Sunday, September 30, 2012

|| ಮುತ್ತೈದೆ ||

ಸಂಗಾತಿ ಸಂಗ ಕೊನೆತನಕ ಇರಲೆಂದು
ಸಹಜವಾಗಿ ಬಯಸುಳು ಮಹಿಳೆಯು
ಬಾಳಿನ ಸೂರ್ಯ ಹಣೆ ಮೇಲೆ ಬೆಳಗಲೆಂದು
ಬೆಳದಿಂಗಳಾಗಿ ಚಂದಿರನಂತೆ ಕಾಣುವಳು ||

ಹಸಿರು ಬಳೆಗಳ ಸದ್ದನ್ನು ಮಾಡುತ
ಗೆಜ್ಜೆಯ ನಾದವನು ಕಿವಿಯಲಿ ಕಂಪಿಸುತ
ಸಂಗಾತಿ ಸಂಪ್ರೀತಿ ಸ್ವಂತಕೆ ನೀಡುತ
ಮೂಗುದಾರ ಹಾಕುವಳು ಎಡವದಂತೆ ನಡತೆಯಲಿ ||

ಸಿಂಧೂರ ಸಿರಿಯಾಗಿ ಹಣೆಯಲ್ಲಿ ನಗುತಿರಲಿ
ಅರಿಶಿನ ಕುಂಕುಮವು ಸೌಭಾಗ್ಯ ನಿಧಿಯಾಗಿ
ಕೊರಳಲ್ಲಿ ಮಾಂಗಲ್ಯ ಬೆರಳಲ್ಲಿ ಕಾಲುಂಗುರ
ತುಂಬಿರಲು ಸೂಚಕವು ಧೈರ್ಯದಿ ಮೆರೆಯಲು ||

ಶ್ರಮಿಸುವಳು ಗೌರವ ತರುವಲ್ಲಿ ಹುಟ್ಟಿದ ಮನೆಗೆಂದು 
ಉರಿಯುತ ಬೆಳಗುವಳು ನೆಲೆನಿಂತ ಮನೆಯನ್ನು
ಸಂತಾನ ನೀಡಿ ಕುಲವನ್ನು ಬೆಳೆಸುತ
ಜೀವನವ ಸವೆಸುವಳು ಕಾಲಿಟ್ಟ ಮನೆಗಾಗಿ ||

ಪಡೆಯುವಳು ಮನಸಿಗೆ ಸಮಾದಾನ
ಪತಿಯನು ಪರದೈವವೆಂದು ಪೂಜಿಸುತ
ಸಾವಿನಲು ಬಯಸುವಳು ಸೌಭಾಗ್ಯವನು
ಕೊನೆತನಕ ಮಾಡುವಳು ಹಲವಾರು ವೃತಗಳನು ||

ಹೆದರಳು ಬದುಕಿನ ಏರಿಳಿತಗಳಿಗೆ
ಸಹಿಸುವ ಸಹನೆಯಲಿ ಗೆಲ್ಲುತ
ಎದುರಿಸುವಳು ನೋವಿನ ಕ್ಷಣಗಳನು
ಸೌಭಾಗ್ಯ ಸಿರಿಯನೊಂದೇ ಬಯಸುವಳು ಮುತ್ತೈದೆ ||

Saturday, September 29, 2012

.....ಗಣೇಶನಿಗೆ ಜೀವ ನೀಡುವ ಗೋಪಾಲ.....


ಗಣೇಶ ಹಬ್ಬ ಬಂತೆಂದರೆ ಎಲ್ಲರ ಚಿತ್ತವನ್ನು ಆಕರ್ಷಿಸುವ ಗಣೇಶ ಮೂರ್ತಿಗಳು ಹೊನ್ನಾವರದ ಹಳ್ಳಿಯಾದ ಕೆಕ್ಕಾರಿನಲ್ಲಿ ನಿರ್ಮಿತವಾಗುತ್ತದೆ ಎಂದರೆ ಹಲವು ಜನರಿಗೆ ನಂಬಲಸಾಧ್ಯವಾದ, ತಿಳಿಯದೇ ಇರುವ ಸಂಗತಿ. ೬೧ನೇ ವಸಂತಕ್ಕೆ ಕಾಲಿಟ್ಟ ಭಟ್ಟರು ಜನಿಸದ್ದು --೧೯೫೨ ರಲ್ಲಿ. ಸ್ವಂತ ಊರಾದ ಕೆಕ್ಕಾರಿನಲ್ಲಿ ಹುಟ್ಟಿ ಬೆಳೆದ ಭಟ್ಟರು ಕಲಾಕಾರನಾಗಿ ಬೆಳೆದುನಿಂತಿದ್ದು ಸಹ ಅದೇ ಊರಿನಲ್ಲಿ. ಹೆಚ್ಚಿನವರಿಗೆ ಇವರ ಹೆಸರು ತಿಳಿದಿಲ್ಲ. ಪ್ರಖ್ಯಾತರಾಗಿರುವುದು ಜಿ. ಡಿ. ಭಟ್ಟ ಎಂದು, ಪೂರ್ಣ ಹೆಸರು ಗೋಪಾಲಕೃಷ್ಣ ದೇವರು ಭಟ್ಟ, ಇವರ ಹತ್ತಿರದವರು ಜಿ. ಡಿ ಎಂದು ಕರೆಯುತ್ತಾರೆ

