Monday, December 30, 2013

...ಬೆಳೆಯುತ್ತಿರುವ ಯುವಕ ಯುವತಿಯರು ಕೃಷಿ ತೊರೆಯತ್ತಿರಲು ಸರ್ಕಾರ ಮತ್ತು ರಾಜಕಾರಣವೇ ಮುಖ್ಯಕಾರಣವೆನಿಸುತ್ತಿದೆ!...

ಈ ಲೇಖನವು ಇದೇ ವರ್ಷದಲ್ಲಿ ಬರೆದ ನನ್ನ ಬ್ಲಾಗಿನ ೧೦೦ ನೇ ಬರಹವಾಗಿದೆ. ಶತಕದ ಸವಿಯನ್ನು ನಿನ್ನೊಂದಿಗೆ ಹಂಚಿಕೊಳ್ಳಲು ಹರುಷವಾಗುತ್ತಿದೆ.


"ಅನ್ನದಾತೋ ಸುಖೀ ಭವ" ಅನ್ನೊ ಮಾತು ಬರೆ ಪುಸ್ತಕದ ಬದನೆಕಾಯಿ ಆದಂತಿದೆ ಎನ್ನುವುದು ಇತ್ತೀಚಿನ ವರ್ತಮಾನದ ವದಂತಿ. "ದೇಶದ ಬೆನ್ನೆಲುಬೇ ಅನ್ನದಾತನಾದಂತಹ ರೈತ" ಎಂಬ ಮಾತು ನುಡಿಯಲಿಕ್ಕಷ್ಟೇ ಕೇಳಿಬರುತ್ತಿದೆಯೆ ಹೊರತು ಅದು ಆಚರಣೆಯಲ್ಲಿ ಅನುಸರಿತವಾಗಿಲ್ಲವೆಂಬುದಂತು ಸತ್ಯವಾಗುತ್ತಿದೆ.

ರೈತಾಬಿ ಜನರೆಲ್ಲ ಹಸಿವಿನಿಂದ ಬೆಂದು ದೇಶಕ್ಕೆ ಅನ್ನ ನೀಡುತ್ತಿದ್ದರೆ ಸುಖದ ಸುಪ್ಪತ್ತಿಕೆಯಲ್ಲಿ ಮೆರೆದು ಸಂವಿದಾನ ಅನ್ನೊ ಹೆಸರಿನಲ್ಲಿ ಆಡಳಿತನೆಡೆಸುತ್ತಿರುವ ಕೆಲವು ಪಟಿಂಗರುಗಳು ಮನಸಿಗೆ ಬಂದಂತೆ ಮಾತನಾಡುತ್ತ, ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡುತ್ತ ಬಡ ಜನರಿಗೆ ಜನಾರ್ದನನಾದಂತೆ ಬಿಂಬಿಸಿಕೊಳ್ಳುತ್ತಿರುವುದು ಅಸಹ್ಯವೆನಿಸುತ್ತಿದೆ.

ರೈತ ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆಯಿಲ್ಲ, ಬೆಳೆಗೆ ತಕ್ಕದಾದ ಬೆಲೆಯಿಲ್ಲ. ಬರುವ ಹಣಕ್ಕೆ ಮಾತ್ರ ಮರೆಯದೆ ವಿಧಿಸುವ ತೆರಿಗೆ ಮಾತ್ರ ತಪ್ಪಿಲ್ಲ. ಬಡಜನರಿಗೆ ಹೊರೆಯಾಗುವಂತೆ ಸ್ವಂತಮನೆ ಮೇಲು ವಿಧಿಸುವ ತೆರಿಗೆ, ಆ ಸುಂಕ, ಈ ಸುಂಕ ಎಂದು ಬಡವರ ತ್ರಾಣ ಹೀರುವ ಕಾಯಿದೆ ಕಾನುನನ್ನು ತಂದು ಸಾಲವೆಂಬ ಸಾಗರಕ್ಕೆ ತಳ್ಳುವ ಕೆಲಸವಂತು ಬರುವ ಪ್ರತಿಯೊಂದು ಸರ್ಕಾರದಿಂದಲು ಸಮರ್ಪಕವಾಗಿ ನಡೆಯುತ್ತಿದೆ. ಕೃಷಿಕ ಎಂದಾಕ್ಷಣಕ್ಕೆ ಅವರನ್ನು ತಿರಸ್ಕಾರ ಭಾವದಿಂದ ನೋಡುವ ನಮ್ಮ ಜನರು ಸಹ ತಾರತಮ್ಯ ಎಸಗುತ್ತಿದ್ದಾರೆ. ಕೃಷಿಯನ್ನು ಮಾಡಿ ಉತ್ತಮ ಫಸಲನು ಪಡೆಯಲು ಬೇಕಾಗುವ ನೀರಾವರಿಗೆ ವಿದ್ಯುತ್ ಅನ್ನು ಸರಿಯಾಗಿ ನೀಡದೆ ಕೋತವೆನ್ನುತ್ತ ತ್ರಾಸು ಕೊಡುವ ಅಧಿಸೂಚನೆಗಳು ರೈತರನ್ನು ಹಿಂಡಿ ಹೀರುತ್ತಿವೆ. ಇವುಗಳಿಗೆ ಕಾರಣ ವ್ಯತಿರಿಕ್ತವಾಗಿ ಮತ್ತು ಅನಾವಶ್ಯಕವಾಗಿ ವಿಧ್ಯುತ್ ದೀಪ ಉರಿಸಿ ದುಂದುವೆಚ್ಚ ಮಾಡುತ್ತಿರುವ ಹೆಚ್ಚಿನವರು ಪ್ರಜ್ನಾವಂತರುಗಳಾಗಿದ್ದಾರೆ.

