Tuesday, June 23, 2015

ಹಸೆಮಣೆ

ಬಾಸಿಂಗ ಕಟ್ಟಿರುವೆ
ಪೇಟವನು ಹಾಕಿರುವೆ
ನಿನಗಾಗಿ ಕಾದಿರುವೆ
ಹಸೆಮಣೆಯಲಿ

ವೈದಿಕರ ಬಾಯಲಿ ಮಂತ್ರವು
ಮಾಡುತಲಿ ಕೈಂಕರ್ಯವನು
ಮುಗಿಸಲು ಕೂತಿರುವೆ
ಹಸೆಮಣೆಯಲಿ

ಸ್ನೇಹಿತರು ನುಡಿದಿಹರು
ಕಿಚಾಯಿಸೋ ಮಾತನು
ನಾಚುತ ತಲೆತಗ್ಗಿಸಿರುವೆ
ಹಸೆಮಣೆಯಲಿ

ಚಿಕ್ಕ ಮಕ್ಕಳ ತುಂಟತನ
ನನಗಾದ ಮುಜುಗರವ
ನೀ ಕೂತು ಬಗೆಹರಿಸು

ಬರಲಿ ಭರವಸೆ ಇರಲಿ

ಎಲ್ಲೋ ದೂರದಲಿ ಕಾಣುತಿದೆ
ಹಸಿರು ತುಂಬಿದ ಮೆಟ್ಟಿಲುಗಳು
ಮುಂದೆ ನುಗ್ಗುವೆ ತಾಳ್ಮೆಯಿಂದ
ಮೆಟ್ಟಿಲೇರಿ ಮೇಲೆ ನಿಲ್ಲಲು

ಬಿಡಿಸಿ ಹೇಳು ಬರುವ ತೊಡಕನು
ವಿವರಿಸು ಪಾರಾಗುವ ಪರಿಯನು
ಹರಸು ನನ್ನನು ಗುರಿಯ ತಲುಪಲು
ದೂರದಲ್ಲಿನ ಮೆಟ್ಟಿಲನೇರಲು

ಸೂಕ್ಷ್ಮ ಮನಸಿನ ಸುಪ್ತ ಕನಸಲಿ
ಕಾಣದಿರಲಿ ಗುಪ್ತವಾದ ಕಲ್ಪನೆ
ಬರಲಿ ಕ್ಷಣಗಳು ಭರವಸೆಯಲಿ
ಇರಲಿ ನಂಬಿಕೆಯು ಬದುಕಿನಲಿ

ಮೌನದ ಮನ

ಮರದಾ ಮ್ಯಾಲೆ
ಕೂಗೋ ಹಕ್ಕಿ
ಇಂದು ಯಾಕೋ
ಎದೆಯಾ ಒಳಗೆ
ಕಿರುಚಿದಂತೆ ಆರೋಹಣ

ಮುಖವು ನಗಲು
ಹರ್ಷದ ಹೊನಲು
ಹೆಪ್ಪುಗಟ್ಟಿದ
ಮನಸಿನ ಒಳಗೆ
ಹೇಳಲಾಗದ ಆಕ್ರಂದನ

ಇಡುವ ಹೆಜ್ಜೆ
ಗುರುತಾದರೆ
ಮುಂದಿನ ಯುಗಕೆ
ಇತಿಹಾಸವು

ದೂರ ಹೋಗು
ಎಂದಾಕ್ಷಣ
ಅರಳಿದ ಪ್ರೀತಿ
ಬಾಡೋಗದು

ನಿನಗಾಗೆ ಇರವ
ಈ ಹೃದಯಕ್ಕೆ
ನಲಿಯುವ ಆಸೆ
ಮಣ್ಣಾಯಿತು

ಬಂದೇ ಬರುವೆ
ಒಂದು ದಿನ
ನಿನ ಒಂಟಿತನಕೆ
ಸ್ಪಂದಿಸಲು

ಮೋಡ ಕರಗಲು

ಕಾರ್ಮೋಡ ಹರಿದಿರಲು
ಹೊಂಬಿಸಿಲು ಹರಡಿಹುದು
ನನ್ನವಳ ಮನದಲ್ಲಿ
ನಾನೇ ಇರಲು
ಹುಸಿಮುನಿಸು ಕರಗಿರಲು
ಗಾಂಭೀರ್ಯ ಅಡಗಿಹುದು
ಒಲವಿನ ಮಲ್ಲಿಗೆಯು
ಅರಳುತಾ ಇರಲು

