Wednesday, December 24, 2014

ನೀತಿ ಅರಿಯದ ಜೀವ

ಕೈಯಲ್ಲಿ ಆಗುವುದೇನಿದೆ
ಬಾಯಲ್ಲಿ ಬಡಾಯಿ ಕೊಚ್ಚಲು
ಉಣಬಾರದೇ ತಂಗಳಿನ ಕೂಳನು
ಮಾಡಲೊಂದು ಕೆಲಸವ ಅರಸುತಿರಲು

ಬೇರೆಯವರ ಜೀವನದಲಾದ ಘಟನೆ
ತಿಳಿಯಾಗದೆ ಉಳಿದಿರಲು ಎದುರಲಿ
ನೋಡಿ ಕಲಿಯಬೇಕು ಪಾಠವನು
ಸರಿದಾರಿಯ ತೀರಕೆ ಮುನ್ನುಗ್ಗಲು

ಮಾಡಲಾವ ಕೆಲಸವಾದರೇನು
ಹೊಟ್ಟೆಗೆ ಹಿಟ್ಠು ದೊರೆಯುವಂತಹ
ತಿಂಗಳಿಗೆ ಸಂಬಳವು ದೊರೆಯಲು
ತುಕಾಲಿ ಕಾರ್ಖಾನೆಯಾದರೂ ಸರಿ

ಕಾಲಿ ಕೂರುವ ಆಳಸಿಯ ಬದುಕಿಗಿಂತ
ಪಾಲಿಗೆ ಬಂದದ್ದು ಪಂಚಾಮೃತವೆಂದು
ತಿಳಿದು ಎತ್ತರಕೆ ಏರುವ ಮೊದಲೆ
ಉಪ್ಪರಿಗೆ ಸಿಕ್ಕಂತೆ ಮೆರೆಯಕೂಡದು

ಸಂದರ್ಭ ಸನ್ನಿವೇಶಕೆ ಸರಿಯಾಗಿ
ಮಾತಿನ ವರ್ತನೆಯು ತಿಳಿಯದಿರಲು
ತಾನೇ ಬುದ್ಧಿವಂತನೆಂಬ ಅಹಂಕಾರವೇ
ಗೂಸಾ ತಿನ್ನಲು ತಡೆಯಾಗದ ನಾಂದಿಯು

ಅನುಭವಿತ ಬದುಕಿನ ಜೀವಂತ ಸಾಕ್ಷಿಯನು
ಕಣ್ಣಾರೆ ಕಂಡರು ಕಣ್ತೆರದು ತಿಳಿಯದೆ
ಮೊಂಡುವಾದದಲಿ ಬಾವಿಯೊಳಗಿನ ಕಪ್ಪೆಯಂತೆ
ಬರಡಾಗುವುದು ನೀತಿ ಅರಿಯದ ಜೀವಿಗಳ ಜೀವನ

1 comment:

  1. ತಮ್ಮದೇ ಬದುಕಲೋ ಅಥವ ಸನಿಹದವರ ಪಾಡಲೋ ಘಟಿಸುವ ಕೆಲಸವಿಲ್ಲದ ದುರ್ದಿನಗಳಿಂದ ಬೇಗನೆ ಪಾಠ ಕಲಿಯಬೇಕು. ಅನುಭವಿಸುವ ಖಾಲಿತನದ ಘೋರತೆಯನ್ನು ಕಳೆದುಕೊಳ್ಳಬೇಕು.
    ಕಣ್ಣು ತೆರೆಸುವಂತಿದೆ ಕವನ.

    ReplyDelete