Friday, June 13, 2014

|| ತೊರೆದು ಹೊರಟಿರುವೆ ||

ಇಂಪಾದ ರಾಗದಲ್ಲಿ
ನನ ಮದುವೆಯ ಕರೆಯೋಲೆ
ನೀ ನೀಡು ಕೋಗಿಲೆ
ಗರಿ ಬಿಚ್ಚಿ ನಾಟ್ಯವಾಡಿ
ಆಕರ್ಷಿಸಿ ಸ್ವಾಗತವ
ನೀ ಕೋರು ನವಿಲೆ
ನಿಮ್ಮೊಂದಿಗೆ ನಾ ಕಳೆದ
ನೆನಪನ್ನು ಮೆಲಕುತ
ಇನಿಯನೂರಿಗೆ ನನ್ನ
ಕಳುಹಿಸಿಕೊಡ ಬನ್ನಿರೆ
ನಾ ಜೊತೆಯಾಗಿ
ಹೊರದುವ ಮುನ್ನ
ಬಳಿಬಂದು ಹರಸುತ
ಹೋಗಿ ಬಾ ಎಂದು
ಬಿಳ್ಕೊಡುವಿರಲ್ಲವೆ ||
ಹರಿವ ನೀರಿನಲಿ
ಮಿಂದು ಪುಳಕಿತನಾಗಲು
ತಾಯಿ ಶರಾವತಿಯ
ಕೃಪೆಯು ಇಹುದಲ್ಲವೆ
ವಿಶಾಲವಾದ ಗದ್ದೆಯಲಿ
ಬೆಳೆದಿರುವ ತೆನೆಯನ್ನು
ಕಿತ್ತು ತಿಂದು
ಬಲವಾಗಿ ಬೆಳೆದಿರುವುದು
ನಿಜವಲ್ಲವೆ ||
ಗುಡ್ಡ ಬೆಟ್ಟದಲಿ
ತುಂಬಿರುವ ಹಸಿರಿನಲಿ
ಅಡಗಿರುವ ನನ್ನ ಉಸಿರನ್ನು
ಧಾರೆಯೆರೆಯಿರಿ
ಹುಟ್ಟಿಂದ ಜೊತೆಯಿರುವ
ನಿಮ್ಮನ್ನು ನಾ
ತೊರೆದು ಹೊರಟಿರುವೆ
ಹರಸಿರಿ ನಮ್ಮನು
ಬಯಸಿರಿ ನಮ್ಮ
ಏಳಿಗೆಯನು ||

Thursday, June 5, 2014

|| ಭೂತ ಮರೆ ಸಿಹಿ ನೆನೆ ||

ನನ್ನೆದೆಯ ಅರಮನೆಯ
ಮುಂಬಾಗಿಲ ಕಾಯುತಿರುವ
ಕಾವಲಿಗ ನಾನು
ಒದರೊಳಗೆ ಕೂತಿರುವ
ಸಿಂಹಾಸನವ ಏರಿರುವ
ಮನದನ್ನೆ ಮನ್ನಿಸು
ನನ ತಪ್ಪನು
ಜೀವಕೆ ಉಸಿರಾಗು
ಬದುಕನ್ನು ನೀ ನೀಡು
ನನ್ನ ಜೀವದ ಸರ್ವಸ್ವವು
ನೀನಲ್ಲವೆ...||

ಬೈದಿರುವ ಮುಂಗೋಪಿ
ಎದುರಿನಲಿ ನಿಂತಿರುವೆ
ಜಗಳಾಟಕೆ ಕೊನೆಯೆಂದು
ಕ್ಷಮೆಯಲ್ಲವೆ
ಮುನಿಸನು ಮರೆತಿರುವೆ
ಮಳೆಯಲ್ಲಿ ನೆನೆದಿರುವೆ
ಪ್ರಮಾದಕೆ ಪರಿಹಾರ
ಉಳಿದಿಲ್ಲವೆ...||

