Tuesday, October 7, 2014

ಸುರಕ್ಷತೆಯ ಭಯ ಪ್ರಯಾಣಿಕರಿಗಿಲ್ಲ ಅಭಯ

ನಾವು ಪ್ರಯಾಣಿಸುವಾಗ ನಮ್ಮ ಪ್ರಯಾಣ ಎಷ್ಟು ಸುರಕ್ಷಿತವೆಂದು ಯೋಚಿಸಿದರೆ ಮನೆಯಿಂದ ಹೊರ ಹೋಗುವುದನ್ನು ವಾಹನಗಳಲ್ಲಿ ಬಿಟ್ಟು ನಡೆದುಕೊಂಡೆ ಹೋಗುವುದನ್ನು ರೂಡಿಸಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಸ್ವಂತ ವಾಹನವಾಗಲಿ, ಸರ್ಕಾರಿ ವಾಹನಗಳಾಗಲಿ, ಖಾಸಗಿ ವಾಹನಗಳಾಗಲಿ ಸಂಚಾರ ಸ್ತಂಭನ (Traffic Jam) ದಿಂದ ತಪ್ಪಿಸಿಕೊಳ್ಳಲಾಗಲಿಕ್ಕಿಲ್ಲ. ಇದು ಬೆಂಗಳೂರಿನಂತಹ ಮಹಾನಗರಿಯಲ್ಲಿ ಪ್ರತಿಕ್ಷಣ ಕಾಡುವ ಭಯ.

ಊರು ಬೆಳೆಯುತ್ತಿದೆ ಹಾಗೆ ವಾಹನ ಸಂಚಾರ ದಟ್ಟಣೆಯಾಗುತ್ತಿದೆ. ಎಲ್ಲಿ ನೋಡಿದರಲ್ಲಿ ಸ್ವಂತ ದ್ವಿಚಕ್ರ ಮತ್ತು ನಾಲ್ಕುಚಕ್ರ ವಾಹನಗಳ ಕಾರುಬಾರು. ನಾಲ್ಕುಚಕ್ರ ವಾಹನದಲ್ಲಂತು ಒಬ್ಬನಿಗಾಗಿ ಜನರಿಗೆ ಬೇಕಾಗುವಷ್ಟು ಜಾಗದ ವ್ಯಯ. ಇದರಿಂದಾಗಿಯೆ ಸಂಚಾರ ಸ್ತಂಭನ (Traffic Jam) ಹೆಚ್ಚಾಗಿರುವುದು ಮತ್ತು ಜಾಸ್ತಿಯಾಗುತ್ತಿರುವುದು. ಇವುಗಳಿಂದ ಅಪಘಾತಗಳು ಜಾಸ್ತಿಯಾಗುತ್ತಿದ್ದು ಆಸ್ಪತ್ರೆಗಳಲ್ಲಿ ಜಾಗವಿಲ್ಲದಂತಾಗುತ್ತಿದೆ.

ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸದಿರುವುದರಿಂದ, ಪೋಲಿಸರ ಕಣ್ಣು ತಪ್ಪಿಸಿ ಸಂಚಾರಿ ನೀತಿ ನಿಯಮಗಳನ್ನು ಗಾಳಿಗೆ ತೂರುವುವರಿಂದ, ಖಾಸಗಿ ಕಂಪನಿಗಳ ಕರೆದೊಯ್ಯುವ ವ್ಯವಸ್ಥೆಯಿಂದಾಗಿ, ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ನಿರ್ವಸುತ್ತಿದ್ದೇನೆ ಎನ್ನುವ ಕಾರಣಕ್ಕಾಗಿ, ಮೇಲಿನ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದು ದೊಡ್ಡ ಜನವೆಂದು ಅಂತಸ್ತನ್ನು ತೊರಿಸಲಿಚ್ಚೆಪಡುವ ಮೂರ್ಖರಿಂದಾಗಿ, ಕುಡಿದು ಚಾಲನೆ ಮಾಡುವುದರಿಂದಾಗಿ, ವಾಹನದಲ್ಲಿ ಅಥವಾ ಹಿಂಬದಿಯಲ್ಲಿ ಹುಡುಗಿಯನ್ನು ಕೂರಿಸಿಕೊಂಡು ಮತ್ತು ಹುಡುಗಿಯರನ್ನು ಆಕರ್ಷಿಸಲಿಕ್ಕೆಂದು ಅತಿವೇಗದಲ್ಲಿ ಚಾಲನೆ ಮಾಡುವ ಹುಂಬರಿಂದಾಗಿ ಸಂಚಾರ ಸ್ತಂಭನ, ಅಪಘಾತಗಳು ಮತ್ತು ಸಾವು ನೋವುಗಳು ಆಗುತ್ತಿರುವುದು ವಿಷಾದನೀಯ ಮತ್ತು ಭಯಕ್ಕೆ ಕಾರಣವಾಗುತ್ತಿರುವ ಕೆಲವು ನಿದರ್ಶನಗಳು.

ಹಾಗೆ ನಮ್ಮ ಬಿ.ಎಂ.ಟಿ.ಸಿ ಬಸ್ಸಿನ ಕೆಲವು ನಿಷ್ಕಾಳಜಿಯುತ ಚಾಲಕರಿಂದಲೂ ಮತ್ತು ಕೆಲವು ಬಿ.ಎಂ.ಟಿ.ಸಿ ವ್ಯವಸ್ಥಾಪಕ ಅಧಿಕಾರಿಗಳಿಂದಾಗಿಯೂ ಸಂಚಾರ ಭಯ ಹೆಚ್ಚುತ್ತಿದೆ. ಬಸ್ಸಿನ ಒಳಬದಿಯಲ್ಲಿ ಚಾಲಕರ ಆಜುಬಾಜಿನಲ್ಲಿ ಅಂಟಿಸಿರುವ ಸೂಚನಾ ಫಲಕವನ್ನು ನೀವು ಗಮನಿಸಿರಬಹುದು. ಅದೇನೆಂದರೆ "ವಾಹನ ಚಾಲನೆ ಮಾಡುವಾಗ ಚಾಲಕರನ್ನು ಮಾತನಾಡಿಸಬಾರದು" ಎಂದು. ಆದರೆ ಇಲ್ಲಿಯೆ ನೋಡಬಹುದು ನಮ್ಮ ಬಿ.ಎಂ.ಟಿ.ಸಿಯ ವ್ಯವಸ್ಥಾಪಕರ ಎಡವಟ್ಟುಗಳನ್ನು. ಚಾಲಕರೊಬ್ಬರನ್ನೆ ಇಟ್ಟು ಬಸ್ಸಿನ ಚಾಲನೆ ಮತ್ತು ನಿರ್ವಹಣೆಯನ್ನು ಮಾಡಿಸಿಕೊಂಡು, ಇಂತಿಷ್ಟೆ ಸಮಯದ ಮಿತಿಯಲ್ಲಿ ನಿರ್ದಿಷ್ಟ ಸ್ಥಳವನ್ನು ತಲುಪಬೇಕೆಂದು ಷರತ್ತನ್ನು ವಿಧಿಸಿ ಯರ್ರಾಬಿರ್ರಿ ಚಾಲನೆ ಮಾಡಲು ಪ್ರಚೋಧಿಸುತ್ತಿರುವುದನ್ನು ಕಾಣಬಹುದು.