ಕಣ್ಣೋಟ ಕಂಡಾಗ
ಬೆಳ್ಳು ಮೂಡಿದ ಹಾಗೆ
ಅವಳ ಹುಡುಗಾಟವೇ
ನನ್ನ ಮನದಾಳದ ಬಯಕೆ

ಕೋಪದಲಿ ಗುಡುಗಿರಲು
ಮುಖವೆಂಬ ಕಮಲವು
ಕೆಸರಿನ ಗುಡ್ಡೆಯಲಿ
ತೊರೆದ ನೋವಿನ ಭಾವವು

ನನ್ನವಳ ನಗುವಿನಲಿ
ಪ್ರತಿಕ್ಷಣದ ನೋವಿನಲಿ
ಉಸಿರಾಟದ ಗಾಳಿಯಲಿ
ಸಹಬಾಗಿಯೆಂದು ನಾನೇ ಇರಲಿ

ಬೇಸರಿಸಲು ಅವಳಲ್ಲಿ
ಮನವು ನೋಯುವುದಿಲ್ಲಿ
ಹಂಬಲಕೆ ಗುರಿಯಾಗಿ
ಬಯಸುತ ನಾನಾಗುವೆ ನಿಗರ್ವಿ

ಅವಳೆಂದು ದೂರಾಗಳು
ನನಗಾಗೆ ಬದುಕುವಳು
ಮೋಡ ಕವಿಯುವುದು
ಕರಗಿ ನೀರಾಗುವುದು

ಮುಂಜಾನೆ ಅರಿಶಿನವು
ಮುಸ್ಸಂಜೆ ಕುಂಕುಮವು
ನಡು ರವಿಯ ಶಾಖವು
ಮುದ್ದು ಮನಸಿನ ಕೋಪವು

ಒಂದು ನಿಮಿಷದ ಕೋಪ
ಹಲವು ದಿನ ಮೈ ತಾಪ
ಬಿಟ್ಟು ಬದುಕುವ ಗಾಂಪ
ನಾನಾದರೆ ನೋವು ಸಂತಾಪ

ಅಪ್ಪಿಯೆಂಬುವ ಮಾತು
ಒಂದಾಗುವ ಸೂಚನೆಯು
ವಸಂತನ ಆಗಮನವು
ಕೋಗಿಲೆಯು ಕೂಗುತಿರಲು

ಬಹುನಿರೀಕ್ಷಣೆ

ಚೂರೇ ಚೂರು
ಬೆಳಕು ಬೇಕು
ಬದುಕು ಈಗ ಬೆಳಗಲು
ಮಿಂಚು ಹುಳುವಿನ
ಬೆಳಕಾದರೂ ಸಾಕು
ಬಾಳು ಎಂದೂ ಮಿನುಗಲು

ಹರಿವ ನದಿಯ ತೀರದಲ್ಲಿ
ಬರಡು ಭೂಮಿಯ ಹಾಗಿದೆ
ಘಾಸಿಯಾದ ಈ ಮನವು
ಮೇಘ ಹುಡುಕುವ ವೇಳೆ
ನೀಲ ಆಗಸ ಅರಸಿದಂತೆ

ಖಾಲಿ ಮರಳುಗಾಡಿನಲ್ಲಿ
ಮೋಡ ಕವಿದ ಹಾಗಿದೆ
ಭರವಸೆಯ ಇಣುಕು ನೋಟ
ಗುಡುಗು ಮಿಂಚಿನ
ಹಿಂದ ಮಳೆ ನಿರೀಕ್ಷಸಿದಂತೆ

ಸೂತ್ರ ಹರಿದ ಬುಗುರಿಯಾಗು
ಮನಬಂದ ಹಾಗೆ ತಿರುಗಲು
ಕೋಪ ತೊರೆದು ಯೋಚಿಸು
ಒಳಿತ ನೆನೆದು ಮೃದುವಾಗಿ
ನೋಡು ನಿನ್ನೊಳಗಿನ ಅಂದವ