Saturday, October 6, 2012

...ನಂಬಿಕೆಯಲ್ಲಿ ವೈಮನಸ್ಸು ಮೂಡಿದಾಗ...


ನಂಬಿಕೆಯಲ್ಲಿ ವೈಮನಸ್ಸು ಮೂಡಲು ರಮಿಸುವ ಸಂಬಂಧಗಳು, ಕಾಣದ ಕಾರಣಕ್ಕೆ ಸಿಲುಕಿ ಮುರಿದು ಬೀಳುತ್ತವೆ. ನಂಬಿಕೆಯನ್ನ ಗಳಿಸುವುದು ತುಂಬಾ ಕಷ್ಟ ಎನ್ನುವುದು ಸರ್ವೇ ಸಾಮಾನ್ಯವಾಗಿ ಎಲ್ಲರಿಗು ತಿಳಿದಿಹ ವಿಷಯ ಆದರೆ ಗಳಿಸಿಹ ನಂಬಿಕೆಯನ್ನ ಉಳಿಸಿಕೊಳ್ಳುವುದು ದೊಡ್ಡ ಸಾಧನೆಯೇ ಸರಿ. ನಂಬಿಕಸ್ತ ಜನರು ತಿಳಿದಿಹ ಹೊರನೋಟವನ್ನು ಗಳಿಸಿಹ ಮನುಜರು ಅದೇ ರೀತಿಯಲ್ಲಿ ವರ್ತಿಸುವುದನ್ನು ಬಿಟ್ಟು ಸಲ್ಪ ಬದಲಾದ ರೀತಿಯಲ್ಲಿ ಭಾವನೆಯನ್ನ ವ್ಯಕ್ತಪಡಿಸಿದರೆ ಇರುವ ನಂಬಿಕೆಗೆ ಘಾಸಿ ಮಾಡಿದಂತೆ ಆಗುವುದಂತು ಖಂಡಿತ. ಅವನು ಅದೇ ರೀತಿಯಲ್ಲಿ ಕೊನೆತನಕ ಮುನ್ನಡೆಯ ಬೇಕು ಇಲ್ಲವಾದಲ್ಲಿ ಗಳಿಸಿದ ನಂಬಿಕೆ ಮುರಿದು ಬೀಳುವಲ್ಲಿ ಮೇಲುಗೈ ಸಾಧಿಸುತ್ತದೆ. ಇದರಿಂದಾಗಿ ನಂಬಿಕೆಯಲ್ಲಿ ವೈಮನಸ್ಸು ಮೂಡಿ ನಡುವಿನ ಸಂಬಂಧಗಳು ಹಾಳಾಗುವ ಸಾಧ್ಯತೆಯೇ ಜಾಸ್ತಿ. ವ್ಯಕ್ತಿಯಲ್ಲಾಗುವ ಸಣ್ಣ ಸಣ್ಣ ಬದಲಾವಣೆಯು ಸಹ ಬೇಸರಕ್ಕೆ, ವೈಮನಸ್ಸಿಗೆ, ವೈಷಮ್ಯಕ್ಕೆ ಕಾರಣವಾಗುತ್ತದೆ. ಅರ್ಥಮಾಡಿಕೊಳ್ಳದ ಮನಸ್ಸಾಗಿದ್ದಲ್ಲಿ ಬಿರುಕು ಮೂಡಿದ ಸಂಬಂಧವು ಬಿರುಕಾಗೆ ಇರುತ್ತದೆ ಅದಕ್ಕೆ ಸಮರ್ಥನೆಯಾಗಲಿ, ಕ್ಷಮಾಪಣೆಯಾಗಲಿ, ಸತ್ಯದ ಮಾತಾಗಲಿ ಬಿರುಕನ್ನು ಮುಚ್ಚಿ ಸಂಬಂಧ ಜೋಡಿಸುವ ಮೇಣವಾಗಿ ಮಾರ್ಪದುವುದಿಲ್ಲ ಅಥವಾ ನಂಬಿಕೆಯಲಿ ಮನಸ್ಸಿಗಾದ ಘಾಸಿಯನ್ನು ದೂರಾಗಿಸದು.