ನಿರ್ವಾಹಕರಿಲ್ಲದಿರುವಾಗ ಹೀಗೆತಾನೆ ವಾಹನ ಚಾಲನೆ ಮಾಡುವಾಗ ಚಾಲಕರನ್ನು ಮಾತನಾಡಿಸದೇ ಇರಲಿಕ್ಕೆ ಸಾಧ್ಯ. ಅದಷ್ಟೆ ಅಲ್ಲದೆ ಚಾಲಕ ಮತ್ತು ನಿರ್ವಾಹಕನಾಗಿ ಒಬ್ಬನೆ ಕಾರ್ಯನಿರ್ವಹಿಸಿದರೆ ಅವರಿಗೆ ಹೆಚ್ಚಿನ ಸಂಬಳ ನೀಡುವುದಾಗಿ ಹೇಳಿ ಅಪಘಾತ ಮತ್ತು ಅವಗಡಗಳು ಸಂಭವಿಸುವುದಕ್ಕೆ ಪ್ರಚೋಧಿಸುತ್ತಿರುವುದು ಖಂಡನೀಯ. ಯಾಕೆಂದರೆ ಇಳಿಯುವ ಸ್ಥಳಕ್ಕಾಗಿ, ಟಿಕೇಟ್ ಗಾಗಿ, ಚಿಲ್ಲರೆ ಹಣವನ್ನು ತಿರುಗಿ ಪಡೆಯಲಿಕ್ಕಾಗಿ, ನಿಲ್ಲಿಸುವಿರಾ ಎಂದು ಕೇಳಲಿಕ್ಕಾಗಿ, ಹೋಗುವ ಪ್ರದೇಶದ ಮಾರ್ಗದ ಮಾಹಿತಿಗಾಗಿ ಚಾಲಕರನ್ನು ಮಾತನಾಡಿಸಲೇ ಬೇಕಾಗುತ್ತದೆ. ಹೀಗಿರುವಾಗ ಬಸ್ಸಿನ ಒಳಬದಿಯಲ್ಲಿರುವ ಫಲಕಕ್ಕೆ ಇನ್ನೆಲ್ಲಿಯ ಬೆಲೆ ಇರುತ್ತದೆ..? ಸಂಚಾರಿ ನಿಯಮವನ್ನು ಸರ್ಕಾರಿ ಅಧಿಕಾರಿಗಳೇ ಮುರಿದಿರುವಾಗ ಭಯ ಕಾಡಿಯೇ ಕಾಡುತ್ತದೆ. ಅದು ಅಲ್ಲದೆ ಇದು ಚಾಲಕರ ಕಣ್ತಪ್ಪಿಸಿ ಟಿಕೇಟ್ ರಹಿತ ಪ್ರಯಾಣಿಸುವವರಿಗೆ ಪ್ರಚೋಧನೆ ನೀಡಿ ಅನುವುಮಾಡಿಕೊಡುತ್ತದೆ. ನೀಡಿದ ಸಮಯದಲ್ಲಿ ನಿರ್ಧಿಷ್ಟ ಸ್ಥಳಗಳನ್ನು ತಲುಪದಿದ್ದರೆ ಅವರಿಗೆ ತೊಂದರೆ ನೀಡಿ ಕಿರಿಕಿರಿ ಮಾಡುವ ಮೇಲಾಧಿಕಾರಿಗಳು ಇದ್ದಾರೆ ಹಾಗೆ ದ್ವಿಪಾತ್ರ ಮಾಡಿಯೂ ತಡವಾಗಿ ಬಂದವರ ತುಟ್ಟಿಭತ್ಯೆಗೆ ಕತ್ತರಿ ಬೀಳುತ್ತದೆಯೆಂದು ದ್ವಿಪಾತ್ರ ಮಾಡಿದ ಚಾಲಕರನ್ನೆ ಕೇಳಿ ತಿಳಿದಿದ್ದೇನೆ.