ಪುತ್ರಿಯರೊಂದಿಗೆ ವೈವಾಹಿಕ ಜೀವನವನ್ನು ಸಂತೋಷದಿಂದ ಸಾಗಿಸುತ್ತಿದ್ದು ಇಷ್ಟವಾದ ಚಿತ್ರಕಲೆಗೋಸ್ಕರ ತನ್ನ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಬೇರೆಯವರಿಗೆ ಭಾರವಾಗದೆ ಖುಷಿಯಿಂದ ಜೀವನ ನಡೆಸುವುದು ಇವರ ಜೀವನತತ್ವ. ಇವರನ್ನ ನಂಬಿ ಆಧರಿಸಿರುವವರನ್ನು ನೆಮ್ಮದಿಯಾಗಿಡುವುದು ಭಟ್ಟರ ಮಹಾತ್ವಾಕಾಂಕ್ಷೆಗಳಲ್ಲೊಂದು.ಬೆಂಕಿಯಲ್ಲಿ ಅರಳಿದ ಹೂವು:-

ಭಟ್ಟರು ಬೆಳೆದು ಬಂದ ಹಾದಿ ಸುಗಮವಾಗಿರಲಿಲ್ಲವೆಂಬುದು ಅವರ ಜೀವನದ ಚಿತ್ರಣ ಕೇಳಿದಾಗ ತಿಳಿಯುವ ತಿರುಳು. ಗೋಪಾಲ ಬಾಲಗೋಪಾಲನಾಗಿದ್ದಾಗ ಎರಡು ತಿಂಗಳ ಅಂತರದಲ್ಲಿ ಹೆತ್ತವರನ್ನು ಕಳೆದುಕೊಂಡು ತನ್ನ ಅಣ್ಣ, ತಮ್ಮರೊಂದಿಗೆ ಅನಾಥಮಗುವಾಗಿ ಊರಿನವರ ಸಹಾಯದಿಂದ ಬೆಳೆದರು. ವರ್ಷದವನಿದ್ದಾಗಲಿಂದಲೇ ಕಷ್ಟದ ಜೀವನವನ್ನು ನಡೆಸಲು ಪ್ರಾರಂಬಿಸಿದ ಭಟ್ಟರಿಗೆ ಊರಿನ ಪ್ರತಿಯೊಬ್ಬರು ಜಾತಿಬೇಧ ಮರೆತು ಬೆಳವಣಿಗೆಗೆ ನೆರವಾದರು ಎಂದು ಕೃತಜ್ನತೆಯಿಂದ ನಮಿಸಿ ನುಡಿಯುತ್ತಾರೆ. ಏಕಲವ್ಯನಂತೆ ಚಿತ್ರಕಲೆಯನ್ನು ಕರಗತ ಮಾಡಿಕೊಂಡ ಇವರು ಕಲಿತದ್ದು ಕೇವಲ ೯ನೇ ತರಗತಿ. ಸರಳ ಮತ್ತು ಸುಖೀ ಜೀವನ ಸಾಗಿಸುತ್ತಿರುವ ಇವರು ಚಿತ್ರಕಲೆಯಿಂದ ಜೀವನಕ್ಕೆ ಬೇಕಾಗುವ ಅವಶ್ಯಕತೆಗಳನ್ನ ಪೂರೈಸಿಕೊಂಡಿದ್ದಾರೆ. ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ಅತ್ಯುತ್ತಮ ಚಿತ್ರಕಲೆಯನ್ನು ನೀಡುವುದು ಇವರ ಆಶಯ.ಗಣೇಶಮೂರ್ತಿ ನಿರ್ಮಿಸುವಲ್ಲಿ ಅಣಿಯಾಗಿದ್ದು:-ಗಣೇಶಮೂರ್ತಿಯನ್ನು ಪಕ್ಕದಮನೆಯಿಂದ ಪೂಜೆಗೆತರುತ್ತಿದ್ದರು. ಆದರೆ ಒಂದು ವರ್ಷ ಮನೆಯಲ್ಲಿ ಇಚ್ಚಿಸಿದ ಮೂರ್ತಿಯು ಸಿಗಲಿಲ್ಲ ಮತ್ತು ಸಿಕ್ಕಿದ ಮೂರ್ತಿ ಹಿಡಿಸದೆ ಸ್ವತಃತಾವೆ ಗಣೇಶಮೂರ್ತಿಯನ್ನು ಮಾಡೋಣವೆಂದು ಇವರ ಅಣ್ಣ ಎಂಡಿ. ಭಟ್ಟರು ನಿರ್ಧರಿಸಿ ಮುಂದಿನ ವರ್ಷ ಗಣೇಶಮೂರ್ತಿ ಮಾಡುವಲ್ಲಿ ಅಣ್ಣ ಎಂ. ಜಿ. ಭಟ್ಟ ನಿರತರಾದರು. ಸಮಯದಲ್ಲಿ ಬರೇ ಮಣ್ಣನ್ನು ಮುದ್ದೆ ಮಾಡಿ ಕೊಡುತ್ತಿದ್ದ ಭಟ್ಟರು ವರ್ಷಗಳ ನಂತರ ಮೂರ್ತಿ ಮಾಡುವ ಸಮಯದಲ್ಲಿ ಅಣ್ಣ ಮನೆಯಲ್ಲಿ ಇಲ್ಲದೇ ಇದ್ದಾಗ ಅಂಕೋಲದ ಪುಂಡಲಿಕ ಮಹಾಲೆಯವರು ಮತ್ತು ಕರ್ಕಿ ಕೇಶವ ಭಂಡಾರಿಯವರು ನಿರ್ಮಿಸಿದ್ದ ಮೂರ್ತಿಗಳನ್ನು ನೋಡಿ, ಇಂಚಿಂಚು ಅಳತೆ ಮಾಡಿ ಗಣೇಶಮೂರ್ತಿಯನ್ನು ನಿರ್ಮಿಸಿದರು.  ದಿನದ ನಂತರ ಕಾರವಾರದಿಂದ ಮರಳಿದ ಅಣ್ಣ ಅಂದವಾದ ಗಣೇಶಮೂರ್ತಿಯನ್ನು ನೋಡಿ, ಮೊದಲು ಮೂರ್ತಿಯನ್ನು ಮುಟ್ಟಲು ಸಹ ಅವಕಾಶ ನೀಡುತ್ತಿರದವರು ಇನ್ನುಮುಂದೆ ಗಣೇಶಮೂರ್ತಿ ನಿರ್ಮಾಣದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದು ಹೇಳಿ ಹುರಿದುಂಬಿಸಿ ಮನಮೋಹಕ ಗಣೇಶಮೂರ್ತಿ ನಿರ್ಮಿಸುವಲ್ಲಿ ಭಟ್ಟರು ಅಣಿಯಾಗುವಂತೆ ಮಾಡಿದ ಕಥಾನಕ.


