ಹರ್ಷೋದ್ಗಾರದೊಂದಿಗೆ ಬೆಳಕಿನ ಹಬ್ಬವನ್ನು ಸಂತೋಷದಿಂದ ಮುಗಿಸಿದ್ದೇವೆ. ನಾವು ಆಚರಿಸುವ ಹಬ್ಬ ಆನಂದದಾಯಕವಾಗಿರ ಬೇಕೆ ಹೊರತು ಮಾಲಿನ್ಯವಾಗಿರಬಾರದು. ದೊಡ್ಡ ಹಬ್ಬಕ್ಕೆ ಹೋಳಿಗೆ, ಕಡುಬು, ಪಾಯಸವ ತಿಂದು ತೇಗಿದ ಜನರೇತಕೆ ಹಬ್ಬದ ಹಿರಿಮೆಯನ್ನು ಮರೆತಿರುವಂತೆ ವರ್ತಿಸುತ್ತಿದ್ದಾರೆ ಎನ್ನುವುದೊಂದು ಪ್ರಶ್ನಾರ್ಥಕ.
ನಾವಾಡಿದ ದಿನಗಳು ಎಷ್ಟೋಂದು ಸುಂದರ ಎಂದು ಚಿಮ್ಮುವಿಕೆಯ ಬಾಯಿಮಾತಿಗೆ ಸೀಮಿತವಾಗಿರುವ ಉಲ್ಲಾಸದ ಕ್ಷಣಗಳು. ಆಟದ ಮೈದಾನವೇತಕೆ ಅಳುತಿದೆ? ಮಕ್ಕಳಿಲ್ಲದೆ ಮರುಗುತಿರುವ ಮೈದಾನದ ತುಂಬೆಲ್ಲಾ ಹಳೆ ನೆನಪುಗಳ ಹಾಕಳಿಕೆಯ ಗುರುತುಗಳು. ಪಟ್ಟಣಗಳಲ್ಲಿ ಆಟದ ಮೈದಾನವಿಲ್ಲದೆ ರಸ್ತೆಗಳಲ್ಲಿಯೆ ಪಟಾಕಿ ಸಿಡಿಸುತ್ತ ಪರರಿಗೆ ಉಪದ್ರ ನೀಡುತ್ತ ಮನರಂಜಿಸುವುದು ಹಬ್ಬದ ಸಡಗರವಾಗಿದೆ.
ದೀಪಾವಳಿಯೆಂದರೆ ದೀಪಗಳ ಹಾವಳಿಯಾಗಿತ್ತು ಆದರೆ ಇಗ ಅದು ಬರೆ ಗಲಾಟೆಯ ಪಟಾಕಿ ಶಬ್ಧವಾಗಿದೆ. ಅಲ್ಲಲ್ಲಿ ಕಂಡು ಬರುವ ದೀಪಗಳು ಸುಂದರವಾಗಿ ಕಾರ್ತೀಕ ಮಾಸವೆಲ್ಲ ಕಂಗೊಳಿಸಿದರೆ ಪಟಾಕಿಯ ಅಬ್ಬರ ಮೂರು ದಿನಗಳಲ್ಲಿ ಬೊಬ್ಬೆ ಹೊಡೆದು ಜನರ ಉತ್ಸಾಹವನ್ನು ಕುಗ್ಗಿಸಿ ತಿಂಗಳೆಲ್ಲ ಹಣತೆ ಹಚ್ಚುವುದನ್ನು ಅಡಗಿಸುತ್ತಿದೆ. ತುಳಸಿಕಟ್ಟೆಯ ಎದುರು ಹಚ್ಚುತ್ತಿದ್ದ ಹಣತೆಯ ದೀಪವಿಂದು ವಿದ್ಯುತ್ ದೀಪಕ್ಕೆ ಗೂಡುಕಟ್ಟಿ ಆಕಾಶಗೂಡೆಂದು ಹೇಳುವಂತೆ ಮಾರ್ಪಟ್ಟಿದೆ. ಅಂಧಕಾರ ಅಳಿಸುವ ಹಣತೆಯ ದೀಪದಲ್ಲಿ ನೆಮ್ಮದಿಯನ್ನು ಕಾಣುತ್ತಿದ್ದರು. ಆದರೆ ಈಗ ಶಾಂತಿ ಕೆಡಿಸುವ, ಮಾಲಿನ್ಯವನ್ನುಂಟುಮಾಡುವ, ಮಿಂಚಿ ಮರೆಯಾಗುವ ಪಟಾಕಿಯ ಬೆಳಕಿನೊಂದಿಗೆ ಮನೋರಂಜನೆಗಷ್ಟೆ ಮೂರು ದಿನದ ದೀಪಾವಳಿ ಮುಕ್ತಾಯವಾಗುತ್ತಿದೆ.
