Wednesday, August 16, 2017

ಕರಡಿದೆಯಾ ಕೆಸರ

ಎಸೆದೆಯಾ ಸಣ್ಣ ಕಲ್ಲನು
ಕರಡಿದೆಯಾ ಕೆಸರ ಮಣ್ಣನು
ನಗುತಿರುವ ಶಿಶುವ ಅಳಿಸುವೆಯಾ?
ಪೂರ್ಣ ಚಂದ್ರನ ಚೂರಾಗಿಸುತ
ಸಂಸ್ಕರಿಸಲು ಸಾಕು ಕ್ಷಣ ಹೊತ್ತು
ಒಂದಾಗಲು ಬೇಕು ಆಣಿಮುತ್ತು

ಈ ಸಂಜೆ ಯಾಕೆ ಹೀಗೆ
ಕಲೆಯಲ್ಲಿ ಸೆಳೆಯುತಿದೆ ಮನವ
ಓ ರವಿಯೇ ಜೋಕೆ ಹಾಗೆ
ಮಂದ ಬೆಳಕಿನಲ್ಲಿ ಜಾರು ನಿಧಾನ
ಬೋರ್ಗರೆಯವ ಕಡಲ ಕಿನಾರೆ
ಗರ್ಜಿಸುವ ಸಾದುಮೃಗದ ತರಾನೆ
ಸರಿಸಾಟಿ ಯಾರು ಇಲ್ಲ
ಕನವರಿಸುವ ಮೂಲ ಬೊಂಬೆಗೆ

ಸ್ಪಂದಿಸಲು ಸಿಗದೆ ಸ್ವಲ್ಪ ಸಮಯ
ಹುಂಬತನದಿ ಅತಿ ನಂಬಿದೆಯ
ನಿರೀಕ್ಷೆಯ ಬಾಳಿನ ಸಂಜೆಯಲಿ
ಸೂರ್ಯ ಮುಳುಗುವ ಹೊತ್ತಾಗಿದೆ
ಉಸಿರಿನ ವೇಗಕೆ ಮೂಡುವ ಚಿತ್ರವು
ಮುಂದಿನ ಬದುಕಿಗೆ ಜೊತೆಯಾಗುವುದೇ?

ನೆನಪಿನ ಸಾರಾಂಶ ಭವಿಷ್ಯದ ಮುಖ್ಯಾಂಶ
ಹಲವು ಚಿಂತನೆಯು
ಮಂಥನಕೆ ಅಣಿಯಾಗಿರಲು
ಅವಳು ಸಿಗುವಳು ಎನ್ನುತಿದೆ

Thursday, August 3, 2017

ಆಧುನಿಕ ಒಲವು

ತಿರುಗೋ ಭೂಮಿ ತಿರಗೋದನ್ನು
ಮರೆಯಲಬಹುದೇನೊ
ಸುತ್ತುವ ಕಡಲು ನದಿಗಳ ಹಾಗೆ
ಹರಿಯಲುಬಹುದೇನೊ
ನೀಲಿ ನಭದ ಅಂಗಳದಲ್ಲೂ
ಮನೆಯನು ಕಟ್ಟಲುಬಹುದೇನೊ
ಮಂಗಳಸೂತ್ರದ ಧಾರಣೆ ಬಳಿಕ
ಮಂಗಳಯಾನವ ಗೈಯಬಹುದೇನೊ
ವಿಧವಿಧವಾದ ಬಯಕೆಯ ತವರು
ನನ್ನ ಮನವೀಗ
ಕಿರು ನೋಟದ ತರುವಾಯ

ಗಣಕಯಂತ್ರದ ಗಣೀತದಲ್ಲೂ ಮೊತ್ತವೆ ನಿನ್ನ ಹೆಸರು
ಚಂದ್ರಲೋಕದ ಚಿತ್ರಣದಲ್ಲೂ
ಗಾಳಿಯೆ ನಿನ್ನ ಉಸಿರು
ರಸ್ತೆಯಲ್ಲಿನ ಸಂಚಾರ ಸ್ತಂಭನದಲ್ಲೂ
ತುಂಬಿದೆ ಹಚ್ಚ ಹಸಿರು
ಕಣ್ಣಲಿ ಹರಡಿದೆ ಮನಸಿನ ಭಾವನೆ
ನೆನೆಯಲು ನಿನ್ನ ಕುರಿತು

