Tuesday, December 31, 2019

ಮುಂದೊಂದು ದಿನ ಹೇಗಾಗಬಹುದೇ?



_ಪೇಟೆಯಲ್ಲಿ ಪುನರಾವರ್ತಿತವಾಗಲಿದೆ ಅವಿಭಕ್ತ ಕುಟುಂಬದ ಪರಿಕಲ್ಪನೆ..._

ಬೆಳೆಯುತ್ತಿರುವ ಜಗತ್ತಿನಲ್ಲಿ ಪ್ರತಿಯೊಂದು ಕಣಕಣವೂ ಮತ್ತು ಪ್ರತಿಯೊಂದು ಕ್ಷಣಕ್ಷಣವೂ ಬದಲಾಗುತ್ತಿರುತ್ತಿದೆ. ಯಾಕೆಂದರೆ ಪರಿವರ್ತನೆ ಜಗದ ನಿಯಮ. ಹೀಗೆ ಬದಲಾದ ಕಾಲಘಟ್ಟಗಳನ್ನು ನೋಡಿದರೆ ಎಷ್ಟೆಲ್ಲಾ ಪರಿವರ್ತನೆಗಳು ಕಾಣಸಿಗುತ್ತವೆ. ಮೊದಲಿದ್ದ ನೀತಿ-ನಿಯಮಗಳು, ಹೊಂದಾಣಿಕೆಗಳು, ಒಗ್ಗಟ್ಟು, ನಮ್ಮವರೆಂಬ ಭಾವನೆಗಳು, ಸಹಕಾರ ಮನೋಭಾವಗಳು, ಪ್ರೀತಿ-ವಾತ್ಸಲ್ಯ-ಮಮತೆಯ ವಿಷಯಗಳಲ್ಲಿ ಗಣನೀಯ ಬದಲಾವಣೆಗಳಾಗಿರುವುದು ನಮ್ಮ ಅನುಭವಕ್ಕೆ ಬರುತ್ತಿವೆ.

ಅವಿಭಕ್ತ ಮತ್ತು ವಿಭಕ್ತ ಕುಟುಂಬಗಳ ಬಗೆಗಿನ ಪರಿಕಲ್ಪನೆಯನ್ನು ನಾನಿಂದು ನನ್ನ ವಿಚಾರಧಾರೆಯಿಂದ ಹಂಚಿಕೊಳ್ಳುತ್ತಿದ್ದೇನೆ. ಈ ವಿಷಯಗಳನ್ನು ಹಂಚಿಕೊಳ್ಳುವ ಮುಂಚೆ ನಾನೂ ಸಹ ಈ ಎರಡೂ ಪ್ರಕಾರದ ಕುಟುಂಬ ವ್ಯವಸ್ಠೆಯಲ್ಲಿ ಒಬ್ಬನಾಗಿದ್ದವನು, ಹೀಗಾಗಿ ಇದರ ಬಗ್ಗೆ ಮತ್ತು ಮುಂದಿನ ಆಗು ಹೋಗುಗಳ ಬಗ್ಗೆ ನನ್ನ ವಿಚಾರಧಾರೆಗೆ ಒಂದು ರೂಪು ನೀಡಬಹುದೆಂದು ಅಂದುಕೊಂಡಿದ್ದೇನೆ.

