವರೋಹಣ
ಗಿರಿಯ ಏರಿ ಗುರಿಯ ತಲುಪಲು
ಅದಕೆ ಹೆಸರು ಆರೋಹಣ

ಬೇಡಿ ಬಯಸಿ ಸಿದ್ಧಿಯಾದರೆ
ಇನಿತು ದೊರೆತ ಖುಷಿಯದು
ತೋಡಿ ಹರಿಸಿ ವೃದ್ಧಿಯಾದರೆ
ಗರ್ವ ತೊರೆದು ನಿಲ್ಲುವುದು

ಹತ್ತಿ ಮುಳುಗುವ ಜನರು ವಿರಳ
ಸಾಧನೆ ತುದಿಯ ಹತ್ತುವುದು ಸರಳ
ನಿರತವಾದರೆ ಭಕ್ತಿ ತಪವಿದು
ಅಭಿಮಾನವು ಸುತ್ತಿ ಬರುವುದು