Wednesday, May 31, 2017

ನೋಡಲಾಗದ ವ್ಯಥೆ

ದುಃಖ ತುಂಬಿದ
ಮೊಗದಲಿ ಕಂಡೆ
ಕಡಲ ಅಲೆಯಂತ ಕಂಬನಿ
ಮನಸಾರೆ ಅತ್ತುಬಿಡು
ಹರಿದು ಹೋಗಲಿ
ಕೊರಗಲು ತುಂಬಿದ ಕಣ್ಣೀರು

ನಾ ತಿರುಗಿ ನೋಡಲಾರೆ
ಭಾವ ಶರದಿಯ ಮುಖವನು
ನನ್ನ ಕಾಡುತಿದೆ ಪಾಪ ಪ್ರಜ್ಞೆಯು
ಏನು ಮಾಡಲಾಗದೆ ಕುಳಿತು
ಸೋಲಿನ ಅಸಾಹಯಕತೆಯು
ಮರುಗುವ ಮನಸನು ಮರೆಯಾಗಿಸು
ಭವ್ಯ ಭರವಸೆಯ ಮಡಿಲಿನಲಿ

ನಿನ್ನ ಕೆಂಗಣ್ಣಿನ ನೋಟಕೆ
ದುಮ್ಮಾನದ ಬಾಣವು
ಒಂದೊಂದೆ ಬಂದು ನಾಟುತಿದೆ
ನನ್ನೆದೆ ಕರುಣೆಯ ತುಮುಲಕೆ
ಸತ್ತ ದೇಹವು ಎದ್ದೇಳುವಂತೆ ಗೋಳಾಡು
ತುಂಬಿದ ನೋವು ಕರುಳಿಂದ ಹೋಗಲಿ
ಚಿರಶಾಂತಿಯ ಸಂವೇದನೆಯಲಿ

Monday, May 29, 2017

ಕಿರು ನಗು

ಅಲೆಮಾರಿ ಬದುಕಿನಲಿ
ಅನುರಾಗ ಬೆರೆಯುತಿದೆ
ಅನುಯಾಯಿ ಧ್ಯಾನದಲಿ
ಆಲಾಪ ಕೇಳುತಿದೆ
ವಿಹಾರದ ಸಂಜೆಯಲಿ
ವಿರಹವು ಅಳಿಯುತಿದೆ
ಇದಕ್ಕೆಲ್ಲ ಮೂಲವು
ಅವಳ ಕಿರು ನಗುವು                      

ತಿರುಗಿದೆ ಉಧ್ಯಾನವೆಲ್ಲ
ತಿಳಿಸದ ಅಧ್ಯಾಯವಿಲ್ಲ
ಅರಸುವ ಪರಿಯೊಂದ ಕಾಣೆ
ಸಿಗುಲು ಮಾಡುವೆ ಆಣೆ
ತೊರೆದು ಹೋಗೆನು ಬಾಳಲ್ಲಿ
ತಿರುಗಿ ಸುಳಿಯುವೆ ಜೊತೆಯಲ್ಲಿ
                   
ನಡೆಯುತ ದಾರಿಯಲಿ
ನಡುವಿನ ಕಣ್ಣಿನಲಿ
ಹುಡುಕುವೆ ತುಸು ಮೊಗವ
ಹೋಲದು ನಿನ್ನ ನಗುವ
ಕೇಳುತ ಒಳ ಮನಸ
ಹೇಳು ನಿನ್ನ ವಿಳಾಸ

Tuesday, May 23, 2017

ಕಣ್ಣೋಟ ಸೆಳೆಯುವ ಕನ್ನೆಮನೆ

ಕರಿಕಾನ ಕಣಿವೆಯಲಿ ಹುಟ್ಟಿ
ಧುಮುಕುವ ತೊರೆಯಾದೆ
ತೋಟದ ಬೆಳೆಗೆ ಆಹಾರವು
ನೀ ಹರಿವ ಅಮೃತವು

ಕಂಡಲ್ಲಿ ಅಡ್ಡ ಕಟ್ಟಿ
ಸೆಳೆಯುವರು ತಮ್ಮೆಡೆಗೆ
ಹಿತ್ತಲಿನ ಹಸಿವಿಗಾಗಿ
ಬರಿದಾಗದಂತೆ ಬಾವಿ

ಅದಕಂಜದೆ ಧುಮ್ಮಿಕ್ಕಿ ಹರಿದಿರುವೆ
ಒಡಲಾದ ಕಡಲ ಕಿನಾರೆಯವರೆಗೆ
ಮೇಲಿನೂರು ಕೆಳಗಿನೂರೆಂದು
ಇಬ್ಬಾಗಿಸಿ ನಲಿದಿರುವೆ ನೀಲಕೋಡಿನಲಿ

ಈಜು ಕಲಿಸುತ ದೇವನ ಮೀಸುವೆ
ಕಾರ್ತೀಕ ಭಜನೆಗೆ ಅಂತ್ಯ ಹಾಡುವೆ
ಜಟಿಲ ದಾರಿಯಲಿ ಚಲಿಸುತ
ಕನ್ನೆಮನೆ ಸಾರವೆಂದು ಗುರುತಾಗಿರುವೆ

