Friday, April 3, 2015

ಕವಿ ನುಡಿ ಹೂವಾಗಬೇಕಾದರೆ ಜನ ನುಡಿ ಬೇರಾಗಿರಬೇಕು

ನಮ್ಮ ನಾಡು-ನುಡಿ, ಜನ-ಮನ ಒಂದು ಭಾಷೆಯ ಏಳಿಗೆಗೆ ದೃಢವಾದ ವೇದಿಕೆಯಾಗಿರಬೇಕು ಎನ್ನುವುದು, ಒಳಾರ್ಥದಲ್ಲಿ ಕಾರ್ಯಸೂಚಿಯೆಂದು.
ಕವಿ ನುಡಿ ಹೂವು
ಜನ ನುಡಿ ಬೇರು
ಇದರ ಅರ್ಥ ವಿಶ್ಲೇಷಣೆ ತಿಳಿದರೆ ಪ್ರತಿಯೊಬ್ಬ ಕನ್ನಡಿಗನು ರೇಖನಿಗಾಗಿ ಕನ್ನಡವನ್ನು ಕಂಗ್ಲೀಷನ್ನಾಗಿ ಪರಿವರ್ತಿಸುವುದ ಬಿಟ್ಟು ಬೇರೆ ಭಾಷೆಯ ದಾಸನಾಗುವ ಗೋಜಿಗೆ ಹೋಗುವುದಿಲ್ಲ. ಅವಶ್ಯಕತೆಗೆ ಅನುಸಾರವಾಗಿ ಬೇರೆ ಭಾಷೆಯ ಮಾತುಗಳನ್ನಾಡಿ ದಿನದ ಪ್ರತಿಯೊಂದು ಚಟುವಟಿಕೆಗೆ ಕನ್ನಡದ ಭಾಷೆಯ ಸವಿ ನೊಬಗಿನಲ್ಲಿ ನಮ್ಮ ಕನ್ನಡಿಗರು ವ್ಯವಹರಿಸಿದರೆ ಭಾಷೆಯ ಬೇರನ್ನು ಸುಭದ್ರವಾಗಿರಿಸಲು ಸುಲಭವಾಗುತ್ತದೆ. ಪ್ರತಿಯೊಬ್ಬ ಕನ್ನಡಿಗನು ಕನ್ನಡ ಭಾಷೆಯನ್ನು ಸರಾಗವಾಗಿ ಮಾತನಾಡಲು ಪ್ರಾರಂಭಿಸಿದಾಗ ಮಾತ್ರ ಅದು ಜನ ನುಡಿಯಾಗಿ ಗಟ್ಟಿಯಾದ ಬೇರಾಗುತ್ತದೆ. ಹಾಗೆ ಗಟ್ಟಿಯಾದ ಓದುಗರು ಇರುವಾಗ ಮಾತ್ರ ಕವಿಗಳು ಬರೆದಿರುವ ಸಾಲುಗಳು ಹೂವಾಗಲು ಸಾಧ್ಯವಾಗುವುದು.

ಪ್ರತಿ ೩೦ ವರ್ಷಗಳಿಗೊಮ್ಮೆ ಭಾಷೆಯಲ್ಲಿ ಬದಲಾವಣೆ ಸಹಜವೆಂಬುದು ಹಿರಿಯರ ಮಾತು. ಹಾಗೆಂದ ಮಾತ್ರಕ್ಕೆ ಕಂಗ್ಲೀಷ ಇದು ಬದಲಾಗುವ ಭಾಷೆಯ ಪರಿಯಲ್ಲ. ಇದು ಕನ್ನಡ ಭಾಷೆಯ ಅಳಿವಿಗೆ ಹುಟ್ಟಿರುವ ಕೂಸು. ಹಾಗಾಗಿ ಇದರ ಅನುಸರಣೆಯನ್ನು ಬಿಟ್ಟು, ಕೀಳರಿಮೆ ಭಾವನೆಯ ಮನಸ್ಸನ್ನು ದೂರಾಗಿಸಿ ಕನ್ನದವನ್ನು ಜನ ನುಡಿಯ ಸುಭದ್ರ ಬೇರಾಗಿಸುವ ಗುರುತರ ಜವಾಬ್ಧಾರಿಯು ನಮ್ಮ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಜನ ನುಡಿ ಬೇರಾಗಲು ಮಾಡಬೇಕಾಗಿರುವ, ಆಗಬೇಕಾಗಿರುವ ಕಾರ್ಯಗಳ ಬಗ್ಗೆ ನಮ್ಮ ವಿಚಾರಧಾರೆ ಹರಿದಾಗ ಗಮನಕ್ಕೆ ಬರುವುದು ಹಲವು ಅಂಶಗಳು. ಸಾಮಾನ್ಯವಾಗಿ ಮನಃಪಟಲಕ್ಕೆ ಬರುವ ಕೆಲವು ಅಂಶಗಳ ಬಗ್ಗೆ ಚರ್ಚಿಸೋಣ.