ಬೆಳಕು ಚೆಲ್ಲಬೇಕಾದ ಸಂಚಾರಿ ಆರಕ್ಷಕರೆ ಕೆಲವೊಂದು ಬಾರಿ ನೀತಿ ನಿಯಮಗಳನ್ನು ಮುರಿದು ಚಲಿಸುವುದು ಕಂಡುಬರುತ್ತಿದೆ. ಇದು ಸಹ ಉಳಿದವರನ್ನು ಪ್ರಚೋಧಿಸುತ್ತದೆ. ಅದು ಅಲ್ಲದೆ ಆರಕ್ಷಕರ ಜೇಬಿನಲ್ಲಿ ಹಣವಿಲ್ಲದಿದ್ದಾಗ ಹೆಚ್ಚಿನದಾಗಿ ದ್ವಿಚಕ್ರ ವಾಹನಗಾರರನ್ನೆ ಹಿಡಿದು ಅದು ಸರಿ ಇಲ್ಲ ಇದು ಸರಿ ಇಲ್ಲವೆಂದು ಹೇಳಿ ರಸೀದಿ ನೀಡದೆ ಹಣ ಕಿತ್ತುಕೊಳ್ಳುವ ಆರಕ್ಷಕರಿಂದಾಗಿ ಪರವಾನಗಿ ಪುಸ್ತಕವನ್ನು ತರದೆ ಕದ್ದು ಸಂಚರಿಸುವವರಿಂದಲೂ ಕೆಲವೊಂದು ಅವಗಢಗಳು ಸಂಭವಿಸುತ್ತವೆ. ಹಾಗೆ ಗೌರವನ್ವಿತ ಆರಕ್ಷಕ ಇಲಾಖೆಯ ಮೇಲಿನ ಗೌರವ ಹಾಳಾಗುತ್ತಿರುವುದು ವಿಷಾದನೀಯ.

ಬಸ್ಸಿನಲ್ಲಿ ಹಾಕಿರುವ ಚಿಕ್ಕ ಫಲಕಕ್ಕೆ ಅದರದೆ ಆದ ಒಳಾರ್ಥವಿದೆ. "ವಾಹನ ಚಾಲನೆ ಮಾಡುವಾಗ ಚಾಲಕರನ್ನು ಮಾತನಾಡಿಸಬಾರದು" ಇದು ನಿಜವಾದ ಮಾತು. ಆದರೆ ಒಬ್ಬಿಬ್ಬರು ದ್ವಿಪಾತ್ರಿ ಚಾಲಕರನ್ನು ಮಾತನಾಡಿಸುವಾಗ ಇನ್ನುಳಿದ ಪ್ರಯಾಣಿಕರಿಗೆಲ್ಲಿರುತ್ತದೆ ಸುರಕ್ಷತೆಯ ಅಭಯ...? ಯಾಕೆಂದರೆ ಚಾಲಕರ ಗಮನ ಚಾಲನೆಯಿಂದ ಬೇರೆಡೆಗೆ ಹೋಗುತ್ತದೆ ಮತ್ತು ಇದರಿಂದ ಅಪಘಾತ ಸಂಭವಿಸಬಹುದು. ಅದು ಅಲ್ಲದೆ ವೇಗವಾಗಿ ಚಲಿಸುವ ಮತ್ತು ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಮುನ್ನುಗ್ಗುವ ವಾಹನಗಳಿಂದಾಗಿ ಸುರಕ್ಷತೆಯ ಭಯಕಾಡುವುದಂತು ನಿಜ.

5 comments:

  1. ಓಹ್ ಸೂಪರ್ ಭಾಗವತ್ ಜೀ..ಎಲ್ಲಾ ಅಂಶಗಳನ್ನು ಒಳಗೊಂಡ ಅರ್ಥಪೂರ್ಣ ಲೇಖನ..ಈ ರೀತಿಯ ಸಮಾಜದೊಳಿತಿನ ಮತ್ತು ಸಮಾಜಕ್ಕೆ ತಿಳಿಮಾತು ಹೇಳುವ ಲೇಖನಗಳು ನಿಮ್ಮಿಂದ ಇನ್ನೂ ಹೆಚ್ಚು ಹೆಚ್ಚು ಬರಲಿ...ಟ್ರಾಫಿಕ್ ಜಾಮ್ ಗೆ ಸಂಚಾರ ಸ್ತಂಬನದಂಥಹ ಹೊಸ ಹೊಸ ಕನ್ನಡ ಪದಗಳೂ ಹೆಚ್ಚು ಹೆಚ್ಚಾಗಿ ಬರಲಿ...

