Thursday, March 7, 2013

...ಗಂಭೀರವಾದ ಕಡಲು ಸಹ ಚಂಚಲವಾಗುವುದು...


ಗಂಭೀರತೆಗೆ ಹೆಸರಾದ ಕಡಲು ಸಹ ಒಮ್ಮೊಮ್ಮೆ ತನ್ನ ಮಿತಿಯನ್ನು ಮೀರಿ ವರ್ತಿಸುತ್ತದೆ. ಗಂಭೀರ ವರ್ತನೆಯ ವ್ಯಕ್ತಿಗಳು ಒಮ್ಮೊಮ್ಮೆ ಹಾಸ್ಯಾಸ್ಪದಕ್ಕೆ ಗುರಿಯಾಗುತ್ತಾರೆ ಅಂತಹ ಸಂದರ್ಭದಲ್ಲಿ ಮಾತು ಒಂದೊಳ್ಳೆ ಉದಾಹರಣೆಯಾಗುತ್ತದೆ. ಆದರ್ಶ ವ್ಯಕ್ತಿ ಅಥವ ಉತ್ತಮ ಸ್ವಭಾವವನ್ನ ಹೊಂದಿರ್ತಕ್ಕಂತವರು ಕೆಲವೊಮ್ಮೆ ಬೇರಾವುದೋ ಆಕರ್ಷಣೆಗೆ ಒಳಗಾಗಿ ಮೋಹದಿಂದ ಮನಸಿಗೆ ಹಿಡಿಸುವುದನ್ನು ಪಡೆಯಲು ತನ್ನ ತನವನ್ನು ಬಿಟ್ಟು ಹಠವಾದಿ, ಭಿಕ್ಷಾರ್ಥಿ, ಛಲಗಾರ, ಮೋಹಗಾರರಗುತ್ತಾರೆ. ಚಂಚಲತೆಗೆ ದಾಸರಾಗಿ   ತಮ್ಮ ಗಂಭೀರರತೆಯನ್ನು ತೊರೆದು ಆಕ್ಷೇಪಾರ್ಹರಾಗಿ ಬಿಂಬಿತರಾಗುತ್ತಾರೆ.

ಭೋರ್ಗರೆವ ಕಡಲು ಸಹ ಕೆಲವೊಮ್ಮೆ ತನ್ನ ಮಿತಿಯನ್ನು ದಾಟಿ ಮೆರೆಯುತ್ತದೆ. ಇದರಿಂದಾಗಿ ಅಪಾರ ನಷ್ಟವಾಗುವುದಲ್ಲದೆ ಪ್ರಾಕೃತಿಕ ಅಸಮತೋಲನ ಉಂಟಾಗುತ್ತದೆ. ಕಡಲಿನಲ್ಲಿ ಬೀಸುವ ಬಿರುಗಾಳಿಯಿಂದ ಪರಿಸರದಲ್ಲಿ ಅಪಾರ ಮಳೆಯುಂಟಾಗುತ್ತದೆ. ಅದೇ ರೀತಿ ಗಂಭೀರವಾದಂತಹ ಕಡಲು ಕೂಡ ಪ್ರಾಕೃತಿಕ ವೈಪರಿತ್ಯದಿಂದ ಅಲೆಗಳ ಭೋರ್ಗರೆತದಲ್ಲಿ ಏರಿಳಿತವನ್ನು ಪಡೆಯುತ್ತದೆ.ಹುಣ್ಣಿಮೆ ದಿನದಂದು ಅಲೆಗಳ ಭೋರ್ಗರೆತ ಜೋರಾಗಿದ್ದು ತೀರದ ತುದಿಯನ್ನು ತಲುಪಲು ಮುನ್ನುಗ್ಗುತ್ತದೆ. ಅದೇ ರೀತಿ ಅಮವಾಸ್ಯೆಯ ದಿನದಂದು ತೆರೆಗಳು ಸಹಜ ಸ್ಟಿತಿಯಲ್ಲಿರುತ್ತವೆ. ರೀತಿಯಾಗಿ ಗಂಭೀರವಾದ ಕಡಲು ಸಹ ಚಂಚಲತೆಯನ್ನು ಪಡೆಯುತ್ತದೆ.

ಮಂಗನಿಂದ ಮಾನವನಾದಂತಹ ಮನುಜರು ಎಷ್ಟೆ ಗಂಭೀರವಾಗಿದ್ದರೂ ಮರ್ಕಟ ಮನಸ್ಸಿನಿಂದ ಕೆಲವೊಂದು ಕ್ಷಣದಲಿ ಚಂಚಲವಾಗುತ್ತಾರೆ. ಇದಕ್ಕೆ ಕಾರಣಗಳು ಹಲವಾರು ರೀತಿಯಲ್ಲಿರುತ್ತವೆ. ಅವೆನೆಂದರೆ ಬೇರೆಯವರು ಮಾತಿಗೆ ಮರುಳಾಗುತಲಿ ಹೊಸ ಬಯಕೆಯ ದಾಸರಾಗಿ ಹೊಸತನ ಪಡೆಯುವ ತವಕದಲಿ ಬದಲಾವಣೆಯನು ಇಛ್ಚಿಸುತಲಿ ಉತ್ತುಂಗವನು ಎರುವುದರಿಂದ, ಸಿರಿವಂತರಾಗುವುದರಿಂದ, ಕೆಲಸ ಮಾಡುವ ವಾತಾವರಣ ಮತ್ತು ಪರಿಸರದಿಂದ, ಒಡನಾಟದಿಂದ, ಪರಿಸ್ಥಿತಿಯಿಂದ, ಸಂದರ್ಭಕ್ಕೆ ತಕ್ಕಂತೆ ವರ್ತಿಸುವುದರಿಂದ, ಹುಚ್ಚು ಆಸೆ ಗಳಿಂದ ಗಂಭೀರತೆಯ ವ್ಯಕ್ತಿತ್ವ ಹಾಸ್ಯಾಸ್ಪದಕ್ಕೆ ಗುರಿಯಾಗುತ್ತದೆ.   

