Saturday, June 17, 2023

ಜಾಣ್ಮೆಯ ಗಾಳ

ಮನಸಿನ ಇಳೆಯಲ್ಲಿ ಸ್ವಾಭಿಮಾನದ ಬಾಳು

ನನಸಿನ ಅಂಗಳದಿ ನೆಂಟರಿಷ್ಟರ ಗೋಳು

ಕಳೆವುದು ನೀತಿಯ ಆತ್ಮೀಯ ಬಂಧ

ಮುಗಿವುದು ನಮ್ಮಯ ಪ್ರೀತಿಯ ಸಂಬಂಧ


ಸೋಲು ಗೆಲುವಿನ ಮೂಲ

ಗೆಲುವು ಅಹಂಕಾರದ ಬಾಲ

ನಾನು ನನ್ನದೆಂಬ ಕಾಲ

ಆಗುವುದು ನಮ್ಮ ಬಾಳಿಗೆ ಶೂಲ

ಬದುಕುವ ಹೊತ್ತಲ್ಲಿ ವಿವೇಚನೆಯೇ ದಾಳ


ಮಾತು ಮಾರ್ಮಿಕ ಜಾಲ

ಸೂಕ್ಷ್ಮ ಅರಿವಿನ ಕೋಲ

ಮೂದಿಸುತ ಜರಿಯಲು ಕೀಳ

ಕೈಯಾಭರಣ ಕೋಳ

ಹೊಂದಾಣಿಕೆ ಮಾತು ಜಾಣ್ಮೆಯ ಗಾಳ

ಧೃತಿಯ ಕಿರಣ

ಮನದಾ ಮನೆಯಲ್ಲಿ ಧೃತಿಯ ಕಿರಣ

ಬದುಕಾ ಬಯಲಲ್ಲಿ ಪುಟಿದೆದ್ದಿದೆ ಚರಣ

ಏನೋ ಒಂದು ಎದುರಾಗಿದೆ

ಬೆಳಕಾ ಹನಿಸೋ ಬೆಳ್‌ ಮೂಡಿದಿದೆ


ಧೀ ಆರಿದ ಕಾರಣ ಶನಿಯಾಟದ ಹೂರಣ

ಬೆರಳಿಡುವನು ಕಿವಿಯಲಿ ತಲೆಯೇರುವ ಚಾರಣ

ಮಂಕಾದರೆ ಮುಗಿಯಿತು ಮೇಲೇರುವ ಸರಣಿ

ಬೆಳಕಾಗುವ ಭರವಸೆ ತಿರುಗುತಲಿ ಧರಣಿ

ಚಿವ್ ಚಿವ್ ಗುಬ್ಬಿ

ಚಿವ್ ಚಿವ್ ಗುಬ್ಬಿ ನೆನಪಾಗಿದೆ

ಯಾಕೋ ಏನೋ ಮರೆಯಾಗಿದೆ

ಬೆಳಿಗ್ಗೆ ಎದ್ದು ಹೂ ಕೊಯ್ಯುವಾಗ

ಹಳೆ ಅನ್ನ ಹೆಕ್ಕಿ ತಿನ್ನುತಲಿತ್ತು

ಆ ದಿನಗಳ ನೆನಪು ಮಾಸೋಗದೆ

ಹೊಸದಿನಗಳಿಗಾಗಿ ಮುಡಿಪಾಗಿದೆ


ಹುಲ್ಲು ನಾರು ಹೆಣೆದ ಗೂಡು

ಮಾಡ್ಗುಳಿಯಲ್ಲಿ ಬರಿದಾಗಿದೆ

ಮನೆಯೊಳಗೆ ಮಲಗಿರುವ ನಮಗೆ

ತಿಳಿಸುವವರು ಇಲ್ಲಾ ಬೆಳಗಾದ ಘಳಿಗೆ


ಬಾಲ್ಯದ ಸಂಗಾತಿ ಬಾಗಿಲೆದುರಿಗೆ ಬಂದು

ಸ್ವಾಗತಿಸುವ ರೀತಿಯೇ ಮನಮೋಹಕ

ಬಿಳಿಯ ಗುರಿತಿನ ಗಂಟಲಿನ ಬಾಗ

ಕುಣಿಕುಣಿದು ಸೇಳೆಯಲು ಕಣ್ನೋಟವೇ ಸಖ

Monday, June 5, 2023

ಮಡಿಲ ನೂಲಿನ ಕೌದಿ

ಮಡಿಲಿನ ನೂಲನ್ನು ನೇಯುವ ನೇಕಾರ