ನಂಬಿಕೆಯಲ್ಲಿ ವೈಮನಸ್ಸು ಹೇಗೆ ಮೂಡುತ್ತದೆ ಎನ್ನುವುದನ್ನು ತಿಳಿಯಲು ಪರೀಕ್ಷೆಗೊಳಪಡಿಸಿದ ಸ್ವಂತ ಅನುಭವ, ನಂಬಿಕೆಗಳಿಸಿ ಮುರಿದು ಹೋದ ಕೆಲವೊಂದು ನಿದರ್ಶನಗಳನ್ನ ನಿಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಇನ್ನು ಕೆಲವು ಕೇಳಿ & ನೋಡಿ ತಿಳಿದದ್ದು. ಇದನ್ನ ಸಾಕರಗೊಳಿಸಲು ಸಹಕರಿಸಿದ ನನ್ನ ಸ್ನೇಹಿತರಿಗೂ & ಸಂಬಂಧಿಗಳಿಗೂ ನನ್ನ ಕೃತಜ್ನತೆಯನ್ನು ಸಲ್ಲಿಸುತ್ತೇನೆ.  ಪರಿವೀಕ್ಷಣೆಯ ಅಂಕಣ ಮುಂಚೂಣಿಯಲ್ಲಿರುವ ಅಂತರ್ಜಾಲದ ಮೂಲಕ ಆಗುವಂತಹ ಗೆಳೆತನ, ಸಂಬಂಧಗಳ ಮೇಲೆ ಬೆಳಕು ಚೆಲ್ಲುತ್ತದೆ. ಇದರಿಂದಾಗಿ ಕೆಲವು ಸ್ನೇಹಿತ, ಸ್ನೇಹಿತೆಯರ ಬೇಸರಕ್ಕೆ, ವೈಮನಸ್ಸಿಗೆ ಗುರಿಯಗಿರುವುದಕ್ಕೆ ವಿಷಾಧಿಸುತ್ತ ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ & ಅರ್ಥೈಸಿಕೊಂಡವರನ್ನ ಅಭಿನಂದಿಸುತ್ತೇನೆ.

ಗಳಿಸಿದ ಗೆಳೆತನದಲ್ಲಿ ಮಾಡುವಂತಹ ಪರಿವೀಕ್ಷಣೆಯು ನಂಬಿಕೆಗೆ ದ್ರೋಹ ಬಗೆದಂತೆ & ಆಟ ಆಡಿದಂತೆ ಆಗುತ್ತದೆ ಎನ್ನುವುದು ಕೆಲವರ ಅಭಿಪ್ರಾಯ. ಮಾಡಿರ್ತಕ್ಕಂತಹ ಪರಿವೀಕ್ಷಣೆ ಮನಸಿಗೆ ನೋವು ನೀಡಿದೆ ಆದರೆ  ನೋವು ಸಹ ಒಂದೊಳ್ಳೆಯ ಪಾಠ ಕಲಿಸಿದೆ &  ಅಂಕಣ ಬರೆಯಲಿಕ್ಕೆ ಸ್ಪೂರ್ತಿಯಾಗಿದೆ ಎನ್ನುವುದು ಸಮಾದಾನದ ಸಂಗತಿ. ಕೆಲವು ನಿದರ್ಶನಗಳತ್ತ ಸುತ್ತಿ ಬರೋಣ.

