Saturday, September 14, 2013

...ಸಡಗರವಿಲ್ಲದ ಸಂಭ್ರಮ...

ಇಂದೇಕೆ ಹೀಗಾಗುತ್ತಿದೆ..? ಯಾವುದೇ ಹಬ್ಬಗಳಲ್ಲಿ ಮೊದಲಿನ ಗರ ಮರೆಯಾಗುತ್ತಿದೆ. ಪಟ್ಟಣದಿಂದ ಹಳ್ಳಿಗೆ ಹಬ್ಬಕ್ಕೆಂದು ಮಕ್ಕಳು ಬಂದರೆ ಸಂತೋಷದಿಂದ ಬರಮಾಡಿಕೊಳ್ಳುವ ಪಾಲಕರನ್ನು ನೋಡಿ ಯಾಂತ್ರಿಕ ಬದುಕಿನಿಂದ ವಿರಾಮ ಪಡೆದ ಸಮಾದಾನ ಮನದಲ್ಲಿ ಮೂಡಿದರೆ ಜೊತೆಯಾಗಿ ಅಡ್ಡಾಡಲು ಸಂಗ ಬೆಳೆದ ಸ್ನೇಹಿತರು ಜೊತೆ ಸಿಗುವುದಿಲ್ಲ. ಊರಿನ ತುಂಬ ಏಕಾಂಗಿ ಸಂಚಾರ, ಹಳೆ ನೆನಪುಗಳೊಂದೆ ಕಾಡುವ, ಬೇಡುವ, ಸತಾಯಿಸುವ, ಬೇಸರಿಸುವ, ಖುಷಿ ನೀಡುವ ಜೊತೆಗಾರ.

ಊರ ತುಂಬ ಮುದುಕರ ಸಾಮ್ರಾಜ್ಯ ಜೊತೆ ಬೆಳೆದ ಸ್ನೇಹಿತರೆಲ್ಲ ಉದ್ಯೋಗ ಅರಸಿ ಬೇರೆಡೆಗೆ ಹೋಗಿರುವ ಸುದ್ದಿ. ನೀ ಹೇಗಿದ್ದಿಯಾ? ಯಾವ ಕಂಪನಿ? ಏನು ಕೆಲಸ? ಏನು ತಯಾರಾಗುತ್ತದೆ? ಎಷ್ಟು ಸಂಬಳ? ನೀನು ಇರುವ ಊರಿನ ಪರಿಸರ ಹೇಗಿದೆ? ಅಲ್ಲಿಯ ಜನಗಳು ಹೇಗೆ? ಊಟ, ಆಸರಿ ಹೇಗಿದೆ? ವಾಸ್ತವವೆಲ್ಲಿ? ಎಲ್ಲಾ ಸುಸೂತ್ರವಾಗಿದೆಯಾ? ಎಂಬ ಸರಣಿ ಪ್ರಶ್ನೆಗಳನ್ನ ಒಂದಾದ ಮೇಲೊಂದು, ಒಬ್ಬರಾದ ನಂತರ ಇನ್ನೊಬ್ಬರು ಕೇಳುತ್ತಾರೆ.

ಚಿಕ್ಕವರಾಗಿರುವಾಗ ಮಾಡಿದ ತುಂಟತನ ನೆನಪಾಗಿ ಮುಗುಳ್ನಗೆಯೊಂದಿಗೆ ದಿನಗಳ ಸಂಭ್ರಮದ ಮಾತು. ಮೊದಲೆಲ್ಲ ಗಣೇಶ ಹಬ್ಬದಲ್ಲಿ ಗಣಪತಿಯ ಮೂರ್ತಿಗಳನ್ನ ತರುವುದು, ಜಾಗಟೆ ಬಡಿಯಲು ಜಗಳವಾಡುವುದು ನೆನಪಾಗಿ ನಗು ಬರುತ್ತದೆ. ಪ್ರಸಾದ ಪಡೆಯುವಾಗ ನೆನೆಸಿದ ಕಡಲೆ ಹಂಚಲು ಮತ್ತು ತಿನ್ನಲು ಹೊಡೆದಾಡಿದ ಸಮಯದಲಿ ಬೈಗುಳ, ಹೊಡೆತ ತಿಂದ ಜಾಗವನು ಮುಟ್ಟಲೇನೋ ಪ್ರಫುಲ್ಲತೆ.