ಸಿಯಾಚಿನ್ನಿನ ಕೊರೆವಾ ಚಳಿಯಲೂ
ಬೆಚ್ಚನೆಯ ಕವಚವಾಗಿರುವೆ
ಭಯೋತ್ಪಾದಕರ ಭಯದಾ ನೆರಳಲೂ
ಧೈರ್ಯದ ಬಿಸಿಲಾಗಿರುವೆ
ಕಕ್ಷೆ ಸೇರುವ ರಾಕೆಟ್ಟಿನ ಉಪಗ್ರಹದಲೂ
ಸುದ್ದಿ ಕೊಡುವ ಯಂತ್ರವಾಗಿರುವೆ
ಕಾಂಜಿಪೀಂಜಿಯ ಪುಂಡರ ಮೇಲೂ
ನಿಗಾವಹಿಸುವ ರಕ್ಷಕನಾಗಿರುವೆ
ಚಕಾರವೆತ್ತದೇ ಪ್ರೀತಿಯ ಬಗ್ಗೆ
ವರಿಸುತ ಉಳಿಸು ತಡಮಾಡದೆ

Wednesday, August 2, 2017

ವ್ಯವಸಾಯವಿಲ್ಲದ ವಿಚಾರದಿಂದ ವ್ಯವಹರಿಸಬಾರದು

ಹಲವು ವಿಚಾರಗಳಿಗೆ ಬೌತಿಕ ಸ್ಪರ್ಶದ ಅಗತ್ಯತೆ ಇರುವುದಿಲ್ಲ. ಮೊದಲಿಗೆ ನಾವು ಮಾಡುವ ವಿಚಾರಗಳಿಗೆ ಬಾಹ್ಯ ರೂಪವಿಲ್ಲ. ವಿಚಾರವೆನ್ನುವುದು ತಾರ್ಕಿಕವಾಗಿ ರಚನೆಯಾಗಿರುವುದಾಗಿದೆ. ಅದೆಷ್ಟೋ ಜನರು, ಅದೇನೆ ಹೇಳಿದರೂ ವ್ಯವಸಾಯವಿರದ ವಿಚಾರಗಳಿಂದ ವ್ಯವಹರಿಸುತ್ತಾರೆ. ಇದರಿಂದಾಗಿ ತೊಂದರೆಗೂ ಒಳಗಾಗುತ್ತಾರೆ ಮತ್ತು ನಿಂದನೆಗೆ ಅರ್ಹರು ಎಂದೆನಿಸುತ್ತಾರೆ. ನೈತಿಕತೆಯ ಸ್ಪರ್ಶದಿಂದ ಹಲವು ಜನರು ವ್ಯವಸಾಯವಿರದ ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ.

ಒಬ್ಬ ವ್ಯಕ್ತಿ ತನ್ನ ಅಸ್ಥಿತ್ವವನ್ನು ತೋರಿಸಿಕೊಳ್ಳಲು ಬಹಳ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾನೆ. ಆದರೆ ಅವುಗಳಲ್ಲಿ ಕೆಲವೇ ಕೆಲವರಿಂದ ಔಚಿತ್ಯಪೂರ್ಣವಾದ ತತ್ವಗಳು ಮತ್ತು ವಿಚಾರಧಾರೆಗಳು ಮಂಡನೆಯಾಗುತ್ತದೆ. ಮುಂದಿಡುವ ವಿವೇಚನಾ ಶೀಲ ಅನಿಸಿಕೆ ಅಭಿಪ್ರಾಯಗಳಿಗೆ ವ್ಯವಸಾಯವಿಲ್ಲದಿದ್ದರೆ ಅಸಂಬದ್ಧ ಪ್ರಲ್ಲಾಪವಾದಂತಾಗುತ್ತದೆ. ವ್ಯವಸಾಯವೆಂದರೆ ಕೃಷಿ ಕ್ಷೇತ್ರದ ಒಂದು ಬೌತಿಕವಾದ ಕೆಲಸವೆಂದೆನಿಸಬಹುದು ಆದರೆ ಇದನ್ನು ನಾವು ಮಾಡುವ ವಿಚಾರಗಳಲ್ಲೂ ನೈತಿಕವಾಗಿ ಮಾಡಿದಾಗ ಮಾತ್ರ ಜೀವನವೆನ್ನುವುದು ನವಿರಾಗಿ ಕಂಗೊಳಿಸುವುದು. ತಾರ್ಕಿಕವಾದ ವ್ಯವಸಾಯವಿರದಿದ್ದರೆ ಉಳಿದವರ ಎದುರು ತಲೆ ತಗ್ಗಿಸುವಂತ ಮಾತನಾಡಬೇಕಾಗುತ್ತದೆ. ಆಗ ಜೀವನವೆಂಬುದು ಫಸಲು ಬಾರದ ಬಂಜರು ಭೂಮಿಯಂತಾಗುತ್ತದೆ.

