Friday, November 14, 2014

ಯಾನ ಆದರೂ ಮಾನ

ದೂರ ದೂರ ಮನದೊಳಗಿನ ಮಾತು ಭಾರ
ಹಾರ ಹಾರ ಹಿಡಿದು ನಿಂತೆ ಎದೆಯ ತೀರ
ಹೇಗೆ ಮಾಡಲಿ ಒಲಿದು ಬಂದ ಮನದಲಿ
ತುಸುಹೆಜ್ಜೆಯಿಡದಂತೆ ಭಾವ ತೀರ ಯಾನ

ಗುಡುಗು ಮಿಂಚುಗಳ ಆರ್ಭಟಕ್ಕೆ ಗಗನವಿದೆ
ಭಾವನೆಗಳ ಹೊಯ್ದಾಟದಕೆ ನನ್ನ ಮನದಲಿ
ನಿನ್ನ ಬಯಕೆಗಳ ಉಳಿವಿಗೆ ಮನೆ ಮಾಡಿದೆ
ಗುರುತಿಸಲು ಅಳತೆಗೆ ಸಿಗದಂತಹ ಕೋನ

ನಿನ್ನಾಸೆಗೆ ಸ್ಪಂಧಿಸಿದರೆ ನಮ್ಮ ಬಾಳು ಜೀವಂತ
ನಂಬಿಕೆಯಿರದಿರೆ ತಿಳಿಯದು ಕೊನೆಯಾಸೆ ಹೇಗಂತ
ಅನುಮಾನವೇ ಅಪನಂಬಿಕೆಯ ಮೆಟ್ಟಿಲು ಆದರೆ
ಸಹಿಸಲಾಗದ ಕಿರಿಕಿರಿ ರಗಳೆಗೆ ಹೋಗದಿರಲಿ ಮಾನ

Monday, November 3, 2014

ಕನ್ನಡವೇ ಸತ್ಯ, ನಿತ್ಯ ಎಂದು ಭಾಷಣ ಮಾಡುವ ಪ್ರಸಿದ್ಧ ವ್ಯಕ್ತಿಗಳೇ ಆಂಗ್ಲ ಭಾಷೆಯನ್ನು ಪೋಷಿಸುತ್ತಿರುವವರು

ನಮ್ಮ ಕನ್ನಡಿಗರು ಭಾಷಾಭಿಮಾನಿಗಳು. ಇಲ್ಲಿ ಹುಟ್ಟಿ ಬೆಳೆದವರಲ್ಲಿ ಭಾಷಾಭಿಮಾನ ಹೆಚ್ಚು. ಇದು ಭಾಷಣಗಳಲ್ಲಿ, ಮಾತಿನಲ್ಲಷ್ಟೆ ಜೀವಂತವಾಗಿರುವುದೆನ್ನುವುದಂತು ನಿಜ. ಒಮ್ಮೆ ಯೋಚಿಸಬೇಕಾದ ಅಗತ್ಯತೆ ನಮ್ಮ ಮನದಲ್ಲಿ ಮೂಡಬೇಕು. ನಾವು ಪರರ ಹಂಗಿಲ್ಲದೆ ಸ್ವಾವಲಂಭಿಯಾಗಿ ಬದುಕಬೇಕು ಎಂಬ ಮನೋಭಾವ ಹೊಂದಿದ್ದರೂ ಸ್ವಭಾಷೆಯನ್ನು ಸರಳವಾಗಿ ಮಾತಾಡಿ ಅದರ ಅಭಿವೃದ್ಧಿಗೆ ಶ್ರಮಿಸಬೇನ್ನುವ ಮನೋಭಾವದ ಕೊರತೆ ನಮ್ಮ ಕನ್ನಡಿಗರಲ್ಲಿ ಎದ್ದು ಕಾಣುತ್ತಿದೆ. ಇದು ಒಂದು ಭಾಷೆಯ ಅಳಿವಿಗೆ ನಾಂದಿಯಾಗಬಹುದು ಎನ್ನುವ ಹೆದರಿಕೆ ಕಾಡುತ್ತಿದೆ.