ಕಲಿಯುಗದಲ್ಲೊಬ್ಬ ಏಕಲವ್ಯ:-

ಒಂದು ವರ್ಷದಕ್ಕೆಂದು ಟೈಲರಿಂಗ ಕ್ಲಾಸಿಗೆ ಗಾಜನೂರಿಗೆ ತೆರಳಿದ್ದ ಭಟ್ಟರು ವಾಸವಿದ್ದ ಸ್ಥಳದಲ್ಲಿ ನೇತಾಡುತ್ತಿದ್ದ ರಾಷ್ಟ್ರಪುರುಷರ ಚಿತ್ರಪಟಗಳನ್ನ ನೋಡಿ ಆಕರ್ಷಿತರಾದ ಭಟ್ಟರು, ಸ್ನೇಹಿತರೊಂದಿಗೆ ಸಂಜೆ ಸಮಯದಲ್ಲಿ ಸುತ್ತಾಡಲು ಹೋಗುವುದನ್ನು ತಪ್ಪಿಸಿಕೊಂಡು ಡಾ|| ರಾಧಾಕೃಷ್ಣನ್, ನೆಹರು, ಇಂದಿರಾ ಗಾಂಧಿಯವರ ಚಿತ್ರಗಳನ್ನು ಬಿಡಿಸಿ ಗೇಲಿ ಮಾಡುತ್ತಿದ್ದ ಸ್ನೇಹಿತರಿಗೆ ಸುಂದರ ಚಿತ್ರಗಳ ಮೂಲಕ ಉತ್ತರಿಸಿದ್ದರು. ಇದನ್ನು ನೋಡಿದ್ದ ಪ್ರತಿಯೊಬ್ಬರೂ ಹೊಗಳಿ ಬೇರೆಯವರನ್ನು ಕರೆದು ತೊರಿಸುವಂತೆ ಮಾಡಿತ್ತು ಎನ್ನುವುದು ಸಂತೋಷದ ವಿಷಯ. ಯಾರ ಬಳಿಯೂ ವಿಧ್ಯಾರ್ಥಿಯಾಗಿ ಅಭ್ಯಸಿಸದೆ ಚಿತ್ರಕಲೆಯಲ್ಲಿ, ಗಣೇಶಮೂರ್ತಿ ನಿರ್ಮಿಸುವಲ್ಲಿ ಏಕಲವ್ಯನಂತೆ ಕಲಿತು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವುದು ನಿಜವಾಗಿಯೂ ಶ್ಲಾಘನೀಯ.ನಾರಾಯಣ ಭಟ್ಟ ಹೆಬ್ಳಿಕೇರಿ ಮತ್ತು ಅಣ್ಣ ಎಂ. ಜಿ. ಭಟ್ಟರಲ್ಲಿ ಗಣೇಶಮೂರ್ತಿ ನಿರ್ಮಿಸುವ ಬಗ್ಗೆ ಮಾರ್ಗದರ್ಶನ ಪಡೆದುಕೊಂಡರೆ ನವಿಲಗೋಣ ಎಸ್. ಎಂ. ನಾಯ್ಕ ಇವರಲ್ಲಿ ಚಿತ್ರಕಲೆಯ ಬಗ್ಗೆ ಸಲಹೆ ಸೂಚನೆಗಳನ್ನು ಕೇಳಿಕೊಂಡರು.ಗಮನವಿಟ್ಟು ನಿಜವಾದ ಆಕಾರ, ಭಾವನೆ ಬರುವಂತೆ ಸ್ಪಷ್ಟವಾಗಿ ಚಿತ್ರಿಸುವುದರಿಂದ ಪ್ರತಿಯೊಂದು ಸಣ್ಣ ಸಣ್ಣ  ಸಂಗತಿಗಳೂ ಮೂಡಿಬರುತ್ತವೆ. ತಲೆಬಿಬಿಸಿ ಇಲ್ಲದೆ ಕೆಲಸ ಮಾಡುವುದರಿಂದ ಇವರು ಹಸನ್ಮುಖಿಯಾಗಿರುತ್ತಾರೆ ಮತ್ತು ಇವರ ಮಾತು ಹಾಸ್ಯ ಭರಿತವಾಗಿರುತ್ತದೆ ಎನ್ನುವುದು ಇವರ ಜೊತೆಯಲ್ಲಿ ಒಡನಾಡಿದಾಗ ತಿಳಿದಂತಹ ವಿಷಯ. ರಂಗೋಲಿ ಹಿಟ್ಟಿನಲ್ಲಿ ಚಿತ್ರ ಬಿಡಿಸುವುದೆಂದರೆ ತುಂಬಾ ಇಷ್ಟವಂತೆ, ಹಾಗೆ ಚಿತ್ರ ಬಿಡಿಸುವಾಗ ಜೊತೆಯಲ್ಲಿದ್ದು ಚಿತ್ರದಲ್ಲಿ ಮೂಡುವ ಸೂಕ್ಷ್ಮತೆಯನ್ನು, ಚಿತ್ರದ ಭಾವವನ್ನು ನೋಡಿದವರೆಲ್ಲರು ಉದ್ಗರಿಸಿ ಹೊಗಳಿದ್ದನ್ನು ಸ್ವತಃ ಕೇಳಿದ್ದೇನೆ. ಚಿತ್ರ ಬಿಡಿಸುವಾಗ ಭಾವತುಂಬಿ ಚಿತ್ರದ ಸೂಕ್ಶ್ಮತೆಗಳಿಗೆ ಹೆಚ್ಚು ಒತ್ತು ನೀಡುವುದು ಅವರು ಗಮನಿಸುವಂತಹ ವಿಷಯ.

