Sunday, June 4, 2023

ಪ್ರತಿಗೀತಿ ಇತ್ಯಾದಿ

 ನೀನು ನಾನಲ್ಲ ನೀನೆ ನಾನಲ್ಲ

ನೀನೆ ನಾನೆಂಬ ನನ್ನ ನಿನ್ನ ಬಿಂಬ 

ತೋರುವುದು ಜಗಕೆಲ್ಲ ಒಣ ಜಂಭ


ಭಾನು ಅಳಿದಾ ಮೇಲೆ ಬೆಳಕು ಕಳೆದಾ ಮೇಲೆ 

ತೋರುವುದು ಇನ್ನೆಲ್ಲಿ ಪ್ರತಿಬಿಂಬ


ಮಾತು ಕೊಟ್ಟ ಮೇಲೆ ಮೌನ ಬಿಟ್ಟ ಮೇಲೆ

ಮಾತು ಮಾತಾಗೇ ಉಳಿಯಲ್ಲ ಒಂದು ಮಾತಾಗೇ ಉಳಿಯಲ್ಲ


ಕೊಟ್ಟಾ ಮಾತಾ ನೀನು ಮುರಿದು ಬಿಟ್ಟ ಮೇಲೆ ಅಪರಾಧಿಯಾಗುವೆಯೋ ಜಗಮಲ್ಲ

ಕುಟುಕು ಮಾತಿನ ಮಾಲೆ ಕಪಟಿ ಮೋಸದ ಜಲ್ಲೆ

ಜೋಡಿಸದು ಎರಡಂಕಿಯ ಜನರನ್ನ

ಕಡಿಯುವುದು ಸೂರಾದ ಮಡಿಲನ್ನ


ನೀತಿ ತೊರೆದಾ ಮೇಲೆ ಮೌನ ಮುಡಿದಾ ಹಾಗೆ

ಎಲ್ಲಂತ ಸಿಗುವುದು ಪ್ರತಿಗೀತಿ ಇತ್ಯಾದಿ

ಪುಟವನು ಸೇರು

ನೀನೊಬ್ಬ ಅನುಭವಿ ಬಾಳಿನಲಿ ಸೋತಾಗ

ಕಲಿಕೆಯ ಪರಿವಿಡಿ ಛಲದಲಿ ಪುಟಿದಾಗ

ದುಡಿಮೆಯ ಹಠಬೇಕು ವಿಜಯವ ಧರಿಸಲು

ಒಲುಮೆಯ ಹಿತಸಾಕು ಅರಿಯನು ಮಣಿಸಲು

ಚಟವನು ತಡೆದು ಏಣಿಯ ಏರು


ಕೆಡುಕಲಿ ನಿಂತಾಗ ಸೂತಕ ಮನದಲಿ

ಕಸಿವಿಸಿಯಾದಾಗ ಜಾತಕ ಕೈಯಲಿ

ಒಳಿತನು ಬಯಸಲು‌ ಒಸಗೆಯು ಬೇಡ

ಉಸಿರನು ಕಾಯಲು ಬೆಸುಗೆಯು ಬೇಡ

ಪ್ರೀತಿಯ ಹಂಚುತ ಪುಟವನು ಸೇರು

ನವಿಲಿನ ಕುಣಿತ ಕೋಗಿಲೆ ಹಾಡು

ನೋವಿನ ಸಾವಿನಲಿ ನಲಿವಿನ ಯುಗವುಂಟು

ನವಿಲಿನ ಕುಣಿತಕ್ಕೆ ಕೋಗಿಲೆ ಹಾಡುಂಟು

ಎನ್ನುತ ಬದುಕುವುದೇ ಭರವಸೆ ಜೀವನ


ಸೋಲು (ಸೋಲೆ) ಗೆಲುವಿನ ಮೂಲ ಸ್ವಾರ್ಥ ಬದುಕಿಗೆ ಶೂಲ

ಮರೆತವ ನೀನಾಗು ತೊರೆದು ಅಹಮ್ಮಿನ ಮೇಳ


ಸ್ಪೂರ್ತಿಗೆ ಪದವುಂಟು ಸ್ನೇಹಕೆ ತಪವುಂಟು

ಪ್ರೀತಿ ಪ್ರೇಮದಗಳಿಕೆ ಹೊತ್ತಿನ ಬಳುವಳಿಯು