ಸ್ವಾಯತ್ತತೆ ಇಲ್ಲದ ಬದುಕು ನಮ್ಮದಾಗುತ್ತಿದೆಯೆ...? ನಾವು, ನಮ್ಮದು ಎಂಬ ಭಾವ ಮರೆಯಾಗುತ್ತಿದೆಯೆ...? ಆಧುನಿಕ ಜಗತ್ತಿನ ಆಡಂಬರಕೆ ನಾವು ಸೂರೆಗೊಂಡಿದ್ದೇವೆಯೇ..? ಎಲ್ಲದನ್ನು ತೊರೆದು ನಾನು, ನನ್ನದು, ನನ್ನ ಬದುಕು, ನನ್ನ ಜೀವನ ಎಂಬಂತೆ ಪ್ರತಿಯೊಬ್ಬರ ಜೀವನವು ಸಂಕುಚಿತವಾಗುತ್ತಿದೆ. ನಾವು ನಮ್ಮ ಸ್ವಂತವಾದ ಮಾತೃಭಾಷೆಯನ್ನೇ ಕಡೆಗಣಿಸುತ್ತಿದ್ದೇವೆಯೇ ಆಧುನಿಕತೆಯ ಹೆಸರಲ್ಲಿ ಮೈ ಮರೆತು...? ಇವಕ್ಕೆಲ್ಲ ಕಾರಣ ನಮ್ಮ ಸುತ್ತ-ಮುತ್ತಲಿನ ಪರಿಸರ, ನಮ್ಮ ಧ್ವನಿ ಮತ್ತು ದೃಶ್ಯ ಮಾಧ್ಯಮಗಳು, ಅದಲ್ಲದೆ ಪ್ರಸಿದ್ಧ ವ್ಯಕ್ತಿಗಳು ಅಥವಾ ಸಾಮಾಜಿಕ ಜೀವನದ ವ್ಯಕ್ತಿಗಳು ಅವರನ್ನು ಮೆಚ್ಚಿದ ಮತ್ತು ಅವರನ್ನೇ ಹಿಂಬಾಲಿಸುವ ಸಾಮಾನ್ಯ ಜನರುಗಳ ಮೇಲೆ ಪ್ರಭಾವಿಸುವ ರೀತಿ ತಮ್ಮ ಠೀವಿಯನ್ನು ವ್ಯಕ್ತ ಪಡಿಸುವುದು.

ಕರ್ನಾಟಕವೆಂದರೆ ಒಂದು ಆಲದ ಮರವಿದ್ದ ಹಾಗೆ. ಯಾಕೆಂದರೆ ಹೇಗೆ ಆಲದ ಮರ ತನ್ನನ್ನೆ ಕಡಿಯುವ ನರಪ್ರಾಣಿಗಳಿಗೆ ತನ್ನ ನೆರಳನ್ನು ನೀಡುತ್ತ ಎಲ್ಲ ಜೀವರಾಶಿಗಳಿಗೆ ತಂಪನ್ನು ನೀಡುತ್ತದೆಯೋ ಹಾಗೆ ನಮ್ಮ ಕರ್ನಾಟಕವು ಸಹ ತನ್ನ ಭಾಷೆಯನ್ನು ಅಳಿಸುವ ಮತ್ತು ತನ್ನ ಸಂಸ್ಕೃತಿಯನ್ನು ಕಲುಷಿತಗೊಳಿಸಿ ಕೇಡು ಬಗೆಯುವವರಿಗೂ ಸಹ ನೆಮ್ಮದಿಯಿಂದ ಬದುಕಲು ಅನುವುಮಾಡಿ ಕೊಡುತ್ತಿದೆ.

ಯುವ ಜನಾಂಗದ ಮೇಲೆ ಪ್ರಭಾವ ಬೀರುತ್ತಿರುವ ಸಿನಿಮಾ ರಂಗದ ಹಲವು ವ್ಯಕ್ತಿಗಳು, ಆಕಾಶವಾಣಿಯಲ್ಲಿ ಮತ್ತು ದೃಶ್ಯಮಾಧ್ಯಮದಲ್ಲಿ ಬರುವ ಕಾರ್ಯಕ್ರಮ ನಿರೂಪಕರು, ಅಲ್ಲದೆ ಹಲವು ವೇದಿಕೆಯಲ್ಲಿ ಮಾತನಾಡುವ ಪ್ರಸಿದ್ಧ ಮತ್ತು ಪ್ರಭಾವಿ ವ್ಯಕ್ತಿಗಳು ಸಹ ಕನ್ನಡ ಮಾತನಾಡುವುದಕ್ಕಿಂತ ಹೆಚ್ಚಿನದಾಗಿ ತಮ್ಮ ಪ್ರಭಾವವನ್ನು ವ್ಯಕ್ತ ಪಡಿಸಲು ಮತ್ತು ತಮ್ಮ ಅಂತಸ್ತನ್ನು ತೋರಿಸಲು ಆಂಗ್ಲ ಭಾಷೆಯಲ್ಲಿ ಉತ್ತರಿಸುತ್ತಿರುವುದು ನಮ್ಮ ಕನ್ನಡವೆಂಬ ಶ್ರೀಗಂಧದ ಸುವಾಸನೆ ಗೌಣವಾಗುತ್ತಿರುವುದಕ್ಕೆ ಮುಖ್ಯ ಕಾರಣವೆನ್ನಬಹುದು.