ಮೊದಲನೆಯದಾಗಿ ನಮ್ಮ ಕನ್ನಡದ ಮಹಿಳಾಮಣಿಗಳು ಬೇರೆಯವರ ಅನುಕರಣೆಯನ್ನು ಬಿಟ್ಟು ತಾವು ಮಾತಾಡಿ ಮಕ್ಕಳು ಸಹ ಕನ್ನಡವನ್ನೆ ಮಾತಾಡುಂತೆ ಪ್ರೆರೇಪಿಸಬೇಕಾಗಿದೆ. ಹೀಗೆ ನಮ್ಮ ನೆರೆಯ ತಮಿಳರು ತಮ್ಮ ಭಾಷೆಯ ಮೆರವಣಿಗೆಗಾಗಿ ಉಳಿದ ಭಾಷೆಗಳನ್ನು ಅವಶ್ಯಕ್ಕಿಂತ ಕಡಿಮೆಯಾಗಿ ಅನುಸರಿಸುತ್ತಾರೋ ಹಾಗೆ ನಮ್ಮ ಕನ್ನಡಿಗರು ಸಹ ಅವರಷ್ಟಲ್ಲದಿದ್ದರೂ ನಮ್ಮ ಕನ್ನಡ ಭಾಷೆಯೆಂಬ ಮರದ ಬೇರು ಗಟ್ಟಿಯಾಗಿ ಒಳ್ಳೊಳ್ಳೆಯ ಹೂ ಬಿಡುವಂತೆ ಕನ್ನಡದ ಬಳಕೆಮಾಡಬೇಕಾದ ಅನಿವಾರ್ಯತೆ ಬಂದೊದಗಿದೆಯೆಂದರೆ ತಪ್ಪಾಗಲಾರದು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ನುಡಿಯಂತೆ ಪ್ರತಿಯೊಬ್ಬ ಕನ್ನಡತಿಯು ಸಹ ಕನ್ನಡದ ಅಭಿವೃದ್ಧಿಗಾಗಿ ಶ್ರಮಿಸಬೇಕಾದ ಅಗತ್ಯತೆ ನಿಮ್ಮ ಮುಂದಿದೆ. ಭಾಷೆಯ ಉಳಿವಿಗೆ ಸ್ತ್ರೀಯರ ಪಾತ್ರ ಪ್ರಮುಖವಾದದ್ದು. ಮಾಹಿತಿ ತಂತ್ರಜ್ಞಾನದಂತಹ ಕ್ಷೇತ್ರ ಬೆಳೆದಿರುವಾಗ ಅದರಲ್ಲಿ ಉದ್ಯೋಗ ಮಾಡುವ ಅನಿವಾರ್ಯತೆ ಬಂದೊದಗಿರುವಾಗ ಇನ್ನು ಕನ್ನಡವೆಂದು ಕೂತಿರಲು ಸಾಧ್ಯವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಳಕೆಯಾಗುವಂತಹ ಪದಗಳಿಗೆ ಕನ್ನಡ ಅನುವಾದ ಪದಗಳನ್ನು ನಮ್ಮ ಭಾಷಾ ತಜ್ಞರು ತಿಳಿಸಿರುವಾಗ ಅದನ್ನು ಅನುಸರಿಸುವುದು ಒಳಿತಲ್ಲವೇ? ಕೆಲವೊಂದು ನಾಮಪದಗಳನ್ನು ಹಾಗೆಯೇ ಉಚ್ಚರಿಸ ಬೇಕಾಗುತ್ತದೆ. ಉದಾಹರಣೆಗೆ ಮ್ಯಾಕ್ಸ್-ವೆಲ್ ಅಂತ ಹೆಸರಿರುವ ವ್ಯಕ್ತಿಯನ್ನು ಹಾಗೆಯೇ ಕರೆಯಬೇಕಾಗುತ್ತದೆಯೇ ಹೊರತು ಜಾಸ್ತಿ-ಆರಾಮ ಅಥವಾ ಗರಿಷ್ಠ-ಸರಿಯೆಂದು ಅನುವಾದಿಸಿ ಹೇಳುವುದು ಸರಿಯಾಗುವುದಿಲ್ಲ. ಹೀಗಿರುವಾಗ ಕೆಲವು ಶಬ್ದಗಳನ್ನು ನಾಮಪದವಾಗಿಯೇ ಬಳಸಬೇಕಾಗುತ್ತದೆ. ಇಂತಹವುಗಳನ್ನು ಹೊರತು ಪಡಿಸಿ ಉಳಿದವುಗಳನ್ನು, ಕನ್ನಡ ಅನುವಾದಗಳನ್ನು ಚಾಲ್ತಿಗೆ ತರುವಲ್ಲಿ ನಾವು ಪ್ರಯತ್ನಿಸಬೇಕಾಗಿದೆ. ಹೇಳಿರುವ ತತ್ವಗಳಿಗೆ ಚರ್ಚೆ ಮಾಡಬಹುದು ಆದರೆ ನಿರ್ಧರಿತ ಅರ್ಥಗಳಿಗೆ ಪ್ರಶ್ನೆ ಮಾಡವುದು ಸರಿಯಲ್ಲಉದಾಹರಣೆಗೆ- ಸಮಾನ್ಯವಾಗಿ ದಿನಚರಿಯಲ್ಲಿ ಬಳಕೆಯಾಗುವ ಶಬ್ದ ಜೆರೆಕ್ಸ್ ಅಂದರೆ ಕನ್ನಡದಲ್ಲಿ "ಪಡಿಪತ್ರ" ಎಂದು. ಇದಕ್ಕೆ ತರ್ಕ ಮಾಡುವುದು ಸರಿಯಲ್ಲ ಯಾಕೆಂದರೆ ನಿರ್ಧಸುವುದಕ್ಕಿಂತ ಮೊದಲೇ ಚರ್ಚೆ ಮಾಡಿ ನಿರ್ಧರಿತವಾಗಿದೆ.

