ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಗಮನಹರಿಸಿ ಅವಲೋಕಿಸಿದಾಗ ಜನರೇಕೆ ಹೀಗಾಡುತ್ತಿದ್ದಾರೆ, ಏತಕೆ ಹೀಗೆ ವರ್ತಿಸುತ್ತಿದ್ದಾರೆ ಎನ್ನುವುದು ಯೋಚಿಸ ಬೇಕಾದ ಸಂಗತಿ. ವಿದ್ಯಾವಂತರು ತುಂಬಿರುವ ನಾಡಲ್ಲಿ ಅನಕ್ಷರತೆಯನ್ನು ಹೋಗಲಾಡಿಸುವ ಹೊತ್ತಲಿ ಈ ಮನುಷ್ಯರೇಕೆ ಮನುಷ್ಯತ್ವವನ್ನು ಮರೆಯುತ್ತಿದ್ದಾರೆ ಎಂಬ ಯೋಚನೆಯ ಹಿಂದೆ ಬಿದ್ದಾಗ ಗಮನಕ್ಕೆ ಬರುವ ವಿಷಯಗಳು ಆಶ್ಚರ್ಯಕರ ವಿಪರ್ಯಾಸವೆನಿಸುತ್ತದೆ.
ಹೀಗೊಂದು ಚಿಂತನೆಯ ಬೆನ್ನ
ಹತ್ತಿದರೆ ಹಲವಾರು ಸಂಗತಿಗಳು ಅನಾವರಣಗೊಳ್ಳುತ್ತದೆ. ಓದಿ ಒಳ್ಳೆಯ ಹುದ್ದೆಯಲ್ಲಿರುವ
ವಿದ್ಯಾವಂತನು ಸಹ ಮಾನವೀಯತೆಯ ಸಹಜ ಧರ್ಮವನ್ನು ಮರೆತಿದ್ದಾನೆ. ವಿದ್ಯಾವಂತರಾದ ಯುವಕರು ಸಹ
ಅಮಾನವೀಯ ಕೃತ್ಯವೆಸಗುತ್ತಾರೆ,
ಅವಿದ್ಯಾವಂತರಂತೆ
ವರ್ತಿಸುತ್ತಾರೆ ಎಂದಾಗ ಓದಿ ಗಳಿಸಿದ್ದೇನು, ಓದಿನಿಂದಾದ ಉಪಯೋಗವೇನು ಎಂಬ ತಾತ್ಪರ್ಯದ ವಿಮರ್ಶೆ ನಡೆಯುತ್ತದೆ.
ಪ್ರತಿಯೊಬ್ಬ ಮನುಷ್ಯನು ಸಹ
ತನ್ನ ಸ್ವಾರ್ಥ ಸಾಧನೆಯ ಹಿಂದೆ ಬಿದ್ದು ಉಳಿದದ್ದನ್ನು ನಿರ್ಲಕ್ಷಿಸುವುದು ಸರ್ವೆಸಾಮನ್ಯ. ಆತ
ವಿದ್ಯಾವಂತನಾಗಲಿ ಅವಿದ್ಯಾವಂತನಾಗಲಿ ಅದು ಬೇರೆ ಬೇರೆಯದೆ ಪ್ರಾಮುಖ್ಯತೆಯನ್ನು
ಪಡೆದಿರುತ್ತದೆ. ಪ್ರತಿಯೊಭ್ಬರೂ ಸಹ ದೇಶದಿಂದ
ನಮಗೇನಾಗಿದೆ ಎಂದು ಆಲೋಚಿಸುತ್ತಾರೆಯೆ ಹೊರತು ನಾವು ದೇಶಕ್ಕೇನು ನೀಡಿದ್ದೇವೆ ಎಂದು
ಯೋಚಿಸುವುದಿಲ್ಲ. ಒಬ್ಬೊಬ್ಬ ಪ್ರಜೆಯು ಸಹ ಸಂಪನ್ಮೂಲಗಳ
ಸದುಪಯೋಗಕ್ಕೆ ಪ್ರಾಮುಖ್ಯತೆಯನ್ನು ನೀಡಿ ಸ್ವಲ್ಪ ಮಾತ್ರವನ್ನೆ ಉಳಿಸಿದರು ಅದು ಹನಿ ಹನಿ ಸೇರಿ
ಹಳ್ಳವಾದಂತೆ ದೇಶಕ್ಕೆ ಕೊಡುಗೆಯಾಗಿ ಮಾರ್ಪಡುತ್ತದೆ.