ಮಾತೆತ್ತಿದರೆ ಕನ್ನಡಕ್ಕಾಗಿ ಹೋರಾಡುತ್ತೇವೆ, ಕನ್ನಡಕ್ಕಾಗಿ ದುಡಿಯುತ್ತೇವೆ ಎಂದು ಹೇಳುತ್ತಾರೆ. ಯಾಕೆಂದರೆ ಕನ್ನಡ ಅವರ ಉಸಿರು. ಏನಕ್ಕೆ ಕನ್ನಡ ಅವರ ಉಸಿರೆಂದರೆ ಅವರಿರುವುದು ಕರ್ನಾಟಕದಲ್ಲಿ ಹಾಗಾಗಿ ಬೆಂಬಲ ಬೇಕಾಗಿರುವುದು ಕನ್ನಡಿಗರಿಂದ, ಅದಕ್ಕಾಗಿಯೆ ಹೊರತು ಕನ್ನಡ ಭಾಷೆಯ ಉಳಿವಿಗಾಗಿ ಅಲ್ಲವೆಂಬಂತೆ ತೋರ್ಪಡುತ್ತದೆ. ಕನ್ನಡ ಭಾಷೆಯ ಉಳಿವಿಗೆ ಶ್ರಮ ಪಡುವವರಾಗಿದ್ದರೆ ಸ್ವಚ್ಚಂದವಾಗಿ ಕನ್ನಡ ಮಾತಾಡಲಿ. ಹೇಗೆ ನೆರೆಯ ಭಾಷೆಯ ಕಲಾವಿದರುಗಳು, ಪ್ರಸಿದ್ಧ ವ್ಯಕ್ತಿಗಳು ತಮ್ಮ ಭಾಷೆಯ ಮೇರೆಗಾಗಿ ಅವರ ಮಾತೃಭಾಷೆಯನ್ನೆ ಸ್ವಚ್ಚಂದವಾಗಿ ಮಾತಾಡುತ್ತಾರೋ ಹಾಗೆ ನಮ್ಮ ಕನ್ನಡ ಭಾಷೆಯ ಉಳಿವಿಗಾಗಿ ಕನ್ನಡಿಗರೂ ಸಹ ಬಾಯ್ತುಂಬ ನಮ್ಮ ಭಾಷೆಯನ್ನೇ ಮಾತಾಡಬೇಕು. ದೃಶ್ಯ ಮಾಧ್ಯಮ ಮತ್ತು ಧ್ವನಿ ಮಾಧ್ಯಮಗಳಲ್ಲಿ ಬರುವ ನಿರೂಪಕರುಗಳು ಸಹ ಆಂಗ್ಲ ಭಾಷೆಯಲ್ಲಿ ಕಾರ್ಯಕ್ರಮ ನೆಡೆಸಿಕೊಟ್ಟರೆ ಅಂತವರುಗಳು ಉತ್ತಮ ನಿರೂಪಕರೆಂಬ ಪಟ್ಟವೇರುತ್ತಾರೆ. ಇದರಿಂದಾಗಿ ಯುವ ಪೀಳಿಗೆಯ ಕನ್ನಡದ ಕುಡಿಗಳ ಮೇಲೆ ವ್ಯತಿರಿಕ್ತ ಪ್ರಭಾವ ಬೀಳುತ್ತದೆ. ಅವರುಗಳು ಸಹ ಕನ್ನಡ ಉಳಿಯಲಿಕ್ಕೆ ಶ್ರಮಿಸಬೇಕೆಂದರೆ ಕನ್ನಡವನ್ನು ಸರಾಗವಾಗಿ ಮಾತಾಡಬೇಕು.

