ಸಮಸ್ಯೆಗೆ ಪರಿಹಾರ ಹುಡುಕುವ ಜನರು ಯೋಚನಾಮಗ್ನರಾಗುವುದು ಸಹಜ. ಯೋಚಿಸುತ್ತ, ಯೋಚಿಸುತ್ತ ಅವರ ಮನಸ್ಸು ಸಂಕುಚಿತಗೊಂಡು ಋಣಾತ್ಮಕವಾಗಿ ಭಾವಿಸಿದಾಗ ಅತ್ಯಂತ ಕೆಟ್ಟ ನಿರ್ಣಯಕ್ಕೆ ಬರುವುದು ಹೆಚ್ಚಾಗಿ ಕಂಡುಬರುತ್ತದೆ. ಯಾರೇ ಆದರು ಸಹ ಮನಸ್ಸು ಕುಗ್ಗಿದಾಗ ಬೇಡದೆ ಹೋದ ಹಾಗೆ ಅವಲೋಕಿಸಿ ಈ ಬಾಳೆ ಶೂನ್ಯವೆಂದು ತಿಳಿದು ಬದುಕಿಗೆ ಪೂರ್ಣವಿರಾಮವಿಡುವ ಸಾಧ್ಯತೆಗಳು ಜಾಸ್ತಿಯಾಗಿರುತ್ತವೆ.
ಪ್ರತಿಯೊಬ್ಬರ ಬದುಕಿನಲ್ಲು ಏಳು ಬೀಳು ಇದ್ದೆ ಇರುತ್ತದೆ. ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳು ಬದುಕಿಗೆ ಅಂತ್ಯ ಹಾಡಿದರೆ ದುಷ್ಟ ಮನಸ್ಸಿನ ವ್ಯಕ್ತಿಗಳು ಕೆಟ್ಟ ಕೆಲಸಕ್ಕೆ ಕೈ ಹಾಕುತ್ತಾರೆ. ದೃಢ ಮನಸ್ಸಿನ ವ್ಯಕ್ತಿಗಳು ಮಾತ್ರ ನಿಂತ ನೀರಿನಲ್ಲಿಯೆ ಈಜಾಡಿ ರಾಡಿಯಾದರು ಧೃತಿಗೆಡದೆ ಹೋರಾಡಿ ಯಶಸ್ಸಿನತ್ತ ದಾಪುಗಾಲಿಡುತ್ತಾರೆ. ಬದುಕಿನ ಹೀನಾಯ ಸ್ಥಿತಿಯಲ್ಲಿಯೇ ಜನಿಸುವುದು ಈ ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳಂಬ ಎರಡು ಕವಲುಗಳು.
ಉತ್ತಮ ಸ್ಥಿತಿಯಲ್ಲಿದ್ದಾಗ ಕೈಯಲ್ಲಿ ಎಲ್ಲ ಇದ್ದು ಬಯಸಿದ್ದನ್ನು ಪಡೆಯುವ ಶಕ್ತಿಯಿರುತ್ತದೆ. ಆದರೆ ಅದೆ ಸಮಯದಲ್ಲಿ ಈ ಅಹಂಕಾರವೆಂಬ ಶತ್ರುವು ಆವರಿಸಿಕೊಳ್ಳುವುದು. ಬೇರೆಯವರನ್ನು ತುಚ್ಛವಾಗಿಕಂಡು ಎಲ್ಲರು ನನ್ನ ಅಡಿಯಾಳಾಗಿರಬೇಕೆನ್ನುವ ಮನಸ್ಥಿತಿಗೆ ಬಂದಿರುತ್ತಾರೆ. ಎದ್ದಾಗ ಬಿದ್ದವರ ಕೈಹಿಡಿಯ ಬೇಕೆ ಹೊರತು ಅವರನ್ನು ಇನ್ನಷ್ಟು ಕಂದಕಕ್ಕೆ ತುಳಿಯಬಾರದು. ಇಂದು ಎದ್ದಿರುವವ ನಾವು ನಾಳೆ ಬೀಳಬಹುದು ಕಾರಣ ತಿರುಗುತ್ತಿರುವ ಕಾಲಚಕ್ರ. ಇದನ್ನರಿಯದೆ ಮೆರೆಯುವುದು ಸೂಕ್ತವಲ್ಲದ ವರ್ತನೆಯಾಗಿರುತ್ತದೆ. ಇದ್ದಾಗ ಜನರನ್ನು ನೋಡಿ ಹಂಚಿತಿಂದರೆ ನಾಳೆ ಭಿಕ್ಷಾರ್ಥಿಯಾದವಾಗ ಅದೆ ಬೇಡಿದ ಕೈಗಳು ರಕ್ಷೆ ನೀಡುವ ಕೈಗಳಾಗುತ್ತದೆ. ಅವರಿಗೆ ತಿನ್ನಲು ಗತಿಯಿಲ್ಲದಿದ್ದರು ತಿನ್ನುವ ಕೂಳನ್ನೆ ಬೇಡುವ ಕೈಗೆ ನೀಡಿ ಹಂಚಿ ತಿನ್ನುತ್ತಾರೆ.
