Saturday, October 30, 2021

ಮತ್ತೆ ಬಾ ಪುನೀತನಾಗಿ

ದೇವರ ಪಾತ್ರವ ಮಾಡುತನೀತ

ದೇವರ ಕಡೆಗೆ ಸಾಗಿದನು

ಹಲವರ ಬಾಳಿನ ದೇವರೇ ಇವನು

ಕಣ್ಣಿಗೆ ಕಾಣದೆ ಚಲಿಸಿದನು


ಹುಟ್ಟಿದ ದಿನವನು ಹಬ್ಬವ ಮಾಡುತ

ಖುಷಿಯಲಿ ಕುಣಿಯುತ ರಂಜಿಸಿದ

ಗಾನಕೆ ನೀಡುತ ದನಿಯಲಿ ಹಾಡುತ

ಕೇಳುವ ಕಿವಿಗಳಿಗ್ ತಂಪೆರೆದ


ದೇಹವ ದಣಿಸುತ ಯೋಗವ ಮಾಡುತ

ವೃದ್ಧರನ್ನೆಲ್ಲಾ ಪಾಲಿಸಿದ

ಗೋವನು ಸಲಹುತ ಗೋವಿಂದನಾಗುತ

ದೀನ ಮಕ್ಕಳ ಸಲುಹಿದನು


ಕಲಿಕೆಗೆ ಒತ್ತನು ನೀಡುತ ಕಲಿಸುತ

ಅಕ್ಷರ ದಾಸೋಹಿ ಆಗಿಹನು

ಕಲಿಯುವ ಮಕ್ಕಳ ಬೆನ್ನನು ತಟ್ಟುತ

ಹೃದಯವಂತಿಗೆ ತುಂಬಿಹನು


ಇಲ್ಲಿ ಸಲ್ಲುವನು ಅಲ್ಲು ಸಲ್ಲುವನೆಂಬ

ಬಸವನ ಮಾತದು ಸತ್ಯವಾಗಿಹುದು

ಹೇಳದೆ ಕೇಳದೆ ಪೊರೆಯುವ ದೇವನಂತೆ

ನುಡಿಯದೆ ಸಲುಹಿದ ಹಲವರನು


ನಟನೆಯ ಮೂಲಕ ಗಾನದಿ ಸೆಳೆಯುತ

ಅಭಿಮಾನಿ ದೇವರ ಗಳಿಸಿದನು

ಹೊಸಬರ ಏಳಿಗೆ ಬಯಸುತ ರಂಗದಿ

ಸ್ನೇಹದಿಯೆಲ್ಲರ ಬೆಂಬಲಿಸಿದನು


ದೊಡ್ಮನೆ ಹಿರಿಮೆಯ ಸಾರುತ ಧರೆಯಲಿ

ಬೇಕಾದ ಹೊತ್ತಲೇ ಕಣ್ಮರೆಯಾಗಿಹನು

ಕೇವಲ ಕಣ್ಣಿಗೆ ಮಾತ್ರವೆ ಕಾಣದೆ 

ದೇವರೇ ತಾನೆಂದು ತಿಳಸಿದನು


ಮರಳಿಬಾರದೂರಿಗೆ ಸಾಗಲು ಭೌತಿಕವಾಗಿ

ಎಲ್ಲರ ಧ್ಯಾನದಿಂದ ಪುನೀತನಾದನು 

ಹಲವರನ್ನೆಲ್ಲಾ ಅನಾಥರ ಮಾಡುತ

ಚಿರಶಾಂತಿ ಸಿಗುವೆಡೆಗೆ ಕ್ರಮಿಸಿಹನು


ಗುರಿ ಮುಟ್ಟುವ ತನಕ,

ವಿಚಾರಿ

No comments:

Post a Comment