ಪಟ್ಟಣದ ಸಡಗರ ಹಾಗಿರಲಿ, ಹಳ್ಳಿಯ ಹುಡುಗರು ಆಡುವ ಹಾಣೆ ಆಟ ಎಲ್ಲಿ ಮಾಯವಾಗಿದೆ ಎಂಬ ಪ್ರಶ್ನೆ ಉದ್ಭವಿಸಿದಾಗ ಅತ್ತಿತ್ತ ನೋಡುವ ಪರಿಸ್ಥಿತಿ ನಮದು. ಮೊದಲೆಲ್ಲ ಹಾಣೆಗೆಂಡೆ ಆಟ ಹಬ್ಬದ ಮೂರುದಿನವಂತು ರಸ್ತೆಯ ಮೇಲೆ ಹಿರಿಹಿಗ್ಗಿನ ಸಂಭ್ರಮ ಆದರೆ ಅದೀಗ ಮಾಯವಾಗಿರುವುದು ವಿಷಾದದ ಸಂಗತಿ. ಹಾಣೆಗೆಂಡೆ ಎಂದರೆ ಚಿನ್ನಿದಾಂಡು. ಗೆಂಡೆ = ಚಿನ್ನಿ, ಹಾಣೆ ಅಥವಾ ಪಟ = ದಾಂಡು.
ರಸ್ತೆಯ ಮೇಲೆ ಆಡುತ್ತ, ಬರುವ ವಾಹನವನ್ನು ತಡೆದು ನಿಲ್ಲಿಸುತ್ತ, ಆಡುತ, ಕೂಗಾಡುವ ಕಿರುಚಾಟ ಈಗ ಮರೆಯಾಗಿದೆ. ಬಿಸಿಲು ಮೇಲೇರುತ್ತಿದ್ದಂತೆ ಗೆಳುವಿನ ಹಂಬಲ ಜಾಸ್ತಿಯಾಗಿ ಆಟಮುಗಿಸುವ ಗಡಿಬಿಡಿಯಲಿ ಜಗಳವಾಡುತ್ತ ಮೇರು ದನಿಯಲ್ಲಿ ಮಾತಾಡುತ್ತ ವಿಶ್ರಾಂತಿ ತೆಗೆದುಕೊಳ್ಳುತ್ತ ಚರ್ಚೆ ಮಾಡುವ ಸಮಯದಲ್ಲಿ ಆಟ ಮಸ್ತಾಯ್ತು ಎನ್ನುವ ನಿರಾಳಭಾವ.
ಸಂಜೆಯಾಗುತ್ತಿದ್ದಂತೆ ಇಸ್ಪೀಟು ಆಡುವ ಮೋಜು. ಕೆಲವರು ಜುಗಾರಿಮಂಡಲಕ್ಕೆ ಹೋಗಿ ಹಣ ವ್ಯಯಿಸಿದರೆ ಉಳಿದವರು ಮನೆಗಳಲ್ಲಿಯೆ ಮೋಜಿನ ಆಟ ಆಡಿ ಸಮಯವ್ಯಯಿಸಿ ನಿರ್ಲಿಪ್ತಾರಾಗುವರು. ಆದರೆ ಈಗಿನ ಕ್ರಿಕೆಟ್ ಆಟ ಮಸ್ತಿ ಮಾಡುತ ಆಡುವ ಹಾಣೆಯ ಮೇಲೆ ಎಷ್ಟೊಂದು ಪರಿಣಾಮ ಬೀರಿದೆ ಎಂದರೆ ಕಳೆದ ಹಬ್ಬದಂದು ಊರಿಗೆ ಬಂದಂತಹ ಹುಡುಗರನ್ನು ಸೇರಿಸಿ ಆಟ ಆಡುತ್ತಿರುವಾಗ ಕ್ರಿಕೆಟ್ ಆಡಲಿಕ್ಕೆಂದು ತೆರಳುತ್ತಿರುವ ಕೆಲವರು ಬಾ ಎಂದು ಕರೆದಾಗ ಹಾಣೆ ಬಿಟ್ಟು ಅತ್ತ ಕಡೆ ಪಯಣ ಬೆಳೆಸಿದಾಗ ಹಾಣೆ ಆಡುವ ಉತ್ಸಾಹ ಕುಗ್ಗಿಸುವಷ್ಟು ಕ್ರಿಕೆಟ್ ಜಗತ್ತು ಜನರನ್ನು ಸೆಳೆದಿರುವುದಂತು ಸತ್ಯ.