ಚೌತಿ ಹಬ್ಬದ ಹಿಂದಿನ ದಿನ ಮಾಡುವ ಮಂಟಪದ ಗಡಿಬಿಡಿಯ ಉಪಾಯದ ಮಾತು, ಫಲಾವಳಿ ಕಟ್ಟುವ ಗರ, ಬೆಟ್ಟ ಗುಡ್ಡ ಸುತ್ತಾಡಿ ಮರಹತ್ತಿ ಕೊಯ್ಯುವ ಗಂಗಮ್ಮನ ಕಾಳು ಮತ್ತು ಕೋಡನ ಗಜ್ಜೆ ತಂದ ಆಯಾಸದ ಬಿಸಿಉಸಿರಲು ಮಾಡಿದ ಹರ್ಷೋದ್ಗಾರದ ಸವಿ ನೆನಪಾದಾಗ ಏನೋ ಉಲ್ಲಾಸ ಕಳೆದು ಕೊಂಡ ಭಾವ ಮನದಲ್ಲಿ ಮೂಡಿತು.

ಊಟವಾದ ತಕ್ಷಣ ಗಣಪತಿ ಮೂರ್ತಿ ನೋಡಲು ಹೊರಡುವ ಗಡಿಬಿಡಿಯ ಕ್ಷಣಗಳು, ಊರತುಂಬ ಅಲೆದಾಡಿ ಮನೆ ಮನೆಗೆ ಹೋಗಿ ಪ್ರತಿಯೊಬ್ಬರ ಮನೆಯ ಗಣಪತಿ ಮೂರ್ತಿಯನು ನೋಡಿ ಪಂಚಕಜ್ಜಾಯ ತಿನ್ನುವ ಹಂಬಲ ಮತ್ತೆ ಮರುಕಳಿಸ ಬಾರದೇ ಎಂದು ಬೆಳೆದ ವಯಸಿಗೆ ಹಿಡಿ ಶಾಪ ಹಾಕಿದರು ಮತ್ತೆ ಮರಳದು.

ಹಬ್ಬದ ಕೊನೆಯ ದಿನ ಗಣಪತಿ ಮೂರ್ತಿಯನು ಮುಳುಗಿಸುವಾಗ ಎಲ್ಲರ ಮನೆಯವರು ಜೊತೆ ಸೇರಿ ಹೋಗುವಾಗ ಜಾಗಟೆಯ ಬಡಿಯಲು ಸ್ಪರ್ಧೆ, ಜಗಳ, ಕುಣಿತದ ಮೋಜು. ಮುಳುಗಿಸುವಾಗ ಕೆರೆ ಹಾರಿ ಈಜುವುದು, ಮುಳುಗಿಸಲು ಅವಕಾಶ ಸಿಗಲಿಲ್ಲವೆಂದಾಗ ಮುಳುಗಿಸುವ ಗಣಪತಿ ಹೆಕ್ಕುವ ಹಠ. ಗಣಪತಿ ಬಪ್ಪ ಮೋರೆಯ ಎಂದು ಕೂಗುತ ವರ್ಷದ ಚೌತಿ ಹಬ್ಬಕ್ಕೆ ಇಡುವ ಪೂರ್ಣ ವಿರಾಮದ ನಿರಾಳ ಭಾವ.

ದಿನಗಳು ನೆನಪಿನಲ್ಲಿ ಮಾತ್ರ ತಿರುಗಿ ಬಂದರೂ ಮರಳಿ ಸಿಗದ ಹಬ್ಬದ ಹಿರಿಹಿಗ್ಗು. ಊರಿನ ಪ್ರತಿಯೊಬ್ಬ ಯುವಕರು ಉದ್ಯೋಗ ಅರಸಿ ಬೇರೆಡೆ ನೆಲೆಸಿರುವಾಗ ಮುದಿವಯಸಿನಂಗಳದ ತಂದೆ ತಾಯಿಯರು ಮಾತ್ರ ತವರೂರಿನಲ್ಲಿ. ಮೊದಲೆಲ್ಲ ಹಬ್ಬವು ಆನಂದಭರಿತ ದು ದಿನಗಳಾಗಿತ್ತು ಆದರೆ ಈಗ ಮುಗ್ಗರಿಸಿದ ಒಂದು ಅಥವಾ ಎರಡು ದಿನಗಳಿಗಷ್ಟೆ ಸೀಮಿತವಾಗಿದೆ.

