ಪ್ರತಿಷ್ಠಿತ
ಕಂಪನಿಯೊಂದರ ಉದ್ಯೋಗಿಯಾಗಿ ಸಮಾಜದ ಒಳಿತನ್ನು ಬಯಸಿದ
ವ್ಯಕ್ತಿ ವೃತ್ತಿಯ ನಂತರ ಉಳಿದ
ತನ್ನ ವಯಕ್ತಿಕ ಸಮಯವನ್ನು ಸಹಾಯ
ಸಹಕಾರಗಳಿಗೆ ಮೀಸಲಿಟ್ಟು ಜನರೊಳಗೊಂದಾಗು ಮಂಕುತಿಮ್ಮ ಎಂಬಂತೆ ಬದುಕುತ್ತಿದ್ದ. ಸಹಾಯ
ಬೇಡಿದವರಿಗೆ ತನ್ನ ಕೈಯಲ್ಲಾದ ಸಹಾಯ ಮಾಡಿದ,
ಎಲ್ಲರೊಂದಿಗೆ ಬೆರೆತು ಉತ್ತಮ ಬಾಂಧವ್ಯ
ಬೆಳೆಸಿಕೊಂಡು ತನ್ನದೆ ಆದ ಛಾಪು
ಮೂಡಿಸಿಕೊಂಡು ಗುರುತಿನ ವ್ಯಕ್ತಿಯಾದ. ಟೀಕೆ
ಟಿಪ್ಪಣಿಗಳಿಗೆ ಬೆಲೆ ಕೊಡದೆ ತನ್ನ
ತಪ್ಪಿಗೆ ಕ್ಷಮೆಯಾಚಿಸಿ ಏನನ್ನೋ ಸಾಧಿಸಬೇಕೆಂಬ ಹಂಬಲದಿಂದ
ಜೀವನ ನಡೆಸಲಾರಂಭಿಸಿದ.
ತೃಪ್ತಿದಾಯಕ
ವೃತ್ತಿ ಜೀವನವ ನಡೆಸುತ್ತಿದ್ದ ವಿಪ್ಲವನು
ತಾನು ಏಕಾಂಗಿಯಾಗಿದ್ದರೂ ಪ್ರೇಮಿಗಳಿಗೆ ಸಹಾಯ ಮಾಡುವುದರೆಂದರೆ ಏನೋ
ಖುಷಿ. ತನ್ನ ವಯಕ್ತಿಕ ಸಮಸ್ಯೆಯಂತೆ
ಉಳಿದವರ ಸಮಸ್ಯೆಗೆ ಸ್ಪಂದಿಸುತ್ತಿದ್ದ. ಉತ್ತಮ ಸಂಬಳ ಪಡೆಯುತ್ತಿದ್ದ
ಈತ ಏಕಾಂಗಿಯಾದರೂ ವಾಸಿಸಲು ದೊಡ್ಡ ಮನೆ,
ಓಡಾಡಲು ವಾಹನ ಮತ್ತು ಬೇಕಾದ ಅವಶ್ಯಕತೆಗಳನ್ನು ಹೊಂದಿದ್ದ
ಮತ್ತು ಅವಶ್ಯಕತೆಯಿದ್ದವರಿಗೆ ತನ್ನ ಹತ್ತಿರವಾದ ಅಲ್ಪ
ಧನ ಸಹಾಯವನ್ನು ಮಾಡಲಾರಂಭಿಸಿದ.
