Tuesday, June 23, 2015

ಮೋಡ ಕರಗಲು

ಕಾರ್ಮೋಡ ಹರಿದಿರಲು
ಹೊಂಬಿಸಿಲು ಹರಡಿಹುದು
ನನ್ನವಳ ಮನದಲ್ಲಿ
ನಾನೇ ಇರಲು
ಹುಸಿಮುನಿಸು ಕರಗಿರಲು
ಗಾಂಭೀರ್ಯ ಅಡಗಿಹುದು
ಒಲವಿನ ಮಲ್ಲಿಗೆಯು
ಅರಳುತಾ ಇರಲು

ಕಣ್ಣೋಟ ಕಂಡಾಗ
ಬೆಳ್ಳು ಮೂಡಿದ ಹಾಗೆ
ಅವಳ ಹುಡುಗಾಟವೇ
ನನ್ನ ಮನದಾಳದ ಬಯಕೆ

ಕೋಪದಲಿ ಗುಡುಗಿರಲು
ಮುಖವೆಂಬ ಕಮಲವು
ಕೆಸರಿನ ಗುಡ್ಡೆಯಲಿ
ತೊರೆದ ನೋವಿನ ಭಾವವು

ನನ್ನವಳ ನಗುವಿನಲಿ
ಪ್ರತಿಕ್ಷಣದ ನೋವಿನಲಿ
ಉಸಿರಾಟದ ಗಾಳಿಯಲಿ
ಸಹಬಾಗಿಯೆಂದು ನಾನೇ ಇರಲಿ

ಬೇಸರಿಸಲು ಅವಳಲ್ಲಿ
ಮನವು ನೋಯುವುದಿಲ್ಲಿ
ಹಂಬಲಕೆ ಗುರಿಯಾಗಿ
ಬಯಸುತ ನಾನಾಗುವೆ ನಿಗರ್ವಿ

ಅವಳೆಂದು ದೂರಾಗಳು
ನನಗಾಗೆ ಬದುಕುವಳು
ಮೋಡ ಕವಿಯುವುದು
ಕರಗಿ ನೀರಾಗುವುದು

ಮುಂಜಾನೆ ಅರಿಶಿನವು
ಮುಸ್ಸಂಜೆ ಕುಂಕುಮವು
ನಡು ರವಿಯ ಶಾಖವು
ಮುದ್ದು ಮನಸಿನ ಕೋಪವು

ಒಂದು ನಿಮಿಷದ ಕೋಪ
ಹಲವು ದಿನ ಮೈ ತಾಪ
ಬಿಟ್ಟು ಬದುಕುವ ಗಾಂಪ
ನಾನಾದರೆ ನೋವು ಸಂತಾಪ

ಅಪ್ಪಿಯೆಂಬುವ ಮಾತು
ಒಂದಾಗುವ ಸೂಚನೆಯು
ವಸಂತನ ಆಗಮನವು
ಕೋಗಿಲೆಯು ಕೂಗುತಿರಲು

No comments:

Post a Comment