ಬಾಯಲ್ಲಿ ಹೊಗಳಿ, ಅವರ ಹೆಸರಿನಲ್ಲಿಯೆ ಪ್ರಮಾಣವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರಿದ ಮೇಲೆ ಅಸಡ್ಡೆಯಿಂದ ಅವರನ್ನೆ ನೀಚತನದಿ ಕಾಣುತ್ತಿದ್ದಾರೆ. ಕೆಲವು ಪುಡಾರಿ ರಾಜಕಾರಣಿಗಳು ಕಷ್ಟದಲ್ಲಿರುವ ಬಡ ರೈತನ ಕೈ ಹಿಡಿಯದೆ, ಜೋಡಿಸಿರುವ ಕೈಗಳನ್ನು ಪರಿಗಣಿಸದೆ ಕಿವುಡ ಮತ್ತು ಕುರುಡರಂತೆ ವರ್ತಿಸುತ್ತ, ಗಮನ ಹರಿಸದೆ ಅವರ ಪ್ರಶ್ನೆಗಳಿಗೆ ಉತ್ತರಿಸದೆ ಮೂಕರಾಗಿ ಕುಳಿತರೆ ಯಾವತ್ತು ಅವರು ಸುಮ್ಮನಿರಲು ಸಾಧ್ಯವಿರುವುದಿಲ್ಲ. ಹೋರಾಡುತ್ತಾರೆ ಅಥವಾ ಇದಲ್ಲದಿದ್ದರೆ ಮತ್ತೊಂದು ಎನ್ನುತ್ತ ಬೇರೆಡೆಗೆ ಸಾಗುವ ವಲಸಿಗರಾಗುತ್ತಾರೆ.

ಆಡಳಿತದಲ್ಲಿರುವಾಗ ಬರೆ ಪಟ್ಟಣ ಮತ್ತು ವಿದ್ಯಾವಂತರತ್ತ ಗಮನ ಹರಿಸಿ ಭೂಲೋಕ ಸ್ವರ್ಗ ಮಾಡುತ್ತೇನೆ ಎನ್ನುತ್ತಾರೆಯೆ ಹೊರತು ಕೃಷಿಕರತ್ತ ನೋಡುವುದು ಇಲ್ಲ. ಆದರೆ ಅದೇ ವಿಪಕ್ಷದಲಿ ಕುಳಿತಾಗ ರೈತರ ಪರ ಧ್ವನಿ ಎತ್ತುತ್ತ ಚುಣಾವಣಾ ದೃಷ್ಟಿಕೋನವಿಟ್ಟುಕೊಂಡು ಹೋರಾಡುವುದು. ಕಲಾಪಗಳಲ್ಲಿ ಮಾತನಾಡಿ ಪ್ರಸ್ತುತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೇ ಕೂಗಾಡಿ, ಜಗಳ ಮಾಡಿ ಸಮಯ ವ್ಯರ್ಥಮಾಡುತ್ತಾರೆಯೆ ಹೊರತು ಅದೇ ಸಮಯವನ್ನು ಸದುಪಯೋಗ ಪಡಿಸಿಕೊಂಡು ಕೃಷಿಕರ, ರೈತರ ಉದ್ಧಾರಕ್ಕೆ ಮಾರ್ಗೊಪಾಯ ಕಂಡುಕೊಳ್ಳುತ್ತಿಲ್ಲ.