ಅವಿಭಕ್ತ ಕುಟುಂಬವಿದು ಮೊದಲು ನೀಡುವ ವರವೆಂದರೆ ಅದು ಸಂಸ್ಕಾರ. ತುಂಬು ಕುಟುಂಬದಲ್ಲಿ ಒಬ್ಬ ವ್ಯಕ್ತಿ ತನ್ನ ಅಕ್ಕ-ತಂಗಿ ಮತ್ತು ಅಣ್ಣ-ತಮ್ಮಂದಿರ ನಡುವೆ ಬೆಳೆಯುವ ನಾವು ಜನರೊಂದಿಗೆ ಹೇಗೆ ಒಡನಾಡಬೇಕು, ಮಾತಾಡಬೇಕು, ಗುರು-ಹಿರಿಯರನ್ನು ಹೇಗೆ ಗೌರವಿಸಬೇಕು ಹಾಗೂ ಮತ್ತವರ ಬೆಲೆಯೇನು ಮತ್ತು ಸಮೂಹದಲ್ಲಿ ಹೇಗೆ ವರ್ತಿಸಬೇಕೆಂಬುದನ್ನು ತಿಳಿಸಿಕೊಡುತ್ತದೆ.. ಆಡಿ-ಬೆಳೆವಂತಹ ಖುಷಿ, ವೈವಿಧ್ಯಮಯ ಆಟೋಟಗಳ ಪರಿಚಯ ಮತ್ತು ಅವುಗಳನ್ನಾಡಿದ ಅನುಭವದ ಸಂತೋಷ ವಿಭಕ್ತ ಕುಟುಂಬದ ಪರಿಸರದಿಂದ ಸಿಗಲಾರದು.

ಆದರೆ ದೊಡ್ಡ ಕುಟುಂಬವನ್ನು ನಿಭಾಯಿಸುವ ಜವಾಬ್ಧಾರಿ ಕುಟುಂಬದ ಹಿರಿಯನ ಮೇಲಿರುವುದರಿಂದ ಕುಟುಂಬದ ಮಕ್ಕಳಿಗೆಲ್ಲಾ ಉತ್ತಮ ಶಿಕ್ಷಣ ಸಿಗುತ್ತದೆಂಬ ಭರವಸೆ ಇರಲಾರದು. ಹೀಗಾಗಿ ಹಿರಿಯನ ಅನುಜರ ಮಕ್ಕಳು ತನ್ನಪ್ಪ ನಮಗೆ ಸರಿಯಾಗಿ ಕಲಿಸಲಿಲ್ಲವೆಂಬ ಆಪಾದನೆ ಮಾಡಲು ಸಹಕಾರಿಯಾಗಿರುತ್ತದೆ. ಆದರೆ ಆಪಾದನೆ ಮಾಡುವ ಮಕ್ಕಳು ತಾವೆಷ್ಟು ಓದಿ ಗುಡ್ಡೆ ಹಾಕಿದ್ದೇವೆ ಅಥವಾ ತಮ್ಮ ಬುದ್ಧಿಮತ್ತೆಯೆಷ್ಟೆಂಬುದನ್ನು ಅರಿಯದೆ ಹೆತ್ತವರ ಮೇಲೆ ಆಪಾದನೆ ಹೊರಿಸುವುದು ಸರ್ವೆ ಸಾಮಾನ್ಯವಾಗಿದೆ. ಅವಿಭಕ್ತ ಕುಟುಂಬದಲ್ಲೂ ಸಹ ತಂದೆಯಾದವನು ತನ್ನ ಮಕ್ಕಳ ಏಳಿಗೆಗಾಗಿ ಅಗ್ರಜನನ್ನು ಒತ್ತಾಯ ಪಡಿಸಿ ಅವನೊಂದಿಗೆ ಜಗಳವಾಡಿಯಾದರೂ ಹಣವನ್ನೋ ಅಥವಾ ಮಕ್ಕಳಿಗೆ ಬೇಕಾದ ಅವಶ್ಯಕತೆಗಳನ್ನೋ ತಂದುಕೊಡುತ್ತಾನೆಂಬುದನ್ನು ಮಕ್ಕಳು ಅರ್ಥ ಮಾಡಿಕೊಂಡು ವಿಭಕ್ತ ಕುಟುಂಬವಾದ ಮೇಲೆ ಹೆತ್ತವರನ್ನು ಹಿತವಾಗಿ ನೋಡಿಕೊಳ್ಳುವುದು ಉಚಿತವಾಗಿರುತ್ತದೆ.

