Thursday, March 7, 2013

…ಸೌಮ್ಯ ಸುಂದರ…


ಶೀರ್ಷಿಕೆಯನ್ನು ನೋಡಿದ ತಕ್ಷಣ ಎದುರಿಗೆ ಬರುವ ಚಿತ್ರಣವೆಂದರೆ ಯಾವಬ್ಬಳೋ ಹುಡುಗಿಯ ಸೌಂದರ್ಯದ ಬಗೆಗಿನ ಚಿತ್ರಣವಿರಬಹುದೆಂಬ ಯೋಚನೆ ನಿಮ್ಮ ಮನದಲ್ಲಿ  ಮೂಡಿರಬಹುದು, ಆಲೋಚಿಸಿರಬಹುದು. ಆದರೆ ಶೀರ್ಷಿಕೆ ಎರಡು ವಿಷಯದ ಕುರಿತು ಮತ್ತೆ ಯಾವುದು ಮುಖ್ಯ ಎನ್ನುವ ಸಲಹೆಯನ್ನು ಒಳಗೊಂಡಿದೆ.

ಸೌಮ್ಯ ಎಂದರೇನು...? ಎನ್ನುವುದನ್ನ ಸರಿಯಾಗಿ ಅವಲೋಕಿಸೋಣ. ಸೌಮ್ಯ ಎಂದರೆ ಇಲ್ಲಿ ಯಾವುದೋ ವ್ಯಕ್ತಿಯ ನಾಮಪದವಲ್ಲ. ಸೌಮ್ಯ ಎಂದರೆ ಮೃದು ಸ್ವಭಾವ. ಸೌಮ್ಯ ಸ್ವಭಾವವು ತಾಳ್ಮೆ, ಬುದ್ಧಿವಂತಿಕೆ, ಸಮಯಪ್ರಜ್ನೆ, ಪ್ರಚೋದನೆಗೆ ತಕ್ಕ ಪ್ರತಿಕ್ರೀಯೆ, ಸೋತ ಕ್ಷಣದಲಿ ಧನಾತ್ಮಕ ಬೆಂಬಲ ನೀಡುತ್ತದೆ. ಸೌಮ್ಯ ಸ್ವಭಾವದ ಜೀವಿಗಳು ಹಿರಿಯರನ್ನು ಪೂಜಿಸುವ, ಕಿರಿಯರನ್ನು ಗೌರವಿಸುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಬೆರೆತು ಮಾತನಾಡುತ್ತ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಇವರು ಜೀವನದಲ್ಲಿ ಎಲ್ಲರಿಗೂ ಅವರದೇ ಆದ ಸ್ಥಾನ ಮಾನ, ಗೌರವವನ್ನು ನೀಡಿ ಸೋಲು ಗೆಲುವು ಎಲ್ಲವನ್ನು ಸಮನಾಗಿ ಸ್ವೀಕರಿಸಿ, ಬೇರೆಯವರಿಗೆ ಕೇಡನ್ನು ಬಯಸದೆ, ಬಗೆಯದೆ ಆದರ್ಶಪ್ರಾಯರಾಗಿರುತ್ತಾರೆ. ಅನುಸರಿಸಿಕೊಂಡಿ  ಹೋಗುವ ಇವರು ತನ್ನ ಸಂಗಾತಿಯ ಏಳಿಗೆಗಾಗಿ ಶ್ರಮಿಸುತ್ತಾರೆ. ಜೀವನದಲ್ಲಿ ಬರುವಂತಹ ಏರಿಳಿತಗಳಿಗೆ ಹೆದರದೆ ಸಂಯಮದಿಂದ ಕಾಲಕ್ಕೆ ತಕ್ಕಂತೆ ಹೆಜ್ಜೆಯಿಡುತ್ತಾರೆ.