ಹತ್ತಾರು ಜನರು ಇವರ ವಿಧ್ಯಾರ್ಥಿಯಾಗಿ ಕಲಿತಿದ್ದಾರೆ. ಗಣೇಶಮೂರ್ತಿ ನಿರ್ಮಿಸುವಾಗ ಅಣ್ಣನ ಮಗ ವಿನಾಯಕ ಕೆತ್ತನೆ ಕೆಲಸ ಮಾಡಿ, ವಿಧ್ಯಾರ್ಥಿಯಾಗಿ ಕಲಿಯುತ್ತಿದ್ದಾರೆ. ರಾಮಚಂದ್ರ ಶೆಟ್ಟಿ ಮತ್ತು ಗಣೇಶ್ ಶೆಟ್ಟಿಯವರು ವಿಗ್ರಹಗಳಿಗೆ ಬಣ್ಣ ನೀಡುವುದರಲ್ಲಿ ಸಹಕರಿಸುತ್ತಿದ್ದಾರೆ. ೧೨೦ ಮೂರ್ತಿಗಳಲ್ಲಿ . ಅಡಿಯಿಂದ ಅಡಿಗಯಷ್ಟು ದೊಡ್ಡ ಗಣೇಶಮೂರ್ತಿಗಳನ್ನ ನಿರ್ಮಿಸಿದ್ದಾರೆ.

ಪ್ರತಿವರ್ಷ ಕಡೂರು ಮತ್ತು ಚಿತ್ರದುರ್ಗಕ್ಕೆ ಹೋಗಿ ಗಣೇಶಮೂರ್ತಿ ಮತ್ತು ದುರ್ಗಾಮೂರ್ತಿಗಳನ್ನು ನಿರ್ಮಿಸಿ ಕೊಡುತ್ತಾರೆ. ಪ್ರತಿಭೆಗೆ ಮನ್ನಣೆ ಸಿಗುತ್ತಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ಭಕ್ತಿಗೀತೆ, ಭಾವಗೀತೆಗಳನ್ನು ಬರೆಯುವ ಹವ್ಯಾಸ ಹೊಂದಿದ್ದು ಅವುಗಳನ್ನು ಪ್ರಕಟಿಸುವ ಯೋಚನೆಯಲ್ಲಿದ್ದಾರೆ.


                                                             
೨೦೧೦ ಎಪ್ರಿಲ್ ನಲ್ಲಿ ನಡೆಸಿಕೊಟ್ಟ ಗೀತ ರಾಮಾಯಣದಲ್ಲಿ ೧೫೦ ಕಲಾವಿದರನ್ನು ಬಳಸಿಕೊಂಡು ನೀಡಿದ ರೂಪಕವನ್ನು ನೋಡಿ ಶ್ರೀ ರಾಘವೇಶ್ವರ ಶ್ರೀಗಳು ಸಾಕ್ಷಾತ್ ರಾಮಾಯಣವನ್ನೆ ಧರೆಗಿಳಿಸಿದೆ ಎಂದು ಪ್ರವಚಿಸಿ ಮಾಡಿದ ಶ್ಲಾಘನೆಯು ಜೀವನದಲ್ಲಿ ಮರೆಯಲಾಗದ, ಜೀವನದಲ್ಲೇ ಅತ್ಯಂತ ಖುಷಿ ನೀಡಿದ ಕ್ಷಣ.