ಹಾಗೆ ವಿಭಕ್ತ ಕುಟುಂಬದಲ್ಲಿ ಒಡನಾಡಿಗಳಾರು ಇರುವುದಿಲ್ಲ. ಆದರೆ ಮಕ್ಕಳ ಓದು ಮತ್ತು  ಬಯಸಿದ್ದನ್ನು ಕೊಡಿಸುವಲ್ಲಿ ಸಹಕಾರಿಯಾಗಿರುತ್ತದೆ. ನಾನು ನನ್ನದೆಂಬ ಬಾವ ಬೆಳೆಯುತ್ತದೆ. ಹೊರ ಜಗತ್ತಿನೊಂದಿಗೆ ಬೆಳೆಯುವ ಅವಕಾಶ ಸಿಕ್ಕರೆ ಒಳಿತು ಇಲ್ಲವೆಂದರೆ ಬೆಳೆಯುವ ಮಗುವಿನಲ್ಲಿ ಸಂಕುಚಿತ ಮನೋಬಾವ ಬೆಳೆಯುತ್ತದೆ. ಅಲ್ಲದೆ ಬೇರೆಡೆಗೆ ಹೋಗುತ್ತೇನೆಂದರೆ ಮನೆಯನ್ನು ನೋಡಿಕೊ ಳ್ಳುವ ಜನ ಸಿಗುವುದಿಲ್ಲ ಅಲ್ಲದೆ ನಮಗೆ ಸರಿಯಾದ ರಕ್ಷಣೆ ಇರುವುದಿಲ್ಲ.

ಆದರೆ, ಕಾಲಚಕ್ರ ಉರುಳಿದಂತೆ ಹೇಗೆ ಹಳ್ಳಿಗಳಲ್ಲಿ ತುಂಬಿದ್ದ ಅವಿಭಕ್ತ ಕುಟುಂಬಗಳು ಒಡೆದು ಚೂರಾಗಿ ವಿಭಕ್ತ ಕುಟುಂಬಗಳಾಗಿವೆಯೋ ಹಾಗೆ ಮುಂದೊಂದು ದಿನ ಪಟ್ಟಣಗಳಲ್ಲಿ ಈ ಅವಿಭಕ್ತ ಕುಟುಂಬದ ಪರಿಕಲ್ಪನೆಗಳು ಮತ್ತೆ ಭೂಮಿಕೆಗೆ ಬರುತ್ತವೆಯೇನೊ ಎಂದೆನಿಸುತ್ತಿದೆ. ಆದರೆ ಈ ಅವಿಭಕ್ತ ಕುಟುಂಬಗಳು ಸ್ವಂತ ಅಣ್ಣ-ತಮ್ಮಂದಿರ ಸಂಸಾರಗಳಿಂದ ಕೂಡಿರುವುದಿಲ್ಲ ಬದಲಾಗಿ ಸ್ನೇಹ ಜೀವಿಗಳ ಸಂಸಾರಗಳ ಸಮ್ಮಿಲನವಾಗಿರುತ್ತವೆ.

ಯಾಕೆ ಹೀಗಾಗುತ್ತದೆ ಎಂದು ನೀವು ಆಲೋಚಿಸುವುದಾದರೆ, ಈಗಾಗಲೆ ಆರತಿಗೊಂದು ಕೀರುತಿಗೊಂದು ಎಂಬ ನಿಲುವುಗಳು ಮಾಯವಾಗಿ ಹೆಣ್ಣಾಗಲಿ ಗಂಡಾಗಲಿ ನಮಗೊಂದೆ ಸಾಕು ಎಂಬ ವಿಚಾರಧಾರೆ ಹರಿಯುತ್ತಿದೆ ಮತ್ತು ಅದೇ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಒಂದೇ ಕುಟುಂಬದ ಅಣ್ತಮ್ಮಂದಿರ ಅವಿಭಕ್ತ ಕುಟುಂಬ ಏರ್ಪಡುವುದು ದೂರದ ಮಾತು. ಬದಲಾಗಿ ಉತ್ತಮ ಸ್ನೇಹ ಜೀವಿಗಳು ಜೊತೆಯಾಗಿ ಒಂದೇ ಸೂರಲ್ಲಿ ವಾಸಿಸಲು ಅಣಿಯಾಗಬಹುದು.

