Friday, August 22, 2014

ದೇವರು ಪಕ್ಷಪಾತಿಯೇ?

http://www.badari-poems.blogspot.in/2014/08/blog-post.html
(ಫೇಸ್ ಬುಕ್ಕಿನಲ್ಲಿ ಈ ಹೊತ್ತಿನವರೆಗೂ ದೊರೆತ ಪ್ರತಿಕ್ರಿಯೆಗಳಿವೆ:
ಇದಕ್ಕೆ ನನ್ನ ಕಾಮೆಂಟ್ ಹೀಗಿದೆ ನೋಡಿ...
ಇಲ್ಲಿ ಬರೆದ ಕಾಮೆಂಟ್ ನ್ನು ಓದಿದ ಮೇಲೆ ನನ್ನ ಮನಸ್ಸಿನಲ್ಲು ಕೆಲವೊಂದು ಜಿಜ್ಞಾಸೆಗಳು ಉದ್ಭವಿಸಿದವು.
ತಿರುಮಲೈರವರೆ ನಾನು ನಿಮ್ಮಷ್ಟು ದೊಡ್ಡವನಲ್ಲ, ತಿಳಿದವನು ಅಲ್ಲ ಆದರು ನನ್ನ ಮನಸಿನ ಗೊಂದಲಗಳನ್ನು ಹೊರ ಹಾಕುವ ಪ್ರಯತ್ನ ಮಾಡಿದ್ದೇನೆ. ನನ್ನ ಅನಿಸಿಕೆಯೇನೆಂದರೆ...
ದೇವರು ಪಕ್ಷಪಾತಿಯು ಅಲ್ಲ, ಸಾಹುಕಾರನು ಅಲ್ಲ. ಅವ ಸರ್ವಶ್ರೇಷ್ಠ, ಸರ್ವೋತ್ತಮ, ಸರ್ವವ್ಯಾಪಿ. ಅವನಾರು ಎಂಬುದೆ ಪ್ರಶ್ನೆಯಾದರೆ ನಮ್ಮ ಬದುಕಿಗೆ, ನಮ್ಮ ಬುದ್ಧಿವಂತಿಕೆಗೆ ಅರ್ಥವುಂಟೆ...?
ಈ ಜಗತ್ತೆಂದರೆ ದೇವರು, ನಮ್ಮ ನಂಬಿಕೆಯೇ ದೇವರು, ನಮ್ಮ ಅಸಹಾಯಕತೆಯನ್ನು ಕೇಳುವ ಕಲ್ಪನೆಯೇ ದೇವರು, ಎಲ್ಲರನ್ನು ಬದುಕಲು ಅಣಿಯಾಗಿಸುವ ಚೈತನ್ಯವೇ ದೇವರು. ಇದು ನನ್ನ ಅಭಿಪ್ರಾಯ.
ಹಾಗೆ ಮುಂದುವರಿಯುತ್ತ, ಆ ಪರಮಾತ್ಮನಿಂದ ಹೊರಟ ಆತ್ಮ ಮತ್ತೆ ಆ ಪರಮಾತ್ಮನನ್ನೇ ಸೇರುವ ಮಾರ್ಗದಲ್ಲಿ ಪಾರು ಮಾಡಬೇಕಾದ ಹತ್ತಾರು ಎಡರು ತೊಡರುಗಳನ್ನು ದಾಟಲು ಬೇಕಾದ ಚುಕ್ಕಾಣಿಗಳು ಮಾತ್ರ. ಅಂದರೆ ಆತ್ಮದ ವಾಹನವೆಂದರೆ ಈ ನರ ಮೃಗಗಳೇ...? ಆ ಪರಮಾತ್ಮನಲ್ಲಿ ಲೀನವಾಗುವುದೇ ಎಲ್ಲಾ ಜೀವಿಗಳ ಉದ್ದೇಶ್ಯ ಎಂದು ಹೇಳಿದ್ದೀರಿ ಹೀಗೆಂದುಕೊಂಡರೆ ಬದುಕುವ ಕರ್ಮ ಎಲ್ಲಿಂದ, ಯಾಕೆ, ಯಾವ ಕಾರಣಕ್ಕೆ ಎನ್ನುವ ಅನುಮಾನ ಮತ್ತು ಇನ್ನೊಂದು ಪ್ರಶ್ನೆ ಉದ್ಭವಿಸುತ್ತದೆ. ಎಲ್ಲ ಕರ್ಮಗಳನ್ನು ಬಿಟ್ಟು ಕೇವಲ ಧ್ಯಾನದತ್ತ ನಮ್ಮ ಮನಸ್ಸನ್ನು ಕೇಂದ್ರಿ ಕರಿಸುವುದೊಂದೇ ಉಳಿಯಬೇಕಾಗುತ್ತದೆ ಅಲ್ಲವೆ...?
ಎಲ್ಲ ಪ್ರಾಣಿಗಳೂ ಅವರವರ ಪೂರ್ವ ಕರ್ಮದನುಸಾರವಾಗಿ ಏನನ್ನು ಪಡೆಯಬೇಕೋ, ಎಷ್ಟನ್ನು ಪಡೆಯಬೇಕೋ ಮತ್ತು ಯಾವಾಗ ಪಡೆಯಬೇಕೋ ಆಯಾ ಸಮಯಕ್ಕೆ ಅಷ್ಟಷ್ಟನ್ನು ಪಡೆಯುತ್ತದೆ ಅಂದರೆ ಎಲ್ಲ ಪ್ರಾಣಿಗಳ ಆತ್ಮವೂ ಪೂರ್ವ ಜನ್ಮವನ್ನು ಪಡೆದಿರುತ್ತದೆಯೇ...? ಹಾಗಿದ್ದರೆ ಎಲ್ಲ ಕೆಲಸಗಳು ತೃಪ್ತಿದಾಯಕವಾಗಿ ಯಾವ ಪ್ರಾಣಿಯ ಬದುಕಿನಲ್ಲಿ ನಡೆಯುತ್ತದೆಯೋ ಆ ಪ್ರಾಣಿಗಳ ಆತ್ಮ ಹೊಸದಾಗಿ ರೂಪಗೊಂಡಿರುವುದೋ...?