ಅಲ್ಲದೆ ಚಲನಚಿತ್ರಗಳಲ್ಲಿಯೂ ಸಹ ಸಂಭಾಷಣೆ ಆಧುನಿಕ ಜಗತ್ತಿಗೆ ಪೂರಕವಾಗಿರಬೇಕೆಂದು ಆಂಗ್ಲ ಭಾಷೆಯ ತುಣುಕುಗಳೆ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. "ಹೇಗೆಂದರೆ 'ಬನ್ನಿ ಸ್ನೇಹಿತರುಗಳೆ' ಎಂತೆಂದರೆ ಅದು ಸಾಹಿತ್ಯಾತ್ಮಕ ಮಾತಂತೆ, ಅದರ ಬದಲಾಗಿ 'ಕಮ್ಮೊನ್ ಫ್ರೆಂಡ್ಸ್' ಅಂತ ಆಗಬೇಕೆಂದು ಹೇಳುತ್ತಾರೆ. ಅಂದರೆ ಇಲ್ಲಿಗೆ ತಿಳಿಯಬೇಕು ಆದುನಿಕ ಜಗತ್ತೆಂದರೆ ಅದು ಆಂಗ್ಲ ಭಾಷೆಯ ಮೆರವಣಿಗೆಯೆಂದು" ಇದು ನನ್ನ ಸ್ವಾನುಭವದ ಮಾತು . ಇಲ್ಲೆಲ್ಲವುಗಳೂ ಸಹ, ನಮ್ಮ ಕನ್ನಡ ಮರೆಯಾಗುತ್ತಿರುವುದೇಕೆ...? ಬರೆ ಕನ್ನಡದಿಂದ ಸಿನಿಮಾರಂಗದ ಬೆಳವಣಿಗೆ ಅಸಾಧ್ಯವೇ...? ಎಂಬಂತಹ ಹಲವಾರು ಪ್ರಶ್ನೆಗಳು ಉದ್ಬವಿಸಲಿಕ್ಕೆ ಮುಖ್ಯ ಕಾರಣಗಳು.

ಇನ್ನೂ ಹೇಳಬೇಕೆಂದರೆ ನಮ್ಮ ಕನ್ನಡಿಗರಿಗೆ ಕನ್ನಡದಲ್ಲಿ ಮಾತಾಡಲಿಕ್ಕೆ ಕೀಳರಿಮೆ ಭಾವನೆ ತೋರುತ್ತಿರುವುದು. ಖರೀದಿಗೆಂದು ಯಾವುದೇ ಅಂಗಡಿಗೆ ಹೋದರೂ, ಬೇರೆಡೆಗೆ ಪ್ರವಾಸಕ್ಕೆಂದೆ ಹೋದರೂ ಅಥವಾ ಪ್ರಯಾಣದಲ್ಲಿಯೇ ಆದರೂ ಸಹ ಅಲ್ಲಿನ ವ್ಯಕ್ತಿಗಳ ಜೊತೆ ಆಂಗ್ಲಭಾಷೆಯಲ್ಲಿಯೆ ವ್ಯವಹರಿಸಿ ತಮ್ಮ ಪ್ರತಿಷ್ಠೆಯ ಪರಾಕಾಷ್ಟೆ ಮೆರೆಸುತ್ತಿರುವುದು ಖಂಡನೀಯ. ಕನ್ನಡ ಮಾತನಾಡಲು ಹಿಂಜರಿಯುವುದು ಕನ್ನಡಿಗರೆ ಹೊರತು ಬೇರೆ ಭಾಷಿಗರಲ್ಲ. ಕೆಲವು ಬೇರೆ ಭಾಷಿಕರುಗಳು ಕನ್ನಡ ಕಲಿಕೆಯಲ್ಲಿ ಉತ್ಸುಕರಾಗಿದ್ದು ಚಂದವಾಗಿ ಕನ್ನಡ ಮಾತಾಡಲು ಪ್ರಯತ್ನಿಸುತ್ತಾರೆ. ಆದರೆ ನಮ್ಮ ಕನ್ನಡಿಗರುಗಳು ನಮ್ಮ ಮಾತೃಭಾಷೆಯನ್ನು ಮಾತಾಡಲು ಹಿಂಜರಿಯುತ್ತಿದ್ದಾರೆ. ಅಲ್ಲದೆ ಕನ್ನಡ ಮಾತಾಡಿದರೆ ಕೀಳಾಗಿ ಕಾಣುತ್ತಾರೆ ಎಂದು ಕನ್ನಡ ಮಾತಾಡಲು ಮುಂದಾದವರ ಕಾಲೆಳೆದು ಆಂಗ್ಲಭಾಷೆ ಅಥವಾ ಹಿಂದಿ ಭಾಷೆ ಮಾತಾಡುವಂತೆ ಪ್ರೇರೇಪಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಅಷ್ಟೇ ಅಲ್ಲದೆ ಯಾರೊಬ್ಬರಾಗಲಿ ಕನ್ನಡವನ್ನು ಸಲೀಸಾಗಿ ಮಾತಾಡಿದರೆ ಅದೇನೆಂದು ತಿಳಿದು ಅರ್ಥೈಸಿಕೊಳ್ಳದಷ್ಟು ಪರರಿಗರಾಗಿದ್ದಾರೆ ನಮ್ಮ ಹೆಮ್ಮೆಯ ಕನ್ನಡಿಗರು.