ವೃತ್ತಿಯಲ್ಲಿ
ಮುಂದಾಳುವಾಗಿ ಕಾರ್ಯ ನಿರ್ವಹಿಸುತ್ತಿದ್ದ ಈತ
ತನ್ನದೇ ಗುಂಪಿನ ಸಹೋದ್ಯೋಗಿಗಳ ನಡುವಿನಲ್ಲಿ
ಆಗಿರ್ತಕ್ಕಂತಹ ಪ್ರೇಮಾಂಕುರದ ಕುರುಹುಗಳನ್ನು ತಿಳಿದರೂ ಸುಮ್ಮನಿರುತ್ತಾನೆ. ಒಂದು
ದಿನ ಅವರ ಬಾಯಿಂದನೆ ಹೊರಹಾಕಿಸಬೇಕೆಂದು
ಚಿಕ್ಕ ಕಾರ್ಯದ ಒತ್ತಡವನ್ನು ಅವರ
ಮೇಲೆ ಹೇರುತ್ತಾನೆ.
ವಾರಾಂತ್ಯದ
ಸಂಭ್ರಮದಲ್ಲಿ ಸುತ್ತಾಡುವ ಉಪಾಯ ಮಾಡಿದ್ದ ಪ್ರೇಮಿಗಳಿಗೆ
ನಿರಾಸೆಯಾಗಿ ಬೇಸರಿಸುತ್ತಾರೆ. ಅದಲ್ಲದೆ ಇಲ್ಲಸಲ್ಲದ ಕುಂಟು
ನೆಪ ಹೇಳಿ ಕಾರ್ಯದೊತ್ತಡದಿಂದ ತಪ್ಪಿಸಿಕೊಳ್ಳ
ಬಯಸುತ್ತಾರೆ. ಆದರೆ ಇದನ್ನು ಮೊದಲೇ
ಅರಿತಿದ್ದ ವಿಪ್ಲವನು ಸುತಾರಾಂ ಒಪ್ಪುವುದಿಲ್ಲ. ಆಗ
ಯಾಕೆ ಏನು ಎಂದು ಏನು
ತಿಳಿಯದವನಂತೆ ಪ್ರಶ್ನಿಸಿ ಅವರೇ ಗೌಪ್ಯವಾಗಿ ಹೇಳುವಂತೆ
ಮಾಡಿ ಅವರ ನಡುವಿನ ಪ್ರೇಮಾಂಕುರವನ್ನು
ತಿಳಿದು ಅವರಿಗೆ ಅನುಕೂಲವಾಗುವಂತೆ ಸಹಾಯ
ಮಾಡುತ್ತಾನೆ.
ಒಂದು
ದಿನ ಅವರ ತಿರುಗಾಟಕ್ಕೆ ತೊಂದರೆಯಾಗುತ್ತದೆ.
ಆಗ ವಿಪ್ಲವನು ತನ್ನ ಗಾಡಿಯನ್ನು ಕೊಡುತ್ತಾನೆ
ಮತ್ತು ಸುತ್ತಾಡಿ ಆರಾಮಾಗಿ ಸಂತೋಷದಿಂದ ಹೋಗಿ
ಬನ್ನಿ ಎಂದು ಹೇಳಿ ಕಳಿಸಿಕೊಡುತ್ತಾನೆ. ವಾಪಸ್ಸಾದ ನಂತರ
ಅವರ ನಡುವಿನ ಪ್ರೇಮಾಂಕುರವನ್ನು ಮನೆಯಲ್ಲಿ
ಹೇಳಲು ತಿಳಿಸುತ್ತಾನೆ. ಈತನ ಮಧ್ಯಸ್ಥಿಕೆಯನ್ನು ಅವರು
ಬಯಸುತ್ತಾರೆ. ಏಕೆಂದರೆ ಅವರು ಅಂತರ್ಜಾತಿಯ
ಪ್ರೇಮಿಗಳಾಗಿದ್ದರು. ಅವರ ನಡುವೆ ಈ
ಜಾತಿಯೆಂಬ ಬೂತವೆಲ್ಲಿ ಅವರ ಪ್ರೀತಿಗೆ ಕುತ್ತು
ತರುತ್ತದೆಯೇನೋ ಎಂಬ ಭಯ ಅವರಿಬ್ಬರನ್ನು
ಕಾಡುತ್ತಿತ್ತು.
