Monday, May 9, 2016

ಕಣ್ಣಾ ಮುಚ್ಚೆ ಕಾಡೆ ಗೂಡೆ ಉದ್ದಿನ ಮೂಟೆ ಉರುಳಿ ಹೋಯ್ತು

ಸಾಂದರ್ಭಿಕ ಸನ್ನಿವೇಶ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತಿರುವುದು ಸಹಜ. ನಾವು ಬೆಳೆದ ದಿನಗಳನ್ನು ಹಿಂತಿರುಗಿ ಇಣುಕಿ ನೋಡಿದರೆ ಬಹಳ ವಿಸ್ಮಿತ ಆಟೋಟಗಳು ನೆನಪಿಗೆ ಬರುತ್ತವೆ. ಆದರೆ ಇದೀಗ ಕಾಣುವುದು ಕ್ರಿಕೇಟ್ ಎಂಬ ಆಕರ್ಷಣೀಯ ಆಟದ ದಿನಗಳು ಒಂದಿನವಾಗಿ ಈಗೀಗ ಕ್ಷಣವಾಗಿದೆ. ಹೊರಂಗಣ ಕ್ರೀಡೆಗಳು ಮಕ್ಕಳನ್ನು ಸಮಾಜಮುಖಿಯಾಗುವಂತೆ ಮಾಡುತ್ತದೆ. ವ್ಯವಹಾರಿಕ ವಿವೇಚನೆಯನ್ನು ಮಾಡುತ್ತದೆ. ಅದಲ್ಲದೆ ಕಣ್ಣಮುಚ್ಚಾಲೆ ಹೊಸತು ಹುಡುಕುವಂತೆ ಪ್ರೇರೇಪಿಸುತ್ತದೆ. ಬಹುಷ್ಯಹ ಸಮ್ಮ ನಗರಗಳಲ್ಲಿ ಆಗುತ್ತಿರುವ ಹುಡುಗ/ಹುಡುಗಿಯರ ಉಪಟಳಗಳನ್ನು ಆಧರಿಸಿ ಒಂದು ಹಾಡು ಬರೆದರೆ ಅದು ಹೀಗೆ ಪ್ರಾರಂಭವಾಗಬಹುದು.
"ಎಲ್ಲೆಲ್ಲಿ ನೋಡಲಿ
ಕ್ರಿಕೇಟನ್ನೇ ಕಾಣುವೆ
ರೋಡಲ್ಲಿ ತುಂಬಿರುವೆ
ಕಿಡಕಿ ಗಾಜು ಒಡೆದು ಆಡುವೆ"
ಅಂದು ಕಣ್ಣ ಮುಚ್ಚೆ ಆಟ ಆಡುತ್ತಿದ್ದ ಜಮಾನವಿಂದು ಗಲ್ಲಿ ಗಲ್ಲಿಯಲು ಆಡುವ ಕ್ರಿಕೆಟ್ ಯುಗವಾಗಿದೆ. ಮೊನ್ನೆ ಮೊನ್ನೆಯಷ್ಟೆ ಮುಗಿದ ವಿಶ್ವಕಪ್ ಸರಣಿಯ ಮುಂಬದಿಗೆ ಆಯ್.ಪಿ.ಎಲ್ ಎಂಬ ಮತ್ತೊಂದು ಸರಣಿಯ ಸೆಳೆತ ಕ್ರಿಕೇಟಿಗರನ್ನು ಆವರಿಸಿದೆ. ಬಿಡುವಿಲ್ಲದ ಸಮಯದಲ್ಲಿ ಕೆಲಸ ಬಿಟ್ಟು ನೋಡುವ ಹಾಗೆ ಮಾಡುತ್ತಿದೆ. ಇಂತಹ ದಿನಗಳಲ್ಲಿ ನಮ್ಮ ಪೂರ್ವಜರು ಕಲಿಸಿಕೊಟ್ಟ ನೀತಿಯುಕ್ತ ಆಟದ ನೆನಪಾಗುತ್ತದೆ.