ನಮ್ಮ ಬದುಕಿನಲ್ಲಿ ಋಣಾತ್ಮಕವಾದ ಘಟನೆಗಳು ಸಂಭವಿಸಿದರೆ ಆಗ ನಾವು ನಮ್ಮೆಲ್ಲ ಬದುಕಿನ ಹೊಣೆಗಾರ ದೇವನೆಂದು ಅವನನ್ನು ಜರಿಯುವುದು ಅಸೂಯೆಯಿಂದ ತೆಗಳುವುದು ನಮ್ಮ ಹತಾಶೆಯ ಪರಮಾಧಿಯೇ ಹೊರತು ಬೇರೆನು ಅಲ್ಲ ಎನ್ನುವುದು ನನ್ನ ಅನಿಸಿಕೆ. ಯಾಕೆಂದರೆ ಉಳಿದವರನ್ನು ಜರಿದರೆ, ಹೊಣೆಯಾಗಿ ಬಿಂಬಿತರಾದವರು ಎಗರಿ ಉತ್ತರಿಸುವುದರಿಂದ ಜಗಳ, ಮನಸ್ತಾಪಕ್ಕೆ ಹೆದರಿ, ಇಂತವುಗಳಿಂದ ತಪ್ಪಿಸಿಕೊಳ್ಳಲು ಕಾಣದ ದೇವನನ್ನು ಜರಿಯುತ್ತಾರೆ. ಯಾಕೆಂದರೆ ಅವ ತಿರುಗಿ ಮಾತನಾಡಲಾರ, ಜಗಳವಾಡಲಾರ ಎಂಬುದು ಪೂರ್ವ ನಿಯೋಜಿತವಾಗಿ ತಿಳಿದಿದ್ದರಿಂದ.
ಉಳ್ಳವರು ಶಿವಾಲಯ ಮಾಡುವರು' ಎಂದು ಬಸವಣ್ಣನವರು ಹೇಳುತ್ತಾ ' ಎನ್ನ ಕಾಲೇ ಕಂಬವಯ್ಯ, ಎನ್ನಾ ದೇಹವೆ ದೇಗುಲವಯ್ಯ ಶಿರವೇ ಹೊನ್ನ ಕಳಸವಯ್ಯಾ ' ಎಂದಿರುವುದು ಇಲ್ಲದವರ ಪರವಾಗಿ ಎತ್ತಿದ ದನಿ. ಏಕೆಂದರೆ ಅವರಿಗು ಗೊತ್ತು ಮನಸ್ಸೆಂಬ ಮರ್ಕಟದಿಂದ ಧ್ಯಾನ, ಪೂಜೆಯನ್ನು ಭಾವಪರವಶರಾಗಿ ಮಾಡಲು ಸಾಧ್ಯವಿಲ್ಲ ಎಂದು ತಿಳಿದಿದ್ದರಿಂದ ನಮ್ಮ ಭಕ್ತಿಯನ್ನು, ನಮ್ಮ ಅವಶ್ಯಕತೆಯನ್ನು ದೇವನಿಗೆ ತಲುಪಿಸಲು ಕಂಡುಕೊಂಡ ಮಾರ್ಗಗಳೇ ಈ ಹೋಮ, ಹವನ, ಅರ್ಚನೆ ಇತ್ಯಾದಿ. ಈ ಕರ್ಮಗಳನ್ನು ಮಾಡಿಸಲು ಮುಂದೆ ಬಂದ ಜನರ ಗುಂಪೇ ನಮ್ಮ ಬ್ರಾಹ್ಮಣರು. ಹಾಗೆಂದ ಮಾತ್ರಕ್ಕೆ ಬ್ರಾಹ್ಮಣರುಗಳು ದೇವರಲ್ಲ. ಆದರೆ ಅವರ ಕರ್ಯತತ್ಪರತೆ ಅವರನ್ನು ಗೌರವಿಸುವಂತೆ ಪ್ರೇರೇಪಿಸುತ್ತದೆ. ಬರ್ತ ಬರ್ತ ಅದು ಒಂದು ವೃತ್ತಿಯಾಗಿ ಸಮಾಜದ ಸಂಕೊಲೆಗಳಿಂದ ವಿದ್ಯಮಾನಗಳು ಬೇರೆ ಯಾದವೆ ಹೊರತು ಅದು ಅವರೆ ಬರೆದುಕೊಂಡ ಸ್ವಯಂಘೋಶಿತ ಬಿರುದಲ್ಲ. ಅಹಂ ಬ್ರಹ್ಮಾಸ್ಮಿ ಎಂದು ಸ್ವಾಮಿ ಜಗದ್ಗುರುಗಳಾದ ಶಂಕರಾಚಾರ್ಯರು ಹೇಳಿರುವುದು ದೇವರನ್ನು ನೋಡಲು ಬೆರೆಲ್ಲು ಹೋಗಬೇಕಾಗಿಲ್ಲ ಯಾಕೆಂದರೆ ಆ ಪರಮಾತ್ಮನ ಭಾಗವೇ ನಮ್ಮ ಈ ದೇಹದ ಆತ್ಮವಾಗಿರುವುದರಿಂದ ನಾನೇ ಬ್ರಹ್ಮ ಎಂದು ಹೇಳಿರುವುದರ ಉದ್ದೇಶವಾಗಿರಬಹುದಲ್ಲವೇ...? ಇದರಿಂದಾಗಿ ಶಿವಾಲಯ ಕಟ್ಟುವ, ಪುರೋಹಿತರನ್ನು ಸಂಪರ್ಕಿಸುವ ಗೋಜಿಗೆ ಹೋಗುವ ಕೆಲಸವಿಲ್ಲ.
ಇವುಗಳ ಸುತ್ತ ಓಡಾಡಿದಾಗ, ಇವುಗಳನ್ನು ಆಳವಾಗಿ ಯೋಚಿಸಿದಾಗ ಮೂಡುವ ಗೊಂದಲಗಳಿಗೆ ಉತ್ತರ ಹುಡುಕಲು ಆಗದೆ ಹೋದ ಪ್ರಶ್ನೆಯೇ ದೇವರು. ನಂಬಿಕೆ, ಭಕ್ತಿ, ಧ್ಯಾನ, ಸಮಾದಾನ ಇದೆ ದೇವರೆಂಬ ಪದದ ಉತ್ಪತ್ತಿಗೆ ಕಾರಣ. ಇವುಗಳನ್ನು ಮೀರಿ ಒಬ್ಬ ದೇವರಿದ್ದಾನೆ ಅಂತಾದರೆ ಅವನಿಗೆ ಎಲ್ಲಾ ಪ್ರಾಣಿಗಳು ಸಮಾನರು. ಯಾಕೆಂದರೆ ಎಲ್ಲಾ ಪ್ರಾಣಿಗಳ ದೇಹದಲ್ಲು ಆತ್ಮವಿರುತ್ತದೆ, ಆ ಆತ್ಮವೆಂಬುದು ಆ ದೇವರ ಭಾಗವಲ್ಲವೆ..? ಹೀಗಿರುವಾಗ ಆ ದೇವರು ಸಾಹುಕಾರ, ಪಕ್ಷಪಾತಿಯಲ್ಲ.
ಈ ಅಲ್ಪನ ಬುದ್ಧಿಗೆ ತಿಳಿದಂತೆ, ತೋಚಿದಂತೆ ಬರೆದಿದ್ದೇನೆ. ತಪ್ಪಿದ್ದರೆ ಕ್ಷಮಿಸಿ, ತಿಳಿಸಿ. ಧನ್ಯವಾದಗಳು.

