Wednesday, April 5, 2017

ಜೋಗದ ಗುಂಡಿಯ ಆಳವನರಿಯಲು ಹೊರಟ ಹುಡುಗ

ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬರಹ

ಬದುಕಿನಲ್ಲಿ ಒಮ್ಮೆ ನೋಡು ಜೋಗದ ಗುಂಡಿ ಅಂತ ಕನ್ನಡದ ಹಾಡೊಂದರಲ್ಲಿ ಹೇಳುತ್ತಾರೆ. ಅದೇ ರೀತಿ ಗೆಳೆಯರೆಲ್ಲ ಸೇರಿ ಓಮಿನಿ ಕಾರಿನಲ್ಲಿ ಜೋಗದತ್ತ ಪಯಣ ಬೆಳೆಸುತ್ತಾರೆ. ಹುಡುಗ ಬುದ್ಧಿಯವರಿಗೆ ಅದೊಂದು ರೀತಿಯ ಮಜ. ಅರಿವೇ ಇಲ್ಲದಂತೆ ತಾವೆಲ್ಲಿಗೆ ಹೊರಟಿದ್ದೇವೆ, ಅದೆಂತಹ ಅಪಾಯದ ಜಾಗ, ಸ್ಥಳದಲ್ಲಿ ಹೇಗೆ ಇರಬೇಕು, ಎಷ್ಟು ಜಾಗರೂಕತೆಯಿಂದ ವ್ಯವಹರಿಸಬೇಕು ಎಂಬುದು ಇವರಿಗೆ ಮುಖ್ಯವಲ್ಲ. ಅಲ್ಲಿ ಹೋಗಿ ಜೋಗದ ಜಲಪಾತವನ್ನು ನೋಡಿ ಸಂಭ್ರಮಿಸುವುದಷ್ಟೇ ಇವರ ತಲೆಯಲ್ಲಿದ್ದ ಪಯಣದ ರೂಪರೇಷೆ.

ಅಂತಾಕ್ಷರಿ, ಹರಟೆಗಳ ಮೂಲಕ ಜೋಗದ ಸ್ಥಳವನ್ನು ತಲುಪಿದರು. ಕಾರಿಂದ ಇಳಿದು ಯಾವ ಕಡೆ ಹೋಗ ಬೇಕೆಂದು ಯೋಚಿಸಿ ಜೋಗ ಜಲಪಾತದ ನೀರು ಬೀಳುವ ಜಾಗಕ್ಕೆ ತಲುಪಿದರು. ಮೇಲಿಂದ ಕೆಳಗೆ ನೋಡಿ ಭಯ ಬೀತರಾದರು. ನೀರು ಬೀಳುವ ಜಾಗದಲ್ಲಿರುವ ಬಂಡೆಗಲ್ಲಿನ ಮೇಲೆ ಮಲಗಿ ಜೋಗದ ಗುಂಡಿ ನೋಡಿ ಫೋಟೊ ಸೆರೆ ಹಿಡಿದರು. ಬ್ರಿಟೀಷ್ ಬಂಗಲೆಯನ್ನು ಸುತ್ತಿದರು. ಅಲ್ಲಿನ ಕಾಡು ಮರಗಳನ್ನು ಸುತ್ತಿ ಪರಿಸರದ ತಂಪು ಸ್ವಾದವನ್ನು ಹೀರಿದರು.

ಜೋಗದ ಗುಂಡಿ ನೋಡಲು ನಿಧಾನವಾಗಿ ಮೆಟ್ಟಿಲಿನತ್ತ ಹೆಜ್ಜೆ ಹಾಕಿದರು. ಸಾವಿರ ಮೆಟ್ಟಿಲುಗಳಿವೆ ಎಂದು ಕೇಳಿದ್ದ ಇವರು ಪ್ರತಿ ಮೆಟ್ಟಿಲುಗಳನ್ನು ಲೆಕ್ಕ ಮಾಡುತ್ತ ಹೆಜ್ಜೆಯಿಟ್ಟರು. ಕೆಳಗಡೆಗೆ ಹೋದ ಮೇಲೆ ಅಲ್ಲಿನ ಬಂಡೆಗಳ್ಳುಗಳನ್ನು ಏರಿ ಕುಳಿತರು. ಅಲ್ಲಿದ್ದ ಐಸ್ ಕ್ರೀಂ ಅನ್ನು ಒಂದಕ್ಕೆ ಎರಡು ದರ ಕೊಟ್ಟು ಖರೀದಿಸಿ ರುಚಿ ನೋಡಿದರು. ಆಗ ಅವರಿಗೆ ಹುಟ್ಟಿದ್ದು ಗುಂಡಿಯಲ್ಲಿ ಹಾರಿ ಈಜಿಕೊಂಡು ಜಲಪಾತದ ಕೆಳಗೆ ಹೋಗೋಣ ಎಂದು ಮಾತಾಡಿ ಗುಂಡಿಗೆ ಹಾರಲು ತಯಾರಾದರು. ಈಜು ಬರುವ ಎರಡು ಜನ ಹಾರಿ ರೋರರ್ ಜಲಪಾತದ ಕೆಳಬದಿಯನ್ನು ತಲುಪಿದರು.

