ಮುಳುಗಿದ ಸೂರ್ಯ ಮತ್ತೆ ಮೂಡದಿರುವನೆ ಎಂಬ ಮಾತು ಆಶಾವಾದದ ಸೂಚಕ. ಯಾವ ಕ್ಷಣದಲ್ಲಿ ಏನಾಗುತ್ತದೆ ಎಂಬ ಭವಿಷ್ಯ ಅರಿತವರು ಯಾರು ಇಲ್ಲ. ಹಿಂದಿನ ಭೂತವನ್ನು ಮತ್ತು ಮುಂದಿನ ಭವಿಷ್ಯವನ್ನು ಸರಿ ಮಾಡುವುದು ಅಥವಾ ಅಂದುಕೊಂಡಂತೆ ಪರಿವರ್ತಿಸುವುದು ಮಾನವನಿಂದಾಗದ ಕೆಲಸ. ಈಗಿನ ವರ್ತಮಾನವನ್ನು ಧನಾತ್ಮಕವಾಗಿ ಬದಲಾಯಿಸುವುದು ಮತ್ತು ಸ್ವೀಕರಿಸುವುದು ಜಾಣತನದ ಕೌಶಲ್ಯವಾಗಿರುತ್ತದೆ.
ಒಂದು ವಿಚಿತ್ರವೆಂದರೆ ಕೊಡುವ ಕೈ ಬೇಡುವುದು, ಹರಸುವ ಕೈ ನಮಸ್ಕರಿಸುವುದು. ಇಂತಹ ಸಂದರ್ಭ ಬಂದಾಗ ಹೇಗಿದ್ದವನು ಹೇಗಾದೆ ಎನ್ನುತ್ತ ಬೇಸರಿಸಿ ಕೂರದೆ ಹಳೆಯ ಹಿರಿಮೆಗೆ ಮರಳುವ ಪ್ರಯತ್ನಕ್ಕೆ ಅಣಿಯಾದರೆ ಫಲ ದೊರೆಯಲು ಧೃತಿಗೆಡುವ ಪರಿಸ್ಥಿತಿ ಒದಗಿ ಬರಲಾರದು. ಯಾವುದೆ ಕೆಲಸಕ್ಕೆ ಪ್ರಾರಂಭಿಸಿದರೂ ಕಾರ್ಯ ನೆರವೇರದಾಗ ಮನಸ್ಸಿಗೆ ಘಾಸಿಯಾಗಿ ಕೈ ಕಟ್ಟಿದಂತ ಅನುಭವವಾಗಿ ದಿಕ್ಕೆತೋಚದಂತಾಗುತ್ತದೆ. ಇದನ್ನು ಹೆಚ್ಚಿನವರು ಅನುಭವಿಸಿರುತ್ತಾರೆ ಅಥವಾ ಅನುಭವಿಸುತ್ತಾರೆ.
ತನ್ನ ಆತ್ಮೀಯರಲ್ಲಿ ಎದೆಯಾಳದ ನೋವನ್ನಾಗಲಿ ಭಾವನೆಯನ್ನಾಗಲಿ ಹಂಚಿಕೊಳ್ಳುವಾಗ ಅಷ್ಟದಿಕ್ಕುಗಳು ಮುಚ್ಚಿರುವಾಗ ನಾನೆಲ್ಲಿ ಪಯಣಿಸಲಿ ಈ ಬಾಳು ಇಷ್ಟೇನೆ ಬದುಕು ಕಷ್ಟಾನೆ ಎನ್ನುತ್ತ ನಿರಾಸೆಯಿಂದ ವೇದನೆಯ ಪರಾಕಾಷ್ಠೆಗೆ ಸಿಲುಕಿ ಜೀವನಕ್ಕೊಂದು ಪೂರ್ಣವಿರಾಮವಿಡುವ ಕೊನೆಯ ನಿರ್ಧಾರಕ್ಕೆ ತಲುಪುವವರು ಕೆಲವರು, ಬಂದಿದ್ದನ್ನ ಸ್ವೀಕರಿಸಿ ಹಾಲಲ್ಲಿ ಜೇನಾಗಿ ನೀರಲ್ಲಿ ಮೀನಾಗಿ ಮೆದುವಾಗಿ ಬದುಕುವವರು ಇನ್ನುಳಿದವರುಗಳು ಆದರೆ ಹೊಳೆಯ ಹರಿವ ನೀರಿನ ಸೆಳೆತಕ್ಕೆ ವಿರುದ್ಧವಾಗಿ ಈಜುವವರು ಯಶಸ್ಸಿನ ಉತ್ತುಂಗಕ್ಕೆ ಕಾಲಿಡುವವರು ಮಾತ್ರ ಛಲಗಾರರು.