ಯಾಂತ್ರಿಕ ಬದುಕಿಗೆ ವಿರಾಮ ಹೇಳಿ ಹಬ್ಬದಲಿ ಪಾಲ್ಗೊಳ್ಳಲೆಂದು ಊರಿಗೆ ಬಂದರೆ ಗರವಿಲ್ಲದ ಸಂಭ್ರಮದಲ್ಲಿ ಜಾಹಿರಾತು ಬಂದಂತೆ. ಊರುಗಳಲ್ಲಿ ಹಬ್ಬ ಮಾಡಲು ಯುವಕರಿಲ್ಲದೇ ಹಬ್ಬಗಳೆಲ್ಲ ಕಳೆಗುಂದುತ್ತಿವೆ. ಚೌತಿ, ನವರಾತ್ರಿ, ದೀಪಾವಳಿ ಹೀಗೆ ಪ್ರತಿಯೊಂದು ಹಬ್ಬಗಳು ತನ್ನ ಗರ, ನಲಿವುಗಳನ್ನ ಕಳೆದುಕೊಳ್ಳುತ್ತಿದೆ. ವಡೆ-ಚಕ್ಕುಲಿ ತಿನ್ನಲು ಜನರಿಲ್ಲ, ಮಾಡುವ ಕೈಯಲ್ಲಿ ಶಕ್ತಿಯಿಲ್ಲ ಹೀಗಾಗಿ ಎಲ್ಲವು ಕುಂಟಿತಗೊಳ್ಳುತ್ತಿದೆ ಎಂಬ ಬೇಸರ. ಮೊದಲೆಲ್ಲ ಸಣ್ಣವರ ಆಟಗಳು ಮುದ ನೀಡುತ್ತಿದ್ದವು ಆದರೆ ಈಗ ಅವರೆಲ್ಲ ಬೆಳೆದು ದೊಡ್ಡವರಾಗಿದ್ದಾರೆ. ಊರುಗಳಲ್ಲಿ ಮಕ್ಕಳಿಲ್ಲ, ಇರುವ ಮಕ್ಕಳನು ಪಾಲಕರು ಹೊರಗೆ ಬಿಡುತ್ತಿಲ್ಲ. ಒಂದೊಂಮ್ಮೆ ಹೊರಗೆ ಬಿಟ್ಟರು ನಿರಾಸಕ್ತಿಯ ಮಕ್ಕಳು ಆಟ ಆಡದೆ ಶಿಲ್ಪದ ಹಾಗೆ ಒಂದೆಡೆ ನಿಲ್ಲುವುದು ಗೋಚರಿಸುತ್ತದೆ.

ಇಂತಹ ಸನ್ನಿವೇಶಗಳನ್ನ ಕಂಡಾಗ ಹಂಸಲೇಖರವರು ಬರೆದ ಸಾಲು ನೆನಪಾಗುತ್ತದೆ.

ಏಕೆ ಹೀಗಾಯ್ತೋ?
ನಾನು ಕಾಣೆನು...

ಮುಂದಿನ ಸಾಲನ್ನು ಬದಲಿಸಿದಾಗ

ಹಬ್ಬ ಊರಲ್ಲಿ...
ಏಕೆ ಅಡಗಿತೋ?

ವಡೆ-ಚಕ್ಕುಲಿ, ಪಂಚಕಜ್ಜಾಯ, ಎಳ್ಳುಂಡೆ, ಉದ್ದಿನೊಂಡೆ, ಅಕ್ಕಿಯುಂಡೆ, ರವೆಯುಂಡೆ, ಕಡುಬು, ಮೋದಕ, ಚೊಟ್ಟಿನ ಮೋದಕ, ಚಿರೂಟಿ, ಪಾಯಸ, ನಾನಾ ಬಗೆಯ ಪದಾರ್ಥಗಳನ್ನ ನೈವೇದ್ಯಕೆಂದು ಮಾಡಿ ಬಿಸಾಡುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸವೆ ಸರಿ.

ಶಾಸ್ತ್ರಕ್ಕೆಂದು ಮಾಡಿದರು ತಿನ್ನಲು ಜನರಿಲ್ಲದಾಗ ಸುಖ ಸಿಗುವುದಿಲ್ಲ. ಇದನ್ನ ನೋಡಿದರೆ ಕಾಲ ಬದಲಾಗುತ್ತಿದೆಯೋ? ಜನ ಬದಲಾಗುತ್ತಿದ್ದಾರೋ? ಪರಿಸ್ಥಿತಿ ಹೀಗಾಗಿದೆಯೋ? ಎಂಬ ವಿಚಾರ ಮೂಡುತ್ತದೆ. ಮುಂದೊಂದು ದಿನ ಹಬ್ಬದ ಸಡಗರವೆಲ್ಲ ಪುಸ್ತಕದ ಬದನೆ ಕಾಯಿ ಆಗುತ್ತವೆಯೇನೋ ಎಂದು ಅನಿಸುತ್ತಿದೆ

ಬನ್ನಿ ನಾವೆಲ್ಲ ಯಾಂತ್ರಿಕ ಬದುಕಿಗೆ ವಿರಾಮ ನೀಡಿ ಹಬ್ಬಗಳನ್ನ ಆಚರಿಸಿ ಸಂಭ್ರಮಿಸೋಣ.

6 comments:

 1. Those days were Amazing....I'm totally attached with all these descriptions and felt emotional.Heard reality is described. These days there is no bond between the Humans.Time and people both have changed, those days will never returned. Excellent article, looking forward for more such articles....God bless U.