ಸಮುದ್ರದಡಿಯಲ್ಲಿ ಉಂಟಾಗುವ ಭೂಕಂಪನದಿಂದ ಎಳುವ ಬ್ರಹದಾಕಾರದ ಅಲೆಗಳು ಸುನಾಮಿಯೆಂಬ ಹೆಸರಿನಲ್ಲಿ ನಾಡನ್ನು ನುಂಗುವ ಕಡಲಳೆಗಳು ಗಂಭೀರತೆಗೆ ಹೆಸರಾಗಿರುವ ಸಮುದ್ರರಾಜನನ್ನು ಚಂಚಲಗೊಳಿಸಿ ಜನರ ಮಾತಿಗೆ ಸಿಲುಕುವಂತೆ, ಶಾಪಕ್ಕೆ ಗುರಿಯಾಗುವಂತೆ ಮಾಡುತ್ತದೆ. ಒಡಲಲಿ ಆಗುವಂತಹ ಬದಲಾವಣೆ ಹೇಗೆ ಕಡಲನು ಕಂಪಿಸಿ ತನ್ನ ಮಿತಿಯನ್ನು ಮೀರುತ್ತದೆಯೋ ಹಾಗೆ ತನ್ನ ಗಂಭೀರತೆಯನ್ನು ತೊರೆದು ಚಂಚಲವಾಗುವಂತೆ ಮಾಡುತ್ತದೆ.

ತನ್ನ ಮನದಿಛ್ಚೆಗೆ ಸ್ಪಂದಿಸಿದ ಮಾತು, ಚಂಚಲತೆಯನ್ನು ಹುಟ್ಟಿಸಿ ಗೌರವಕ್ಕೆ ಚ್ಯುತಿ ಬರುವಂತೆ ವರ್ತಿಸಿ ಹೊರಹೊಮ್ಮುವ ಭಾವನೆ ವ್ಯಕ್ತಿಯನ್ನು ಗೌರವಿಸಲು ಕಾರಣವಾದ ಗುಣಗಳು ಮರೆಯಾಗಿ ಇನ್ನೊಂದು ರೀತಿಯ ಭಾವನೆ ವ್ಯಕ್ತವಾದಾಗ ತನ್ನ ಹಿಡಿತವನ್ನು ಕಳೆದುಕೊಂಡು ನಿಂದನೆಗೆ, ಅಗೌರವಕ್ಕೆ, ದೂಷಣೆಗೆ, ಹಾಸ್ಯಾಸ್ಪದಕ್ಕೆ ಗುರಿಯಾಗಿ ಆರೋಪಿಯಾಗಿ ಅಥವಾ ಕೆಲವೊಮ್ಮೆ ಅಪರಾಧಿಯಾಗಿ ಬಿಂಬಿತವಾಗುತ್ತಾನೆ.

ಮೇಲಿನ ಮಾತುಗಳು, ಗಂಭೀರತೆಯಲ್ಲಿ ಚಂಚಲತೆ ಹೇಗೆ ಹೊರಹೊಮ್ಮುತ್ತದೆ ಎನ್ನುವುದನ್ನು ಬಿಂಬಿಸುತ್ತದೆ. ಮಿತಿ ಮೀರಿದ ವರ್ತನೆ ಸ್ಥಿರತೆ, ಗಂಭೀರತೆಯನ್ನು ಮರೆಯಾಗಿಸಿ ಅಗೌರವ ಉಂಟಾಗಲು ಕಾರಣವಾಗುತ್ತದೆ. ಹೀಗಾಗಿ ಗಂಭೀರತೆಯ ವ್ಯಕ್ತಿತ್ವ ಚಂಚಲವಾದಾಗ ಅದಕ್ಕೆ ತನ್ನ ತಪ್ಪನ್ನು ಮನವರಿಕೆ ಮಾಡಿಕೊಟ್ಟು ಇನ್ನೊಂದು ಅವಕಾಶ ನೀಡಿ ಪರಿಕ್ಷಿಸುವುದು ಅಥವಾ ಕಾದುನೋಡುವುದರಿಂದ ವ್ಯಕ್ತಿಯ ಸರಿಯಾದ ವ್ಯಕ್ತಿತ್ವ ಬೆಳಕಿಗೆ ಬರುತ್ತದೆ.

No comments:

Post a Comment