ಒಬ್ಬ ಹುಡುಗ ಎಲ್ಲರಿಂದಲೂ ಗೌರವಿಸಲ್ಪಟ್ಟು ಎಲ್ಲರ ಚಿತ್ತವನ್ನು ಚಟುವಟಿಕೆಯತ್ತ ಸೆಳೆದು ನಾಯಕನಾಗುತ್ತಾನೆ. ಆದರೆ  ನಾಯಕ ಒಂದು ದಿನ ಬೇರೊಂದು ಹುಡುಗಿಗೆ ಮನಸೋತು ತನ್ನ ಮನಸಿನ ಭಾವನೆಯನ್ನು ಹೇಳುತ್ತಾನೆ. ಆಗ ಆಕೆ ಅದನ್ನು ತಿರಸ್ಕರಿಸಿ ನುಡಿಯುತ್ತಾಳೆ. ನೀನೊಬ್ಬ ಒಳ್ಳೆಯ ಹುಡುಗ ಆದರೆ ನೀನು  ರೀತಿಯಾಗಿ ವರ್ತಿಸುವುದು ಸಮಂಜಸವಲ್ಲ ಯಾಕೆಂದರೆ ನಿನ್ನನ್ನು ನಾಯಕನಾಗಿ ಗೌರವಿಸುತ್ತೇನೆಯೆ ಹೊರತು ಸಂಗಾತಿಯಾಗಲ್ಲ, ಅಲ್ಲದೆ ನೀನು ಅಂತಹ ಸೆಳೆತಕ್ಕೆ ಒಳಪಟ್ಟು ಪ್ರೇಮಾರ್ಥಿಯಾಗಿದ್ದರೆ ನನ್ನ ಹೆತ್ತವರನ್ನು ಸಂಪರ್ಕಿಸಿ ವರಿಸಲು ಮುಂದಾಗುತ್ತಿದ್ದೆ ಆದರೆ ನಿನ್ನ  ರೀತಿಯ ವರ್ತನೆಯಿಂದ ನಿನ್ನ ಮೇಲಿದ್ದ ಗೌರವಕ್ಕೆ ಧಕ್ಕೆಯಾಗಿದೆಯೇ ಹೊರತು ನಿನ್ನ ವರಿಸಲು ಮನಸಾಗಲಿಲ್ಲ ಎಂದು ಉತ್ತರಿಸುತ್ತಾಳೆ. ಇದರಿಂದಾಗಿ  ನಾಯಕ ಗಳಿಸಿದ ನಂಬಿಕೆಗೆ ಅವಳ ಹತ್ತಿರ ಬೆಲೆ ಇಲ್ಲದಂತಾಗುತ್ತದೆ ಮತ್ತು ನಾಯಕನ ಮೇಲಿರುವ ನಂಬಿಕೆ ದೂರಾಗಿ ಬೇಸರಕ್ಕೆ ಕಾರಣವಾಗುತ್ತದೆ. ಅಲ್ಲಿ ಅವಳ ನಂಬಿಕೆಗೆ ನಾಯಕನಿಂದಲೇ ಚ್ಯುತಿಬಂದು, ಮಾಡಿದ ನಿವೇದನೆಯು ಮನಸಿಗೆ ಹಿಡಿಸದೆ ನಂಬಿಕೆ & ಗೌರವಕ್ಕೆ ಆದಂತಹ ಘಾಸಿಯ ಚಿತ್ರಣವಿಲ್ಲಿ ಮೂಡುತ್ತದೆ.

ಇದೆ ಅಂತರ್ಜಾಲದಲ್ಲಿ ಆದಂತಹ ಪರಿಚಯ ಸ್ನೇಹವಾಗಿ ಪರಸ್ಪರರು ಭೇಟಿಯಾಗಿ ಏನೋ ಹೊಸತನಕ್ಕೆ ಒಂದು ನಾಂದಿ ಹಾಡುತ್ತಾರೆ. ಇದೆ ರೀತಿಯಾಗಿ ಮುಂದುವರಿಯುತ್ತಿರುವಾಗ ಒಬ್ಬ ಸ್ನೇಹಿತ ತನ್ನ ಕೆಲಸದಲ್ಲಿ ಬಿಡುವಿಲ್ಲದೆ ಕರೆ ಮಾಡಿದ ಇನ್ನೊಬ್ಬ ಸ್ನೇಹಿತನಿಗೆ ಉತ್ತರಿಸದೆ ಸುಮ್ಮನಿರುತ್ತಾನೆ. ಇದೆ ರೀತಿ - ಬಾರಿ ಪುನರಾವರ್ತಿತವಾದಾಗ ಅವನ ಮೇಲಿದ್ದ ಗೌರವ, ನಂಬಿಕೆ ಕಡಿಮೆಯಾಗಿ ಗೆಳೆತನದಲ್ಲಿ ಬಿರುಕು ಮೂಡಿ ಅನ್ಯೂನ್ಯತೆ ಮಾಯವಾಗಿ ಬದಲಾವಣೆಗೆ ಪೂರ್ಣವಿರಾಮ ಬೀಳುತ್ತದೆ ಮತ್ತು ಬರೆ ಪರಿಚಯವಷ್ಟೆ ಉಳಿದಿರುತ್ತದೆ.