ಪ್ರತಿ
ಹದಿನೈದು ದಿನಕ್ಕೊಮ್ಮೆ ತನ್ನ ಊರಿಗೆ ಹೋಗಿ ಬರುತ್ತಿದ್ದ ಸೌಜನ್ಯ
ಒಂದು ದಿನ ವಿಪ್ಲವನ ಸಲಹೆಯಂತೆ
ಅತಿಯಾದ ಸಲುಗೆಯಿಂದ ಪ್ರೀತಿಯಿಂದಿದ್ದ ತನ್ನ ತಂದೆಯ ಬಳಿ
ಮಾತನಾಡುತ್ತಾಳೆ. ಅಪ್ಪ ನನ್ನ ಸ್ನೇಹಿತೆಯೊಬ್ಬಳು
ಬೇರೆ ಜಾತಿಯ ಹುಡುಗನೊಂದಿಗೆ ಓಡಿಹೋಗಿರುವುದಾಗಿ
ಹೇಳುತ್ತಾಳೆ. ಆಗ ಅವಳ ಅಪ್ಪ
ಮುಂದೇನಾಯಿತೆಂದು ಕೇಳುತ್ತಾನೆ. ಇವಳು ಮುಂದುವರೆಸುತ್ತ ಅವಳನ್ನು
ಹಿಡಿದು ತರುವಲ್ಲಿ ಅವಳ ಪಾಲಕರು ವಿಫಲರಾಗಿ
ರೋಧಿಸುತ್ತಿದ್ದಾರೆ ಎನ್ನುತ್ತಾಳೆ. ಹಾಗೆ ಮುಂದುವರೆದು ನಾನು
ಸಹ ಹಾಗೆ ಮಾಡಿದರೇನು ಮಾಡುತ್ತೀಯಾ
ಎಂದು ಕೇಳುತ್ತಾಳೆ. ಅದಕ್ಕೆ ಪ್ರತಿಯಾಗಿ ಅವಳಪ್ಪ
ಉತ್ತರಿಸುತ್ತಾ ಮಗಳೆ ನೀ ಹಾಗೆ
ಮಾಡ ಬೇಡ, ನೀ ಹಾಗೆ
ಮಾಡಿದರೆ ನನ್ನ ಮರ್ಯಾದೆ, ಪ್ರತಿಷ್ಠೆ
ಹಾಳಾಗುತ್ತದೆ ಎಂದು ಹೇಳುತ್ತಾನೆ.
ವಿಪ್ಲವ
ಹೇಳಿದ್ದನ್ನು ಮಾಡಿ ಮರಳಿದ ಸೌಜನ್ಯ
ಅವಳ ಅಪ್ಪನ ಪ್ರತಿಕ್ರೀಯೆ ಎನೆಂಬುದನ್ನು
ವಿವರಿಸಿದಳು. ಲೋಹಿತನ ಮನೆಯಲ್ಲಿ ಹೇಳಿದ
ಕೂಡಲೆ ಮಗನ ಇಷ್ಟಕ್ಕೆ ವಿರೋಧವಾಗಿ
ಮಾತಾಡದೆ ಒಪ್ಪಿಗೆಯನ್ನು ಸೂಚಿಸುವರು. ಇದರಿಂದಾಗಿ ಒಂದು ಕಡೆಯ ಸಮಸ್ಯೆ
ಇಲ್ಲ ಎನ್ನುವುದು ಖಾತ್ರಿಯಾಗುತ್ತಿದ್ದಂತೆ ಸೌಜನ್ಯಳ ತಂದೆಗೆ ಇಲ್ಲಿಗೆ
ಬರುವಂತೆ ಹೇಳಲು ಸೂಚಿಸಲು
ಹೇಳುತ್ತಾನೆ.
