Monday, December 30, 2013

...ಬೆಳೆಯುತ್ತಿರುವ ಯುವಕ ಯುವತಿಯರು ಕೃಷಿ ತೊರೆಯತ್ತಿರಲು ಸರ್ಕಾರ ಮತ್ತು ರಾಜಕಾರಣವೇ ಮುಖ್ಯಕಾರಣವೆನಿಸುತ್ತಿದೆ!...

ಈ ಲೇಖನವು ಇದೇ ವರ್ಷದಲ್ಲಿ ಬರೆದ ನನ್ನ ಬ್ಲಾಗಿನ ೧೦೦ ನೇ ಬರಹವಾಗಿದೆ. ಶತಕದ ಸವಿಯನ್ನು ನಿನ್ನೊಂದಿಗೆ ಹಂಚಿಕೊಳ್ಳಲು ಹರುಷವಾಗುತ್ತಿದೆ.


"ಅನ್ನದಾತೋ ಸುಖೀ ಭವ" ಅನ್ನೊ ಮಾತು ಬರೆ ಪುಸ್ತಕದ ಬದನೆಕಾಯಿ ಆದಂತಿದೆ ಎನ್ನುವುದು ಇತ್ತೀಚಿನ ವರ್ತಮಾನದ ವದಂತಿ. "ದೇಶದ ಬೆನ್ನೆಲುಬೇ ಅನ್ನದಾತನಾದಂತಹ ರೈತ" ಎಂಬ ಮಾತು ನುಡಿಯಲಿಕ್ಕಷ್ಟೇ ಕೇಳಿಬರುತ್ತಿದೆಯೆ ಹೊರತು ಅದು ಆಚರಣೆಯಲ್ಲಿ ಅನುಸರಿತವಾಗಿಲ್ಲವೆಂಬುದಂತು ಸತ್ಯವಾಗುತ್ತಿದೆ.

ರೈತಾಬಿ ಜನರೆಲ್ಲ ಹಸಿವಿನಿಂದ ಬೆಂದು ದೇಶಕ್ಕೆ ಅನ್ನ ನೀಡುತ್ತಿದ್ದರೆ ಸುಖದ ಸುಪ್ಪತ್ತಿಕೆಯಲ್ಲಿ ಮೆರೆದು ಸಂವಿದಾನ ಅನ್ನೊ ಹೆಸರಿನಲ್ಲಿ ಆಡಳಿತನೆಡೆಸುತ್ತಿರುವ ಕೆಲವು ಪಟಿಂಗರುಗಳು ಮನಸಿಗೆ ಬಂದಂತೆ ಮಾತನಾಡುತ್ತ, ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡುತ್ತ ಬಡ ಜನರಿಗೆ ಜನಾರ್ದನನಾದಂತೆ ಬಿಂಬಿಸಿಕೊಳ್ಳುತ್ತಿರುವುದು ಅಸಹ್ಯವೆನಿಸುತ್ತಿದೆ.

ರೈತ ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆಯಿಲ್ಲ, ಬೆಳೆಗೆ ತಕ್ಕದಾದ ಬೆಲೆಯಿಲ್ಲ. ಬರುವ ಹಣಕ್ಕೆ ಮಾತ್ರ ಮರೆಯದೆ ವಿಧಿಸುವ ತೆರಿಗೆ ಮಾತ್ರ ತಪ್ಪಿಲ್ಲ. ಬಡಜನರಿಗೆ ಹೊರೆಯಾಗುವಂತೆ ಸ್ವಂತಮನೆ ಮೇಲು ವಿಧಿಸುವ ತೆರಿಗೆ, ಆ ಸುಂಕ, ಈ ಸುಂಕ ಎಂದು ಬಡವರ ತ್ರಾಣ ಹೀರುವ ಕಾಯಿದೆ ಕಾನುನನ್ನು ತಂದು ಸಾಲವೆಂಬ ಸಾಗರಕ್ಕೆ ತಳ್ಳುವ ಕೆಲಸವಂತು ಬರುವ ಪ್ರತಿಯೊಂದು ಸರ್ಕಾರದಿಂದಲು ಸಮರ್ಪಕವಾಗಿ ನಡೆಯುತ್ತಿದೆ. ಕೃಷಿಕ ಎಂದಾಕ್ಷಣಕ್ಕೆ ಅವರನ್ನು ತಿರಸ್ಕಾರ ಭಾವದಿಂದ ನೋಡುವ ನಮ್ಮ ಜನರು ಸಹ ತಾರತಮ್ಯ ಎಸಗುತ್ತಿದ್ದಾರೆ. ಕೃಷಿಯನ್ನು ಮಾಡಿ ಉತ್ತಮ ಫಸಲನು ಪಡೆಯಲು ಬೇಕಾಗುವ ನೀರಾವರಿಗೆ ವಿದ್ಯುತ್ ಅನ್ನು ಸರಿಯಾಗಿ ನೀಡದೆ ಕೋತವೆನ್ನುತ್ತ ತ್ರಾಸು ಕೊಡುವ ಅಧಿಸೂಚನೆಗಳು ರೈತರನ್ನು ಹಿಂಡಿ ಹೀರುತ್ತಿವೆ. ಇವುಗಳಿಗೆ ಕಾರಣ ವ್ಯತಿರಿಕ್ತವಾಗಿ ಮತ್ತು ಅನಾವಶ್ಯಕವಾಗಿ ವಿಧ್ಯುತ್ ದೀಪ ಉರಿಸಿ ದುಂದುವೆಚ್ಚ ಮಾಡುತ್ತಿರುವ ಹೆಚ್ಚಿನವರು ಪ್ರಜ್ನಾವಂತರುಗಳಾಗಿದ್ದಾರೆ.

ಬಾಯಲ್ಲಿ ಹೊಗಳಿ, ಅವರ ಹೆಸರಿನಲ್ಲಿಯೆ ಪ್ರಮಾಣವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರಿದ ಮೇಲೆ ಅಸಡ್ಡೆಯಿಂದ ಅವರನ್ನೆ ನೀಚತನದಿ ಕಾಣುತ್ತಿದ್ದಾರೆ. ಕೆಲವು ಪುಡಾರಿ ರಾಜಕಾರಣಿಗಳು ಕಷ್ಟದಲ್ಲಿರುವ ಬಡ ರೈತನ ಕೈ ಹಿಡಿಯದೆ, ಜೋಡಿಸಿರುವ ಕೈಗಳನ್ನು ಪರಿಗಣಿಸದೆ ಕಿವುಡ ಮತ್ತು ಕುರುಡರಂತೆ ವರ್ತಿಸುತ್ತ, ಗಮನ ಹರಿಸದೆ ಅವರ ಪ್ರಶ್ನೆಗಳಿಗೆ ಉತ್ತರಿಸದೆ ಮೂಕರಾಗಿ ಕುಳಿತರೆ ಯಾವತ್ತು ಅವರು ಸುಮ್ಮನಿರಲು ಸಾಧ್ಯವಿರುವುದಿಲ್ಲ. ಹೋರಾಡುತ್ತಾರೆ ಅಥವಾ ಇದಲ್ಲದಿದ್ದರೆ ಮತ್ತೊಂದು ಎನ್ನುತ್ತ ಬೇರೆಡೆಗೆ ಸಾಗುವ ವಲಸಿಗರಾಗುತ್ತಾರೆ.

ಆಡಳಿತದಲ್ಲಿರುವಾಗ ಬರೆ ಪಟ್ಟಣ ಮತ್ತು ವಿದ್ಯಾವಂತರತ್ತ ಗಮನ ಹರಿಸಿ ಭೂಲೋಕ ಸ್ವರ್ಗ ಮಾಡುತ್ತೇನೆ ಎನ್ನುತ್ತಾರೆಯೆ ಹೊರತು ಕೃಷಿಕರತ್ತ ನೋಡುವುದು ಇಲ್ಲ. ಆದರೆ ಅದೇ ವಿಪಕ್ಷದಲಿ ಕುಳಿತಾಗ ರೈತರ ಪರ ಧ್ವನಿ ಎತ್ತುತ್ತ ಚುಣಾವಣಾ ದೃಷ್ಟಿಕೋನವಿಟ್ಟುಕೊಂಡು ಹೋರಾಡುವುದು. ಕಲಾಪಗಳಲ್ಲಿ ಮಾತನಾಡಿ ಪ್ರಸ್ತುತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೇ ಕೂಗಾಡಿ, ಜಗಳ ಮಾಡಿ ಸಮಯ ವ್ಯರ್ಥಮಾಡುತ್ತಾರೆಯೆ ಹೊರತು ಅದೇ ಸಮಯವನ್ನು ಸದುಪಯೋಗ ಪಡಿಸಿಕೊಂಡು ಕೃಷಿಕರ, ರೈತರ ಉದ್ಧಾರಕ್ಕೆ ಮಾರ್ಗೊಪಾಯ ಕಂಡುಕೊಳ್ಳುತ್ತಿಲ್ಲ.