ಅನುಭವಸ್ಥರುಗಳು ಹೇಳುವ ಮಾತು ವರ್ತಮಾನದಲ್ಲಿ ಕತ್ತಲೆಯನ್ನು ಅನುಭವಿಸುತ್ತಿರುವವರಿಗೆ ಸಮಾದಾನ ತರುತ್ತದೆ ಮತ್ತು ಬದುಕಲಿಕ್ಕೆ ಸ್ಪೂರ್ತಿಯನ್ನು ನೀಡುತ್ತದೆ. ಅವರು ಹೇಳುವ ಮೊದಲ ಮಾತೊಂದೆ ಆಗಿರುತ್ತದೆ ಕತ್ತಲ ಹಿಂದೆ ಬೆಳಕಿರುತ್ತದೆ ಹೀಗಾಗಿ ನೀ ಧೃತಿಗೆಡಬೇಡ, ಬದುಕಿಷ್ಟೆಯೆಂದು ನಿರಾಸೆಯಿಂದ ಕುಗ್ಗಬೇಡ, ಆಶಾವಾದಿಯಾಗಿ ಗುರಿಯತ್ತ ಮುನ್ನುಗ್ಗು ಯಶಸ್ವೀಯಾಗುವೆ ಎಂದು ಭರವಸೆಯ ಮಾತನ್ನಾಡುತ್ತ ತಮ್ಮ ಜೀವನದ ಉದಾಹರಣೆ ನೀಡುತ್ತ ಬದುಕುವಾಸೆಯನ್ನು ಜೀವಂತಗೊಳಿಸುತ್ತಾರೆ.
ಬರೆ ಹಿರಿಯರ ಮಾತೊಂದೆ ಅಲ್ಲ ನಾವು ಯೋಚಿಸಿದಾಗ ವಿವೇಚನೆಗೆ ಬರುವ ಸಂಗತಿಗಳು ಧನಾತ್ಮಕವಾಗಿ ಬದುಕಲು ಪ್ರೇರೇಪಿಸುತ್ತದೆ. ವಿಚಾರ ಮಾಡಿದಾಗ, ಈ ಭೂಮಿ ಆ ಸೂರ್ಯನ ಸುತ್ತ ತಿರುಗುತ್ತಿರುವುದರಿಂದಾಗಿ ಕತ್ತಲು ಬೆಳಕೆಂಬ ಆಟಗಳು ಪ್ರತಿದಿನ ಕಾಣಸಿಗುತ್ತಿರುವುದು. ಆ ಸೂರ್ಯ ಇದ್ದಲ್ಲೆ ಇರುತ್ತಾನೆ ಆದರೆ ಈ ಭೂಮಿಯ ಚಲನದಿಂದಾಗಿ ಕತ್ತಲಾವರಿಸುತ್ತದೆ ಮತ್ತೆ ಬೆಳಕು ಹರಿಯುತ್ತದೆ. ಇದೆ ರೀತಿ ನಮ್ಮ ಬದುಕಿನ ಕೆಲವು ಹೆಜ್ಜೆಗಳಿಂದ ಕಷ್ಟದ ದಿನಗಳು ಕತ್ತಲಂತೆ ಆವರಿಸಿ ಅದೆ ಹೆಜ್ಜೆಗಳನ್ನ ಕಿತ್ತಿಟ್ಟಾಗ ಮಂಜಂತೆ ಕಷ್ಟಗಳೆಲ್ಲ ಕರಗಿ ಬೆಳಕಾಗುತ್ತದೆ. ಯಶಸ್ಸೆಂಬ ನೆಮ್ಮದಿಯು ಇದ್ದಲ್ಲಿಯೆ ಇದ್ದರೂ ನಮ್ಮ ಕೆಲವು ತಪ್ಪು ನಿರ್ಧಾರಗಳು ಮಂದವಾಗಿ ಬದುಕಿಗೆ ಮುಸುಕನ್ನು ಹಿಡಿಯುತ್ತದೆ. ಭೂಮಿಯ ಚಲನೆಯಿಂದ ಕತ್ತಲಾದರೂ ಮತ್ತೆ ಪುನಃ ಬೆಳಕು ಹರಿಯುತ್ತದೆ. ಇದರಂತೆ ನಮ್ಮ ಜೀವನವು ಸಹ ಕೆಲವು ಕ್ಷಣಗಳಲ್ಲಿ ಯೋಚಿಸಲಾಗದಷ್ಟು ಕರಾಬಾಗಿ ಕತ್ತಲಾದರೂ ಭರವಸೆಯ ಪ್ರಯತ್ನದಿಂದ ಬೆಳಕಾಗುತ್ತದೆ. ಅದಕ್ಕಾಗಿ ಕಷ್ಟದ ದಿನಗಳನ್ನು ಧೈರ್ಯದಿಂದ ಧನಾತ್ಮಕವಾಗಿ ಎದುರಿಸಿದಾಗ ಎಲ್ಲವು ಸುಖಾಂತ್ಯವನ್ನು ಕಾಣುತ್ತದೆ. ಹೀಗಾಗಿ ಹೇಳುವುದು ಕತ್ತಲ ಹಿಂದೆ ಬೆಳಕಿರುತ್ತದೆಯೆಂದು.
ಸಂದರ ಲೇಖನ ಸರಳವಾದರೂ ಹರಿತವಾಗಿದೆ.
ReplyDeleteಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.
Delete