ಬರಡು ಬುರುಡೆಯಂತೆ ವ್ಯವಹರಿಸದೆ, ಸತ್ವ ಸಾರುವ ವಿಷಯಗಳನ್ನು ಅರುಹಿದರೆ ತಾರೆಗಳ ನಡುವಿನಲ್ಲಿ ಕಂಗೊಳಿಸುವ ಶಶಿಯಂತಾಗುವುದು ಖಂಡಿತ. ಒಂದುವೇಳೆ ಹಾಗಾಗದಿದ್ದರೂ ಆಭರಣಗಳ ನಡುವಿನಲಿ ಮಿನುಗುವ ಮುತ್ತಿನಂತಾಗುವುದಂತೂ ನಿಶ್ಚಿತ. ವ್ಯವಸಾಯವಿರುವ ವಿಚಾರವಂತರ ಬಾಳು ಹೇಗಿರುತ್ತದೆಂದರೆ ಇರುವೆಗಳು ಮುತ್ತುವ ಸಿಹಿಯಂತಿರುತ್ತದೆ. ಅಲ್ಲದೆ ಕಡಿವ ಜೇನು ಹುಳುವಿನಿಂದಾಗುವ ಜೇನು ತುಪ್ಪದಂತಿರುತ್ತದೆ. ವ್ಯವಸಾಯವಿರುವ ವಿಚಾರದಿಂದ ವ್ಯವಹರಿಸಿದರೆ ನೈತಿಕ ಸ್ಪರ್ಶದ ಅನುಭವಿಯಾಗುವುದರಲ್ಲಿ ಅನುಮಾನವಿಲ್ಲ.

Thursday, June 22, 2017

ಆಳ್ವಿಕೆ ಮಾಡು

ಹರಿವ ಹೊಳೆಯ ನೀರ ಮೇಲೆ
ಮಳೆಯು ಸುರಿದ ಹಾಗಿದೆ
ಯಾಕೆ ಹೀಗೆ ಮನದ ಓಲೆ
ಭಾವ ಲಹರಿಯ ಹಾಡಿದೆ
ಕದ್ದು ನೋಡಲು ನಿನ್ನ ಮೊಗವ
ತನುವಿನ ಆಸೆ ಏರುತ ಹೋಗಿದೆ
ನೋಡು ಒಳಗಿನ ಬಯಕೆ ರಾಜ್ಯವ
ಇಲ್ಲೇ ಆಳ್ವಿಕೆ ಮಾಡು ಎಂದಿದೆ

ಕೊಡೆಯನು ಹಿಡಿಯುವೆ
ಬಿಸಿಲ ಝಳಕೆ
ನೆರಳಿನ ನೆನೆಪೇ ಆಗದು
ಮಡಿಲಲಿ ಮಲಗಿಸಿ
ತುತ್ತ ನೀಡುವೆ
ತಾಯಿ ಹಂಬಲವೇ ಬಾರದು

ಕನಸಲು ಕಾಯುವೆ
ಪ್ರೀತಿ ಸುಧೆಯ
ಬೇರೆಡೆ ದೃಷ್ಟಿಯ ಹಾಯಿಸದೆ
ರೇಗದೆ ತಿಳಿಸುವೆ
ಪ್ರೇಮದ ಪರಿಯ
ಬೇಡುತ ತಾಳ್ಮೆಯ ಪರೀಕ್ಷಿಸದೆ

Wednesday, June 21, 2017

ಮುದಕೆ ಭಂಗ

ಹೂವು ಅರಳುವ ಘಳಿಗೆ ಸುಳಿಯಿತು
ಮನದ ನೋವ ಮರೆಯಲು
ಮೊಗ್ಗು ಚಿಗರುವ ಕಾಲ ಬಂದಿತು
ಮುದಕೆ ಭಂಗ ಮಾಸಲು

ಮುಕ್ತ ಮನಸಿನ ವೇದನೆಯೆಲ್ಲೋ
ಗುಪ್ತವಾಗಿಡಲು ಬಯಸಿದೆ
ಸುಪ್ತ ಯಾತನೆ ಆವರ್ತನೆಯಲ್ಲೋ
ಸಪ್ತ ಸಾಗರ ಎದುರಾಗಿದೆ

ನಿಶ್ಚೇಷ್ಟ ಕಾರ್ಯದ ಹೊತ್ತ ಹಣಿಯಲು
ನಲಿವಿನ ನಾಟಕ ಅಳಿಯಲಿ
ಅರೆ ಅರಿವಿನ ಅಂಧಕಾರ ಅಳಿಸಲು
ವಿವೇಕದ ಬೆಳಕು ಹರಿಯಲಿ