  ReplyDelete
 2. ಪಾಯಿಂಟ್ ನಂಬರ್ ಒನ್: ಖರ್ಚು ಬಲ್ ಹೆಚ್ಚಾಗಿದೆ ವಿಚಾರಿ. ಎರಡನೆಯದು ಸಮಯಾಭಾವಮ್ ದೈವ ಮರೆವು ಸಂಭವಮ್!!!

  ReplyDelete
  Replies
  1. ನಿಜ ಬದರಿ ಸಾರ್... ಸಮಯದ ಅಭಾವ ಮತ್ತು ಖರ್ಚು ಇವುಗಳಿಂದ ಯಾಂತ್ರಿಕ ಬದುಕಲ್ಲಿ ಸಮತೋಲನ ಮಾಡಲಾಗುತ್ತಿಲ್ಲದಿರುವುದೇ ಇಂತಹ ಪರಿಸ್ಥಿತಿಗೆ ಕಾರಣ. ಧನ್ಯವಾದಗಳು ನಿಮಗೆ.

   Delete
 3. ನಾವು ತಿರ್ಸಂಕುಗಳು..........!!!!!!

  ----ನಮ್ಮ ಐಕ್ಳೀಗೇ..., ಎಳ್ಡಕ್ಕೆ ಎಳ್ಡ್ ಶೇರ್ಸೀರೆ ನಾಕಾಯ್ತದೇ ಅಂಬೂದ್ನಾ ಕಲೀಶ್ ಬುಟ್ಟವ್ರೇ
  ನಾವೂ ಮುಂದ್ಕೋಗಿ ಕಲೀಬೇಕೂಂತ ನಾಕಕ್ಕೆ ನಾಕನೂ ಶೇರ್ಸೀರೆ
  ಯೆಂಗಾಯ್ತದೇ ವಸಿ ನೋಡುಮಾ ಅಂತ ಮ್ಯೇಕೇ ಅತ್ ಬುಟ್ಟಿದ್ದೀವಿ.
  ಕೆಳ್ಗಿದ್ದೋರು ವಿಲಾಯ್ತಿಯೊರೂ ಅಂತ ಈ ಬೊಡ್ ತಲೀಗೆಲ್ಲಿ ವೊಳೀತದೇ,
  ಆಕದ್ ಏಣೀನ ಪಕ್ಕಕ್ ತಳ್ ಬುಟ್ಟವ್ರೇ! ನಾವು ಮ್ಯಾಕೆ ಬಡ್ಕಂತಿದ್ದೀವಿ.
  ಏಣೀನ ಮಡ್ಗಿ ನಾವೂ ವಸೀ ಯಿಳ್ಕತೀವಿ ಅಂತ ಅವ್ರೂ ಸಮಾಕೇ ಅವ್ರೆ.
  ನಮ್ಮುನ್ನ ಬುಟ್ ಬುಟ್ಟು ವೋಡೋಗೂಕೆ ನೋಡ್ರೆ ಯೆಲ್ಲಾಯ್ತದೇ?
  ಈಗ ಸಾನೇ ಹೊತ್ನಲ್ಲಿ ರೋಡ್ಗೇ ದಾಂಗ್ರ ಮಡುಗೂಕೆ ತಂದ ಪೀಪಾಯಿ ವೊಳೀಕೇ ಕಾಲ ಮಡ್ಗವ್ರೆ
  ಯೆಲ್ಲ್ ವೋಡೂಕಾಯ್ತದೆ.ಅಂಗೇ ನಿಂತವ್ರೆ ಈರಬದ್ರ ನಿಂತಾಂಗೇಯಾ!!----------------------
  ---------------- ಭೂಮಿ ಯಿತಾಗೆಳೀತದೇ, ದೂತ್ರು ಅತ್ತಾಗೆಳೀತವ್ರೇ,
  ನಮಗೇಂತ ಸರ್ಗ ಶ್ರಶ್ಟಿ ಮಾಡೂಕೆ ಇಸ್ವಾಮಿತ್ರ ವುಟ್ ಬರೂಕಾಯ್ತಾದಾ?
  ವಟ್ನಲ್ಲಿ ನಾವು ತಿರ್ಸಂಕೂನೇಯಾ ಅಂಬದೇಯಾ..............
  ಅಳಿವೆಯ ಅರಮನೆಯಲ್ಲಿ ಬದುಕು....

  ReplyDelete
 4. ನಿಮಗೆ ನನ್ನ ಧನ್ಯವಾದಗಳು. ಹೀಗೆ ಓದುತ್ತ ನಮ್ಮನ್ನು ತಿದ್ದುತ್ತ ಪ್ರೋತ್ಸಾಹಿಸಿರಿ.

  ReplyDelete