Friday, April 10, 2015

ಚಿಗುರದ ಎಲೆಗಳು

ಹಗೆಯಲಿ ನಿರ್ಲಕ್ಷ್ಯವು
ಜಿದ್ದಿನಲಿ ನಿಷ್ಕಾಳಜಿಯು
ಮಾನಸಿಕ ಹಿಂಸೆಯೆ ಬದುಕಾಗಿದೆ

ಕೆಲಸದಲಿ ಮನಸಿಲ್ಲ
ಬೇರೇನೂ ಬೇಕಿಲ್ಲ
ಮನವು ಮಿಡಿಯುತಿದೆ ನಿನಗಾಗಿಯೆ

ಇದ್ದಾಗ ಕಿರಿಕಿರಿಯಾಗಿ
ಸತ್ತಾಗ ಸರಿಯಾಗಿ
ಕಾಣುವುದೇ ಪ್ರೀತಿಯ ಪರಮಾವಧಿ

ನಿನಗಾಗಿ ನಾನೆಂದು
ನನ್ನೊಲವು ನಿನಗೆಂದು
ಶುರುವಲ್ಲಿ ಭರವಸೆಯ ಸಂಭಾಷಣೆ

ಉಳಿದಿಲ್ಲ ಮಾತು
ನುಡಿಯೆಲ್ಲ ಬರಿ ತೋಪು
ಅನುರಾಗ ಹಾಳಾಯ್ತು ಅಹಂಮಿನಲಿ

ಮಾತುಗಳೆ ಹಿಂಸೆಯು
ಉಳಿದವರೆ ಮುಖ್ಯವು
ನೀ ಕಂಡಾಗ ಬಾಳಿನಲಿ ನೆಮ್ಮದಿಯನು

ಕಳೆದಂತೆ ದಿನವೆಲ್ಲ
ಹಳಸಿಹುದು ಪ್ರೀತಿ
ಸಾವನು ಬಯಸಿಹುದು ವಿರಹದಲ್ಲಿ

ರಂಗಿಲ್ಲ ಕಾಮನಬಿಲ್ಲಿನಲಿ
ಅಳುತಿರಲು ಮೇಘಗಳು
ಮಳೆಯೆಂಬ ಕಂಬನಿಯ ಸುರಿಸುವಾಗ

ಚಳಿಗಾಲ ಬಂದಿರಲು
ಎಲೆಗಳೆಲ್ಲ ಉದುರಿರಲು
ಚಿಗುರಲು ವಸಂತನ ನಿರೀಕ್ಷೆಯಲಿ

ಬರಬಹುದೇ ದಿನವು
ನಾ ಸತ್ತ ಮರು ಕ್ಷಣದಿ
ನನ ಜೀವ ಖುಷಿಯಲ್ಲಿ ನಗುತಲಿರಲು

2 comments:

  1. ಸಾವಿನ ಮಾತು ಅದೇಕೆ ಅದೇಕೇ?
    ವಿರಹದ ಬಿಸಿಲ ತಾಪವನು ಅಳಿಸಲು ಕಾಯಬೇಕಷ್ಟೇ ಮತ್ತವಳ ಪುನರಾಗಮನದ ವಸಂತೋತ್ಸವ ಪರ್ವಕಾಲ.
    ಶುಭಮಸ್ತು.. ಕಲ್ಯಾಣಮಸ್ತು..

    ReplyDelete
  2. ಪುನರಪಿ ಜನನಂ ಪುನರಪಿ ಮರಣಂ..
    ಸೊಗಸು

    ReplyDelete