ಸುಂದರ ಎಂದರೆ ಸೌಂದರ್ಯ, ಆಕರ್ಶಕವಾಗಿ ಕಾಣುವ ಮನಮೋಹಕ ರೂಪ, ಕಣ್ಮನ ಸೆಳೆಯುವ ಬಾಹ್ಯ ಗುರುತು. ಯಾವುದೋ ಒಬ್ಬ ಹುಡುಗನ ಹೆಸರಲ್ಲ. ಸುಂದರತೆ ನೋಡಲು ಅಂದವಾಗಿ ಕಂಡು ಮೋಹಿಸುವ ತವಕದಲ್ಲಿ ಮನ ಸೋಲುವರು. ಎಲ್ಲರ ನೋಟವನ್ನು ತನ್ನೆಡೆಗೆ ಕೇಂದ್ರಿಕರಿಸುವಂತೆ ಮಾಡುವ ಸೌಂದರ್ಯ ಪ್ರತಿಯೊಬ್ಬರ ಕಾಮನೆಗಳಿಗೆ ಪ್ರಚೋದನೆ ನೀಡುತ್ತದೆ. ಪ್ರತಿಯೊಂದು ಜೀವಿಯು ಸೌಂದರ್ಯಕ್ಕೆ ಪ್ರಾಧಾನ್ಯತೆ ನೀಡಿ ತಾನೂ ಸಹ ಸುಂದರವಾಗಿ ಕಾಣಬೇಕು ಎಂದು ಸೌಂದರ್ಯವರ್ಧಕಗಳನ್ನ ಬಳಸುವುದು ಸಹಜವಾಗಿ ಕಂಡುಬರುತ್ತದೆ. ಇದು ಹೆಚ್ಚಿನದಾಗಿ ಸ್ತ್ರೀಯರಲ್ಲಿ ಎದ್ದು ಕಾಣುವಂತಹ ವಿಷಯ.

ಸೌಮ್ಯ ಮತ್ತು ಸುಂದರತೆಯಲ್ಲಿ ಹೊರನೋಟದಿಂದ ಆಕರ್ಷಣೆಗೆ ಒಳಪಡುವುದು ಸೌಂದರ್ಯ. ಆದರೆ ಇಣುಕಿ ಒಳನೋಟ ತಿಳಿದಾಗ ಪ್ರಜ್ವಲಿಸುವುದು ಮೃದು ಸ್ವಭಾವ. ಕಣ್ಣಿಗೆ ಕಂಡಾಗ ತನ್ನತ್ತ ಸೆಳೆಯುವುದು ಸೌಂದರ್ಯ ಆದರೆ ಸೌಂದರ್ಯ ಹಿಂದೆ ಕತ್ತಲಿದೆಯೋ, ಬೆಳಕಿದೆಯೋ ಎನ್ನುವುದು ತಿಳಿಯಲಸಾಧ್ಯವಾದದ್ದು. ಸೌಮ್ಯ ಸ್ವಭಾವವು ಹೊರ ನೋಟದಿಂದ ತಿಳಿಯಲಸಾಧ್ಯವಾದಂತಹ ಒಂದು ನಿಧಿ. ಇದನ್ನ ತಿಳಿದು ಆಕರ್ಷಿತರಾದರೆ ಅಲ್ಲಿ ಬೇರೆಯ ವಿಷಯದ ಬಗ್ಗೆ ಆಲೋಚಲಿಸಲಿಕ್ಕೆ ಇನ್ನೇನು ಉಳಿದಿರುವುದಿಲ್ಲ. ಆಕಳು ಕಪ್ಪಾದರೆ ಹಾಲು ಕಪ್ಪೆ ಎನ್ನುವ ನಾನ್ಮುಡಿ ಇದಕ್ಕೆ ಪುಷ್ಠಿ ನೀಡುತ್ತದೆ. ಗೆಳೆತನವು ಗುಣ ನೋಡಿ ಅಗಿದ್ದರೆ ಸಹವಾಸ ದೋಷದಿಂದ ಹಾಳಾದೆ ಎನ್ನುವ ಪ್ರಮೇಯವೆ ಬರಲಾರದು.