ಇಂದಿನ ವಿದ್ಯಮಾನ
ಹೇಗಾಗಿದೆಯೆಂದರೆ ಪ್ರತಿಯೊಬ್ಬನು ಓದಬೇಕು, ಇದು ಸ್ವೀಕೃತವಾಗಿರುವಂಥದ್ದು. ಯಾಕೆಂದರೆ ವಿದ್ಯೆ ಇಲ್ಲದ ಬಾಳು ಹದ್ದಿಗಿಂತಲು ಕಡೆ ಎಂಬ
ನಾಣ್ನುಡಿಯಂತೆ ಪ್ರತಿಯೊಬ್ಬನು ಅಕ್ಷರಸ್ಥನಾಗ ಬೇಕಿರುವುದು ಅವಶ್ಯಕ. ಆದರೆ ಓದಿದವನೆಲ್ಲವನು ಬರೆ
ಕಂಪನಿಯ ಉದ್ಯೋಗಸ್ಥನಾಗ ಬೇಕೆನ್ನುವುದು ಸರಿಯಲ್ಲ. ಕೃಷಿಕ ವೃತ್ತಿಯನ್ನು ಬಿಟ್ಟು ಬರೆ ಬೇರೆ
ಉದ್ಯೋಗ ಮಾಡಲು ಪ್ರಾರಂಬಿಸಿದರೆ ಮುಂದೊಂದು ದಿನ ಕೃಷಿ ಮಾಡಲು ಜನರಿಲ್ಲದೆ ಉದ್ಯೋಗ ಲಭಿಸದೆ
ನಿರುದ್ಯೋಗ ತಾಂಡವವಾಡುವುದು ಮತ್ತು ಆಹಾರಕ್ಕೆಂದು ಹಣವನ್ನೆ ತಿನ್ನಬೇಕಾದ ಪರಿಸ್ಥಿತಿ ಬರಬಹುದು.
ಹೀಗೆ ಮುಂದುವರಿದರೆ
ಬೆಳೆಯಿಲ್ಲದೆ ಆಹಾರ ಲಭಿಸದೆ ಶಾಖಾಹಾರಿಯು ಸಹ ಸಿಕ್ಕ ಸಿಕ್ಕ ಪ್ರಾಣಿಗಳನ್ನು ಕೊಂದುತಿಂದು ಹಸಿವನ್ನು
ನೀಗಿಸಕೊಳ್ಳಬಹುದು ಆದರೆ ಅದು ಸಹ ಹೆಚ್ಛುಕಾಲ ನಡೆಯುವುದಿಲ್ಲ ಯಾಕೆಂದರೆ ನಾವೀಗಲೆ ಪ್ರಾಣಿಗಳ
ಅವಸಾನಕ್ಕೆ ಕಾರಣವಾಗಿತ್ತಿದ್ದೇವೆ. ಅಳಿವಿನಂಚಿನಲ್ಲಿರುವ ಪ್ರಾಣಿ ವರ್ಗಗಳು ಮಾಯವಾಗಿ ತಿನ್ನುವ
ಆಹಾರಕ್ಕು ಹಪತಪಿಸುವ ಹಾಗಾಗುತ್ತದೆ.