    ReplyDelete
  2. ವಾಸ್ತವಿಕ ಸ್ಥಿತಿಗೆ ಒಂದು ಶುಭ್ರ ಕನ್ನಡಿ. ನಾವೆಷ್ಟು ಬರೆದುಕೊಂಡರೂ ವಸ್ತುಸ್ಥಿತಿ ಬದಲಾಗಲು ಜನಗಳಿಂದಲೇ ಸಾಧ್ಯ

    ReplyDelete
  3. ಮೊದಲ ಬಹುಮಾನ 'ಸಂಚಾರ ಸ್ತಂಭನ' ಪದವನ್ನು toss ಮಾಡಿದ್ದಕ್ಕೆ.

    ಇನ್ನೂ ಕೆಲವು ಕಾರಣಗಳಿಲ್ಲಿವೆ:
    ಖಾಲೀ ಆಟೋಗಳ ನಿಧಾನ ಚಲನೆ
    ಕಲ ಬೈಕ್ ಹೈಕಳ ವ್ಹೀಲಿಂಗ್ ಹುಚ್ವು
    ಜನಪ್ರಿಯ ಏಕ ಚಾಲಕ ನಿರ್ವಾಹಕ ಬಿ.ಎಂ.ಟಿ.ಸಿ
    ರಸ್ತೆ ಅಗಲೀಕರಣಕ್ಕೆ ಅವಕಾಶವಿದ್ದರೂ ಭರ್ತಿ ನಿದ್ದೆಯಲ್ಲಿರುವ ಸರ್ಕಾರ
    ಅವೈಜ್ಞಾನಿಕ ರೂಟ್ ಹೊಂದಿರುವ ಮೆಟ್ರೋ
    ಹೀಗೆ...

    ReplyDelete
  4. ವಿನಾಯಕ್ ಮೊದಲು ನಿಮಗೆ ಅಭಿನಂದನೆಗಳು ಒಳ್ಳೆಯ ವಿಚಾರದ ಬಗ್ಗೆ ಬೆಳಕು ಚೆಲ್ಲಿದ್ದೇರ. ದೈನಂದಿನ ಪ್ರಯಾಣದ ಸಂಕಟ , ನಾವು ಮಾಡುವ ಸಾಮಾನ್ಯ ತಪ್ಪುಗಳು ಇವುಗಳ ವಿಶ್ಲೇಷಣೆ ಚೆನ್ನಾಗಿ ಮೂಡಿಬಂದಿದೆ . ಈ ಬಗ್ಗೆ ಯಾರು ಯಾಕೆ ವಿಚಾರ ಮಾಡುತ್ತಿಲ್ಲ ಎಂಬುದೇ ಸೊಜಿಗ. ಇನ್ನು ಮುಂದಾದರೂ ಎ ಬಗ್ಗೆ ಯೋಚಿಸಿ ಎಲ್ಲರು ಹೆಜ್ಜೆ ಇಟ್ಟಾಗ ಸಮಸ್ಯೆಗೆ ಪರಿಹಾರ ದೊರಕೀತು . ಇಲ್ಲದಿದ್ದಲ್ಲಿ ಇದು ಪ್ರತೀದಿನದ ರಾಮಾಯಣ ಆಗುವುದರಲ್ಲಿ ಸಂಶಯವಿಲ್ಲ

    ReplyDelete
  5. ಒಳ್ಳೆಯ ಲೇಖನ..
    ನಾವು ಜಾಗೃತಿಗೊಳ್ಳಬೇಕು...
    ಸಂಚಾರಿ ನಿಯಮಗಳನ್ನು ಪಾಲಿಸಬೇಕು...

    ReplyDelete