ಮೂರನೆಯವನು ಹಾರಲೆಂದು ತನ್ನ ಕಾಲನ್ನು ಬಂಡೆ ಕಲ್ಲಿನ ಕೆಳಬದಿಯಲ್ಲಿರುವ ಚಿಕ್ಕ ಕಲ್ಲಿನ ಮೇಲಿಡಲೆಂದು ಧಾವಿಸಿದ. ಚಿಕ್ಕ ಕಲ್ಲಿನ ಮೇಲೆ ಕಾಲಿಡಬೇಕೆಂದು ಅಂದುಕೊಂಡು ಕಾಲಿಟ್ಟ ಹುಡುಗ ಕ್ಷಣ ಮಾತ್ರದಲ್ಲಿ ಕಣ್ಮರೆಯಾದ. ಯಾಕೆಂದರೆ ಬಂಡೆಯ ಕೆಳಗೆ ಚಿಕ್ಕ ಕಲ್ಲೇ ಇರಲಿಲ್ಲ. ಗುರುತು ಪರಿಚಯವಿರದ ಜಾಗದಲ್ಲಿ ಈಜಲು ಹೋದ ಹುಡುಗ ಜೋಗಾದ ಗುಂಡಿಯ ಆಳವನ್ನು ನೋಡಲು ಹೊರಟ ಹಾಗಾಯಿತು. ಎಷ್ಟೋ ಕೆಳಗೆ ಹೋದ ಹುಡುಗ ತಾನು ಸತ್ತೆ ಎಂದು ಮನಸ್ಸಿನಲ್ಲೆ ಅಂದುಕೊಳ್ಳುತ್ತಾ ಬದುಕಿ ಮೇಲೆ ಬರುವ ಪ್ರಯತ್ನ ಮಾಡಿದ. ಹೆದರಿದ ಹುಡುಗ ಮೇಲೆ ಬರುವಷ್ಟರಲ್ಲಿ ಉಸಿರಿನ ಕೊರತೆಯನ್ನು ಅನುಭವಿಸಿದ. ಬದುಕಬೇಕೆನ್ನುವ ಆಸೆಯಿಂದ ಹೇಗೋ ಮೇಲೆ ಬಂದ ಹುಡುಗನ ತಲೆ ಸರಿಯಾಗಿ ನೀರಿನ ಮೇಲಿದ್ದ ಬಂಡೆಗೆ ಸರಿಯಾಗಿ ಜಪ್ಪಿತು (ಹೊಡೆಯಿತು). ಉಸಿರಿಲ್ಲದ ಹುಡುಗ ನೀರೊಳಗೆ ಕೂಗಲು ಆಗದೆ ನೋವನ್ನು ಅನುಭವಿಸಲೂ ಆಗದೆ ಬಂಡೆಗಲ್ಲನ್ನೆ ಹಿಡಿದು ತಳ್ಳಿಕೊಳ್ಳುತ್ತೀಚೆ ಬಂದು ಮುಖವನ್ನು ಮೇಲೆ ಮಾಡಿ ಉಸಿರಾಡಿ ತನ್ನ ಕೈಯನ್ನು ಚಾಚಿದ.

ಆಗ ಈತನಿಗಾಗಿ ಅರಸುತ್ತಿದ್ದ ಈತನ ಒಬ್ಬ ಗೆಳೆಯ ಇವನ ಕೈ ಹಿಡಿದು ಮೇಲೆತ್ತಿದ. ಉಸಿರಿಲ್ಲದೆ ಹೆದರಿ ನೀರನ್ನು ಕುಡಿದಿದ್ದ ಹುಡುಗ ಬಂಡೆಯ ಮೇಲೆ ಮಕಾಡೆ ಮಲಗಿದ. ಅಂತು ಇಂತು ತನ್ನ ಜೀವ ಬದುಕಿತು ಎಂದುಕೊಳ್ಳುತ್ತ ಅರ್ಧಗಂಟೆ ವಿಶ್ರಮಿಸಿದ. ಈಜಿ ಜಲಪಾತದ ಕೆಳಗೆ ಹೋಗ ಬೇಕೆಂದುಕೊಂಡಿದ್ದ ಹುಡುಗ, ಅಂದುಕೊಂಡಿದ್ದನ್ನು ಸಾಧಿಸಿದ. ಮತ್ತೊಮ್ಮೆ ನೋಡಿಕೊಂಡು ಗುಂಡಿಗೆ ಹಾರಿ ಈಜಿಕೊಂಡು ಹೋಗಿ ಜಲಪಾತದ ಕೆಳಗೆ ನಿಂತು ಸಂಭ್ರಮಿಸಿದ.


ಮರಳಿ ಬರುವಾಗ ಸಾವಿರ ಮೆಟ್ಟಿಲುಗಳನ್ನು ಹತ್ತಲು ಕಷ್ಟ ಪಟ್ಟರೂ ಏನೋ ಸಾಧಿಸಿದ ಹುಡುಗರ ಸಂಭ್ರಮದ ಮುಂದೆ ಅವರಿಗಾದ ಸುಸ್ತು ನೀರಿನಂತೆ ಕರಗಿತು. ಮತ್ತೆ ಪುನಃ ಮಜದ ಮಾತಾಡುತ್ತ ಕಾರಿನೊಳಗೆ ಕೂತು ತಿರುಗಿ ಮನೆ ಸೇರುವಾಗ ಬಾನಿನ ಸೂರ್ಯ ಮಲಗಿದ್ದ ಹೊತ್ತಾಗಿತ್ತು.

No comments:

Post a Comment