ಎಷ್ಟೇ ಮೈ ಬಗ್ಗಿಸಿ ದುಡಿದರು ದೇಶದ ಜನರಿಗಾಗಿ ಧಾನ್ಯ ಬೆಳೆದರು ತಕ್ಕದಾದ ಬೆಲೆ ದೊರೆಯದೆ ಪಟ್ಟ ಕಷ್ಟಕ್ಕೆ ಮೌಲ್ಯ ಸಿಗದಿರುವ ಪರಿಸ್ಥಿತಿ ತಲೆದೋರಿರುವುದು ಖಂಡನೀಯ. ದುಡಿಯಲು ಬಾಗುವ ಬೆನ್ನನ್ನು ನೆಟ್ಟಗೆ ಮಾಡಲು ಬಿಡದೆ ಕೊಳಕು ರಾಜಕಾರಣದ ಎದುರು ಬಾಗಿಕೊಂಡೆ ಇರುವಂತೆ ಮಾಡುತ್ತಿರುವ ನಯವಂಚಕತನ ಇಂದಿನ ವರ್ತಮಾನದ ರಾಜಕೀಯ. ಇಂತಹ ಹೊಲಸು ಸನ್ನಿವೇಷವನ್ನು ಸೃಷ್ಟಿಸಿರುವುದು ನಮ್ಮ ಜನತೆ ತಾನೆ...?

ಜನರಿಂದ ಜನರಿಗಾಗಿ ನಡೆಸುವ ಆಡಳಿತವೆ ನಮ್ಮ ಈ ಪ್ರಜಾಪ್ರಭುತ್ವವನ್ನು ಆಳುತ್ತಿರುವ ಸರ್ಕಾರ. ಯಾವುದೇ ಸರ್ಕಾರ ಆಡಳಿತಕ್ಕೆ ಆರಿಸಿ ಬಂದಿದೆಯೆಂದರೆ ಅದು ನಮ್ಮ ದೇಶದ ಬೆನ್ನಲುಬಿಂದವೆನ್ನುವುದನ್ನು ಮರೆತಿರುವಂತಿದೆ ನಮ್ಮ ರಾಜಕಾರಣಿಗಳು. ಏಕೆಂದರೆ ಚಲಾವಣೆಯಾಗುವ ಮತಗಳಲ್ಲಿ ೯೦ ರಷ್ಟು ಮತ ರೈತಾಬಿ ಜನರಿಂದಲೆ ಎನ್ನುವುದನ್ನು ಮರೆಯುವಂತಿಲ್ಲ. ಕೆಲಸಕ್ಕೆಂದು ಬೇರೆಡೆಗೆ ಹೋಗಿರುವವರು ಮರಳಿ ಓಟು ಹಾಕುವ ಜವಾಬ್ಧಾರಿಯನ್ನು ಮರೆತಿದ್ದಾರೆ. ಹೀಗಿರುವಾಗ ಅಂತಹ ಮಹಾ ದಾನಿಗಳನ್ನೆ ಕಷ್ಟಕ್ಕೆ ನೂಕುವ ಪ್ರಮೇಯ ನಡೆಯುತ್ತಿರುವುದು ಪ್ರತಿಭಟನೆಗೆ ನಾಂದಿಯಾಗುತ್ತಿದೆ.

ಜೀವನ ಪೂರ್ತಿ ದುಡಿದರು ಜೀವನಾವಷ್ಯಕ ಮಸ್ತುಗಳನ್ನು ಪಡೆಯಲಾಗದಂತಹ ದುಸ್ಥಿತಿಯಲ್ಲಿ ಬೇರೆಯ ಸಭೆ ಸಮಾರಂಭಗಳಲ್ಲಿ ಉಪಸ್ಥಿತರಾದರೆ ಅವರನ್ನು ಅವಮಾನಿಸುವುದು ಮತ್ತು ಹಿಯಾಳಿಸುವುದು ನಡೆಯುತ್ತಿದೆ. ಅನ್ನದಾತರೊಂದಿಗೆ ಈ ರೀತಿಯಾಗಿ ವರ್ತಿಸುವುದರಿಂದ ಅವರಲ್ಲಿ ಸಂಕುಚಿತ ಭಾವನೆಯನ್ನು ಮೂಡಿಸಿ ಅವರ ಚಿತ್ತವನ್ನು ಬೇರೆಡೆಗೆ ತಿರುಗಿಸುವಂತೆ ಆಗುತ್ತಿರುವುದು ಎಲ್ಲ ತಿಳಿದ ವಿದ್ಯಾವಂತರೆಂಬ ಹಣೆಪಟ್ಟಿ ಧರಿಸಿದವರಿಂದಲೆ ಆಗಿದೆ. ಅವರನ್ನು ಕೀಳಾಗಿ ಕಾಣುವುದರಿಂದ  ಹೂಳುವುದರಲ್ಲಿ ಉದಾಸೀನತೆ ತೋರುತ್ತಿರುವುದು ಸಹಜವಾಗಿ ಕಾಣಸಿಗುತ್ತದೆ.