ಹೇಗೆ ಹಾರುವ ಗಾಳಿಪಟ ಗಾಳಿಬಂದಾಗ ಮೇಲೇರಿ ಕುಣಿಯುವುದೋ ಹಾಗೆ ಗಾಳಿ ನಿಂತಾಗ ಕೆಳಗೆ ಬೀಳುವುದು. ಅದೆ ರೀತಿ ಮಾನವನ ಬದುಕಿನಲ್ಲಿಯು ಸಹ ಕಾಲಚಕ್ರ ತಿರುಗಿದಾಗ ಮೇಲೇರಿ ಮೆರೆಯುತ್ತಾನೆ ಅದೇ ರೀತಿ ಕಾಲಚಕ್ರ ಕೆಳಮುಖವಾಗಿ ಸುತ್ತಲಾರಂಭಿಸಿದರೆ ಕೆಳಗೆ ಬಿದ್ದು ಮಲಗುತ್ತಾನೆ. ಪ್ರತಿಯೊಬ್ಬರ ಬಾಳಿನಲು ನಡೆಯುವ ಈ ಪ್ರಕ್ರಿಯೆಗೆ ನಾವು ಸದಾ ಸಿದ್ಧರಿರಬೇಕಾಗುತ್ತದೆ.
ಉತ್ತಮ ಸ್ಥಿತಿಯಲ್ಲಿದ್ದು ಬೇಕಾದ ಅವಶ್ಯಕತೆಗಳನ್ನು ಈಡೇರಿಸಿಕೊಂಡು ಬೇರೆಯವರಿಗೆ ಉಪದ್ರ ನೀಡದೆ ಎಲ್ಲರೊಂದಿಗು ಬೆರೆತು ಸಮಾಜಮುಖಿಯಾಗಿ ಬೆಳೆಯುತ್ತಿರುವ ವ್ಯಕ್ತಿಯ ಬದುಕಿನಲ್ಲಿ ಈ ಕಾಲಚಕ್ರ ಇಳಿಮುಖವಾಗಿ ತಿರುಗಿದಾಗ ಕೈಹಾಕುವ ಕೆಲಸದಲ್ಲೆಲ್ಲ ವಿಘ್ನಗಳು ಪ್ರಾರಂಭವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆತ ತಲೆ ಮೇಲೆ ಕೈಹೊತ್ತಿ ಕುಳಿತರೆ ಹುಚ್ಚುತನ ಆವರಿಸಿ ಆಸ್ಪತ್ರೆಯ ಪಾಲಾಗ ಬೇಕಾಗುತ್ತದೆ. ಕುಗ್ಗದೆ ದೈರ್ಯದಿಂದ ಕೆಟ್ಟ ಸಮಯವನ್ನು ಎದುರಿಸಿದರೆ ಬೆಂಕಿಯಲಿ ಬೆಂದ ಚಿನ್ನ ಹೇಗೆ ಸುಂದರ ರೂಪವನ್ನು ಪಡೆಯುತ್ತದೆಯೋ ಹಾಗೆ ಪರಿಪೂರ್ಣನಾಗುತ್ತಾನೆ.
ಬಿದ್ದ ಸಮಯದಲ್ಲಿ ಬೇರೆಯವರು ಹೇಳುವ ಮಾತು, ಹೇಗಿದ್ದವ ಹೇಗಾಗಿಬಿಟ್ಟೆಯಲ್ಲೋ ಎಂದು. ಆಗ ಋಣಾತ್ಮಕವಾಗಿ ಚಿಂತಿಸುತ್ತ ಕುಂದದೆ ದೈರ್ಯದಿಂದ ಮಾತಾಡಬೇಕು. ಅಂದು ಶಿಖರದ ತುದಿಯಲ್ಲಿ ಓಡಾಡುತ್ತಿದ್ದೆ ಆದರಿಂದು ಶಿಖರದ ಬುಡದಲ್ಲಿ ಅಡ್ಡಾಡುತ್ತಿರುವೆ ಆದರೆ ಶಿಖರವನ್ನು ಬಿಟ್ಟು ಬೇರೆಡೆಗೆ ಹೋಗಿಲ್ಲ ಮತ್ತು ಅಲೆದಾಡುವ ಅಲೆಮಾರಿಯಾಗಿಲ್ಲವೆಂದು ಧನಾತ್ಮಕವಾಗಿ ಯೋಚಿಸಿ ಉತ್ತರಿಸುತ್ತ ಅದರಂತೆ ನಡೆದರೆ ಹೆದರದೆ ಎದುರಿಸಿಬದುಕುವ ಹುಲಿಯಾಗುತ್ತಾನೆ. ಯೋಚಿಸುತ್ತ ಕುಳಿತರೆ ಕೆಲಸವಾಗದು ಬದಲಿಗೆ ಕಾರ್ಯಪ್ರವರ್ತ ಛಲಗಾರರಾದರೆ ಅಂದುಕೊಂಡಿದ್ದನ್ನು ಸಾಧಿಸುವುದು ಸುಲಭವಾಗುತ್ತದೆ.
