Tuesday, May 28, 2013

|| ನೇತ್ರದಾನ ||


ಜಗವ ನೋಡಲು ನಯನ ಬೇಕು
ಲೋಕ ತಿಳಿಯಲು ಬುದ್ಧೀ ಸಾಕು
ಜಗದ ಕೆಲಸವು ಬುದ್ಧಿಯಿಂದ
ಜಗದ ಚಲನೆಯು ಶಕ್ತಿಯಿಂದ
ಅದನು ನೀ ಅರಿತು
ಅದರಂತೆ ಬದುಕ ಬೇಕು ||

ಬಾಡಿದ ಜೀವಕೆ ಆಸರೆಯಾದರೆ
ಮೆರೆವುದು ನಿನ್ನ ಹಿರಿಮೆಯು
ಮಾಡದ ತಪ್ಪಿಗೆ ಪಡೆದ ಶಿಕ್ಷೆಯು
ಕಾಣದ ಕುರುಡನೆಂಬ ಪಟ್ಟಿಯು
ಅದನು ಅಳಿಸಲು ತೊಡು ದೀಕ್ಷೆಯ
ಮಾಡು ಅನುಕಂಪದ ಸಹಾಯವ ||

ಸತ್ತ ಮೇಲು ಕಾಣ ಬೇಕೆ
ಮಾಡು ಜೀವನದಲಿ ಗುರುತಿಸುವ ದಾನವ
ಮಾಡಿದ ಕೆಲಸವ ನೆನೆಯ ಬೇಕೆ
ಅರಳುವಂತೆ ಮಾಡು ಮುದುಡಿದ ಕುಸುಮವ
ಚಾಚು ನಿನ್ನ ಸಹಾಯ ಹಸ್ತವ
ಅಂಜಿ ಹೆದರದಿರು ಮಾಡಲು ನೇತ್ರದಾನವ ||

Tuesday, May 21, 2013

|| ಬಾಳ ರಥ ||

ಜಗವ ಬೆಳಗೊ
ಚಂದ್ರ ಬಂದ ಬಾನಿನಲ್ಲಿ
ಬದುಕ ಬೆಳಗೊ
ಪ್ರಭೆಯು ಇಂದು ಬಾಳಿನಲ್ಲಿ ||

ನೀನು ಬರೆದೆ ಕಾವ್ಯವಿಂದು
ಮನದ ಪುಟದಲಿ
ಅಳಿಸಲಾಗದಂತ ರೇಖೆ
ಚಿತ್ರವಾಗಲಿ ||

ಹೊಸದು ನನ್ನ ಬಾಳ ಪಯಣ
ನಿನ್ನ ಜೊತೆಯಲಿ
ಗಾಲಿಯಾಗಿ ಸೇರಿ ತಿರುಗವ ನಾವು
ಬಾಳ ರಥದಲಿ ||

|| ಶೃತಿ ಬಂದು ಸೇರಿದಾಗ ||

ಚಂದ್ರ ಚೂರಾಗಿ
ಚೂರು ಧರೆಗುರುಳಿ
ಮೊಗದಲಿ
ಕಾಂತಿ ಕಂಗೊಳಿಸುತಿಹುದು ||

ಕಲ್ಪನೆಯ ಕುಸುಮವಾಗಿ
ಮುಡಿಯೇರುವ ಮಲ್ಲಿಗೆಯು ನೀ
ಮಲ್ಲಿಗೆಯ ಮಕರಂದದೊಳಗಿನ
ಮಧುವು ನಾನಾಗಿ ನಿನ ಅಂದ ವೃದ್ಧಿಸುವೆ ||

ಮೂಗಿನ ಮೇಲೊಂದು ಕಿವಿಗಳಲ್ಲೆರಡು
ಕಣ್ಣ್ಕಾಂತಿಯಲಿ ಮಿನುಗುತಿರುವ
ಇನ್ನೆರಡು ತಾರೆಗಳು ಕಂಗೊಳಿಸುತಿಹುದು
ರೇಷಿಮೆಯ ಕೇಶಗಳು ಹೊಳೆಯುತಿಹುದು ||

ಜೊತೆಯಲಿ ಹಾಡುವೆನು ರಾಗವನಿಂದು
ಪದಗಳ ಪೋಣಿಸುವ ಕಾರ್ಯ ನನದೆಂದು
ಭಾವವನು ತುಂಬುವೆನು ತಾಳವನು ಹಾಕುವೆನು
ಸುಂದರ ಜೀವನ ರಾಗ ಶೃತಿ ಬಂದು ಸೇರಿದಾಗ ||

Saturday, May 18, 2013

|| ಅಮ್ಮ ||

ಜಗ ನುಡಿವುದು ದಿನವು
ನಿನದೆಂದು
ಬಾಹ್ಯ ಪೂಜೆಗೆ ತೊರ್ಪಡೆಯು
ದಿನವೆಂದು
ನಿನ ಪ್ರೀತಿಗೆ ಸರಿಸಾಟಿಯಿಲ್ಲದು
ಲೋಕದಲಿ
ಬೇರೆಲ್ಲೂ ಇರುವುದ ನಾ ಕಾಣೆನು
ಕಣ್ಣಂಚಲಿ
ಜಗ ತಿಳಿಸಿ ಸರಿ ದಾರಿ ತೋರುವ
ಗುರುವು ನೀ
ಶಿಲೆಯನು ಶಿಲ್ಪವಾಗಿ ಕೆತ್ತುವ
ಶಿಲ್ಪಿಯು ನೀ ||