ಇಂತಹ ಕಾರಣಗಳಿಂದಲೆ ಇವತ್ತಿನ ರೈತ ಕುಟುಂಬದ ಯುವಕ ಯುವತಿಯರು ಸಹ ಪಟ್ಟಣದತ್ತ ಮುಖಮಾಡಿ ಕಂಪನಿ ಕೆಲಸದವರಾಗುತ್ತಿರುವುದು. ಇಂತಹ ತಾರತಮ್ಯ ಧೋರಣೆಯಿಂದಾಗಿಯೆ ಬೇಸತ್ತು ನೌಕರಿಯ ಹಿಂದೆ ಬಿದ್ದಿರುವ ಜಮೀನ್ದಾರ ಕುಟುಂಬದವರು ಸಹ ಕೃಷಿಯನ್ನು ತೊರೆಯುತ್ತಿರುವುದರಿಂದಲೆ ನಿರುಧ್ಯೋಗವೆಂಬ ಪಿಡುಗು ದಿನದಿಂದ ದಿನಕ್ಕೆ ಹೆಚ್ಛುತ್ತಿರುವುದು. ಇಂತಹ ಕೆಟ್ಟ ವರ್ತನೆಗಳು ಕೃಷಿಕ ವೃತ್ತಿಯನ್ನೆ ನಾಶಮಾಡುತ್ತಿದೆ. ಸರ್ಕಾರದ ಜನ ವಿರೋಧಿ ನೀತಿ ಮತ್ತು ರಾಜಕಾರಣಿಗಳ ಪೊಳ್ಳು ಭರವಸೆಗಳೇ ಇಂದಿನ ಈ ಪರಿಸ್ಥಿತಿಗೆ ಮುಖ್ಯ ಕಾರಣವಾಗಿದೆ. ಬಡವ ಬಡವನಾಗಿಯೇ ದುಡಿಯಬೇಕು ಶ್ರೀಮಂತ ಶ್ರೀಮಂತನಾಗಿಯೇ ಮೆರೆಯಬೇಕು ಎಂಬಂತಹ ತಾಟಸ್ಥ್ಯ- ನೀತಿಯಿಂದಾಗಿ ಇವತ್ತಿನ ನಮ್ಮ ಯುವ ಜನತೆಯು ಕೃಷಿಯನ್ನು ತೊರೆದು ಐಷಾರಾಮಿ ಬದುಕಿನತ್ತ ವಲಸೆ ಹೋಗುತ್ತಿರುವುದು.

