Wednesday, August 2, 2017

ವ್ಯವಸಾಯವಿಲ್ಲದ ವಿಚಾರದಿಂದ ವ್ಯವಹರಿಸಬಾರದು

ಹಲವು ವಿಚಾರಗಳಿಗೆ ಬೌತಿಕ ಸ್ಪರ್ಶದ ಅಗತ್ಯತೆ ಇರುವುದಿಲ್ಲ. ಮೊದಲಿಗೆ ನಾವು ಮಾಡುವ ವಿಚಾರಗಳಿಗೆ ಬಾಹ್ಯ ರೂಪವಿಲ್ಲ. ವಿಚಾರವೆನ್ನುವುದು ತಾರ್ಕಿಕವಾಗಿ ರಚನೆಯಾಗಿರುವುದಾಗಿದೆ. ಅದೆಷ್ಟೋ ಜನರು, ಅದೇನೆ ಹೇಳಿದರೂ ವ್ಯವಸಾಯವಿರದ ವಿಚಾರಗಳಿಂದ ವ್ಯವಹರಿಸುತ್ತಾರೆ. ಇದರಿಂದಾಗಿ ತೊಂದರೆಗೂ ಒಳಗಾಗುತ್ತಾರೆ ಮತ್ತು ನಿಂದನೆಗೆ ಅರ್ಹರು ಎಂದೆನಿಸುತ್ತಾರೆ. ನೈತಿಕತೆಯ ಸ್ಪರ್ಶದಿಂದ ಹಲವು ಜನರು ವ್ಯವಸಾಯವಿರದ ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ.

ಒಬ್ಬ ವ್ಯಕ್ತಿ ತನ್ನ ಅಸ್ಥಿತ್ವವನ್ನು ತೋರಿಸಿಕೊಳ್ಳಲು ಬಹಳ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾನೆ. ಆದರೆ ಅವುಗಳಲ್ಲಿ ಕೆಲವೇ ಕೆಲವರಿಂದ ಔಚಿತ್ಯಪೂರ್ಣವಾದ ತತ್ವಗಳು ಮತ್ತು ವಿಚಾರಧಾರೆಗಳು ಮಂಡನೆಯಾಗುತ್ತದೆ. ಮುಂದಿಡುವ ವಿವೇಚನಾ ಶೀಲ ಅನಿಸಿಕೆ ಅಭಿಪ್ರಾಯಗಳಿಗೆ ವ್ಯವಸಾಯವಿಲ್ಲದಿದ್ದರೆ ಅಸಂಬದ್ಧ ಪ್ರಲ್ಲಾಪವಾದಂತಾಗುತ್ತದೆ. ವ್ಯವಸಾಯವೆಂದರೆ ಕೃಷಿ ಕ್ಷೇತ್ರದ ಒಂದು ಬೌತಿಕವಾದ ಕೆಲಸವೆಂದೆನಿಸಬಹುದು ಆದರೆ ಇದನ್ನು ನಾವು ಮಾಡುವ ವಿಚಾರಗಳಲ್ಲೂ ನೈತಿಕವಾಗಿ ಮಾಡಿದಾಗ ಮಾತ್ರ ಜೀವನವೆನ್ನುವುದು ನವಿರಾಗಿ ಕಂಗೊಳಿಸುವುದು. ತಾರ್ಕಿಕವಾದ ವ್ಯವಸಾಯವಿರದಿದ್ದರೆ ಉಳಿದವರ ಎದುರು ತಲೆ ತಗ್ಗಿಸುವಂತ ಮಾತನಾಡಬೇಕಾಗುತ್ತದೆ. ಆಗ ಜೀವನವೆಂಬುದು ಫಸಲು ಬಾರದ ಬಂಜರು ಭೂಮಿಯಂತಾಗುತ್ತದೆ.

ಬರಡು ಬುರುಡೆಯಂತೆ ವ್ಯವಹರಿಸದೆ, ಸತ್ವ ಸಾರುವ ವಿಷಯಗಳನ್ನು ಅರುಹಿದರೆ ತಾರೆಗಳ ನಡುವಿನಲ್ಲಿ ಕಂಗೊಳಿಸುವ ಶಶಿಯಂತಾಗುವುದು ಖಂಡಿತ. ಒಂದುವೇಳೆ ಹಾಗಾಗದಿದ್ದರೂ ಆಭರಣಗಳ ನಡುವಿನಲಿ ಮಿನುಗುವ ಮುತ್ತಿನಂತಾಗುವುದಂತೂ ನಿಶ್ಚಿತ. ವ್ಯವಸಾಯವಿರುವ ವಿಚಾರವಂತರ ಬಾಳು ಹೇಗಿರುತ್ತದೆಂದರೆ ಇರುವೆಗಳು ಮುತ್ತುವ ಸಿಹಿಯಂತಿರುತ್ತದೆ. ಅಲ್ಲದೆ ಕಡಿವ ಜೇನು ಹುಳುವಿನಿಂದಾಗುವ ಜೇನು ತುಪ್ಪದಂತಿರುತ್ತದೆ. ವ್ಯವಸಾಯವಿರುವ ವಿಚಾರದಿಂದ ವ್ಯವಹರಿಸಿದರೆ ನೈತಿಕ ಸ್ಪರ್ಶದ ಅನುಭವಿಯಾಗುವುದರಲ್ಲಿ ಅನುಮಾನವಿಲ್ಲ.

No comments:

Post a Comment