ತೀರಾ ಬಡತನದ ಬದುಕು ನಡೆಸಿದ್ದ ಭಟ್ಟರು ಈಗ ಇವರನ್ನ ಅವಲಂಬಿಸಿದವರನ್ನು ಸುಖವಾಗಿಡಲು ಬೇಕಾದ ಅವಶ್ಯಕತೆಗಳನ್ನುಗಳಿಸಿದ್ದು ಇವರು ಸಾಧಿಸಿದಂತಹ ಒಂದು ಮೈಲಿಗಲ್ಲು. ೫೦೦ ಕಲಾವಿದರನ್ನು ಬಳಸಿ ಒಂದು ದೊಡ್ಡ ಮಹಾಭಾರತ ರೂಪಕವನ್ನು ಮತ್ತು ಶಂಕರಾಚಾರ್ಯರ ಕುರಿತಾದ ರೂಪಕವನ್ನು ಆಯೋಜಿಸುವುದು, ಸಾಧಿಸಬೇಕೆಂದುಕೊಂಡಂತಹ ಮೈಲಿಗಲ್ಲು.

ಮಟ್ಟಕ್ಕೆ ಮೇಲೇರಲು ಸಹಕರಿಸಿದ ಎಲ್ಲ ಮೆಟ್ಟಿಲುಗಳನ್ನು ಸ್ಮರಿಸುತ್ತ ಮುಂದಿನ ದಿನಗಳಲ್ಲಿ ಸಂತ್ರಪ್ತಿದಾಯಕವಾದ ಪ್ರೀತಿ, ಸಹಕಾರ ಸಿಗಲೆಂದು ಬಯಸುತ್ತ ಕೃತಜ್ನತೆಯಿಂದ ಭಾವುಕರಾದರು.


1) ಇಂತಹ ಮೇರು ಪ್ರತಿಭೆಯಿದ್ದು ತೆರೆಮರೆಯಲ್ಲುಳಿಯಲು ಕಾರಣ..?
ತೆರೆಮರೆಯಲ್ಲುಳಿದಿಲ್ಲವೆಂಬ ಭಾವ ನನ್ನಲ್ಲಿದೆ. ಬೇರೆ ಊರುಗಳಿಂದ ಜನರೆಲ್ಲ ಬಂದು ಗಣೇಶ ಮೂರ್ತಿಯನ್ನು ನೋಡ್ತಾರೆ ಮತ್ತು ಭಾವಚಿತ್ರಗಳನ್ನ ಬಿಡಿಸಿಕೊಂಡು ಹೊಗ್ತಾರೆ. ಕ್ಲಿಷ್ಟಕರವಾದ ಚಿತ್ರ ಬೇರಾರಿಂದಲು ಬಿಡಿಸಲಾಗುವುದಿಲ್ಲ ಎಂದಾಗ ಜಿ. ಡಿ. ಭಟ್ಟ ಬಿಡಿಸುತ್ತಾರೆ ಎಂದು ಹೆಮ್ಮೆಯಿಂದ ಹೇಳುವಷ್ಟು ಪ್ರಚಲಿತದಲ್ಲಿದ್ದೇನೆ ಎನ್ನುವ ಸಂತೋಷವಿದೆ.


2) ಬೇರೆಯಾವ ಕ್ಷೇತ್ರಗಳಲ್ಲಿ ನಿಮ್ಮ ಪ್ರತಿಭೆಗಳಿವೆ..?
ನಾಟಕ (ನಟನೆ, ನಿರ್ದೇಶನ), ಯಕ್ಷಗಾನ, ನಾಗರಹಾವನ್ನು ಮತ್ತು ಕೆಂಪುಮೂತಿಯ ಕೋತಿಗಳನ್ನು ಹಿಡಿದು ಕಾಡಿಗೆ ಬಿಡುವುದು, ಮದುವೆ ಮುಂಜಿಗಳಿಗೆ ಮಂಟಪ ಮಾಡುವುದು, ಸಭೆ ಸಮಾರಂಭಗಳಿಗೆ ವೇದಿಕೆ ಸಿದ್ಧಪಡಿಸುವುದು.


3) ಆಸಕ್ತಿ ಹೊಂದಿರುವ ಕ್ಷೇತ್ರಗಳಲ್ಲಿ ನಿಮ್ಮನ್ನು ನೀವು ಹೇಗೆ ತೊಡಗಿಸಕೊಳ್ಳುತ್ತೀರಿ..?
ಯಕ್ಷಗಾನದಲ್ಲಿ ಕೌರವ, ಅಕ್ರೂರ, ಆಂಜನೇಯ ಮುಂತಾದ ಕೆಲವು ಪಾತ್ರಗಳನ್ನ ಮಾಡಿದ್ದೇನೆ. ಸಾವಿರಾರು ನಾಟಕಗಳಲ್ಲಿ ಅಭಿನಯಿಸಿದ್ದೇನೆ ಮತ್ತು ನೂರಾರು ನಾಟಕಗಳನ್ನು ನಿರ್ದೇಶಿಸಿ ನಟಿಸಿದ್ದೇನೆ. ಅಂದವಾದ ವೇದಿಕೆ, ಮಂಟಪಗಳನ್ನು ರಾಜ್ಯಮಟ್ಟದ ನಾಟಕೋತ್ಸವದಲ್ಲಿ, ರಾಮೋತ್ಸವದಲ್ಲಿ, ಗೋಕರ್ಣದ ಶಿವರಾತ್ರಿ ಉತ್ಸವದಲ್ಲಿ ಮತ್ತು ಕೆಲವು ಮೆರವಣಿಗೆಗಳಲ್ಲಿ ರಥಗಳನ್ನು ಮಾಡಿರುವುದು ಖುಷಿತಂದಿದೆ.