ಆಕಾಂಕ್ಷಿಗಳಾಗಿ ಬೆಳೆಯುತ್ತಿರುವ ರೈತಾಭಿ ಜನರು ಸಹ ನಾಟಿ ಕೆಲಸ ಬಿಟ್ಟು ಪಟ್ಟಣ ಸೇರಿದರೆ ಉಣ್ಣಲು ತಿನ್ನಲು ಹಾಹಾಕಾರವೇಳುವುದಂತು ಪಕ್ಕಾ. ಇದನ್ನು ತಡೆಗಟ್ಟುವತ್ತ ಲಕ್ಷ್ಯಕೊಟ್ಟು ಅವರನ್ನು ಹಿಯಾಳಿಸುವುದನ್ನು ಬಿಟ್ಟು, ಅವರಿಗೆ ಬೇಕಾಗುವ ಜೀವನಾವಶ್ಯಕತೆಗಳನ್ನು ಪೂರೈಸಿಕೊಳ್ಳುವಂತೆ ಬೆಳೆಗೆ ತಕ್ಕ ಬೆಲೆ ಮತ್ತು ಮಾರುಕಟ್ಟೆ ಒದಗಿಸಿಕೊಟ್ಟು, ಅವರು ಎಲ್ಲಿಗೆ  ಹೋದರು ಸಮಾನ ಗೌರವ ನೀಡಿ ಎಲ್ಲರು ಒಂದೆ ಎಂಬ ಭಾವನೆಯನ್ನು ಕೆರಳಿಸಬೇಕಾಗಿದೆ. ಇನ್ನಾದರು ಬನ್ನಿ ಬಂಧುಗಳೆ ದುಷ್ಟರಾಜಕಾರಣವನ್ನು ಹೋಗಲಾಡಿಸೋಣ. ಆತ್ಮೀಯ ವಿದ್ಯಾವಂತ ಸ್ನೇಹಿತರೆ ಆಳಾಗಿ ದುಡಿಯುವವನನ್ನು ತುಚ್ಛವಾಗಿ ಕಾಣುವುದನ್ನು ಬಿಟ್ಟು ಅವರನ್ನು ನಮ್ಮಂತೆಯೆ ಎಂದು ಸಮಾನವಾಗಿ ನೋಡಿ, ಅವರೊಂದಿಗೆ ಬೆರೆತು ಕೃಷಿಕರನ್ನು ಪ್ರೋತ್ಸಾಹಿಸೋಣ. ನಿರ್ಣಾಮ ಮಾಡುವ ದುಷ್ಠತೆಯ ಮೇಲೆ ಹೊಸದಾದ ಸದ್ಭಾವನೆಯ ಸಮಾನತಾ ಸೌಧವನ್ನು ನಿರ್ಮಿಸೋಣ. ವಿಚಾರಮಾಡಿ, ಅವಲೋಕಿಸಿ, ಮತ ಚಲಾಯಿಸಿ ಉತ್ತಮರ ಕೈಯಲ್ಲಿ ಅಧಿಕಾರವಿತ್ತರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ.

Saturday, December 28, 2013

|| ಕಾಯುವೆಯಾ ||

ಊಟದ ಬಾಳೆಯ
ಬದಿಯಲ್ಲಿ ಇದ್ದಂಗೆ
ಉಪ್ಪಿನಕಾಯಿ
ನೀ ಸ್ವಲ್ಪ ತಡೆದು
ತಾಳ್ಮೆಯಿಂದ ಕಾಯಿ
ಅರಿಯುವೆ ಈ ಜಗದ ವಿಸ್ಮಯ...

ನೋಡು ಗೆಳತಿ
ನವಿಲ ನಾಟ್ಯವ
ಎಂಥಾ ಸೊಬಗಿದು
ಚಿಗುರು ಎಲೆಯ
ಚಿತ್ತಾರ ಮೇಯುತ
ಜಿಗಿವ ಜಿಂಕೆಯ ಕಾಣಲು...

ಮನದೊಡತಿ ಆಲಿಸೆಯಾ
ಮೊಗ್ಗೊಂದು ಹೂವಾಗೊ
ನಾದಮಯ ಸಮಯವ
ನಿನೀಗ ಗುರುತಿಸುವೆಯಾ
ಮೀನು ಈಜಿದ
ಚಂದದ ಚೆಲುವಿನ ದಾರಿಯಾ...

Tuesday, December 24, 2013

ಹಣತೆ ಆರಿದಾಗ

"ಮರೆಯಾಯಿತೊಂದು ದೇಹ ಪದಗಳಲ್ಲಿ ಸೆಳೆಯುತ" ಡಾ|| ಜಿ ಎಸ್ ಶಿವರುದ್ರಪ್ಪನವರೆ ನೀವು ನಮ್ಮನ್ನು ಅಗಲಿ ಭೌತಿಕವಾಗಿ ಮರೆಯಾಗಿರಬಹುದು ಆದರೆ ನೀವು ಬರೆದ ಸಾಲುಗಳೆಂದು ಚಿರವಾಗಿರುತ್ತದೆ ನಮ್ಮೊಂದಿಗೆ. ನಿಮ್ಮ ಕವಿ ಹೃದಯಕ್ಕೆ ನನ್ನ ನಮನಗಳು. ಅಗಲಿದ ನಿಮ್ಮ ದೇಹಕ್ಕೆ ನನ್ನ ಶ್ರದ್ಧಾಂಜಲಿಗಳು.
ನಿಮ್ಮ ಸಾಲಿನಿಂದ ಪ್ರೆರೇಪಿತನಾಗಿ ಬರೆದ ಈ ಕೆಳಗಿನ ಕವಿತೆಯನ್ನು ನಿಮಗೆ ಅರ್ಪಿಸುತ್ತೆನೆ.