ಪರಿಚತರಾದ ಜೀವಿಗಳು ಇನ್ನು ಹೆಚ್ಚಿನ ರೀತಿಯಲ್ಲಿ ಮಾತನಾಡುತ್ತ ದೂರವಾಣಿ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡು ಭೇಟಿಯಾಗುತ್ತಾರೆ. ಭೇಟಿಯಾದ ಕೆಲವೇ ದಿನಗಳಲ್ಲಿ  ಹುಡುಗ ಹುಡುಗಿಯನ್ನ ಒಡಾಡಲು, ಸುತ್ತಾಡಲು ಆಮಂತ್ರಿಸುತ್ತಾನೆ. ಆಗ ಅವಳು ಯೋಚಿಸುತ್ತಾಳೆ, ಅಷ್ಟಾಗಿ ಪರಿಚಯವಿರದ ಹುಡುಗನ ಜೊತೆಗೇಕೆ ಒಡಾಡಬೇಕು ಎಂದು ಸಹಜವಾಗಿಯೆ ತಿರಸ್ಕರಿಸಿದರೂ ಹಿಂದೊಂದು ಕಟುವಾದ ಕಾರಣವಿರುತ್ತದೆ. ಅದಾವುದಂದರೆ "ನಂಬಿಕೆ". ಇದರಿಂದಾಗಿ ಅನ್ಯೂನ್ಯತೆ ಮೂಡಲು ಸಂಕೋಚ, ನಾಚಿಕೆ, ತನ್ನತನ, ಎಲ್ಲದ್ದಕ್ಕಿಂತ ಬಲು ದೊಡ್ಡದು "ನಂಬಿಕೆ" ಎನ್ನುವುದೆಲ್ಲೆ ಅಡ್ಡಬಂದು ನಂಬಿಕಸ್ತನಾದರೂ ಅದು ಬೇಸರಕ್ಕೆ ಕಾರಣವಾಗುತ್ತದೆ. ಕೆಲವರು ಸಮರ್ಥನೆ, ಕ್ಷಮೆಯಾಚನೆಗೆ ಬೆಲೆಕೊಟ್ಟು ಸ್ನೇಹವನ್ನು ಉಳಿಸಿಕೊಂಡರೂ ಅನ್ಯೂನ್ಯತೆಯಿಂದ ದೂರವಾಗುತ್ತಾರೆ.

ಅಂತರ್ಜಾಲದ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ, ಪ್ರೀತಿಯನು ಉಳಿಸಿಕೊಳ್ಳಲು ತವಕಿಸುವರು ಮತ್ತು ತಮ್ಮ ಮನೆಯವರನ್ನು ಒಪ್ಪಿಸಲು ವಿಫಲರಾಗಿ ಪ್ರೀತಿ, ಪ್ರೇಮ, ಸ್ನೇಹದಿಂದಲೇ ದೂರವಾಗಿ ಅಪರಿಚಿತರಂತೆ ಬದುಕುತ್ತಾರೆ. ಇಲ್ಲೆಲ್ಲವೂ ನಂಬಿಕೆಯಿಂದಲೆ ಸಾಧ್ಯವಾದರೂ ಅದು ಕೊನೆಯಲ್ಲಿ ಅಸಾಧ್ಯವಾಗುತ್ತದೆ. ಇಬ್ಬರ ನಡುವಿನ ನಂಬಿಕೆಗೆ ದ್ರೋಹವಾಗದಿದ್ದರೂ ನಂಬಿಕಸ್ತರು ನಂಬಿಕೆಗೆ ಅಡ್ಡಗಾಲು ಹಾಕುತ್ತಾರೆ.