Monday, May 22, 2017

ಮತ್ತೆ ಸುರಿಯಲಿ

ಮತ್ತೇ ಮತ್ತೆ ಹನಿಯುದುರುವುದೇ?
ಬಡವ ಬಯಸಿದ ಮಣ್ಣ ಹೊನ್ನಾಗಿಸಲು
ಇಳೆಯ ದಾಹ ನೀಗಿಸಲು
ಹಸಿರಿನ ಬಣವ ಹೆಚ್ಚಿಸಲು
ಧೋ ಎಂದು ಸುರಿಯಲಿ ಮುಂಗಾರು ಮಳೆ


ಬೀಜ ಬಿತ್ತುವ ರೈತನ ಕಾತುರಕೆ
ಎಂದು ನೆನೆಯುವುದು ತಣಿದ ಧರಣಿ?
ಸಮೀಪಿಸಲಿ ತುಂಡು ಮೋಡಗಳು
ಗುಡುಗು ಮಿಂಚುಗಳು ಆರ್ಭಟಿಸಲು
ನೆನೆಗುದಿಗೆ ಬಿದ್ದಿರುವ ಊಳುವ ಕೆಲಸಕೆ
ಚಾಲನೆ ಸಿಗಲಿ ಬೆನ್ನೆಲುಬಿನ ಮೂಲಕ
ಧೋ ಎಂದು ಸುರಿದಾಗ ಮುಂಗಾರು ಮಳೆ

ಜಾನುವಾರುಗಳ ಬವಣೆ ನೀಗಲು
ಮೇವುಗಳು ಬೆಳೆಯಲಿ ವಿಫುಲವಾಗಿ
ನೀರಡಿಕೆಯ ದಾಹ ಕುಂದಲು
ಕರೆ ಕಟ್ಟೆಗಳು ತುಂಬಿ ಹರಿಯಲಿ
ಉರಿತಾಪದ ಧಗೆಯು ಆರಲು
ಹಸಿರಿನೆಲೆಗಳ ತಂಗಾಳಿ ಬೀಸಲಿ
ಧೋ ಎಂದು ಸುರಿದಾಗ ಮುಂಗಾರು ಮಳೆ

Wednesday, May 17, 2017

ಹೆಣ್ಣೆಂದರೆ ಯಾರು?