ಇಂತಹ ಪರಿಸ್ಥಿತಿಗಳಿಗೆ ಕಾರಣಗಳೆಂದರೆ:

೧. ಏರುತ್ತಿರುವ ದಿನಚರಿಗಳ ಬೆಲೆ.
೨. ಪಟ್ಟಣಗಳಲ್ಲಿ ಏರುತ್ತಿರುವ ಮನೆಗಳ ಬಾಡಿಗೆ.
೩. ಸ್ವಂತ ಮನೆ ಕಟ್ಟಿ ಬದುಕಲು ಬೇಕಾದ ಜಾಗ ಮತ್ತು ಆರ್ಥಿಕ ಕೊರತೆಯಾಗಬಹುದು.
೪. ಸ್ನೇಹದಲ್ಲಿ ಕಲಹ ಮತ್ತು ಅಹಂಕಾರದ ಮಾತುಗಳು ಬರದಿರಬಹುದೆಂಬ ಭರವಸೆ.
೫. ಬಾಡಿಗೆ ಮನೆಗಳ ಕೊರತೆ ಎದುರಾಗಬಹುದು.
೬. ತನ್ನ ಮಗ/ಮಗಳಿಗೆ ಆಟವಾಡಲು ಜೊತೆಯಾಗಿ ಇನ್ನೊಬ್ಬರು ಸಿಗಲೆಂಬ ಆಲೋಚನೆ.

ಹೀಗೆ ಪಟ್ಟಿ ಮಾಡಿದರೆ ಇನ್ನೂ ಹಲವು ಕಾರಣಗಳು ಸಿಗಬಹುದು. ಹೀಗಾಗಿ ಈ ಅವಿಭಕ್ತ ಕುಟುಂಬಗಳೆಂಬ ಪರಿಕಲ್ಪನೆ ಪುನಃ ಮುನ್ನುಡಿಗೆ ಬರಬಹುದು. ಇವನ್ನೆಲ್ಲಾ ಆಲೋಚಿಸಿದರೆ ನಾವೆಲ್ಲೋ 'ನಾವು ನಮ್ಮನೆಯವರೆಂಬ ಭಾವವನ್ನು' ಕಳೆದುಕೊಂಡು 'ನಾವು ನಮ್ಮ ಸ್ನೇಹಿತರೆಂಬ’ ಬಾವಕ್ಕೆ ಒಲವನ್ನು ತೋರಿಸುತ್ತಿದ್ದೇವೆಯೇನೋ ಎಂದೆನಿಸುತ್ತಿದೆ.  ಅಲ್ವೇ?