ಪ್ರತಿ
೧೫ ದಿನಕ್ಕೆ ಊರಿಗೆ ತೆರಳುತ್ತಿದ್ದ
ಸೌಜನ್ಯ ಆ ವಾರ ಅವಳು
ಹೋಗದೆ ತನ್ನ ತಂದೆಯನ್ನೆ ಆವಳಿರುವಲ್ಲಿಗೆ
ಕರೆಸುವಳು. ಹಾಗೆ ತನ್ನ ವೃತ್ತಿ
ಸಹೋದ್ಯೋಗಿಗಳಿಗೆ ಎಂದು ಹೇಳಿ ವಿಪ್ಲವ
ಮತ್ತು ಲೋಹಿತರಿಬ್ಬರಿಗೆ ಒಂದು ಔತಣ ಕೂಟವನ್ನು
ಏರ್ಪಡಿಸುತ್ತಾಳೆ. ಆಗ ಅಲ್ಲಿಗೆ ಬರುವ
ಅವರಿಬ್ಬರು ಅವಳ ತಂದೆಯನ್ನು ಮಾತನಾಡಿಸಲಾರಂಭಿವರು.
ವಿಪ್ಲವನು
ಸೌಜನ್ಯಳಿಗೆ ಮೊದಲೇ ಹೇಳಿದಂತೆ ನಿನ್ನ
ಮೊಬೈಲಿಗೆ ತಪ್ಪಿದ ಕರೆಯೊಂದನ್ನ ನೀಡುತ್ತೇನೆ
ಆಗ ನೀನು ಆಫೀಸಿನಿಂದ ಕರೆ
ಬಂತೆಂದು ಹೇಳಿ ಅಲ್ಲಿಂದ ಹೊರಗಡೆಗೆ
ಹೋಗು ಎಂದಂತೆ ಅವಳು ಚಾಚು
ತಪ್ಪದೆ ಹಾಗೆ ಮಾಡುತ್ತಾಳೆ. ಆಗ ಅವಳ ತಂದೆಯೊಂದಿಗೆ
ಮಾತನ್ನು ಮುಂದುವರೆಸಿ ತಿರುಗಿ ಕಟ್ಟು ಕತೆಯಾದ
‘ಓಡಿ ಹೋದ ಮಗಳ ಪ್ರೇಮ
ಪುರಾಣವನ್ನು’ ಮುಂದುವರೆಸುತ್ತಾನೆ.
ವಿಪ್ಲವನು
ಮಾತು ಮುಂದುವರೆಸುತ್ತ ನೋಡಿ ಸಾರ್ ಮಕ್ಕಳ
ಆಸೆಯನ್ನು ಅರಿಯದ ಹೆತ್ತವರಿಗೆ ಅವರ
ಮುದಿ ವಯಸ್ಸಿಗೆ ಮಕ್ಕಳಿಂದ ನೆರವನ್ನು ಬಯಸುವ ಹಕ್ಕಿಲ್ಲ ಎನ್ನುತ್ತಾನೆ.
ಹಾಗೆ ಮಕ್ಕಳು ಅವರ ಆಣತಿಯಂತೆ
ಬದುಕಬೇಕೆನ್ನುವುದಾದರೆ ಇವರಿಗೇಕೆ ಮಕ್ಕಳು ಬೇಕು? ಮಕ್ಕಳಿಗೇನು
ಅವರದೆ ಆದ ಆಸೆ ಆಕಾಂಕ್ಷೆಗಳಿರುವುದಿಲ್ಲವೇನು?
ಬೇರೆಯವರಿಗೆ ಮಕ್ಕಳಿದ್ದಾರೆಂದು ಇವರು ಮಕ್ಕಳಿಗೆ ಜನ್ಮ
ನೀಡುವುದಾದರೆ ನಿರ್ಜೀವ ಗೊಂಬೆಗಳಿಗೂ ಮಕ್ಕಳಿಗೂ
ವ್ಯತ್ಯಾಸವೇ ಇಲ್ಲವೆಂದಾಗುತ್ತದೆ. ಪಾಲಕರು ಅವರ "ಚಟಕ್ಕೆ ಮಕ್ಕಳಿಗೆ ಜನ್ಮ
ನೀಡುತ್ತಾರೆ, ಹಠಕ್ಕೆ ಮಕ್ಕಳ ಮದುವೆ
ಮಾಡುತ್ತಾರೆ" ಎಂದು ಹೇಳುತ್ತಾನೆ. ಜಾತಿಯಾವುದಾದರೇನು?
