Friday, October 25, 2013

...ತೋರಿಕೆಯ ಗೌರವಕೆ ಮಾತ್ರವಾದ ದಿನಾಚರಣೆಗಳು...

ವರ್ಷದಲಿ ಕೆಲವು ದಿನವನ್ನು ಮಾತ್ರ  ದಿನ  ದಿನವೆಂದು ಪ್ರತ್ಯೇಕವಾಗಿ ನಿಶ್ಚಿತ ದಿನವನ್ನಾಗಿ ಆಚರಿಸುವ ಸೌಜನ್ಯವನ್ನು ನಾವು ಹೊಂದಿದ್ದೇವೆ ಎಂದು ಬೀಗುವ ಜಾಯಮಾನದವರು. ಅಪ್ಪನಿಗೊಂದು ದಿನ, ಅಮ್ಮನಿಗೊಂದು ದಿನ, ಗೆಳೆಯರಿಗೋಂದು ದಿನ, ಪ್ರೇಮಿಗಳಿಗೊಂದು ದಿನ, ನೇತಾರರಿಗೊಂದೊಂದು ದಿನ, ಕಾರ್ಮಿಕರಿಗೊಂದು ದಿನವೆಂದು ಹೀಗೆ ಅರರಿವರಿಗೊಂದು ದಿನವೆಂದು ವಿಭಜಿಸಿ ವಿಂಗಡಿಸಲಾಗಿದೆ.

ಈಗಿನ ಯಾಂತ್ರಿಕ ಯುಗದಲ್ಲಿ ಹೀಗೆ ದಿನಗಳು ಬಂದಾಗಲೂ ಅದನ್ನು ವ್ಯಕ್ತಪಡಿಸಲು ಸಮಯ ಸಿಗದಿರುವುದು, ಮನುಷ್ಯನು ಯಾಂತ್ರಿಕ ಬದುಕಿನ ಕಾರ್ಯನಿರತೆಯಲಿ ತೊಡಗುವುದು ಎಷ್ಟರಮಟ್ಟಿಗೆ ಅಟ್ಟಹಾಸ ಮೆರೆಯುತ್ತಿದೆ ಎನ್ನುವುದನ್ನು ತಿಳಿಸುತ್ತದೆ. ಮೊದಲೆಲ್ಲ ತನ್ನವರಿಗೆ, ಒಳಿತನ್ನು ಬಯಸುವವರಿಗೆ, ಕಾರ್ಯ ತತ್ಪರರಿಗೆ ತನ್ನ ಸಮಯವನ್ನು ನೀಡುತ್ತಿದ್ದ ಮನುಷ್ಯ ಇಂದು ತೋರಿಕೆಯಲಿ ಗೌರವ ಸೂಚಿನುವ ಹಾಗಾಗಿರುವುದು ಖಂಡನೀಯ.

ಉಳಿದವರಿಗೆ ಗೌರವ ಸೂಚಿಸಲು ಸಮಯವಿಲ್ಲವೆಂದರೆ ಅದನ್ನು ಒಪ್ಪಿಕೊಳ್ಳಬಹುದು ಅಥವಾ ಅರ್ಥೈಸಿಕೊಳ್ಲಬಹುದು. ಆದರೆ ಹೆತ್ತವರನ್ನು ಸಹ ಪೂಜಿಸಲು, ಪ್ರೀತಿಸಲು ಮತ್ತು ಗೌರವಿಸಲು ಸಮಯವಿಲ್ಲವೆಂದಾಗ ನಗು ಬರುತ್ತದೆ. ಅವರಿಗು ಸಹ ಒಂದೊಂದು ದಿನವನ್ನು ಪತ್ಯೇಕಿಸಿಟ್ಟಿದ್ದು ವಿಪರ್ಯಾಸವೇ ಸರಿ. ಯಾರನ್ನು ಸರ್ವಕಾಲವು, ಸರ್ವ ಸಮಯವು ಎದೆಯಲ್ಲಿಟ್ಟುಕೊಂಡು ಆರಾಧಿಸುತ್ತಿರಬೇಕೊ ಅಂಥವರಿಗೆ ನಿರ್ಧರಿತ ದಿನವನ್ನು ಮಾಡಿರುವುದು ಹೀನ ಕಾರ್ಯವಾಗಿದೆ.

ಇನ್ನು ಕೆಲವರಂತು ಸಮಯವಿದ್ದರು ಸಹ ಬೇರೆಯವರು ಮಾಡುತ್ತಾರೆಂದು ತಾವು ಮಾಡಬೇಕೆನ್ನುವ ಮನಸ್ಥಿತಿಗೆ ಬಂದಿರುವುದು ಅನುಕರಣೆಯ ಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನನ್ನ ಶಾಲಾ ದಿನಗಳಲ್ಲಿ ಗುರುಗಳೊಬ್ಬರು ಹೇಳಿದ ನಿದರ್ಶನವೊಂದು ನೆನಪಾಗುತ್ತಿದೆ ಅದೇನೆಂದರೆ ಒಬ್ಬ ಸನ್ಯಾಸಿಯು ಕಡಲ ತೀರದಲಿ ಸ್ನಾನ ಮಾಡುವ ಮೊದಲು ತನ್ನ ಹಣವನ್ನು ಮುಚ್ಚಿಟ್ಟು ಗುರುತಿಗೋಸ್ಕರ ಮರಳಿನ ಶಿವಲಿಂಗವನ್ನು ಮಾಡಿಡುವ ಪದ್ಧತಿಯಿಟ್ಟುಕೊಂಡಿದ್ದ ಹೀಗೆ ನಡೆಯುತ್ತಿರುವಾಗ ಶಿವಲಿಂಗವನ್ನು ನೋಡಿದ ಉಳಿದವರು ಇಲ್ಲೇನೊ ಮರ್ಮವಿರಬೇಕು ಎಂದು ಗ್ರಹಿಸಿ ಭ್ರಮೆಯಿಂದ ತಾವು ಅದೆ ರೀತಿ ನೀರಿಗಿಳಿಯುವ ಮೊದಲು ಮರಳಿನ ಶಿವಲಿಂಗ ಮಾಡಿಟ್ಟು ಹೋಗುವ ಪದ್ಧತಿನ್ನು ಪ್ರಾರಂಭಿಸಿದರು. ಹೀಗೆ ಪ್ರಾರಂಭವಾದ ಪದ್ಧತಿಯು ಸಂಪ್ರದಾಯವೆಂದು ಬದಲಾದ ಹಾಗೆ ಇಂದಿನ  ದಿನಾಚರಣೆಗಳು ಸಹ ಹಾಗಾಗಿವೆ.