ಎರಡು ದಶಕಗಳ ಕಾಲ ಹಿಂದೆ ಹೋದರೆ ನಾವು ಆಡುತ್ತಿದ್ದ ಕಣ್ಣ ಮುಚ್ಚೆ ಕಾದೆ ಗೂಡೆ ನೆನಪಿಗೆ ಬರುತ್ತದೆ. ಅಂತಹ ಆಟಗಳು ಇಂದು ನಮ್ಮ ಕಣ್ಣಿಗೆ ಸಿಗುವುದು ಬಹಳ ವಿರಳವಾಗಿದೆ. ಯಾಕೆಂದರೆ ನಮ್ಮ ಹಳ್ಳಿಯ ಹುಡುಗರೂ ಸಹ ಕ್ರಿಕೇಟ್ ಎಂಬ ಸಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ. ಕಣ್ಣಮುಚ್ಚಾಲೆ, ಲಗೋರಿ, ಕವಡೆ ಆಟ, ಮುಟ್ಟು ಆಟ, ಚಿಣ್ಣಿ ದಾಂಡು ಹೋಗಿ ಚೆಂಡು ದಾಂಡು ಆಗಿರಲು ಹೀಗೆ ಮುಂಚಿನ ಆಟಗಳು ಎಲ್ಲಿ ಮರೆಯಾದವೂ...? ಅಳಿಯಿತೇ...? ಅಳಿವಿಗೆ ಕಾರಣಗಳೇನು...? ಎಂದು ಹತ್ತು ಹಲವಾರು ಪ್ರಶ್ನೆಗಳು ನಮ್ಮ ಕಾಡುತ್ತವೆ. ಇವುಗಳಿಗೆ ಉತ್ತರ ಹುಡುವುದಕ್ಕಿಂತ ಮೊದಲು ಏನಕ್ಕಾಗಿ ಉತ್ತರ ಹುಡುಕ ಬೇಕು ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದು ಉತ್ತಮ.

ಮೊದಲಿನ ಆಟಗಳಲ್ಲಿ ನೀತಿಯಿರುತ್ತಿತ್ತು. ಅದು ಹೇಗೆಂದು ಯೋಚಿಸಿದಾಗ ನಮ್ಮ ಹುದುಗ/ಹುಡುಗಿಯರು ಆಡುತ್ತಿದ್ದ ಕಣ್ಣಮುಚ್ಚಾಲೆ ಎಂಬ ಸರಳ ಸಜ್ಜನಿಕೆಯ ಆಟ ನೆನಪಿಗೆ ಬರುತ್ತದೆ. ಆಟದ ತಿರುಳಾರ್ಥ ಎಷ್ಟು ಜನರಿಗೆ ತಿಳಿದಿದೆ ಎಂದು ಕೇಳಿದರೆ ಒಂದೇ ಒಂದು ಕೈ ಸಹ ಮೇಲಕ್ಕೆ ಬರುವುದಿಲ್ಲ. ನಮ್ಮ ಶಿಕ್ಷಣ ಈಗ ಹೇಳುತ್ತಿದೆ ಕಲಿ ನಲಿಯ ಮೂಲಕ ನಡೆದ ಶಿಕ್ಷಣ ಮಕ್ಕಳ ಬುದ್ಧಿಮತ್ತೆ ಸೇರುತ್ತದೆ ಎಂದು. ಆದರೆ ನಮ್ಮ ಪೂರ್ವಜರು ಮೊದಲೆ ಅದನ್ನು ಅರಿತು ಚಿಕ್ಕ ಚಿಕ್ಕ ಮಕ್ಕಳಿರುವಾಗಲೆ ಅವರಿಗೆ ನಮ್ಮ ಸಂಸ್ಕಾರ ಕಥನದ ತಿಳುವಳಿಕೆಯಾಗುವಂತೆ ಆಟಗಳಲ್ಲಿ ಬಳಸಲಿಕ್ಕೆಂದು ಪುಟಗಟ್ಟಲೆ ಇದ್ದ ಮಹಾ ಕಾವ್ಯದ ತಿರುಳನ್ನು ನಾಲ್ಕೈದು ಸಾಲುಗಳಲ್ಲಿ ಹೇಳಿ ಚಿಣ್ಣರೂ ಸಹ ಅದನ್ನು ಅರಿತು ತಿದ್ದಿ ನಡೆಯುವಂತೆ ಮಾಡಿದ್ದಾರೆ.