ಕುಲ ಗೋತ್ರ ಯಾವುದಾದರೇನು? ಜೊತೆಯಾಗಿ
ಬದುಕುವ ಜೀವಗಳು ಒಬ್ಬರನ್ನೋಬ್ಬರು ಅರ್ಥೈಸಿಕೊಂಡಾಗ
ಮಾತ್ರ ಬದುಕಿಗೊಂದು ತಾತ್ಪರ್ಯ, ಹಸನಾದ ಬಾಳಿಗೆ ನಾಂದಿ
ಎಂದಾಗ ಅವಳಪ್ಪನಿಗೆ ಜ್ಞಾನದ ಕಣ್ಣು ತೆರೆದಂತಾಗುತ್ತದೆ.
ಹುಟ್ಟಿಸಿದ
ಹೆಣ್ಣಿಗೆ ತವರು ಮನೆ ಮದುವೆಯ
ನಂತರ ಸಂಬಂಧಿಯ ಮನೆಯಾಗುತ್ತದೆ. ಆಗ
ಅವಳು ಭೂಮಿಯ ಮೇಲೆ ಬದುಕಿದ್ದರೂ
ತಂದೆಯ ಮನೆಯಿಂದ ಸತ್ತಂತೆ. ಮದುವೆ
ಎಂದರೆ ಸಾವಂತೆ ಹೆಣ್ಣಿಗೆ ತಾನು ಹುಟ್ಟಿದ ಮನೆಯಿಂದ ಮಾತ್ರ. ಹಾಗಾಗಿ ಅವಳಿಷ್ಟಕ್ಕೆ ಬೆಲೆ
ಕೊಡದೆ ಮದುವೆ ಮಾಡಿ ಮುಗಿಸುತ್ತಾರೆ.
ಸತ್ತ ಮೇಲೆ ಏನಾಗ್ತಾರೆ ಅಂತ
ಗೊತ್ತಿಲ್ಲ ಹಾಗೆ ಹೆಣ್ಣಿಗೆ ಮದುವೆ
ಎನ್ನುವುದು ಸಹ. ತಂದೆ ಮನೆಯ
ಹುಟ್ಟು ಮದುವೆಯ ಮೂಲಕ ಸಾವು,
ಸಾವು ಅಂತ ಅಂದಾಗ ಅವಳಪ್ಪನಿಗೆ
ಹೊಟ್ಟೆಯ ಕರುಳು ಕಿತ್ತು ಬಂದಂತಾಗುತ್ತದೆ.
ಇವರು
ಕೂತಿದ್ದ ಜಾಗಕ್ಕೆ ಮರಳಿದ ಸೌಜನ್ಯ
ಊಟ ಮುಗಿಯುತ್ತಿದ್ದಂತೆ ತಿರುಗಿ ಊರಿಗೆ ಹೋಗುವ
ತಂದೆಯನ್ನು ಬಿಳ್ಕೊಡಲು ಬಸ್ ನಿಲ್ದಾಣಕ್ಕೆ ತಂದೆಯೊಟ್ಟಿಗೆ
ಬರುತ್ತಾಳೆ. ಆಗ ವಿಪ್ಲವನ ಮಾತನ್ನೇ
ಯೋಚಿಸುತ್ತ ಕೂತಿದ್ದ ಅವಳ ತಂದೆ,
ವಿಪ್ಲವನ ವಯಸ್ಸೆಷ್ಟು
ಎಂದು ಕೇಳಿದಾಗ ಅವರಿಗೆ ೨೪ ವರ್ಷ ಎಂದೆನ್ನುತ್ತಾಳೆ.