ಹಸಿವಿನ ಹಾಹಾಕಾರಕ್ಕಾಗಿ
ತಿನ್ನಲೇನು ಸಿಗದೆ ಈ ಕುಲು ಮಾನವ ನರಭಕ್ಷಕನಾಗಿ ಬಲವಂಥರು ಮಾತ್ರ ಜೀವಿಸುತ್ತ ಮಾನವ ಸಂತತಿ
ನಾಶವಾಗಿ ಅನಾಗರೀಕತೆಯು ತಲೆದೋರಿರುತ್ತದೆ. ಇವನ್ನೆಲ್ಲ ಅವಲೋಕಿಸಿದಾಗ ಕೃಷಿಯನ್ನು
ಕಡೆಗೆಣಿಸುವುದೆಷ್ಟು ಸರಿ ಎಂಬ ವಿಚಾರವನ್ನು ನಮ್ಮ ಬುದ್ಧಿಮತ್ತೆಯ ಓರೆಗಲ್ಲಿಗೆ ಹಾಕುವುದು
ಸೂಕ್ತ.
ವಿದ್ಯಾವಂಥ ನಾಗರೀಕರೆ
ಇಂದು ದುಂದುವೆಚ್ಛ ಮಾಡುವಲ್ಲಿ ಮೊದಲಿಗರು. ನಮ್ಮ ಸಂಪನ್ಮೂಲಗಳ ಅವನತಿಗೆ ಕಾರಣೀಭೂತರು ಎಂದರೆ
ತಪ್ಪಾಗಲಾರದು. ಏಕೆಂದರೆ ನಮ್ಮಲ್ಲಿ ತಲೆದೊರುತ್ತಿರುವ ಅವಶ್ಯಕತೆಗಳ ಕೊರತೆಗೆ ಇವರು ಮಾಡುವ ನಿಷ್ಕಾಳಜಿಯುತ
ಬಳಕೆಯೆ ಮೂಲವಾಗಿದೆ. ಅವುಗಳು ವಿದ್ಯುತ್ ಬಳಕೆಯಲ್ಲಿರಲಿ, ಜಲ ಸಂಪನ್ಮೂಲದಲ್ಲಿರಲಿ, ಬೇರಾವುದೇ ಅವಶ್ಯಕತೆಯಲ್ಲಾದರೂ ಇವರೆ ನೇರ
ಹೊಣೆಗಾರರಾಗಿರುತ್ತಾರೆ.
ಬೇರೆಯವರು ಬರುವ ವಿದ್ಯುತ್
ಬಿಲ್ಲನ್ನು ತುಂಬುವವರಾಗಿದ್ದರೆ ಮನಸಿಚ್ಛೆಯಂತೆ ಬಳಸುತ್ತ ಅನಾವಶ್ಯಕವಾಗಿ ಕಂಡ ಕಂಡಲ್ಲಿ
ವಿದ್ಯುತ್ ದೀಪ ಉರಿಸುತ್ತ ನಿಷ್ಕಾಳಜಿಯುತರಾಗಿರುತ್ತಾರೆ. ಅನಾವಶ್ಯಕವಾಗಿರುವ ದೀಪ ನಂದಿಸಿ ಹನಿ
ಹನಿ ಕೂಡಿ ಹಳ್ಳವಾದಂತೆ ಹಳ್ಳಿಗಳಲ್ಲಿ ವಿದ್ಯುತ್ ಕೋತ ಅನುಭವಿಸುತ್ತಿರುವ ಪ್ರಜೆಗಳಿಗೆ
ನೆರವಾಗುವುದನ್ನು ಮರೆತು ಮೆರೆಯುತ್ತಾರೆ. ಹಾಗೆ ನೀರನ್ನು ಸಹ ವ್ಯತಿರಿಕ್ತವಾಗಿ ಉಪಯೋಗಿಸಿ ಪೊಲು
ಮಾಡುವವರು ಬಹಳಷ್ಟಿದ್ದಾರೆ. ಈಗಾಗಲೆ ನೀರಿನ ಮಟ್ಟ ಕುಸಿದಿದ್ದು ಮುಂದೊದಗುವ ಪರಿಣಾಮವನ್ನು
ಲೆಕ್ಕಿಸದೆ ವ್ಯಯಿಸುತ್ತಿರುವುದು ಅಮಾನುಷ ಕೃತ್ಯವಾಗಿದೆ.