ಕಡಲ ತೆರೆಯಲ್ಲು
ದಡ ಸೇರುವ ಕಸದಲ್ಲು
ನನ ಪ್ರೀತಿಯ ಕುಟುಕು
ನಿನಗಲ್ಲವೆ
ಕೆಟ್ಟಭೂತ ಮರೆಯುವುದು
ನೆಡೆದ ಸಿಹಿಯನ್ನು ನೆನೆಯುವುದು
ಐಕ್ಯತೆಯೆ ನಮ್ಮ ಬಾಳಿಗೆ ನೆರವಾಗೊ
ವರವಲ್ಲವೆ...||

Saturday, May 31, 2014

|| ಓ ಬೆಳಕೆ ||

ಕರುಣಾಳು ಶಿರವೆರಗಿ
ನಾ ಬೇಡುವೆ
ನೀ ನೀಡು ಕಿರಿದಾದ
ತಿಳಿ ಬೆಳಕನು
ನೀ ಕರುಣಿಸು ಮಿತಿಯಿರುವ
ಕ್ಷೇತ್ರವನ್ನು
ನೀ ದಯಪಾಲಿಸು ಮತ್ತರಳಲು
ಅವಕಾಶವನ್ನು ||

ಸೆರಗೊಡ್ಡಿ ಬೇಡುವೆನು
 ನಂಬಿಕೆ
ಅಳಿಸು ಬಾಲ ಬುದ್ಧಿಯ
ತೋರಿಕೆ
ಉಳಿಸು ಬೆಳವಣಿಗೆಯ
ದೃಢತೆ
ನನ್ನನೇರಿಸು ಎಲ್ಲರಂತೆ
ಸಾಮಾನ್ಯ ಸ್ಥಳಕೆ ||

ನೀನು ಕಿಂಚಿತ್ತಾದರು
ಕೃಪೆದೋರು
ಅಲೆಮಾರಿ ಅಲೆದಾಟದ
ಬದುಕಿಗೆ
ಹೊಡೆದೋಡಿಸು ಮುಸುಕಿರುವ
ಮಬ್ಬನು
ನನ್ನ ಕೈ ಪಿಡಿದು ದಡ
ಸೇರಿಸು ||

ಗೊತ್ತು ಗುರಿಯಿಲ್ಲದ
ಪಯಣದಲಿ
ಮುಚ್ಚಿಡಲು ಗೌಪ್ಯತೆಯು
ಉಳಿದಿಲ್ಲ
ಬಚ್ಚಿಡಲು ಹೊನ್ನನು
ಗಳಿಸಿಲ್ಲ
ಮನವು ಮಣ್ಣು ಮೋಹವ
ಬಯಸದಿರಲು ||

ಕೃಪೆದೋರಿ ನೀ
ಕರುಣಿಸು
ನನ್ನ ಕೈ ಪಿಡಿದು
ನೀ ನಡೆಸು
ಕರುಣೆಯಲಿ ಕಣ್ಣೀರು
ಆರುವುದು
ನಿರ್ದೇಶಿಸು  ಬೆಳಕೆ
ಮುನ್ನಡೆಯಲು ||

Saturday, May 24, 2014

|| ಮನ್ನಿಸು ||

ಮುನಿಸೊಂದು ಬಂತು ಎಂದು
ನಿನೀಗ ಗುಡುಗುವುದು ಏಕೆ?
ನಿನ ಪ್ರೀತಿ ಮಾತಿಂದ
ಪಯಣಕ್ಕೆ ಸೊಬಗು ಬಂತೀಗ
ನನ್ನ ಜೀವ ನೀನು ತಾನೆ
ಬಿಡು ಕೋಪ ಸ್ಪೂರ್ತಿ ನೀನೆ ||