ಹೆಣ್ಣೆಂದರೆ ಯಾರು?
ಎರಡು ಸಂಸ್ಕೃತಿ, ಸಂಪ್ರದಾಯಗಳನು ಬೆಸೆಯುವ ಸೇತುವೆ

ಹೆಣ್ಣೆಂದರೆ ಯಾರು?
ಭಾಷೆಯನು ಪಸರಿಸುವ ರಾಯಭಾರಿ

ಹೆಣ್ಣೆಂದರೆ ಯಾರು?
ಹಲವು ಕಲೆ-ಶಿಲ್ಪಕಲೆಗಳ ಪ್ರತಿನಿಧಿ

ಹೆಣ್ಣೆಂದರೆ ಯಾರು?
ಹೊತ್ತು ಹೆತ್ತು ಸಲಹುವ ತಾಯಿ

ಹೆಣ್ಣೆಂದರೆ ಯಾರು?
ಜೊತೆಯಾಡಿ ಸರಿ ತಪ್ಪು ತಿಳಿಸುವ ಸಹೋದರಿ

ಹೆಣ್ಣೆಂದರೆ ಯಾರು?
ತಪ್ಪನ್ನು ಶಿಕ್ಷಿಸಿ ಸರಿಯಾಗಿ ಬೋಧಿಸುವ ಶಿಕ್ಷಕಿ

ಹೆಣ್ಣೆಂದರೆ ಯಾರು?
ನಮ್ಮಲ್ಲಿನ ಅಂತಃಶಕ್ತಿಯನ್ನರಿತು ಪ್ರೇರೇಪಿಸುವ ಗೆಳತಿ

ಹೆಣ್ಣೆಂದರೆ ಯಾರು?
ಒಲವಿನ ಪ್ರೀತಿಯನು ಧಾರೆ ಎರೆವ ಪ್ರೇಯಸಿ

ಹೆಣ್ಣೆಂದರೆ ಯಾರು?
ಸಂತಾನದ ಮೂಲಕ ಪೀಳಿಗೆ ಪ್ರಾರಂಭಿಸುವ ಹೆಂಡತಿ

ಹೆಣ್ಣೆಂದರೆ ಯಾರು?
ಜೀವನದ ಏಳು ಬೀಳಿನಲಿ ಜೊತೆಬರುವ ಸಂಗಾತಿ

ಹೆಣ್ಣೆಂದರೆ ಯಾರು?
ಮನೆ ಮನವ ಗುಡಿಸಿ ಸ್ವಚ್ಛವಾಗಿಡುವ ಮಗಳು

ಹೆಣ್ಣೆಂದರೆ ಯಾರು?
ಕಥೆಯನ್ನು ಹೇಳುವ ನೀತಿಯನು ಬೋಧಿಸುವ ಅಜ್ಜಿ

ಹೆಣ್ಣೆಂದರೆ ಯಾರು?
ಸಹನೆಯಲಿ ಮನ್ನಿಸುವ ಕ್ಷಮಯಾ ಧರಿತ್ರಿ

ಹೆಣ್ಣೆಂದರೆ ಯಾರು?
ಬಾಹ್ಯಾಂತರದ ರೂಪ ತಿಳಿಸುವ ಕನ್ನಡಿ

ಹೆಣ್ಣೆಂದರೆ ಯಾರು?
ತಾನು ಗಳಿಸಿದ ವಿದ್ಯೆಯನು ಅರಹುವ ಶಾಲೆ

Monday, May 15, 2017

ಕಾರ್ಮೋಡ

ಬೆಳ್ಳಿ ಮುಗಿಲು ಮರೆಯಾಗಿದೆ
ಕಸವಿರದ ಕಾರ್ಮೋಡ ಕವಿದಿದೆ
ಇಳೆಯಲ್ಲರಳಿದ ಬೆಳಕು ಬರಿದಾಗಿದೆ
ಇರುಳಿನ ಛಾಯೆಯು ರವಿಯನ್ನು ನುಂಗಿದೆ

ಕಡಿದಾದ ಕರಿ ಮೋಡದ ಭಾರಕೆ
ಸ್ಥಿರವಾದ ಬಾನೇ ಬಾಗಿದೆ
ಹನಿಗಳ ಸುರಿಸಲು ಮೊದಲಾನ್ವೇಷಣೆಗೆ
ಹರಿವ ನದಿಗಳ ದಾರಿಯ ನೋಡಲು ಕಡಲಿನೆಡೆಗೆ

ಕಾರ್ಮೋಡ ಕವಿದಿರಲು ಹಲವು ಭರವಸೆಗಳು
ಕುತ್ತಿಗೆಯ ಮೇಲೆತ್ತಿ ಹಂಬಲಿಪ ಮನಗಳು
ಬಿತ್ತನೇಯ ಬೀಜವ ಅರಸುವ ಕಣ್ಣುಗಳು
ದಾಹ ನೀಗಬಹುದೇ ಧರಿತ್ರಿಯ ಒಡಲಿನೊಳು?

Tuesday, May 9, 2017

ಹತ್ತು ಹೆಜ್ಜೆ ಗುರುತುಗಳ ಹಿನ್ನೋಟ ಮುನ್ನೆಡೆಗೆ ಮಾದರಿ

ಮೊದಲ ವಂದನೆಯೂ ಮತ್ತು ಪೂಜೆಯೂ ಶ್ರೀ ಗಣೇಶನಿಗೆ ಮಾಡುವ ಹಾಗೆ ಸಂಘಟನೆಯನ್ನು ಮೊದಲಿಗೆ ಎಳೆದು ತಂದವನು ಸಹ ಗಣೇಶನೇ. ನಮ್ಮ ವಿದ್ಯಾರ್ಥಿ ಜೀವನದಲ್ಲೇ ಎನೋ ಸಾಧಿಸಬೇಕೆಂದುಕೊಂಡಿದ್ದ ನಮಗೆ ಕಂಡಿದ್ದು ಸ್ವಯಂ ಸೇವಕ ಸಂಘದ ಶಿಸ್ತು, ಛಲ, ಮುಂದಾಳತ್ವ, ಸಂಘಟನಾ ಶಕ್ತಿಯ ವೇದಿಕೆ. ಇಲ್ಲಿಂದ ಸಂಘಟಿತರಾದ ನಾವು ಮುಂದಿನೆರಡು ವರ್ಷ ಸುವರ್ಣ ಶಾಖೆಯ ಮೆರುಗನ್ನು ನೀಡಿದೆವು. ನಂತರದ ದಿನಗಳಲ್ಲಿ ವಿದ್ಯಭ್ಯಾಸಕ್ಕೆಂದು ಬೇರೆಡೆಗೆ ತೆರಳಿದ್ದರಿಂದ ಶಾಖೆ ಸ್ಥಗಿತಗೊಂಡಿತು. ಶಾಖೆ ಇರದೆ ಶಾಖಾ ವಾರ್ಷಿಕೋತ್ಸವವನ್ನು ಮಾಡಬಾರದೆಂದಾಗ ನಮ್ಮ ಸಂಘಟನಾ ಕ್ರಿಯಾಶೀಲತೆಗೆ ಘಾಸಿಯಾಯಿತು.