ಯಾವತ್ತು ನಮಗಿಂತ ಕೆಳಮಟ್ಟದಲ್ಲಿರುವವರನ್ನು ನೋಡಿ ಸಮದಾನ ಮಾಡಿಕೊಳ್ಳಬೇಕು ಮತ್ತು ನಮಗಿಂತ ಉತ್ತಮ ಸ್ಥಿತಿಯಲ್ಲಿರುವವರನ್ನು ನೋಡಿ ಹಿಡಿದ ಪಟ್ಟು ಬಿಡದ ಒಪ್ಪಂದಕ್ಕೆ ಬರದವರಾಗಬೇಕು. ಆದರೆ ಯಾವ ಕ್ಷಣದಲ್ಲು ನಮಗಿಂತ ಮೇಲ್ಮಟ್ಟದಲ್ಲಿರುವವರನ್ನು ನೋಡಿ ಹೊಟ್ಟೆಕಿಚ್ಚುಪಟ್ಟಿಕೊಳ್ಳಬಾರದು. ಹಾಗೇನಾದರು ಮಾಡಿಕೊಂಡರೆ ಅನಾಹುತ ಕಟ್ಟಿಟ್ಟ ಬುತ್ತಿಯಾಗುತ್ತದೆ. ಅದಕ್ಕಾಗಿ ಯಾವಾಗಲು ನಮಗಿಂತಲು ಕೆಳಮಟ್ಟದಲ್ಲಿರುವವರನ್ನು ನೋಡಿದರೆ ಬದುಕಲು ಸ್ಪೂರ್ತಿ ಸಿಗುತ್ತದೆ. ಬೇರೆಯವರಿಗಿರುವಂತ ಹೀನಾಯ ಸ್ಥಿತಿಯಲ್ಲಿ ನಾನಿಲ್ಲವಲ್ಲವೆಂಬ ಸಮಾಧಾನದ ಮಾತು ಬದುಕಲು ಪ್ರೇರೇಪಿಸುತ್ತದೆ.
ಋಣಾತ್ಮಕ ಯೋಚನೆಯು ಯಾವಾಗಲು ಮನುಷ್ಯನನ್ನು ಅಧಪತನಕ್ಕೆ ತಳ್ಳುತ್ತದೆ. ಋಣಾತ್ಮಕವಾಗಿ ಪರ್ಯಾಲೋಚನೆ ಮಾಡುವುದರಿಂದ ಜೀವನದಲ್ಲಿ ಬದುಕುವ ಆಸಕ್ತಿಯನ್ನು ಕಳೆದುಕೊಳ್ಳುತ್ತೇವೆ. ಇದರಿಂದಾಗಿ ಬದುಕೆ ನಶ್ವರವೆನ್ನುವ ಮಟ್ಟಕ್ಕೆ ಹೋಗುತ್ತೇವೆ. ಈ ಪರಿಸ್ಥಿತಿಯು ಕೆಟ್ಟದ್ದನ್ನು ಮಾಡಲು, ವ್ಯಸನಿಯಾಗಲು, ಕಳ್ಳತನ - ದರೋಡೆ ಮಾಡಲು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವತರ ಪ್ರೇರೇಪಿಸುತ್ತದೆ. ಆದರೆ ಧನಾತ್ಮಕ ಚಿಂತನೆಯು ಮನುಷ್ಯನನ್ನು ಹುರಿದಂಬಿಸಿ ಎಲ್ಲರೊಳೊಂದಾಗು ಮಂಕುತಿಮ್ಮ ಎಂಬಂತೆ ಮಾಡಿ ನಿದರ್ಶನದ ವ್ಯಕ್ತಿಯಾಗುವಂತೆ ಮಾಡುತ್ತದೆ. ಛಲದಿಂದ ಬದುಕಿನ ಕೆಟ್ಟ ಸಮಯವನ್ನು ಎದುರಿಸುತ್ತ ಜಯದತ್ತ ಸಾಗಲು ಹುಮ್ಮಸ್ಸು ಹೆಚ್ಚಿಸುತ್ತದೆ. ಎಲ್ಲರೊಂದಿಗು ಬೆರೆತು ಸಹಜ ಸಾಮಾನ್ಯನಾಗಿ ಜೀವಿಸಲು ಸಮ್ಮತಿಸುತ್ತದೆ ಮತ್ತು ಬಿದ್ದವರನ್ನು ಮೇಲೆತ್ತುವ ಕಾರ್ಯಕ್ಕೆ ನಾಂದಿ ಹಾಡುತ್ತದೆ. ಹೀಗಾಗಿ ಧನಾತ್ಮಕವಾಗಿ ಯೋಚಿಸುವದು ಅತ್ಯಂತ ಅವಶ್ಯಕ.
+ಗಳ ಮತ್ತು -ಗಳ ಬಗ್ಗೆ, ತೇಜೀ ಮತ್ತು ಮಂದಿಯ ಸಮಯದ ಮನೋ ಸಮತೋಲನೆ ಬಗ್ಗೆ ಒಳ್ಳೆಯ ಲೇಖನ.
ReplyDeleteಧನ್ಯವಾದಗಳು.Sir
Delete