ನಮ್ಮ ಹಿರಿಯರು ಹೇಳಿದ ಮಾತೊಂದ ಕೇಳಿ ಮೌನಕ್ಕೆ ಶರಣಾಗಿ ಅವರ ಮಾತುಗಳನ್ನಾಲಿಸುತ್ತ ಕುಳಿತುಕೊಂಡಾಗ ಅವರು ಮುಂದುವರೆಸುತ್ತ ನಾವು ಚಿಕ್ಕವರಿದ್ದಾಗ ನಮಗೆಲ್ಲ ಹಬ್ಬ ಬಂತೆಂಬ ಸಂಭ್ರಮವಾದರೆ ನಮ್ಮ ಹಿರಿಯರಿಗೆ ಸಾಲ ನೀಡಿದ ಧನಿಕನಿಗೇನೆಂದು ಉತ್ತರಿಸಲಿ ಎನ್ನುವ ಚಿಂತೆಯಾಗಿತ್ತಂತೆ. ಹಬ್ಬದ ಮರ್ದಿನ ಸಾಲ ಮರಳಿಸುವೆನೆಂದು ತೆಗೆದುಕೊಂಡಿರುವ ಸಾಲವನ್ನು ಹೇಗೆ ಮರಳಿಸಲಿ, ಧನಿಕನಿಗೆ ಏನೆಂದು ಉತ್ತರಿಸಬೇಕೆಂಬ ಯೋಚನೆ ದುಗುಡ ಅವರ ಮನಸ್ಸಿನಲ್ಲಿರುತ್ತಿತ್ತಂತೆ. ಮಾತಿಗೆ ಮುಟ್ಟಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಅವರ ಹಬ್ಬದ ಸಂಭ್ರಮ ಯೋಚನಾಮಗ್ನರಾಗುವಂತೆ ಮಾಡುತಿತ್ತಂತೆ. ಹಿರಿಯರು ಹೇಳುತ್ತಿದ್ದ ಮಾತು "ಮಕ್ಕಳೆ ನಿಮಗೆಲ್ಲ ಹಬ್ಬ ಬಂತೆಂಬ ಖುಷಿ ಆದರೆ ನಮಗೆ ಹಬ್ಬದ ಮರುದಿನ ಹೇಗೆ ಹಣ ಮರುಪಾವತಿಸಬೇಕೆಂಬ ಚಿಂತೆ, ಸಾಲ ನೀಡಿದವನಿಗೆನೆಂದು ಉತ್ತರಿಸಲಿ ಎಂಬ ಯೋಚನೆ" ಎಂದು ಹೇಳಿದ್ದನ್ನು ನೆನಪಿಸಿಕೊಂಡು ಭಾವುಕರಾಗಿದ್ದು ಮನ ಕಲುಕಿತು.
ಸಾಲ ಮಾಡಿಯಾದರು ತುಪ್ಪ ತಿನ್ನು ಎಂಬಂತೆ ನೂರು ಅಡಿಕೆಯನ್ನು ಮಾರಿ ಬಂದ ಹಣದಿಂದ ಹಬ್ಬ ಆಚರಿಸಿದ ವರ್ಷಗಳನ್ನ ನೆನಪಿಸಿಕೊಂಡರು. ಅಂತಹ ಕ್ಷಣದಲ್ಲು ಪರ್ವ ಕಾಲವನ್ನು ಎಷ್ಟೊಂದು ಮನೋರಂಜನೆಯೊಂದಿಗೆ ಆಚರಿಸುತ್ತಿದ್ದೆವು ಆದರೆ ಆ ಮನೋಲ್ಲಾಸವಿಂದು ಮರೆಯಾಗಿದೆ ಎಂದು ಬೇಸರಿಸಿದರು.
ಮೊದಲೆಲ್ಲ ಬೂದ್ಗಳು ಎಂದು ಹಬ್ಬದ ಮುಂಚಿನದಿನದ ರಾತ್ರಿ ಬಾಳೆಗೊನೆ, ಮೊಗೆಕಾಯಿ, ಎಳನೀರು ಹೀಗೆ ತಿನಿಸನ್ನು ಕದ್ದು ತಿನ್ನುವ ಉತ್ಸಾಹ ಈಗಿನವರಲ್ಲಿ ಇಲ್ಲ. ಅದು ಅಲ್ಲದೆ ಅವರಿಗೆ ಈ ರೀತಿಯಲ್ಲು ಆನಂದಿಸಬಹುದೆಂದು ಗೊತ್ತಿಲ್ಲ ಪಾಪ ಎಂದು ಉದ್ಗರಿಸುವ ಹಾಗಾಗಿದೆ. ಶಿಂಡಲೆ ಕಾಯಿಯನ್ನು ಹಣ್ಣಾಗಿಸಿ ಹೊಸದಾಗಿ ಮದುವೆಯಾದ ದಂಪತಿಗಳ ಬೆನ್ನಿಗೆ ಹೊಡೆದು ಸಂಭ್ರಮಿಸುವ ಜಾಯಮಾನ ಮರೆಯಾಗಿದೆ.
Nimma article haane aatavannu mareta halli haidana naija chitravannu bimbiside ..
ReplyDeleteನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
Deleteಹೊಲೇsssssssssssssssssssss ಹೋ!!!!!!!!!!!!!!!!!!!!
ReplyDeleteನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
Deleteಹಳ್ಳಿ ಮನೆಯ ಸೊಗಡನ್ನು ಪರಿಚಯಿಸುವ ಲೇಖನ. ಹಬ್ಬಗಳು ಅಂದಿಗೆ ಜೀವಂತ. ಿಂದು ಅವೂ ಕೂಡ ಕೃತಕವಾಗುತ್ತಿವೆ ಎಂಬ ನಿಮ್ಮ ಕಳಕಳಿ ನಿಜ. ಉತ್ತಮ ಲೇಖನ.
ReplyDeleteನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
Delete