Tuesday, June 20, 2017

ಸ್ವಾನುರಾಗವ ತೊರೆದು

ಸುತ್ತದಿರು ತೀರ್ಥಯಾತ್ರೆಗೆಂದು
ಹಲವಾರು ದೇವಾಲಯವ ದೇಶವ್ಯಾಪಿ
ಸಾಯದಿರು ಸ್ವಾರ್ಥಿ ಹತಾಶಿಯೆಂದು
ನಿನ್ನೊಳಗಿರುವ ದೇವ ಭಾವವ ಮರೆತು
ಪ್ರೀತಿ ವಿಶ್ವಾಸದ ಕರುಣೆಯ ತೊರೆದು
ನಿನ್ನ ಅಹಮ್ಮಿನ ಕೋಟೆಯಲಿ ಮೆರೆಯುದಿರು

ಹಸಿವು ಎಂದವರಿಗೆ ಕೈ ತುತ್ತನಿಡು
ಯಾಚಿಸಿದವರಿಗೆ ಸಹಾಯ ಹಸ್ತ ಕೊಡು
ತಾನು ತನ್ನದೆಂಬುವ ಮೋಹ ಬಿಡು
ಇರಲಿ ನನ್ನವರೆಂಬುವ ನಿಸ್ವಾರ್ಥದ ಬೀಡು

ಕಾಣದ ದೇವನಿಗೆ ಹಂಬಲಿಸದಿರು
ಪರೋಪಕಾರಿಯಾಗುತ ಜೀವಿಸಿರು
ದೀನರ ಪಾಲಿನ ದೇವ ನೀನಾಗುವೆ
ನೆಮ್ಮದಿ ಕಾಣುತ ಅಜರಾಮರನಾಗುವೆ

ಬೆಳಕಾಗು ಬೇಡುವ ಬಡವರ ಪಾಲಿಗೆ
ರಕ್ಷಕನಾಗು ಅನಾಥರ ಬದುಕಿಗೆ
ಊರುಗೋಲಾಗು ವೃದ್ಧರ ಬಾಳಿಗೆ
ಸ್ವಾನುರಾಗವ ಆಲಾಪಿಸದೆ ಗಂಧರ್ವನಾಗು

Monday, June 12, 2017

ನನ್ನವಳ ವರಿಸಲು

ಹೆತ್ತವರು ಹೇಳಿದರು ನೀ ಸುಂದರಿ
ನಿನ್ನನ್ನು ನೋಡಲು ಮನ ಕಾತರಿ
ಕರೆಯಲ್ಲಿ ನುಡಿದಿಹರು ಮುಗುದೆಯೆಂದು
ನೋಡು ಶಾಸ್ತ್ರವ ಕೂಡಲೆ ಮುಗಿಸಲೆಂದು
ನೂರಾರು ಕನಸುಗಳ ಕಲರವವು ಎದೆಯಲಿ
ಭೇಟಿಯಾಗಲು ಅಣಿಯಾದೆ ಸಂತೋಷದಲಿ

ಕಣ್ಣನ್ನು ಕುಕ್ಕಿತು ಆ ಕೆಂದುಟಿ
ಮಾತನಾಡದೆ ನೀಡಿದೆ ಸಮ್ಮತಿ
ತಿರುಗಿ ಬಯಸಿಹೆನು ವರಿಸಲು ಅನುಮತಿ
ಕದ್ದು ತಿಳಿಸಲು ಮುದ್ದು ಮನದ ಆಣತಿ

ಸಿಹಿಯನ್ನು ತಿನಿಸಿಹೆನು ಶುಭಾರಂಭಕೆ
ಸಂಭಾಷಣೆಯ ಮೂಲಕ ಹೊಂದಾಣಿಕೆ
ಸವಿಯುತ್ತರ ಪಡೆಯಲು ನಿಶ್ಚಿತಾರ್ಥಕೆ
ನಿಗದಿಯಾಯಿತು ದಿನವು ಕಲ್ಯಾಣಕೆ

ಪ್ರತಿದಿನವು ನಡೆಯಿತು ಮಿತಿಯಿರದ ಹರಟೆ
ಮತ್ತದರ ಸಾರಾಂಶ ವಿನಿಮಯದ ಗೊರಟೆ
ಶುಭದಿನದ ಸೊಗಸಿನ ತಯಾರಿಗೆ ಹೊರಟೆ
ಜೊತೆಯಿರುವೆ ರಕ್ಷಿಸಲು ಕಲಿತು ಕರಾಟೆ

ವೈದಿಕರು ಮಾಡಿಹರು ಮಂತ್ರಘೋಷ
ಮಾಂಗಲ್ಯ ಧಾರಣೆಗೆ ನಗೆಯ ಹರುಷ
ಹಾರೈಸಿಹರು ಬಾಳಿ ನೂರಾರು ವರುಷ
ಸಾಮರಸ್ಯದ ಬದುಕಿರಲಿ ಪ್ರತಿ ನಿಮಿಷ