ನಮಸ್ಕಾರ ಎಂಬ ಪದ ನೀರು ಆವಿಯಾಗುವಂತೆ ಮರೆಯಾಗುತ್ತಿದೆಂಬ ಭಾವ ತೋರ್ಪಡುತ್ತಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಗುಡ್-ಮಾರ್ನಿಂಗ್, ಗುಡ್-ನೈಟ್ ಎಂಬ ಪದ ಬಳಕೆ ದಿನಚರಿಯಾಗುತ್ತಿದೆ. ಅಲ್ಲದೆ ಅದರ ಕನ್ನಡಾನುವಾದ ಶುಭೋದಯ, ಶುಭರಾತ್ರಿ ಪದಗಳು ಜನಿಸಿವೆ. ಆದರೆ ಆಂಗ್ಲ ಭಾಷೆಯಲ್ಲಿಯೂ ಗ್ರೀಟಿಂಗ್ಸ್ ಎಂಬ ಪದ ಬಳಕೆ ಇದೆ. ಇದು ಸರ್ವ ಸಮಯದಲ್ಲೂ ಶುಭಾಶಯ ಕೋರುವ ಪದ. ಗ್ರೀಟಿಂಗ್ಸ್ ಪದವು ನಮ್ಮ ಕನ್ನಡದ ನಮಸ್ಕಾರ ಪದಕ್ಕೆ ಸಮನಾಗಿದೆ. ಆದರೆ ನಮ್ಮ ಜನಗಳು ನಮಸ್ಕಾರ ಎಂಬ ಪದ ಬಿಟ್ಟು ಆಂಗ್ಲ ಸಂಸ್ಕೃತಿಯ ಅನುಯಾಯಿಗಳಾಗುತ್ತಿರುವುದು ವಿಪರ್ಯಾಸ. ನಾವೆಲ್ಲ ಸೇರಿ ನಮಸ್ಕಾರ ಎಂಬ ಪದವನ್ನು ಮರು ಬಳಕೆ ಮಾಡಿ ನಮ್ಮ ಸಂಸ್ಕೃತಿಯನ್ನು ಮುಂದುವರಿಸುವ ಅನಿವಾರ್ಯತೆ ನಮ್ಮ ಎದುರಿಗಿದೆ.