ಆಗ ನಮ್ಮ ಸಂಘಟನೆಯನ್ನು ಮುಂದುವರೆಸಬೇಕೆಂದು ಯೋಚಿಸಿ ಸಾರ್ವಜನಿಕ ಗಣೇಶೋತ್ಸವದ ಎದುರಲ್ಲಿ ಕುಳಿತಿದ್ದ ಒಂದು ಗಣೇಶ ಮತ್ತು ಎರಡು ವಿನಾಯಕರಿಗೆ ಹೊಳೆದದ್ದು "ವಿಶ್ವ ಭಾರತಿ ವಿದ್ಯಾರ್ಥಿ ಬಳಗ". ನಂತರದ ಕೆಲಸ ಬಳಗಕ್ಕೊಂದು ಲಾಂಛನ ಮತ್ತು ದೃಢವಾದ ಧ್ಯೇಯೋದ್ದೇಶಗಳನ್ನು ನಿರೂಪಿಸುವ ಒಂದು ಮಹತ್ತರ ಕೆಲಸ. ಇವುಗಳನ್ನು ನಿರೂಪಿಸಿ, ಹಿರಿಯರೊಂದಿಗೆ ಸಮಾಲೋಚಿಸಿ ದಿನದ ಶಾಖೆಗೆ ಬರುತ್ತಿದ್ದ ಎಲ್ಲ ತರುಣರನ್ನು ಜೊತೆ ಸೇರಿಸಿ ಅವರೊಂದಿಗೆ ಮಾತನಾಡುತ್ತ ಎಲ್ಲರೂ ಜೊತೆ ಸೇರಿ ಕೆಲಸ ಮಾಡೋಣವೆಂದು ಚರ್ಚಿಸಿ ಒಂದು ರೂಪು ರೇಷೆಯನ್ನು ಇಟ್ಟೆವು. ಮೊದಲ ಹೆಜ್ಜೆಯಲ್ಲಿ ಜೊತೆಯಾದ ವಿದ್ಯಾರ್ಥಿಗಳೆಂದರೆ ವಿನಾಯಕ ಭಾಗ್ವತ, ವಿನಾಯಕ ಹೆಗಡೆ, ಗಣೇಶ ಭಾಗ್ವತ, ವಿನಾಯಕ ಭಾಪಟ್, ಪ್ರಜ್ವಲ ಭಟ್ಟ, ವಿನಾಯಕ ಹೆಗಡೆ, ವಿನಾಯಕ ಭಟ್ಟ, ದರ್ಷನ ಹೆಗಡೆ, ಗಣೇಶ ಭಟ್ಟ. ಇವರೆಲ್ಲರೂ ಸೇರಿ ಅಂದು ಪ್ರಾರಂಭಿಸಿದ ಈ ಬಳಗ ಗಣ್ಯರಿಂದ ಉದ್ಘಾಟನೆಗೊಂಡು ನಂತರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಆವತ್ತಿನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿತು.

ಒಂದು ಸಂಘಟನೆ ಅದೆಷ್ಟು ಕಷ್ಟ ಎನ್ನುವುದು ಮುಂದಾಳತ್ವ ವಹಿಸುವ ಕೆಲವರಿಗಷ್ಟೇ ಗೊತ್ತು. ಯಾಕೆಂದರೆ ಆಗಷ್ಟೇ ಪ್ರೌಢ ಶಾಲೆ ಮುಗಿಸಿದ ವಿದ್ಯಾರ್ಥಿಗಳಾಗಿದ್ದ ನಮ್ಮಲ್ಲಿ ಮೈ ಚರ್ಮ ಸೊಲಿದರೂ ಒಂದು ರೂಪಾಯಿ ಬಿಡಿಗಾಸು ಸಿಗದ ಸಮಯ. ಇಂತಹ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಬೇಕಾಗುವಷ್ಟು ಹಣವನ್ನು ಸಂಗ್ರಹಿಸಿ, ಚಪ್ಪರ, ತೋರಣ, ವೇದಿಕೆಯ ಅಲಂಕಾರ, ತಿಂಡಿ ಪೊಟ್ಟಣಗಳ ವ್ಯವಸ್ಥೆ ಹೀಗೆ ಪ್ರತಿಯೊಂದು ಕೆಲಸಗಳನ್ನು ಸ್ವಂತವಾಗಿ ನಿರ್ವಹಿಸಿಕೊಂಡಿದ್ದ ನಾವು ಮನೆಯ ಹಿರಿಯವರಿಂದ ಬೈಸಿಕೊಂಡರೂ, ಬೆವರಿನ ಹನಿಗಳನ್ನು ಲೆಕ್ಕಿಸದೆ, ಕಾರ್ಯಕ್ರಮವನ್ನು ಮಾಡಿಯೇ ಸಿದ್ಧ ಎಂದು, ಜನರನ್ನು ತಲುಪುವ ಉದ್ದೇಶದಿಂದ ಶಕ್ತಿಮೀರಿ ದುಡಿದ ವಿದ್ಯಾರ್ಥಿಗಳು ನಾವೆಂದು ಹೇಳಿಕೊಳ್ಳಲು ಇಂದು ಹೆಮ್ಮೆಯಾಗುತ್ತದೆ.