                                                                                                                                                                                    Interviewed and Written By,
                                                                                                                                                                                    ಗುರಿಮುಟ್ಟುವ ತನಕ,
                                                                                                                                                                                    ವಿನಾಯಕ ಭಾಗ್ವತ.
                                                                                                                                                                                    vinayak.nilkod@gmail.com
                                                                                                                                                                                    http://vinayakgbhagwat.blogspot.com/

|| ಹುಣ್ಣಿಮೆ ರಾತ್ರಿಯುಲಿ ತಂಗಾಳಿ ತಂಪನಲಿ ||


ತಂಗಾಳಿಯು ಬೀಸುತ ತಂದಿದೆ
ಕಾಮನೆಯನು ನಿನ ಸೇರುವ ಹರುಷದಲಿ
ಹುಣ್ಣಿಮೆ ರಾತ್ರಿಯು ತುಂಬಿದೆ
ಕಾಂತಿಯನು ಬೆಳದಿಂಗಳ ತಂಪಿನಲಿ
ಜಗವು ಕಾಣುತಿದೆ
ಗೋಲಿಯಂತೆ ಭಾವನೆಯ ನೋಟದಲಿ ||

ಬಳಿಯಿರಲು ಪ್ರತಿ ಕ್ಷಣದಲೂ
ಸುಳಿಯದು ನೋವಿನ ಕರಿ ಛಾಯೆಯು
ಮಂಜಿನ ಬೆವರ ಹನಿ ಸೋಕಲು
ತುಸುವಾದರೂ ಮಿತಿ ಮೀರುವಾಸೆಯು
ಮಡಿಲಲ್ಲಿ ಮಲಗುತ ಮಗುವಾಗುವೆ
ಪರಿಸರದಲಿ ಪಸರಿಸುತಿರಲು ನಿನ ಹವೆಯು ||

ತಂಪಲಿ ನಿನ ಕಂಪಲಿ
ಮಿನುಗುವ ಆಭರಣದ ತಿರುಳಂತೆ
ಹೊಳಪಿನ ತಾರೆಯು
ಗೊಚರಿಸುತ ಆಕಷಿಸುತಿದೆ ವಿಲೋಚನವನು
ನಿನ ಸನಿಹವ ನನಗಿರಿಸು
ಧನ್ಯತೆಯ ಭಾವದಲಿ ನಾ ಮೀಯಲು ||


|| ಶೃತಿ ಸೇರಿಸು ||

ಮನ ರಮಿಸೊ ತಂಪು ತಂಗಾಳಿಯಲಿ
ಮಬ್ಬಾದ ಮುಸ್ಸಂಜೆ ವೇಳೆಯಲಿ
ಅಂಬರಕೆ ಇರುಳಿನಾಗಮನವಾಗುತಿರಲು
ಭೋರ್ಗರೆವ ಕಡಲಿನಲೆಗಳು
ದಡದಲಿ ಕೂತಿಹ ನನ್ನನ್ನು ಸೋಕಲು
ಸಂಗಾತಿ ಬೇಕೆಂಬ ಆಸೆಯು
ಮನದಾಳದಲಿ ಇಂಗಿರಲು ಜೊತೆಯಾಗಲು ಬಾ ||

ಮೂಡುತಿಹ ನಕ್ಷತ್ರಗಳನು
ನಿನ ಕಣ್ಣಂಚಲಿ ಕಾಣುವಾಸೆ ನನ ಕಣ್ಣಿಗೆ
ಬೆಳದಿಂಗಳು ಅಸುನೀಗಿದರೆ
ಋತುಮಾನವ ತೆಗಳುವವಾಸೆ ಈ ಜೀವಕೆ
ಸೋಂಕಿನಲಿ ಸೊಂಪಾಗಿ
ರಾಗದಲಿ ಹಾಡುತಿಹೆನು ನಿನ ಆಗಮನಕೆ
ಬಳಿ ಬಂದು ಶೃತಿ ಸೇರಿಸು
ಲಯ ತಪ್ಪದಂತೆ ನನ ಬಾಳ ಗಾನಕೆ ||

ಏಕಾಂತ ಕಾಡುತಿದೆ
ನಿನ ಸನಿಹದ ಬಯಕೆಯತಿಯಾಗಲು
ಮನದಾಳದ ಮಾತನು
ಪಿಸುಗುಡುವಾಸೆ ನಿನ್ನೊಂದಿಗೆ
ಸಂಗಡಕೆ ನೀನಿರಲು
ಮನದಕಾಮನೆಗಳೆಲ್ಲವು ದೂರಾಗಲು
ಬದುಕಿನ ಅರ್ಧಾಂಗಿಯಾಗಲು
ಆ ಸ್ವರ್ಗವ ಬಯಸೆನು ಕಿಚ್ಚು ಹಚ್ಚಲು ||