ಕಲಿಯುವ ಹಪಹಪಿಗೆ ಮನದಲಿ ಛಲವುಂಟು

ಹಾರುವ ಕಪಿಗಳಿಗೆ ಉಣ್ಣುವ ಗುರಿಯುಂಟು

ಜನಿಸಿದ ಮಗುವೆಂದೂ ಹುಲ್ಲುಣ್ಣಲಾರದು


ಎಂಬೆಲ್ಲ ಮಾತಲ್ಲಿ ಬಾಳಿನ ಗುಟ್ಟುಂಟು

ಗುಟ್ಟರಿಯದ ಬದುಕು ವ್ಯರ್ಥಕೆ ಸಮವುಂಟು

ತಳಿದವನ ಬಾಳಲ್ಲಿ ನಿಲುಗಡೆ ಖಚಿತವು

Tuesday, February 28, 2023

ನಲಿವಿನ ಅಲೆ

ಬೆಳದಿಂಗಳ ಬಟ್ಟಲಿನಲ್ಲಿ ಬಾವದ ಬೆರಣಿಯ ಬಡಿವೆ

ಬದುಕಿನ ಬುಟ್ಟಿಯಲ್ಲಿ ಬಳಲಿದ ಬೆವರನು ಬಿಡುವೆ

ನಮ್ಮೆನೆ ಚಂದಿರ ನಗುತಲಿ ನೋಡುವ ಹರೆಯುತ ಒಳಹೊರಗೆ


ಹನಿಯನು ಸುರಿಸುತ ಮಡಿಲನು ತುಂಬುತ

ನಲಿವಿನ ಅಲೆಯಲಿ ಅಲೆದಾಡಿಸಿದೆ

ತೊಟ್ಟಿಲಲಾಡುತಲಿ ಮನಸಲಿ ಮೇಯುತಲಿ

ಮನಸೂರೆಗೊಳ್ಳುವ ಮನಮೋಹಕ


ಮರೆವೆನಾಕಥೆಯನು ಬಳಲಿರುವ ವ್ಯಥೆಯನು

ನಿನ್ನ ತೂಗುವ ಹೊತ್ತಲಿ ಲಾಲಿ ಹಾಡುತಲಿ

ಕಣ್ಣೆದುರಲಿ ಆಗುವ ಮುಂದೆ ಎದುರಾಗುವ

ಏರಿಳಿತವೆಲ್ಲವು ಸಮವಾಗಲಿ ಎತ್ತರಕೆ ಏರುತ ಹಸಿರಾಗಲಿ

Sunday, May 8, 2022

ಬೇಕೆ ಈ ಅಮ್ಮಂದಿರ ದಿನ?

 ಅಮ್ಮ ಎಂದೆರೆ ಪ್ರತಿ ಕ್ಷಣದ ದೇವರು

ಅವಳಿಗ್ಯಾಕೆ ವರ್ಷಕ್ಕೊಂದು ದಿನವ ಮಾಡಿಹರು?

ಇದ ನೋಡಲು ನಾಚಿಕೆಯಾಗುವುದು

ವರ್ಷಕ್ಕೊಮ್ಮೆ ಪ್ರಚಾರಕ್ಕಾಗಿ ಬಾವುಕರಾಗುವ ಜನರು

ಸ್ವಾಸ್ತ ಸಮಾಜದ ಪರಿಕಲ್ಪನೆಯೇ ಮರೀಚಿಕೆಯಾಗಿಹುದು


ಹೊತ್ತು ಹೆತ್ತು ಸಲುಹಿದವಳ ಗೂಡಲ್ಲಿಡಲಾಗದೆ

ಗುಡಿಯಲ್ಲಿಟ್ಟು ವಾರ್ಷಿಕ ಪೂಜೆ ಮಾಡಿದರೊಳಿತೆ?

ಹೆತ್ತವರ ಹೀನಾಯ ಸ್ಥಿತಿಯನಾವರಣ ವೃದ್ಧಾಶ್ರಮದಲಿ

ಪ್ರಜ್ಞಾವಂತರ ಮೌಢ್ಯತೆಯನಾವರಣಕ್ಕೊಂದು ದಿನ 

ವಿಶ್ವ ಅಮ್ಮಂದಿರ ದಿನವೆಂಬ ಶೀರ್ಷಿಕೆಯ ಸುದಿನ... ಛೀ...