ಆವರಿಸಿದೆ ನಡುಗತ್ತಲು
ದೀಪವಾರಿದಾಗ
ಹಚ್ಚುತ್ತೇನೆ ಹಣತೆಯನ್ನು
ಮಬ್ಬು ಮುಸುಕುವಾಗ
ಉರಿವ ದೀಪ ಕತ್ತಲಲ್ಲಿ
ವದನಭಾವ ನೋಡಲೆಂದು...

ನಿನ್ನ ರೂಪು ನಯನ ಕಲಕಿ
ತುಂಬಿತೊಂದು ಚಿತ್ರವ
ನಮ್ಮ ಕಣ್ಣು ಎದುರುಬದರು
ಮುಖವ ನೋಡಿ ತಣಿಯಲು
ಮುಗುಳುನಗೆಯು ತುಟಿಗಳಲ್ಲಿ
ನೀನು ನನ್ನದೆಂದು ಬೀಗಲು...

ಜೀವ ಬೆರೆಯಲು ಕತ್ತಲಾಯಿತು
ಎಣ್ಣೆ ಮುಗಿಯಲು ಬುಡದಲಿ
ಏನು ಕಾಣದೆ ಎಲ್ಲಿ ಹುಡುಕಲಿ
ಯಾರು ಎಂದು ತಿಳಿಯದೆ
ನಾನು ಯಾರೊ ನೀನು ಯಾರೊ
ಕಾಣದಿರಲು ಹಣತೆಯಾರಿದಾಗ...

...ಕತ್ತಲ ಹಿಂದೆ ಬೆಳಕಿದೆ...

ಮುಳುಗಿದ ಸೂರ್ಯ ಮತ್ತೆ ಮೂಡದಿರುವನೆ ಎಂಬ ಮಾತು ಆಶಾವಾದದ ಸೂಚಕ. ಯಾವ ಕ್ಷಣದಲ್ಲಿ ಏನಾಗುತ್ತದೆ ಎಂಬ ಭವಿಷ್ಯ ಅರಿತವರು ಯಾರು ಇಲ್ಲ. ಹಿಂದಿನ ಭೂತವನ್ನು ಮತ್ತು ಮುಂದಿನ ಭವಿಷ್ಯವನ್ನು ಸರಿ ಮಾಡುವುದು ಅಥವಾ ಅಂದುಕೊಂಡಂತೆ ಪರಿವರ್ತಿಸುವುದು ಮಾನವನಿಂದಾಗದ ಕೆಲಸ. ಈಗಿನ ವರ್ತಮಾನವನ್ನು ಧನಾತ್ಮಕವಾಗಿ ಬದಲಾಯಿಸುವುದು ಮತ್ತು ಸ್ವೀಕರಿಸುವುದು ಜಾಣತನದ ಕೌಶಲ್ಯವಾಗಿರುತ್ತದೆ.

ಒಂದು ವಿಚಿತ್ರವೆಂದರೆ ಕೊಡುವ ಕೈ ಬೇಡುವುದು, ಹರಸುವ ಕೈ ನಮಸ್ಕರಿಸುವುದು. ಇಂತಹ ಸಂದರ್ಭ ಬಂದಾಗ ಹೇಗಿದ್ದವನು ಹೇಗಾದೆ ಎನ್ನುತ್ತ ಬೇಸರಿಸಿ ಕೂರದೆ ಹಳೆಯ ಹಿರಿಮೆಗೆ ಮರಳುವ ಪ್ರಯತ್ನಕ್ಕೆ ಅಣಿಯಾದರೆ ಫಲ ದೊರೆಯಲು ಧೃತಿಗೆಡುವ ಪರಿಸ್ಥಿತಿ ಒದಗಿ ಬರಲಾರದು. ಯಾವುದೆ ಕೆಲಸಕ್ಕೆ ಪ್ರಾರಂಭಿಸಿದರೂ ಕಾರ್ಯ ನೆರವೇರದಾಗ ಮನಸ್ಸಿಗೆ ಘಾಸಿಯಾಗಿ ಕೈ ಕಟ್ಟಿದಂತ ಅನುಭವವಾಗಿ ದಿಕ್ಕೆತೋಚದಂತಾಗುತ್ತದೆ. ಇದನ್ನು ಹೆಚ್ಚಿನವರು ಅನುಭವಿಸಿರುತ್ತಾರೆ ಅಥವಾ ಅನುಭವಿಸುತ್ತಾರೆ.