ಅಧಿಕಾರಿ ಶಾಹಿ ವ್ಯಕ್ತಿತ್ವ ಬೆಳೆಸಿಕೊಳ್ಳದೆ ಹಿಂದೂ ಮುಂದೂ ನಾವೆಲ್ಲ ಒಂದು ಎಂಬ ಸಮಚಿತ್ತದಿಂದ ನಿರ್ಧರಿಸಿದೆವು. ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಎಂಬೆಲ್ಲ ಯಾವುದೇ ಅಧಿಕಾರದ ಸ್ಥಾನಗಳನ್ನು ಇಟ್ಟುಕೊಳ್ಳದೆ ಎಲ್ಲರೂ ಸಮಾನರೂ ಎಂಬ ಧ್ಯೆಯೋದ್ದೇಶದೊಂದಿಗೆ ಬಳಗದ ಸಹಿಯಲ್ಲಿಯೂ ಸಹ ಸರ್ವ ಸದಸ್ಯರೆಂದು ನಮೂದಿಸುವುದರೊಂದಿಗೆ ನಾವೆಲ್ಲ ಒಂದೇ ಎಂದು ಗಂಟಾಘೋಷದಿಂದ ಹೇಳಿಕೊಂಡು ನಡೆದು ಬರುತ್ತಿರುವ ಸಂಘಟನೆ ನಮ್ಮದು. ನಮ್ಮ ಬಳಗದ ಬೆಳವಣಿಗೆಗೆ ನೀರಿನಂತೆ ಎರೆದ ಹಲವರ ಬೆವರ ಹನಿಗಳಿವೆ. ಇದು ಯಾವುದೋ ಒಬ್ಬನ ಹೆಸರಿನಿಂದಾಗಿ, ಯಾವುದೋ ಒಂದು ಕುಟುಂಬದ ಕೂಸಾಗಿ ಅಥವಾ ಯಾವುದೋ ಒಂದು ಅಧಿಕಾರಿ ಶಾಹಿಗಳು ಹುಟ್ಟು ಹಾಕಿದ ಗುಂಪಲ್ಲ. ಯಾಕೆಂದರೆ ಇದು ದೇಶಕ್ಕೇನಾದರೂ ಮಾಡಬೇಕೆಂಬ ಸದುದ್ದೇಶ, ನಮ್ಮಿಂದ ತೆರೆಮರೆಯ ಕಾಯಿಗಳನ್ನು ಹೊರತರುವ ಪ್ರಯತ್ನ, ನಮ್ಮ ಸಂಸ್ಕೃತಿ, ಜಾನಪದ ಕಲೆಗಳನ್ನು ಉಳಿಸಿ ಬೆಳೆಸಿ ಹೊಸ ಪೀಳಿಗೆಯನ್ನು ತಲುಪುವುದು, ವಿದ್ಯಾರ್ಥಿಗಳಿಗೆ, ಕೃಷಿಕರಿಗೆ ಮತ್ತು ನಮ್ಮ ಸುತ್ತಮುತ್ತಲಿನ ಜನರಿಗೆ ಸಹಾಯವಾಗುವಂತಹ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಮಾಡಿ ಅವರು ಸ್ವಾವಲಂಭಿಗಳಾಗಿ ಬದುಕಲೆಂಬ ದೂರಾಲೋಚನೆಯಿಂದ ಹುಟ್ಟಿಕೊಂಡ ಒಂದು ಸಮಾನ ಮನಸ್ಕರ ಸಂಘಟನಾ ಶಕ್ತಿಯೇ ನಮ್ಮ ಈ ವಿಶ್ವ ಭಾರತಿ ವಿದ್ಯಾರ್ಥಿ ಬಳಗ.

ಬಳಗಕ್ಕೆ ಬಂಡವಾಳವನ್ನು ಹೊಂದಿಸುವ ಉದ್ದೇಶದಿಂದ ನೆರಹೊರೆಯ ಸ್ಥಳಗಳಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಿಗೆ ಬಡಿಸುವ ತಂಡಗಳನ್ನು ಮಾಡಿದೆವು. ಪ್ರಾರಂಭದಲ್ಲಿ ೭೦-೮೦ ರೂಪಾಯಿಗಳನ್ನು ಕೊಡುತ್ತಿದ್ದರೂ ಕೊಟ್ಟ ಹಣದಲ್ಲಿ ಬಳಗಕ್ಕೆಂದು ಪ್ರತಿಯೊಬ್ಬರೂ ೨೦ ರೂಪಾಯಿಗಳನ್ನು ನೀಡುತ್ತಿದ್ದರೂ. ಪ್ರತಿಯೊಬ್ಬರ ಸಂಬಳದಿಂದ ಬಂದ ಹಣವನ್ನು ಬ್ಯಾಂಕಿನಲ್ಲಿ ಜಮಾಯಿಸುತ್ತಿದ್ದೆವು. ಹೀಗೆ ಶುರುವಾದ ಬಳಗದ ಬಡಿಸುವ ತಂಡದಿಂದ ಬಳಗದ ಹಣ ವೃದ್ಧಿಯಾಗಿದ್ದು ಬಳಗದ ನೀತಿ ನಿಯಮಗಳಿಗೆ ಸಮ್ಮತಿಸಿ ಶ್ರಮಿಸಿದ ಹಲವಾರು ಜನರುಗಳಿಂದ ಎನ್ನುವುದು ನೆನೆಯಲೇ ಬೇಕಾದ ವಿಷಯ.