ಗುರಿ ಮುಟ್ಟುವ ತನಕ,
ವಿನಾಯಕ ಭಾಗ್ವತ

Saturday, September 8, 2012

|| ಜಂಟಿಯಾಗಲು ಬಾ ನೀನು ||

ನಿನ್ನ ಮಾತು ನನ್ನ ಉಸಿರು
ಪ್ರೀತಿಯಲಿ ಹರಟೆಯ ಹೊಡೆಯೋಣ ಕೂರೆ
ನನ್ನ ದನಿಯು ನಿನ್ನ ರಾಗ
ಪ್ರೇಮ ಪಲ್ಲವಿ ಹಾಡುವ ಬಾರೆ
ಜಗವನು ಬೆಳಗುವ ರವಿಯನು ಕರೆದು
ನಿನ್ನ ಹಿಂಬದಿಗೆ ನಿಲ್ಲಲು ಹೇಳುವೆ
ಹುಣ್ಣಿಮೆ ಚಂದ್ರನ ಎಳೆದು ತಂದು
ಉಡುಗರೆ ನೀಡುವೆ ಅತ್ತರೂ ತಾರೆ ||

ಪ್ರೀತಿಯರಾಗಕೆ ಉಸಿರಿನ ಭಾವವು
ಮುಖದಲಿ ಮೂಡುತ ನುಡಿದಿದೆ
ಭಾವವೊಂದೆ ಸಾಕು ಈಗ
ಏಕೆ ಬೇಕು ಸೆಳೆವ ರಾಗ
ಸಂಪ್ರೀತಿಯ ನೀಡುತ ನೀ ಬಾ ಬೇಗ
ಮಿನುಗುವ ತಾರೆಯ ಬೆಳಕಲಿ ಕಾಯುತ
ಹೆದರದೆ ಕೂರುವೆ ನಡು ರಾತ್ರಿಯಲು
ಒಂಟಿ ಜೀವನದಲಿ ಜಂಟಿಯಾಗಲು ಬಾ ನೀನು ||

|| ಸರ್ವಸ್ವವೆ ರಾಮ ||

ಈ ದೇಹದ ಕಣ ಕಣದಲು ತುಂಬಿಹುದೊಂದೆ ನಾಮ
ಬಾಯ್ತೆರೆದು ಕೂಗಿದರು ನುಡಿಯೊಂದೆ ರಾಮ
ನಿನ ಪಾದವ ಶಿರದ ಮೇಲಿರಿಸಿ ನರ್ತಿಸು ನೀ ರಾಮ
ಶಿಲೆಯಾಗಿಹ ನನ್ನನ್ನು ಮನುಜನಾಗಿಸು ರಾಮ ||

ಜಗ ತುಂಬಿಹ ವಾಯುವಿನಲು ನಿನ್ನ ಸುವಾಸನೆ ರಾಮ
ಹಸಿರು ಬಿಡುವ ಉಸಿರಲ್ಲು ನಿನ್ನ ಕೃಪೆಯು ರಾಮ
ವಾಯುಸುತನ ಬಿಗಿದಪ್ಪಿ ಪ್ರಾಣಸಖನಾದ ರಾಮ
ಮಹಾ ಸಾಗರವ ದಾಟಲು ಹೆಗಲೆರಿದವ ರಾಮ ||

ಜಗಕೆಲ್ಲ ಸುಂದರನು ಜಾನಕಿ ವಲ್ಲಭನೆ ಶ್ರೀರಾಮ
ಸತಿಯೊಬ್ಬಳನೆ ವರಿಸಿ ಆದರ್ಶ ಪತಿಯಾದ ರಾಮ
ಪಿತೃವಾಕ್ಯ ಪರಿಪಾಲಿಸಿ ಜನ್ಮದಾತನ ಗೌರವಿಸಿದವ ರಾಮ
ಮಡಿಲಲ್ಲಿ ಮಲಗಿ ಪಾವನಗೊಳಿಸಿದೆ ಕೌಸಲ್ಯೆಯ ಜನ್ಮ ||

ನಿನ ಆಗಮನಕಾಗಿ ಭಾವಾರ್ಥಿಯಾಗಿಹೆನು ಶಬರಿ ಪೂಜಿತ ರಾಮ
ಮೃತ್ಯುವಿನತಿಥಿಯಾಗುವಾಗ ನಿನ ಮಡಿಲಲಿ ಮಲಗಿಸಿಕೊ ರಾಮ
ಹಿಂದಿನ ಪಾಪಗಳನು ಮಂಜಂತೆ ಕರಗಿಸಿ ಮುಕ್ತಿಕೊಡು ರಾಮ
ಮುಂದಿನ ಘಳಿಗೆಗಳಲಿ ಪುಣ್ಯದ ದಾರಿಯಲೆ ನಡೆವಂತೆ ಮಾಡು ನೀ ರಾಮ ||

ನನ್ನ ದೇಹದ ಚರ್ಮ ಸುಲಿದು ಪಾದುಕೆ ಮಾಡಿಸುವೆ ರಾಮ
ನನ್ನ ಗುರುವಿನ ಗುರು ನೀನೆ ಜ್ನಾನದ ಗಣಿ ಶ್ರೀರಾಮ
ಕಷ್ಟದಲಿ ಉಂಡಂತ ನೋವ ಅಳಿಸಿ ಮರೆಮಾಡು ರಾಮ
ನಿನ ಚರಣದಡಿಯಲ್ಲಿ ನಲಿವಂತ ಸುಖ ಕರುಣಿಸು ರಾಮ ||