ಕಣ್ಣಾ ಮುಚ್ಚೇ....
ಕಾಡೇ ಗೂಡೇ....
ಉದ್ದಿನ ಮೂಟೆ....
ಉರುಳೇ ಹೋಯ್ತು....
ನಮ್ಮಯ ಹಕ್ಕಿ ...
ನಿಮ್ಮಯ ಹಕ್ಕಿ ....
ಬಿಟ್ಟೇ ಬಿಟ್ಟೆ ...

ನಮ್ಮ ಹಿಂದಿನವರು ಮಕ್ಕಳಾಟಗಳಲ್ಲೂ ಸಹ ಎಷ್ಟು ಚೆನ್ನಾಗಿ ರಾಮಾಯಣದ, ಮಹಾಭಾರತದ ಕತೆಗಳನ್ನು ಜೋಡಿಸಿ ಹೆಣೆಯುತ್ತಿದ್ದರು ಇದೇ ಸಾಕ್ಷಿ. ಅಂಥಹ ಒಂದು ರಾಮಾಯಣದ ಕಥೆಯ ನಿರೂಪಣೆ ಮೇಲಿನ ಆಟದಲ್ಲಿದೆ. ಅದು ಹೇಗಂದು ನೋಡಿದರೆ...
"ಕಣ್ಣಾ ಮುಚ್ಚೆ " -
ಅಂದರೆ ಅಯೋಧ್ಯೆಯ ಮಹಾರಾಜ "ದಶರಥ" ಕಣ್ಣು ಮುಚ್ಚಲು
"ಕಾಡೇ ಗೂಡೆ "-
ಶ್ರೀರಾಮಚಂದ್ರನಿಗೆ ಕಾಡೇ ಮನೆಯಾಯಿತು
"ಉದ್ದಿನಮೂಟೆ" -
ಅಹಂಕಾರದಿಂದ ಉದ್ದಿನ ಬೇಳೆಯಂತೆ (ಮೂಟೆಯಂತೆ) ಉಬ್ಬಿಹೋಗಿದ್ದ ರಾವಣನನ್ನು
"ಉರುಳೇ ಹೋಯ್ತು" -
ಯುದ್ಧದಲ್ಲಿ ರಾಮ ಹೊಡೆದು ನೆಲಕ್ಕುರುಳಿಸಿದ. ಅದೆ ಸೊಕ್ಕಿನ ಮೂಟೆ, ಅದೇ ಉದ್ದಿನ ಮೂಟೆ ಉರುಳೇ ಹೋಯ್ತು
"ನಮ್ಮಯ ಹಕ್ಕಿ, ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ"
ಸಾತ್ವಿಕನಾದ ವಿಭೀಷಣ (ರಾವಣನ ತಮ್ಮ) ಸೀತೆಯನ್ನು ಗೌರವಾಧರಗಳಿಂದ ತಂದು ಶ್ರೀರಾಮನಿಗೊಪ್ಪಿಸಿದ
ರಾವಣ ತಿಳಿದಂತೆ ಇದು ನಮ್ಮ ಹಕ್ಕಿ ಅಲ್ಲ , ನಿಮ್ಮಯ ಹಕ್ಕಿ 
ಬಿಟ್ಟು ಕಳಿಸಿಕೊಡುತ್ತಿದ್ದೇವೆ ಸ್ವೀಕರಿಸಿ, ಎಂದು ರಾಮ ಲಕ್ಷ್ಮಣರನ್ನು ಪ್ರಾರ್ಥಿಸಿದ.