ತನ್ನ ಆತ್ಮೀಯರಲ್ಲಿ ಎದೆಯಾಳದ ನೋವನ್ನಾಗಲಿ ಭಾವನೆಯನ್ನಾಗಲಿ ಹಂಚಿಕೊಳ್ಳುವಾಗ ಅಷ್ಟದಿಕ್ಕುಗಳು ಮುಚ್ಚಿರುವಾಗ ನಾನೆಲ್ಲಿ ಪಯಣಿಸಲಿ ಬಾಳು ಇಷ್ಟೇನೆ ಬದುಕು ಕಷ್ಟಾನೆ ಎನ್ನುತ್ತ ನಿರಾಸೆಯಿಂದ ವೇದನೆಯ ಪರಾಕಾಷ್ಠೆಗೆ ಸಿಲುಕಿ ಜೀವನಕ್ಕೊಂದು ಪೂರ್ಣವಿರಾಮವಿಡುವ ಕೊನೆಯ ನಿರ್ಧಾರಕ್ಕೆ ತಲುಪುವವರು ಕೆಲವರು, ಬಂದಿದ್ದನ್ನ ಸ್ವೀಕರಿಸಿ ಹಾಲಲ್ಲಿ ಜೇನಾಗಿ ನೀರಲ್ಲಿ ಮೀನಾಗಿ ಮೆದುವಾಗಿ ಬದುಕುವವರು ಇನ್ನುಳಿದವರುಗಳು ಆದರೆ ಹೊಳೆಯ ಹರಿವ ನೀರಿನ ಸೆಳೆತಕ್ಕೆ ವಿರುದ್ಧವಾಗಿ ಈಜುವವರು ಯಶಸ್ಸಿನ ಉತ್ತುಂಗಕ್ಕೆ ಕಾಲಿಡುವವರು ಮಾತ್ರ ಛಲಗಾರರು.

ಅನುಭವಸ್ಥರುಗಳು ಹೇಳುವ ಮಾತು ವರ್ತಮಾನದಲ್ಲಿ ಕತ್ತಲೆಯನ್ನು ಅನುಭವಿಸುತ್ತಿರುವವರಿಗೆ ಸಮಾದಾನ ತರುತ್ತದೆ ಮತ್ತು ಬದುಕಲಿಕ್ಕೆ ಸ್ಪೂರ್ತಿಯನ್ನು ನೀಡುತ್ತದೆ. ಅವರು ಹೇಳುವ ಮೊದಲ ಮಾತೊಂದೆ ಆಗಿರುತ್ತದೆ ಕತ್ತಲ ಹಿಂದೆ ಬೆಳಕಿರುತ್ತದೆ ಹೀಗಾಗಿ ನೀ ಧೃತಿಗೆಡಬೇಡ, ಬದುಕಿಷ್ಟೆಯೆಂದು ನಿರಾಸೆಯಿಂದ ಕುಗ್ಗಬೇಡ, ಆಶಾವಾದಿಯಾಗಿ ಗುರಿಯತ್ತ ಮುನ್ನುಗ್ಗು ಯಶಸ್ವೀಯಾಗುವೆ ಎಂದು ಭರವಸೆಯ ಮಾತನ್ನಾಡುತ್ತ ತಮ್ಮ ಜೀವನದ ಉದಾಹರಣೆ ನೀಡುತ್ತ ಬದುಕುವಾಸೆಯನ್ನು ಜೀವಂತಗೊಳಿಸುತ್ತಾರೆ.