ಚಿಕ್ಕ ಮಕ್ಕಳಿಂದ ಹಿಡಿದು ಮಹಿಳೆಯರವರೆಗಿನ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಿದೆವು. ಅಷ್ಟೇ ಅಲ್ಲದೆ ದೂರದರ್ಶನದ ಎದುರುಗಡೆ ಕುಳಿತಿರುವ ಹೆಂಗಳೆಯರನ್ನು ನಮ್ಮ ಕಾರ್ಯಕ್ರಮದ ವೇದಿಕೆಯ ಮುಂಬಾಗದಲ್ಲಿ ಸೇರಿಸಿದ ಯಶಸ್ವಿ ಕಾರ್ಯಕ್ರಮಗಳನ್ನು ಕೊಟ್ಟ ಬಳಗ ಎಂಬ ಹೆಗ್ಗಳಿಕೆಗೂ ಸಹ ಪಾತ್ರವಾಗಿದೆ. ಅದಲ್ಲದೇ ಮಹಿಳೆಯರಿಗಾಗಿ ಪ್ರಾರಂಭಿಸಿದ ಸಾಂಪ್ರದಾಯಿಕ ಹಾಡಿನ ಸ್ಪರ್ಧೆಯು ನಂತರದ ದಿನಗಳಲ್ಲಿ ಬೇರೆ ಬೇರೆ ಉನ್ನತ ಸಂಸ್ಥೆಗಳಲ್ಲಿ ನಕಲಿಸಿದ ನಿದರ್ಶನವೂ ಸಹ ನಮ್ಮ ಕಾರ್ಯಕ್ರಮ ಎಷ್ಟರ ಮಟ್ಟಿಗೆ ಜನರನ್ನು ತಲುಪಿದೆ ಎಂಬ ಖುಷಿಗೆ ಒಂದು ಸಾಕ್ಷಿ. ಸಂಪನ್ಮೂಲ ವ್ಯಕ್ತಿಗಳಿಂದ ಕೊಡಿಸಿದ ಶೈಕ್ಷಣಿಕ ಸಲಹೆಗಳಿಂದ ಹಲವು ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವುದು ಪ್ರಶಂಸನಾರ್ಹವಾಗಿದೆ. ಹಾಗೆ ತೆರೆಮರೆಯಲ್ಲಿ ಅಡಗಿದ್ದ ಪ್ರತಿಭೆಗಳನ್ನು ಗುರ್ತಿಸಿ ಅವರಿಗೊಂದು ವೇದಿಕೆಯನ್ನು ಒದಗಿಸಿಕೊಟ್ಟು ಅವರ ಪ್ರತಿಭಾ ಪ್ರದರ್ಶನದಿಂದ ಬೇರೆಯವರಿಂದ ಗುರುತಿಸ್ಪಟ್ಟು ಬೇರೆಡೆಯಲ್ಲಿ ಅವಕಾಶಗಳು ದೊರೆತ ಹಲವು ನಿದರ್ಶನಗಳು ನಮ್ಮ ಕಣ್ಣೆದುರಿಗಿರುವುದು ನಮ್ಮ ಬಳಗದ ಕೀರ್ತಿ ಹೆಚ್ಚುವಂತೆ ಮಾಡಿದ್ದು ಸಂತಸದ ಸುದ್ದಿ. ಪ್ರತಿ ವರ್ಷವು ಹೊಸತರನಾದ ಕಾರ್ಯಕ್ರಮಗಳನ್ನು ನೀಡುತ್ತ ಜನಮಾನಸದಲ್ಲಿ ಬಳಗದ ಬಗ್ಗೆ ಅಭಿಮಾನ ಬೆಳೆದಿರುವುದು ನಮ್ಮ ಪ್ರಯತ್ನಕ್ಕೆ ಸಿಕ್ಕ ಸಾರ್ಥಕತೆ ಮತ್ತು ಇನ್ನೂ ಒಳ್ಳೊಳ್ಳೆ ಕಾರ್ಯಕ್ರಮ, ಕೆಲಸಗಳನ್ನು ಮಾಡಲು ಪ್ರೇರಣೆಯಾಗಿದೆ.