1 comment:

  1. ತಾವು ಹಂತಹಂತವಾಗಿ ವಿವರಿಸುತ್ತಾ ಹೋದದ್ದು ಸತ್ಯಕ್ಕೆ ಕೊಟ್ಟ ಮೆರುಗಿನಂತಿದೆ.

    ದೇವರು ಪಕ್ಷಪಾತಿಯೇ? ಎನ್ನುವುದು ನನ್ನ ಆಸ್ತಿಕ ವಿರೋಧಿ ಮನಸ್ಥಿತಿ ಅಲ್ಲವೇ ಅಲ್ಲ. ನಾವು ಬಲು ನೊಂದಾಗ ಹೀಗನಿಸುತ್ತದೆ ಅಲ್ಲವೇ? ಗೆಳೆಯ.

    ಧರ್ಮ ಯಾವುದಾದರೂ, ದೇವರ ಹೆಸರು ಬದಲಾದರೂ ನಮ್ಮ ನಂಬುಗೆಯಲ್ಲಿ ಆತನು ನಿಜ ಶಕ್ತಿಯೇ ಇದರಲ್ಲಿ ಎರಡು ಮಾತಿಲ್ಲ.

    ಒಳ್ಳೆಯ ಬರವಣಿಗೆ ಮೂಲಕ ನಮ್ಮ ಮನಸನ್ನು ಗೆದ್ದಿರಿ.

    ReplyDelete