ಬರೆ ಹಿರಿಯರ ಮಾತೊಂದೆ ಅಲ್ಲ ನಾವು ಯೋಚಿಸಿದಾಗ ವಿವೇಚನೆಗೆ ಬರುವ ಸಂಗತಿಗಳು ಧನಾತ್ಮಕವಾಗಿ ಬದುಕಲು ಪ್ರೇರೇಪಿಸುತ್ತದೆ. ವಿಚಾರ ಮಾಡಿದಾಗ, ಭೂಮಿ ಸೂರ್ಯನ ಸುತ್ತ ತಿರುಗುತ್ತಿರುವುದರಿಂದಾಗಿ ಕತ್ತಲು ಬೆಳಕೆಂಬ ಆಟಗಳು ಪ್ರತಿದಿನ ಕಾಣಸಿಗುತ್ತಿರುವುದು. ಸೂರ್ಯ ಇದ್ದಲ್ಲೆ ಇರುತ್ತಾನೆ ಆದರೆ ಭೂಮಿಯ ಚಲನದಿಂದಾಗಿ ಕತ್ತಲಾವರಿಸುತ್ತದೆ ಮತ್ತೆ ಬೆಳಕು ಹರಿಯುತ್ತದೆ. ಇದೆ ರೀತಿ ನಮ್ಮ ಬದುಕಿನ ಕೆಲವು ಹೆಜ್ಜೆಗಳಿಂದ ಕಷ್ಟದ ದಿನಗಳು ಕತ್ತಲಂತೆ ಆವರಿಸಿ ಅದೆ ಹೆಜ್ಜೆಗಳನ್ನ ಕಿತ್ತಿಟ್ಟಾಗ ಮಂಜಂತೆ ಕಷ್ಟಗಳೆಲ್ಲ ಕರಗಿ ಬೆಳಕಾಗುತ್ತದೆ. ಯಶಸ್ಸೆಂಬ ನೆಮ್ಮದಿಯು ಇದ್ದಲ್ಲಿಯೆ ಇದ್ದರೂ ನಮ್ಮ ಕೆಲವು ತಪ್ಪು ನಿರ್ಧಾರಗಳು ಮಂದವಾಗಿ ಬದುಕಿಗೆ ಮುಸುಕನ್ನು ಹಿಡಿಯುತ್ತದೆ. ಭೂಮಿಯ ಚಲನೆಯಿಂದ ಕತ್ತಲಾದರೂ ಮತ್ತೆ ಪುನಃ ಬೆಳಕು ಹರಿಯುತ್ತದೆ. ಇದರಂತೆ ನಮ್ಮ ಜೀವನವು ಸಹ ಕೆಲವು ಕ್ಷಣಗಳಲ್ಲಿ ಯೋಚಿಸಲಾಗದಷ್ಟು ಕರಾಬಾಗಿ ಕತ್ತಲಾದರೂ ಭರವಸೆಯ ಪ್ರಯತ್ನದಿಂದ ಬೆಳಕಾಗುತ್ತದೆ. ಅದಕ್ಕಾಗಿ ಕಷ್ಟದ ದಿನಗಳನ್ನು ಧೈರ್ಯದಿಂದ ಧನಾತ್ಮಕವಾಗಿ ಎದುರಿಸಿದಾಗ ಎಲ್ಲವು ಸುಖಾಂತ್ಯವನ್ನು ಕಾಣುತ್ತದೆ. ಹೀಗಾಗಿ ಹೇಳುವುದು ಕತ್ತಲ ಹಿಂದೆ ಬೆಳಕಿರುತ್ತದೆಯೆಂದು.

Thursday, December 19, 2013

|| ಸವೆಸುವೆನು ||

ಈ ಒಲವ ಅರಮನೆಯ
ರಾಜ ನಾನು
ಆ ಸ್ವಾರ್ಥ ಗುಡಿಸಲಿನ
ವೈರಿ ಎಂದು

ಧಾರೆ ಎರೆವ ಪ್ರೀತಿಯಲಿ
ಗಡಸು ಇರದು
ಮುದ್ದಾಡೊ ಮನಸಿನಲಿ
ಕಲ್ಲು ಸಿಗದು

ನನ್ನ ಕರ್ಕಶ ದನಿಯಲ್ಲು
ಕೊಂಕು ಕಾಣದು
ಆಲಿಂಗನದ ಆಶಯವು
ತಪ್ಪಾಗದು

ಜೊತೆನಡೆವ ಬಾಳಿನಲಿ
ಭಾಜಕದ ಹಂಗಿಲ್ಲ
ಬೆರೆತಿರುವ ವೇಳೆಯಲಿ
ಮಾದಕದ ಗುಂಗಿಲ್ಲ

ಸನಿಹಕೆ ಸಿಗದಂತೆ
ಕನಸಿನಲ್ಲಿ
ಅನುಬಂಧ ಅಗಲದಂತೆ
ನನಸಿನಲ್ಲಿ

ನಿನಗೆಂದೆ ಕಾಳಜಿಯು
ಅಳಿವಿರದಂತೆ
ನೀಡುವೆ ಸಂತೋಷವನು
ಸಾವಿಲ್ಲದಂತೆ

ನನ್ನ ಜೀವ ಸವೆಸುವೆನು
ಸಾಗರದ ಅಲೆಯಂತೆ
ಮೊಗದಲ್ಲಿ ಕಾಂತಿಯುಳಿಸುವೆನು
ಆ ಪೂರ್ಣ ಶಶಿಯಂತೆ