ಕಣ್ಣಲ್ಲಿ
ತುಂಬಿದ ನೀರಲ್ಲಿ
ಕೈತೊಳೆಯುವ ಕಂದ ನಾನು
ನಿನ್ನ ಮಗುವಂತೆ ಲಾಲಿಸು

ಎದೆಯಲ್ಲಿ
ಮನಸಿನ ಮನೆಯಲ್ಲಿ
ಆಶ್ರಯವ ನೀ ನೀಡು ನನಗೆ
ನಿರ್ಗತಿಕನೆಂದು ಪೋಷಿಸು ||

ಮೊಗದಲ್ಲಿ
ಭಾವನೆಯ ತೇರಲ್ಲಿ
ಕೆಳಗಿಳಿಸಿ ಕ್ರೋಧದಾಸನವ ನೀ ತೋಕು
ಒಲವಿನಲಿ ಮನ್ನಿಸು ನೀ ಸಾಕು

ಮೊಗದಲ್ಲಿ
ಸೆಳೆಯುವ ಪರಿಯಲ್ಲಿ
ಈ ಎದೆಗೆ ಕನ್ನವ ನೀ ಹಾಕು
ಹುಸಿಮುನಿಸ ನೀ ತೊರೆಯಬೇಕು ||

Tuesday, May 20, 2014

|| ಕ್ಷಮಾರ್ಥಿ ||

ಪ್ರೀತಿ ಮಾಡಲು ಬರುವುದಿಲ್ಲ ನನಗೆ
ನೇರ ಮಾತಿನಲಿ ಹೇಳುವುನೆಲ್ಲ ಕೊನೆಗೆ
ಜನ ಯಾಕೆ ನಂಬ್ತಾರೆ?
ಮುಖಬಿಡ್ಯ ಮಾಡ್ತಾರೆ?
ತಪ್ಪಾದ್ರೆ ತೆಗಳುತಾರೆ
ಸರ್ಯಾದ್ರೆ ಹೊಗಳುತಾರೆ ||

ಒಲವ ಮಾತಿಗೆ ನಂಬಿ ಕೆಡುವ
ಖದೀಮ ನಾನು
ಎದ್ರಸಿಟ್ಟಲಿ ರೇಗಾಡಿ ಕೆಲವು ಸ್ನೇಹ
ಕಳೆದುಕೊಂಡವನು
ಮೋಹದ ಮಾತನಾಡಲು
ದೂರಾದ ಗೆಳೆತನವು
ಸ್ವಾರ್ಥಿಯಾಗಿ ಸ್ವಾವಲಂಬಿಯಾಯಿತು
ಜೀವನವು ||

ಊರುರ ಸುತ್ತಿರಲು ಉಪಯದಿ ಚುರು
ಉಪಕಾರ ಮಾಡಿರಲು
ಸಂಘಟನೆ ಮಾಡುತ ಸಮಾಜದ
ಸಂಗದಲಿ ಬದುಕಿರಲು
ಮಾಡದ ಕೆಲಸಕೆ ಹೇಳಿಸಿಕೊಳ್ಳುವುದು
ಸಜೆಯಿರದ ಶಿಕ್ಷೆಯು ||

ಮುಂಗೋಪದ ರಾಯಭಾರಿಯು
ಕಿಸಲ್ ಮಾತಿನ ಹಲುಬಿಗ
ಕ್ಷಣ ಮಾತ್ರದ ಸಿಟ್ಟಿಗೆ
ಕೊರಗುವ ಮೌನಿ
ಸೌಜನ್ಯದಲಿ ಬೆರೆತು ಹೋರಾಡುವ
ಕ್ಷಮಾರ್ಥಿ ವಿನಯಿ ||

Monday, May 19, 2014

|| ನೆನಪಿನ ವಿಧಗಳು ||

ಸಪೂರಿ ನುಗ್ಗಿ ಚೌಳಿನಲಿ ಹೊಡೆತ ತಿಂದ
ದಿನಗಳಲಿ ಹೊಡೆತ ಕೊಟ್ಟ ಮಾಷ್ಟ್ರು
ಮರೆಯಾಗಿಲ್ಲ ಮನಸಿನ ನೆನಪಿನನಂಗಳದಲ್ಲಿ
ಆಡಿದ ಕಂಬದಾಟದ ಹುರುಪಿನ ನೆನಪು ||

