Tuesday, October 1, 2013

|| ಹೃದಯದ ಕಣ್ಣು ||

ನೀನೆಂದು ಪರಿತಪಿಸದಿರು ನನಗಾಗಿ
ನಾ ತೊರೆಯೆ ನಿನ್ನೆಂದು ಪರರಿಗಾಗಿ
ಅರಿಯುವೆ ನಿನ್ನ ದುಗುಡ ಮನಸಲಿ
ನಾನಿರುವೆ ಬಾಳಲ್ಲಿ ಸಮಾಜ ಮುಖಿಯಾಗಿ ||

ಯಾರೊಂದಿಗೆ ಮಾತನಾಡಿದರೂ
ನಿನಗೆಂದೆ ಮುಡಿಪಾಗಿರುವೆನು
ದಿಗಿಲಾಗದಿರಲಿ ಅಂತರಂಗದಲೆಂದು
ಕಳೆದುಕೊಳ್ಳದಿರುವೆ ನೀ ನನ್ನೆಂದು ||

ಹಲವಾರು ಜನರೊಂದಿಗೆ ಒಡನಾಟ
ಹತ್ತಾರು ವಿಷಯದಲಿ ಸೆಣೆಸಾಟ
ಯಾವ ಕ್ಷಣದಲಿ ಯಾರಾರಿಗಾಗುವರೊ
ಬೇಕಾಗುವರೆಂದು ಬೇರೆಯವರ ಬಿಡೆನು ||

ಅಂಜದಿರು ಅಳುಕದಿರು ಎಂದೆಂದು
ಒಂಟಿ ಮಾಡೆನು ಅಗಲಿ ನಿನ್ನೆಂದು
ಭಯಪಡದಿರು ಏಕಾಂಗಿಯಲ್ಲ ನೀನು
ಬೇರಾರ ಸೆಳೆತಕು ಸಿಗುವುದಿಲ್ಲ ನಾನು ||

ಏನಾಗಲಿ ಎಂಥಾಗಲಿ ಬದುಕಿನಲಿ
ಜೀವ ಮೀಸಲಾಗಿದೆ ನಿನಗಾಗಿ
ನೀನಾಗಿರುವೆ ಜಗ ನೋಡುವ ಕಣ್ಣುಗಳು
ನಾನಾಗಿರುವೆ ಅದ ರಕ್ಷಿಸುವ ರೆಪ್ಪೆಗಳು ||

ನೋವಿಗೆ ನೀರ ಸುರಿಸುವ ಕಣ್ಣಾದರೆ ನೀ
ಅದ ತಡೆದು ಮರೆಮಾಚುತ ರೆಪ್ಪೆಯಾಗುವೆ ನಾ
ಕುರುಡನಾಗುವೆ ಪ್ರೀತಿಯಲಿ ತೊರೆದರೆ ನಿನ್ನ
ಎಂದಿಗು ಕಳೆದುಕೊಳ್ಳೆನು ನನ್ನ ಹೃದಯದ ಕಣ್ಣ ||

6 comments:

  1. ಬೇರಾರ ಸೆಳೆತಕು ಸಿಗುವುದಿಲ್ಲ, ರೆಪ್ಪೆಯಾಗುವೆ ನಾ ಮತ್ತು ಎಂದಿಗು ಕಳೆದುಕೊಳ್ಳೆನು - ಇಡಕಿಂತ ಅಭಯ ಬೇಕೆ ಆಕೆಗೆ? :)

    ReplyDelete
    Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

      Delete
  2. Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

      Delete
  3. ನಿಮ್ಮ ಹೃದಯದ ಕಣ್ಣ ಮೂಲಕ ಧೈರ್ಯ ಭರವಸೆಗಳ ಮಹಾಪೂರವನ್ನೇ ಹರಿಸಿದ್ದೀರಿ. ಸುಂದರವಾದ ಕವನ

    ReplyDelete
    Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

      Delete