Friday, February 24, 2017

ಒಪ್ಪತ್ತು, ಉಪವಾಸ, ಜಾಗರಣೆ

ಗುಡ್ಡವನ್ನು ಹತ್ತುವ, ಬಿಲ್ವಪತ್ರೆ ಕೊಯ್ಯುವ, ನೀರನ್ನು ಎರೆಯುವ, ಧ್ಯಾನದಲ್ಲಿ ಕೂರುವ, ಭಜನೆಯನು ಮಾಡುವ ದಿನ ರಾತ್ರಿ ಶಿವರಾತ್ರಿ. ಈ ದಿನವನ್ನು ನಾವು ಭಕ್ತಿಗೆಂದು ಮೀಸಲಿಡುವ ಸುದಿನ. ಶಿವನಿಗೆ ಪ್ರಿಯವಾದ್ದು ಮತ್ತು ಪ್ರತಿ ದಿನ ಮೂರು ಹೊತ್ತು ಲೇಪಿಸುವುದು ಭಸ್ಮ. ಒಂದು ಪೂರ್ತಿ ವರ್ಷಕ್ಕೆ ಬೇಕಾಗುವಷ್ಟು ಶುದ್ಧ ಭಸ್ಮವನ್ನು ಮಾಡುವುದು ಶಿವದಿನದಂದು.

ಹಿಂದೂ ಸಂಸ್ಕೃತಿಯ ಕೆಲವೇ ಕೆಲವು ವರ್ಷಗಳ ಹಿಂದಿನ ಪುಟಗಳನ್ನು ತಿರುವಿ ನೋಡಿದರೆ ನಮ್ಮ ಬಾಲ್ಯ ಜೀವ ತಳೆಯುತ್ತದೆ. ಶಿವರಾತ್ರಿ ಬಂತೆಂದರೆ ಒಪ್ಪತ್ತು, ಉಪವಾಸ, ಜಾಗರಣೆಯ ಖುಷಿ, ಬೇಸಿಗೆಯ ಉರಿ, ಹಸಿವಿನ ತೊಳಲಾಟ, ನಿದ್ರೆ ಮಾಡಲಾಗದ ಪರದಾಟ ಇವುಗಳ ನೆನಪು ಚಿತ್ತವನ್ನು ಕಾಡುತ್ತದೆ.

ನಮ್ಮ ಬಾಲ್ಯಕ್ಕೆ ಕಾಲಿಟ್ಟಾಗ ಗುಡ್ಡವನ್ನು ಹತ್ತಿ ಕಾಡನ್ನು ಅಲೆದು ಬಿಲ್ವಪತ್ರೆಯ ಮರವನ್ನು ಹತ್ತಿಳಿದಾಗ ಆದ ಗಾಯದ ಕಲೆಯತ್ತ ನಮ್ಮ ದೃಷ್ಟಿ ಹೋಗುತ್ತದೆ. ಅದೇನೋ ಖುಷಿಯಿಂದ ಗುಡ್ಡದ ಮೇಲಿಂದ ಬೆರಣಿಯನ್ನು ಹೆಕ್ಕಿ ತಂದು, ಮುಸ್ಸಂಜೆ ಹೊತ್ತಿಗೆ ಭಸ್ಮಕ್ಕೆಂದು ಬೆರಣಿಯಿಂದ ಒಲೆಯನ್ನು ಮಾಡಿ ಆಲದ ಬತ್ತು, ಅಶ್ವತ್ಥ ಬತ್ತು, ತುಳಸಿ ಬತ್ತು (ಒಣಗಿದ ಆಲದ ಮರದ ಟೊಂಗೆ, ಅಶ್ವತ್ಥ ಮರದ ಟೊಂಗೆ, ತುಳಸಿ ಗಿಡದ ಟೊಂಗೆ) ಗಳಿಂದ ಬೆರಣಿಗೆ ಬೆಂಕಿಯನ್ನು ಹಿಡಿಸಿ ಭಸ್ಮವನ್ನು ಮಾಡಿದ ಉತ್ಸಾಹದ ಕ್ಷಣಗಳು ನಮ್ಮ ಬಾಲ್ಯಕ್ಕೆ ಮೆರುಗನ್ನು ನೀಡುತ್ತದೆ.

ಹರಿಯುವ ಹೊಳೆಯಿಂದ ನೀರನ್ನು ಹೊತ್ತು ತಂದು ಎತ್ತರದ ಮೇಲಿರುವ ಶಿವನಿಗೆ ಎರೆಯಲು ಅರ್ಚಕರ ಬಳಿ ಬಿಂದಿಗೆಯನ್ನು ಕೊಟ್ಟು ಶಿವ ಧ್ಯಾನ ಮಾಡಿದ ಘಳಿಗೆಯನ್ನು ನೆನಪಿಸಿಕೊಂಡರೆ ನಮ್ಮೊಳಗಿನ ಭಕ್ತಿ ಸ್ಪುರಿಸುತ್ತದೆ. ಜಾಗರಣೆಗೆಂದು ಅಹೋರಾತ್ರಿ ಭಜನೆ, ಶಿವನಾಮ ಸ್ಮರಣೆ, ಮಂತ್ರ ಘೋಷಗಳು, ಗಾಯನವು ಒಪ್ಪತ್ತು ಅಥವಾ ಉಪವಾಸ ಮಾಡಿರುವುದರಿಂದಾದ ಆಯಾಸವನ್ನು ಅಸುನೀಗಿಸುತ್ತಿತ್ತು. ತುಳಸಿ ನೀರನ್ನು ಕುಡಿದು ಲಿಂಗಾಷ್ಠಕವನ್ನು ಪಠಿಸಿ ಭಾವ ಪರವಶರಾಗುತ್ತಿದ್ದೆವು.