ಒಂದ ಕೊಟ್ಟರೆ ಶಿವ ಒಂದ ಕೊಡ ಎಂಬಂತೆ ಮೃದು ಸ್ವಭಾವವಿದ್ದರೆ ಸೌಂದರ್ಯದ ಕೊರತೆ ಎದ್ದು ಕಾಣುತ್ತದೆ. ಸೌಂದರ್ಯವಿದ್ದರೆ ಮೃದು ಸ್ವಭಾವ ಅಥವಾ ಒಳ್ಳೆಯ ಗುಣದ ನ್ಯೂನ್ಯತೆ ಇದ್ದಿರುತ್ತದೆ. ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ಮಾತಂತೆ ಸೌಮ್ಯ & ಸೌಂದರ್ಯವು ಜೊತೆಗಿರುವುದಿಲ್ಲ ಎಂದು ವಾದಿಸಬಹುದು. ಇವೆರಡು ಜೊತೆಗಿರುವುದು ತುಂಬ ಅಪರೂಪ, ಇವೆರಡು ಜೊತೆಗಿದ್ದರೆ ಜೀವಿಸುವ ವಿಚಾರದಲ್ಲಿ ತೊಳಲಾಟ ನಡೆಸುವ ಸಾಧ್ಯತೆ ಇದ್ದಿರುತ್ತದೆ. ಇವೆರಡು ಜೊತೆಗೆ ಸಿಕ್ಕರೆ ಅದು ಅದೃಷ್ಠದ ಮನೆಯಲ್ಲಿ ನಲಿದಂತೆ ಎನ್ನುವ ಭಾವವ ಮೂಡಿಸುತ್ತದೆ.

ಸೌಂದರ್ಯ & ಹಣ ಅಹಂಕಾರಕ್ಕೆ, ಆಳಸಿತನಕ್ಕೆ ಬುನಾದಿಯಾದರೆ ಸೌಮ್ಯ  ಸ್ವಭಾವವು ಶಾಂತಿಯ ಸಂಕೇತ. ಬಹುಪಾಲು ಜನರನ್ನು ಸೌಂದರ್ಯ & ಹಣ ಆಕರ್ಷಿಸಿದರೆ ಅದು ದುರಾಸೆಯ ವರ್ತಮಾನ ಎಂದರೆ ತಪ್ಪಾಗಲಾರದು. ರೂಪವು ಮೋಹಕ್ಕೆ ಗುರಿಯಾದರೆ ಹಣವು ಭೋಗಕ್ಕೆ ಬೇಕಾಗುವ ಮೂಲವಸ್ತು. ಹಣ ಮತ್ತು ರೂಪ ಇವೆರಡರಿಂದ ಬದುಕು ಪರಿಪೂರ್ಣವಾಗಲಾರದು ಮತ್ತು ಮನಸಿಗೆ ಬೇಕಾಗುವ ಸಂತೋಷವನ್ನು ಒದಗಿಸಲಾರದು. ಇವೆರಡು ಬದುಕಲಿ ಎದ್ದು ಕಾಣುವ ಕ್ಷಣಿಕ ಸುಖದ ಮೂಲಗಳು. ಆದರೆ ಸೌಮ್ಯ ಸ್ವಭಾವವು ಮನಸಿಗೆ ನೆಮ್ಮದಿಯನ್ನ ನೀಡಿ ಹೊಂದಾಣಿಕೆಯಲಿ ಹೊನ್ನ ಸಂಪಾದಿಸಿ ಭೋಗಕ್ಕೆ ನಾಂದಿ ಹಾಡಿ ಬದುಕಿಗೆ ಭದ್ರ ಬುನಾದಿ ಹಾಕುತ್ತದೆ.

ಬಡತನ ಸಿರಿತನದ ಅರಿವಿಲ್ಲದಂತೆ ಹೃದಯ ಶ್ರಿಮಂತಿಕೆಯಲ್ಲಿ ನೆಮ್ಮದಿಯನ್ನು ಕಾಣುವುದು ಸೌಮ್ಯ ಸ್ವಭಾವ. ಕ್ಷಣಿಕ ಸುಖಕ್ಕೆ ದಾಸರಾಗಿ ಜೀವೆನವನ್ನು ಹಾಳುಮಾಡಿಕೊಂಡರೆ ಮೃದುಸ್ವಭಾವದವರಾಗುವ ಸಾಧ್ಯತೆಗಳಿರುತ್ತವೆ. ಮುತ್ತು ಒಡೆದರೆ ಹೋಯಿತು ಮಾತು ಆಡಿದರೆ ಮುಗಿಯಿತು ಎಂಬಂತೆ ಕಳೆದ ಸಮಯವು ಮತ್ತೆ ತಿರುಗಿ ಬರಲಾರದು. ಯಾವುದೇ ಒಂದು ವಿಶಯವನ್ನು ಸರಿಯಾಗಿ ಅರ್ಥೈಸಿಕೊಳ್ಲಬೇಕಾದರೆ ತಾಳ್ಮೆ ಅವಶ್ಯಕ. ಪ್ರತ್ಯಕ್ಷವಾಗಿ ಕಂಡರೂ ಪರಾಂಬರಿಸಿ ನೋಡು ಎನ್ನುವುದು ಸೌಮ್ಯ ಸ್ವಭಾವದ ವ್ಯಕ್ತಿಗಳಲ್ಲಿ ಗೋಚರಿಸುತ್ತದೆ.