ಹೂವುಗಳು ಬಾಡುತ್ತಿರಲು ದೂರದರ್ಶನದ ಪ್ರಭಾವ ಜಾಸ್ತಿಯಾಗಿರುವುದಾಗಿದೆ. ಹೂ ಅಂದರೆ ಕವಿತೆ, ಕಥನ, ಕಾದಂಬರಿ, ಲೇಖನ, ಪ್ರಬಂಧ, ಮಹಾಕಾವ್ಯದಂತಹ ಕನ್ನಡದ ಪುಸ್ತಕಗಳ ಓದುಗರಿಗೆ ಬರಗಾಲ ಬಂದಂತಾಗಿರುವುದಕ್ಕೆ ಕಾರಣ ಬೆಳೆದಿರುವ ತಂತ್ರಜ್ಞಾನದ ಕೂಸು ದೂರದರ್ಶನ. ದೂರದರ್ಶನವನ್ನೆ ಹೆಚ್ಚೆಚ್ಚು ವೀಕ್ಷಿಸುವ ಜನಗಳ ಸಂಖ್ಯೆ ಜಾಸ್ತಿಯಾಗಿರುವುದರಿಂದ ಕಂಗ್ಲೀಷ ಎಂಬ ಪದಗಳು ಭಯ ಹುಟ್ಟಿಸಿವೆ. ಯಾಕೆಂದರೆ ಧಾರವಾಹಿ ನೋಡುವ ಮಹಿಳೆಯರು ಕಂಗ್ಲೀಷನ್ನು ಹೊಸ ಜಾಯಮಾನವೆಂದು, ರೇಖನಿಯೆಂದು ತಿಳಿದು ಅದನ್ನೇ ಅನುಸರಿಸುತ್ತಿರುವುದಾಗಿದೆ. ಯಾಕೆ ಹೀಗಾಯ್ತೆಂದರೆ ಧಾರವಾಹಿಗಳಲ್ಲಿ ಬಳಸುವ ಭಾಷಾ ಪ್ರಯೋಗದಿಂದಾಗಿದೆ. ಆಧುನಿಕ ಜಗತ್ತಿನಲ್ಲಿ ಆಂಗ್ಲ ಭಾಷೆಯನ್ನು ಸೇರಿಸಿ ಮಾತನಾಡುವುದು ರೇಖನಿಯೆಂದು ತಿಳಿದಿರುವ ಮಾಧ್ಯಮ ತಂತ್ರಜ್ಞರಿಂದಾಗಿದೆ. ಧಾರವಾಹಿಗಳ ನಟ-ನಟಿಯರು, ಕಾರ್ಯಕ್ರಮ ನಿರೂಪಕರು, ಸುದ್ಧಿವಾಹಿನಿಯಲ್ಲಿ ಬರುವ ಸುದ್ಧಿ ವಾಚಕರು, ಸಂದರ್ಶನಕ್ಕೆ ಬರುವ ಚಿತ್ರ ನಟ-ನಟಿಯರು, ಸಾಮಾಜಿಕ ಕಾರ್ಯಕರ್ತರು ಮತ್ತು ಹಲವು ರಾಜಕೀಯ ಮುಖಂಡರು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಿದರೆ ಅದನ್ನು ನೋಡುವ ಜನರು ಸಹ ಅವರನ್ನೆ ಹಿಂಬಾಲಿಸಿ ಕನ್ನಡದ ಮೆರವಣಿಗೆ ಮಾಡುವುದರಲ್ಲಿ ಸಂದೇಹವಿಲ್ಲ.