ಒಂಟಿ ಕಾಲಲಿ ಕುಂಟ್ಲೀಪಿಯಾಡುತ
ಕದ್ದು ಮುಚ್ಚಿ ಕಾಲು ಬದಲಿಸಿದಾಗ
ತುತಿಯೆಂದು ತಲೆ ಮುಟ್ಟಿ ಕುಳಿತಾಗ
ಜಿರಿ ಹಾಕಿದಾಗ ಮಾಡಿದ ಜಗಳದ ನೆನಪು ||

ಉಪಾಧ್ಯಾಯರ ಚರ್ಚೆ ನೆಡೆಯುವಾಗ
ತರಗತಿಯಲಿ ಗಲಾಟೆ ಜೋರಾದಾಗ
ಬೇಕಾಬಿಟ್ಟಿ ತಿಂದ ಹೊಡೆತದ ನೋವು
ಬೆನ್ನು ಒಡೆದು ರಕ್ತ ಬಂದ ಕಹಿ ನೆನಪು ||

ಬರದಿದ್ದಾಗ ತಲೆಕೆಟ್ಟು ಕೂತಾಗ
ಪರೀಕ್ಷೆಯಲ್ಲೇನು ಬರೆಯಬೇಕೆಂಬ ಯೋಚನೆ
ಹೊಟ್ಟೆ ಬಟ್ಟೆ ಮೇಲೆ ಬರೆದು
ಮಾಡಿದ ನಕಲುಗಳ ನಾಚಿಕೆಯ ನೆನಪು ||

ನಾನಾ ಬಗೆಯ ಹಣ್ಣುಗಳನು ಕೊಯ್ಯುತ
ಖುಷಿಯಲಿ ಕದ್ದು ತಿಂದು ತೇಗುವ ಕ್ಷಣಕೆ
ತವರಿಕೊಂಡು ಬಂದ ತೋಟದೊಡೆಯನ ಕಂಡು
ಕಾಲುಕೀಳುವಾಗ ಕಮ್ಚಡಿಯಾಗಿ ಬಿದ್ದು
ಕದ್ದಿಲ್ಲ ತಿಂದಿಲ್ಲವೆಂದು ಓಡಿದ ಮರ್ಯಾದಿ ನೆನಪು ||

Wednesday, April 30, 2014

|| ಪ್ರೀತಿ ಬದುಕು ||

ನೀರಿನಲಿ ಈಜುವೆನು
ಗಾಳಿಯಲಿ ತೇಲುವೆನು
ಮುನಿಸಿನಲಿ ಮುದುಡುವೆನು
ಸೊಗಸಿನಲಿ ಸಿಹಿಯಾಗುವೆನು
ಮನದ ಭಾವ ಬೆರೆತಾಗ
ಕಿಡಿಯು ಕಿಚ್ಚಾಗಿ ಉರಿದಾಗ
ಮಾತು ಮುದುಡಿ ಮೌನ ||

ನೈಜ ಎಂಬ ಸತ್ಯವನು ಮರೆಯೊದಲ್ಲ
ದಾರದಲಿ ಸಾಯೋದಲ್ಲ
ಕನಸುಗಳ ತಿವುಡೋದಲ್ಲ
ಜಗಳವನು ಮಾಡೋದಲ್ಲ
ಕಣ್ಣೀರ ಹಾಕೋದಲ್ಲ
ಸಪ್ಪೆಯಾಗಿ ಸವೆಯೋದಲ್ಲ
ಮನಸನರಿಯೇ ಬದುಕು ||

ಕಿರುಚಿ ಕೂಗಿ ಮನಸನು ಮುರಿಯೋದೇಕೆ?
ಒಂಟಿಯಾಗಿ ಬಾಳೋದೇಕೆ?
ನಂಬಿಕೆಯ ಗರಿಯೋದೇಕೆ?
ಮೋಸವನು ಮಾಡೋದೇಕೆ?
ಅರ್ಥವಾದ ಆತ್ಮ ಸಾಕೆ?
ಬಲವಾದ ಭರವಸೆ ಬೇಕೆ?
ಪ್ರೀತಿ ಹರಿಯೇ ಬದುಕು ||