ಸೌಂದರ್ಯದ ಜೊತೆ ಮೃದು ಸ್ವಭಾವವಿದ್ದರೆ ತುಂಬಿದ ಕೊಡ ತುಳುಕುವುದಿಲ್ಲವೆಂದು ಶ್ಲಾಘಿಸಿದರೆ ದುರ್ಹಂಕಾರಿಯು ವಿಲಕ್ಷಣವಾಗಿದ್ದರೆ ರೂಪಕ್ಕೆ ತಕ್ಕ ಗುಣ ಅಥವಾ ಅವರಿಂದ ಎನಾದರು ಕೆಡುಕಾದರೆ ನಾಗರಹಾವು ಕಚ್ಚದಿರುತ್ತದೆಯೇ ಎಂದು ನುಡಿವರು. ಜಾತಿ ಕುಲವಿಲ್ಲದೆ ಮೃದು ಸ್ವಭಾವಕ್ಕೆ ಮನ ಸೋತರೆ ಹೀಯಾಳಿಸುವ ಸಮಾಜ ಎದುರಿಗೆ ಬಂದು ಡೆಗೋಡೆಯೊಡ್ಡುತ್ತದೆ. ರೂಪ ಎನ್ನುವುದು ಯವ್ವನದಲ್ಲಿ ಅಂದವಾಗಿ ಕಂಡರೆ ಮೋಹಿಸುವ ತನಕ ಸುಖ ನೀಡುತ್ತದೆ ಆದರೆ ಸೌಮ್ಯ ಸ್ವಭಾವವು ಜೀವನದ ಕೊನೆತನಕ ಜೊತೆಯಿದ್ದು ಪ್ರತಿಯೊಂದು ಹಂತದಲ್ಲು ಧನಾತ್ಮಕವಾಗಿ ಸ್ಪಂದಿಸುತ್ತದೆ. ಸೌಂದರ್ಯವು ಬಾಹ್ಯವಾಗಿ ಗೊಚರಿಸುವುದರಿಂದ ಅಪಘಾತದಲ್ಲಿ ವಿಲಕ್ಷಣವಾಗಿ ಬಯಸಿದ ರೂಪವನ್ನು ಕಳೆದುಕೊಳ್ಲುವ ಸಾಧ್ಯತೆಗಳಿರುತ್ತವೆ. ಆದರೆ ಸೌಮ್ಯ ಸ್ವಭಾವವು ಎಂದು ಮಾಸದ ಆಗಸದಂತಿರುತ್ತದೆ. ಬಾಹ್ಯ ಅಂದವು ಸೌಂದರ್ಯ ಎನಿಸಿಕೊಂಡರೆ ಆಂತರಿಕ  ಸೌಂದರ್ಯವು ಒಳ್ಳೆತನ ವೆನಿಸಿಕೊಳ್ಳುತ್ತದೆ. ಬಾಹ್ಯ ಸೌಂದರ್ಯವು ಕ್ಷೀಣಿಸಬಹುದು ಆದರೆ ಆಂತರಿಕ ಸೌಂದರ್ಯವು ಜನರನ್ನು ಗೆದ್ದು ಗಜವನ್ನು ಗೆಲ್ಲಲು ನಾಂದಿ ಹಾಡುತ್ತದೆ. ಇದರಿಂದಾಗಿ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಹೆಚ್ಚಿನ ಪ್ರಾಧಾನ್ಯತೆ ಪಡೆದಿದೆ. ಇದನ್ನ ಒದಿದ ಮೇಲೆ ಸೌಮ್ಯ ಮತ್ತು ಸುಂದರೆತೆಯಲ್ಲಿ ಯಾವುದು ಮುಖ್ಯ ಎನ್ನುವುದು ಅವರವರ ಭಾವಕ್ಕೆ ಬಿಟ್ಟ ವಿಷಯ.

No comments:

Post a Comment