ಎಷ್ಟೇ ಮೈ ಬಗ್ಗಿಸಿ ದುಡಿದರು ದೇಶದ ಜನರಿಗಾಗಿ ಧಾನ್ಯ ಬೆಳೆದರು ತಕ್ಕದಾದ ಬೆಲೆ ದೊರೆಯದೆ ಪಟ್ಟ ಕಷ್ಟಕ್ಕೆ ಮೌಲ್ಯ ಸಿಗದಿರುವ ಪರಿಸ್ಥಿತಿ ತಲೆದೋರಿರುವುದು ಖಂಡನೀಯ. ದುಡಿಯಲು ಬಾಗುವ ಬೆನ್ನನ್ನು ನೆಟ್ಟಗೆ ಮಾಡಲು ಬಿಡದೆ ಕೊಳಕು ರಾಜಕಾರಣದ ಎದುರು ಬಾಗಿಕೊಂಡೆ ಇರುವಂತೆ ಮಾಡುತ್ತಿರುವ ನಯವಂಚಕತನ ಇಂದಿನ ವರ್ತಮಾನದ ರಾಜಕೀಯ. ಇಂತಹ ಹೊಲಸು ಸನ್ನಿವೇಷವನ್ನು ಸೃಷ್ಟಿಸಿರುವುದು ನಮ್ಮ ಜನತೆ ತಾನೆ...?

ಜನರಿಂದ ಜನರಿಗಾಗಿ ನಡೆಸುವ ಆಡಳಿತವೆ ನಮ್ಮ ಈ ಪ್ರಜಾಪ್ರಭುತ್ವವನ್ನು ಆಳುತ್ತಿರುವ ಸರ್ಕಾರ. ಯಾವುದೇ ಸರ್ಕಾರ ಆಡಳಿತಕ್ಕೆ ಆರಿಸಿ ಬಂದಿದೆಯೆಂದರೆ ಅದು ನಮ್ಮ ದೇಶದ ಬೆನ್ನಲುಬಿಂದವೆನ್ನುವುದನ್ನು ಮರೆತಿರುವಂತಿದೆ ನಮ್ಮ ರಾಜಕಾರಣಿಗಳು. ಏಕೆಂದರೆ ಚಲಾವಣೆಯಾಗುವ ಮತಗಳಲ್ಲಿ ೯೦ ರಷ್ಟು ಮತ ರೈತಾಬಿ ಜನರಿಂದಲೆ ಎನ್ನುವುದನ್ನು ಮರೆಯುವಂತಿಲ್ಲ. ಕೆಲಸಕ್ಕೆಂದು ಬೇರೆಡೆಗೆ ಹೋಗಿರುವವರು ಮರಳಿ ಓಟು ಹಾಕುವ ಜವಾಬ್ಧಾರಿಯನ್ನು ಮರೆತಿದ್ದಾರೆ. ಹೀಗಿರುವಾಗ ಅಂತಹ ಮಹಾ ದಾನಿಗಳನ್ನೆ ಕಷ್ಟಕ್ಕೆ ನೂಕುವ ಪ್ರಮೇಯ ನಡೆಯುತ್ತಿರುವುದು ಪ್ರತಿಭಟನೆಗೆ ನಾಂದಿಯಾಗುತ್ತಿದೆ.