ಮಾಡುವ ಕೆಲಸದಲ್ಲಿ ಸ್ವಲ್ಪ ವೈಪರಿತ್ಯವಾದರೂ ಇರುವ ನಂಬಿಕೆ ಅಳಿಸಿಹೋಗುತ್ತದೆ. ನಂಬಿಕೆಯಲ್ಲಿ ವೈಪರಿತ್ಯವಾದಲ್ಲಿ ಅದು ನಂಬಿಕೆದ್ರೋಹವಾಗಿ  ಜೀವಿಗಳ ನಡುವಿನ ಸಂಬಂಧವನ್ನು ಸದೆಬಡಿಯುತ್ತದೆ, ಸದೆಬಡಿದ ಸಂಬಂಧ ವೈಷಮ್ಯಕ್ಕೆ ನಾಂದಿಯಾಗುತ್ತದೆ. ವೈಮನಸ್ಸು ಮೂಡಿದರೆ ಬಿಳುಪಾಗಿರುವಂತಹ ಸಂಬಂಧ ಕಪ್ಪಾಗಿ ಕಾಣುವುದು. ಇರುವ ನಂಬಿಕೆಗೆ ಒಮ್ಮೆ ಘಾಸಿಯಾದರೆ ವೈಮನಸ್ಸು ಅಥವಾ ವೈಷಮ್ಯ ಮೂಡಿ ತಿರುಗಿ ಒಂದಾಗಲು ಸಾಧ್ಯವಿಲ್ಲ ಎಂಬಂತಾಗುತ್ತದೆ. ಒಂದೊಮ್ಮೆ ತಿರುಗಿ ಜೊತೆಯಾದರೂ ಒಂದು ಬಿರುಕು ಅವರಿಬ್ಬರ ನಡುವಲ್ಲಿ ಗೋಚರಿಸುತ್ತದೆಯೇ ಹೊರತು  ಸಬಂಧ ಪರಿಪೂರ್ಣವಾಗಿರುವುದಿಲ್ಲ. ತಿಳಿದಂತಹ ಕೆಲಸವು ಗ್ರಹಿಸಿದಂತಹ ವ್ಯಕ್ತಿಯಿಂದ ಆಗದೆ ಹೋದಾಗಲೂ  ವೈಮನಸ್ಸು ಮೂಡಿ ನಂಬಿಕೆ ದೂರಾಗುತ್ತದೆ. ಯಾವ ಸ್ನೇಹಿತನೂ, ಸ್ನೇಹಿತೆಯೂ ತನ್ನ ಸಂಗಾತಿಯ ಬಗ್ಗೆ ವಿವರ ಹಂಚಿಕೊಳ್ಳುವಲ್ಲಿ ಹಿದೇಟು ಹಾಕುವುದಂತು ಬಹುಪಾಲು ಸತ್ಯ. ಅಂತಹ ಸಮಯದಲ್ಲಿ  ಸಂಗಾತಿಯ ಬಗ್ಗೆ ತಿಳಿದೋ ತಿಳಿಯದೆಯೋ ತಿಳಿದಿರುವಂತಹ ವಿಷಯವನ್ನು ಹೇಳಿದಾಗ ಅದು ಕೆಲವರ ಮನಸ್ಸಿಗೆ ಹಿಡಿಸದೆ ತಿರಸ್ಕಾರದಿಂದ ಹೇಳಿದ ವ್ಯಕ್ತಿಯ ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಡಿಯುತ್ತಾರೆ. ಹಿಂಬದಿಯಿಂದ ಮಾಡಿದಂತಹ ಆರೋಪದಿಂದಲು  ವೈಮನಸ್ಸು ಮೂಡಿ ವೈಷಮ್ಯ ಬೆಳೆಯುತ್ತದೆ. ಪರಿಸ್ಥಿತಿಗೆ ತಕ್ಕಂತೆ ಅಥವಾ ಅವಶ್ಯಕತೆಗೆ ಅನುಗನುಗುಣವಾಗಿ ಮಾಡಿದಂತಹ ಕೆಲಸದಿಂದ ಸ್ನೇಹ ಮತ್ತು ಸಂಬಂಧಗಳಲ್ಲಿ ವೈಮನಸ್ಸು ಮೂಡಿ ಜೀವಿಗಳು ದೂರಾಗುತ್ತಾರೆ. ಕೆಲವೊಮ್ಮೆ ಅವರು ವೈಷಮ್ಯದ ಗುಲಾಮರಾಗಿ ಹಗೆಸಾಧಿಸುತ್ತಾರೆ. ಕೆಲಸ ಮಾಡಿದಂತಹ ವ್ಯಕ್ತಿಯ ಬಗ್ಗೆ ನಂಬಿಕೆ ಇದ್ದಲ್ಲಿ ಅದನ್ನು ಮತ್ತು ಅದರ ಪೂರ್ವಾಪರವನ್ನು ಅರ್ಥೈಸಿಕೊಳ್ಳುವ ಶಕ್ತಿ ಇದ್ದಲ್ಲಿ  ವೈಮನಸ್ಸಿಗೆ ಜಾಗವಿಲ್ಲದಂತಾಗುತ್ತದೆ. ಪ್ರತಿಯೊಂದು ಕಾರ್ಯದ ಹಿಂದೆ ಅದರದ್ದೆ ಆದಂತಹ ಉದ್ದೇಶ ಇದ್ದೇ ಇರುತ್ತದೆ. ಅದರ ಉದ್ದೇಶ ಸಕಾರಾತ್ಮಕವಾಗಿದ್ದಲ್ಲಿ ಅದನ್ನು ಮತ್ತು ಅವರನ್ನು ಬೆಂಬಲಿಸಿ ಒಳ್ಳೆಯ ಕಾರ್ಯದ ರೂವಾರಿಗಳಾಗ ಬೇಕು. ಅಂತರ್ಜಾಲದಲ್ಲಾಗುವಂತಹ ಕೆಲವೊಂದು ಸ್ನೇಹ ಸಬಂಧಗಳು ತ್ವರಿತಗತಿಯಲ್ಲಿ ಹಾಳಾಗುತ್ತಿವೆ. ಅದಕ್ಕೆ ಕಾರಣ ಪರಿಚಯಸ್ತರ ಪೂರ್ಣ ಪರಿಚಯ, ಪೂರ್ವಾಪರ, ವ್ಯಕ್ತಿತ್ವ ತಿಳಿದಿರದೆ ನಂಬಿಕೆಯಿಂದ ಮೋಹದಲಿ ಸ್ನೇಹವಾಗಿ ಅಥವಾ ಸೆಳೆತವಾಗಿ ಮನಸಿಗೆ ಘಾಸಿಯಾದಾಗ ಇಬ್ಬರ ನಡುವಿನಲ್ಲಿರುವ ನಂಬಿಕೆಗೆ ಚ್ಯುತಿಬಂದು ವೈಮನಸ್ಸು ಮೂಡುತ್ತದೆ.  ಅಂತರ್ಜಾಲದಲ್ಲಾದ ಪರಿಚಯಸ್ತರ ಪೂರ್ವಾಪರ ಮತ್ತು ಅವರು ಮಾಡುವ ಕಾರ್ಯಗಳುದ್ದೇಶಗಳು ತಿಳಿದಿಲ್ಲದಿರುವುದರಿಂದ ಸ್ನೇಹ ಮತ್ತು ಸಂಬಂಧಗಳ ಬಿರುಕಿಗೆ ದಾರಿಯಾಗುತ್ತಿದೆ. ಏನೇ ಆದರೂ ಕರ್ತೃವಿನ ಬಗ್ಗೆ ಮತ್ತು ಕಾರಣಗಳ ಬಗ್ಗೆ ಸವಿವರವಾಗಿ ತಿಳಿಯುವುದು ಉತ್ತಮ ಎನ್ನುವುದು  ಪರಿವೀಕ್ಷಣೆಯಿಂದ ಅರಿವಿಗೆ ಬಂದಂತಹ ಸತ್ಯ.


No comments:

Post a Comment