ಅಷ್ಟೇ ಅಲ್ಲದೆ, ಊಟ ಮಾಡುವಾಗ ತಿನ್ನುವ ಆಹಾರವನ್ನು ತಿನ್ನುವುದಕ್ಕಿಂತ
ಹಾಳುಮಾಡುವುದೆ ಜಾಸ್ತಿಯಾಗಿದೆ. ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಮತ್ತೆ ಕೆಲವು ದಿನಚರಿಯ
ಔತಣಕೂಟದಲ್ಲಿಯು ಸಹ ಅನ್ನ ಹಾಗೂ ಇತರೆ ತಿನಿಸನ್ನು ತಾನು ದೊಡ್ಡವನೆಂದು
ತೊರಿಸಿಕೊಳ್ಳುವುದಕ್ಕೋಸ್ಕರ ಬಟ್ಟಲಿನಲ್ಲಿಯೇ ಹಾಳು ಮಾಡುತ್ತಿರುವುದನ್ನು ನೋಡಿದರೆ
ಅಸಹ್ಯವೆನಿಸುತ್ತದೆ.
ಹೀಗೆ ಹಾಳುಮಾಡಿ
ಎಲ್ಲವನ್ನು ವ್ಯಯಿಸುತ್ತಾ ವಿನಾಶದೆಡೆಗೆ ಕೊಂಡೊಯ್ದು ಮುಂದಿನ ಪೀಳಿಗೆಯವರು ಇತಿಹಾಸದಲ್ಲಿ ಓದಿ
ತಿಳಿಯುವಂತೆ ಮಾಡುವ ದರಿದ್ರ ಕೆಲಸಕ್ಕೆ ಮುಂದಾಗಿರುವುದು ಖಂಡನೀಯವಾಗಿದೆ. ಗಮನಿಸಿ
ತಿಳಿಯಬೇಕಾಗಿದ್ದು ಇವೆಲ್ಲವು ವಿದ್ಯಾವಂಥರೆಂಬ ಹಣೆಪಟ್ಟಿಧರಿಸಿದವರಿಂದಲೆ ಆಗುತ್ತಿರುವುದು
ವಿಷಾದನೀಯ ಸಂಗತಿ. ಹೀಗೆ ಮುನ್ನೆಡೆದರೆ ಇದು ಅನಾಗರೀಕತೆಗೆ ಮುನ್ನುಡಿ ಬರೆಯುವ
ಚಟುವಟಿಕೆಯಾಗುವುದರಲ್ಲಿ ಅನುಮಾನವಿಲ್ಲ. ಹೇಗೆ ಭೂಮಿ ಸೂರ್ಯನ ಸುತ್ತ ಸುತ್ತುತ್ತಿರುವುದೋ ಹಾಗೆ
ಕಾಲಚಕ್ರ ಸಹ ತಿರುಗಿ ನಾಗರೀಕನಾಗಿರುವ ಮನುಜನನ್ನು ಮತ್ತೆ ಪುನಃ ಅನಾಗರೀಕತೆಯತ್ತ ಕೊಂಡೊಯ್ಯುವ
ಕಾಲ ಸಮೀಪಿಸುತ್ತಿದೆಯೇನೊ ಎಂಬ ಆತಂಕ ಮೂಡುತ್ತಿದೆ. ಅಕ್ಷರಸ್ಥರಾಗಿರುವ ನಾವು
ಇಂತಹ ಪರಿಸ್ಥಿತಿಯಲ್ಲಿ ಅನವಶ್ಯಕವಾಗಿ ಒದಗಿರುವ ಸಂಪನ್ಮೂಲಗಳನ್ನು ಪೋಲು ಮಾಡುವುದನ್ನು
ಸ್ವಯಂಪ್ರೇರಿತರಾಗಿ ತಡೆದು ಸದುಪಯೋಗ ಪಡಿಸಿಕೊಳ್ಳುವುತ್ತ ಹೆಜ್ಜೆ ಹಾಕೋಣ.