ಹೀಗೆ ಸ್ನೇಹ ಜೀವಿಗಳ ಅವಿಭಕ್ತ ಕುಟುಂಬದಲ್ಲಿ ಅಸಮಾನತೆಯ ಗೊಂದಲ ಬರುವುದಿಲ್ಲ ಮತ್ತು ತನ್ನ ಮಕ್ಕಳಿಗೆ ಸರಿಯಾದ ವಿದ್ಯೆಕೊಡಲಿಲ್ಲವೆಂಬ ಅಸಮಾಧಾನ ಇರುವುದಿಲ್ಲ. ಯಾಕೆಂದರೆ ಇಲ್ಲಿ ಜೊತೆಯಾಗಿ ಒಂದೇ ಕುಟುಂಬದಲ್ಲಿರುವ ಸ್ನೇಹಿತರಿಬ್ಬರೂ ಸಹ ಸಮಾನ ಜವಬ್ಧಾರರು. ಹಾಗಾಗಿ ತಮ್ಮ ತಮ್ಮ ಮಕ್ಕಳಿಗೆ ಬೇಕಾದ ಅವಶ್ಯಕ ತೆಗಳನ್ನು ಮತ್ತು ವಿದ್ಯೆಯನ್ನು ಕೊಡಿಸುವುದು ಅವರವರ ದುಡಿಮೆ ಮತ್ತು ಆಸೆಗಳಿಗೆ ಅನುಗುಣವಾಗಿರುತ್ತವೆ.  ಹೀಗಾಗಿ ತನಗೆ ಅನ್ಯಾಯವಾಗಿದೆ ಅಥವಾ ತನ್ನಪ್ಪನನ್ನು ತುಚ್ಛವಾಗಿ ಕಾಣಲಾಗುತ್ತಿದೆ ಎಂಬಂತಹ ಮನಸ್ತಾಪಗಳು ಭುಗಿಲೇಳುವ ಸಾಧ್ಯತೆ ತೀರಾ ಕಡಿಮೆ ಇರುವುದರಿಂದ ಇಂತಹ ಪರಿಕಲ್ಪನೆಗೆ ಜನರ ಮನಸ್ಸು ಒಗ್ಗಿಕೊಳ್ಳುವ ಸಾಧ್ಯತೆಗಳಿವೆ.

ಹೆಂಡತಿಯ ಗೆಳತಿಯ ಕುಟುಂಬದವರೊಂದಿಗೋ ಅಥವಾ ಗಂಡನ ಸ್ನೇಹಿತನೋದಿಗೋ ಹೊಂದಿಕೊಂಡು ಬಾಳ್ವೆ ಮಾಡುವ ದಿನ ಬಹಳ ದೂರವಿಲ್ಲವೆಂದೆನಿಸುತ್ತಿದೆ. ಯಾಕೆಂದರೆ ಹಳ್ಳಿಗಳೆಲ್ಲ ತರುಣರಿಲ್ಲದೆ ಬಿಕೋ ಎನ್ನುತ್ತಿದೆ ಯಾಕೆಂದರೆ ಕಲಿತ ಮಕ್ಕಳೆಲ್ಲಾ ಹೆತ್ತವರನ್ನು ಬಿಟ್ಟು ಪೇಟೆ ಸೇರಾಗಿದೆ. ಅಲ್ಲದೆ ಕೃಷಿ ಮಾಡುವವ ಕೀಳೆಂಬ ಮನೋಭಾವ ಮಂದಿಯ ಮನದಲ್ಲಿ ಮೂಡಿರುವುದು ವಿಷಾದನೀಯ. ಅದಲ್ಲದೆ ನಮ್ಮ ಸರಕಾರಗಳೂ ಸಹ ಕೃಷಿಯ ಬಗ್ಗೆ ಮತ್ತು ಕೃಷಿಕರ ಬಗ್ಗೆ ತೋರುತ್ತಿರುವ ನಿಷ್ಕಾಳಜಿಯಿಂದ ಪೇಟೆಯ ಬದುಕೊಂದೇ ಬದುಕಿನ ಗುರಿ ಎಂಬಂತಾಗಿದೆ.

ಹೀಗಾಗಿ ಬದುಕಿನ ಅಡಿಪಾಯವನ್ನು ಭದ್ರವಾಗಿ ಹಾಕಿಕೊಳ್ಳಲಾಗದ ಪರಿಸ್ಥಿತಿಯಲ್ಲೂ ಸಹ ಹುಟ್ಟಿ-ಬೆಳೆದ ಗೂಡನ್ನು ಬಿಟ್ಟು ಪೇಟೆಯತ್ತ ಹೆಜ್ಜೆ ಹಾಕುತ್ತಿರುವ ಹೊಸ ಪೀಳಿಗೆಯವರಿಂದಲೇ ಹೊಸ ಪರಿವರ್ತನೆಯ ಪರ್ವ ಸಾಧ್ಯವಾಗುತ್ತದೆ.