ಇಷ್ಟೆಲ್ಲ ಹೇಳಿದ ಮೇಲೆ ಇನ್ನೊಂದನ್ನು ನೆನಪಿಸಿಕೊಂಡು ಅವರಿಗೆ ನಮಸ್ಕರಿಸದೇ ಹೋದರೆ ಇಂದು ನಾವಿಲ್ಲಿ ಸಂಘಟಿತರಾಗಿರುವುದಕ್ಕೆ ಅರ್ಥವಿರದಂತಾಗುತ್ತದೆ. ಅವರೆಂದರೆ ಬಳಗದ ಎಲ್ಲಾ ಸದಸ್ಯರ ತಂದೆ ತಾಯಂದಿರಿಗೆ ನಮ್ಮ ಎಲ್ಲಾ ಸದಸ್ಯರ ಎದೆಯಾಳದಿಂದ ಕೈ ಜೋಡಿಸಿ, ಶಿರವೆರಗಿ, ಸಾಷ್ಟಾಂಗ ನಮಸ್ಕಾರಗಳನ್ನು ಸಮರ್ಪಿಸುತ್ತಿದ್ದೇವೆ. ಯಾಕೆಂದರೆ ಅಂದು ನಾವು ಮೀಸೆ ಚಿಗುರದ ವಿದ್ಯಾರ್ಥಿಗಳಾಗಿದ್ದಾಗ ನಮ್ಮನ್ನ ಒಂದೆರಡು ವರ್ಷ ಬೈದರೂ ಮನೆಗೆ ಬಂದಾಗ ಮಗಾ ಊಟ ಮಾಡು ಎಂದು ಕೈತುತ್ತನ್ನಿತ್ತು ಪ್ರೇರೇಪಿಸಿದ ಅವರುಗಳನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ. ಈ ಬಳಗದಿಂದ ನಮಗೇನು ಸಿಕ್ಕಿತು ಎಂದು ಕೆಲವರು ಕೇಳುವುದುಂಟು, ಹಾಗಾಗಿ ಅವರುಗಳಿಗೆ ಈ ಮೂಲಕ ನಾವು ಹೇಳುವುದೊಂದೆ ಇದರಿಂದಾಗಿ (ಬಳಗದಿಂದಾಗಿ) ನಮಗೆ ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕು, ಹೇಗೆ ಮಾತನಾಡಬೇಕು, ಹೇಗೆ ಸಮಾಜಮುಖಿಯಾಗಿ ಬದುಕಬೇಕು, ಯಾರೊಂದಿಗೆ ಹೇಗೆ ಬೇರೆಯಬೇಕು ಎಂಬೆಲ್ಲಾ ವಿಷಯಗಳು ಶಾಲೆಯಲ್ಲಿ ಕಲಿಸದಿದ್ದರೂ, ಬೇರೊಬ್ಬರು ಹೇಳಿಕೊಡದಿದ್ದರೂ ನಾವು ಕಲಿತುಕೊಂಡೆವೆನ್ನುವುದು ನಮಗೆ ಸಿಕ್ಕ ಅನರ್ಘ್ಯ ರತ್ನವೆಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೇ ಸುತ್ತ ಮುತ್ತಲಿನ ನಾಲ್ಕು ಜನ ನಮ್ಮನ್ನು ಗುರುತಿಸುವ ಹಾಗಾಗಿದ್ದು ಸಂಘಟನೆಯ ಶಕ್ತಿಯಿಂದಾಗಿದೆ.

ನಮ್ಮ ನಡುವೆ ಇರುವ ಹಲವು ಸಾಧಕರು ಅಂದರೆ ಸೈನಿಕರು, ವೈದ್ಯರೂ, ಸಮಾಜ ಸೇವಕರು ಹೀಗೆ ಹಲವರನ್ನು ಗುರ್ತಿಸಿ ಅವರನ್ನು ಸನ್ಮಾನಿಸಿದೆವು. ಅದಷ್ಟೇ ಅಲ್ಲದೇ ವಿದ್ಯಾರ್ಥಿಯಾಗಿ ಅತಿ ಹೆಚ್ಚಿನ ಅಂಕ ಗಳಿಸಿದವರಿಗೂ ಸಹ ಗೌರವ ಸಮರ್ಪಿಸಿ ಪ್ರೋತ್ಸಾಹಿಸಿದೆವು. ನಮ್ಮ ಸುತ್ತ ಮುತ್ತಲಿರುವ ಹಲವು ತೆರೆಮರೆಯ ಪ್ರತಿಭೆಗಳನ್ನು ಗುರ್ತಿಸಿ ಅವರವರ ಕಲಾ ಪ್ರಕಾರದ ಪ್ರತಿಭಾ ಪ್ರದರ್ಶನಕ್ಕೆ ಮುಕ್ತ ವೇದಿಕೆನ್ನು ಒದಗಿಸಿಕೊಟ್ಟೆವು. ಯಾವುದೇ ಪ್ರಕಾರದ ಕಲೆಯಾಗಿರಲಿ ಅಂದರೆ ದೇಶ ಪ್ರೇಮ ಮೆರೆಯುವ ನೃತ್ಯ-ಹಾಡು, ಯಕ್ಷಗಾನ, ಚಂಡೆ, ಭರತನಾಟ್ಯ, ಶಾಸ್ತೀಯ ಮತ್ತು ಸುಗಮ ಸಂಗೀತ, ಕೊಳಲು ವಾದನ, ತಬಲಾ ವಾದನ, ನಾಟಕ, ಚಿತ್ರಕಲೆ, ಚಲನಚಿತ್ರ ಗೀತೆ, ನೃತ್ಯ ರೂಪಕ ಹಾಗು ಮತ್ತಿತರ ಮನೋರಂಜನಾತ್ಮಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಪ್ರತಿಭಾವಂತರಿಗೆ ಒಂದು ಅವಕಾಶ ಮಾಡೀಕೊಟ್ಟೆವು.