ಮುಂದಿನ ಪೀಳಿಗೆಯನ್ನು ಸಹ ಕನ್ನಡದ ಕುವರರಾಗಿಯೆ ಮುಂದುವರಿಯುವಂತೆ ಮಾಡಲು ನಮ್ಮ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ರಾಜಕೀಯ ಧುರೀಣರಿಂದಷ್ಟೇ ಸಾಧ್ಯ. ಅಲ್ಲದೇ ವಲಸೆ ಬಂದಿರುವ ಉದ್ಯೋಗಿಗಳಿಗೆ ಕನ್ನಡ ಕಲಿಸಲಿಕ್ಕೆಂದು ವ್ಯವಹಾರಶಾಹಿ ಕಾಯಿದೆಯನ್ನು ಕನ್ನಡದಲ್ಲೆ ನಡೆಯಬೇಕೆಂದು ತಾಕೀತು ಮಾಡುವುದು ಮತ್ತು ನಿಯಮ ಉಲ್ಲಂಗನೆಯಾಗದಂತೆ ಎಚ್ಚರಿಕೆ ವಹಿಸಿ ಅಗತ್ಯಕ್ರಮ ಕೈಗೊಳ್ಳಬೇಕಾಗಿದೆ. ವಲಸೆ ಬಂದಿರುವ ಉದ್ಯೋಗಿಗಳಿಗೆ ಕನ್ನಡ ಕಲಿಸಲು ಆಗದಿದ್ದರೆ ಪರವಾಗಿಲ್ಲ, ಅವರ ಮಕ್ಕಳು ಕನ್ನಡದಲ್ಲೇ ವ್ಯವಹರಿಸುವಂತೆ ಮಾಡಲಿಕ್ಕೆ ಸಾಧ್ಯವಿದೆ. ಹೇಗೆಂದರೆ ಆಂಗ್ಲ ಭಾಷಾ ಮಾಧ್ಯಮ ಶಾಲೆಗಳಲ್ಲಿ ಕನ್ನಡದ ಕಲಿಕೆ ಮತ್ತು ಕನ್ನಡದಲ್ಲೇ ಚಟುವಟಿಕೆಗಳು ನಡೆಯಬೇಕೆಂಬ ನಿಯಮವನ್ನು ಕಡ್ಡಾಯ ಮಾಡಬೇಕಾಗಿದೆ. ಹೀಗೆ ಮಾಡಿದರೆ ಮುಂದಿನ ಪೀಳಿಗೆಯವರು ಕನ್ನಡದ ಬಳಕೆ ಮಾಡುವಂತೆ ಪ್ರೆರೇಪಿಸಿದಂತಾಗುತ್ತದೆ. ಇದಕ್ಕೆ ಆಂಗ್ಲ ಭಾಷಾ ಮಾಧ್ಯಮ ಶಾಲಾ ಶಿಕ್ಷಕ/ಶಿಕ್ಷಕಿಯರು ಸಹ ಸಹಕರಿಸಿ ಕನ್ನಡದಲ್ಲೆ ಘಟನೆಗಳು ಸಂಭವಿಸುವಂತೆ ನೋಡಿಕೊಳ್ಳಬೇಕು. ಇದನ್ನ ನಮ್ಮ ರಾಜಕಾರಣಿಗಳು ಅರ್ಥೈಸಿಕೊಂಡು ಕಾರ್ಯಪ್ರವರ್ತರಾಗಬೇಕಾಗಿದೆ.