ಅನುಭವಿಸೋ ನೋವನ್ನು ಪೇಳದೆ ಝೇಂಕಾರ

ಮೂಡಿದ ಬೆಳಕಲ್ಲಿ ನೋವಾರುವುದೇ ನೀತಿ


ಕಮಲದ ಕಣ್ಣಿನಲಿ ಕಾಡಿಗೆಯ ಕರಿಗುರುತು

ಅರಿಯದ ಮನಸಲ್ಲಿ ಮುಸುಕಿನ ಗುದ್ದಾಟ


ಸೂಕ್ಷ್ಮತೆಯ ಆರೈಕೆ ಒಲವಾಗುವ ಮುನ್ನ

ವ್ಯಾಪಾರ ವಹಿವಾಟು ಅತಿಯಾಯಿತು ಭಿನ್ನ


ಸಂತೈಸುವ ಮನಸು ಜೊತೆಯಾಗಲು ತಣಿಸು

ದೀಪವಾರುವ ಹೊತ್ತು ಆಗದಿರಲಿ ಕುತ್ತು

Sunday, June 4, 2023

ಸಖಿಯ ಭಾವ

ಬೃಮರ ರೂಪ ತಾಳಿರುವ

ಭ್ರಮೆಯು ಮನದಲಿ

ಮಿಂಚ ವೇಗ ಮೀರಿಹುದು

ಗುಡುಗಿ ಅಡಗಿ ಹೋಗಿಹುದು


ಧೃತಿಯ ಹುರುಪು ಇಲ್ಲದೆ

ಕೃತಿಯು ಜನ್ಮ ತಾಳದು

ಮಿತಿಯು ಮೀರಿ ಹೋಗದಿರೆ

ಭ್ರಾಂತಿ ಕುಡಿಯು ಚಂದವು


ಶಾಂತಿ ಮಂತ್ರ ಜಪಿಸಲು

ಕ್ರಾಂತಿ ತಂತ್ರ ಶಪಿಸಲು

ಸಖಿಯ ಭಾವ ಹೊಂದಲು

ಸತಿಯ ನೋವ ಹರಣವು

ಮನದ ಮದ

ಮನದ ಮದವೆ ಸೇರು ಸಾವಿನೂರ 

ಭಾವ ಬಂಧವ ಕಡಿದು ಸಾಗು ದೂರ

ಮನದ ಮನೆಯಲಿ ಜನಿಸು ಸ್ನೇಹಿ ಕುವರ

ಹಂಚಿ ಹನಿಸುತಲಿರು ನುಡಿದು ಪ್ರೀತಿ ಪ್ರವರ


ಜಗದಿ ಜನಿತ ಜೀವಕುಂಟು ಕರ್ಮ ದಾರ

ಹಿಡಿದು ಕುಣಿಸುನು ಮೇಲಿನ ಸೂತ್ರದಾರ

ನೀತಿ ನಾಯಕನಿವನು ತಿಳಿಸಿ ನೇರ

ಎಡವಿದರೆ ಜಡಿಯುವನು ಮೌನಿ ಧೀರ


ನಾನು ನನ್ನದು ಎಂಬ ಅಹಂಕಾರ

ಬಲಿತರದು ಒಡೆಯುವುದು ಪ್ರೀತಿ ಸಂಸಾರ

ನಾವು ನಮ್ಮವರೆಂಬ ಭಾವ ಸಾರ

ಅದನರಿತು ಸಾಗುವುದೇ ಜಾಣ್ಮೆ ವೀರ

ಹೆದರದಿರು ಫಲಗಳಿಗೆ

ಉಸಿರಿನಲೆ ಹಸಿರೊಡೆವ ಭಾವ ತೀರ

ಈಜುತಲಿ ದಡಸೇರು ಹೇಳಿ ಪ್ರವರ

ಊರಾಚೆ ಅಡಗಿರುವ ವಿಷಯ ಘೋರ

ಬಿಡಿಸುತಲಿ ಮಾತಾಡು ಪ್ರೀತಿ ಕುವರ


ಜೀವನದ ಯೋಚನೆಯ ಹೊರಲು ಭಾರ

ಅನುಭವದಿ ಬಿಡಿಸು ನೀ ಅರಿತು ಸಾರ

ಕೊಸರಾಡು ಬಾಳಿನ ತಿರುವು ಧೀರ

ಹೆದರದಿರು ಫಲಗಳಿಗೆ ಸಹಜ ವೀರ