ವಯಸ್ಸು ಚಿಕ್ಕದಾದರೂ ಎಷ್ಟು ಪಕ್ವವಾದ ಮಾತನ್ನಾಡ್ತಾರೆ
ಎಂದಾಗ ಸೌಜನ್ಯ ಉತ್ತರಿಸುತ್ತಾಳೆ, ಅಪ್ಪ
ಅವರು ನಿಜವಾದ ಮಾತುಗಳನ್ನೇ ಹೇಳುತ್ತಾರೆ,
ಅದರೆ ಅದನ್ನು ಅರ್ಥೈಸಿಕೊಂಡಾಗ
ಮಾತ್ರ ಸತ್ಯದ ಅರಿವಾಗುತ್ತದೆ ಇಲ್ಲದಿದ್ದರೆ
ಮೊಂಡತನದ ಮಾತುಗಳಂತೆ ಅಪಹಾಸ್ಯಕ್ಕೆ ಗುರಿಯಾಗುತ್ತದೆ ಎಂದೆನ್ನುತ್ತಾಳೆ.
ಹೌದು
ಮಗೆಳೆ ಎಂದು ಹೇಳಿ ಬಸ್ಸನ್ನು
ಹತ್ತಿ ಮರಳುತ್ತಾನೆ. ಮನೆಗೆ ಹೋದ ಮೇಲೆ
ವಿಪ್ಲವನ ಮಾತನ್ನೇ ಯೋಚಿಸುತ್ತ ಕೂರುತ್ತಾನೆ.
ಆಗ ಅವನಿಗೆ ಬಹುಶಃ ನನ್ನ
ಮಗಳಿಗೇನಾದರೂ ಬೇರೆ ಜಾತಿಯ ಹುಡುಗನೊಂದಿಗೆ
ಪ್ರೇಮಾಂಕುರವಾಗಿರಬಹುದೇ? ನನ್ನ ಮಗಳು ಓಡಿ
ಹೋಗಿ ನನ್ನ ಮರ್ಯಾದಿ ತೆಗೆದರೇನು
ಮಾಡುವುದು? ಎಂಬೆಲ್ಲ ಹಲವಾರು ಪ್ರಶ್ನೆಗಳು
ಆತನನ್ನು ಕಾಡತೊಡಗುತ್ತದೆ. ಆಗ ಮಗಳಿಗೆ ಕರೆ
ಮಾಡಿ ಕೇಳಿದಾಗ, ‘ಮನೆಗೆ ಬಂದಾಗ ಉತ್ತರಿಸುವೆ
ಎಂದೆನ್ನುತ್ತಾಳೆ’.
ಮಗಳು
ಮನೆಗೆ ಬಂದಾಗ ಎಲ್ಲವನ್ನು ಕೇಳಿ
ತಿಳಿಯುತ್ತಾನೆ. ನಿಜವಾಗಿಯು ಅವಳಿಗೆ ಬೇರೆ ಜಾತಿಯ
ಹುಡುಗನೊಂದಿಗೆ ಪ್ರೇಮಾಂಕುರ ಆಗಿರುವುದನ್ನು ತಿಳಿದು ದಿಗ್ಭ್ರಮೆಗೊಳಗಾಗುತ್ತಾನೆ. ಆಗ ಮಗಳ
ಮನಸಿಗೆ ನೋವಾಗಿ ಹೇಳುತ್ತಾಳೆ, ಅಪ್ಪ
ನಿನಗೆ ಇಷ್ಟವಿಲ್ಲದಿದ್ದರೆ ನಿಜವಾಗಿಯು ಅವನನ್ನು ತೊರೆದು ನೀ
ತೋರಿಸಿದವನನ್ನೆ ಮದುವೆಯಾಗಿ ಹೆಣದಂತೆ ಬದುಕುತ್ತೇನೆ ಎಂದು
ಹೇಳುತ್ತಾಳೆ. ಆಗ ಎನೂ ಉತ್ತರಿಸದ
ಅವಳಪ್ಪ ೪ ದಿನ ಬಿಟ್ಟು
ಕರೆ ಮಾಡಿ ನಿನ್ನಿಷ್ಟಕ್ಕೆ ನನ್ನ
ಒಪ್ಪಿಗೆಯಿದೆ ಎಂದೆನ್ನುತ್ತಾನೆ. ಅಲ್ಲದೆ ವಿಪ್ಲವನ ಮಾತನ್ನು
ತಿಳಿದಾಗ ಬದುಕಿನ ನಿಜರ್ಥ ಅರಿವಾಯಿತು
ಎಂದು ಹೇಳಿ ಯಾರವ ಹುಡುಗನೆಂದು
ಕೇಳುತ್ತಾನೆ.