ಜೀವನ ಪೂರ್ತಿ ದುಡಿದರು ಜೀವನಾವಷ್ಯಕ ಮಸ್ತುಗಳನ್ನು ಪಡೆಯಲಾಗದಂತಹ ದುಸ್ಥಿತಿಯಲ್ಲಿ ಬೇರೆಯ ಸಭೆ ಸಮಾರಂಭಗಳಲ್ಲಿ ಉಪಸ್ಥಿತರಾದರೆ ಅವರನ್ನು ಅವಮಾನಿಸುವುದು ಮತ್ತು ಹಿಯಾಳಿಸುವುದು ನಡೆಯುತ್ತಿದೆ. ಅನ್ನದಾತರೊಂದಿಗೆ ಈ ರೀತಿಯಾಗಿ ವರ್ತಿಸುವುದರಿಂದ ಅವರಲ್ಲಿ ಸಂಕುಚಿತ ಭಾವನೆಯನ್ನು ಮೂಡಿಸಿ ಅವರ ಚಿತ್ತವನ್ನು ಬೇರೆಡೆಗೆ ತಿರುಗಿಸುವಂತೆ ಆಗುತ್ತಿರುವುದು ಎಲ್ಲ ತಿಳಿದ ವಿದ್ಯಾವಂತರೆಂಬ ಹಣೆಪಟ್ಟಿ ಧರಿಸಿದವರಿಂದಲೆ ಆಗಿದೆ. ಅವರನ್ನು ಕೀಳಾಗಿ ಕಾಣುವುದರಿಂದ  ಹೂಳುವುದರಲ್ಲಿ ಉದಾಸೀನತೆ ತೋರುತ್ತಿರುವುದು ಸಹಜವಾಗಿ ಕಾಣಸಿಗುತ್ತದೆ.

ಇಂತಹ ಕಾರಣಗಳಿಂದಲೆ ಇವತ್ತಿನ ರೈತ ಕುಟುಂಬದ ಯುವಕ ಯುವತಿಯರು ಸಹ ಪಟ್ಟಣದತ್ತ ಮುಖಮಾಡಿ ಕಂಪನಿ ಕೆಲಸದವರಾಗುತ್ತಿರುವುದು. ಇಂತಹ ತಾರತಮ್ಯ ಧೋರಣೆಯಿಂದಾಗಿಯೆ ಬೇಸತ್ತು ನೌಕರಿಯ ಹಿಂದೆ ಬಿದ್ದಿರುವ ಜಮೀನ್ದಾರ ಕುಟುಂಬದವರು ಸಹ ಕೃಷಿಯನ್ನು ತೊರೆಯುತ್ತಿರುವುದರಿಂದಲೆ ನಿರುಧ್ಯೋಗವೆಂಬ ಪಿಡುಗು ದಿನದಿಂದ ದಿನಕ್ಕೆ ಹೆಚ್ಛುತ್ತಿರುವುದು. ಇಂತಹ ಕೆಟ್ಟ ವರ್ತನೆಗಳು ಕೃಷಿಕ ವೃತ್ತಿಯನ್ನೆ ನಾಶಮಾಡುತ್ತಿದೆ. ಸರ್ಕಾರದ ಜನ ವಿರೋಧಿ ನೀತಿ ಮತ್ತು ರಾಜಕಾರಣಿಗಳ ಪೊಳ್ಳು ಭರವಸೆಗಳೇ ಇಂದಿನ ಈ ಪರಿಸ್ಥಿತಿಗೆ ಮುಖ್ಯ ಕಾರಣವಾಗಿದೆ. ಬಡವ ಬಡವನಾಗಿಯೇ ದುಡಿಯಬೇಕು ಶ್ರೀಮಂತ ಶ್ರೀಮಂತನಾಗಿಯೇ ಮೆರೆಯಬೇಕು ಎಂಬಂತಹ ತಾಟಸ್ಥ್ಯ- ನೀತಿಯಿಂದಾಗಿ ಇವತ್ತಿನ ನಮ್ಮ ಯುವ ಜನತೆಯು ಕೃಷಿಯನ್ನು ತೊರೆದು ಐಷಾರಾಮಿ ಬದುಕಿನತ್ತ ವಲಸೆ ಹೋಗುತ್ತಿರುವುದು.

