Saturday, September 8, 2012

|| ಸರ್ವಸ್ವವೆ ರಾಮ ||

ಈ ದೇಹದ ಕಣ ಕಣದಲು ತುಂಬಿಹುದೊಂದೆ ನಾಮ
ಬಾಯ್ತೆರೆದು ಕೂಗಿದರು ನುಡಿಯೊಂದೆ ರಾಮ
ನಿನ ಪಾದವ ಶಿರದ ಮೇಲಿರಿಸಿ ನರ್ತಿಸು ನೀ ರಾಮ
ಶಿಲೆಯಾಗಿಹ ನನ್ನನ್ನು ಮನುಜನಾಗಿಸು ರಾಮ ||

ಜಗ ತುಂಬಿಹ ವಾಯುವಿನಲು ನಿನ್ನ ಸುವಾಸನೆ ರಾಮ
ಹಸಿರು ಬಿಡುವ ಉಸಿರಲ್ಲು ನಿನ್ನ ಕೃಪೆಯು ರಾಮ
ವಾಯುಸುತನ ಬಿಗಿದಪ್ಪಿ ಪ್ರಾಣಸಖನಾದ ರಾಮ
ಮಹಾ ಸಾಗರವ ದಾಟಲು ಹೆಗಲೆರಿದವ ರಾಮ ||

ಜಗಕೆಲ್ಲ ಸುಂದರನು ಜಾನಕಿ ವಲ್ಲಭನೆ ಶ್ರೀರಾಮ
ಸತಿಯೊಬ್ಬಳನೆ ವರಿಸಿ ಆದರ್ಶ ಪತಿಯಾದ ರಾಮ
ಪಿತೃವಾಕ್ಯ ಪರಿಪಾಲಿಸಿ ಜನ್ಮದಾತನ ಗೌರವಿಸಿದವ ರಾಮ
ಮಡಿಲಲ್ಲಿ ಮಲಗಿ ಪಾವನಗೊಳಿಸಿದೆ ಕೌಸಲ್ಯೆಯ ಜನ್ಮ ||

ನಿನ ಆಗಮನಕಾಗಿ ಭಾವಾರ್ಥಿಯಾಗಿಹೆನು ಶಬರಿ ಪೂಜಿತ ರಾಮ
ಮೃತ್ಯುವಿನತಿಥಿಯಾಗುವಾಗ ನಿನ ಮಡಿಲಲಿ ಮಲಗಿಸಿಕೊ ರಾಮ
ಹಿಂದಿನ ಪಾಪಗಳನು ಮಂಜಂತೆ ಕರಗಿಸಿ ಮುಕ್ತಿಕೊಡು ರಾಮ
ಮುಂದಿನ ಘಳಿಗೆಗಳಲಿ ಪುಣ್ಯದ ದಾರಿಯಲೆ ನಡೆವಂತೆ ಮಾಡು ನೀ ರಾಮ ||

ನನ್ನ ದೇಹದ ಚರ್ಮ ಸುಲಿದು ಪಾದುಕೆ ಮಾಡಿಸುವೆ ರಾಮ
ನನ್ನ ಗುರುವಿನ ಗುರು ನೀನೆ ಜ್ನಾನದ ಗಣಿ ಶ್ರೀರಾಮ
ಕಷ್ಟದಲಿ ಉಂಡಂತ ನೋವ ಅಳಿಸಿ ಮರೆಮಾಡು ರಾಮ
ನಿನ ಚರಣದಡಿಯಲ್ಲಿ ನಲಿವಂತ ಸುಖ ಕರುಣಿಸು ರಾಮ ||

ಅಹಂಕಾರದಿ ಮೆರೆವ ನನ್ನತನ ಕಳೆ ರಾಮ
ಬಯಸಿದೆಲ್ಲ ಕಾಮನೆಯ ಇಡೇರಿಸಿದವ ರಾಮ
ನಿನ ಕೃಪೆಯಲಿ ನನ್ನ ಮುನ್ನೆಡೆಸು ರಾಮ
ನೆಮ್ಮದಿಯಲಿ ಬದುಕಲು ದುಃಖ ಸಹಿಸುವ ಸಹನೆ ಕರುಣಿಸು ರಾಮ ||

ದಶಕಂಠನ ವಧಿಸಿದಂತೆ ನೀಚತನವನಡಗಿಸು ರಾಮ
ಶಿವಧನಸ್ಸು ಮುರಿದಂತೆ ಮನದಾಸೆಯ ತೊಲಗಿಸು ರಾಮ
ಚಿತ್ತದಿಂದ ದೂರಾಗಲಿ ಉಳಿದೆಲ್ಲ ಯೋಚನೆಯು ರಾಮ
ನಿನ್ನ ಧ್ಯಾನವೊಂದುಳಿಸು ಈ ದೇಹದ ಕಣ ಕಣದಲು ಸರ್ವಸ್ವವೆ ರಾಮ ||

No comments:

Post a Comment