ಅರ್ಥದಲ್ಲಿ ಇಡೀ ರಾಮಾಯಣದ ಕಥೆಯನ್ನು ಮಕ್ಕಳಾಟದಲ್ಲಿ ಪೋಣಿಸಿದವರು ನಮ್ಮ ಹಿಂದಿನ ತಲೆಮಾರಿನವರು. ಹೀಗಿದೆ ನೋಡಿ ಅರ್ಥ "ಕಣ್ಣಾಮುಚ್ಚಾಲೆ" ಆಟಕ್ಕೆ. ಈಗಿನ ಕಾಲದಲ್ಲೂ ಹಳ್ಳಿಗರ ಬಾಯಲ್ಲಿ ಹೀಗೆಲ್ಲ ರಾಮಾಯಣದ ಕಥೆ ಹರಿದಾಡುತ್ತಿರುವಾಗ, ತ್ರೇತಾಯುಗದಲ್ಲಿ ಜನಿಸಿದ್ದ (ಭಗವಂತ) "ಶ್ರೀರಾಮಚಂದ್ರ" ಎಂಥಾ ಪ್ರಸಿದ್ಧ ರಾಜನಾಗಿದ್ದ? ಎಂಥಾ ವ್ಯಕ್ತಿತ್ವ ಹೊಂದಿದ್ದ? ಎನ್ನುವುದು ನಮ್ಮ ಊಹೆಗೂ ಮೀರಿದ ಸಂಗತಿಯಾಗಿದೆ.

ಆದರೆ ಇಂದಿನ ಕ್ರಿಕೇಟ್ ನಮ್ಮ ಮಕ್ಕಳಿಗೆ ಸಂಸ್ಕಾರ ಕೊಟ್ಟು ಒಳಿತನ್ನ ಮಾಡುವುದಿರಲಿ ಒಳ್ಳೆಯ ಮಕ್ಕಳನ್ನು ಒಳ್ಳೆಯವರಾಗಿರಲು ಬಿಡುವುದಿಲ್ಲ ಯಾಕೆಂದರೆ ಪಿಕ್ಸಿಂಗ್, ಬೆಟ್ಟಿಂಗ್ ಎನ್ನುವ ಕೆಂಬೂತದ ಛಾಯೆ. ಹಿಂದಿನ ಆಟಗಳು ನಮಗೆ ಪುಸ್ತಕದ ಬದನೆಕಾಯಿಯನ್ನು ತಿಳಿಸದೆ ನಿಜ ಜೀವನದ ಮೌಲ್ಯಗಳನ್ನು ಸಾರುತ್ತಿದ್ದವು. ಇಂದಿನ ಎಷ್ಟು ಮಕ್ಕಳಿಗೆ ಗೊತ್ತು ನಮ್ಮ ಮಹಾ ಕಾವ್ಯಗಳಾದ ರಾಮಾಯಣ, ಮಹಾಭಾರತದ ಮೌಲ್ಯ...? ಮೊಬೈಲ್, ಟಿ.ವಿ, ಕಂಪ್ಯೂಟರ್ ಗೇಮ್ಸ್ ಇಂತಹವುಗಳನ್ನ ಬಿಟ್ಟರೆ ಇನ್ನೊಂದು ಗೊತ್ತಿರುವುದೆಂದರೆ ಕ್ರಿಕೇಟ್. ಹಿರಿಯರಾದ ನಾವು ನಮ್ಮ ಮುಂದಿನ ಪೀಳಿಗೆಗಳಿಗೆ ಹಳೆಯ ಆಟಗಳನ್ನು ಕಲಿಸಿ ಮಹಾ ಕಾವ್ಯಗಳ ತಿರುಳನ್ನು ಚಿಕ್ಕ ಸಾಲಿನ ಮೂಲಕ ಹೇಳಿ ಮೌಲ್ಯ ತಿಳಿಯುವಂತೆ ಮಾಡಬೇಕಾಗಿದೆ.

ವಿನಾಯಕ ಭಾಗ್ವತ ಬೆಟ್ಟೆಮನೆ
ನೀಲಕೋಡು

No comments:

Post a Comment