ಹತ್ತು ವರ್ಷಗಳಲ್ಲಿ ವಿರಹ, ವಿರೋಧ, ಸಂತಸ, ಯಶಸ್ಸು ಹೀಗೆ ಎಲ್ಲವನ್ನು ಹೇಗೆ ಸಮನಾಗಿ ತೆಗೆದುಕೊಂಡು, ಸಮರ್ಪಕವಾಗಿ ಮೆಟ್ಟಿನಿಂತು, ಹೇಗೆ ಮುನ್ನುಗ್ಗಬೇಕೆಂಬ ಸದ್ವಿಚಾರಗಳನ್ನು ನಮಗೆ ಕಲಿಸಿದೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಹೀಗಿದ್ದರೂ ನಮ್ಮ ಬಳಗದಲ್ಲಿ ಯಾರೊಬ್ಬರೂ ಉಂಡಾಡಿ ಗುಂಡನಂತೆ ಪೋಲಿ ಪೋಕರಿಯಾಗದೆ ಎಲ್ಲರೂ ತಮ್ಮ ಕಾಲ ಮೇಲೆ ತಾವು ನಿಂತು ಅವರವರ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿರುವುದು ಪ್ರಶಂಸನಾರ್ಹವಾಗಿದೆ. ಕೆಲವು ತಂದೆ ತಾಯಂದಿರು ತಮ್ಮ ಮಕ್ಕಳಿಗೆ ನಮ್ಮನ್ನು ತೋರಿಸಿ ನೀನು ಹೀಗೆ ಜನರೊಂದಿಗೆ ಬೆರೆತು ಕ್ರೀಯಾಶೀಲನಾಗು ಎಂದು ನಮ್ಮನ್ನು ಆದರ್ಷವ್ಯಕ್ತಿಗಳಂತೆ ತೋರಿಸುವುದು ನಮ್ಮ ಬೆವರಿಗೆ ಸಿಕ್ಕ ಬೆಲೆಯಾಗಿದೆ. ಇದು ನಮ್ಮನ್ನು ನಾವು ಹೊಗಳಿಕೊಳ್ಳುತ್ತಿರುವುದಲ್ಲ ಬದಲಿಗೆ ನಮ್ಮ ಕೆಲಸದ ಸಾರ್ಥಕತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುದಾಗಿದೆ. ಬನ್ನಿ ಬೆಂಬಲಿಸಿ, ನಿಮ್ಮ ಮಕ್ಕಳನ್ನು ನಮ್ಮೊಂದಿಗೆ ಕಳುಹಿಸಿಕೊಡಿ ಅಥವಾ ನಮ್ಮಂತೆ ಮುಂದಾಳತ್ವದ ಪ್ರಜ್ಞೆ ಬೆಳೆಸಿಕೊಳ್ಳುವಂತೆ ಮಾಡಿ ಅದರಿಂದ ಸದೃಢ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡೋಣ.

ಇವನ್ನೆಲ್ಲ ನಿಮ್ಮ ಮುಂದೆ ತರುವ ಯೋಚನೆಯಿಂದ ೧೧ ನೇ ವರ್ಷದ ಕಾರ್ಯಕ್ರಮದಲ್ಲಿ ನೆನಪನ್ನು ಮರುಕಳಿಸುವ, ದುಡಿದು ಸಹಕರಿಸಿದ ಕೈಗಳನ್ನು ಸ್ಮರಿಸುವ ಸ್ಮರಣ ಸಂಚಿಕೆಯನ್ನು ಹೊರ ತಂದೆವು. ನಮ್ಮ ಬಳಗದ ಸಕ್ರೀಯ ಸದಸ್ಯರ ಶ್ರಮದಿಂದಾದ ಒಂದು ಗುರುತರ ಕೆಲಸ ಇದಾಗಿದೆ. ಬೇರೆ ಬೇರೆ ಸಮಾಜಮುಖಿ ಕಾರ್ಯಗಳತ್ತ ಹೆಜ್ಜೆ ಹಾಕುವ ನಿಟ್ಟಿನಲ್ಲಿರುವ ಈ ಯುವ ಸಂಘಟನೆಯನ್ನು ಪ್ರೋತ್ಸಾಹಿಸುವ, ಬೆಂಬಲಿಸುವ ಕಾರ್ಯ ನಿಮ್ಮಿಂದಾಗಬೇಕಿದೆ. ಬನ್ನಿ ಕೈ ಜೋಡಿಸಿ, ಸಹಕರಿಸಿ ಏಕತೆಯಿಂದ ಮುನ್ನುಗ್ಗಿ ಭಾರತವನ್ನು ವಿಶ್ವ ಗುರುವನ್ನಾಗಿಸುವತ್ತ ದಾಪುಗಾಲಿರಿಸೋಣ.

Wednesday, May 3, 2017

ಬಿಸಿಲೆ

ಮಳೆಗಾಲದ ಪೂರ್ವದಲಿ
ತಯಾರಿ ಮಾಡಿಸಲು
ಪ್ರಖರವಾಗಿ ಪ್ರಜ್ವಲಿಸುವ
ಉರಿಶಾಖದ ಹೆಸರೇ ಬಿಸಿಲು

ದವಸ ಧಾನ್ಯಗಳನು
ಉರಿಸುವ ಕಟ್ಟಿಗೆಯನು
ತಿಂಡಿ ತಿನಿಸುಗಳ ಮೂಲವನು
ಒಣಗಿಸುವ ಯಂತ್ರವೇ ಬಿಸಿಲು

ದಾಹದ ಅನುಭವವನು
ದನ ಕರುಗಳಿಗೆ ಹುಲ್ಲನು
ಸುಡುವ ಬೇಸಿಗೆಯನು
ನೀಡುವ ಅನುದಾನಿಯೇ ಬಿಸಿಲು

ಬಾಯ್ಬಿಟ್ಟಿ ಹೇಳುವ
ಕೈಯೊಡ್ಡಿ ದುಡಿಸುವ
ನಿಸರ್ಗದ ಸೌಂದರ್ಯವ
ತೋರ್ಪಡಿಸುವೆ ನೀ ಬಿಸಿಲೆ