ಒಪ್ಪಿಕೊಳ್ಳೋಣ ಜಗತ್ತನ್ನು ತಿಳಿಯಲು, ತಂತ್ರಜ್ಞಾನದ ಅರಿವಿಗೆ, ಆಧುನಿಕತೆಯ ಬೆಳವಣಿಗೆಗೆ, ಪರರೊಂದಿಗೆ ವ್ಯವಹರಿಸಲು, ಉದ್ಯೋಗದ ಅವಶ್ಯಕತೆಗೆ ಮತ್ತು ಸಮಾನ್ಯಜ್ಞಾನಕ್ಕೆ ಆಂಗ್ಲ ಮತ್ತು ಅನ್ಯ ಭಾಷೆಯ ಅರಿವು ಅತ್ಯವಶ್ಯಕ. ಹಾಗೆಂದು ಮಾತೃಭಾಷೆಯನ್ನು ಮರೆಯಬೇಕೆಂದಲ್ಲ, ಹಾಗೆ ಸ್ವಭಾಷೆಯನ್ನು ಕೀಳಾಗಿ ಕಾಣುವುದೂ ಅಲ್ಲ.

ಧ್ವನಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸಂದರ್ಶನಕ್ಕೆಂದು ಬರುವ ಪ್ರಖ್ಯಾತರುಗಳು ಮಾತಾಡುವ ಮೊದಲು ಒಮ್ಮೆ ಯೋಚಿಸಬೇಕು. ನಿಮ್ಮ ಮಾತುಗಳನ್ನು ಎಲ್ಲಾ ಕನ್ನಡಿಗರುಗಳು, ನಿಮ್ಮನ್ನು ಇಷ್ಟಪಡುವವರು, ನಿಮ್ಮ ಹಿಂಬಾಲಕರು, ನಿಮ್ಮನ್ನೆ ಅನುಸರಿಸುವವರು ಅದನ್ನು ಆಲಿಸುತ್ತಾರೆ ಅಥವಾ ವೀಕ್ಷಿಸುತ್ತಾರೆನ್ನುವುದನ್ನು ಗಮದಲ್ಲಿಟ್ಟುಕೊಳ್ಳಬೇಕಾಗಿದೆ. ಯಾಕೆಂದರೆ ನೀವುಗಳು ಆಂಗ್ಲ ಅಥವಾ ಅನ್ಯ ಭಾಷೆಯಲ್ಲಿ ಮಾತಾಡಿದರೆ ಅದು ಕಾರ್ಯಕ್ರಮವನ್ನು ವೀಕ್ಷಿಸುವ ಅಥವಾ ಆಲಿಸುವ ಯುವ ಪೀಳಿಗೆಯ ಮೇಲೆ ಪ್ರಭಾವ ಆಗುತ್ತದೆ ಮತ್ತು ಅದರಿಂದಾಗಿ ಅವರುಗಳು ತಮ್ಮ ತರಹವೆ ರೇಖನಿಗೆಂದು (Style) ಅನ್ಯಭಾಷೆಯಲ್ಲಿ ಮಾತನಾಡಿದರೆ ಅದು ಕನ್ನಡದ ಅಳಿವಿಗೆ ಕಾರಣವಾಗುತ್ತದೆ. ಹಾಗಾಗಿ ಕನ್ನಡದ ಉಳಿವಿಗೆ ತಮ್ಮ ಮೇಲಿರುವ ಗುರುತರ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಾಗಿದೆ.

