Tuesday, March 28, 2017

ನೃತ್ಯದ ಕೊನೆಯಲ್ಲಿ ಆದ ಅವಮಾನ

ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬರಹ

ಕಾಲೇಜಿನ ದಿನಗಳು ಅಂದರೆ ಬಲು ರೋಮಾಂಚನದ ಕ್ಷಣಗಳು. ಅದರಲ್ಲೂ ಕೊನೆಯ ವರ್ಷದ ವಾರ್ಷಿಕೋತ್ಸವವೆಂದರೆ ಹೇಳಿಕೊಳ್ಳಲಾಗದ ಸಡಗರ. ಸಂಭ್ರಮದ ದಿನದಲ್ಲಿ ಅದೆಷ್ಟೋ ಜನರೊಂದಿಗೆ ಮಾತಾಡುತ್ತ ಮುಂದಿನ ತಯಾರಿ ನನ್ನದಪ್ಪ ಎಂದು ಸ್ವಲ್ಪ ಗಾಬರಿಯ ರೀತಿ ವ್ಯವಹಾರ ಮಾಡುವುದು ಸಹಜ.

ನೃತ್ಯದ ತಯಾರಿ ನಡೆದಿತ್ತು ಸುಮಾರು ೧ ವಾರದ ಹಿಂದಿನಿಂದ. ಅದೆಂತಹ ನೃತ್ಯವೆಂದರೆ ಮುಖವನ್ನು ಚೀಲದಿಂದ ಮುಚ್ಚಿಕೊಂಡು ಹೊಟ್ಟೆಯ ಮೇಲೆ ಮುಖದ ಚಿತ್ರ ಬಿಡಿಸಿಕೊಂಡು ಕುಣಿಯುವುದು. ಕಣ್ಣೆರಡು ಕಾಣುವಂತೆ ಮುಚ್ಚಿಕೊಂಡ ಚೀಲಕ್ಕೆರಡು ತೂತು. ಮುಖದ ಭಾವ ಹೊಮ್ಮುವಂತೆ ದೊಡ್ಡ ಸಣ್ಣದಾಗಿ ಕುಣಿಸಬೇಕಾಗಿತ್ತು ಹೊಟ್ಟೆಯನ್ನ. ಹೀಗೆ ಮಾಡುತ್ತ ವೇದಿಕೆಯ ಮೇಲೆ ಎಲ್ಲರನ್ನ ರಂಜಿಸುತ್ತ ಕುಣಿಯುತ್ತಿದ್ದಾಗ ಸಭೆಯಲ್ಲಿ ನೆರೆದಿದ್ದ ಉಳಿದೆಲ್ಲಾ ಸ್ನೇಹಿತರಿಂದ ಶಿಳ್ಳೆ, ಚಪ್ಪಾಳೆ, ಕೂಗಾಟ-ಕಿರುಚಾಟದ ಮೂಲಕ ಹುರಿದುಂಬಿಸಿದ ಪರಿ ಜೋರಾಗಿತ್ತು. ಆ ಕಾಲದಲ್ಲಿ ಈ ತರಹದ ನೃತ್ಯ ಹೊಸದಾಗಿದ್ದರಿಂದ ನೆರೆದಿದ್ದ ಜನರೆಲ್ಲರೂ ಸಂಭ್ರಮಿಸುತ್ತಿದ್ದರು.

ನೃತ್ಯದ ಪೂರ್ವ ತಯಾರಿ ನಡೆಸಿದ್ದರೂ ಅದೇನಾಯಿತೋ ಗೊತ್ತಾಗಲಿಲ್ಲ ಕಣ್ಣು ಕಾಣುವಷ್ಟು ದೊಡ್ಡದಾದ ತೂತ ಮಾಡಿ ಮುಖವನ್ನು ಮುಚ್ಚಿಕೊಂಡಿದ್ದ ಚೀಲ ಕುಣಿತದ ಝಲಕ್ಕಿಗೆ ಜಾರಿ ಕಣ್ಣುಕಾಣದಂತೆ ಪೂರ್ತಿಯಾಗಿ ಮುಚ್ಚಿಹೋಯಿತು. ಆಗೇನು ಮಾಡುವುದು, ಕುಣಿಯುವ ರಭಸದಲ್ಲಿ ಅದೆಲ್ಲ ಲೆಕ್ಕಕ್ಕೆ ಬಾರದೆ ಕುಣಿತವನ್ನು ಮುಂದುವರೆಸಿ ಎಲ್ಲರನ್ನು ರಂಜಿಸಲು ಕುಣಿತವನ್ನು ಮುಂದುವರೆಸಿದೆ. ಇನ್ನೇನು ಹಾಡು ಮುಗಿಯಬೇಕು ಅದೆ ಸಮಯಕ್ಕೆ ಸರಿಯಾಗಿ ಕುಣಿಯುತ್ತ ಕುಣಿಯುತ್ತ ಮುಂದೆ ಬಂದು ವೇದಿಕೆಯ ಮೇಲಿಂದ ಕೆಳಗೆ ದುಢಕ್ಕೆಂದು ಬಿದ್ದುಬಿಟ್ಟೆ. ನಗುವಿನೊಂದಿಗೆ ಕರತಾಡನವನ್ನು ಗಿಟ್ಟಿಸಿಕೊಂಡದ್ದು ಅಗೌರವದ ಹೆಮ್ಮೆಯಾಯಿತು.

ನಂತರ ಎಲ್ಲಾ ಸ್ನೇಹಿತರೂ ಬಂದು ನೋವಾಯಿತಾ ಎಂದು ವಿಚಾರಿಸಿ ಉತ್ತಮವಾಗಿತ್ತು ನಿನ್ನ ನೃತ್ಯ ಆದರೆ ಕೊನೆಯಲ್ಲಿ ಹೀಗಾಗಿರದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದಾಗ ಆದ ಅವಮಾನದ ಕ್ಷಣ ಬಿದ್ದಾಗ ಆದ ನೋವಿಗಿಂತ ಜಾಸ್ತಿಯಾಗಿ ಮನ ಕುಗ್ಗುವಂತೆ ಮಾಡಿತು. ಹಾಗೆ ಕೊನೆಯಲ್ಲಿ ಗಳಿಸಿದ ಮೊದಲನೆಯ ಸ್ಥಾನದ ಪ್ರಶಸ್ತಿಯನ್ನು ಪಡೆಯುವಾಗಲೂ ಕೆಳಗೆ ಬಿದ್ದರೂ ಮೊದಲನೆಯ ಸ್ಥಾನ ಪಡೆಯುವ ಮೂಲಕ ಮೇಲೆದ್ದ ಎಂದಾಗ ಕರುಣೆಯಲ್ಲಿ ಅಗೌರವವನ್ನು ಅನುಭವಿಸಿದ್ದ ಮೂತಿ ನಗುವಿನಲಿ ಹೆಮ್ಮೆಯಿಂದ ಅರಳಿತು.

No comments:

Post a Comment