ಆಗ ಸಂತೋಷದಿಂದ ಮಗಳೆನ್ನುತ್ತಾಳೆ, ನೀನು ನೋಡಿದ್ದೀಯ, ಅವನೊಂದಿಗೆ
ಮಾತನಾಡಿದ್ದೀಯ ಎಂದಾಗ ಇವನಿಗೆ ತಲೆಯಲ್ಲಿ
ಹುಳ ಬಿಟ್ಟ ಹಾಗಾಗಿ ಯಾರವ
ಯಾರವನೆಂದು ಪದೆ ಪದೆ ಯೋಚಿಸ
ತೊಡಗುತ್ತಾನೆ. ಆಗ ಸೌಜನ್ಯ ಹೇಳುತ್ತಾಳೆ
ಅವನೇ ಲೋಹಿತನೆಂದು. ಇಲ್ಲಿಗೆ ಬಂದಾಗ ಅವನೊಂದಿಗೆ
ನೀನು ಮಾತಾಡಿದ್ದೀಯ ಎಂದಾಗ, ಓಹೋ ಇದು
ನಿಮ್ಮ ಪೂರ್ವ ನಿಯೋಜಿತ ಉಪಾಯವೇ?
ನನ್ನನ್ನು ಒಪ್ಪಿಸಲು ನೀವು ಮಾಡಿದ ತಂತ್ರವೇ?
ಎಂದು ಕೇಳಿದಾಗ ಅಲ್ಲಪ್ಪ ಇದು
ವಿಪ್ಲವರ ಉಪಾಯವೆನ್ನುತ್ತಾಳೆ. ಆಗ ಸಂತೋಷದಿಂದ ಒಪ್ಪಿಕೊಂಡು
ಮದುವೆಗೆ ಕರೆ ನೀಡಿ ಕೆಲವು
ತಿಂಗಳ ಒಳಗಾಗಿ ಮದುವೆ ಮಾಡಿ
ಮುಗಿಸುತ್ತಾನೆ.
ಇದರೊಂದಿಗೆ
ಹುಟ್ಟಿಸಿದ ಮಗಳ ಮದುವೆಯನ್ನು ಸಾವಾಗದಂತೆ
ಅವಳಿಷ್ಟಕ್ಕೆ ಪ್ರಾಧಾನ್ಯತೆ ನೀಡಿ ಮದುವೆ ಮಾಡಿ
ಕಳುಹಿಸಿ ಕೊಡುತ್ತಾನೆ. ವಿಪ್ಲವನು ತನ್ನ ಮಾತು, ಸಮಯ
ಪ್ರಜ್ಞೆ, ಸಮಯೋಚಿತ ನಿರ್ಧಾರ, ಕೊಟ್ಟ
ಉಪಾಯ ಫಲಿಸಿತೆಂದು ಸಮಾಧಾನಿಸಿ ತನ್ನ ಸಹಾಯದ ವರ್ತನೆಯನ್ನು
ಮುಂದುವರೆಸಿಕೊಂಡು ಎಲ್ಲರೊಳಗೊಂದಾಗುತ್ತ ಬದುಕಿದ.