ಆಕಾಂಕ್ಷಿಗಳಾಗಿ ಬೆಳೆಯುತ್ತಿರುವ ರೈತಾಭಿ ಜನರು ಸಹ ನಾಟಿ ಕೆಲಸ ಬಿಟ್ಟು ಪಟ್ಟಣ ಸೇರಿದರೆ ಉಣ್ಣಲು ತಿನ್ನಲು ಹಾಹಾಕಾರವೇಳುವುದಂತು ಪಕ್ಕಾ. ಇದನ್ನು ತಡೆಗಟ್ಟುವತ್ತ ಲಕ್ಷ್ಯಕೊಟ್ಟು ಅವರನ್ನು ಹಿಯಾಳಿಸುವುದನ್ನು ಬಿಟ್ಟು, ಅವರಿಗೆ ಬೇಕಾಗುವ ಜೀವನಾವಶ್ಯಕತೆಗಳನ್ನು ಪೂರೈಸಿಕೊಳ್ಳುವಂತೆ ಬೆಳೆಗೆ ತಕ್ಕ ಬೆಲೆ ಮತ್ತು ಮಾರುಕಟ್ಟೆ ಒದಗಿಸಿಕೊಟ್ಟು, ಅವರು ಎಲ್ಲಿಗೆ  ಹೋದರು ಸಮಾನ ಗೌರವ ನೀಡಿ ಎಲ್ಲರು ಒಂದೆ ಎಂಬ ಭಾವನೆಯನ್ನು ಕೆರಳಿಸಬೇಕಾಗಿದೆ. ಇನ್ನಾದರು ಬನ್ನಿ ಬಂಧುಗಳೆ ದುಷ್ಟರಾಜಕಾರಣವನ್ನು ಹೋಗಲಾಡಿಸೋಣ. ಆತ್ಮೀಯ ವಿದ್ಯಾವಂತ ಸ್ನೇಹಿತರೆ ಆಳಾಗಿ ದುಡಿಯುವವನನ್ನು ತುಚ್ಛವಾಗಿ ಕಾಣುವುದನ್ನು ಬಿಟ್ಟು ಅವರನ್ನು ನಮ್ಮಂತೆಯೆ ಎಂದು ಸಮಾನವಾಗಿ ನೋಡಿ, ಅವರೊಂದಿಗೆ ಬೆರೆತು ಕೃಷಿಕರನ್ನು ಪ್ರೋತ್ಸಾಹಿಸೋಣ. ನಿರ್ಣಾಮ ಮಾಡುವ ದುಷ್ಠತೆಯ ಮೇಲೆ ಹೊಸದಾದ ಸದ್ಭಾವನೆಯ ಸಮಾನತಾ ಸೌಧವನ್ನು ನಿರ್ಮಿಸೋಣ. ವಿಚಾರಮಾಡಿ, ಅವಲೋಕಿಸಿ, ಮತ ಚಲಾಯಿಸಿ ಉತ್ತಮರ ಕೈಯಲ್ಲಿ ಅಧಿಕಾರವಿತ್ತರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ.

6 comments:

  1. ವಾಸ್ತವದ ಅನಾವರಣವನ್ನು ಮುಚ್ಚುಮರೆಯಿಲ್ಲದೆ ಹೇಳಿದ್ದೀರಿ.

    ReplyDelete
  2. ನೀನು ಪೇಪರ್ ಅಲ್ಲಿ ಎಂತಕೆ ಬರುಲಾಗ್ದೋ

    ReplyDelete
  3. ನಿಮ್ಮ ಬ್ಲಾಗಿನ ೧೦೦ ನೇ ಬರಹಕ್ಕೆ ನಮ್ಮ ಶುಭಾಷಯಗಳು. ಇನ್ನೂ ಸರಸ್ವತಿ ನಿಮ್ಮ ಲೇಖನಿಯ ಮೂಲಕ ಭೋರ್ಗೆರೆಯಲಿ. ಕೃಷಿ ಸಂಬಂಧಿ ಒಳ್ಳೆಯ ಲೇಖನವಿದು.

    ReplyDelete