ಗುರಿ ಮುಟ್ಟುವ ತನಕ,

ವಿಚಾರಿ

Thursday, April 14, 2022

ಗೋ ಜೀವನ

ಅಂಬಾ ಎಂಬ ಕೂಗ ಕೇಳಿ

ಅಮ್ಮಾ ಜನಿಸಿಹಳು

ಜನಿತ ಮಗುವಿನ ಮೊದಲ ಶಬ್ದವೇ

ಉಂಙೆ ಆಗಿಹುದು


ಕಂದಾ ಸಾಗುವ ಮೊದಲ ಚಲನೆಗೆ

ಅಂಬೆಗಾಲೆನ್ನುವರು

ಮಗುವಿಗೆ ಕಲಿಸುವ ಮೊದಲ ನೀತಿಯೆ

ಪುಣ್ಯಕೋಟಿಯಾಗಿಹುದು


ಜನಿತ ಕಂದಗೆ ನೀಡುವ ಹಾಲಿಗೆ

ಗೋವೆ ಬೇಕಿಹುದು

ಮಗುವಿನ ಪ್ರೀತಿಗೆ ಮೊದಲ ಪ್ರಾಣಿಯೇ

ಅಂಬಚ್ಚಿಯಾಗಿಹುದು


ಮನೆಯ ಸ್ವಚ್ಚತೆ ಮನದ ಶುದ್ಧತೆ

ಗೋಮಯ ಗೋಮೂತ್ರವಾಗಿಹುದು

ತೋಟಕೆ ಸಿಗುವ ಫಲವತ್ತತೆಯು

ಸಾವಯವ ಗೊಬ್ಬರವಾಗಿಹುದು


ಬೆಳೆವ ಮಗುವು ಪಡೆಯುವ ಫಲಗಳು

ಗೋವಿನ ಕೃಪೆಯಾಗಿರುವುದು

ಮುದಿ ಗೋವನು ಹೊಡೆಯುವ  ಮಾನವ

ಕಟುಕನ ಮನೆ ಕಡೆಗಾಗಿವುದು


ಪಡೆಯುವುದೊಂದೆ ಮನುಜನ ಮೂಲ

ನಿರ್ದಯಿಯಾಗಿರಲು

ಉಳಿದವರೆಲ್ಲಾ ಹಸುವನು ಸಾಕಬೇಕು

ತಾನೊಬ್ಬ ಸ್ವಾರ್ಥಿಯಾಗಿರಲು


ದುಡ್ಡನು ನೀಡುವೆ ದನಿಯನು ಎತ್ತುವೆ

ಶಾಲನು ಹೊದೆಯುವ ತೋರಿಕೆಗೆ

ಮಾತಲೇ ಮಡಿಯನು ಧರಿಸುವ ಜನರು

ಗೋನಾಶಕೆ ನಾಂದಿ ಹಾಡಿಹರು

ಶ್ರಮಿಸೇ ಮೇಲಕೇರು

ತೆರೆದ ಬಾವ ಭಕುತಿಯಲ್ಲಿ

ನುಡಿಯೆ ಅದರ ಖ್ಯಾತಿಯ

ಜನಿಪನಾವ ಧರಣಿಯಲ್ಲಿ

ಶ್ರಮಿಸೇ ಮೇಲಕೇರುವ


ಬಗರಿಯಾಟ ಬದುಕಿನಲ್ಲಿ

ತಿರುಗಿ ಸೇರಿ ನಿಲ್ಲಲು

ಗೋಲ ಭೂಮಿಯ ವೃತ್ತದಲ್ಲಿ

ಬಿಟ್ಟ ಜಾಗ ತಲುಪಲು


ಸತ್ತ ಮನಸಿನ‌ ಸುತ್ತಲಲ್ಲಿ

ಭಾರಿ ಬಯಕೆಯು ಉಳಿವುದೇ?

ಸೋತ ಕನಸಿನ ವ್ಯಥೆಗಳಲ್ಲಿ

ಕೊನೆಯಿದೆಂದು ಲೆಕ್ಕವೇ?


ನುಡಿವ ಭಕ್ತಿ ಶೋಕಿಗಾಯ್ತು

ಬಗರಿಯಾಟ ಬದುಕಿಗಾಯ್ತು

ಸತ್ತ ಮನಸಿಗಿಲ್ಲ ಬಯಕೆಯು

ಬಂದು ಹೋಗಲು ಲೆಕ್ಕ ಚುಕ್ತವು