ಇವೆಲ್ಲವುಗಳು ನಡೆದರಷ್ಟೇ ಸಾಲದು ಅವುಗಳಿಗೆ ಪುಷ್ಠಿ ನೀಡುವಂತೆ ನಮ್ಮ ಕನ್ನಡ ಪರ ಹೋರಾಟಗಾರರು, ಸಂಘ-ಸಂಸ್ಥೆಗಳು, ಜನಗಳು ಎಚ್ಚರವಹಿಸಬೇಕಾಗಿದೆ. ಕನ್ನಡದಲ್ಲಿ ಕಲಿತವರನ್ನು ಹೀನರಾಗಿ ಕಾಣುವುದು, ಹೀಯಾಳಿಸುವುದು, ಅಂಥವರ ತೇಜೋವಧೆ ಮಾಡುವುದನ್ನು ತಪ್ಪಿಸಬೇಕು. ಅಂತಹವುಗಳು ಕಂಡುಬಂದಲ್ಲಿ ಕನ್ನಡ ಕಲಿತವರ ಪರವಾಗಿ ನಿಂತು ಹೀಯಾಳಿಸುವವರ ಗಮನ ಸೆಳೆದು ಕಣ್ತೆರೆಸಬೇಕಾಗಿದೆ. ಜನ ಸಮಾನ್ಯರಲ್ಲಿ ಇದರ ಬಗ್ಗೆ ಅರಿವು ಮೂಡಿಸುವಂತಹ ಕೆಲಸ ಮಾಡಬೇಕಾಗಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಇತರ ಭಾಷಾ ಮಾಧ್ಯಮದಲ್ಲಿ ವ್ಯವಹರಿಸಿ ಉಳಿದ ಸಮಯದಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಕನ್ನಡದಲ್ಲೆ ವ್ಯವಹರಿಸಿದರೆ, ಕನ್ನಡ ಮಾತಾಡಿದರೆ ತುಚ್ಛವಾಗಿ ಕಾಣುತ್ತಾರೆಂಬ ಕೀಳರಿಮೆ ಭಾವನೆ ದೂರವಾಗಿ ಕನ್ನಡದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಕೆಲವರ ನಿಲುವೇನೆಂದರೆ ಹರಿಯುವ ನೀರೆತ್ತ ಹರಿಯುತ್ತದೆಯೋ ಹಾಗೆ ಸಾಗುಬೇಕೆನ್ನುವುದು. ಆದರೆ ಹರಿಯುವ ನೀರು ಝರಿಯಲ್ಲಿ ಧುಮುಕುವುದು ಅಂತಾದರೆ ಅದರಂತೆ ಸಾಗುವವರು ಬೀಳುತ್ತಾರೆನ್ನುವುದು ಪಕ್ಕಾ. ಹೀಗಾಗಿ ಹರಿಯುವ ನೀರಿಗೆ ವಿರುದ್ಧವಾಗಿ ಈಜಿದರೆ ಬದುಕು ಮೊದಲು ಕಷ್ಟವೆನಿಸಿದರೂ ಮುಂದೆ ಸುಖಮಯವಾಗುತ್ತದೆ. ಎಲ್ಲರೂ ನೀರು ಹರಿದಂತೆ ಸಾಗಿದರೆ, ನೀರ ಹರಿವಿಗೆ ವಿರುದ್ಧವಾಗಿ ಈಜಿ ನಿಲ್ಲುವವನು ಎಲ್ಲರ ಪ್ರಶಂಸೆಗೆ ಪಾತ್ರನಾಗುತ್ತಾನೆ. ನಾವು ಕನ್ನಡಿಗರೂ ವಿಶಾಲ ಹೃದಯಿಗಳು ನಿಜ ಆದರೆ ಪರ ಭಾಷಾ ಅಥವಾ ಪರ ಸಂಸ್ಕೃತಿ ಅನುಯಾಯಿಗಳಲ್ಲವೆಂಬುದನ್ನು ಸಾಬೀತುಪಡಿಸಬೇಕಾಗಿದೆ. ನಾವು ಸ್ವಾಭಿಮಾನಿಗಳು ಎಂಬ ಹೆಮ್ಮೆ ನಮಗಿದ್ದರೆ ಸಾಕು ನಮ್ಮ ಕನ್ನಡ ನುಡಿಯ ಬೇರು ಗಟ್ಟಿಯಾಗುವುದರಲ್ಲಿ ಅನುಮಾನವಿಲ್ಲ.

2 comments:

  1. ಸ್ವಾಭಿಮಾನಿ ಕನ್ನಡಿಗರ ಅಂತರಂಗ ಶೋಧನೆಯನು ಪ್ರೇರೇಪಿಸುವ ಬರಹ.
    ಕನ್ನಡವೇ ಸತ್ಯ... ಕನ್ನಡವೇ ನಿತ್ಯ...

    ReplyDelete
    Replies
    1. ಧನ್ಯವಾದಗಳು Palavalli Badarinath Sir.... ನಿಮ್ಮ ಬ್ಲಾಗ್ ಪ್ರೀತಿ, ಪ್ರತಿ ಬರಹವನ್ನು ಓದಿ ಪ್ರತಿಯೊಬ್ಬರನ್ನೂ ಪ್ರೋತ್ಸಾಹಿಸುನ ಪರಿ ನಮನದಾಯಕವಾಗಿರುವಂತಹದು.... ನಮ್ಮ ಚಿಕ್ಕ ಬರಹವು ದೊಡ್ಡ ಮಟ್ಟದಲ್ಲಿ ಜನರ ಓದಿಗೆ ಸಿಕ್ಕಿ ಜನರನ್ನೂ ತಲುಪುವಲ್ಲಿ ನೀವು ಮಾಡುವ ಸಹಾಯವು ನಮ್ಮ ಧನ್ಯತಾಭಾವಕ್ಕೆ ಪ್ರಚೋದನೆ ನೀಡಿ ಕೈಜೋಡಿಸಿ ನಮಸ್ಕರಿಸುತ್ತದೆ. ಧನ್ಯವಾದಗಳು ಬದರಿನಾಥ ಸಾರ್...... :)

      Delete