ಯಾರೋ ಮಾಡುತ್ತಾರೆಂದು ನಾವು ಸಹ ಅದನ್ನೆ ಮಾಡುವುದೆಷ್ಟು ಸರಿ ಎಂದು ಯೋಚಿಸುವ ಯೋಚನಾ ಶಕ್ತಿಯನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಮನುಷ್ಯ ತನ್ನ ವೃತ್ತಿ ಜೀವನದಲ್ಲಿ ಕಾರ್ಯತತ್ಪರತೆಯಲ್ಲಿ ಅವಿಶ್ರಾಂತನಾಗಿ ಯಾಂತ್ರಿಕ ಬದುಕಿನಲಿ ಮುಳುಗಿ ಹೋಗಿರುವನೆಂದು ಹೀಗೆ ವಿಭಜಿಸಿರುವ ದಿನಾಚರಣೆಗಳಿಂದ ತಿಳಿದು ಬರುತ್ತದೆ. 

 ದಿನಾಚರಣೆಗಳು ಕೇವಲ ತೋರಿಕೆಗಷ್ಟೆ ಸೀಮಿತವಾಗಿರುವುದು ದುರಾದೃಷ್ಟಕರವಾಗಿದೆ. ಅದರ ಹಿಂದಿನ ಸತ್ವವಿರುವ ತತ್ವಗಳನ್ನು ಅರ್ಥ ಮಾಡಿಕೊಳ್ಳದೆ ಬೇರೆಯವರು ಮಾಡುತ್ತಾರೆಂದು ತಾವು ಮಾಡುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ.  ದಿನದಂದು ಮಾತ್ರ ನಮ್ಮ ಗೌರವ ತೋರುತ್ತ ಬೆಳಕು ಹರಿಸಿದ ಸೂರ್ಯ ಮರೆಯಾಗಿ ಕತ್ತಲಾದಂತೆ ಮತ್ತದೆ ಅಹಂಕಾರದ ಅಂಧಕಾರಕ್ಕೆ ಮರಳುತ್ತಿರುವುದು ಸಮಂಜಸವೇ? ಎಂದು ಒಮ್ಮೆ ಯೋಚಿಸಿದಾಗ ಇವುಗಳನ್ನು ಮರೆತುಹೋಗುವ ಸಮದಲ್ಲಿ ಹೀಗೆ ನಿರ್ದಿಷ್ಟಪಡಿಸಿದ ದಿನಗಳು ಬಂದಾಗ, ಅಂದಾದರು ಗೌರವ ಸಮರ್ಪಿಸುತ್ತಾರಲ್ಲ ಎಂದು ವಿವೇಚಿಸ ಬೇಕಾಗಿರುವುದು ಇದರ ಹಿಂದಿನ ಸಂಗತಿ. ಉಳಿದ ದಿನಗಳಲ್ಲಿ ಹೇಗೆ ಇದ್ದರೂ ಪರವಾಗಿಲ್ಲ ಕನಿಷ್ಟ ಪಕ್ಷ   ದಿನವೊಂದಾದರು ಅವರಿಗೆ ಮನ್ನಣೆ ನೀಡಬೇಕೆಂದು ನಿರ್ಧಿಷ್ಟಪಡಿಸಿದ ದಿನವನ್ನು ನಿಗದಿಯಾಗಿರಿವುದು ಮನುಷ್ಯನಿಗೆ ಸಮಯದ ಅಭಾವವಿರುವುದನ್ನು ವ್ಯಕ್ತಪಡಿಸುತ್ತದೆ.

ದಿನಾಚರಣೆಗಳ ಹಿಂದಿನ ತತ್ವವನ್ನು ತಿಳಿದು ಅವಶ್ಯಕತೆ ಇದೆಯೆ ಎಂದು ಅವಲೋಕಿಸಿ ಸಂಭ್ರಮಿಸಿ ತೇಲೋಣ.

4 comments:

  1. ಮರೆತ ಉದ್ದೇಶ ಮತ್ತು ಪೊಳ್ಳು ಆಚರಣೆಗಳ ಬಗ್ಗೆ ಒಳ್ಳೆಯ ವಿಶ್ಲೇಷಣೆ.

    ReplyDelete
  2. ಧನ್ಯವಾದಗಳು ಸಾರ್

    ReplyDelete
  3. ಅವಶ್ಯವಿಲ್ಲದ ದಿನಾಚರಣೆಗಳ ಬಗೆಗಿನ ನಿಮ್ಮ ಅಭಿಪ್ರಾಯ ಸಮಂಜಸವಾಗಿದೆ.

    ReplyDelete
    Replies
    1. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು.

      Delete