ಅಹಂಕಾರದಿ ಮೆರೆವ ನನ್ನತನ ಕಳೆ ರಾಮ
ಬಯಸಿದೆಲ್ಲ ಕಾಮನೆಯ ಇಡೇರಿಸಿದವ ರಾಮ
ನಿನ ಕೃಪೆಯಲಿ ನನ್ನ ಮುನ್ನೆಡೆಸು ರಾಮ
ನೆಮ್ಮದಿಯಲಿ ಬದುಕಲು ದುಃಖ ಸಹಿಸುವ ಸಹನೆ ಕರುಣಿಸು ರಾಮ ||

ದಶಕಂಠನ ವಧಿಸಿದಂತೆ ನೀಚತನವನಡಗಿಸು ರಾಮ
ಶಿವಧನಸ್ಸು ಮುರಿದಂತೆ ಮನದಾಸೆಯ ತೊಲಗಿಸು ರಾಮ
ಚಿತ್ತದಿಂದ ದೂರಾಗಲಿ ಉಳಿದೆಲ್ಲ ಯೋಚನೆಯು ರಾಮ
ನಿನ್ನ ಧ್ಯಾನವೊಂದುಳಿಸು ಈ ದೇಹದ ಕಣ ಕಣದಲು ಸರ್ವಸ್ವವೆ ರಾಮ ||

Monday, September 3, 2012

|| ಉಪಚರಿಸು ||

ಕಂಡೆ ನಾನು ಒಂದು ಕನಸು
ಅರಳಿದಂತೆ ನಿನ್ನ ಮನಸು
ಸಂಗಾತಿ ಬಯಸುವ ವಯಸು
ಜೊತೆಯಾಗಿ ಮಾಡು ನೀ ನನಸು ||

ನಯನದಲ್ಲಿ ಹೇಳಲು ನಾಚಿಕೆ
ಆದೆ ನೀ ಹಿಡಿಯಲಾಗದ ಮರೀಚಿಕೆ
ನೆನಪಿನಲ್ಲೆ ಉಳಿದಿಹ ನೋಟಕೆ
ಹೆಸರಿಡಲಾಗದೆ ಸೋತಿಹೆನು ಮೊಹಕೆ ||

ನೀಗಿಸು ಎದೆಯನಾವರಿಸಿದ ಪ್ರೇಮದಾಹವ
ಹಸಿರಾಗಿಸು ಮರುಭೂಮಿಯಂತ ಮನವ
ಪಾಲಿಗೆ ಪಾವನವು ಚಿಗುರದೆ ಬಾಡಿದ ಭಾವ
ಬಳಿ ಬಂದು ಗುಣಪದಿಸು ಹೃದಯದಲಾದ ಅಪಘಾತವ ||

ಕಲ್ಪನೆಯಲೆ ಮುದ ನೀಡುತಿಹೆ ಭಾವನೆಗೆಂದು
ಸುಂದರವಾಗಿ ಕಾಣುತಿಹೆ ಕರಿ ನೆರಳಲಿಂದು
ಮೂಡುತಿದೆ ನಿನ್ನ ಪ್ರತಿಬಿಂಬವು ಮಬ್ಬು ಎಂದು
ದರುಶನವ ನೀಡಿ ನೀ ಉಪಚರಿಸಬಾರದೆ ಬಳಿಗೆ ಬಂದು ||

Saturday, September 1, 2012

|| ಹೊಣೆಗಾರ ||

ಅರಸು ನೀನು ಕಾರ್ಯವನ್ನು
ಜನಿತ ಪುಣ್ಯ ಕರ್ಮಕೆ
ಪೆತ್ತವರು ಬಾಹ್ಯ ಕಾರಣಕರ್ತರು
ನಿನ್ನ ಭೌತಿಕ ಜನ್ಮಕೆ
ಹಿಂಬದಿಯಲಿ ನೈತಿಕ ರುವಾರಿಯವನು
ಭೂಮಿ ಮೇಲಿನ ಹುಟ್ಟಿಗೆ ||

ಹುಟ್ಟಿಸಿದ ದೇವನು
ಹುಲ್ಲ ಮೇಯಿಸಲಾರನು
ಕೆಲಸಕಣಿಯಾಗುವಂತೆ ಮಾಡುವ
ನಿನ್ನ ಜಠರವ ತುಂಬಲು
ನೋವಿನ ಹಿಂದೆ ನಲಿವನಿಟ್ಟು
ಹೋರಾಟದ ಪರಿಯ ಪರೀಕ್ಷಿಸುವನು ||

ಕಷ್ಟಪಡಲು ಜೀವಿಯು
ಬಾಳಿನಲಿ ಹುಡುಕವಂತೆ  ಸುಖವನು
ಕಾಲಚಕ್ರ ತಿರುಗಿಸುತ್ತ
ಪಕ್ವತೆಯಲಿ ಪರಿಪೂರ್ಣತೆಯ ತಿಳಿಸುವನು
ಮನುಜ ಮಾಡುವ ಕೆಲಸಕೆಂದು
ಲೆಕ್ಕವನಿಟ್ಟು ಜೀವನಮೌಲ್ಯವ ತಿಳಿಸುವವನೆ ಹೊಣೆಗಾರನು ||