ಹೆಚ್ಚಿನದಾಗಿ ನಮ್ಮ ಮಹಿಳೆಯರೂ ಸಹ ರೇಖನಿಗಾಗಿ (Style) ಆಂಗ್ಲಭಾಷೆಯಲ್ಲಿಯೇ ಮಾತನಾಡಿ ನಮ್ಮ ಭಾಷೆಯ ಅಳಿವಿಗೆ ಅಣಿಯಾಗುತ್ತಿದ್ದಾರೆ ಎನ್ನುವುದು ಬೇಸರದ ವಿಷಯ. ಒಂದು ಸಂಸ್ಕೃತಿ, ಸಂಪ್ರದಾಯ, ಕಲೆ, ಭಾಷೆಯ ಉಳಿವಿಗೆ ಮಹಿಳೆಯ ಪಾತ್ರ ಪ್ರಮುಖವಾಗಿರುತ್ತದೆ. ಹಾಗೆ ಪುರುಷರಿದೂ ಸಹ ಸಮಾನ ಪಾತ್ರವಿರುತ್ತದೆ. ಆದರೆ 'ಮಹಿಳೆಯರಿದೇ ಪ್ರಮುಖ ಪಾತ್ರ' ಎಂದು ನಿಗದಿಯಾಗಿ ಹೇಳಲಿಕ್ಕೆ ಕಾರಣವೇನೆಂದರೆ ತಾಯಿತಾನೆ ಮೊದಲ ಗುರು ಎಂಬ ಮಾತಿಗೆ ಪೂರಕವಾಗಿರಬೇಕೆಂದಷ್ಟೆಯೇ ಹೊರತು ಅವರನ್ನು ಜರಿಯಲಿಕ್ಕಲ್ಲ. ಒಂದು ಮಗು ಮೊದಲು ತನ್ನ ತಾಯಿಯ ಚಲನ-ವಲನಗಳನ್ನು ಗಮನಿಸಿ ಅದರ ಮಾತು-ನಡತೆಯನ್ನು ಅನುಸರಿಸುತ್ತದೆ. ಹಾಗಾಗಿ ಸಂಸ್ಕಾರ, ಸಂಸ್ಕೃತಿ, ಭಾಷೆಯ ಉಳಿವಿಗೆ ಮಹಿಳೆಯ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಅದಕ್ಕಾಗಿ ನಮ್ಮ ಹುಡುಗಿಯರು, ಮಹಿಳೆಯರು ಮತ್ತು ಶೋಕಿಯ ಹುಂಬರುಗಳಲ್ಲಿ ಒಂದು ವಿನಂತಿಯೇನೆಂದರೆ ಆಂಗ್ಲಭಾಷೆಯಲ್ಲಿ ಮಾತಾಡುವ ಶೋಕಿಗೆ ಹೋಗದೆ ನಮ್ಮ ಭಾಷೆಯ ಉಳಿವಿಗೆ ಅದರ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ನಿಮ್ಮ ಸುತ್ತ ಸೃಷ್ಠಿಸಿ ಮುಂದಿನ ಪೀಳಿಗೆಯವರು ಕನ್ನಡಿಗರಾಗಿಯೇ ಉಳಿಯುವಂತೆ ಪ್ರೇರೇಪಿಸಿ.

ಪ್ರಖ್ಯಾತ ವ್ಯಕ್ತಿಗಳು ಮತ್ತು ಎಲ್ಲಾ ನಿರೂಪಕರುಗಳು ಸಹ ಕನ್ನಡದ ಉಳಿವಿಗೆ ಮತ್ತು ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ. ಕನ್ನಡವೇ ಹಸಿರು, ಕನ್ನಡವೇ ಉಸಿರು ಎನ್ನುವ ಮಾತು ಬರೆ ಭಾಷಣ ಅಥವಾ ಮಾತಲ್ಲಿಯೇ ಉಳಿಯದೆ ಅದು ರೂಢಿಯಲ್ಲಿ ಬರಲಿ. ಅಲ್ಲದೆ ದೃಶ್ಯ ಮಾಧ್ಯಮದಲ್ಲಿ ಸಂದರ್ಶನಕ್ಕೆಂದು ಬರುವ ಸಾಮಾಜಿಕ ವ್ಯಕ್ತಿಗಳು ಸಹ ಕನ್ನಡದಲ್ಲಿಯೇ ಮಾತಾಡಿ ಯುವ ಪೀಳಿಗೆಯ ಮೇಲಾಗುವ ಅನ್ಯ ಭಾಷೆಯ ಪ್ರಭಾವವನ್ನು ತಡೆಗಟ್ಟಿ ಕನ್ನಡದ ಉಳಿವಿಗೆ, ಏಳಿಗೆಗೆ ಮತ್ತು ಯಶಸ್ಸಿಗೆ ಶ್ರಮಿಸಬೇಕಾಗಿದೆ.