ಹಳ್ಳಿಯ ಜನರಲ್ಲಿ ಶಿವರಾತ್ರಿ ಎಂದರೆ ಬೇಸಿಗೆ ಕಾಲ ಆರಂಭದ ಶುಭದಿನ. ಭೌಗೋಳಿಕವಾಗಿ ಸೂಚಿಸಿದ ಮೂರು ಕಾಲಗಳಲ್ಲಿ ಒಂದು ಬೇಸಿಗೆ ಕಾಲವು ಆರಂಭವಾಗುವುದು ಈ ದಿನದಿಂದಲೆ ಎಂಬ ನಂಬಿಕೆ ನಿಜ ಮತ್ತು ಔಪಚಾರಿಕ ಸತ್ಯ.

ಶಿವ ಎಂದರೆ ಶುಭ, ಮಂಗಳಕರ. ಹೀಗಾಗಿಯೇ ನವ ಗೃಹ ಪ್ರವೇಶದ ಸಮಯದಲ್ಲಿ ವಾಸ್ತು ಬಾಗಿಲಿನ ಮೇಲೆ "ಶಿವಂ ವಾಸ್ತು ಶುಭಂ ವಾಸ್ತು" ಎಂದು ಬರೆಯುತ್ತೇವೆ. ಕಾರಣವಿಷ್ಠೇ ಮನೆಯಲ್ಲಿ ಸದಾ ಮಂಗಳಕರವಾದ ಕಾರ್ಯಗಳು ನಡೆದು, ಶುಭಪ್ರದವಾದ ಸಂಗತಿಗಳು ಘಟಿಸಲೆಂಬ ಉದ್ದೇಶವಾಗಿದೆ.

ಆದರೆ ಇತ್ತೀಚೆಗೆ ಶಿವರಾತ್ರಿಯಂದು ಹೊಟ್ಟೆತುಂಬ ಉಂಡು, ಗಡದ್ದಾಗಿ ನಿದ್ರೆ ಮಾಡುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಒಪ್ಪತ್ತು, ಉಪವಾಸ, ಜಾಗರಣೆಗಳಿಂದ ಸಿಗುತ್ತಿದ್ದ ಆಂತರಿಕ ಖುಷಿಯನ್ನು ಯಾಂತ್ರಿಕ ಬದುಕಿಗೆ ಸಿಲುಕಿದ ನಾವು ಕಳೆದುಕೊಳ್ಳುತ್ತಿದ್ದೇವೆ ಎನ್ನುವುದು ವಿಷಾದನೀಯ. ಯಾಂತ್ರಿಕ ಬದುಕಿಗೆ ಅಲ್ಪ ವಿರಾಮವನ್ನಿತ್ತು ಭಸ್ಮವನ್ನು ಲೇಪಿಸಿಕೊಂಡು ಧ್ಯಾನ, ಭಜನೆಗಳ ಮೂಲಕ ಶಿವನನ್ನು ಆರಾಧಿಸಿ ಕೃತಾರ್ಥರಾಗೋಣ.

ಶಿವರಾತ್ರಿಯ ಹಾರ್ದಿಕ ಶುಭಾಶಯಗಳು. 

Monday, February 20, 2017

ವಿರಹ ವಿಹಾರ

ತೂಗು ಮರದ ಟೊಂಗೆ
ಮೇಲೆ ಕೂತ
ಧ್ವನಿಯೇ ಹೊರಡದ
ವನಿತೆ ಮಾತು
ಜೋಲಿ ಹೊಡೆಯುವ
ಮರದ ಗಾಳಿಗೆ
ರಾಧಾಂತರಂಗವು ಪಸರಿಸುತಿತ್ತು‌‌....

ಜುಮ್ಮುಗುಡುವ
ಜುಮುಕಿ ಸದ್ದು
ಘಲ್ ಎನುವ
ಗೆಜ್ಜೆ ನಾದವು
ವಿರಹದ ವಿಹಾರದಲ್ಲಿ
ವನದ ತುಂಬ
ಭರವಸೆಯೇ ಬೀಳೋ ಬೀಳು......

ಎಲ್ಲಿಹನೋ? ಗೋಪಿ ನಂದನ
ಬರುವನೆನೋ? ಸ್ಪೂರ್ತಿ ಸಿಂಚನ
ಬಳಿಗೆ ಕೂತು ಕರೆಯಲು
ನಿನ್ನ ಮಾತಿನ ಆಲಾಪನೆ
ಕಿವಿಯಲಿ
ಗುನುಗುತ ಉಚ್ಛರಿಸಲು ಕೃಷ್ಣನೇ.....