Monday, February 2, 2015

ಉತ್ತರಾಯಣ

ಬದುಕಿನ ಪರ್ಯಾಯ
ನೋಡ ಹೊರಟಿರುವ
 ಜೀವದ ಶಾಂತಿಗೆ
ಬೇಕಿದೆ ಉತ್ತರಕ್ರಿಯೆ

ಪಾಪ ಪುಣ್ಯಗಳ ಹೊತ್ತು
ಜನಗಳ ಶಾಪ ಸ್ತುತಿಯ
ಹೊಣೆಗಾರ  ಹೊರಟಿರಲು
ಚಿತೆಯ ಸುತ್ತ ಮಂದಿಗಳು

ಋಣವ ತೀರಿಸಲು ಮುಂದಾದ
ಮಕ್ಕಳು ತಿರುಗುವ ಮೂರ್ಸುತ್ತು
ತುಂಬಿದ ಮಡಕೆಯ ತೂತಿನಲಿ
ಸುರಿದು ಒಡೆದಂತೆ  ಬದುಕು

ಕಷ್ಟದಲಿ ಬಾರದ ನೆರೆಯವರು
ಕಣ್ಣಲ್ಲೇ ಹೇಳುವ ನೀರಿನ ವಿದಾಯ
ಒಡನಾಡಿ ನೆಂಟರ ರೋದನ
ಅವಲಂಬಿತ ಜೀವಗಳ ಅಕ್ರಂದನ

ಗ್ರಹಗಳ ಸಂಧಿಗಳಿಗುಂಟು ಹೋಮ
ಹವಿಸ್ಸಿನ ಆಹುತಿಯು ಹವನದಲಿ
ಪಾಪಗಳ ಆಗರ  ಪಾಪಿ ಜೀವ
ಅಗ್ನಿಗೆ ಆಹುತಿಯು ಹೆಣವಾದ ದೇಹ

ಸ್ವರ್ಗದ ಬಾಗಿಲು ತೆಗೆಯುವುದು
ಉತ್ತರಾಯಣದ ಪರ್ವ ಕಾಲದಲಿ
ಹೀಗಾಗಿ ಸತ್ತಾಗ ಮಾಡುವ ಕ್ರಿಯೆಗೆ
ಉತ್ತರಕ್ರಿಯೆಯೆಂದೇ ಹೆಸರಿಸುವರು