ಪ್ರತಿಕ್ಷಣವು ಒಳಿತನ್ನ ಬಯಸುವ
ಒಲವಿನ ಪ್ರೀತಿಯು
ಹೊತ್ತು ಹೆತ್ತು ಸಲಹಿದ ತ್ಯಾಗಕೆ
ನಾ ಚಿರ ಋಣಿಯು
ದೇಹದ ನೋವಿಗೆ ಮನಸಿನ ಮಿಡಿತಕೆ
ಕೂಗುವೆವು ಅಮ್ಮಾ ಎಂದು
ಭಗವಂತನೆ ಶರಣಾಗಿಹನು ತಾಯಿಗೆ
ದೇವರು ನೀನೆಂದು
ಇದೊಂದು ದಿನ ನುಡಿಯಲಿ ಮಾಡುವುದು
ನಿನ ಭಜನೆ
ಪ್ರತಿ ದಿನ ಮನದಲಿ ಮಾಡುವೆನು
ನಿನ ಆರಾಧನೆ ||

Thursday, May 16, 2013

|| ಕಾಯುತಿರುವೆ ||

ನೀ ಕದಡಿದ ನೀರಿನಲಿ
ಗಟ್ಟಿಯಾಗಿಹ ಕೆಸರಿನ ಮೇಲೆ
ನೀ ನಡೆದ ದಾರಿಯಲಿ
ಮೂಡಿದ ಹೆಜ್ಜೆ ಗುರುತುಗಳನು
ಹನಿಯಂತೆ ಎದೆಗಿಳಿದು ಅಳಿಸದಿರು
ನಿನ ಬಿಟ್ಟು ಬೇರೇನು ಬೇಡದು
ನನಗಾಗಿ ಹಾಗೆ ಬಿಡು ಗುರುತನಾದರು
ನೆನಪಿನಲೆ ಬದುಕುಳಿಯಲು ||
 
ನೀರು ಇರದ ಬರಗಾಲದಲಿ
ಬೆವರು ಕಣ್ಣೀರು ನಿಲ್ಲದು
ನೀನಿಲ್ಲದ ಬದುಕಿನಲಿ
ನಿನ ನೆನೆಪು ಮರೆಯಾಗದು
ಅಮವಾಸ್ಯೆಯಲಿ ಚಂದ್ರ ಮರೆಯಾದರು
ಪ್ರಥಮದಂದು ಮರಳಿದಂತೆ
ನೀ ತಿರುಗಿ ಬರುವೆಯೆಂದು
ಚಾತಕ ಪಕ್ಷಿಯಂತೆ ಕಾಯುತಿರುವೆ ||

|| ಧನ್ಯೋಸ್ಮಿ ||


ನೋಡಿದೆ ಹೀಗೊಂದು ಮಾಹಿತಿಯ
ಯೋಚಿಸಿದೆ ಇದಾಗಬಹುದೆಂಬ ಸಂಗತಿಯ
ಕಳುಹಿಸಿದೆ ನನದೊಂದು ಕವಿತೆಯ
ನೆನೆಯುತ್ತ ಮನದಲ್ಲಿ ಪಾರ್ಥಸಾರಥಿಯ ||

ವಿಷಯಗಳ ಬಿತ್ತರಿಸಿದ್ದು ಮೂರು ''
ಅರಿಯದೆ ನಿರಾಕರಿಸಿದವ ಮೂರ್ಖ
ಪರಿಷ್ಕರಿಸಿ ನಿರ್ಣಯವಾಯಿತು ಪುಸ್ತಕ
ಬಂದಿತು ಬಿಡುಗಡೆಯ ದಿನ ಅಂದು ವೈಶಾಖ ||

ಲೋಕಾರ್ಪಣೆಯ ದಿನದವರೆಗೆ ಪಡೆದದ್ದು
ಬೇರೆಯವರ ಹಸ್ತಾಕ್ಷರ
ಬಿಡುಗಡೆಯ ದಿನದಿಂದ ನೀಡುವಂತಾಯಿತು
ಬೇರೆಯವರಿಗೆ ಹಸ್ತಾಕ್ಷರ
ನಾದಬ್ರಹ್ಮನ ನೋಡುತ್ತ ಕಣ್ತುಂಬಿತು
ನುಡಿಮುತ್ತು ಕೇಳುತ್ತ ಕಿವಿತುಂಬಿತು ||

ನೂರು ಕವಿಗಳ ಕವನಗಳು ಒಂದೆಡೆ
ತವಕದಲಿ ಮನ ತಿರುಗಿತು ಕಡೆ
ಜಗ ನೋಡಲು ಬಂದಿತು ಶತಮಾನಂಭವತಿ
ಶ್ರಮಿಸಿದ ಜೀವಗಳಿಗೆ ಹಾರೈಕೆಯು "ಶತಸಹಸ್ರಮಾನಂಭವತಿ" ||